ಸಾಹಿತಿಗಳಾದ ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಸಂದರ್ಶನ: ಸೂರ್ಯಕೀರ್ತಿ

ಪ್ರೊ. ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರ ಬದುಕು-ಬರೆಹ:

ವಿಮರ್ಶಕ, ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್‌ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ‘ಮಾಯಾಪಾತಾಳ’, ‘ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ನಾಟಕ ದಂಗೆ, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ಕೃತಿಗಳು.

ನೆಲಮಂಗಲ ತಾಲ್ಲೂಕು 6ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಭಾಜನರು. ಕನ್ನಡ ವಿಶ್ವವಿದ್ಯಾ ಲಯದಿಂದ ’ಕನ್ನಡ ವಿಮರ್ಶೆಯ ವಿನ್ಯಾಸ ಮತ್ತು ತಾತ್ವಿಕತೆ’ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಗಳಿಸಿಗಳಿಸಿದ್ದಾರೆ.

1. ಸರ್‌, ನಿಮ್ಮೂರು, ನಿಮ್ಮ ಬಾಲ್ಯದ ಜೀವನದ ಬಗ್ಗೆ ಹೇಳುವುದಾದರೆ?

ನಾನು ಹುಟ್ಟಿದ್ದು ತೆಪ್ಪದ ಬೇಗೂರು ಅನ್ನೊ ನೆಲಮಂಗಲ ತಾಲ್ಲೂಕ್‌ನ ಒಂದು ಹಳ್ಳಿಲಿ. ನಮ್ಮೂರಲ್ಲಿ ದೊಡ್‌ ಕೆರೆ ಚಿಕ್‌ ಕೆರೆ ಅಂತ ಎರಡು ಕೆರೆ ಇದ್ವು. ಆ ಕೆರೆಗಳಲ್ಲಿ ದೇವರನ್ನ ತೆಪ್ಪ ಕಟ್ಟಿ ಕೂರಿಸಿ ನೀರಲ್ಲಿ ಮೆರವಣಿಗೆ ಮಾಡೋರು. ಅದ್ರಿಂದ್ಲೆ ನಮ್ಮೂರ್‌ಗೆ ತೆಪ್ಪದ ಬೇಗೂರು ಅಂತ ಹೆಸರು ಬಂತು. ತೆಪ್ಪದ ಬೇಗೂರ್‌ನಲ್ಲೆ ನಾನು ಹುಟ್ಟಿದ್ದು. ನಮ್ಮೆಲ್ಲಾ ಹಳ್ಳಿ ಮಕ್ಕಳಂಗೆ ನಾನೂ ಊರು ತಿರುಗ ಆಗಿದ್ದೆ. ಸ್ಕೂಲಿಗ್‌ ಸೇರೊಕ್‌ ಮುಂಚೆ ಬೆಳಗ್ಗೆ ಉಂಡು ಊರು, ವಲಮಾಳ, ತಿಟ್ಟೆ ತೆವರು ತಿರುಗೋಕೆ ವಳ್ಟ್‌ರೆ ಇನ್ನ ರಾತ್ರಿಗೇ ಮನೆಗೆ ಬರ್ತಿದ್ದದ್ದು. ಸ್ಕೂಲಿಗ್ ಸೇರಿಸಿದ್ರೂ ನಮ್ದು ಒಂಥರಾ ತಿಟ್ಟು, ತೆವರು, ವಲಮಾಳ ತಿರುಗೊ ಆಟವೆ. ಕಾರೆ ಕಂಗಾಣಿ, ತೂಬ್ರೆ, ಚಿಟ್‌ಪಟ್ರೆ ಕಾಡಣ್ಣು ಹುಡುಕ್ಕಂಡು ತಿರುಗ್ತಿದ್ದೆ. ಆಮೇಲಾಮೇಲೆ ನಾಲ್ಕನೆ ಕ್ಲಾಸಿಗೆ ಬಂದ ಮೇಲೆ ಸ್ವಲ್ಪ ಸ್ಟೂಡಿಯಸ್‌ ಆದೆ. ಮೊದ್‌ಮೊದ್ಲು ನನಗೆ ಸ್ಕೂಲಿಗೆ ಹೋಗೋದು ಅಂದ್ರೆ ಒಂಥರ ಶಿಕ್ಷೆ. ನನ್‌ ವಾರಿಗೇರೂ ಹಂಗೇ ಇದ್ರು. ನನ್‌ ಜತೆ ತಿರುಗೋರು. ನಮ್‌ ಮಕ್ಳುನೆಲ್ಲ ನಿಮ್ಮುಡ್ಗ ಕೆಡುಸ್ತಾವ್ನೆ ಅಂತ ಅವರಪ್ಪಮ್ಮ ದೂರೋರು. ನಾನ್‌ ಅವುರ್ನ ಕೆಡುಸ್ತಿದ್ನೊ ಅವುರ್‌ ನನ್ನ ಕೆಡುಸ್ತಿದ್ರೊ ಅದು ಪರಸ್ಪರ ಬಿಡಿ.

ಒಂದಂತು ನಿಜ ಮೊದ್‌ ಮೊದ್‌ಲು ನನಗೆ ಸ್ಕೂಲ್‌ಗ್‌ ಹೋಗೋದು ಅಂದ್ರೆ ಮೈ ಪರಚ್ಕಳಂಗ್‌ ಆಗೋದು. ಅರ್ಧ ದಾರೀಗ್‌ ಹೋಗಿ ಆಮೇಲೆ ಎಲ್ಲೆಲ್ಲೊ ತಿರುಗೋಕ್‌ ಹೋಗ್ಬುಡ್ತಿದ್ದೆ. ಸ್ಕೂಲ್‌ ಮುಗುದ್‌ ಮೇಲೆ ಸಂಜೆ ಹುಡುಗರ ಜೊತೆ ಸಾಬಸ್ತನಂಗೆ ಮನೆಗೆ ಬರ್ತಿದ್ದೆ. ಗೊತ್ತಾದಾಗ ಮನೇಲಿ ಈಚಲು ಚಬ್ಬೆ ತಗಂಡು ಸರಿಯಾಗ್‌ ತೀಡೋರು. ನಮ್ಮಮ್ಮ ಅಂತು ಮಕಮಾರೆ ನೋಡ್ದಂಗ್‌ ಚಚ್ಚೋಳು. ಒನ್ನೆ ಕ್ಲಾಸ್‌ಗ್‌ ಹೋಗೋವಾಗ ಒಂದಿನ ನಾನು ಸ್ಕೂಲಿಗೆ ಹೋಗಲ್ಲ ಅಂತ ರಂಪ ಮಾಡಿದ್ನಂತೆ! ನಮ್ಮಮ್ಮ ಊರ್‌ ಮುಂದ್ಲ್‌ ಬಾವಿತನಕ ಬರ್ಲ್‌ ತಗಂಡ್‌ ಚಾಚ್ಕಂಡ್‌ ಬಂದ್ಲಂತೆ. ಊರ್‌ ನಡುವಿನ್‌ ಉಪ್‌ನೀರ್‌ ಬಾವಿ ಹತ್ರ ಮುರಾಡ ಹಾಕಿ ಮಕಾಡೆ ಮಲಗಿಬಿಟ್ನಂತೆ. ʼಬೇವರ್ಸಿ ಮುಂಡೆ, ಚಂಬೇಲಿ ಮುಂಡೆ ಯಾಕೆ ಪರ್ಕೆ ತಗಂಡ್‌ ವಡೀತೀಯಾ! ದಿನಾ ದಿನಾ ನನ್ನೆ ಇಸ್ಕೂಲಿಗ್‌ ವೋಗು ವೋಗು ಅಂತೀಯಲ್ಲೆ ನೀನೂ ಒಂದಿನ ವೋಗೆ, ಅಕ್ಕಯ್ನುಗು ಒಂದಿನ ವೋಗೋಕ್‌ ಯೇಳೆʼ ಅಂತ ಅತ್ತುಸುರ್ದು ಕಿರುಚಿದ್‌ನಂತೆ. ನಾನ್‌ ಎಂ.ಎ. ಪಿಎಚ್ಡಿ ಮಾಡಿ ಕೆಲಸಕ್‌ ಸೇರಿದ್‌ ಮ್ಯಾಲೂ ಎಷ್ಟೊ ದಿನ ನಮ್ಮಮ್ಮ ಇದ್ನೆ ಹೇಳ್ಕಂಡ್‌ ನಗೋಳು. ಓ ಒಂದಾ ಎಳ್ಡಾ ನೂರಾರು ನೆನಪುಗಳು ಅವೆ ಕಣಜದಾಗೆ. ಅಂತೂ ನನ್‌ ಬಾಲ್ಯ ಹೊಟ್ಟೆಗೆ ಇಟ್ಟಿಲ್ಲ, ಚಟ್ಟೆಗೆ ಬಟ್ಟಿಲ್ಲ ಸುರಸುಂದರಾಂಗ ಅನ್ನಂಗೆ ಚೆನ್ನಾಗಿತ್ತು ತಗಳಿ.

2. ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ?

ನಮ್ದು ಕೃಷಿ ಮೂಲದ ಕುಟುಂಬ. ನಮ್ ದೊಡಪ್ಪ ನಾವು ಒಟ್ಗೆ ಇದ್ದೊ. ಕೂಡ್‌ಕುಟುಂಬ. ಹತ್ತನ್ನೆಲ್ಡ್‌ ಜನ. ಬಾರಿ ಬಡತನ. ಮಳೆ ನಂಬ್ಕಂಡ್‌ ಒಣ ಬೇಸಾಯ ಮಾಡ್ಕಂಡ್ ಬಾಳ್ವೆ ಮಾಡ್ತಿದ್ದೊ. ಒಂದೊರ್ಸ್‌ ಬೆಳೆ ಆದ್ರೆ ಇನ್ನೊಂದೊರ್ಸ ಪಂಗನಾಮ. ಮನ್‌ಮಕ್ಳೆಲ್ಲ ದುಡುದ್ರು ಹೊಟ್‌ಗು ಬಟ್‌ಗು ಆಗ್ತಿರಲಿಲ್ಲ. ಎರಡೆಕರೆ ಗದ್ದೆನು ಇತ್ತು. ಆದರೆ ಒಂದೊರ್ಸ್‌ ಮಳೆ ಬಂದು ಕೆರೆ ತುಂಬುದ್ರೆ ಇನ್ನೊಂದೊರ್ಸ್‌ ತುಂಬ್ತಿರ್ಲಿಲ್ಲ. ಆವಾಗೆಲ್ಲ ಅನ್ನ ಇಲ್ಲ. ಬರಿ ರಾಗಿ ಮುದ್ದೆ. ಕೆಲುವ್‌ ಸಲ ಅದೂ ಇರ್ತಿರಲಿಲ್ಲ. ಎಷ್ಟೊ ದಿನ ಅಣ್ಣೆ ಸೊಪ್ಪು, ಬೆರಕೆ ಸೊಪ್ಪು, ಕೆರೆಇಂಡಿ ಸೊಪ್ಪು ಉಪ್ಪೂ ಇಲ್ದೆ ಬೇಯಿಸ್ಕಂಡ್‌ ತಿಂದ್‌ ನೀರ್‌ ಕುಡ್ದು ಮಲಿಕಂಡಿದೀವಿ.

ನನ್ನಣ್ಣ ನನ್‌ ತಮ್ಮ ಇಬ್ರು ಮಿಲಿಟರಿ ಸೇರ್ಕಂಡ್ರು. ನಾನು ಓದಿ ಲೆಕ್ಷರರ್‌ ಆದೆ. ನನ್ನ ಇನ್ನೊಬ್‌ ತಮ್ಮ ಕಾರಾಗೃಹ ಇಲಾಖೆಲಿ ಕೆಲಸಕ್‌ ಸೇರ್ದ. ನಮ್‌ಗೆ ಒಬ್ಳೆ ಅಕ್ಕ. ಅವುಳ್ನ ನೆಲಮಂಗಲದ ಹತ್ರ ಕನ್ನಮಂಗಲ ಅಂತ ಅಲ್ಲಿದ್‌ ನಮ್‌ ಮಾವನಿಗೆ ಮದುವೆ ಮಾಡಿಕೊಟ್ವಿ. ಈಗ್‌ ಅವುರ್‌ ನೆಲಮಂಗಲದಾಗೆ ಚೆನ್ನಾಗವ್ರೆ. ಆಮೇಲಾಮೇಲೆ ನಮ್‌ ಊರ್‌ಗೆಲ್ಲ ನೆಲ ಮಾರೊ ರೋಗ ಬಂದ್‌ಬುಡ್ತು. ನಾವೂ ಇದ್‌ ಬದ್‌ ವಲ ಗದ್ದೆ ಎಲ್ಲ ಮಾರ್ಕಂಡು ಸಿರಿವಂತ್ರಾಗಿ ಈಗ ಬ್ಯಾಸಾಯ ಕಳಕಂಡಿದೀವಿ. ಒಂಥರ ನಿಸೂರಾಗು ಇದೀವಿ.

 

3. ನಿಮ್ಮ ಅಧ್ಯಾಪನ ವೃತ್ತಿಯು ಶುರುವಾಗಿದ್ದು ಯಾವಾಗ?

ಬೆಂಗಳೂರು ಯೂನಿವರ್ಸಿಟಿಯಿಂದ ಕಂಪ್ಯಾರೆಟಿವ್‌ ಲಿಟರೇಚರ್‌ನಲ್ಲಿ ಎಂ.ಎ. ಮಾಡ್‌ದೆ. ಆ ಎಂ.ಎ. ಮಾಡಿದ ವರ್ಷವೆ ಇನ್ನೂ ನನ್ನ ರಿಸಲ್ಟ್‌ ಬರೋಕೆ ಮೊದ್ಲೆ ಬೆಂಗಳೂರಿನ್‌ ಹೊಸೂರು ರಸ್ತೆಲಿ ಒಂದು ಕ್ರೈಸ್ತ್‌ ಕಾಲೇಜಂತ ಇದೆ. ಅಲ್ಲಿ ಕೆಲಸಕ್ಕೆ ಸೇರ್‌ಕೊಂಡೆ. ಚಿ.ಶ್ರೀನಿವಾಸರಾಜು, ಕೆ.ಸಿ.ಶಿವಾರೆಡ್ಡಿ, ಬಸವರಾಜ ಒಕ್ಕುಂದ ಎಲ್ಲ ಅಲ್ಲಿ ಆಗ ಕೆಲಸ ಮಾಡ್ತಿದ್ರು. ಅಲ್ಲಿ ಸೇರ್ಕಳಕು ಮೊದ್ಲೆ ನಾನು ಗ್ಯಾಸ್‌ ಏಜೆನ್ಸಿ ಒಂದರಲ್ಲಿ ಕೆಲಸ ಮಾಡ್ತಿದ್ದೆ. ಅದಕ್ಕು ಮೊದ್ಲೆ ಯುವಜನ ಸೇವಾ ಇಲಾಖೆಲಿ ಪಾರ್ಟ್‌ ಟೈಂ ಕೆಲಸ ಮಾಡ್ತಿದ್ದೆ. ಅದನ್ನ ಮಾಡ್ಕೊಂಡೆ ಎಂ.ಎ.ನು ಮಾಡ್ಕೊಂಡೆ. ಮನೇಲಿ ನನ್ನ ಓದಿಗೆ ಫೀಸು ಕೇಳ್ತಾ ಇರಲಿಲ್ಲ. ಓದಿಸೋಕೆ ನಮ್ಮಪ್ಪನ ಹತ್ರ ದುಡ್ಡೂ ಇರ್ಲಿಲ್ಲಾನ್ನಿ. ಎಸಲ್ಸಿ ತನ್ಕ ಮನೇರೆ ಓದಿಸಿದ್ರು. ಪಿಯುಸಿವರೆಗೆ ನಮ್ಮ ಅಣ್ಣ ಓದಿಸ್ದ. ಆಮೇಲೆ ನಾನೆ ದುಡ್ದು ಓದ್ಕಂಡೆ. ಕ್ರೈಸ್ತ್‌ ಕಾಲೇಜಲ್ಲಿ ನನ್‌ ಅಧ್ಯಾಪಕ ವೃತ್ತಿ ಸುರುವಾಯ್ತು. ಅಲ್ಲಿ ಒಂದೂವರೆ ಎರಡು ವರ್ಶ ಕೆಲಸ ಮಾಡ್ದೆ. ಆಮೇಲೆ ಕೆ.ಪಿ.ಎಸ್ಸಿ. ಸೆಲೆಕ್ಷನ್ ಆಯ್ತು. ಆಗ ತಾನೆ ಯುಜಿಸಿ ಸ್ಕೇಲು ಹೈಯರ್‌ ಎಜುಕೇಶನ್ನಲ್ಲಿ ಇಂಟ್ರಡ್ಯೂಸ್‌ ಆಗಿತ್ತು. ಆ ಕಾಲಕ್ಕೆ ಒಳ್ಳೆ ಸಂಬ್ಳ. ಲೆಕ್ಚರರ್‌ ಆಗಿ ಗೌರ್ಮೆಂಟ್‌ ಜಾಬಿಗೆ ಸೇರಿದಾಗ ನನ್ನ ಫಸ್ಟ್‌ ಅಪಾಯಿಂಟ್‌ಮೆಂಟು ಎಚ್‌.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಇಲ್ಲಿಗೆ ೧೯೯೨ರಲ್ಲಿ ಆಯ್ತು. ಅಲ್ಲಿಂದ ಕರ್ನಾಟಕದ ಹತ್ತಾರು ಕಡೆ ಕೆಲಸ ಮಾಡ್ಕೊಂಡು ಬಂದು ಇವಾಗ ಹಾರೋಹಳ್ಳಿಲಿ ಇದೀನಿ.

4. ನಿಮಗೆ ಇಷ್ಟವಾದ ಮೇಷ್ಟ್ರು?

ನನಗೆ ಪ್ರಿಪ್ರೈಮರಿಲಿ ಒಬ್ರೂ ಇಷ್ಟ ಆಗ್‌ಲಿಲ್ಲ. ಅಲ್ಲಿಗೆ ಬಂದೋರಲ್ಲಿ ಎಲ್ರು ಬೆತ್ತ ತಗಂಡ್‌ ಬಾರಿಸ್ತಿದ್ದೋರೆ. ಯಾವ್ ಮೇಷ್ಟ್ರು ಇಷ್ಟ ಆಗ್‌ಲಿಲ್ಲ. ಆಮೇಲೆ ಅಲ್ಲೆ ನಮ್ಮೂರಲ್ಲೆ ಬೇಗೂರಲ್ಲೆ ಪ್ರೈಮರಿ ಸ್ಕೂಲುಗ್‌ ಸೇರ್ಕಂಡೆ. ಅಲ್ಲಿ ಜಡಿಯಪ್ಪ ಅಂತ ಒಬ್ರು ಮೇಷ್ಟ್ರು ಬರ್ತಿದ್ರು. ಅವರು ಪಿಟಿ ಮೇಷ್ಟ್ರು, ಗಣಿತ ಮೇಷ್ಟ್ರು, ಕ್ರಾಪ್ಟ್‌ ಟೀಚರು ಒಂಥರ ಆಲಿನಾಲ್. ಅವರು ಯಾರಾದ್ರು ಮೇಷ್ಟ್ರು ರಜ ಹಾಕಿದ್ರೆ ಆ ಕ್ಲಾಸಿಗ್‌ ಬಂದು ಕತೆ ಹೇಳೋರು. ಅದುಕ್ಕೆ ನಮ್‌ಗೆ ಅವ್ರು ಅಂದ್ರೆ ಸ್ಯಾನೆ ಇಷ್ಟ. ಕೆಲವ್‌ ಸಲ ಇಚಲ ಚಬ್ಬೆ ತಗಂಡ್‌ ಬರೆ ಬರಂಗ್‌ ಬಾರಿಸೋರು. ಅವರ್ನ್‌ ಕಂಡ್ರೆ ಭಯನು ಇತ್ತು. ಇನ್ನು ಪ್ರೈಮರಿಲಿ ರುದ್ರಪ್ಪ ಅಂತ ಒಬ್‌ರು ಜವಾನ್‌ ಇದ್ರು. ಅವ್ರು ಲೀಶರ್‌ ಪೀರಿಯೆಡ್ಡಲ್ಲಿ ಬಂದು ಕತೆಗಿತೆ ಹೇಳೋರು. ಮೇಷ್ಟ್ರುಗಿಂತ ಅವುರ್ನ ಕಂಡ್ರೆ ನಮ್ಗೆ ಬಾರೀ ಇಷ್ಟ. ಆಮೇಲೆ ನಮ್‌ ಹೈಸ್ಕೂಲಲ್ಲಿ ಬಿವಿಎಲ್‌ ಅಂತ ಇಂಗ್ಲಿಶ್‌ ಮೇಷ್ಟ್ರು ಇದ್ರು ಅವ್ರ್‌ ಕಂಡ್ರೆ ನಮ್ಗೆ ಇಷ್ಟ. ಯಾಕೊ ಗೊತ್ತಿಲ್ಲ. ಅವ್ರ್‌ ಮೂಗಂದ್ರೆ ನನ್ಗೆ ಇಷ್ಟ ಆಗದು. ಕ್ಲಾಸಲ್ಲಿ ಅವರಿಗ್‌ ಗೊತ್ತಾಗ್‌ದಂಗೆ ಅವರ್‌ ಮೂಗ್‌ ನೋಡ್ಕಂಡ್‌ ಕೂತ್ಕತಿದ್ದೆ.

ಇನ್ನಾ ಪಿಯುಸಿಗೆ ಬಂದಾಗ ಯಾರೂ ಇಷ್ಟ ಆಗಲಿಲ್ಲ. ಡಿಗ್ರಿಗೆ ಬಂದಾಗ ಕನಂ ನಾಗರಾಜು ಅಂತ ಕನ್ನಮಂಗಲ ಕಡೆಯೋರು ಕನ್ನಡ ಮೇಷ್ಟ್ರು, ಶಶಿಧರ್‌ ಅಂತ ಇಂಗ್ಲಿಶ್‌ ಮೇಷ್ಟ್ರು, ಡಾ. ಜಿ. ರಾಮಕೃಷ್ಣ ಅಂತ ಇಂಗ್ಲಿಶ್‌ ಮೇಷ್ಟ್ರು ಇವ್‌ರೆಲ್ಲ ನಮ್ಗೆ ಇಷ್ಟದ ಮೇಷ್ಟ್ರುಗುಳು. ಜಿ. ಆರ್‌. ಒಂಥರ ನಮ್ಗೆ ಮಾನಸಗುರು. ಕ್ಲಾಸ್‌ ರೂಮ್‌ ಆಚೆಗು ನಾವು ಕನಮ್ಮು ಆಮೇಲೆ ಜಿಆರು ಇಬ್ರು ಜತಿಗು ಬೇಜಾನ್‌ ಕಲಿತಿದ್ದೀವಿ. ಕನಮ್‌ ಮನಿಗೆ ಹೋಗಿ ಎಷ್ಟೊ ಸಲ ಊಟ ಮಾಡ್ಕಂಡ್‌ ಬಂದಿದಿವಿ. ಜಿ.ಆರ್. ಮನೆ ಆವಾಗ ಆರ್.ಎಮ್.ಎಸ್. ಕಾಲನಿಲಿತ್ತು. ನಾನು, ಶಿವಪ್ಪ, ನಾರಾಯಣಸ್ವಾಮಿ ನಾವ್‌ ಮೂರ್‌ ಜನ ಕ್ಲೋಸ್‌ ಫ್ರೆಂಡ್ಸು. ನಾವ್‌ ಮೂರ್‌ ಜನ್‌ವೂ ನಮ್‌ ಫೈನಲ್‌ ಇಯರ್‌ ಡಿಗ್ರಿಲಿ ಜಿ. ಆರ್‌, ಮೇಷ್ಟ್ರ ಮನೇಲೆ ಇದ್ವಿ. ಊಟ ತಿಂಡಿ ಎಲ್ಲ ಅವರ್ದೆ. ಕೆಲವ್‌ ಸಲ ಅಕ್ಕಿ, ಬೇಳೆ, ತರಕಾರಿಗೆಲ್ಲ ಕಾಸು ಇಟ್‌ಬುಟ್‌ ಹೋಗೋರು. ಲೆಕ್ಕನೆ ಕೇಳ್‌ತಿರ್‌ಲಿಲ್ಲ. ಈಗ ಅದನ್ನೆಲ್ಲ ನೆನೆಸಿಕೊಂಡ್ರೆ. ಕಣ್‌ ತುಂಬಿ ಬರ್ತವೆ. ಎಂ.ಎ.ಗೆ ಬಂದ್‌ ಮೇಲೆ ಕಿರಮ್‌ ಜಾಸ್ತಿ ಹತ್ರ ಆದ್ರು. ಆಮೇಲಾಮೇಲೆ ಸಿದ್ಲಿಂಗಯ್ಯನೋರು ಹತ್ರ ಆದ್ರು. ಕೆ.ವಿ.ಎನ್. ಹತ್ರ ಆದ್ರು. ಕೆವಿಎನ್‌ ಸಕತ್‌ ಪಂಕ್ಚುಯಲ್. ಡಿಆರು, ಹಂಪನಾ, ಬರಗೂರು, ಕೆಎಮ್ಮೆಸ್ಸು, ಕಲ್ಗುಡಿ ಎಲ್ರುನುವೆ ಪಾಠ ಚೆನ್ನಾಗ್‌ ಮಾಡೋರು. ನಮ್ಗೆ ಎಲ್ರಿಗಿಂತ ಕಿರಮ್ಮು ಅಂದ್ರೆ ಒಂದ್‌ ಕೈ ಹೆಚ್ಗೆ ಪ್ರೀತಿ.

5. ನಿಮ್ಮ ಜೀವನದಲ್ಲಿ ಮರೆಯಲಾಗದ ನೆನಪು?

ಬೇಜಾನ್‌ ಇದಾವೆ. ಯಾವ್ದ್‌ ಹೇಳನ, ಯಾವ್ದ್‌ ಬಿಡನ. ಹಾ ಒಂದ್ಸಲ ಏನ್‌ ಗೊತ್ತಾ; ನಾನಾವಾಗ ಆರ್‌ನೆ ಕ್ಲಾಸು. ಆಯ್ತಾ. ರಂಗಾಣಿ ಅಂತ ನಮ್‌ ಕ್ಲಾಸ್‌ಮೇಟ್‌ ಒಬ್ಳ್‌ ಇದ್ಲು. ಅವಳ್‌ ಅಂದ್ರೆ ನನ್ಗ್‌ ಇಷ್ಟ. ನಮ್‌ ಸಮಂದನೆ. ನಮ್ಮೂರೆ. ಕ್ಲಾಸಲ್ಲಿ ಏನಾದ್ರು ಮೇಷ್ಟ್ರು ಪ್ರಶ್ನೆ ಕೇಳಿ ಯಾರು ಉತ್ರ ಕೊಡ್ದೆ ಇರವಾಗ, ನಾನ್‌ ಉತ್ತರ ಕೊಟ್ರೆ ಎಲ್ಲಾರ್ದು ಮೂಗ್‌ ಹಿಡ್‌ಕಂಡ್‌ ಕೆನ್ನೆಗ್‌ ವಡ್ಯಕ್‌ ಯೇಳೋರು. ಆವಾಗ ನಾನು ಎಲ್ಲಾರ್ಗು ಜೋರಾಗ್‌ ಬಾರ್ಸಿರೆ ಆ ರಂಗಾಣಿಗ್‌ ಮಾತ್ರ ಮೂಗ್‌ ಹಿಡ್ಕಂಡ್‌ ಮೆತ್‌ಗ್‌ ವಡೀತಿದ್ದೆ. ಅವರ್‌ ಮನೆಲಿ ಸ್ವಲ್ಪ ವಟ್‌ಗೆ ಬಟ್‌ಗೆ ನ್ಯಾರ್‌ಕ್‌ ಇದ್ರು. ಒಂದ್‌ ಸಲ ಏನಪ್ಪಾಂದ್ರೆ; ನಮ್ಮನೇಲಿ ಮುದ್ದೆನು ಇಲ್ಲ; ಸಾರೂ ಇಲ್ಲ. ಸಾರ್‌ ಮಾಡಕ್‌ ಏನೂ ಇಲ್ಲ. ನಮ್ಮಮ್ಮ ಇದ್ದೋಳು ಲೇ ಮಗ ಲಕ್ಸ್‌ಮಕ್ಕರ್‌ ಮನೀಗೋಗಿ ನೀರ್‌ ಮಜ್ಗೆ ಬಿಡಿಸ್ಕಂಬಾ ಮುದ್ದೆ ತಿರುವ್‌ತೀನಿ ಕದರ್ಕಂಡ್‌ ತಿನ್ನನಾ ಅಂದ್ಲು. ಅವುರ್‌ ಮನೀಗೋದ್ರೆ ಇಲ್ಲಾಂದ್ರು. ನಮ್ಮಣ್ಣ ಲೇ ಆ ಪೀನಾಸಿ ಮನೀಗೋಗಿ ಸಾರ್‌ ಬಿಡಿಸ್ಕಂಬಾರ್ಲಾ ಅಂದ. ಅದೆ ರಂಗಾಣಿ ಮನೆ. ಅವುರ್‌ ಮನೀಗ್‌ ಎಂಗ್‌ ವೋಗದಪ್ಪ ಅಂತ ನನಿಗ್‌ ಪಿಕ್ಕು. ಅದ್‌ ನೋಡುದ್ರೆ ಮಳುಯ್ದ್‌ ರೋಡಾದ್‌ ರೋಡೆಲ್ಲ ಮಸರಾಗೋಗದೆ. ರಾತ್ರಿ ಬೀದಿಲ್‌ ಒಂದ್‌ ಲೈಟೂ ಇಲ್ಲ. ಕತ್ಲೆ ಗವ್‌ ಅಂತದೆ. ಏನ್‌ ಮಾಡದು. ಬಟ್ಲ್‌ ಇಂಡ್ಕಂಡ್‌ ವೋದೆ. ಮನೆ ಉದೆವಸ್ಲ್‌ತಕ ವೋಗಿ ಅಕ್ಕಯೊ ಅಂದೆ. ಅವುಳೆ ರಂಗಣಿನೆ ಇಣುಕ್‌ ನೋಡಿ ಕಿಸುಕ್‌ ಅಂದು ಒಳೀಕ್‌ ಓಗ್ಬುಟ್ಲು. ನನಿಗ್‌ ಕತ್‌ ಇಸುಕ್ಕಣಂಗ್‌ ಆಗೋಯ್ತು.

ವಾಪಸ್‌ ಬಂದ್ರೆ ಮನೇಲಿ ವದೆ ಬೀಳ್ತವೆ. ಅಮ್ಮ ಮುದ್ದೆ ತೊಳಸಿರ್ತಳೆ. ಸಾರಿಲ್ಲ. ಏನ್‌ ಮಾಡದು. ಅವಮಾನ ಆದ್ರು ಸಯಿಸ್ಕಂಡ್‌ ಮತ್ತಿರ್ಗ ಅಕಯೋವ್‌ ಅಂದೆ. ಅವರಮ್ಮ ಬಂದ್ಲು. ಬಂದವ್ಳೆ ಏನ್‌ ಮಗ ಅಂದ್ಲು. ಅಂದೋಳೆ ಕೈಯಗಿನ್‌ ಬಟ್ಲ್‌ ನೋಡಿ, ಏನೂ ಮಾತಾಡ್ದೆ ಇವರ್ದ್‌ ಯಾವತ್ತು ಇದ್ದುದ್ದೆ ಅನ್ಕಂಡ್‌ ವಳೀಕೋದ್ಲು. ನನಗೆ ತಿರ್ಗ ಕತ್‌ ಇಸುಕ್ಕಣಂಗ್‌ ಆಯ್ತು. ವಾಪಸ್‌ ವಲ್ಟೋಗ್ಲ ಅನ್ಕಂಡೆ. ನಡ್‌ಮನಿಂದ ಪಡಸಾಲಿಗ್‌ ಬಂದು ರಂಗಾಣಿ ನನ್ನೆ ನೋಡ್ತಾವ್ಳೆ. ಬೆಳಿಗ್ಗೆ ಇಸ್ಕೂಲ್‌ನಗ್‌ ಇವ್ಳ್‌ ಕೆನ್ನಿಗ್‌ ವಡ್ದಿದೀನಿ. ಈಗ ಇವರ್‌ ಮನಿಗ್‌ ಭಿಕ್ಷೆ ತರ ಸಾರ್‌ ಬಿಡಿಸ್ಕಂಡ್‌ ವೋಗಕ್‌ ಬಂದಿದೀನಿ. ನನಿಗ್‌ ಬೋ ಅವ್‌ಮಾನ ಅನುಸ್ತು. ಏನ್‌ ಮಾಡದು ಬಟ್ಲ್‌ ಇಡ್ಕಂಡ್‌ ಸುಮ್ನ್‌ ನಿಂತಿದ್ದೆ. ಆಮೇಲ್‌ ಅವರಮ್ಮ ಸಾರ್‌ ತಂದು ನನ್‌ ಬಟ್ಲಿಗ್‌ ಉಯ್ದ್‌ಲು. ಮಗ ಇಶ್ಟೆ ಅದೆ ಕಣೊ. ಉಸಾರ್‌ ಕಣಪ್ಪ ಅಂದ್ಲು. ರಂಗಣಿ ನನ್ನೆ ನೋಡ್ತಿದ್ಲು. ನಿಜ್‌ವಾಗ್ಲು ಸತ್ತೋಗಂಗಾಯ್ತು. ನಮ್ ಕ್ಲಾಸ್‌ಮೇಟ್‌ ಹುಡ್ಗಿ ಮುಂದೆ ಭಿಕ್ಷಾ ಮಾಡಂಗಾಯ್ತಲ್ಲ ಅಂತ.

ನಾನೇನೊ ಉಶಾರಾಗೇ ಬರ್ತಿದ್ದೆ. ರೋಡಾದ್‌ ರೋಡೆಲ್ಲ ಕಿತ್ ಗುಂಡಿಗುದ್ರ, ತಾರಾಮಾರಾಗೋಗದೆ. ಕೆಸರ್ನಗೆ ಬರೊವಾಗ ಯಾವ್ದೊ ಪೋಟ್‌ಗಲ್‌ ಎಡ್‌ವಿ ಮಕಾಡೆ ಬಿದ್ದೋದೆ. ಮೈಯೆಲ್ಲ ಕೆಸ್‌ರು. ಬಟ್ಲಾಗಿದ್‌ ಸಾರೆಲ್ಲ ಕೆಸರೊಳಿಕ್‌ ಬಿದ್ದು; ಬಟ್ಲೂ ಮಾರು ದೂರ ಎಗರೋಗಿ ಕತ್ಲಗ್‌ ಕಾಣ್ತಾನೆ ಇಲ್ಲ. ಬಟ್ಲೂ ಇಲ್ಲ; ಸಾರೂ ಇಲ್ಲ. ಅತ್ಕಂಡ್‌ ಮನೀಗ್‌ ಬಂದೆ. ಅಣ್ಣ ಇಡ್ಕಂಡ್‌ ಮಕುದ್‌ ಮ್ಯಾಲ್‌ ಕಣ್ಣವ ಇಲ್ವಲಾ ಅಂತ ನಾಲ್ಕ್‌ ಬಾರುಸ್ದ. ಅಮ್ಮ ಬಿಡಿಸ್ಕಂಡ್ಲು. ಅವತ್ತಾದ್‌ ಅವ್‌ಮಾನಕ್ಕೆ ಮೂರ್‌ ದಿನ ಸ್ಕೂಲಲ್‌ ತಲೆ ಎತ್ತಕಾಗ್ಲಿಲ್ಲ. ನನ್ ಜೀವುನ್ದಾಗೆ ಇದೊಂದ್‌ ಮರೀಲಾರ್ದ್‌ ಗಟ್ನೆ.

6. ಸಾಹಿತ್ಯದ ಬಗ್ಗೆ ಒಲವು ಬರಲು ಸ್ಪೂರ್ತಿ?

ಸ್ಪೂರ್ತಿ ಗೀರ್ತಿ ಖಚಿತವಾಗಿ ನೆನಪಿಲ್ಲ. ನಮ್ಮೂರಾಗ್‌ ನಾವ್‌ ಚಿಕ್‌ ಮಕ್ಳಾಗಿದ್ದಾಗ ಭಿಕ್ಷಕ್‌ ಬರೋರೆಲ್ಲ ಕಲಾವಿದರೆ ಆಗಿರೋರು. ಯಾವ್ದ್‌ ಯಾವ್ದೊ ಹಾಡ್ಗತೆ ಹಾಡೋರು. ನಮ್ಮೂರಿನ್‌ ಹೆಣ್‌ ಮಕ್ಳು ಬೀಸೋ ಪದ, ಕುಟ್ಟೊ ಪದ, ಆಚರಣೆ ಹಾಡುಗಳು, ನಾಟಿ ಪದ ಹಿಂಗೆ ಯಾವ್ದ್‌ ಯಾವ್ದೊ ಬೇಜಾನ್‌ ಹಾಡೋರು. ಕಾಮನ ಹಬ್ಬದಲ್ಲಿ ಗಂಡಸರೆಲ್ಲ ಬಾರೀ ಕ್ರಿಯೇಟೀವಾಗಿ ಬಂಡುಪದಗಳ್ನ ಕಟ್ಟಿ ಹಾಡೋರು. ಹರಿಕತೆ, ಪೌರಾಣಿಕ ನಾಟಕ, ಗೊಂಬೆ ಆಟ ಹಿಂಗೆ ಬ್ಯಾರ್‌ ಬ್ಯಾರೆ ಕಲೆ ಎಲ್ಲ ಹಾಡು, ಮಾತು, ಸಂಗೀತ ಎಲ್ಲ ಕಲಸ್ಕಂಡು ನಮ್‌ ಎದುರ್ಗೆ ಬರೋವು. ದಾಸಯ್ಯ ಕೂಡ ತೋತರ್‌ಣೆ ಕಟ್ಟೋನು, ಮಾರಿ ಜಾತ್ರೇಲಿ ಆಸಾದಿಗುಳು ಅಲ್ಲೆ ಆಶು ಕವಿಗಳ ಥರ ಹಾಡ್‌ಗತೆ ಮಾಡೋರು. ವರ್ಶವರ್ಶಾನು ಬ್ಯಾರ್‌ ಬ್ಯಾರೆ ಥರ ಹಾಡೋರು. ನಮ್ಮಮ್ಮ ಅಂತು ಒಳ್ಳೆ ಜನಪದ ಕತೆಗಳ ಕಣಜ ಅವಳು. ಹೊಲದಲ್ಲಿ ಕಳೆ ಕೀಳೋವಾಗ, ಉತ್ತು ಹದ ಮಾಡೋವಾಗ ಹುಲ್ಲಾಯೋವಾಗ ನಮಗೆ ಎಷ್ಟೊಂದ್‌ ಕತೆ ಹೇಳೋಳು. ಇವೆಲ್ಲ ನನ್‌ ಮನಸ್ಸಿನ್‌ ಮೇಲೆ ಪ್ರಭಾವ ಬೀರಿರಬೌದು.

ಇನ್ನಾ ನಮ್ಮೂರಲ್ಲಿ ಕೋಲಾಟದ ತಂಡ ಇತ್ತು ಅದಂತು ನಮ್ಗೆಲ್ಲ ಬಾರಿ ಸಂತೋಷ ಕೊಡೋದು. ಕೋಲಾಟದ ಪದಗಳ್ನ್‌ ಕೇಳ್ಕಂಡೆ ನೋಡ್‌ಕಂಡೆ ನಾವ್‌ ಬೆಳೆದ್ವಿ. ನಮ್ಮೂರಾಗೆ ಒಂದು ಭಜನೆ ತಂಡ ಕೂಡ ಇತ್ತು. ನಮ್‌ ಸುತ್‌ ಹತ್ತಳ್ಳಿಲು ಭಜನೆ ತಂಡುಗುಳು ಇದ್ವು. ಶ್ರಾವಣ ಮಾಸದಾಗೆ ಆ ತಂಡದೋರ್‌ ಜತೆ ಸೇರ್ಕಂಡ್‌ ಭಜನೆ ಮಾಡ್ತಾ ಇದ್ವಿ. ನಮ್ಮೂರಲ್ಲಿ ಭಜನೆ ಪ್ರಾಕ್ಟೀಸ್‌ ಮಾಡಕೆ, ಪೌರಾಣಿಕ ನಾಟಕ ಮಾಡಕೆ. ಕಾಮನ್ನ ಕುಂಡ್ರುಸಕೆ ಬೇರೆ ಒಂದು ಮನೆನೆ ಇತ್ತು. ಅದನ್ನೆಲ್ಲರು ಭಜನೆ ಮನೆ ಅಂತನೆ ಕರೆಯೋರು. ಕುಣುಗುಲ್‌ ರೋಡ್ನಗೆ ಮಾಂತಪ್ಪನ್‌ ಗದ್ಗೆ ಅಂತ ಒಂದು ಸಂತನ್‌ ಗದ್ಗೆ ಇತ್ತು. ಅಲ್ಗೆ ಮಂಡೆ ಕೊಡೋಕೆ ಪಾದಯಾತ್ರೆ ಹೋಗ್ತಾ ಇದ್ವಿ. ಆವಾಗ ಭಜನೆ ತಂಡುಗುಳು ಕೂಡ ಬರ್ತಿದ್ವು. ಹಾಡೋದು, ಕಲಿಯೋದು, ಹೊಸ ಹಾಡು ಕಟ್ಟೋದು ಎಲ್ಲ ಪ್ರಾಕ್ಟೀಸಿನ ಮೂಲಕನೆ ನಡೀತಿತ್ತು. ಇಂತೆಲ್ಲ ಹತ್ತಾರ್‌ ವಿಚಾರ ನನ್ನೊಳ್ಗೆ ಇಳ್ದು ಚಿಟುಗ್‌ಮುಳ್‌ ಥರ ಪ್ರೇರೇಪಣೆ ಕೊಟ್ಟಿರಬೌದು.

ಹೈಸ್ಕೂಲ್‌ ಓದ್ತಿದ್ದಾಗ್ಲೆ ಪದ್ಯ ಗೀಚೋಕೆ ಸುರುಮಾಡ್ದೆ. ದಾಸರ ಪದ, ವಚನ ಸಾಹಿತ್ಯ, ಭಜನೆ ಪದಗುಳು ಎಲ್ಲ ನನ್ನ ಮೇಲೆ ಪ್ರಭಾವ ಬೀರರಬೌದು. ಬೇಗೂರು ಲಿಂಗೇಶ್ವರ ಅಂತ ಅಂಕಿತ/ಕಾವ್ಯನಾಮ ಇಟ್ಕೊಂಡು ಪದ್ಯ ಬರೀತಿದ್ದೆ. ಹಾಡು ಬರೀತಿದ್ದೆ. ಪ್ರತಿ ಪದ್ಯದಲ್ಲು ಈ ಅಂಕಿತ ಇರೋದು. ಅವೆಲ್ಲ ಬಾಲಿಶವಾದ ರಚನೆಗುಳು. ಈಗ್‌ ಅವೊಂದೂ ನನ್ತಾವಿಲ್ಲ.

 

7. ಸಾಹಿತ್ಯ ಮತ್ತು ಜೀವನ ವಿಭಿನ್ನವೇ?

ಹೌದು. ಖಂಡಿತಾ. ಜೀವನಾನೆ ಬೇರೆ ಸಾಹಿತ್ಯಾನೆ ಬೇರೆ. ಜೀವನವನ್ನೆ ಸಾಹಿತ್ಯದಲ್ಲಿ ಕಥನ ಮಾಡ್ತಾರೆ ಅಂತ ಹೇಳಿದರು ಏನೇ ಹೇಳೋಕೆ ಹೋದರೂ ಅಲ್ಲಿ ಕಲ್ಪನೆ ಬಂದು ಸೇರೇ ಸೇರುತ್ತೆ. ಆಗ ಅದು ಜೀವನಕ್ಕಿಂತ ಬೇರೇನೆ ಆಗುತ್ತೆ. ಅಂದ್ರೆ ಜೀವನದ ಯಾವ ಎಳೇನೂ ಇಲ್ದಿರ ಸಾಹಿತ್ಯ ಇರಲ್ಲ. ಬದುಕ್ನ ಸಾಹಿತ್ಯ ಮಾಡದು. ಕತೆನೆ ಬದುಕೋದು ನಮ್ಮಲ್‌ ಇಲ್ವಾ ಅಂದ್ರೆ ಇರಬೌದು. ಈವಾಗ ನೀಲಗಾರರ್ನ ನೋಡಿ, ಗುಡ್ಡರನ್ನ ನೋಡಿ, ಹಲವಾರು ದೀಕ್ಷೆ ತಗಂಡಿರ ಜೋಗಪ್ಪ, ಜಂಗಮಯ್ಯ, ತತ್ವ ಹಾಡೋರು ಇವುರ್ನ ನೋಡೀರೆ ಅವುರೆಲ್ಲ ಬರೆಯೋದುಕ್ಕು, ಮಾತಾಡೋದುಕ್ಕು, ಹಾಡೋದುಕ್ಕು ಏನೂ ವ್ಯತ್ಯಾಸ ಇದೆ ಅಂತ ಅನ್ನುಸ್ದೆ ಇರಬೌದು. ಆದರೆ ವ್ಯತ್ಯಾಸ ಇರ್ತದೆ. ಕೆಲವೊಮ್ಮೆ ಸಾಹಿತ್ಯ ಜೀವನದ ಎಕ್ಸ್‌ಟ್ರೀಮ್‌ಗಳನ್ನ ಹೇಳ್ತಾ ಇರಬೌದು; ಕೆಲವೊಮ್ಮೆ ಹೇಗೆ ಬಾಳಬೇಕು ಅನ್ನೊ ನೀತಿ ಹೇಳ್ತಾ ಇರಬೌದು. ಹೇಗೆ ಬಾಳಬಾರದು ಅನ್ನೊ ನೆಗೆಟಿವ್ಸ್‌ ಹೇಳ್ತಾ ಇರಬೌದು. ಸಾಹಿತ್ಯ ಅಂದ್ರೆ ಒಂಥರ ಅಲ್ವಲ್ಲಾ. ದಯ ಹತ್ತಾರ್‌ ಥರ. ಅದುಕ್ಕೆ ಜೀವನಗಳೂ ಭಿನ್ನವಿಭಿನ್ನ, ಸಾಹಿತ್ಯಗಳೂ ಭಿನ್ನ ವಿಭಿನ್ನ. ಜೀವನಕ್ಕು ಸಾಹಿತ್ಯಕ್ಕು ಸಂಬಂಧ ಇದ್ರೂ ಎರಡೂ ಒಂದೆ ಅಲ್ಲ ಕಣ್ರಿ.

8. ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ.

ನಡೆದು ಬಂದಿರೋದು, ನಡೆದು ನಿಂತಿರೋದು, ಕತ್ತರಿಸಿಕೊಂಡು ಹೋಗಿರೋದು, ತಿರ್ಗಮುರ್ಗ ಆಗಿರದು ಎಲ್ಲ ಅದೆ. ಹಂಗೆ ಒಂದು ಲೀನಿಯರ್‌ ಡೆವೆಲಪ್‌ಮೆಂಟ್‌ ಅಂತ ನನ್ನ ಬರವಣಿಗೇಲಿ ಇಲ್ಲ. ಕವಿತೆ, ವಿಮರ್ಶೆ, ಪ್ರಬಂಧ, ವಿಚಾರ ಸಾಹಿತ್ಯ, ಮೆಮಾಯರ್ಸ್‌, ಅನುವಾದ, ಸಂಶೋಧನೆ ಹಿಂಗೆ ಕೆಲವು ಪ್ರಕಾರಗಳಲ್ಲಿ ಕೆಲಸ ಮಾಡಿದೀನಿ. ಮೊದ್ಲು ಕಾವ್ಯನೆ ನನ್‌ ಒಳಗಿಂದೆಲ್ಲ ಹೊರಗಾಕೊ ದಾರಿ ಆಗಿತ್ತು. ಪಿಯುಸಿಲಿದ್ದಾಗಲೆ ಬೇಜಾನ್‌ ಬರ್ದಿದ್ದೆ. ಊರೂರ್‌ ತಿರುಗ್‌ತಿದ್ದೋನು; ತಿಟ್ಟೆ, ತೆವ್‌ರು ತಿರುಗ್‌ತಿದ್ದೋದು ಬರ್‌ಬರ್ತಾ ಇಂಟ್ರಾವರ್ಟ್‌ ಆಗ್ತಿದ್ದೆ. ಹೈಸ್ಕೂಲಲ್ಲಿ, ಪಿಯುಸಿಲಿ ಬರೀತಿದ್ದವೆಲ್ಲ ಎಲ್ಲೆಲ್ಲೊ ಬಿಸಾಕ್ದೆ. ಡಿಗ್ರಿಲಿ ಇದ್ದಾಗ ಕ್ರೈಸ್ತ್‌ ಕಾಲೇಜ್‌ ಕವನ ಸ್ಪರ್ಧೆಗೆ ಕವನ ಕಳಿಸೋಕೆ ನಮ್‌ ಮೇಷ್ಟ್ರು ಹೇಳಿದ್ರು. ಕಳಿಸಿದ್ದೆ. ಫಸ್ಟ್‌ ಇಯರಲ್ಲೆ ಬಹುಮಾನ ಬಂತು. ಅವರು ಪ್ರಕಟ ಮಾಡ್ತಾ ಇದ್ರು. ಅದೊಂದು ರಾಜ್ಯ ಮಟ್ಟದ ಸ್ಪರ್ಧೆ. ಕಂಟಿನ್ಯುಯಸ್‌ ಆಗಿ ಡಿಗ್ರಿ, ಎಂಎ ಐದೂ ವರ್ಷ ಆ ರಾಜ್ಯಮಟ್ಟದ ಸ್ಪರ್ಧೆಲಿ ಬಹುಮಾನ ಬಂದ್ವು. ಪ್ರತಿ ಸಲನು ಒಬ್ಬೊಬ್ಬ್‌ರು ಕವಿಗಳ ಮನೆಗೆ ಕರಕೊಂಡೋಗಿ ಬಹುಮಾನ ಕೊಡಿಸೋರು. ಅಡಿಗರು, ಕಾರಂತರು, ಬೇಂದ್ರೆ ಮನೇಗೆಲ್ಲ ಹೋಗಿ ಬಹುಮಾನ ತಗೊಂಡು ಬಂದಿದ್ವಿ.

ಅಭಿನವದಿಂದ ಮೊದಲು ಮಾಯಾಪಾತಾಳ ಅಂತ ಕವನಸಂಕಲನ ಬಂತು. ಅದುಕ್ಕೆ ಒಳ್ಳೆ ರೆಸ್ಪಾನ್ಸ್‌ ಬಂತು. ಕವಿ ಅಂತ ಒಂದು ಗುರುತೂನು ಸಿಕ್ತು. ಎರಡನೆ ಸಂಕಲನ ಸಂಕರಬಂಡಿ ಕೂಡ ಪ್ರಕಟ ಆಯ್ತು. ಅದುನ್ನ ಮುದ್ದಪ್ಪ ಟ್ರಸ್ಟ್‌ ಬೈರೇಗೌಡರು ಮಾಡಿದ್ರು. ಅದುಕ್ಕು ಒಳ್ಳೆ ರೆಸ್ಪಾನ್ಸ್‌ ಬಂತು. ನನ್ನ ಮೊದಲ ವಿಮರ್ಶಾ ಸಂಕಲನ ಮಾರ್ಗಾಂತರ. ಅದು ಸಿವಿಜಿಯಿಂದ ಬಂತು. ಅದುನ್ನ ಪ್ರಕಾಶಕರು ಬರಿ ಲೈಬ್ರರಿಗೆ ಸಪ್ಲೈ ಮಾಡುದ್ರು. ಅದೆಲ್ಲೋಯ್ತೊ, ರೀಡರ್ಸ್‌ನ ರೀಚಾಗ್ಲೆ ಇಲ್ಲ. ಸಾಹಿತ್ಯ ಪತ್ರಿಕೆಗುಳಗೆ ವಿಮರ್ಶೆ ಪ್ರಕಟ ಮಾಡದು, ಸೆಮಿನಾರುಗುಳಗೆ ಭಾಷಣ ಮಾಡಿ ಆಮೇಲೆ ಅದುನ್ನ ಲೇಖನ ಮಾಡದು ಹಿಂಗೆ ನಡೀತಾ ಬಂತು. ಆಮೇಲೆ ಹೆಚ್ಚಾಗಿ ವಿಮರ್ಶೆ ಬರೆಯೋಕೆ ಶುರುಮಾಡ್ದೆ. ಹಂಪಿ ಕನ್ನಡ ವಿವಿಯಿಂದ, ಅಂಕಿತದಿಂದ, ನವಕರ್ನಾಟಕದಿಂದ, ಸಪ್ನದಿಂದ ಎಲ್ಲ ಕಡೆ ನನ್‌ ಪುಸ್ತಕ ಪ್ರಕಟ ಆಗಿದಾವೆ. ಅನುವಾದದಲ್ಲಿ ಆಮೇಲೆ ಸ್ವಲ್ಪ ತೊಡಕ್ಕೊಂಡೆ, ಕಗ್ಗತ್ತಲ ಹೃದಯ ಕುವೆಂಪು ಭಾಷಾ ಭಾರತಿಯಿಂದ ಪ್ರಕಟ ಆಯ್ತು. ಖಾಲಿನು ಆಯ್ತು. ಎಡ್ವರ್ಡ್‌ ಸೈದ್‌ ಕನ್ನಡ ಓದು ಮೂರು ಸಲ ರಿಪ್ರಿಂಟ್‌ ಆಯ್ತು. ಆಮೇಲೆ ಸ್ವಲ್ಪ ಸಂಶೋಧನೆಲು ತೊಡಕ್ಕೊಂಡೆ… ನುಡಿಯಾಟ ಎರಡನೆ ಪ್ರಿಂಟ್‌ ಖಾಲಿ ಆಗಿದೆ. ಅಲ್ಲಮಪ್ರಭು ಪುಸ್ತಕ, ಮಹಿಳೆ ಚರಿತ್ರೆ ಪುರಾಣ, ಪರಕಾಯ, ಕಗ್ಗತ್ತಲ ಹೃದಯ ನಾಲ್ಕೂ ಖಾಲಿ ಆಗಿದಾವೆ ಮತ್ತೆ ರೀಪ್ರಿಂಟ್‌ ಮಾಡಬೇಕು. ಮಹಿಳೆ ಚರಿತ್ರೆ ಪುರಾಣ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಬಹುಮಾನ ಬಂತು. ಅಲ್ಲಿಂದ ಸ್ವಲ್ಪ ವಿಮರ್ಶೆ ಜಾಸ್ತಿ ಬರೆಯೋಕೆ ಸುರುಮಾಡ್ದೆ. ಹತ್ತಾರು ಪುಸ್ತಕ ಪ್ರಕಟ ಆದುವು. ಹಿಂಗೇ ನಡೀತಾಯಿದೆ.

9. ನಿಮ್ಮ ಪ್ರಕಾರ ಕನ್ನಡ ಅಂದರೆ? ಇವತ್ತಿನ ಸಂದರ್ಭದಲ್ಲಿ ಕನ್ನಡವನ್ನು ಉಳಿಸುವ ಬಗೆ?

ಕನ್ನಡ ಅಂದರೆ ಕನ್ನಡ. ಕರ್ನಾಟಕ, ಕನ್ನಂಡಂಗಳ್‌. ನಾವು ಆಡೊ ಮಾತು, ಬರೆಯೊ ಬರಹ, ನೋಡೊ ನೋಟ, ಮಾಡೊ ಕೆಲಸ, ಇರೊ ಬದುಕು ಎಲ್ಲ ಕನ್ನಡಾನೆ ತಾನೆ. ಅದರೊಳಗೆ ಇನ್ನಾ ಇನ್ನಾ ಬೇಜಾನ್‌ ಬಾಶೆ ಅವೆ. ಕನ್ನಡ ಅಂದ್ರೆ ಕನ್ನಡ ಮಾತಾಡೊ, ಬಳಸೊ ಜನಗುಳ್‌ ಬದುಕು. ಕನ್ನಡ ಜನಕ್ಕೆ ಕನ್ನಡದ್‌ ಮೂಲ್‌ಕ ಜ್ಞಾನ ಕೊಡೋಕೆ, ಪಡೆಯೋಕೆ ಆಗಬೇಕು. ಕನ್ನಡದ ಮೂಲ್ಕ ಅನ್ನ ಹುಟ್ಟುಸ್ಕಳಕೆ ಆಗ್‌ಬೇಕು. ಅದೆ ಕನ್ನಡದ ಬೆಳವಣಿಗೆ.

ಕನ್ನಡ ಸಿನೆಮಾ ಇಂಡಸ್ಟ್ರಿ ಜಗತ್ತಿನ್‌ ಲೆವೆಲ್‌ಗೆ ಬೆಳೀಬೇಕು. ಕನ್ನಡ ಟಿವಿ ಜಗತ್ತು, ಕನ್ನಡ ಪ್ರಿಂಟ್‌ ಮೀಡಿಯಾ ಜಗತ್ತಿನ್‌ ಲೆವೆಲ್‌ಗೆ ಬೆಳೀಬೇಕು. ಅಲ್ಲೆಲ್ಲ ಕನ್ನಡದೋರ್‌ಗೆ ಉದ್ಯೋಗ ಸಿಗ್‌ಬೇಕು. ಬೇಸಾಯದ ಜಗತ್‌ನ ಕಾಪಾಡ್ಕೊಬೇಕು. ಭಾಷೆ ಅಂದ್ರೆ ಕನ್ನಡ ಸಾಹಿತ್ಯ ಅನ್ನಂಗೆ ಆಗೋಗದೆ. ಅದು ತಪ್ಪಬೇಕು. ಕನ್ನಡ ಸಾಹಿತ್ಯಕ್ಕೆ ಕೊಟ್ಟಿರೊ ಅತಿಯಾದ ಪ್ರಾಶಸ್ತ್ಯ ಕಡಿಮೆ ಮಾಡಿ ಎಲ್ಲಾ ಜ್ಞಾನಶಾಖೆಗುಳಗು ಕನ್ನಡದಲ್ಲಿ ಬರೆಯೋದು ನಡೀಬೇಕು. ಕೋರ್ಟು, ಕಛೇರಿ, ಡಿಜಿಟಲ್‌ ಜಗತ್ತು, ಸ್ಪರ್ಧಾ ಲೋಕ, ಖಾಸಗೀ ವಿದ್ಯಾಸಂಸ್ಥೆಗಳ ಕಲಿಕೆ ವ್ಯವಸ್ಥೆ, ವ್ಯಾಪಾರಿ ಲೋಕ, ಮೆಡಿಸಿನ್ನು-ಇಂಜಿನಿಯರಿಂಗು-ಡಿಪ್ಲೊಮ- ಸಂಶೋಧನೆ ಹಿಂಗೆ ಎಲ್ಲ ಕಡೆ ಕನ್ನಡದಲ್ಲಿ ಬರಹ, ಕೊಡುಕೊಳೆ, ವ್ಯವಹಾರ ನಡೀಬೇಕು. ಕನ್ನಡದಲ್ಲಿ ಜ್ಞಾನ ಸೃಷ್ಟಿ ಆಗಬೇಕು; ಕರ್ನಾಟಕದ ಎಲ್ಲ ಕಡೆಗು ಕನ್ನಡ ಬಳಸೋರ್‌ಗೆ ಉದ್ಯೋಗ ಕೊಡಬೇಕು. ಇಂಥದ್ದಕ್ಕೆಲ್ಲ ಭಾಷಾಯೋಜನೆ ಮಾಡ್ಕೊಂಡು ಅದುನ್ನ ಜಾರಿಗ್‌ ತರೋಕೆ ಪ್ಲಾನ್‌ ಮಾಡ್ಕೋಬೇಕು. ಅದೆ ಕನ್ನಡನ ಉಳ್‌ಸೊ ಬೆಳ್‌ಸೊ ಬಗೆ.

10. ನಿಮ್ಮಲ್ಲಿ ಅನುವಾದಕ ಹುಟ್ಟಿಕೊಂಡ ಬಗೆ.

ಸ್ಕೂಲು, ಕಾಲೇಜು ಓದೋವಾಗ್ಲೆ ಅವುನು ನನ್ನೊಳ್ಗ್‌ ಇದ್ದ. ಈಗ್ಲು ಇದಾನೆ. ನಾನು ಓದ್ತಾ ಇದ್ದಾಗ ಮೇಷ್ಟ್ರು ಪಾಠ ಮಾಡ್ತಾ ಇದ್ರೆ ಕ್ಲಾಸಲ್ಲಿ ಇಂಗ್ಲಿಶ್‌ನ ನಾನು ಅರ್ಥ ಮಾಡ್ಕೋತಾ ಇದ್ದದ್ದೆ ಕನ್ನಡಕ್ಕೆ ಅನುವಾದ ಮಾಡ್ಕಳೊ ಮೂಲ್ಕ. ಹಂಗಾಗಿ ನನಗೆ ಅನುವಾದ ಮಾಡೋದು ಒಂಥರ ಇಂಗ್ಲಿಶ್‌ನ ಅರ್ಥ ಮಾಡ್ಕಳೊ, ಕಲ್ತ್‌ಕಳೊ ದಾರಿ ಆಗಿ ಒದಗಿಬಂತು ಅನ್ಸುತ್ತೆ. ಮೊದಲು ಇಂಗ್ಲಿಷಿನ ಸಣ್ಣ ಕತೆಗಳ್ನ, ಲೇಖನಗಳ್ನ, ಪ್ರಬಂಧಗಳ್ನ ಅನುವಾದ ಮಾಡೋಕೆ ಸುರುಮಾಡ್ದೆ. ಅದೂ ಡಿಗ್ರಿಲಿ ಇದ್ದಾಗ್ಲೆ. ಅದೆಲ್ಲ ಕ್ಲಾಸ್‌ ಸಿಲಬಸ್‌ ಅರ್ಥ ಮಾಡ್ಕಳಕೆ ಮಾಡ್ತಾ ಇದ್ದಂತ ಅನುವಾದ. ಆಮೇಲೆ ನಾನು ಕೆಲಸಕ್ಕೆ ಸೇರಿದ ಮೇಲೆ ಅನುವಾದ ಕೃತಿ ಅಂತ ಮೊದಲಿಗೆ ಪ್ರಕಟ ಆದದ್ದು ಎಡ್ವರ್ಡ್‌ ಸೈದ್‌ ಅನುವಾದ. ಆನಂತರ ಸುಸಾನ್‌ ಬಾಸ್ನೆಟ್‌ದು ತೌಲನಿಕ ಸಾಹಿತ್ಯ ಅಂತ ಅದರ ಹಲವು ಅಧ್ಯಾಯ ನನ್ನ ಗೆಳೆಯರ ಜೊತೆ ಸೇರ್ಕೊಂಡು ಮಾಡಿದೆ. ಇವೆರಡಕ್ಕು ಒಂಥರ ಕೆ.ಸಿ.ಶಿವಾರೆಡ್ಡಿ ಕಾರಣ. ಇವೆರಡ್ನೂವೆ ಅವರೆ ಅನುವಾದ ಮಾಡೋಕೆ ಕೊಟ್ಟಿದ್ದು. ಆಮೇಲೆ ಚಿಕ್ಕ ಪುಟ್ಟ ಲೇಖನ, ಪದ್ಯ, ಪ್ರಬಂಧಗಳನ್ನ ಅನುವಾದ ಮಾಡ್ತಾಯಿದ್ದೆ. ಅನಿಕೇತನ ಪತ್ರಿಕೆಲಿ ಕೆಲವು ಅನುವಾದಗಳು ಪ್ರಕಟ ಆಗಿದಾವೆ.

11. ಪ್ರಸ್ತುತ ಕನ್ನಡ ಸಾಹಿತ್ಯ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆ?

ಇಂಥವೆಲ್ಲ ಸ್ವಲ್ಪ ಥಿಯರಿಟಿಕಲ್‌ ಪ್ರಶ್ನೆಗುಳು. ಸಾಹಿತ್ಯ ಯಾವಾಗ್ಲು ಅದರ ಪಾಡಿಗೆ ಅದು ಬೇರೆ ಬೇರೆ ಪ್ರದೇಶ, ಪಂಥ, ವ್ಯಕ್ತಿ, ಸಮುದಾಯ ಹಿಂಗೆ ಹತ್ತಾರು ಹಿನ್ನೆಲೆಲಿ ಹುಟ್ತಾ ಇರುತ್ತೆ. ಬೆಳೀತಾ ಇರುತ್ತೆ. ಆಮೇಲೆ ಅದುನ್ನ ಓದೋರು ಥಿಯರೈಸ್‌ ಮಾಡ್ತಾ ಇರ್ತಾರೆ. ಈಗ ನವೋದಯ, ನವ್ಯ, ದಲಿತ ಬಂಡಾಯ, ಸ್ತ್ರೀವಾದ ಆಮೇಲೆ ಏನು? ಅನ್ನೊ ಪ್ರಶ್ನೆ ದೊಡ್ಡದಾಗಿ ಕಾಣ್ತಯಿದೆ. ಆಮೇಲೆ ಏನು ಅನ್ನೋದು ವೈವಿದ್ಯ. ಅಂದ್ರೆ ಇವತ್ತು ಒಂದು ಮಕನಾಗಿ ಸಾಹಿತ್ಯ ಹುಟ್ತಾ ಇಲ್ಲ. ಹತ್ತು ಹಲವು ರೀತೀಲಿ ಸಾಹಿತ್ಯ ಹುಟ್ತಾ ಇದೆ. ಬೆಳೀತಾ ಇದೆ. ಒಂದು ಸಿಂಗಲ್‌ ಧಾರೆ ಅನ್ನೊ ಥರ ಯಾವ್ದು ಇಲ್ಲ. ಟಿವಿ, ಸಿನೆಮಾ ಸಾಹಿತ್ಯ ಜಗತ್ತುಗಳು, ಹಾಡುಗುಳು ಇರೊ ಸುಗಮ ಸಾಹಿತ್ಯದ ಲೋಕ, ತತ್ವಗುಳು ಇರೊ ತತ್ವಪದಗಳ ಮತ್ತೆ ಭಜನಾ ಪದಗಳ ಲೋಕಗುಳು, ಮೌಖಿಕ ಕಥನಸಾಹಿತ್ಯ ಇರೊ ಮೌಖಿಕ ಮಹಾಕಾವ್ಯಗುಳು ಮತ್ತೆ ಇತರೆ ಪ್ರಕಾರಗಳ ಲೋಕಗುಳು, ಸಾಮಾಜಿಕ ಮಾದ್ಯಮದಲ್ಲಿ ಸೃಷ್ಟಿ ಆಗ್ತಾ ಇರೋ ಇನ್ಸ್‌ಟಂಟ್‌ ಸಾಹಿತ್ಯ. ರೇಡಿಯೊಲಿ ಬರೋ ಚಿಂತನ ಸಾಹಿತ್ಯ. ಇನ್ನ ಪುಸ್ತಕೋದ್ಯಮ ಮತ್ತೆ ಪ್ರಿಂಟ್‌ ಮೀಡಿಯಾ ಪ್ರೊಮೋಟ್‌ ಮಾಡ್ತಾ ಇರೊ ಸಾಹಿತ್ಯದ ಪ್ರಕಾರಗಳು. ಜೊತಿಗೆ ವೈದ್ಯಸಾಹಿತ್ಯ ಅಂತೆ, ಶಿಶು ಸಾಹಿತ್ಯ ಅಂತೆ, ಶಿಕ್ಷಣವ್ಯವಸ್ಥೆಯಲ್ಲಿರೊ ಸಂಶೋಧನೆ, ಸೆಮಿನಾರ್‌ ಪೇಪರ್‌, ಹೊಟ್ಟೆಪಾಡಿನ ಸಂಶೋಧನಾ ಸಾಹಿತ್ಯ ಅಂತೆ ಹಿಂಗೆ ಇದುಕ್ಕೆ ಹತ್ತಾರು ಮುಖಗುಳು ಇದಾವೆ. ಇವೆಲ್ಲ ಪರಸ್ಪರ ಅದು ಇದು ಯಾವ್ದ್‌ ಯಾವ್ದೊ ಮೀಟ್‌ ಮಾಡೋ ಸಾಧ್ಯತೆಗುಳೂ ಇದಾವೆ. ಅಂದ್ರೆ ಒಂದೆ ಥರ ಇದು ಬೆಳೀತಾ ಇಲ್ಲ; ಹಲವಾರ್‌ ಥರ ಬೆಳೀತಾಯಿದೆ.

12. ಪ್ರಸ್ತುತ ಕನ್ನಡ ಕಾವ್ಯದ ಬಗ್ಗೆ ಹೇಳುವುದಾದರೆ?

ಮೇಲಿನ ಪ್ರಶ್ನೆಗೆ ಕೊಟ್ಟಿರೊ ಉತ್ತರ ಸ್ವಲ್ಪ ಇದುಕ್ಕು ಅನ್ವಯಿಸುತ್ತೆ. ಸ್ವರೂಪದ ನೆಲೆಯಲ್ಲಿ ಮಾತಾಡೋದಾದರೆ ಕಾವ್ಯ ಅಂದ್ರೆ ಮೌಖಿಕ ಕಾವ್ಯ-ಹಾಡ್ಗಥನ, ತತ್ವಕಾವ್ಯ, ಭಜನಾ ಕಾವ್ಯ, ಜನಪದ ಪ್ರಕಾರಗಳಲ್ಲಿ ಸಂಭವಿಸೊ ಕಾವ್ಯಗುಳು, ಸಿನೆಮಾ ಹಾಡುಗಳ ಲೋಕ, ಸೀರಿಯಲ್‌ ಟೈಟಲ್‌ ಸಾಂಗ್ಸ್‌ಗುಳು, ಬೇರೆ ಬೇರೆ ಸಭೆ ಸಮಾರಂಭಗಳಲ್ಲಿ – ಖಾಸಗಿ ಆಗಿ ಮನೆಗಳಲ್ಲಿ ಬಳಸೊ ಆಚರಣೆಯ ಹಾಡುಗಳು, ನಾಟಕಗಳಲ್ಲಿ ಬಳಕೆ ಆಗೊ ಹಾಡುಗುಳು, ಇನ್ನು ಕವಿಗಳು ಕವನಸಂಕಲನಗಳ ಮೂಲಕ ಪ್ರಕಟ ಮಾಡೊ ಕವಿಗುಳು ಒಂದೆ ಎರಡೆ ನೂರೆಂಟು ಥರದ ಕಾವ್ಯ ಇವತ್ತು ಸೃಷ್ಟಿ ಆಗ್ತಾ ಇದೆ. ಸೋಶಿಯಲ್‌ ಮೀಡಿಯಾ ಕೂಡ ಇದನ್ನೆಲ್ಲ ಪ್ರೊಮೋಟ್‌ ಮಾಡ್ಕಳಕೆ ಬಳಕೆ ಆಗ್ತಾ ಇದೆ.

ಇವತ್ತು ಕಾವ್ಯ ಓದುಗವಿತೆ ಮತ್ತು ಹಾಡುಕವಿತೆ ಅಂತ ಎರಡು ಭಿನ್ನ ದಾರಿಗಳಲ್ಲಿ ಸೃಷ್ಟಿ ಆಗಿ ಬೆಳೀತಾ ಇದೆ ಅನ್ಸುತ್ತೆ. ಮೊಬೈಲಲ್ಲಿ, ಟ್ಯಾಬಲ್ಲಿ, ಬೇರೆ ಬೇರೆ ಆಪ್‌ಗಳಲ್ಲಿ ಕಾವ್ಯನ ಬೇರೆ ಬೇರೆ ರೀತಿ ಬಳಸೊದು ನಡೀತಾ ಇದೆ. ಮೀಡಿಯಾ, ಟಿವಿ, ಸಿನೆಮಾ ಲೋಕ ಯಥೇಚ್ಛವಾಗಿ ಹಾಡುಗಳ್ನ ಸೃಷ್ಟಿಸ್ತಾಯಿದೆ. ಮ್ಯಾಟ್ರು, ಮೀಟ್ರು ಕೊಟ್ಟು ಬರೆಸೋದು ನಡೀತಾಯಿದೆ. ಮ್ಯೂಸಿಕ್‌ ಆಪ್‌ಗುಳು ನಾಯ್‌ಕೊಡೆ ಥರ ಸೃಷ್ಟಿ ಆಗ್ತಾ ಇದಾವೆ. ಹಾಡುಕಾವ್ಯ ಅಲ್ಲೆಲ್ಲ ಬೆಳೀತಾ ಇದೆ. ಮ್ಯೂಸಿಕ್‌ ಯುಟ್ಯೂಬಲ್ಲು ನೋಡುಕಾವ್ಯ ಬೇಜಾನ್‌ ಸೃಷ್ಟಿ, ಬಳಕೆ, ಮರುಬಳಕೆ ಆಗ್ತಾ ಇದೆ.

ಪ್ರಭುತ್ವನ ಓಲೈಸೋಕೆ ಇಲ್ಲಿ ಮೋದಿನ ಸಿದ್ಧರಾಮಯ್ಯನ್ನ ಹೊಗಳಿ ಕವಿತೆಗಳು ಸೃಷ್ಟಿ ಆಗಿದಾವೆ. ಹಾಗೆನೆ ಪ್ರಭುತ್ವನ ಕಠಿಣವಾಗಿ ಪ್ರತಿರೋಧಿಸೊ ಕವಿತೆಗಳೂ ಇಲ್ಲಿ ಸೃಷ್ಟಿ/ಪ್ರಕಟ ಆಗಿದಾವೆ. ಶೈಕ್ಷಣಿಕ ವಲಯದಲ್ಲಿ, ಮಾಸ್‌ ಮೀಡಿಯಾಗಳಲ್ಲಿ ನಮ್ಮ ಹಳೆ ಕವಿಗಳ ರಚನೆಗಳನ್ನ ಮರುಬಳಕೆ ಮಾಡೋದು ನಡೀತಾ ಇದೆ. ನೂರಾರು ಸಾವಿರಾರು ಸಂಖ್ಯೆಯಲ್ಲಿ ಇವತ್ತು ಕವಿಗುಳು ಕವಿತೆಗಳನ್ನು ಬರೀತಾ ಇದಾರೆ. ಎಲ್ಲ ವಲಯಗಳಿಂದನು ವರ್ಗಗಳಿಂದನು ಕವಿಗಳು ಬರ್ತಾಯಿದಾರೆ. ಅಂದರೆ ಮೇಲ್ಜಾತಿ, ಮೇಲ್ವರ್ಗ ಮಾತ್ರ ಅಲ್ಲ; ಮಹಿಳೆಯರು, ಅಂಚಿನ ಜನತೆ, ವಿಶೇಷವಾಗಿ ಎಲ್‌ಜಿಬಿಟಿಕ್ಯುಗಳೂ ಕವಿತೆಗಳನ್ನು ಬರೀತಾಯಿದಾರೆ. ಆದರೆ ಅವನ್ನೆಲ್ಲ ಮುದ್ರಿಸಿ ಪ್ರಕಟ ಮಾಡೋಕೆ ನಮ್ಮಲ್ಲಿ ಕೊಳ್ಳುವ ಗ್ರಾಹಕರು ಇಲ್ಲ. ಹಂಗಾಗಿ ಪುಸ್ತಕರೂಪದ ಕಾವ್ಯಕ್ಕೆ ಬಳಕೆದಾರರು ಕಡಿಮೆ ಆಗ್ತಿದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ಆನ್‌ಲೈನ್‌ ಡಿಜಿಟಲ್‌ ಸಂಭವಗಳಲ್ಲಿ ಇವು ಹೆಚ್ಚಾಗಿ ಬೆಳಕು ಕಾಣ್ತಾಯಿದಾವೆ.

ಇನ್ನು ತಾತ್ವಿಕವಾಗಿ ಮಾತಾಡೋದಾದರೆ ನಮ್ಮ ಆಧುನಿಕ ಕಾವ್ಯ ಹಾಡುಗಳಲ್ಲಿ ವೈವಿಧ್ಯತೆ ಕಂಡ ಹಾಗೆ ಗದ್ಯಾತ್ಮಕ ಕವಿತೆಗಳಲ್ಲಿ ವೈವಿಧ್ಯತೆ ಕಾಣ್ತಾ ಇಲ್ಲ. ಅದು ಜಡ ಆಗಿದೆ. ಕಂಟೆಂಟಿನಲ್ಲಿ ವೈವಿಧ್ಯತೆ ಇದೆ. ಆದರೆ ತನ್ನ ಚೌಕಟ್ಟು, ರಾಚನಿಕತೆ, ಲಯ, ಛಂದಸ್ಸು, ಆಕೃತಿ ಈ ಎಲ್ಲ ರೀತಿಲು ಜಡ್ಡುಗಟ್ಟಿದೆ. ಅಂದರೆ ಯಾರ ಕವಿತೆಗಳನ್ನು ನೋಡಿದರೂ ಅವು ಸರಿಸುಮಾರು ಈ ನೆಲೆಲಿ ಒಂದೆ ಥರ ಕಾಣ್ತವೆ. ಶೈಕ್ಷಣಿಕ ವಲಯದಲ್ಲಿ, ಮೀಡಿಯಾಗಳಲ್ಲಿ ಕಾವ್ಯ/ಕವಿತೆ ಅಂದರೆ ಹೀಗೆ ಇರಬೇಕು ಅಂತ ನಾವು ಸೃಷ್ಟಿಸಿಕೊಂಡಿರೊ, ಹೇರಿಕೊಂಡಿರೊ ಪ್ರಕಾರಮೀಮಾಂಸೆನೆ ಈ ಥರ ಆಗೋಕೆ ಕಾರಣ. ಇದುನ್ನ ಬೇರೆ ಬೇರೆ ಸಂದರ್ಭಗಳಲ್ಲಿ ಈಗಾಗಲೆ ಸಾಕಷ್ಟು ಸಲ ಹೇಳಿದೀನಿ ಕೂಡ. ನಮ್ಮ ಆಧುನಿಕ ಕಾವ್ಯ ಹೊರಳಿಕೊಳ್ಳಬೇಕಾಗಿದೆ.

13. ನಿಮ್ಮನ್ನು ಹೆಚ್ಚಾಗಿ ವಿಮರ್ಶಕರೆಂದೇ ಕರೆಯುತ್ತಾರೆ? ಏಕೆ?

ಹೆಚ್ಚು ವಿಮರ್ಶೆ ಬರೆದಿದೀನಿ ಅದುಕ್ಕೆ. ಹೆಚ್ಚು ಅದರ ಮೂಲಕಾನೇ ನಮ್ಮವರು ನನ್ನ ಗುರ್ತಿಸ್ತಾರೆ ಅದುಕ್ಕೆ. ಇತರೆ ಪ್ರಕಾರ ವಿಮರ್ಶೆಗೆ ಕಂಪೇರ್‌ ಮಾಡುದ್ರೆ ಡಲ್‌ ಅನ್ನಿಸಬಹುದೇನೊ ಗೊತ್ತಿಲ್ಲ. ಆದರೆ ಸಂಶೋಧನೆ, ಅನುವಾದ, ಪ್ರಬಂಧ ಬರವಣಿಗೆ ಎಲ್ಲಕ್ಕು ನನಗೆ ನನ್ನ ಪ್ರಕಾರ ಗುರುತು ಇದೆ. ಯಾರೆ ಆಗಲಿ ಬರವಣಿಗೆ ಮಾಡೋರ್ನ ಅವರು ಎಷ್ಟೆ ವೈವಿಧ್ಯವಾಗಿ ಬರೆದರೂ ಒಂದು ಪ್ರಕಾರದಿಂದ ಗುರ್ತಿಸೊ ಪರಿಪಾಠ ನಮ್ಮಲ್ಲಿ ಜಾರಿ ಆಗ್ಬಿಟ್ಟಿದೆ. ಕುವೆಂಪುನ ಕವಿ ಅಂದುಬಿಡೋದು. ಕಾರಂತರನ್ನ ಕಾದಂಬರಿಕಾರ ಅಂದುಬಿಡೋದು. ಮಾಸ್ತಿನ ಕತೆಗಾರ ಅಂದುಬಿಡೋದು ಹಿಂಗೆ. ಪ್ರಕಾರಕ್ಕೆ ಬ್ರಾಂಡ್‌ ಮಾಡೋದು ನಮ್ಮಲ್ಲಿ ಚಾಲ್ತಿಲಿದೆ. ಇದು ಬದಲಾಗಬೇಕು. ಒಬ್ಬರು ಬರೆದಿರೊ ಎಲ್ಲಾದರಿಂದನು ಅವರನ್ನು ಗುರ್ತಿಸೊ ಪರಿಪಾಠ ನಾವು ಬೆಳೆಸಿಕೊಳ್ಳಬೇಕು.

14. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ, ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಕನ್ನಡ ಸ್ನಾತಕ ಅಧ್ಯಯನ ಮಂಡಳಿ ಸಂಚಾಲಕರಾಗಿ, ಪಠ್ಯಸಮಿತಿಯಲ್ಲಿ ಸಂಪಾದಕರಾಗಿ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದ್ದೀರಿ, ಮಾಡುತ್ತಿದ್ದೀರಿ; ಈ ಬಗ್ಗೆ ಹೇಳುವುದಾದರೆ?

ಇವೆಲ್ಲ ಕೆಲಸ ನಾನು ಮಾಡಿದೆ ಅನ್ನೋದಕ್ಕಿಂತ ಇವೆಲ್ಲ ಟೀಮ್‌ ವರ್ಕ್‌ ಅನ್ನೋದೆ ಸರಿ. ಈ ಎಲ್ಲ ಕಡೆನು ಕೆಲಸ ಮಾಡಿಸೋಕಿಂತ ಕೆಲಸ ಮಾಡೋದು ಸುಲಭ ಅನ್ನಿಸಿದೆ. ನಮ್ಮ ನಿರೀಕ್ಷೆ, ಅಪೇಕ್ಷೆ, ಉದ್ದೇಶಿಸಿದ್ ಐಡಿಯಾಲಜಿ, ಪರ್ಫೆಕ್ಷನ್ನು, ಸ್ಪೀಡು, ಗುಣ್‌ಮಟ್ಟ ಇವ್ಯಾವುನ್ನೂ ನಾವು ಅಂದುಕೊಂಡಂಗೆ ಇತರರಿಂದ ಆಗಿಸೋಕೆ ಆಗಲ್ಲ ಅನ್ನಿಸಿದೆ. ಇದ್ದುದ್ರಾಗೆ ನಮ್‌ ಕೈಲಾದಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡೋಕೆ ಟ್ರೈ ಮಾಡಿದೀವಿ ಅನ್ನೋದೆ ಒಂದು ಸಮಾಧಾನ. ನಮ್‌ ಜೊತೆ ಕೆಲವೊಂದ್‌ ಜನಾನಾದ್ರು ಕೈಜೋಡಿಸಿದ್ರು ಅನ್ನೋದೆ ಸಮಾಧಾನ. ಆದರೆ ಕಂಟೆಂಟ್‌ ಕೊಡೊ ದೃಷ್ಟೀಲಿ, ಐಡಿಯಾಲಜಿ ದೃಷ್ಟೀಲಿ, ಪರ್ಫೆಕ್ಷನ್‌ ದೃಷ್ಟೀಲಿ, ಅಂಚಿನ ಸಂಗತಿಗಳನ್ನ ಮುನ್ನೆಲೆಗೆ ತರೊ ವಿಚಾರದಲ್ಲಿ, ಕನ್ನಡವನ್ನ ಜ್ಞಾನದ ಭಾಷೆಯಾಗಿ- ಅನ್ನದ ಭಾಷೆಯಾಗಿ ರೂಪಿಸೊ ಹಿನ್ನೆಲೆಲಿ, ವಿದ್ಯಾರ್ಥಿಗಳ ಹಿತ ಕಾಪಾಡೊ ದೃಷ್ಟೀಲಿ ಎಲ್ಲು ನಾವು ರಾಜಿ ಮಾಡಿಕೊಳ್ಳಲಿಲ್ಲ; ಈ ದಾರಿಗಳಲ್ಲಿ ನಡೆಯೋವಾಗ ಕೆಲವು ಸ್ನೇಹಿತರ ಸ್ನೇಹಾನಾ ಕಳಕೊಂಡ್ವಿ, ಕೆಲವು ಸ್ನೇಹಿತರ ಪ್ರೀತಿನ ಗಳಿಸ್ಕೊಂಡ್ವಿ. ಕೆಲವು ಗೋಸುಂಬೆ ಥರದ ಹಿತಶತೃಗಳನ್ನ ಪಡಕೊಂಡ್ವಿ. ನಿರಂತರವಾಗಿ ಕೆಲವರಿಂದ ಕ್ಯಾರೆಕ್ಟರ್‌ ಅಸಾಸಿನೇಶನ್‌ ಗೆ ಒಳಗಾದಿವಿ. ಈಗಲೂ ನಮ್ಮ ಮರ್ಯಾದೆ ಹರಾಜು ಹಾಕೊದನ್ನೆ ಒಬ್ಬಿಬ್ಬರು ವ್ಯಕ್ತಿತ್ವ ಭಂಜಕ ಮನೋರೋಗಿಗುಳು ಉದ್ಯೋಗ ಮಾಡ್ಕಂಡಿದಾರೆ ಅನ್ನೋದ್‌ ನೆನ್ಕಂಡ್ರೆ ನಗು ಬರ್ತದೆ. ಈ ಪ್ರಾಸೆಸಲ್ಲಿ ನಾವ್‌ ಮಾತ್ರ ಪರ್‌ಫೆಕ್ಟ್‌ ಮಿಕ್ಕೋರೆಲ್ಲ ಪಡಪೋಸಿಗುಳು ಅನ್ನೊ ಥರ ನಾವೂ ನಡಕೊಂಡು ಕೆಲವರಿಗೆ ಬೇಜಾರ್‌ ಮಾಡಿರಬಹುದು. ಯಾರೂ ನೂರಕ್ಕೆ ನೂರು ಪರ್ಫೆಕ್ಟ್‌ ಇರಲ್ಲ. ನೂರಾರು ಜನರ ನಡುವೆ ಕೆಲಸ ಮಾಡೋವಾಗ ಎಲ್ಲಾರ್ನು ಮೆಚ್ಚಿಸಿ ಕೆಲಸ ಮಾಡೋಕು ಆಗಲ್ಲ. ನಮ್‌ ಸಣ್‌ ಸಣ್‌ ಪ್ರಮಾದನೆ ಭೂತಗನ್ನಡಿಲಿ ತೋರ್‌ಸಿ ನಮ್ಮ ನಡತೆನ ಪಬ್ಲಿಕ್‌ಆಗಿ ಕೊಲ್ಲೊ ಕೆಲಸ ಮಾಡೊ ವಿಘ್ನಸಂತೋಶಿಗಳ್ನ ಕಂಡಾಗ ಮಾತ್ರ ಇವುರ್‌ ಯೋಗ್ಯತೆ ಇಷ್ಟೆ ಬಿಡು ಅನ್ಸುತ್ತೆ. ನಡೆದಿರೊ ದಾರಿಲಿ ಸಿಹಿ ಕಹಿ ಅನುಭವ ಎರಡೂ ಇದಾವೆ. ಎಲ್ಲಕ್ಕು ಮುಖ್ಯವಾಗಿ ನಮ್‌ ಇತಿಮಿತಿಲೆ ಮಲ್ಟಿಟಾಸ್ಕಿಂಗ್‌ ಥರ ಕೆಲವು ಕೆಲಸ ಮಾಡಿರೊ ಸಮಾಧಾನ ಇದೆ. ಹಾಗೆನೆ ಆತ್ಮಾವಲೋಕನನು ಉಂಟು.

 

15. ನಿಮ್ಮ ಮುಂದಿನ ಕೃತಿ?

ಒಂದ್‌ ಕವನಸಂಕಲನ ಮಾಡೋಷ್ಟು ಪದ್ಯ ಇದಾವೆ. ಪ್ರಕಟ ಮಾಡೋಕೆ ಮನಸ್ಸಿಲ್ಲ. ಎರಡು ಸಂಕಲನ ಮಾಡೋಷ್ಟು ವಿಮರ್ಶಾ ಲೇಖನಗಳು ಇದಾವೆ. ಒಂದ್‌ ಮುವ್ವತ್ತು ಕಾಲಮ್‌ ಬುಕ್‌ಬ್ರಹ್ಮಗೆ ಬರೆದಿರೋವು ಇದಾವೆ. ಅವು ಆನ್‌ಲೈನಲ್ಲೆ ಸಿಗ್ತಾವೆ. ಕಾಫ್ಕ ಬರೆದಿರ ಕಾದಂಬರಿ ‘ದಿ ಟ್ರಯಲ್‌’ ಅನುವಾದ ಮಾಡಿದಿನಿ. ಕೆಲಸ ಮುಗಿದಿದೆ. ಅದುನ್ನ ಪ್ರಕಟಣೆಗೆ ಸಿದ್ಧ ಮಾಡ್ಬೇಕು. ಈ ಬೆಂಗಳೂರು ವಿವಿ ಪಠ್ಯಪುಸ್ತಕದ ಊರ್‌ ದನ ಕಾದು ದೊಡ್‌ಬೋರೇಗೌಡ ಅನ್ನುಸ್ಕಳೋ ಕೆಲಸಕ್ಕೆ ನನ್ನ ಆಯುಷ್ಯದಲ್ಲಿ ಎರಡು ವರ್ಷ ಕೊಟ್ನಲ್ಲ; ಅದುಕ್ಕೆ ಅದರಾಗೆ ಮುಳುಗೋಗಿ ಬ್ಯಾರೆ ಏನ್‌ ಕೆಲಸಾನು ಮಾಡಕ್ಕಾಗಿಲ್ಲ. ಸಿಂಪಲ್: ನನ್‌ ಮುಂದಿನ ಕೃತಿ ‘ದ ಟ್ರಯಲ್‌’ ಕೃತಿಯ ಅನುವಾದ: ವಿಚಾರಣೆ. ತ್ಯಾಂಕ್ಯು..

 

 

ಪ್ರಕಟಿತ ಕೃತಿಗಳು:

೧. ಮಾಯಾಪಾತಾಳ (ಕವನ ಸಂಕಲನ: ಅಭಿನವ ಪ್ರಕಾಶನ, ಬೆಂಗಳೂರು ೨೦೦೧)
೨. ಎಡ್ವರ್ಡ್ ಸೈದ್ (ಅನುವಾದ: ಕಾವ್ಯಮಂಡಲ-೨೦೦೩ ಮರುಮುದ್ರಣ-ಚಂದ್ರಗಿರಿ ಪ್ರತಿಷ್ಠಾನ-೨೦೦೯, ಲಡಾಯಿ ಪ್ರಕಾಶನ-೨೦೨೦)
೩. ಮಾರ್ಗಾಂತರ (ವಿಮರ್ಶಾ ಸಂಕಲನ, ಸಿ.ವಿ.ಜಿ. ಪ್ರಕಾಶನ, ಬೆಂಗಳೂರು ೨೦೦೪)
೪. ಸಂಕರಬಂಡಿ (ಕವನ ಸಂಕಲನ: ಮುದ್ದಪ್ಪ ಸ್ಮಾರಕ ಟ್ರಸ್ಟ್, ಬೆಂಗಳೂರು ೨೦೦೭)
೫. ಪರಕಾಯ (ವಿಚಾರ ಲೇಖನಗಳು, ನವಕರ್ನಾಟಕ ಪ್ರಕಾಶನ, ಬೆಂಗಳೂರು ೨೦೧೦)
೬. ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು (ಸಂಶೋಧನೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦)
೭. ೨೦೦೧-೧೦ ಈ ದಶಕದ ಸಂಶೋಧನೆ (ಸಂಶೋಧನೆ, ಕಣಜ ಡಾಟ್ ಕಾಮ್, ಕರ್ನಾಟಕ ಜ್ಞಾನ ಆಯೋಗ ೨೦೧೨)
೮. ಮಹಿಳೆ: ಚರಿತ್ರೆ-ಪುರಾಣ (ಸಂಶೋಧನೆ, ಅಂಕಿತ ಪುಸ್ತಕ, ಬೆಂಗಳೂರು ೨೦೧೪)
೯. ಸಮ್ಮಂದ ಸಂದರ್ಬ (ವಿಮರ್ಶೆ ಸಂಕಲನ, ಸಿ.ವಿ.ಜಿ. ಬುಕ್ಸ್, ಬೆಂಗಳೂರು ೨೦೧೪)
೧೦. ಕಗ್ಗತ್ತಲ ಹೃದಯ (ಜೋಸೆಫ್ ಕಾನ್ರಾಡನ ಕಾದಂಬರಿಯ ಅನುವಾದ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ೨೦೧೬)
೧೧. ನಾಟಕ ದಂಗೆ (ಕುವೆಂಪು ನಾಟಕಗಳ ವಿಮರ್ಶೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೧೭)
೧೨. ನುಡಿಯಾಟ (ವಿಮರ್ಶೆ ಸಂಕಲನ, ಸಪ್ನ ಬುಕ್ ಹೌಸ್, ಬೆಂಗಳೂರು ೨೦೧೭ ಎರಡನೆ ಮುದ್ರಣ-೨೦೨೦)
೧೩. ಸಂಗಾತಿ (ಡಾ.ಜಿ.ರಾಮಕೃಷ್ಣ ಅಭಿನಂದನ ಗ್ರಂಥದ ಸಹಸಂಪಾದನೆ, ಡಾ.ಜಿ.ರಾಮಕೃಷ್ಣ. ಅಭಿನಂದನ ಸಮಿತಿ, ಬೆಂಗಳೂರು ೨೦೦೩)
೧೪. ತೌಲನಿಕ ಸಾಹಿತ್ಯ (ಅನುವಾದಿತ ಕೃತಿ-ಸಹಸಂಪಾದನೆ: ಕಾವ್ಯಮಂಡಲ, ಬೆಂಗಳೂರು ೨೦೦೮)
೧೫. ವರ್ತಮಾನದ ಕಥೆಗಳು (ಕಥಾಸಂಕಲನ-ಸಹಸಂಪದಾನೆ, ಕಣ್ವ ಪ್ರಕಾಶನ, ಬೆಂಗಳೂರು ೨೦೧೩)
೧೬. ಕುವೆಂಪು ನೂರು ನಮನ ಮಾಲಿಕೆಯಲ್ಲಿ ನೂರಿಪ್ಪತ್ತನಾಲ್ಕು ಕೃತಿಗಳ ಸಹಸಂಪಾದನೆ (ಸಿ.ವಿ.ಜಿ. ಪ್ರಕಾಶನ ೨೦೦೪)
೧೭. ಬೆಂಗಳೂರು ವಿ.ವಿ. ಪದವಿಯ ಭಾಷೆ ಮತ್ತು ಐಚ್ಛಿಕದ ೦೯+೫+೧೬ ಕನ್ನಡ ಪಠ್ಯಪುಸ್ತಕಗಳ ಸಹಸಂಪಾದನೆ ೨೦೦೬-೨೩
೧೮. ಸಾಹಿತ್ಯ ವಿಮರ್ಶೆ-೨೦೧೫ (ಸಂಪಾದನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨೦೧೭)
೧೯. ದಾರಿದೀಪ (ಶ್ರೀ ಎ.ಕೆ.ಸುಬ್ಬಯ್ಯನವರ ಅಭಿನಂದನಾ ಗ್ರಂಥ, ಸಹಸಂಪಾದನೆ, ಲಡಾಯಿ ಪ್ರಕಾಶನ, ಗದಗ ೨೦೧೮)
೨೦. ನುಡಿಯೆಂಬುದು ಉರಿಯ ಕೆಂಡ (ಶ್ರೀ ಎ.ಕೆ.ಸುಬ್ಬಯ್ಯನವರ ಸದನದ ಭಾಷಣಗಳು, ಸಹ ಸಂಪಾದನೆ ೨೦೧೮)
೨೧. ಪ್ರಾಚೀನ ಕಾವ್ಯ ಸಂಪುಟ : ಕನ್ನಡ ರತ್ನ ಪಠ್ಯಪುಸ್ತಕ, ಸಂಪಾದನೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೧೮
೨೨. ನಡುಗನ್ನಡ ಸಾಹಿತ್ಯ ಸಂಗಮ: ಕನ್ನಡ ಜಾಣ ಪಠ್ಯಪುಸ್ತಕ, ಸಂಪಾದನೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೧೮

 

ಪ್ರಶಸ್ತಿಗಳು:

• ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-‘ಮಹಿಳೆ ಚರಿತ್ರೆ ಪುರಾಣ’ ಪುಸ್ತಕಕ್ಕೆ ೨೦೧೪
• ಕನ್ನಡ ಸಾಹಿತ್ಯ ಪರಿಷತ್ತಿನ ಹಾ.ಮ.ನಾ ದತ್ತಿ ಪ್ರಶಸ್ತಿ – ‘ಪರಕಾಯ’ ಕೃತಿಗೆ-೨೦೧೩
• ಜಿ.ಎಸ್.ಎಸ್. ಕಾವ್ಯಪ್ರಶಸ್ತಿ – ‘ಮಾಯಾಪಾತಾಳ’ ಕವನ ಸಂಕಲನಕ್ಕೆ-೨೦೦೧
• ನೆಲಮಂಗಲ ತಾಲ್ಲೂಕು ೬ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ-ಫೆಬ್ರವರಿ ೨೦೦೯
• ನವಕರ್ನಾಟಕ ಪ್ರಕಾಶನದ ‘ಹೊಸತು’ ಮಾಸಪತ್ರಿಕೆಯ ಸಹಸಂಪಾದಕರಾಗಿ ಕೆಲ ವರ್ಷ ಕೆಲಸ ನಿರ್ವಹಣೆ.
• ಚಿಲಿಪಿಲಿ ಮಕ್ಕಳ ಮಾಸಪತ್ರಿಕೆಯ ಗೌರವ ಸಂಪಾದಕರಾಗಿ ಎರಡು ವರ್ಷ ಕಾರ್ಯ ನಿರ್ವಹಣೆ.
• ರಾಷ್ಟ್ರಪ್ರಶಸ್ತಿ ವಿಜೇತ ‘ಹೆಬ್ಬೆಟ್ ರಾಮಕ್ಕ’ ಚಲನಚಿತ್ರಕ್ಕೆ ಚಿತ್ರಕಥಾ ರಚನೆ/ಗೀತರಚನೆ
• ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್.ಡಿ. ಪದವಿ-೨೦೦೯ ‘ಕನ್ನಡ ವಿಮರ್ಶಾ ಸಂಸ್ಕೃತಿ: ವಿನ್ಯಾಸ ಮತ್ತು ತಾತ್ವಿಕತೆ’ ಮಹಾಪ್ರಬಂಧ.
• ಕನ್ನಡ ಎಂ.ಎ.ನಲ್ಲಿ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್,
• ಸ್ನಾತಕೋತ್ತರ ಪದವಿಯಲ್ಲಿ ನ್ಯಾಶನಲ್ ಸ್ಕಾಲರ್‌ಶಿಪ್ ಹೋಲ್ಡರ್.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಅನುಸೂಯ ಯತೀಶ್
23 July 2023 14:16

ನಮ್ಮ ತಾಲ್ಲೂಕಿನ ಬಹುಶೃತ ವಿದ್ವಾಂಸರ
ಬದುಕು ಬರಹ ಓದಿ ತುಂಬಾ ಖುಷಿ ಆಯ್ತು
ಗ್ರಾಮ್ಯ ಸೊಗಡಿನ ಸಂಭಾಷಣೆ ಬಹಳಷ್ಟು
ಮನೋಜ್ಞವಾಗಿ ಚಿತ್ರಿತವಾಗಿದೆ. ನಾನು ಕೂಡಲೇ
ಇವರ ಸಾಹಿತ್ಯ ಓದುವೆ ‌‌….
ಈರ್ವರಿಗೂ ಅಭಿನಂದನೆಗಳು

1
    1
    Your Cart
    Remove
    ಜಂತಿ ಮನಿ
    1 X 140.00 = 140.00