ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ

೧೯೨೮ರ ಏಪ್ರಿಲ್ ೨ ರಂದು ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ ಕಾಪಸೆ ಅವರು, ಎಂ.ಎ. ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಾಫಿ ಪೂರೈಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಕ.ವಿ.ವಿ ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ ಮತ್ತು ಧಾರವಾಡದ ಹುರಕಡ್ಲಿ ಅಜ್ಜ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ.

ಕನ್ನಡದ ಪ್ರಾಚೀನ ಸಾಹಿತ್ಯದಿಂದ ಹಿಡಿದು, ಹೊಸಗನ್ನಡದ ವಿವಿಧ ಘಟ್ಟಗಳ ವರೆಗಿನ ಎಲ್ಲ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಗುರುಲಿಂಗ ಕಾಪಸೆ ಅವರು, ಬಹಳ ಮುಖ್ಯವಾಗಿ ಕನ್ನಡ ಅನುಭಾವ ಸಾಹಿತ್ಯ ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಿದವರು. ಶ್ರೀ ಅರವಿಂದರು, ಶ್ರೀಮಾತಾಜಿ ಅವರು, ಮಧುರಚೆನ್ನರು ಮತ್ತು ಬಸವಾದಿ ಶರಣರು ಅವರ ಅಂತರಂಗವನ್ನು ಬೆಳಗಿದ ಮಾಹಾಚೇತನರು. ಶುದ್ಧ ಸಾತ್ವಿಕ ಸ್ವಭಾವದ ಡಾ. ಗುರುಲಿಂಗ ಕಾಪಸೆ ಅವರು ಅಂತರಂಗದ ಅನುಭಾವಿಗಳಾಗಿ ಸಾಧನೆ ಮಾಡಿದವರು. ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವಲ್ಲಿಯೇ ಅವರು ವೃತ್ತಿಜೀವನದಲ್ಲಿ ನೆಮ್ಮದಿ ಕಂಡಿದ್ದಾರೆ. ಡಾ. ಗುರುಲಿಂಗ ಕಾಪಸೆ ಅವರು ಹೆಚ್ಚು ಗ್ರಂಥಗಳನ್ನು ಬರೆದಿಲ್ಲವಾದರೂ, ‘ನನ್ನ ವಿದಾರ್ಥಿಗಳೇ ನಾನು ಬರೆದ ಸಾವಿರಾರು ಗ್ರಂಥಗಳು’ ಎಂಬ ಸಂತೃಪ್ತಿ ಹೊಂದಿದವರು. ‘ಮಧುರಚೆನ್ನ ಪಿಎಚ್.ಡಿ. ಪ್ರಬಂಧ, ೧೩ ಸ್ವತಂತ್ರ ಕೃತಿಗಳು, ೧೭ ಸಂಪಾದನೆಗಳು, ಅನುವಾದಿತ ಗ್ರಂಥಗಳು-ಹೀಗೆ ಅವರ ಸಾಹಿತ್ಯರಾಶಿ ವಿಪುಲವಾಗಿಯೇ ಇದೆ. ಕೇಳುವ ಎಲ್ಲ ಮನಸ್ಸುಗಳಿಗೂ ಅರಿವಿನ ಬೆಳಕು ಮೂಡಿಸುವ ವಾಗ್ಮಿ ಅವರಾಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯನ್ನೂ ಒಳಗೊಂಡಂತೆ ಹಲವಾರು ಸಂಘ- ಸಂಸ್ಥೆಗಳ ನೇತೃತ್ವ ವಹಿಸಿ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ಮಾಡಿದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ. ದಣಿವರಿಯದೆ ನಿರಂತರವಾಗಿ ಸಾಹಿತ್ಯ ಕೃಷಿಗೈದ ಅನುಭಾವಿ ಡಾ. ಗುರುಲಿಂಗ ಕಾಪಸೆ ಅವರು ದಿನಾಂಕ ೨೭-೩-೨೦೨೪ ರಂದು ನಮ್ಮನ್ನಗಅದರು. ಇಂಥ ಹಿರಿಯ ಸಾಧಕ-ಸಾಹಿತಿಯ ಸ್ಮರಣಾರ್ಥವಾಗಿ ಅವರ ವಿದ್ಯಾರ್ಥಿಗಳು, ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ೧೧,೨೧,೧೧೧ ರೂಪಾಯಿಗಳ ಮೊತ್ತದ ದತ್ತಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ಪ್ರತಿವರ್ಷ ಬರುವ ಬಡ್ಡಿಯ ಹಣದಲ್ಲಿ ಕನ್ನಡದ ಇಬ್ಬರು ಮಹತ್ವದ ಸಾಹಿತಿಗಳಿಗೆ ತಲಾ ರೂ, ೨೫,೦೦೦/-ರೂಪಾಯಿಗಳ ಪ್ರಶಸ್ತಿಯನ್ನು ಹಾಗೂ ಕ.ವಿ.ವಿ.ಯಲ್ಲಿ ಎಂ.ಎ. ಕನ್ನಡ ಓದುತ್ತಿರುವ ಒಬ್ಬ ವಿದ್ಯಾರ್ಥಿಗೆ ೫,೦೦೦/- ರೂಪಾಯಿಗಳ ವಿದ್ಯಾರ್ಥಿ ಪಾರಿತೋಷಕವನ್ನು ಕೊಡಮಾಡಲಾಗುತ್ತದೆ.

೨೦೨೫ನೆಯ ಸಾಅನ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗಳನ್ನು ಹಿರಿಯ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಾಗೂ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರಿಗೆ ಪ್ರದಾನ ಮಾಡಲು ಕರ್ನಾಟಕ ವಿದ್ಯಾವರ್ಧಕ ಸಂಘದ ಆಯ್ಕೆ ಸಮಿತಿಯು ನಿರ್ಧರಿಸಿದೆ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ದೆಿವಾಕರ
25 March 2025 14:27

.🙏🙏🙏ನಮಮಗಳು

0
    0
    Your Cart
    Your cart is emptyReturn to Shop