ದಾರಿಯಲ್ಲೊಂದು
ಪರಿಚಿತ ಮುಖವ
ಕಂಡು ನಾ ನಗಲು,
ಮುಖಗಂಟಿಕ್ಕಿ ನಡೆವ
ಅವರು ಹೀಗೇಕೆಂದು
ನಾ ಪೆಚ್ಚಾಗುತ್ತೇನೆ.
ಮತ್ತೊಂದು ಮುಖ
ಎದುರಾಗೆ, ನಾ
ಮುಖ ತಿರುವಿದಾಗ,
ಆ ಮುಖದಲ್ಲಿ ನಗೆಯ
ಕಂಡು ಒಂದು ಕ್ಷಣ
ಕಕ್ಕಾಬಿಕ್ಕಿಯಾಗುತ್ತೇನೆ.
ನನ್ನಂತರಂಗವ ತಿಳಿದು,
ಗುಟ್ಟುಗಳ ರಟ್ಟು ಮಾಡುವ
*ಹಿತೈಷಿ* ಯ? ಮೋಸಕ್ಕೆ
ಬಟ್ಟಬಯಲಿನಲಿ
ಬೆತ್ತಲಾದಂತಾಗಿ
ನಾ ಬೆಚ್ಚಿ ಬೀಳುತ್ತೇನೆ.
ದಾರಿಯಲಿ ಮುಗ್ಗರಿಸೆ,
ಅಪರಿಚಿತರಾರೋ
ಆಧರಿಸಿ, ಆಶ್ರಯವಿತ್ತಾಗ
ಮುಖವಾಡಗಳ ನಡುವೆ
ನಿಜ ಮುಖದಿಂದಿರುವವರ
ಕಂಡು ಧನ್ಯಳಾಗುತ್ತೇನೆ.