ಶಂಕರ್ ಸಿಹಿಮೊಗ್ಗೆ (Shankar Sihimogge)

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್  ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವಾಗಲೇ ಡಿ.ವಿ.ಎಸ್. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ಈವರೆಗೆ ಸುಮಾರು ಹತ್ತಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮ್ಯಾಕ್ ಬೆತ್, ಮಹಾಬಲಯ್ಯನ ಕೋಟು, ವಸುದೈವ ಕುಟುಂಬಕಂ, ಮತ್ತು ದಕ್ಷಯಜ್ಞ ಮುಖ್ಯವಾದವುಗಳು.

ಕೆಲಸದ ನಡುವೆಯೂ ಸಾಹಿತ್ಯ ರಂಗಭೂಮಿಯತ್ತ ಒಲವಿಟ್ಟುಕೊಂಡಿರುವ ಕಾರಣ ಇವರು ಬೆಂಗಳೂರಿನಲ್ಲಿ ಸ್ನೇಹಿತರೊಡಗೂಡಿ ‘ಚೈತ್ರಾಕ್ಷಿ ರಂಗಭೂಮಿ’ ಎಂಬ ರಂಗತಂಡವನ್ನು ಕಟ್ಟಿಕೊಂಡಿದ್ದಾರೆ. ಈ ರಂಗತಂಡದ ಮೂಲಕ ಇದುವರೆಗೂ ಜಲಗಾರ,  ಹೆಣದ ಬಟ್ಟೆ ಮತ್ತು ಅನಿಮಲ್ ಫಾರ್ಮ್ ಎಂಬ ಮೂರು ನಾಟಕಗಳನ್ನು ಪ್ರದರ್ಶಿಸಲಾಗಿದೆ.  ಕಾಲೇಜು ಓದುವ ದಿನಗಳಲ್ಲಿ  ಸಾಗರದ ಹೆಗ್ಗೋಡಿನ ‘ನೀನಾಸಂ ಶಿಬಿರ’ಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ, ಶಿಬಿರಗಳಲ್ಲಿ ನಡೆಯುತ್ತಿದ್ದ ವಿಮರ್ಶೆ ಸಾಹಿತ್ಯ ಸಂವಾದದಂತಹ ಕಾರ್ಯಕ್ರಮಗಳು ನನ್ನ ಕಲಿಕೆಯಲ್ಲಿ ಹೆಚ್ಚು ಪ್ರಭಾವ ಬೀರಿವೆ ಎನ್ನುತ್ತಾರೆ.

ಇವರ ಮೊದಲ ಕವನ ಸಂಕಲನ ‘ಕುದುರೆಯ ವ್ಯಥೆ’ ೨೦೧೫ರಲ್ಲಿ ಪ್ರಕಟಣೆಗೊಂಡಿದೆ. ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವುಗಳಿಟ್ಟುಕೊಂಡಿರುವ ಇವರು ಸಾಹಿತ್ಯ ನನ್ನ ನೆಚ್ಚಿನ ಹವ್ಯಾಸ ಎನ್ನುತ್ತಾರೆ, ಇದುವರೆಗೂ ಇವರ ಪದ್ಯ, ಕತೆ, ನಾಟಕ ವಿಮರ್ಶೆ ಮತ್ತು ಲೇಖನಗಳನ್ನು ವಿಜಯ ಕರ್ನಾಟಕ, ಪ್ರಜಾವಾಣಿ, ವಾರ್ತಾ ಭಾರತಿ, ಅವಧಿ, ಬುಕ್ ಬ್ರಹ್ಮ, ಶಿವಮೊಗ್ಗ ಟೈಮ್ಸ್, ಮಾಸ ಪತ್ರಿಕೆಗಳಾದ ಸುಧಾ, ನಿಮ್ಮೆಲ್ಲರ ಮಾನಸ ಮತ್ತು ಸಖಿ ಪ್ರಕಟಿಸಿವೆ. ‘ಬಾನ ಬಯಲ ಚುಕ್ಕಿಗಳು’, ‘ಕಾವ್ಯಯಾನ’, ‘ಕಿರಂ ಹೊಸ ಕವಿತೆ ಸಂಪುಟ ೧,೨,೩’, ‘ವಿಶ್ವಶಕ್ತಿ – ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ’, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ ‘ಕವಿತೆ-೨೦೨೧’ ಮತ್ತು ‘ಕವಿತೆ-೨೦೨೨’ ಸಂಪಾದಿತ ಕೃತಿಗಳಲ್ಲಿ ಇವರ ಕವಿತೆಗಳು ಪ್ರಕಟಣೆಗೊಂಡಿವೆ. ‘ಗಾಂಧಿಯಾನ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ’  ಪ್ರಕಟಿಸಿದ ‘ಕಿರಿಯರು ಕಂಡ ಗಾಂಧಿ’ ಸಂಪಾದಿತ ಕೃತಿಯಲ್ಲಿ ಇವರ ‘ನಮ್ಮಳೊಗೊಬ್ಬ ಗಾಂಧಿ’ ಲೇಖನ ಪ್ರಕಟವಾಗಿದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಇವರ ಹೊಳಲೂರಿನ ಹಾಸ್ಟೆಲ್ ಹುಡುಗರು ಕತೆಯು ಬೆಂಗಳೂರು ವಿಶ್ವವಿದ್ಯಾಲಯದ ಬಿ.ವಿ.ಎ. ಮತ್ತು ಬಿ.ಎಫ್.ಎ. ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ. ಇವರ ‘ಇರುವೆ ಮತ್ತು ಗೋಡೆ’ ಕವಿತೆಗಳ ಹಸ್ತಪ್ರತಿಯು ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದುಕೊಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯ ಜ್ಯೂರಿ ಆಗಿ ಕೆಲಸ ನಿರ್ವಹಿಸಿದ್ದಾರೆ.  ಇವರ “ಕರಿಧೂಳು” ಕಥೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಕೊಡಮಾಡುವ ೨೦೨೩ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಂಚಿನ ಪದಕ ದೊರಕಿದೆ. ಬಿ.ಎಂ.ಶ್ರೀ. ಪ್ರತಿಷ್ಠಾನ ಕೊಡಮಾಡುವ ೨೦೨೩ನೇ ಸಾಲಿನ ಪ್ರತಿಷ್ಠಿತ “ಶಾ ಬಾಲುರಾವ್ ಯುವ ಪುರಸ್ಕಾರ”ವನ್ನು ಇವರ ‘ಇರುವೆ ಮತ್ತು ಗೋಡೆ’ ಕೃತಿಯು ಪಡೆದುಕೊಂಡಿದೆ. ಬೆನ್ನೇರಿದ ಬಯಲು” ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಬಾಪು ರಾಮಣ್ಣ” ದತ್ತಿ ಪುರಸ್ಕಾರ ಲಭಿಸಿದೆ. ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ “ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನ” ವಿಷಯದ ಕುರಿತು ತಮ್ಮ ವಿಚಾರವನ್ನು ಮಂಡಿಸಿದ್ದಾರೆ.

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ, ಪ್ರಕಾಶನ ಮತ್ತು ಮಿಂಚುಳ್ಳಿ ಕಾವ್ಯ ಬಳಗದ ಮೂಲಕ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕವಿಗೋಷ್ಠಿ ಮತ್ತು ಕಾವ್ಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಕುಪ್ಪಳಿಯಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ ೨೦೨೩ ಮತ್ತು ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ ೨೦೨೪ ನಡೆಸಿಕೊಟ್ಟಿದ್ದಾರೆ. “ಕಥೆಗಿಣಿಚ” ಮತ್ತು ಸಪ್ನ ಪುಸ್ತಕ ಮಳಿಗೆಯೊಂದಿಗೆ ನಡೆಸಿಕೊಟ್ಟ “ಯುಗಾದಿ ಕಥಾ ಸಂಭ್ರಮ” ಕಾರ್ಯಕ್ರಮಗಳ ಮೂಲಕ ಹಳೆ ಮತ್ತು ಹೊಸ ತಲೆಮಾರಿನ ಕಥೆಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಮಲೆನಾಡು ಚಿಂತಕರ ಚಾವಡಿ” ಕಾರ್ಯಕ್ರಮದ ಮೂಲಕ ಹಳೆ ಮತ್ತು ಹೊಸ ತಲೆಮಾರಿನ ಲೇಖಕರ ಪುಸ್ತಕಗಳನ್ನು ಆಯ್ಕೆಮಾಡಿಕೊಂಡು, ಅವುಗಳ ಬಗ್ಗೆ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವನ್ನು ಮೂರೂ ತಿಂಗಳಿಗೊಮ್ಮೆ ಶಿವಮೊಗ್ಗದಲ್ಲಿ ಏರ್ಪಡಿಸುತ್ತಿದ್ದಾರೆ. ಮಿಂಚುಳ್ಳಿ ಬಳಗದ ಮೂಲಕ ‘ಮಿಂಚುಳ್ಳಿ ಕವಿಗೋಷ್ಠಿ’, ‘ಪಳಗನ್ನಡ ಓದು’ ಮತ್ತು ನಿರಂತರ ಏಳುದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಬಳಗದ ಮೂಲಕ ‘ಕಾಡುವ ಕಿರಂ ೨೦೨೦’ ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಿದ್ದಾರೆ.‌ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ವಲಯದೊಂದಿಗೆ ನಂಟು ಬೆಸೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಕಟಿತ ಪುಸ್ತಕಗಳು:

೧ ಕುದುರೆಯ ವ್ಯಥೆ (ಕವಿತೆಗಳು)
೨ ಇರುವೆ ಮತ್ತು ಗೋಡೆ (ಕವಿತೆಗಳು)
೩ ಬೆನ್ನೇರಿದ ಬಯಲು (ಕಥೆಗಳು)
೪ ಕಿರಂ ಹೊಸ ಕವಿತೆ ೨೦೨೩ (ಸಂಪಾದಿತ ಕವಿತೆಗಳು)
LOVE IS A DIVINE FRAGRANCE
(An Anthology of World Poetry: Edition of Contemporary 23 Countries English Poems)

ಪ್ರಶಸ್ತಿ:

  1. ‘ಇರುವೆ ಮತ್ತು ಗೋಡೆ’ ಕೃತಿಯ ಹಸ್ತಪ್ರತಿಗೆ ೨೦೨೩ನೇ ಸಾಲಿನ ‘ಕಡೆಂಗೋಡ್ಲು ಕಾವ್ಯ ಪುರಸ್ಕಾರ’ ದೊರೆತಿದೆ.
  2. ಇವರ “ಕರಿಧೂಳು” ಕಥೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಕೊಡಮಾಡುವ ೨೦೨೩ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಂಚಿನ ಪದಕ ದೊರಕಿದೆ.
  3. ಬಿ.ಎಂ.ಶ್ರೀ. ಪ್ರತಿಷ್ಠಾನ ಕೊಡಮಾಡುವ ೨೦೨೩ನೇ ಸಾಲಿನ ಪ್ರತಿಷ್ಠಿತ “ಶಾ ಬಾಲುರಾವ್ ಯುವ ಪುರಸ್ಕಾರ”ವನ್ನು ಇವರ ‘ಇರುವೆ ಮತ್ತು ಗೋಡೆ’ ಕೃತಿಯು ಪಡೆದುಕೊಂಡಿದೆ.
  4. ‘ಬೆನ್ನೇರಿದ ಬಯಲು’ ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಬಾಪು ರಾಮಣ್ಣ” ದತ್ತಿ ಪುರಸ್ಕಾರ ಲಭಿಸಿದೆ.

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-

೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ.

೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮನಸುಗಳ ಪ್ರತಿಷ್ಠಾನದೊಂದಿಗೆ ನಮ್ಮ “ಕಾವ್ಯಮರ” ಸಹಯೋಗದೊಂದಿಗೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕರಾದ ಡಾ. ಎಮ್.ಎಸ್. ಆಶಾದೇವಿಯವರು ವಹಿಸಿಕೊಂಡಿದ್ದರು. ಕೆ.ಎ.ಎಸ್. ಅಧಿಕಾರಿಗಳಾದ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರು “ಯುವ ಸಮುದಾಯಕ್ಕೆ ಬೇಕಾದ ಕುವೆಂಪು” ವಿಷಯದ ಮೇಲೆ ಉಪನ್ಯಾಸವನ್ನು ನೀಡಿದ್ದರು.

೩. 2018ರಲ್ಲಿ ಹಿಂದಿಯ ಖ್ಯಾತ ಕಥೆಗಾರರಾದ ಪ್ರೇಮಚಂದರ ಕಥೆಯಾಧರಿತ “ಹೆಣದ ಬಟ್ಟೆ” ನಾಟಕ ಪ್ರದರ್ಶನ.

೪. 2018ರಲ್ಲಿ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ.

೫. 2019ರಲ್ಲಿ ಜಾರ್ಜ್ ಆರ್ವೆಲ್ ಅವರ ‘ಅನಿಮಲ್ ಫಾರ್ಮ್’ ಕಾದಂಬರಿ ಆಧಾರಿತ ‘ಅನಿಮಲ್ ಫಾರ್ಮ್’ ನಾಟಕ ಪ್ರದರ್ಶನ.

೬. 2019ರಲ್ಲಿ ರಾಜ್ಯ ಮಟ್ಟದ ಮಿಂಚುಳ್ಳಿ ಕಾವ್ಯ ಪುರಸ್ಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೊದಲ ಬಹುಮಾನವನ್ನು ಡಾ. ಸತ್ಯಮಂಗಲ ಮಹಾದೇವ, ಎರಡನೆಯ ಬಹುಮಾನವನ್ನು ಗೀತಯೋಗಿ ಮತ್ತು ಮೂರನೆಯ ಬಹುಮಾನವನ್ನು ರಮೇಶ್ ನೆಲ್ಲಿಸರ ಅವರು ಪಡೆದುಕೊಂಡಿದ್ದರು. ಹಿರಿಯ ಸಾಹಿತಿಗಳಾದ ಎಲ್. ಎನ್. ಮುಕುಂದರಾಜ್, ಸವಿತಾ ನಾಗಭೂಷಣ ಮತ್ತು
ಎಚ್. ಎಸ್. ರೇಣುಕಾರಾಧ್ಯ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

೭. 2020ರಲ್ಲಿ ‘ಕಾಡುವ ಕಿರಂ’ ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಲಾಗಿತ್ತು.

೮. 2020ರಲ್ಲಿ ನಿರಂತರ ಏಳು ದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ‘ಅರಸಿ ಸಾಂಸ್ಕೃತಿಕ ವೇದಿಕೆ (ರಿ)’ ಸಂಸ್ಥೆಯೊಂದಿಗೆ ಏರ್ಪಡಿಸಲಾಗಿತ್ತು.

೯. 2020ರಲ್ಲಿ “ಪಳಗನ್ನಡ ಓದು” ಆನ್ಲೈನ್ ಕಾರ್ಯಕ್ರಮದ ಮೂಲಕ ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಮತ್ತು ಡಾ. ಪ್ರಹ್ಲಾದ ರೆಡ್ಡಿ ಅವರು ರನ್ನನ “ಸಾಹಸ ಭೀಮ ವಿಜಯಂ” ಕೃತಿಯ ಆಯ್ದ ಪದ್ಯಗಳ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದರು.

೧೦. 2023ರಲ್ಲಿ ವೆಬ್ಸೈಟ್ ಮೂಲಕ https://minchulli.com ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟ.

೧೧. 2023ರಲ್ಲಿ ‘ಕಾಡುವ ಕಿರಂ’ ರಾಜ್ಯಮಟ್ಟದ ಕಾರ್ಯಕ್ರಮಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಒಟ್ಟು ನೂರು ಕವಿಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿಸಲಾಗಿತ್ತು. ಒಟ್ಟಾರೆ ಕವಿಗೋಷ್ಠಿಯ ನಿರ್ವಹಣೆ ಮತ್ತು ಕವಿಗೋಷ್ಠಿಗಳ ಕವಿತೆ ಮತ್ತು ಆಯಾ ಗೋಷ್ಠಿಗಳ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕ “ಕಿರಂ ಹೊಸ ಕವಿತೆ ೨೦೨೩” ಮಿಂಚುಳ್ಳಿ ಪ್ರಕಾಶನದಿಂದ ಪ್ರಕಟಿಸಲಾಗಿದೆ.

೧೨. 2023ರಲ್ಲಿ ಹಿರಿಯ ಸಾಹಿತಿಗಳಾದ ಸುಜಾತಾ ಹೆಚ್.ಆರ್. ಅವರ ಮನೆಯಲ್ಲಿ ‘ಕಥೆಗಿಣಿಚ’ ಇದು ಕಥೆಗಳ ಚಿಂತನ-ಮಂಥನ ಕಾರ್ಯಕ್ರಮದ ಮೂಲಕ ಸಮಕಾಲೀನ ಕಥೆಗಾರರ ಕಥೆಗಳ ಓದು ಮತ್ತು ವಿಮರ್ಶೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

೧೩. 2023ರಲ್ಲಿ ಲಿಂಗ ಸಮಾನತೆ (Gender Equality) ವಿಷಯದ ಮೇಲಿನ ಒಟ್ಟು 25 ದೇಶಗಳ ಸಮಕಾಲೀನ ಇಂಗ್ಲಿಷ್ ಕವಿಗಳ ಕವಿತೆಗಳನ್ನು ಒಳಗೊಂಡಿರುವ “Love is a Divine Fragrance” ಅಂತಾರಾಷ್ಟ್ರೀಯ ಸಂಪಾದನೆಯ ಇಂಗ್ಲಿಷ್ ಪುಸ್ತಕವನ್ನು ಪ್ರಕಟಿಸಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

೧೪. 2023ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಸವಿತಾ ನಾಗಭೂಷಣ, ಡಾ. ರಾಮಲಿಂಗಪ್ಪ ಟಿ . ಬೇಗೂರು, ಚನ್ನಪ್ಪ ಅಂಗಡಿ, ಡಾ. ಎಚ್.ಎಸ್. ಸತ್ಯನಾರಾಯಣ, ಸುಜಾತಾ ಎಚ್.ಆರ್. ಮತ್ತು ಡಾ. ಬೇಲೂರು ರಘುನಂದನ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೫. 2024ರಲ್ಲಿ ಮಿಂಚುಳ್ಳಿ ಪ್ರಕಾಶನದ ‘ಬಿದಿರ ತಡಿಕೆ’, ‘ಮಳೆ ಪ್ರಬಂಧಗಳು’ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಚೊಚ್ಚಲ ಸಂಚಿಕೆಯ ಬಿಡುಗಡೆಯ ಕಾರ್ಯಕ್ರಮ ಮತ್ತು ಮಿಂಚುಳ್ಳಿ ಕವಿಗೋಷ್ಠಿಯನ್ನು ಬೆಂಗಳೂರಿನ ಕಲಾ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಎಮ್.ಆರ್. ಕಮಲ ಅವರು ವಹಿಸಿಕೊಂಡಿದ್ದರು.

೧೬. 2024ರಲ್ಲಿ ಸಪ್ನ ಬುಕ್ ಹೌಸ್ ನಡೆಸಿದ “ಸಪ್ನ ಯುಗಾದಿ ಕಥಾಸಂಗಮ” ಕಾರ್ಯಕ್ರಮದಲ್ಲಿ ಸಮಕಾಲೀನ ಹೊಸ ತಲೆಮಾರಿನ ಕಥೆಗಾರರ ಕಥೆಗಳ ಓದು ಮತ್ತು ಚರ್ಚೆಯನ್ನು ಕಥೆಗಾರರು ಮತ್ತು ಓದುಗರೊಂದಿಗೆ ನಡೆಸಲಾಗಿತ್ತು.

೧೭. 2024ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಎಲ್.ಎನ್. ಮುಕುಂದರಾಜ್,
ಡಾ. ಅಮರೇಶ ನುಗಡೋಣಿ, ಡಾ. ಕರೀಗೌಡ ಬೀಚನಹಳ್ಳಿ, ಡಾ. ರವಿಕುಮಾರ್ ಪಿ.ಜಿ., ಮತ್ತು ಡಾ. ಗುರುಸ್ವಾಮಿ ಸಿ. ಅನ್ನೇಹಾಳ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೮. 2024 ಜನವರಿ ತಿಂಗಳಿನಿಂದ ಮಿಂಚುಳ್ಳಿ ಕನ್ನಡ ಸಾಹಿತ್ಯ ಮಾಸಿಕವನ್ನು ಮುದ್ರಿಸಲು ಆರಂಭಿಸಿತು.

****

email: editor@minchulli.com
facebook: minchulli sahitya patrike
instagram: @minchullisahityapatrike
X: @minchullibooks

PDF: ಮಿಂಚುಳ್ಳಿ ಕಾರ್ಯಚಟುವಟಿಕೆಗಳು

ಕಳೆದ 8 ವರ್ಷಗಳಲ್ಲಿ ಮಿಂಚುಳ್ಳಿ ನಡೆಸಿದ ಕಾರ್ಯಕ್ರಮಗಳ ಫೋಟೋಗಳು:-

ಮಿಂಚುಳ್ಳಿ ಪ್ರಕಟಿತ ಪುಸ್ತಕಗಳು:-

ಮಿಂಚುಳ್ಳಿ ಸಾಹಿತ್ಯ ಮಾಸಿಕ ಸಂಚಿಕೆಗಳು

0
    0
    Your Cart
    Your cart is emptyReturn to Shop