ಹಿರಿಯ ಸಾಹಿತಿಗಳಾದ ಎಂ.ಆರ್. ಕಮಲ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ..

ಸಂದರ್ಶನ: ಸೂರ್ಯಕೀರ್ತಿ

ಎಂ.ಆರ್.ಕಮಲ ಅವರ ಬದುಕು-ಬರೆಹ:

ಪೂರ್ಣ ಹೆಸರು: ಮೇಟಿಕುರ್ಕೆ ರಾಮಸ್ವಾಮಿ ಕಮಲ
ವೃತ್ತಿ: ಕನ್ನಡ ಪ್ರಾಧ್ಯಾಪಕರು

೧೯೫೯ರಲ್ಲಿ ಹುಟ್ಟಿದ ಎಂ.ಆರ್.ಕಮಲ ಅವರು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ತಂದೆ ಎಂ.ಎಚ್.ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.,ಬಿ. ಪದವೀಧರೆಯಾದ ಇವರು ತಮ್ಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ `ಬಿ.ಎಂ.ಶ್ರೀ.’ ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಅವರು ಫ್ರೆಂಚ್ ಭಾಷೆಯಲ್ಲಿ ಪದವೀಧರರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಇವರ ಸ್ವರಚಿತ ಕವಿತೆ ‘ಅಮ್ಮ ಹಚ್ಚಿದೊಂದು ಹಣತೆ’ ಭಾವಗೀತೆಯನ್ನು ಕೇಳದವರೇ ಇಲ್ಲ ಎನ್ನಬಹುದು. ನೃತ್ಯ ಮತ್ತು ವೀಣೆಯಲ್ಲೂ ಸಾಕಷ್ಟು ಪರಿಶ್ರಮವಿದೆ. ಪ್ರಕಟಿತ ಕಾವ್ಯ ಸಂಗ್ರಹಗಳು ಶಕುಂತಲೋಪಾಖ್ಯಾನ (೧೯೮೮), ಜಾಣೆ ಮತ್ತು ಇತರ ಕವಿತೆಗಳು (೧೯೯೨), ಕ್ರಮವಾಗಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ. ಹೂವು ಚೆಲ್ಲಿದ ಹಾದಿ (೨೦೦೭), ಮಾರಿಬಿಡಿ (೨೦೧೭), ಗದ್ಯಗಂಧಿ (೨೦೨೦), ನೆಲದಾಸೆಯ ನಕ್ಷತ್ರಗಳು (೨೦೨೧). ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೆ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಅವರು ಪಡೆದಿದ್ದಾರೆ. ಕಿ.ರಂ.ಕಾವ್ಯ ಪುರಸ್ಕಾರವೂ ದೊರೆತಿದೆ.

ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ. ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ; ಊರಬೀದಿಯ ಸುತ್ತು, #ಕ್ವಾರಂಟೈನ್ ೨೦೨೦ರಲ್ಲಿ ಮತ್ತು ಹೊನ್ನಾವರಿಕೆ ೨೦೨೨ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನಗಳು.

ಬಂಗಾಳದ ಮಹತ್ವದ ಕವಿ ಜೀವನಾನಂದರ ಕವಿತೆಗಳು, ಇವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ ಸಂಗ್ರಹ (೨೦೦೩), ಜೀರೋ ಪಾಯಿಂಟ್, ಆಧುನಿಕೋತ್ತರ ಬಂಗಾಳಿ ಕವಿಗಳ ಕವಿತೆಯನ್ನು ಇತರರೊಂದಿಗೆ ಸೇರಿ ಅನುವಾದಿಸಿರುವ ಸಂಕಲನವಾಗಿದೆ.

ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೇರಿಕನ್, ಆಫ್ರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕರ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್-ಅಮೇರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು `ಕಪ್ಪು ಹಕ್ಕಿಯ ಬೆಳಕಿನ ಹಾಡು’ ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. ಇದೀಗ ಮತ್ತೊಂದು ಅನುವಾದ ಪುಸ್ತಕ ಕೆನ್ನೀಲಿ ಪ್ರಕಟವಾಗುತ್ತಿದೆ. ಅರಬ್ ಮಹಿಳಾ ಕಾವ್ಯವನ್ನು ಪರಿಚಯಿಸುವ ನೆತ್ತರಲಿ ನೆಂದ ಚಂದ್ರ (೨೦೧೬) ಅನುವಾದ ಕೃತಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿಯನ್ನು ಪಡೆದಿದೆ.

ಬಾಳ ಸಂಗಾತಿ ರಮೇಶ್ ಅವರೊಂದಿಗೆ..

೧. ನಿಮ್ಮ ಬಾಲ್ಯ ಜೀವನದ ಬಗ್ಗೆ ಹೇಳುವುದಾದರೆ?

ನಾನು ಹುಟ್ಟಿ ಬೆಳೆದಿದ್ದು ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆ ಎನ್ನುವ ಹಳ್ಳಿಯಲ್ಲಿ. ನಮ್ಮ ತಂದೆ-ತಾಯಿಗಳಿಗೆ ಹನ್ನೊಂದು ಮಕ್ಕಳು. ನಮ್ಮೂರಿನಲ್ಲಿ ಹೈಸ್ಕೂಲ್ ವರೆಗೂ ಕಲಿಯುವ ಅವಕಾಶ ಇದ್ದದ್ದರಿಂದ ಸುತ್ತ ಮುತ್ತಲ ಹಳ್ಳಿಗಳಲ್ಲಿದ್ದ ನೆಂಟರು ಇಷ್ಟರ ಮಕ್ಕಳೆಲ್ಲ ನಮ್ಮ ಮನೆಗೆ ವಿದ್ಯಾಭ್ಯಾಸಕ್ಕಾಗಿ ಬಂದು ಉಳಿಯುತ್ತಿದ್ದರು. ನಮಗೆಲ್ಲ ನಿಜವಾದ ಅಣ್ಣ ತಮ್ಮಂದಿರು ಯಾರು ಅಂತ ಕೂಡ ಗೊತ್ತಾಗದ ಹಾಗೆ ನನ್ನ ತಾಯಿ ಅವರನ್ನೆಲ್ಲ ನೋಡಿಕೊಳ್ಳುತ್ತಿದ್ದರು. ನಮ್ಮದು ದೊಡ್ಡ ಕುಟುಂಬ. ನನ್ನ ತಂದೆ ಕೃಷಿಕರು. ಪ್ರಧಾನವಾಗಿ ತೆಂಗಿನ ಬೆಳೆ. ಮನೆಯಲ್ಲಿ ಎಲ್ಲರು ಕೆಲಸ ಮಾಡಲೇಬೇಕಾಗಿತ್ತು. `ಕಾಯಕ ಸಂಸ್ಕೃತಿ’ಯಲ್ಲಿ ಬೆಳೆದವಳು ನಾನು. ಅದರ ಜೊತೆಗೆ ಆಟ ಪಾಠ ಎಲ್ಲವು ಇತ್ತು. ಅತ್ಯಂತ ಖುಷಿಯ ಬಾಲ್ಯವದು.

೨. ಸಾಹಿತ್ಯದ ಬಗ್ಗೆ ಒಲವು ಬರಲು ಸ್ಫೂರ್ತಿ ಯಾರು?

ನನ್ನ ತಂದೆಗೆ ಸಾಹಿತ್ಯದ ಬಗ್ಗೆ ಬಹಳ ಒಲವು ಇತ್ತು. ಹಳ್ಳಿಯಲ್ಲಿ ಗ್ರಂಥಾಲಯ ಇರಲಿಲ್ಲ. ಓದಲು ಪುಸ್ತಕಗಳು ಇರಲಿಲ್ಲ. ಪಠ್ಯ ಪುಸ್ತಕದಲ್ಲಿದ್ದ ಪದ್ಯಗಳನ್ನು ರಾಗವಾಗಿ ನನ್ನ ತಂದೆಯೇ ಹೇಳಿಕೊಡುತ್ತಿದ್ದರು. ಮಳೆ ಬಾರದೆ ಇದ್ದಾಗ, ಅಂಗಳದಲ್ಲಿ ರೈತರೊಂದಿಗೆ ಕುಳಿತು. ಕುಮಾರವ್ಯಾಸ ಭಾರತವನ್ನು ಓದಿ, ವ್ಯಾಖ್ಯಾನಿಸುತ್ತಿದ್ದರು. ಅದನ್ನು ಕೇಳಿಯೇ ಬೆಳೆದಿದ್ದರಿಂದ ಸಾಹಿತ್ಯದ ಕಡೆ ಒಲವು ಬೆಳೆಯಿತು.

೩. ಸಾಹಿತ್ಯ ಮತ್ತು ಜೀವನ ವಿಭಿನ್ನವೇ?

ನನ್ನ ಬರವಣಿಗೆಯ ಮಟ್ಟಿಗೆ ಹೇಳುವುದಾದರೆ ಅವೆರಡು ಅಭಿನ್ನ. ಇದನ್ನು ಹೊರತಾಗಿ ಈಗಾಗಲೇ ಸಾಹಿತ್ಯ, ಜೀವನದ ಪ್ರತಿಬಿಂಬವೋ ಅಥವಾ ಗತಿಬಿಂಬವೋ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.

೪. ಇವತ್ತಿನ ಸಂದರ್ಭದಲ್ಲಿ ಕನ್ನಡವನ್ನು ಉಳಿಸುವ ಬಗೆ?

ನನ್ನ ಗುರುಗಳಾಗಿದ್ದ ಡಿ.ಆರ್.ನಾಗರಾಜ್ ಅವರು ಹೇಳುವಂತೆ `ಭಾಷೆಯೊಂದು ಬಲಿಷ್ಠವಾಗುವುದು ಆ ಭಾಷಿಕ ಜನಾಂಗ ರಾಜಕೀಯವಾಗಿ ಬಲವಾದಾಗ’. `ರಾಜಕೀಯ ಇಚ್ಛಾಶಕ್ತಿ’ ಕನ್ನಡವನ್ನು ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಂಸ್ಕೃತಿಕವಾಗಿ ಕುಗ್ಗಿ ಹೋಗಿದ್ದ ಅನೇಕ ಯೂರೋಪಿನ ಭಾಷೆಗಳು ಮತ್ತೆ ತಲೆ ಎತ್ತಿ ನಿಂತಿದ್ದು ಹೀಗೆ. (ಉದಾಹರಣೆಗೆ ಸ್ವೀಡಿಷ್) ಸರ್ಕಾರ ಕನ್ನಡ ಕಟ್ಟುವ, ಕಲಿಸುವ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಬೇಕು. ಅದಕ್ಕೆ ಮೀಸಲಾದ ಅಕಾಡೆಮಿಗಳಿವೆ, ಪ್ರಾಧಿಕಾರ ಇದೆ. ಖಾಸಗಿ ಸಹಭಾಗಿತ್ವದಲ್ಲೂ ಕನ್ನಡವನ್ನು ಅನ್ಯಭಾಷಿಕರಿಗೆ ಕಲಿಸಬಹುದು, ಬೆಳೆಸಬಹುದು. ಈಗಾಗಲೇ ಎಷ್ಟೋ ಜನರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವುದಕ್ಕೆ ಪ್ರಾಧಾನ್ಯತೆ ನೀಡಬೇಕು.

೫. ನಿಮ್ಮ ಜೀವನದಲ್ಲಿ ಮರೆಯಲಾರದಂಥ ನೆನಪು?

ಬರಹಗಾರರನ್ನು ಕೈ ಹಿಡಿದು ನಡೆಸುವುದು ಹಲವಷ್ಟು ಬಾರಿ ನೆನಪುಗಳೇ. ಹಾಗಾಗಿ ಎಲ್ಲ ನೆನಪುಗಳು ನನಗೆ ವಿಶಿಷ್ಟವೇ. ಆದರೂ ಮದುವೆಯಾದ ಮೇಲೆ, ಮಗ ಹುಟ್ಟಿದ ಮೇಲೆ ನಾಲ್ಕು ವರ್ಷಗಳ ಕಾಲ ಸತತವಾಗಿ ನೃತ್ಯಾಭ್ಯಾಸ ಮಾಡಿ `ರಂಗಪ್ರವೇಶ’ ಮಾಡಿದ್ದು ಹೆಚ್ಚು ಪ್ರಿಯವಾದ ನೆನಪು ಅನ್ನಬಹುದು.

೬. ನಿಮ್ಮ ಪ್ರಕಾರ ಕನ್ನಡ ಅಂದ್ರೆ?

ಕನ್ನಡವೇ ಬದುಕು. ನನ್ನ ಮನೆ ಮಾತು ಕನ್ನಡ, ಓದಿದ್ದು ಕನ್ನಡ. ಪಾಠ ಮಾಡಿ ಸಂಬಳ ಪಡೆದು ಜೀವನ ನಡೆಸಿದ್ದು ಕನ್ನಡದಿಂದಲೇ.

೭. ಪ್ರಸ್ತುತ ಕನ್ನಡ ಸಾಹಿತ್ಯದ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆ?

ಬಹಳ ಸಂತೋಷವಾಗುತ್ತಿದೆ. ಯುವ ಬರಹಗಾರರು ಸಾಹಿತ್ಯದ ಬಗ್ಗೆ ಅತ್ಯುತ್ಸಾಹ ತೋರುತ್ತಿದ್ದಾರೆ. ವಿವಿಧ ಸಮುದಾಯದವರು ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ಹಿಂದೆಂದಿಗಿಂತಲೂ ಸಾಹಿತ್ಯ ವೈವಿಧ್ಯಮಯವಾಗಿದೆ. ಪತ್ರಿಕೆಗಳ ಜೊತೆಗೆ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿಗೆ ಅವಕಾಶ ಒದಗಿಸಿಕೊಟ್ಟಿದೆ. ಸ್ವಾಗತಾರ್ಹ ಬೆಳವಣಿಗೆ.

೮. ನಿಮ್ಮ ಮುಂದಿನ ಸಾಹಿತ್ಯ ಕೃತಿ?

ನಾನು ೨೦೧೬ ರಿಂದ `ಗದ್ಯಗಂಧಿ’ ಕವಿತೆಗಳನ್ನು ಬರೆಯುತ್ತಿದ್ದೇನೆ. ಮುಂದಿನ ಕೃತಿ ಕೂಡ ಗದ್ಯಗಂಧಿ ಕವಿತೆಗಳೇ. ಅದಕ್ಕಿನ್ನೂ ಹೆಸರಿಟ್ಟಿಲ್ಲ.

೯. ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ?

ನನ್ನ ಬಾಳ ಸಂಗಾತಿ ರಮೇಶ್, ವಕೀಲರು. ಮಗ ಆಕರ್ಷ, ಸೊಸೆ ಮಧುರಾ ಇಬ್ಬರೂ ಇಂಜಿನಿಯರ್ ಗಳು. ಮಗಳು ಸ್ಪರ್ಶ ಮತ್ತು ಅಳಿಯ ವಿಕಾಸ್. ಎಲ್ಲರೂ ತಮ್ಮ ವೃತ್ತಿಯ ಜೊತೆಗೆ ಹವ್ಯಾಸಗಳನ್ನು ಇಟ್ಟುಕೊಂಡಿದ್ದಾರೆ. ನನ್ನ ಗಂಡನಿಗೆ ಕೃಷಿ ಆಸಕ್ತಿಯ ಕ್ಷೇತ್ರ. ಮಗನಿಗೆ ನಟನೆಯಲ್ಲಿ ಆಸಕ್ತಿಯಿರುವುದರಿಂದ ಅನೇಕ ಚಿತ್ರಗಳಲ್ಲಿ ಮತ್ತು ಕಾಮೆಡಿ ಸ್ಕೆಚ್ ಗಳಲ್ಲಿ ನಟಿಸಿದ್ದಾನೆ. ಸೊಸೆ ಚಿತ್ರ ಕಲಾವಿದೆ. ಮಗಳು ಹಾಡುಗಾರ್ತಿ, ಕಂಠದಾನ ಕಲಾವಿದೆ, ನಟಿ. ಅಳಿಯ ವಿಕಾಸ್ ಹಾಡುಗಾರ ಮತ್ತು ಸಂಗೀತ ನಿರ್ದೇಶಕ. ನಮ್ಮ ಮನೆಯಲ್ಲಿ ಎಲ್ಲರೂ ಪರಸ್ಪರರ ಬೆನ್ನು ತಟ್ಟುತ್ತ ಅವರವರ ಆಸಕ್ತಿಯಂತೆ ಬೆಳೆಯಲು ಒಂದು ವಾತಾವರಣವನ್ನು ನಿರ್ಮಿಸಿಕೊಂಡಿದ್ದೇವೆ.

೧೦. ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ?

ನಾನು ಚಿಕ್ಕವಳಿದ್ದಾಗಿನಿಂದ ಕವಿತೆ ಬರೆಯುತ್ತಿದ್ದೇನೆ. ಅವನ್ನು ಕವಿತೆಯೆಂದು ಹೇಳುವವರು ಯಾರಿದ್ದರು? ನಾನು ಸಂಕೋಚದಿಂದ ಹೇಳಲೇ ಇಲ್ಲ. ಆರನೇ ತರಗತಿಯಲ್ಲಿದ್ದಾಗ ಒಂದು ಕವನವನ್ನು ಗುಟ್ಟಾಗಿ ಪತ್ರಿಕೆಗೆ ಕಳಿಸಿದ್ದೆ. ಪ್ರಕಟವಾಗಲಿಲ್ಲ. ಓದುವ ಹಸಿವಿತ್ತು. ಹಳ್ಳಿಯಲ್ಲಿದ್ದುದರಿಂದ ಪುಸ್ತಕಗಳು ಸಿಗುತ್ತಿರಲಿಲ್ಲ. ಗ್ರಂಥಾಲಯವೂ ಇರಲಿಲ್ಲ. ಬೆಂಗಳೂರಿಗೆ ಬಂದು ಎಂ.ಇ.ಎಸ್ ಕಾಲೇಜು ಸೇರಿದೆ. ಅಲ್ಲಿಯ ಕನ್ನಡ ಉಪನ್ಯಾಸಕರ ಪ್ರೋತ್ಸಾಹದಿಂದ ಕಾಲೇಜು ಮ್ಯಾಗಜಿನ್ ಗೆ ಕವಿತೆಗಳನ್ನು ಬರೆಯುತ್ತಿದ್ದೆ. ಕನ್ನಡ ಎಂ.ಎ ಸೇರಿದಾಗಲೂ ಬರೆಯುತ್ತಿದ್ದೆ. ಪತ್ರಿಕೆಗಳಿಗೆ ಕಳಿಸಲಿಲ್ಲ. ನಂತರ ಕಾಲೇಜಿನ ಅಧ್ಯಾಪನ, ನೃತ್ಯ, ವೀಣೆ ಸಂಸಾರ ಹೀಗೆ ಮುಳುಗಿ ಹೋದರು ಕವಿತೆ ಬರೆಯುವುದನ್ನು ನಿಲ್ಲಿಸಿರಲಿಲ್ಲ. ಒಮ್ಮೆ ಪ್ರಜಾವಾಣಿಗೆ ಕಳಿಸಿದ್ದೆ. ಆ ಸಮಯದಲ್ಲಿ ಅಲ್ಲಿ ಕವನಗಳು ಪ್ರಕಟವಾಗುವುದು ಹಿರಿಮೆಯ ವಿಷಯವಾಗಿತ್ತು. ನನ್ನ `ಶಕುಂತಲೋಪಾಖ್ಯಾನ’ ಕವಿತೆ ಪ್ರಕಟವಾದಾಗ ನನ್ನ ಮೇಷ್ಟ್ರುಗಳೆಲ್ಲ ಮೆಚ್ಚಿ ಕಾಗದ ಬರೆದಿದ್ದರು. ಧೈರ್ಯ ಮಾಡಿ ೧೯೮೭ ರಲ್ಲಿ ನನ್ನ ಗುರುಗಳಾದ ಜಿ ಎಸ್ ಎಸ್ ಅವರ ಮುನ್ನುಡಿಯೊಂದಿಗೆ ಕವನ ಸಂಕಲ ಪ್ರಕಟವಾಯಿತು. ನಂತರ ಅನುವಾದ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದರೂ ನನ್ನ ಮೊದಲ ಆದ್ಯತೆ ಕವಿತೆಯೇ. ನಂತರದ್ದೆಲ್ಲ ನಿಮಗೆ ತಿಳಿದೇ ಇದೆ.

೧೧. ಆಫ್ರಿಕನ್-ಅಮೇರಿಕನ್ ಮತ್ತು ಅರಬ್ ಮಹಿಳಾ ಕಾವ್ಯವನ್ನು ಕನ್ನಡಕ್ಕೆ ಏಕೆ ಅನುವಾದ ಮಾಡಬೇಕೆನ್ನಿಸಿತು?

ನಾನಿನ್ನೂ ಎಂ.ಎ. ವಿದ್ಯಾರ್ಥಿನಿಯಾಗಿದ್ದಾಗ ಕವಿ ಸಿದ್ಧಲಿಂಗಯ್ಯನವರು ನನಗೆ `ನಿಗ್ರೋ ಪೊಯಟ್ರಿ’ ಎಂಬ ಪುಸ್ತಕವನ್ನು ಕೊಟ್ಟಿದ್ದರು. ನನ್ನ ಸಹಪಾಠಿ ಚಂದ್ರಶೇಖರ ಆಲೂರು ಅದರಲ್ಲಿನ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದರು. ಅನಂತರ ನನ್ನ ಓದು ಮುಗಿಸಿ, ನಮ್ಮ ಹಳ್ಳಿ ಸೇರಿ ನಿರುದ್ಯೋಗದ ನೋವು, ಏಕಾಕಿತನದ ಭಾರದಲ್ಲಿದ್ದಾಗ ಈ ಕವನಗಳನ್ನು ಮತ್ತೆ ಮತ್ತೆ ಓದಿದೆ. ಓದುತ್ತ ಹೋದ ಹಾಗೆ ಈ ಕವಿತೆಗಳು ನನಗರಿಯದೆ ನನ್ನೊಳಗೆ ಇಳಿದುಬಿಟ್ಟಿದ್ದವು. ಕೆಲವಂತೂ ನನ್ನದೇ ಭಾವನೆಗಳು, ನನ್ನ ಹೃದಯದ ನೋವೇ ಎನ್ನುವಷ್ಟು ತೀವ್ರವಾಗಿ ಕಾಡಿದವು. ಅವನ್ನು ಅನುವಾದಿಸತೊಡಗಿದೆ. ಈ ಕವಿತೆಗಳು ನನ್ನವೇ ಎನ್ನಿಸಿದ್ದು ಅಚ್ಚರಿ! ಇಡೀ ಜಗತ್ತಿನಲ್ಲಿ ಹೆಣ್ಣುಮಕ್ಕಳ ಸ್ಥಿತಿ ಒಂದೇ. ದ್ವಿತೀಯ ದರ್ಜೆಯ ನಾಗರಿಕರಾಗಿಯೇ ಬದುಕುತ್ತಿದ್ದಾರೆ. ಅದರ ಅರಿವು ಮೂಡಿಸಬೇಕಾಗಿರುವುದು ನನ್ನ ಆದ್ಯತೆಯಾಗಿರಬೇಕೆಂಬ ಭಾವನೆ ಬಂದಿತು. ಜೊತೆಗೆ ಅವರ ಆಲೋಚನಾ ಕ್ರಮವು ಭಿನ್ನವಲ್ಲವಾದ್ದರಿಂದ ಅನುವಾದ ಮಾಡಬಲ್ಲೆನೆಂಬ ಆತ್ಮವಿಶ್ವಾಸವು ಇತ್ತು.

ಅರಬ್ ಮಹಿಳಾ ಕಾವ್ಯವನ್ನು ಅನುವಾದ ಮಾಡಿದ್ದು ಈ ಹಿನ್ನೆಲೆಯಲ್ಲಿಯೇ. ಆದರೆ ಅರಬ್ ಕಾವ್ಯವನ್ನು ಅನುವಾದ ಮಾಡುವುದು ಸವಾಲಿನ ವಿಷಯವೇ ಆಗಿತ್ತು. ಸಾಮಾಜಿಕ ಶೋಷಣೆ, ಲಿಂಗ ತಾರತಮ್ಯ, ಕೀಳಾಗಿ ಕಾಣುವುದು ಅರಬ್ ಮಹಿಳೆಯರ ಕಾವ್ಯ ಅಭಿವ್ಯಕ್ತಿಯ ಪ್ರಾಥಮಿಕ ಆದ್ಯತೆಗಳು ಹೌದು. ಆದರೆ ನೆತ್ತರಿನ ಕರಾಳ ನೆರಳು, ಸಾವು, ಬಂಡಾಯ, ಹೋರಾಟಗಳು, ತಮ್ಮ ದೇಶದ ಒಳಗೆ ಹೊರಗೆ ದೇಶಭ್ರಷ್ಟರಂತೆ ಬದುಕಬೇಕಿರುವುದು, ಇದರಿಂದ ಹುಟ್ಟುವ ನಿರಾಶೆ, ನೋವು ಇತ್ಯಾದಿ ಭಾವನೆಗಳು ಅರಬ್ ಹೆಣ್ಣುಮಕ್ಕಳ ಕವನಗಳಲ್ಲಿ ಪ್ರಖರವಾಗಿ ಕಾಣುತ್ತವೆ. ನಿರ್ದಿಷ್ಟ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಸಂಕೀರ್ಣ ಸಮಸ್ಯೆಗಳೊಂದಿಗೆ ಅರಬ್ ಹೆಣ್ಣುಮಕ್ಕಳು ಮುಖಾಮುಖಿಯಾಗುತ್ತ ಸಂಘರ್ಷವೇ ಬದುಕಾಗಿ ಹೋದ ಸನ್ನಿವೇಶಗಳನ್ನು ಅಭಿವ್ಯಕ್ತಿಸುವಾಗ ಬಳಸುವ ರೂಪಕಗಳು ವಿಭಿನ್ನವಾಗಿದ್ದವು. ಕನ್ನಡದ ಭಾವ ಮತ್ತು ವೈಚಾರಿಕ ಲೋಕವನ್ನು ಇವು ವಿಸ್ತರಿಸುತ್ತವೆ ಎನ್ನಿಸಿತು.

೧೨. ನಿಮಗೆ ಭರತನಾಟ್ಯ ಅಭಿರುಚಿ ಹುಟ್ಟಿಕೊಂಡ ಬಗೆ ಹೇಗೆ?

ನನಗೆ ಚಿಕ್ಕಂದಿನಿಂದ ನೃತ್ಯ ಇಷ್ಟವಾದ ಪ್ರಕಾರ. ಸ್ವಭಾವತಃ ಉತ್ಸಾಹಶಾಲಿ. ಆದರೆ ಹಳ್ಳಿಯಲ್ಲಿದ್ದುದರಿಂದ ಕಲಿಯಲು ಅವಕಾಶ ಇರಲಿಲ್ಲ. ಬೆಂಗಳೂರಿಗೆ ವಿದ್ಯಾಭ್ಯಾಸ ಮುಂದುವರಿಸಲು ಬಂದಾಗ ನಾಟ್ಯ ಕಲಿಯುವ ಆಸೆ ಇದ್ದರೂ ಅದಕ್ಕೆ ಕೊಡಬೇಕಾದ ಶುಲ್ಕ ಆತಂಕ ಹುಟ್ಟಿಸಿತ್ತು. ಆದರೂ ಕೆಲವು ತಿಂಗಳುಗಳ ಕಾಲ ಶ್ರೀಮತಿ ನಿರ್ಮಲಾ ಮಂಜುನಾಥ್ ಎನ್ನುವವರ ಬಳಿ ಕಲಿತೆ. ನಂತರದಲ್ಲಿ ಕೆಲಸಕ್ಕೆ ಸೇರಿದ್ದರಿಂದ ಮುಂದುವರೆಸಲು ಆಗಲಿಲ್ಲ. ಮದುವೆಯಾದ ಮೇಲೆ ನಮ್ಮ ಮನೆಯ ಎದುರೇ ಇದ್ದ ಮನೆಯಲ್ಲಿ ಭರತನಾಟ್ಯ ತರಗತಿಗಳನ್ನು ಮೈಸೂರು ಶೈಲಿಯ ಗುರು ಶ್ರೀ ಸಿ.ರಾಧಾಕೃಷ್ಣ ಅವರು ನಡೆಸುತ್ತಿದ್ದರು. ಕಲಿಕೆಯ ಆಸೆ ಚಿಗುರಿ ಮುಂದುವರಿಸಿದೆ.

೧೩. ನಿಮ್ಮ ಜೀವನದಲ್ಲಿ ಮರೆಯಲಾಗದ ಮೇಷ್ಟ್ರು?

ಬಹಳಷ್ಟು ಮೇಷ್ಟ್ರುಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸಿದ, ಅಂತಃಕರಣಿ ಮೇಷ್ಟ್ರು ಎಂದರೆ ಎಂ.ಇ.ಎಸ್. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ದಿವಂಗತ ಶ್ರೀ ರಾಮರಾವ್ ಕುಲಕರ್ಣಿಯವರು.

೧೪. ಇವತ್ತಿನ ಯುವಕವಿಗಳಿಗೆ ನೀವು ಕಿವಿ ಮಾತುಗಳು ಹೇಳುವುದಾದರೆ?

ಕಿವಿಮಾತು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಈಗಿನವರು ಬದುಕಿಗೆ ವಿಶಾಲವಾಗಿ ತೆರೆದುಕೊಂಡಿದ್ದಾರೆ. ಅನುಭವಗಳು ವಿಭಿನ್ನವಾಗಿವೆ. ಪರಂಪರೆಯ ಕವಿಗಳನ್ನು ಅಭ್ಯಾಸ ಮಾಡುವುದರಲ್ಲಿ ಪ್ರಯೋಜನವಿದೆ ಎನ್ನುವುದು ನನ್ನ ಅನುಭವ.

೧೫. ಈಗ ಕಾಳನ ನೆನಪಾಗುವುದಿಲ್ಲವೇ?

ಕಾಳನ ನೆನಪು ಪ್ರತಿಕ್ಷಣವೂ ಆಗುತ್ತಿರುತ್ತದೆ. ಸಕಲ ಜೀವಿಗಳ ಬಗ್ಗೆ ಅಂತಃಕರಣದ ನೋಟ ಕೊಟ್ಟವನು ಕಾಳ.

೧೬. ನಿಮ್ಮ ಮಕ್ಕಳು ಕೂಡ ಸಾಹಿತ್ಯದ ಹಾದಿಯಲ್ಲೇ ನಡೆಯುತ್ತಿದ್ದಾರೆ. ಅವರಿಗೆ ನೀವೇ ಸ್ಪೂರ್ತಿ ಅಲ್ಲವೇ?

ಮಗನಿಗೆ ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿದ್ದು ನಾನು ಹೇಳುತ್ತಿದ್ದ ನೂರಾರು ಕತೆ ಕವಿತೆಗಳಿಂದಲೇ. ಮಗಳು ಸಾಹಿತ್ಯದ ಹಾದಿಯಲ್ಲಿಲ್ಲ. ಆದರೆ ಸಾಹಿತ್ಯದ ತಿಳಿವು ಅವಳ ಹಾಡುಗಾರಿಕೆಗೆ ನೆರವಾಗಿದೆ. ಶಿಕ್ಷಕಿಯಾಗಿ ಕೂಡ ಈ ಕೆಲಸವನ್ನು ನಿರಂತರವಾಗಿ ಮಾಡಿದ್ದೇನೆ. ಆದರೆ ನಡೆಯಬೇಕಾದ ಹಾದಿಯ ಆಯ್ಕೆ ಅವರವರದ್ದೇ.

೧೭. ನಿಮ್ಮ ಬರಹಗಳಲ್ಲಿ ಮಹಿಳಾ ಪರವಾದ ಬರಹಗಳು ಹೆಚ್ಚು?

ಹೌದು, ಇದುವರೆಗೂ ನಾನು ಹೊರ ತಂದಿರುವ ಕೃತಿಗಳು, ಅನುವಾದಗಳು ಎಲ್ಲವು ಮಹಿಳಾ ಪರವಾದದ್ದೇ. ನಾನು ಹೆಣ್ಣಾಗಿರುವುದರಿಂದ ಎಲ್ಲ ಹೆಣ್ಣುಮಕ್ಕಳ ಸ್ಥಿತಿಗತಿ, ನೋವು ನಲಿವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲೆ. ನನ್ನೊಳಗೆ ಇಳಿಸಿಕೊಂಡು ಅವರೆಲ್ಲರ ದನಿಯನ್ನು ಸಮಾಜಕ್ಕೆ ತಲುಪಿಸುವುದು ನನ್ನ ಉದ್ದೇಶ. ಈಗಾಗಲೇ ಕಾರಣವನ್ನು ಹೇಳಿದ್ದೇನೆ.

ಚಂದಾದಾರರಾಗಿ
ವಿಭಾಗ
8 ಪ್ರತಿಕ್ರಿಯೆಗಳು
Inline Feedbacks
View all comments
ಡಾ.ಸುಮತಿ
30 June 2023 10:38

ಕಮಲ ಮೇಡಂ ರವರ ಕಪ್ಪು ಹಕ್ಕಿಯ ಬೆಳಕಿನ ಹಾಡು ಕೃತಿಯ ಬಗ್ಗೆ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಾತನಾಡಿದಂದಿನಿಂದ ಇಂದಿನವರೆಗೂ ಅವರ ವಿಚಾರಗಳ ಜಾಡುಹಿಡಿದು ನಡೆದವಳು ನಾನು.ಬದುಕಿನಷ್ಟೆ ಸಾಹಿತ್ಯದ ಬಗೆಗಿನ ಅವರ ಸ್ಪಷ್ಟ ನಿಲುವು ನಮಗೆ ಪ್ರೇರಕ. ಅವರ ಬದುಕನ್ನು ಅನಾವರಣಗೊಳಿಸಿದ ಮಿಂಚುಳ್ಳಿ ಪತ್ರಿಕೆಗೆ ನಮನಗಳು.

ಶಿವರಾಜ್ ಮೋತಿ
26 June 2023 17:12

ಕನ್ನಡ ಕಟ್ಟುವ, ಉಳಿಸುವ ಬಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. ಸರ್ಕಾರ ಗಮನಿಸಲಿ..

ಮಮತಾ ಶಂಕರ್
25 June 2023 11:20

ಮನದಾಳದ ಮಾತು…. ಕಮಲಾ ಅಮ್ಮಾ ಎಂದರೇನೆ ಬದುಕಿನ ಸ್ಪೂರ್ತಿ ಉತ್ಸಾಹ… ಸಂದರ್ಶನ ಚೆಂದ….

ರವಿ ದೇವರಡ್ಡಿ
19 June 2023 20:27

ಬರವಣಿಗೆ ಎಂಬುದು ಅನುಭವಗಳ ಹೂರಣ ಎಂಬುದನ್ನು ನಿಮ್ಮ ಮಾತುಗಳಿಂದ ತಿಳಿಯಿತು.

ರಚನಾ. ಆರ್.
18 June 2023 11:34

ಸಂದರ್ಶನ ಬಹಳ ಚೆನ್ನಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ. ಸಾಹಿತ್ಯ ಸಾಧಕಿಯೊಬ್ಬರ ಬಗ್ಗೆ ತಿಳಿದುಕೊಂಡದ್ದು ಬಹಳ ಸಂತೋಷವಾಯಿತು.

ಗೀತಾಂಜಲಿ ಪ್ರಸನ್ನಕುಮಾರ್
18 June 2023 10:55

ಕಮಲ ಮೇಡಂ ಎಂದರೆ ಉತ್ಸಾಹದ ಚಿಲುಮೆ. ಅವರ ಲವಲವಿಕೆಯ ಬರಹಗಳನ್ನು ಓದುವುದೇ ಚಂದ. ಸಂದರ್ಶನ ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ನೀಡಿದೆ.

ನಾಗರತ್ನ ಕೆ.ಆರ್
18 June 2023 10:17

ಮಾನವ ಜನ್ಮದ ಸಾರ್ಥಕತೆಯನ್ನು ಸಾಕಾರಗೊಳಿಸಿ ಬಹುಮುಖವಾಗಿ ವಿಕಸನಗೊಂಡ ತಮ್ಮ ವ್ಯಕ್ತಿತ್ವದ
ರಾಗ,ಭಾವ,ತಾನಗಳು ನನ್ನ ಮನಸೂರೆಗೊಂಡಿತು…
ತಮ್ಮ ವ್ಯಕ್ತಿತ್ವದ ಬಳಿ ಸುಳಿದಾಡಿದವರೆಲ್ಲ ಸಾತ್ವಿಕವಾಗಿ ,ಉತ್ತಮ ಸಹಜೀವಿಗಳಾಗಲು, ಕಲೆ ಮತ್ತು ಸಾಹಿತ್ಯ ಸಂಸ್ಪರ್ಶ ಪಡೆಯಲು, ಶೋಷಿತರನೋವಿಗೆ ಸ್ಪಂದಿಸುವ
ಹೃನಮನ ಹೊಂದಲು, ಸಹೃದಯಿಗಳಾಗಲು ಕಾಯಕನಿಷ್ಠ ವಿದ್ಯಾರ್ಥಿಗಳಾಗಲು ಪ್ರೇರಕ ಶಕ್ತಿ ಯಾಗಿರುವಿರಿ ಮೇಡಂ…ತಮ್ಮ ಪರಿಚಯ ನಮ್ಮ ಪುಣ್ಯ ಸಂಚಯ.🙏🙏🙏

ಭುವನೇಶ್ವರಿ ಜಿ
18 June 2023 08:26

ಎಂ.ಆರ್. ಕಮಲರವರ ಬದುಕು ಬರಹವನ್ನು ಕುರಿತ‌ ಈ ಸಂದರ್ಶನ ತುಂಬಾ ಚೆನ್ನಾಗಿದೆ.

0
    0
    Your Cart
    Your cart is emptyReturn to Shop