ಹಿರಿಯ ಕಥೆಗಾರರಾದ ಡಾ. ಚನ್ನಪ್ಪ ಕಟ್ಟಿ ಅವರೊಂದಿಗೆ ಮಿಂಚುಳ್ಳಿ ಸಂದರ್ಶನ

ಮಿಂಚುಳ್ಳಿ ಸಂದರ್ಶನ: ಶಂಕರ್ ಸಿಹಿಮೊಗ್ಗೆ

ಡಾ.ಚನ್ನಪ್ಪ ಕಟ್ಟಿ ಅವರ ಬದುಕು ಬರೆಹ:

ಅಂದಿನ ಧಾರವಾಡ ಜಿಲ್ಲೆಯ, ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಕೃಷಿಕ ಕುಟುಂಬದಲ್ಲಿ ೧೯೫೬ರ ಮೇ ೧ರಂದು ಡಾ.ಚನ್ನಪ್ಪ ಕಟ್ಟಿ ಅವರ ಜನನ. ಕೃಷಿ ಕಾಯಕದ ತಂದೆ ಕನಕಪ್ಪ ಹಾಗೂ ತಾಯಿ ವೆಂಕವ್ವ ದಂಪತಿಯ ಪುತ್ರರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬಾದಾಮಿಯಲ್ಲಿ ಪ್ರೌಢ ಶಿಕ್ಷಣ ಹಾಗೂ ಧಾರವಾಡದಲ್ಲಿ ಇಂಗ್ಲಿಷ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ. ‘ಅಮೋಘಸಿದ್ಧ ಪರಂಪರೆ’ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಡಾಕ್ಟರೇಟ್ ಪದವಿ ಪಡೆದವರು. ಸಿಂದಗಿಯ ಜಿ.ಪಿ.ಪೋರವಾಲ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಮೂವತ್ತಾರು ವರ್ಷಗಳವರೆಗೆ ಸೇವೆ. ಸೇವಾವಧಿಯ ಕೊನೆಯಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಣೆ. ನಿಷ್ಠಾಪೂರ್ಣ ವೃತ್ತಿಯ ಜೊತೆ ಜೊತೆಗೆ ಸಾಹಿತ್ಯ ಹಾಗೂ ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕತೆ, ಕಾವ್ಯ, ವಿಮರ್ಶೆ, ವೈಚಾರಿಕ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ಮಾನವಿಕ ಅಧ್ಯಯನ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಸಂಗಾತಿಗಳೊಂದಿಗೆ ಸಿಂದಗಿಯಲ್ಲಿ ನೆಲೆ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿಕೊಂಡು ಸಾಹಿತ್ಯದ ವಿವಿಧ ಪ್ರಕಾರದ ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಕೊಡಮಾಡುವ ಜಯತೀರ್ಥ ಸಣ್ಣಕಥಾ ದತ್ತಿ ಚಿನ್ನದ ಪದಕ, ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ-ರತ್ನಾಕರವರ್ಣಿ-ಅನಾಮಿಕ ಪ್ರಶಸ್ತಿ, ಎಚ್.ಎಮ್.ಟಿ. ಕಥಾ ಪ್ರಶಸ್ತಿ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರತಿಷ್ಠಾನದ ಬಿ.ಶಾಮಸುಂದರ ಪ್ರಶಸ್ತಿ, ಬೆಟದೂರ ಅಮರಮ್ಮ ಚೆನ್ನಬಸಪ್ಪ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ, ಬಸವರಾಜ ಕಟ್ಟೀಮನಿ ಕಥಾ ಪ್ರಶಸ್ತಿ, ಬೆರಗು ಸಮಗ್ರ ಪ್ರಶಸ್ತಿ, ಸ್ವಾಭಿಮಾನಿ ಕರ್ನಾಟಕ ಅನುವಾದ ಪ್ರಶಸ್ತಿ, ‘ಊರ್ಧ್ವರೇತ’ ಸಣ್ಣಕತೆಗೆ ಉ.ಕ. ಅಂತರ ರಾಷ್ಟ್ರೀಯ ಕಿರುಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕವನ ಸಂಕಲನಗಳು: ಎರಡು ಸೆಲೆ ಒಂದು ನೆಲೆ, ಇಂಡಿಯಾದಲ್ಲಿ, ನೆನಪುಗಳು ಸಾಯುವುದಿಲ್ಲ
ಕಥಾ ಸಂಕಲನಗಳು: ಮುಳುಗಡೆ ಮತ್ತು ಇತರ ಕತೆಗಳು, ಬೆಂಕಿ ಇರದ ಬೆಳಕು, ಏಕತಾರಿ, ಕಥಾ ಕಿನ್ನುರಿ (ಈ ತನಕದ ಕತೆಗಳು)
ವಿಮರ್ಶೆ: ಸಾರಣೆ, ಕಸವರಮೆಂಬುದು, ಕುಯಿಲು, ಶಬ್ದ ಸೋಪಾನ, ಚೆನ್ನುಡಿ
ಸಂಶೋಧನೆ: ಅಮೋಘಸಿದ್ಧ ಪರಂಪರೆ, ಅರಕೇರಿ ಅಮೋಘಸಿದ್ಧೇಶ್ವರ, ಕುರುಬ ಮಹಿಳೆ. ಸಿತಾಳ ಬಿಂದಿಗೆ, ಕುರುಬ ಜನಾಂಗ ವಿದೇಶಿ ವಿದ್ವಾಂಸರ ಅಧ್ಯಯನಗಳು
ಜೀವನ ಚರಿತ್ರೆಗಳು: ಬಬಲೇಶ್ವರದ ಶಾಂತವೀರ ಪಟ್ಟಾಧ್ಯಕ್ಷರು, ಇಟಗಿಯ ಶ್ರೀ ಭೀಮಾಂಬಿಕೆ, ನನೆಹು ಮಂದಾರ
ಅನುವಾದ: ಸ್ಕಾರ್ಲೆಟ್ ಪ್ಲೇಗ್, ಯುದ್ಧಕಾಲದ ಹುಡುಗಿಯರು
ಸಂಪಾದನೆ: ಅಮೋಘಸಿದ್ಧ ಜನಪದ ಮಹಾಕಾವ್ಯ, ಮಹಿಳೆ: ಕರಕುಶಲ ತಂತ್ರಜ್ಞಾನ

1 ನಿಮ್ಮೂರು, ನಿಮ್ಮ ಬಾಲ್ಯ ಜೀವನದ ಬಗ್ಗೆ ಹೇಳುವುದಾದರೆ..

ನನ್ನ ಊರು ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿಯ ಒಂದು ಹಳ್ಳಿ. ಅದರ ಹೆಸರು ಹಿರೇಹಾಳ. ಹಿರಿಯ ಬಾಡ(ಊರು) ಎನ್ನುವ ಶಬ್ದವೇ ಹಿರೇಹಾಳ ಆಗಿರಬೇಕೆಂದು ಗ್ರಾಮನಾಮ ಅಧ್ಯಯನಕಾರರು ಹೇಳುತ್ತಾರಾದರೂ ಅದು ಹೇಳಿಕೊಳ್ಳುವಂತಹ ಹಿರಿಯ ಊರು ಆಗಿರಲಿಲ್ಲ. ಎಲ್ಲ ಗ್ರಾಮಗಳಲ್ಲಿ ಇರುವಂತೆ ನಮ್ಮೂರಿನವರೂ ಜಾತಿಯಾಧಾರಿತ ಶ್ರೇಣೀಕರಣವನ್ನು ಒಪ್ಪಿಕೊಂಡವರಾಗಿದ್ದರು. ಇಡೀ ಊರಿಗೇನೆ ಇದ್ದ ಒಂದೇ ಒಂದು ಬಾವಿ ಶ್ರೇಣೀಕೃತ ಸಮಾಜದ ರಂಗಶಾಲೆಯಂತೆ ತೋರುತ್ತಿತ್ತು. ನೀರು ತರಲು ಬ್ರಾಹ್ಮಣರು ಈ ಬಾವಿಗೆ ಬಂದರೆ ಅವರು ನೀರು ಸೇದಿಕೊಂಡು ಹೋಗುವವರೆಗೆ ಒಂದು ಗಡಗಡೆಯನ್ನು ಅವರಿಗೆ ಬಿಟ್ಟುಕೊಡಬೇಕಾಗುತ್ತಿತ್ತು. ಬ್ರಾಹ್ಮಣೇತರರು ನೀರು ಸೇದಿಕೊಳ್ಳುವ ವಿಷಯದಲ್ಲಿ ತಮ್ಮ ತಮ್ಮಲ್ಲಿ ತರತಮಗಳನ್ನು ಪರಿಗಣಿಸುತ್ತಿರಲಿಲ್ಲವಾದರೂ ತಮ್ಮ ವೈಯಕ್ತಿಕ ಮನೆಯ ಒಳಭಾಗದಲ್ಲಿ ನೀರು ನಿಡಿಯ ವಿಷಯದಲ್ಲಿ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿದ್ದರು. ಹರಿಜನರಿಗೆ ಈ ಬಾವಿಯಿಂದ ನೀರು ತುಂಬಿಕೊಳ್ಳಲು ಅವಕಾಶವಿರಲಿಲ್ಲ. ಅವರಿಗಾಗಿಯೇ ಊರ ಹೊರವಲಯದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಬಾವಿಯಿತ್ತು. ಅಷ್ಟು ದೂರ ಹೋಗಲು ಬಯಸದವರು ಊರಬಾವಿಯ ದಂಡೆಯಲ್ಲಿ ನಿಂತು ಸವರ್ಣೀಯರು ಎತ್ತಿ ಹಾಕುವ ನೀರಿಗಾಗಿ ಕಾಯುತ್ತಿದ್ದರು.

ಪಂಚಮಿ ಹಬ್ಬದ ಆಚರಣೆ, ಗುಳ್ಳವ್ವನನ್ನು ಕೂಡ್ರಿಸುವ ಅಚರಣೆಗಳು ಮುಂತಾದವುಗಳಲ್ಲಿ ನಮ್ಮೂರಿನ ಮಹಿಳೆಯರು ತುಂಬಾ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು. ಪ್ರತಿ ವರ್ಷ ಬಸವ ಜಯಂತಿಯಾದ ಮೂರನೆಯ ದಿವಸಕ್ಕೆ ನಮ್ಮೂರಿನ ವೀರಭದ್ರ ದೇವರ ಜಾತ್ರೆ ಜರಗುತ್ತಿತ್ತು. ಈಗಲೂ ಜರಗುತ್ತದೆ. ಆಗಿನ ಸಂದರ್ಭಕ್ಕೆ ನಮ್ಮೂರಿನಲ್ಲಿ ಒಂದು ಸಾಂಸ್ಕೃತಿಕ ಲೋಕ ಎಚ್ಚರಗೊಳ್ಳುತ್ತಿತ್ತು. ಊರಿನ ಯುವಕರೇ ಸೇರಿ ಆಡುವ ನಾಟಕ ಪ್ರದರ್ಶನ ಕಡ್ಡಾಯವಾಗಿರುತ್ತಿತ್ತು. ಅದರ ಜೊತೆಗೆ ಗರಡಿ ಮನೆಯಲ್ಲಿ ಸಾಧನೆ ಮಾಡಿದ ಯುವಕರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಅವಕಾಶವಿರುತ್ತಿತ್ತು. ದವಸ ಧಾನ್ಯ ತುಂಬಿದ ಚೀಲಗಳನ್ನು ಎತ್ತುವುದು, ಬೆನ್ನ ಮೇಲೆ ಅವುಗಳನ್ನು ಇರಿಸಿಕೊಂಡು ಕೈಸಾಮು ತಗೆಯುವುದನ್ನು ಊರ ಜನರೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ದರು.

2 ನಿಮ್ಮ ಕುಟುಂಬದ ಬಗೆಗೆ ಹೇಳುವುದಾದರೆ..

ನಮ್ಮದು ರೈತಾಪಿ ಕುಟುಂಬ. ನನ್ನ ತಂದೆ ತಾಯಿಗೆ ಹುಟ್ಟಿದ ಹತ್ತು ಮಕ್ಕಳಲ್ಲಿ ನಾನು ಆರನೆಯವನು. ಅಪ್ಪ ಎರಡನೆಯ ವರ್ಗದವರೆಗೆ ಕಲಿತಿದ್ದನಂತೆ. ಅವ್ವ ಮಾತ್ರ ಪೂರ್ಣ ಪ್ರಮಾಣದ ನಿರಕ್ಷರಿ. ಅಪ್ಪನಿಗೆ ತನ್ನ ಗಂಡು ಮಕ್ಕಳು ಅಕ್ಷರ ಕಲಿಯಲಿ ಎನ್ನುವ ಆಶೆಯಿತ್ತು. ಹೆಣ್ಣುಮಕ್ಕಳು ಅಕ್ಷರ ಕಲಿಯುವ ಅವಶ್ಯಕತೆ ಇದೆ ಎಂದು ಆತ ಭಾವಿಸಿದವನಲ್ಲ. ಮೂವರು ಅಣ್ಣಂದಿರಲ್ಲಿ ಇಬ್ಬರು ಅಪ್ಪನ ನಿರೀಕ್ಷೆಯನ್ನು ಹುಸಿಗೊಳಿಸಿ ಒಕ್ಕಲುತನ ಆಯ್ಕೆ ಮಾಡಿಕೊಂಡರು. ಒಬ್ಬ ಅಣ್ಣನವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದು ಶಿಕ್ಷಕರಾದರು. ನಾನು ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಅಂದಿನ ಸಂದರ್ಭದಲ್ಲಿ ಸ್ನಾತಕೋತ್ತರ ಪದವೀಧರರ ಸಂಖ್ಯೆ ನಮ್ಮೂರಿನಲ್ಲಿ ಅತ್ಯಂತ ವಿರಳ. ಅಂಥವರಲ್ಲಿ ನಾನು ನಾಲ್ಕನೆಯವನು. ಇದು ನನಗೆ ಸಾಧ್ಯವಾದದ್ದು ಬಿ.ಎಸ್‌ಸಿ. ಪದವಿ ಪಡೆದ ಅಣ್ಣನವರು ಬಾದಾಮಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾರಣದಿಂದ.

3 ನೀವು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಹೇಳಿ.

ನಾನು ಇಂಗ್ಲಿಷ್ ಪ್ರಾಧ್ಯಾಪಕನಾಗುತ್ತೇನೆ ಎಂದು ಶಾಲಾ ಕಾಲೇಜು ದಿನಗಳಲ್ಲಿ ಎಂದೂ ಯೋಚಿಸಿದವನಲ್ಲ. ನಮ್ಮ ತಂದೆಗೆ ನಮ್ಮ ಅಣ್ಣನವರು ಡಾಕ್ಟರ್ ಆಗಬೇಕೆಂಬ ಆಶೆ ಇತ್ತಂತೆ. ಅದು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಆಶೆಯನ್ನು ನಾನಾದರೂ ಪೂರೈಸಲಿ ಎಂಬುದು ನನ್ನ ಅಣ್ಣನವರ ಬಯಕೆಯಾಗಿತ್ತು. ಆಗಿನ ಸಂದರ್ಭದಲ್ಲಿ ಬಾದಾಮಿಯಲ್ಲಿ ವಿಜ್ಞಾನ ವಿಷಯ ಬೋಧಿಸುವ ಪದವಿ ಪೂರ್ವ ಕಾಲೇಜು ಇರಲಿಲ್ಲವಾದ್ದರಿಂದ ಸಮೀಪದ ಬಾಗಿಲುಕೋಟೆಗೆ ನನ್ನನ್ನು ಕಳುಹಿಸಿದರು. ಪ್ರಥಮ ವರ್ಷದ ಫಲಿತಾಂಶ ಪ್ರಕಟವಾದಾಗ ನಾನು ಕನ್ನಡ ಮತ್ತು ಇಂಗ್ಲಿಷ್ ವಿಷಯ ಹೊರತು ಪಡಿಸಿ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ನಾಲ್ಕೂ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೆ. ಹೀಗಾಗಿ ಬಾದಾಮಿಯ ಪದವಿಪೂರ್ವ ಮಹಾವಿದ್ಯಾಲಕ್ಕೆ ಮರಳಿ ಬಂದು ಕಲಾ ವಿಭಾಗದ ವಿದ್ಯಾರ್ಥಿಯಾಗಿ ಸೇರಿಕೊಂಡೆ. ನಾನು ಮುಂದೊಮ್ಮೆ ಇಂಗ್ಲಿಷ್ ಪ್ರಾಧ್ಯಾಪಕನಾಗುವುದಕ್ಕೆ ಬೇಕಾದ ವೇದಿಕೆ ಇಲ್ಲಿ ಸಿದ್ಧವಾಯಿತೆಂದು ತೋರುತ್ತದೆ. ಆ ಸಂದರ್ಭದಲ್ಲಿ ನಮಗೆ ಇಂಗ್ಲಿಷ್ ವಿಷಯ ಬೋಧಿಸಿದವರು ಎಸ್.ಎಫ್.ಯೋಗಪ್ಪನವರ ಗುರುಗಳು. ಹಿಂದಿ ವಿಷಯ ಬೋಧಿಸಿದ ಗುರುಗಳಾದ ವ್ಹಿ.ಎಸ್.ಪಾಟೀಲ ಅವರು ಧಾರವಾಡದ ಕರ್ನಾಟಕ ಕಾಲೇಜಿಗೆ ನನ್ನನ್ನು ಕರೆದೊಯ್ದು ಇಂಗ್ಲಿಷ ಮೇಜರ್ ವಿಷಯ ಆಯ್ದುಕೊಳ್ಳುವಂತೆ ಮಾಡಿದರು. ಆ ಮೂಲಕ ಇಂಗ್ಲಿಷ್ ಪ್ರಾಧ್ಯಾಪಕನಾಗುವ ದಾರಿ ಇನ್ನಷ್ಟು ಖಚಿತವಾಯಿತೆಂದು ತೋರುತ್ತದೆ. ಅಷ್ಟೇನು ಹೆಚ್ಚು ಅಂಕ ಪಡೆಯದೇ ಬಿ.ಎ. ಪೂರ್ಣಗೊಳಿಸಿ ೧೯೭೭ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಯಾಗಿ ಸೇರಿಕೊಂಡೆ. ಅಲ್ಲಿ ಒಳ್ಳೆಯ ಅಂಕ ಪಡೆದ ಕಾರಣದಿಂದ ಎಂ.ಎ. ಪದವಿ ಪಡೆದ ಮೂರು ತಿಂಗಳ ಅವಧಿಯಲ್ಲಿ ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸೇರಿಕೊಂಡೆ.

ನಾನು ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸೇವೆ ಪ್ರಾರಂಭಿಸಿದ್ದು ೧೯೭೯ರಲ್ಲಿ. ವಿಜಯಪುರ ಜಿಲ್ಲೆಯ ಸಿಂದಗಿಯು ಹೈದರಾಬಾದ ಕರ್ನಾಟಕದ ಗಡಿಯೊಂದಿಗೆ ಮೈ ಬೆಸೆದುಕೊಂಡ ತಾಲೂಕಾಗಿತ್ತು. ಹೀಗಾಗಿ ನಮ್ಮ ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದ ವಿದ್ಯಾರ್ಥಿಗಳು ವಿಶೇಷವಾಗಿ ಅಂದಿನ ಹೈದರಾಬಾದ ಕರ್ನಾಟಕದ ರೈತಾಪಿ ಕುಟುಂಬದಿಂದ ಬಂದವರಾಗಿರುತ್ತಿದ್ದರು. ಪ್ರತಿಭಾವಂತರಾಗಿದ್ದ ಅವರು ಇಂಗ್ಲಿಷ್ ಭಾಷೆಯ ಕುರಿತು ಒಂದು ರೀತಿಯ ಭಯವನ್ನು ಹೊಂದಿದವರಾಗಿರುತ್ತಿದ್ದರು. ನಾನು ಕೂಡಾ ವಿದ್ಯಾರ್ಥಿ ದೆಸೆಯಲ್ಲಿ ಅಂಥದೇ ಹಿನ್ನೆಲೆಯುಳ್ಳ ಪರಿಸರದಿಂದ ಬಂದವನಾದುದರಿಂದ ಅವರ ಸಮಸ್ಯೆ ನನಗೆ ಅರ್ಥವಾಗುತ್ತಿತ್ತು. ನಮ್ಮ ಸಮಕಾಲೀನ ಸಂದರ್ಭದ ಕೆಲ ಇಂಗ್ಲಿಷ್ ಪ್ರಾಧ್ಯಾಪಕರು ಕ್ಲಾಸ್ ರೂಮಿನ ಒಳಗೆ ಹಾಗೂ ಕ್ಲಾಸ್ ರೂಮಿನ ಹೊರಗೆ ವಿದ್ಯಾರ್ಥಿಗಳೊಂದಿಗೆ ಕನ್ನಡದಲ್ಲಿ ಮಾತನಾಡಬಾರದೆಂದು ನಿಷೇಧ ಹೇರಿಕೊಂಡಿದ್ದರು. ಇದು ಇಂಗ್ಲಿಷ್ ಭಾಷೆಯ ಬಗೆಗಿನ ಭೀತಿ ಉಲ್ಬಣಗೊಳ್ಳಲು ಕಾರಣವಾಗಿತ್ತು. ಹೀಗಾಗಿ ನನ್ನಂತಹ ಪ್ರಾಧ್ಯಾಪಕರು ಪಾಠ ಬೋಧನೆಯಲ್ಲಿ ಅನುಸರಿಸಿದ ಮಾರ್ಗವೆಂದರೆ ಇಂಗ್ಲಿಷ್ ಜೊತೆ ಜೊತೆಗೆ ಕನ್ನಡದಲ್ಲಿಯೂ ವಿವರಣೆ ನೀಡುವುದು. ಈ ಪದ್ಧತಿ ವಿದ್ಯಾರ್ಥಿಗಳಿಗೆ ಊರುಗೋಲಿನಂತೆ ಸಹಾಯಕವಾದುದನ್ನು ಅನೇಕ ವಿದ್ಯಾರ್ಥಿಗಳಿಂದ ನಾನು ಕೇಳಿ ತಿಳಿದಿದ್ದೇನೆ. ನಾನು ಬೋಧಿಸಬೇಕಾದ ಇಂಗ್ಲಿಷ್ ಪಠ್ಯದ ಕನ್ನಡ ಅನುವಾದಗಳೇನಾದರೂ ಇದ್ದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕ್ಲಾಸ್ ರೂಮಿನಲ್ಲಿ ಓದಿ ಹೇಳುತ್ತಿದ್ದೆ. ಹಲವಾರು ಸಂದರ್ಭಗಳಲ್ಲಿ ನಾನೇ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳುತ್ತಿದ್ದೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿ ಒಳ್ಳೆಯ ಅಂಕಗಳನ್ನು ಪಡೆಯುವಂತಾಯಿತು. ಇಂದು ನಮ್ಮ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

4 ನಿಮಗೆ ಇಷ್ಟವಾದ ಮೇಷ್ಟ್ರು ಯಾರು ಮತ್ತು ಯಾಕೆ?

ಇಷ್ಟವಾದ ಮೇಷ್ಟ್ರುಗಳ ಸಂಖ್ಯೆ ದೊಡ್ಡದಿದೆ. ಇಲ್ಲಿ ಕೆಲವೊಂದನ್ನು ಮಾತ್ರ ಹೆಸರಿಸುವೆ. ನಮ್ಮೂರು ಹಿರೇಹಾಳದಲ್ಲಿ ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ನನ್ನನ್ನು ಬಹುವಾಗಿ ಪ್ರಭಾವಿಸಿದವರು ಶ್ರೀ ಬಿ.ವ್ಹಿ.ಮಡಿವಾಳರ ಗುರುಗಳು. ಸಾಹಿತ್ಯದ ರುಚಿಯನ್ನು ಪ್ರಪ್ರಥಮವಾಗಿ ತೋರಿಸಿದವರು ಅವರು. ಆಗಿನ ಸಂದರ್ಭದಲ್ಲಿಯೇ ಅವರು ನಮ್ಮ ಶಾಲೆಯಲ್ಲಿ ಪುಟ್ಟದೊಂದು ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಆರು ಏಳನೆಯ ವರ್ಗದ ವಿದ್ಯಾರ್ಥಿಗಳಿಗೆ ಅಲ್ಲಿನ ಗ್ರಂಥಗಳನ್ನು ಮನೆಗೆ ಒಯ್ದು ಬಿಡುವಿನ ವೇಳೆಯಲ್ಲಿ ಓದಿ ಅವುಗಳ ಕುರಿತು ನಮಗೆ ತೋಚಿದ್ದನ್ನು ತೋಚಿದಷ್ಟನ್ನು ಬರೆದುಕೊಂಡು ಬರಲು ಹೇಳುತ್ತಿದ್ದರು. ನನ್ನ ಸಹೋದರ ಶ್ರೀ ಬಿ.ಕೆ.ಕಟ್ಟಿ ಅವರು ನನಗೆ ಗುರುಗಳೂ ಆಗಿದ್ದರು. ಸಹೋದರರಾಗಿ ಹಾಗೂ ಗುರುಗಳಾಗಿ ಅವರು ನನ್ನ ಮೇಲೆ ಬೀರಿದ ಪ್ರಭಾವ ಬಹು ದೊಡ್ಡದು. ಬದುಕು ಒಡ್ಡುವ ಎಡರು ತೊಡರುಗಳನ್ನು ಸಮಚಿತ್ತದಿಂದ ಹೇಗೆ ಎದುರಿಸಬೇಕು ಎನ್ನುವುದಕ್ಕೆ ಅವರು ನನಗೆ ದೊಡ್ಡ ಮಾದರಿಯಾಗಿದ್ದಾರೆ. ಇದಾದ ನಂತರ ಬಾದಾಮಿಯ ಶ್ರೀ ವೀರಪುಲಿಕೇಶಿ ಪದವಿ ಪೂರ್ವ ಕಾಲೇಜಿನಲ್ಲಿ ಓದುವಾಗ ನನ್ನನ್ನು ಅತಿಯಾಗಿ ಪ್ರಭಾವಿಸಿದವರು ಈಗಾಗಲೇ ತಿಳಿಸಿರುವಂತೆ ಹಿಂದಿ ಪ್ರಾಧ್ಯಾಪಕರಾದ ಶ್ರೀ ವ್ಹಿ.ಎಸ್.ಪಾಟೀಲ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರಾದ ಶ್ರೀ ಎಸ್.ಎಫ್.ಯೋಗಪ್ಪನವರ ಅವರು. ಇವರೀರ್ವರೂ ನಡೆಸುತ್ತಿದ್ದ ಸಾಹಿತ್ಯಕ ಚರ್ಚೆಗಳಲ್ಲಿ ಪಿ.ಲಂಕೇಶ್, ಯಶವಂತ ಚಿತ್ತಾಲ, ಶ್ರೀಕೃಷ್ಣ ಆಲನಹಳ್ಳಿ, ಚಂದ್ರಶೇಖರ ಕಂಬಾರ, ಅನಂತಮೂರ್ತಿ ಅವರ ಸಾಹಿತ್ಯ ಕೃತಿಗಳ ಹೆಸರುಗಳು ಬಂದು ಹೋಗುತ್ತಿದ್ದವು. ಇವರು ವಾಸಿಸುತ್ತಿದ್ದ ಮನೆ ಒಂದು ಗ್ರಂಥಾಲಯವೇ ಆಗಿತ್ತು. ಆ ಬಾಡಿಗೆ ಮನೆಯು ನನ್ನಂತಹ ಸಾಹಿತ್ಯಾಸಕ್ತ ವಿದ್ಯಾರ್ಥಿ ಬಳಗದ ಆಕರ್ಷಣೆಯ ಕೇಂದ್ರವಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಗುರುಗಳಲ್ಲಿ ಬಂಡಾಯ ಸಾಹಿತಿ ಚಂಪಾ ಅವರು ಪ್ರಮುಖರು.

5 ನಿಮ್ಮ ಜೀವನದಲ್ಲಿ ಮರೆಯಲಾರದ ನೆನಪು.

‘ನೆನಪುಗಳು ಸಾಯುವುದಿಲ್ಲ’ ಎನ್ನುವ ಹೆಸರಿನ ನನ್ನದೊಂದು ಕವನ ಸಂಕಲನವಿದೆ. ಈ ಹಿನ್ನೆಲೆಯಲ್ಲಿ ಮರೆಯಲಾರದ ಒಂದು ನೆನಪನ್ನು ಉಲ್ಲೇಖಿಸುವುದು ಕಷ್ಟ. ಆದರೂ ಒಂದನ್ನು ಉಲ್ಲೇಖಿಸುವುದಾದರೆ, ಬಾದಾಮಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ಅಣ್ಣನವರಿಗೆ ನಿತ್ಯವೂ ಸಾಯಂಕಾಲ ಬಾದಾಮಿ ವಸ್ತಿಗೆ ಹೋಗುವ ಬಸ್ಸಿನ ಡ್ರೈವರ್ ಕೈಯಲ್ಲಿ ಬುತ್ತಿಡಬ್ಬಿಯನ್ನು ಕೊಟ್ಟು ಬರುವುದು ಏಳನೆಯ ಈಯತ್ತೆಯಲ್ಲಿ ಓದುತ್ತಿದ್ದ ನನ್ನ ಕರ್ತವ್ಯವಾಗಿತ್ತು. ಒಂದು ದಿನ ಗೆಳೆಯರೊಂದಿಗೆ ಆಟದಲ್ಲಿ ತೊಡಗಿದ ನಾನು ಬುತ್ತಿ ಡಬ್ಬಿ ಇಡುವುದನ್ನು ತಪ್ಪಿಸಿಕೊಂಡೆ. ಕೈಯಲ್ಲಿ ಬುತ್ತಿ ಡಬ್ಬಿ ಹಿಡಿದುಕೊಂಡು ಮನೆಯ ಕಡೆಗೆ ನಾನು ಬರುತ್ತಿರುವುದನ್ನು ನೋಡಿದ ಅಪ್ಪ ಒಂದು ಹಿಡಿಗಲ್ಲನ್ನು ನನ್ನ ಕಡೆಗೆ ಬೀಸಿ ಒಗೆದ. ಸ್ವಲ್ಪದರಲ್ಲಿಯೇ ಅದು ತಪ್ಪಿಹೋಯಿತು. ಆಗ ಅಪ್ಪನ ಸಿಟ್ಟಿನ ಕಾರಣ ನನಗೆ ಗೊತ್ತಾಗಿರಲಿಲ್ಲ. ಬೆಳೆದಂತೆ ‘ಹಸಿವಿನ’ ಮಹತ್ವ ನನಗೆ ತಿಳಿಯಿತು ಹಾಗೂ ಅಪ್ಪನ ಕೋಪಕ್ಕೆ ಕಾರಣವೂ ತಿಳಿಯಿತು.

6 ಸಾಹಿತ್ಯದ ಬಗೆಗೆ ನಿಮಗೆ ಒಲವು ಬರಲು ಸ್ಫೂರ್ತಿ?

ಪ್ರಶ್ನೆ ನಾಲ್ಕಕ್ಕೆ ಕೊಟ್ಟ ಉತ್ತರದಲ್ಲಿ ಈ ಕುರಿತು ಒಂದಿಷ್ಟು ಹೇಳಿದ್ದೇನೆ ಅನ್ನಿಸುತ್ತದೆ. ಮುಂದುವರೆಸಿ ಇನ್ನೊಂದಿಷ್ಟನ್ನು ಹೇಳಬಹುದು. ಇಂಗ್ಲಿಷ್ ಪ್ರಾಧ್ಯಾಪಕನಾಗಿ ನಾನು ಸಿಂದಗಿಗೆ ಬಂದುದನ್ನು ಈಗಾಗಲೇ ಹೇಳಿಕೊಂಡಿರುವೆ. ಹೊರಗಿನಿಂದ ನೋಡುವವರಿಗೆ ಅಂದಿನ ಸಿಂದಗಿ ಸಾಹಿತ್ಯಕವಾಗಿ ಸ್ಫೂರ್ತಿದಾಯಕ ಸ್ಥಳವಾಗಿ ಕಾಣುತ್ತಿರಲಿಲ್ಲ. ಆದರೆ ಅಲ್ಲಿ ಸಾಹಿತ್ಯದ ಪೋಷಣೆಗೆ ಬೇಕಾದ ಕೆಲ ವ್ಯಕ್ತಿಗಳು ಇದ್ದರು ಹಾಗೂ ಸಂಘ ಸಂಸ್ಥೆಗಳೂ ಇದ್ದವು. ಊರಿನ ಹಿರಿಯ ಮಠದಲ್ಲಿ (ಗದುಗಿನ ತೋಂಟದಾರ್ಯ ಮಠದ ಪೂಜ್ಯ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಪೂರ್ವಾಶ್ರಮದ ಮಠ) ಸ್ಥಾಪನೆಯಾಗಿದ್ದ ಕನ್ನಡ ಬಳಗ, ಅಂಬಿಕಾತನಯದತ್ತ ವೇದಿಕೆಗಳು ಕ್ರಿಯಾಶೀಲವಾಗಿದ್ದವು. ಅದರ ಜೊತೆಗೆ ನಾನು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಲ್ಲಿನ ನನ್ನ ಸಹೋದ್ಯೋಗಿಗಳಾದ ಜಾನಪದ ವಿದ್ವಾಂಸರಾದ ಡಾ.ಎಂ.ಎ.ಪಡಶೆಟ್ಟಿ, ಸಂವೇದನಾಶೀಲ ಕವಿ ಪ್ರೊ.ನಾಗೇಶ ರಾಂಪೂರ ಅವರ ಸ್ನೇಹ ನನ್ನೊಳಗಿನ ಸಾಹಿತ್ಯಾಸಕ್ತಿ ಬಾಡಿಹೋಗದ ಹಾಗೆ ನೋಡಿಕೊಂಡಿತು. ನಾವು ಮೂವರೂ ಸೇರಿಕೊಂಡು ನೆಲೆ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿಕೊಂಡು ನಾವು ರಚಿಸಿದ ಕೃತಿಗಳ ಪ್ರಕಟಣೆ ಹಾಗೂ ಸ್ಥಳೀಯ ಯುವಕರ ಕೃತಿಗಳ ಪ್ರಕಟಣೆಯನ್ನು ಮಾಡಿದೆವು. ಅಲ್ಲದೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ನಾವೆಲ್ಲಾ ಸ್ನೇಹಿತರು ಸ್ಥಾಪಿಸಿಕೊಂಡ ಕನ್ನಡ ಪುಸ್ತಕ ಪರಿಷತ್ತು ಕೂಡಾ ಸಾಹಿತ್ಯಕವಾಗಿ ನಾನು ಕ್ರಿಯಾಶೀಲವಾಗಿ ಉಳಿಯುವಂತೆ ಮಾಡಿದೆ.

7 ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ?

ನಾನು ಪಿಯುಸಿ ಓದುತ್ತಿದ್ದಾಗ ಪುಟ್ಟ ಕವಿತೆಯೊಂದನ್ನು ಬರೆದೆ. ಅದು ಮುಳುಗುವ ಸೂರ್ಯನನ್ನು ನೋಡಿ ಬರೆದದ್ದು. ‘ನಿನಗಾರು ಗುಂಡು ಹೊಡೆದರು ಸೂರ್ಯ/ ಇನಿತೇಕೆ ರಕ್ತ ನಿನ್ನ ಮೈಯಲಿ?’ ಎಂದು ಪ್ರಾರಂಭವಾಗಿತ್ತು. ಅದನ್ನು ಎಷ್ಟೋ ವರ್ಷಗಳವರೆಗೆ ನಾನು ಯಾರಿಗೂ ತೋರಿಸಿರಲಿಲ್ಲ. ನಾನು ಬಿಎ ಎರಡನೆಯ ವರ್ಷದಲ್ಲಿ ಓದುತ್ತಿದ್ದಾಗ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕವಿಗೋಷ್ಠಿಯಲ್ಲಿ ‘ನಮ್ಮೂರ ಗೌಡನ ಹೆಂಡತಿ/ ಹೊತ್ತು ಮುಳುಗಿದ ಮ್ಯಾಲ/ ಹಿತ್ತಲ ಬಾಗಿಲಕ ಬಂದು/ —’ ಎಂದು ಪ್ರಾರಭವಾಗುವ ಕವಿತೆಯೊಂದನ್ನು ಓದಿದೆ. ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಂಕ್ರಮಣ ಪತ್ರಿಕೆಯ ಚಂಪಾ ಅವರು ಕವಿತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಸಂಕ್ರಮಣ ಪತ್ರಿಕೆಯಲ್ಲಿ ಪ್ರಕಟಿಸಿದರು. ಇಂಗ್ಲಿಷ ಉಪನ್ಯಾಸಕನಾಗಿ ಸಿಂದಗಿಗೆ ಬಂದ ನಂತರ ಕವಿ ನಾಗೇಶ ರಾಂಪೂರ ಅವರ ಜೊತೆ ಸೇರಿ ‘ಎರಡು ನೆಲೆ, ಒಂದು ಸೆಲೆ’ ಎನ್ನುವ ಜಂಟಿ ಕವನ ಸಂಕಲನವನ್ನು ಪ್ರಕಟಿಸಿದೆವು. ಈ ಮಧ್ಯೆ ಕತೆಗಳನ್ನೂ ಬರೆಯತೊಡಗಿದ್ದೆ. ಗುಲಬರ್ಗಾ ವಿಶ್ವವಿದ್ಯಾಲಯದವರು ಕನ್ನಡ ರಾಜ್ಯೋತ್ಸವ ಸಂದರ್ಭಕ್ಕೆ ಏರ್ಪಡಿಸುವ ಜಯತೀರ್ಥ ರಾಜಪುರೋಹಿತ ದತ್ತಿ ಕಥಾಸ್ಪರ್ಧೆಗೆ ನನ್ನದೊಂದು ಕತೆಯನ್ನು ಕಳುಹಿಸಿದ್ದೆ. ಅದಕ್ಕೆ ಚಿನ್ನದ ಪದಕ ಹಾಗೂ ಎರಡು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿತ್ತು. ಅಲ್ಲಿಂದ ತರಂಗ, ಮಯೂರ, ಸುಧಾ, ತುಷಾರ ಮುಂತಾದ ಪತ್ರಿಕೆಗಳಲ್ಲಿ ನನ್ನ ಕತೆಗಳು ಪ್ರಕಟವಾದವು. ಹೀಗೆ ಕವಿತೆ ಹಾಗೂ ಕತೆ ಎರಡೂ ಪ್ರಕಾರದಲ್ಲಿ ಸಮಾನ ಆಸಕ್ತಿ ಇರಿಸಿಕೊಂಡು ಒಟ್ಟು ನಾಲ್ಕು ಕವನ ಸಂಕಲನಗಳು ಹಾಗೂ ಮೂರು ಕಥಾ ಸಂಕಲನಗಳು ಪ್ರಕಟಿಸಿರುವೆ. ಇವೆಲ್ಲದರ ಮಧ್ಯ ಆಕಸ್ಮಿಕವೆನ್ನುವ ಹಾಗೆ ಸಂಶೋಧನ ಕ್ಷೇತ್ರದ ಕಡೆಗೆ ಹೊರಳಿದೆ. ಹಿರಿಯ ಸ್ನೇಹಿತರಾದ ಡಾ.ಎಂ.ಎಂ.ಪಡಶೆಟ್ಟಿ ಅವರು ಬರೆಯಬೇಕಾದ ಸಂಶೋಧನ ಸಂಪ್ರಬಂಧವೊಂದಕ್ಕೆ ಮಾಹಿತಿ ಸಂಗ್ರಹಿಸಲು ಅವರೊಂದಿಗೆ ವಿಜಯಪುರ ಸಮೀಪದ ಅರಕೇರಿಯ ಅಮೋಘಸಿದ್ಧೇಶ್ವರ ಗುಡಿಗೆ ಹೋಗಿದ್ದೆ. ರೇವಣಸಿದ್ಧ ಹಾಗೂ ಸೊನ್ನಲಿಗೆ ಸಿದ್ಧರಾಮರ ಕುರಿತು ಆದಷ್ಟು ಸಂಶೋಧನ ಕೆಲಸ ಅಮೋಘಸಿದ್ಧನ ಕುರಿತು ಆಗಿಲ್ಲವೆಂದು ನನಗೆ ಮನವರಿಕೆಯಾಯಿತು. ಈ ಕುರಿತು ಸಂಶೋಧನೆ ಮಾಡುವ ಗುಂಗು ನನ್ನನ್ನು ಕಾಡತೊಡಗಿತು. ಡಾ.ಪಡಶೆಟ್ಟಿ ಅವರೇ ನನ್ನ ಸಂಶೋಧನ ಮಾರ್ಗದರ್ಶಕರಾದರು. ಹೀಗೆ ಸಿದ್ಧಪಡಿಸಿದ ‘ಅಮೋಘಸಿದ್ಧ ಪರಂಪರೆ’ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ನನಗೆ ಡಾಕ್ಟರೇಟ್ ಪದವಿಯನ್ನು ನೀಡಿತು. ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಸೋಲಾಪುರ ಸಮೀಪದ ಹತ್ತೂರಿನ ಎಂಬತ್ತು ವಯಸ್ಸಿನ ಅವಧು ಬನಸಿದ್ಧ ಹಿರಕುರ ಎನ್ನುವವರು ಅಮೋಘಸಿದ್ಧ ಜನಪದ ಮಹಾಕಾವ್ಯವನ್ನು ಹಾಡುತ್ತಾರೆಂದು ತಿಳಿದುಬಂದಿತ್ತು. ಅವರನ್ನು ಒಂದು ತಿಂಗಳವರೆಗೆ ನಮ್ಮ ಮನೆಯಲ್ಲಿ ಇರಿಸಿಕೊಂಡು ಹಾಡನ್ನು ರೆಕಾರ್ಡ ಮಾಡಿಕೊಂಡೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗದವರು ಆರುನೂರು ಪುಟಗಳ ಆ ಮಹಾಕಾವ್ಯನ್ನು ಪ್ರಕಟಪಡಿಸಿದರು. ಈ ಎಲ್ಲ ಚಟುವಟಿಕೆಗಳ ಮಧ್ಯೆ ವಿಮರ್ಶಾ ಲೇಖನಗಳನ್ನು ಬರೆಯುತ್ತಿದ್ದೆ. ಅವೆಲ್ಲ ವಿಚಾರ ಸಂಕಿರಣ ಹಾಗೂ ಗೋಷ್ಠಿಗಳಲ್ಲಿ ಪ್ರಸ್ತುತ ಪಡಿಸಿದ ಲೇಖನಗಳು. ಒಟ್ಟು ನಾಲ್ಕು ವಿಮರ್ಶಾ ಸಂಕಲನಗಳು ಪ್ರಕಟಗೊಂಡಿವೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಸಾಂಸ್ಕೃತಿಕ ಯೋಜನೆಯ ಅಡಿಯಲ್ಲಿ ‘ಕರಕುಶಲ ಮತ್ತು ತಂತ್ರಜ್ಞಾನ’ ಗ್ರಂಥವನ್ನು ಸಂಪಾದಿಸಿಕೊಟ್ಟಿರುವೆ. ತೀರ ಇತ್ತೀಚೆಗೆ ಅನುವಾದದಲ್ಲೂ ತೊಡಗಿಸಿಕೊಂಡಿರುವೆ. ಕೊರೊನಾ ಕಾಲ ಸಂದರ್ಭದಲ್ಲಿ ಜಾಕ್ ಲಂಡನ್‌ನ ‘ಸ್ಕಾರ್ಲೆಟ್ ಪ್ಲೇಗ್’ ಕಾದಂಬರಿಯನ್ನು ಹಾಗೂ ಈ ಎರಡು ವರ್ಷಗಳ ಹಿಂದೆ ನೈಜೀರಿಯನ್ ಲೇಖಕ ಚಿನುವ ಅಚೆಬೆಯ ಏಕೈಕ ಕಥಾ ಸಂಕಲನ ‘ಯುದ್ಧಕಾಲದ ಹುಡುಗಿಯರು’ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿರುವೆ.

8 ನಿಮ್ಮ ಪ್ರಕಾರ ಕನ್ನಡವೆಂದರೆ? ಇವೊತ್ತಿನ ಸಂದರ್ಭದಲ್ಲಿ ಕನ್ನಡವನ್ನು ಉಳಿಸುವ ಬಗೆ?

ಕನ್ನಡವೆನ್ನುವುದು ಅದನ್ನು ಮಾತನಾಡುವವರ ಉಸಿರು. ಇಂಗ್ಲಿಷ್‌ನ ಎದುರಿಗೆ ನಿಲ್ಲದೆ ಇಂದು ಅನೇಕ ಭಾಷೆಗಳು ಅಳಿವಿನ ಅಂಚಿಗೆ ಬಂದಿವೆ ಎನ್ನುವ ಒಂದು ಚರ್ಚೆ ಚಿಂತಕರ ಮಧ್ಯದಲ್ಲಿದೆ. ಕನ್ನಡವು ಇನ್ನೊಂದು ಭಾಷೆಯ ವಿರುದ್ಧ ನಿಂತು ತನ್ನನ್ನು ಉಳಿಸಿಕೊಂಡು ಬಂದಿರುವುದು ಚಾರಿತ್ರಿಕ ಸತ್ಯವಾಗಿದೆ. ಒಂದು ಕಾಲ ಘಟ್ಟದಲ್ಲಿ ಸಂಸ್ಕೃತ, ಮತ್ತೊಂದು ಸಂದರ್ಭದಲ್ಲಿ ಉರ್ದು, ಇನ್ನೊಂದು ಸಂದರ್ಭದಲ್ಲಿ ಮರಾಠಿ, ಬೇರೊಂದು ಸಂದರ್ಭದಲ್ಲಿ ಹಿಂದಿ ಭಾಷೆಗಳ ವಿರುದ್ಧ ನಿಂತು ಕನ್ನಡ ಉಳಿದುಕೊಂಡು ಬಂದಿದೆ. ಇವೆಲ್ಲ ಕನ್ನಡವನ್ನು ಅಳಿಸಿ ಹಾಕುವಷ್ಟು ಬಲಿಷ್ಟವಾಗಿರಲಿಲ್ಲವೇನೋ! ಆಡಳಿತಾತ್ಮಕವಾಗಿ ಅವು ಒಂದಿಷ್ಟು ಪ್ರಮಾಣದಲ್ಲಿ ಕನ್ನಡವನ್ನು ಅಧೀರಗೊಳಿಸಿದ್ದು ನಿಜ. ಆದರೆ ಕನ್ನಡ ದೊಡ್ಡ ಪ್ರಮಾಣದ ವಿಪತ್ತನ್ನು ಎದುರಿಸಿರಲಿಲ್ಲ. ಆದರೆ ಇಂಗ್ಲಿಷ್ ಭಾಷೆಯ ಎದುರಿಗೆ ನಿಲ್ಲುವಾಗ ಕನ್ನಡ ಬೇರೆಯ ರೀತಿಯ ಒತ್ತಡವನ್ನು ಅನುಭವಿಸಿದೆ. ಒಂದು ಕಡೆಗೆ ಆಳುವವರ ಭಾಷೆಯಾಗಿ ಇಂಗ್ಲಿಷ್ ಹಾಗೂ ಇನ್ನೊಂದು ಉದ್ಯೋಗ ದೊರಕಿಸಿಕೊಡುವ ಭಾಷೆಯಾಗಿ ಇಂಗ್ಲಿಷ್ ಇಂದು ನಮ್ಮೆದುರಿಗೆ ಇರುವುದರಿಂದ ಭಾರತೀಯ ಅನೇಕ ಭಾಷೆಗಳ ಹಾಗೆಯೆ ಕನ್ನಡ ಕೂಡ ಬಹು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕಿರುವ ಪರಿಹಾರವೆಂದರೆ ಆಳುವವರ ಭಾಷೆಯಾದ ಇಂಗ್ಲಿಷ್ ಶ್ರೇಷ್ಠವೆನ್ನುವ ವ್ಯಸನದಿಂದ ನಾವು ಮುಕ್ತವಾಗಬೇಕು. ಕನ್ನಡದಂತೆಯೇ ಇಂಗ್ಲಿಷ ಕೂಡ ಸಂವಹನದ ಒಂದು ಮಾಧ್ಯಮವಷ್ಟೆ ಎಂದು ಭಾವಿಸಬೇಕು. ಎರಡನೆಯದಾಗಿ ‘ಇಂಗ್ಲಿಷ್ ಹಾಗೂ ಉದ್ಯೋಗ’ ಇವುಗಳ ನಡುವೆ ಇರುವ ಸಮೀಕರಣವನ್ನು ಮುರಿದು ಹಾಕಬೇಕು. ಇದು ಕೇವಲ ವ್ಯಕ್ತಿಗತ ನೆಲೆಯಲ್ಲಿ ಸಂಭವಿಸಬಹುದಾದ ಸಂಗತಿಯಲ್ಲ. ಕನ್ನಡಿಗರು ಹಾಗೂ ಕರ್ನಾಟಕ ಸರಕಾರ ಈ ಸಮೀಕರಣ ನಾಶದಲ್ಲಿ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಅಂದರೆ ಉದ್ಯೋಗ ದೊರಕಿಸಿಕೊಡುತ್ತದೆ ಎನ್ನುವ ಯಾವುದೇ ತೆರನಾದ ‘ಜ್ಞಾನವು’ ಕನ್ನಡ ಮಾಧ್ಯಮದ ಮೂಲಕವೂ ನಮಗೆ ದೊರೆಯಬೇಕು.

9 ನಿಮ್ಮ ಮುಂದಿನ ಕೃತಿಯ ಬಗ್ಗೆ ಹೇಳಿ.

ಕವಿತೆ, ಕತೆ, ಸಂಶೋಧನೆ, ಸಂಪಾದನೆ, ಅನುವಾದ ಪ್ರಕಾರಗಳಲ್ಲಿ ಈವರೆಗೆ ತಕ್ಕ ಮಟ್ಟಿಗೆ ಕೃಷಿ ಮಾಡಿರುವೆ. ಇನ್ನು ನಂತರ ಕಾದಂಬರಿ ಪ್ರಕಾರದಲ್ಲಿ ಕೃಷಿ ಮಾಡಲು ಯೋಜಿಸಿದ್ದೇನೆ. ಈಗಾಗಲೆ ಒಂದಿಷ್ಟು ರೂಪು ರೇಷೆಗಳನ್ನು ಮುಂದಿಟ್ಟುಕೊಂಡು ಕಾದಂಬರಿ ಬರೆಯಲು ಪ್ರಾರಂಭಿಸಿರುವೆ. ಸಾವಿನ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುವ ಕೆಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಯನ್ನೂ ಹಾಕಿಕೊಂಡಿರುವೆ. ಮುಕ್ಕಾಲು ಭಾಗ ಅನುವಾದದ ಕೆಲಸ ಪೂರ್ಣಗೊಂಡಿದೆ.

10 ಯುವ ಕತೆಗಾರರಿಗೆ ನಿಮ್ಮ ಕಿವಿಮಾತು.

ಯುವ ಕತೆಗಾರರಿಗೆ ಕಿವಿಮಾತು ಹೇಳುವಷ್ಟು ನಾನು ದೊಡ್ಡ ಸಾಧಕನಲ್ಲ. ಒಂದು ಮಾತನ್ನು ಹೇಳುವುದಾದರೆ ಬೆಳೆಯ ಬಯಸುವ ಯಾವುದೇ ಲೇಖಕ ತನ್ನ ಪೂರ್ವಸೂರಿಗಳನ್ನು ಓದಿಕೊಂಡಿರಬೇಕು. ಮಾಸ್ತಿ, ಆನಂದ, ಕೊರಡಕಲ್ ಶ್ರೀನಿವಾಸ, ಬಾಗಲೋಡಿ ದೇವರಾಯ, ಅನಕೃ, ನಿರಂಜನ, ಬಸವರಾಜ ಕಟ್ಟೀಮನಿ, ಪೂಚಂತೇ, ಲಂಕೇಶ, ಚಿತ್ತಾಲ ಮುಂತಾದವರು ಕಥಾ ಪರಂಪರೆಯನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎನ್ನುವ ಗ್ರಹಿಕೆ ಯುವ ಲೇಖಕರಿಗೆ ಇದ್ದರೆ ಅದನ್ನು ಸಮರ್ಥವಾಗಿ ಮುಂದುವರೆಯಿಸಿಕೊಂಡು ಹೋಗಲು ಅವರಿಗೆ ಹೊಸ ದಾರಿ ಕಾಣುತ್ತದೆ. ಅದರ ಜೊತೆಗೆ ನಮ್ಮ ಹಿರಿಯ ಸಮಕಾಲೀನ ಲೇಖಕರ ಒಡನಾಟದಲ್ಲಿ ಸದಾ ಇರಲು ಅವರು ಪ್ರಯತ್ನಿಸಬೇಕು. ಅಲ್ಲದೆ, ಸಮಕಾಲೀನ ಲೇಖಕರ ಬರವಣಿಗೆಯನ್ನು ತುಂಬಾ ಕುತೂಹಲದಿಂದ ಗಮನಿಸಬೇಕು.

11 ನಿಮ್ಮ ಪ್ರಕಾರ ಕಥೆ ಸಮಸ್ಯೆಗೆ ಉತ್ತರವೆ?

ಕತೆ ಅಷ್ಟೇ ಅಲ್ಲ, ಸಾಹಿತ್ಯದ ಯಾವ ಪ್ರಕಾರವೂ ನಮ್ಮ ಸಮಸ್ಯೆಗಳಿಗೆ ಉತ್ತರವಲ್ಲ. ಹಾಗೊಂದು ವೇಳೆ ಭಾವಿಸಿದರೆ ಸಾಹಿತಿಯಾದವನು ತನ್ನ ಮೇಲೆ ಮಿತಿಯನ್ನು ಒಡ್ಡಿಕೊಂಡತಾಗುತ್ತದೆ. ಹಾಗೆ ಭಾವಿಸುವವರು ಬದುಕನ್ನು ಕಪ್ಪು ಬಿಳುಪಿನ ಮಾದರಿಯಲ್ಲಿ ಗ್ರಹಿಸಿ ಬದುಕಿನ ಸಮಗ್ರ ದರ್ಶನ ನೀಡುವುದರಿಂದ ವಂಚಿತರಾಗುತ್ತಾರೆ.

12 ನಿಮಗೆ ಖುಷಿ ತಂದ ಪ್ರಶಸ್ತಿ.

ಉತ್ತರಿಸುವುದು ಕಷ್ಟ. ಪ್ರಶಸ್ತಿಗೂ ಖುಷಿಗೂ ನೇರಾನೇರ ಸಂಬಂಧವಿರುತ್ತದೆ. ಎಲ್ಲ ಪ್ರಶಸ್ತಿಗಳೂ ಲೇಖಕನಾದವನಿಗೆ ಖುಷಿ ಕೊಟ್ಟೇ ಕೊಟ್ಟಿರುತ್ತವೆ. ಆಯಾ ಕಾಲ ಘಟ್ಟದಲ್ಲಿ ಆಯಾ ಪ್ರಶಸ್ತಿಗಳು ಖುಷಿಯನ್ನು ನೀಡಿರುತ್ತವೆ.

13 ನಿಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡುವಿರಿ?

ನಾನು ಅವಿಶ್ರಾಂತ ಬರಹಗಾರನಲ್ಲ. ಹೀಗಾಗಿ ನನ್ನಂಥವರಿಗೆ ‘ಬಿಡುವಿನ ವೇಳೆ’ ಎನ್ನುವ ವಿಶೇಷ ವೇಳೆ ಇರುವುದಿಲ್ಲವೆಂದು ಭಾವಿಸಿದ್ದೇನೆ. ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತನಾದ ಮೇಲೆ ‘ಕಾಲ’ ನನಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿದೆ ಅನ್ನಿಸಿದೆ. ಹೀಗಾಗಿ ವೃತ್ತಿಯ ಒತ್ತಡದಲ್ಲಿ ಪೂರ್ಣಗೊಳಿಸದೇ ಇದ್ದ ಅನೇಕ ಬರವಣಿಗೆಗಳಿಗೆ ಈಗ ಮುಕ್ತಿ ದೊರೆಯುತ್ತಿದೆ.

14 ‘ಮುಳುಗಡೆ ಮತ್ತು ಇತರ ಕತೆಗಳು’ ಬಗ್ಗೆ ಹೇಳುವುದಾದರೆ?

‘ಮುಳುಗಡೆ ಮತ್ತು ಇತರ ಕತೆಗಳು’ ನನ್ನ ಪ್ರಥಮ ಕಥಾ ಸಂಕಲನ. ಅದಾದ ನಂತರ ‘ಬೆಂಕಿ ಇರದ ಬೆಳಕು’ ಮತ್ತು ‘ಏಕತಾರಿ’ ಎನ್ನುವ ಎರಡು ಕಥಾ ಸಂಕಲನಗಳು ಬಂದಿವೆ. ೧೯೯೮ರಷ್ಟು ಹಿಂದೆಯೇ ಬರೆದ ಪ್ರಥಮ ಸಂಕಲನವನ್ನು ಇಂದು ನೋಡುತ್ತಿದ್ದಂತೆ ನನ್ನ ಕಥಾ ಬರವಣಿಗೆಯ ಶಕ್ತಿ ಹಾಗೂ ಮಿತಿಗಳು ನನ್ನ ಗಮನಕ್ಕೆ ಬರುತ್ತವೆ. ಆ ಸಂಕಲನದಲ್ಲಿನ ‘ಮುಳುಗಡೆಯ’ ಸಮಸ್ಯೆಯನ್ನು ಇನ್ನೂ ಭಿನ್ನ ನೆಲೆಯಲ್ಲಿ ನೋಡಬಹುದಾಗಿತ್ತು ಎಂದು ಈಗ ಅನ್ನಿಸುತ್ತದೆ. ಉಳಿಗಮಾನ್ಯ ವ್ಯವಸ್ಥೆಯ ಟೊಳ್ಳುತನವನ್ನು ವಿಡಂಬಿಸುವ ‘ಚರಗ’ ಕತೆಯ ದರಿಯಪ್ಪನ ಜೈವಿಕ ತೊಂದರೆಯನ್ನು ಇನ್ನಷ್ಟು ಅಂತಃಕರಣದಿಂದ ನೋಡಬಹುದಾಗಿತ್ತು ಅನ್ನಿಸುತ್ತದೆ. ಇಷ್ಟಂತೂ ನಿಜ, ಆ ಕಥಾ ಸಂಕಲನದಲ್ಲಿ ಕಾಣಸಿಗುವ ಗ್ರಾಮ ಜಗತ್ತು ಇಂದಿಗೂ ನನ್ನನ್ನು ಕಾಡುತ್ತದೆ. ಆದರೆ ಆ ಗ್ರಾಮ ಜಗತ್ತನ್ನು ನೋಡುವ ಪರಿ ಇಂದು ವಿಸ್ತಾರವಾಗಿದೆ ಅನ್ನಿಸುತ್ತದೆ.

15 ಎರಡು ಜೀವನ ಚರಿತ್ರೆಗಳು ‘ಬಬಲೇಶ್ವರ ಶಾಂತವೀರ ಪಟ್ಟಾಧ್ಯಕ್ಷರು’ ಮತ್ತು ‘ಇಟಗಿಯ ಶ್ರೀ ಭೀಮಾಂಬಿಕೆ’ ರಚನೆಯ ಅನುಭವ ಹೇಳಿ.

ಈ ಎರಡೂ ಜೀವನ ಚರಿತ್ರೆಗಳ ರಚನೆ ಒಂದು ವಿಶೇಷ ಸಂದರ್ಭದಲ್ಲಿ ನಡೆದಿರುವಂಥದು. ಇವೆರಡೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರಚನೆಯಾದವುಗಳು. ನಾನು ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ಶ್ರಿ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಚೇರಮನ್‌ರೂ ಸ್ಥಳೀಯ ಸಾರಂಗಮಠದ ಪೀಠಾಧಿಪತಿಗಳೂ ಆದ ಪೂಜ್ಯಶ್ರೀ ಡಾ.ಪ್ರಭು ಸಾರಂಗದೇವಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಹಾಗೂ ರಜತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ‘ಮಕ್ಕಳ ಸಾಹಿತ್ಯ ಮಾಲೆ’ ಅಡಿಯಲ್ಲಿ ರಚನೆಯಾದ ಕಿರುಪುಸ್ತಕಗಳು ಇವು. ಮಠೀಯ ವ್ಯವಸ್ಥೆಯಲ್ಲಿದ್ದುಕೊಂಡು ಪ್ರಗತಿಪರ ಆಲೋಚನೆಗಳನ್ನು ಹೊಂದಿದ ಇಬ್ಬರೂ ಕೇಂದ್ರವ್ಯಕ್ತಿಗಳ ಕುರಿತು ಬರೆಯಲು ನನ್ನಲ್ಲಿ ಉತ್ಸಾಹವಿತ್ತಾದರೂ ನಾನು ಇಲ್ಲಿ ಎದುರಿಸಿದ ಪ್ರಮುಖ ತೊಡಕೆಂದರೆ ಜೀವನ ಚರಿತ್ರೆಗಳನ್ನು ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ಹೇಗೆ ಬರೆಯಬೇಕು ಎನ್ನುವ ಸಂಗತಿ. ಸಂಕ್ಷಿಪ್ತದಲ್ಲಿ ಬರೆದಿರುವೆನಾದರೂ ಸರಳವಾಗಿ ಬರೆಯಲಿಲ್ಲವೆನ್ನಿಸುತ್ತದೆ.

16 ಮೂರು ಸಂಶೋಧನ ಕೃತಿಗಳನ್ನು ರಚಿಸಿರುವಿರಿ. ವಿಶೇಷವಾಗಿ ‘ಕುರುಬ ಮಹಿಳೆ’ ಸಂಶೋಧನ ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ಓದುಗರಿಗೆ ತಿಳಿಸುವುದಾದರೆ..

ಈಗಾಗಲೇ ಬೇರೆ ಸಂದರ್ಭದಲ್ಲಿ ವಿವರಿಸಿದಂತೆ ನಾನು ಆಕಸ್ಮಿಕವಾಗಿ ಸಂಶೋಧನ ಕ್ಷೇತ್ರದ ಕಡೆಗೆ ತಿರುಗಿದವನು. ‘ಅರಕೇರಿ ಅಮೋಘಸಿದ್ಧೇಶ್ವರ’ ಕಿರು ಹೊತ್ತಿಗೆಯು ನನ್ನ ಮಹಾಪ್ರಬಂಧದ ಸಂಕ್ಷಿಪ್ತ ರೂಪವಾಗಿದೆ. ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಸಂಸ್ಥೆಯವರು ಜನ ಸಾಮಾನ್ಯರ ಓದಿಗಾಗಿ ಬರೆಯಿಸಿಕೊಂಡ ಕೃತಿ ಅದು. ಮೂಲ ಮಹಾಪ್ರಬಂಧ ‘ಅಮೋಘಸಿದ್ಧ ಪರಂಪರೆ: ಒಂದು ಅಧ್ಯಯನ’ದ ಸಂಕ್ಷಿಪ್ತ ರೂಪ ಅದಾಗಿದೆ. ಇನ್ನು ‘ಕುರುಬ ಮಹಿಳೆ’ ಪುಸ್ತಕವು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ನಾನು ಬರೆದುಕೊಟ್ಟಿದ್ದ ಲೇಖನವೊಂದರ ದೀರ್ಘರೂಪವಾಗಿದೆ. ಲೇಖನವನ್ನು ಸಿದ್ಧ ಪಡಿಸಿಕೊಳ್ಳುವಾಗ ನಾನು ಕರ್ನಾಟಕದ ಒಂದು ತುದಿ ಬೀದರನಿಂದ ಹಿಡಿದು ಇನ್ನೊಂದು ತುದಿ ಭಟ್ಕಳದ ವರೆಗೆ ಸಂಚರಿಸಿ ಕ್ಷೇತ್ರಕಾರ್ಯ ಮಾಡಿದ್ದನ್ನು ಗಮನಿಸಿದ್ದ ಸ್ನೇಹಿತರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸಂಗ್ರಹಿತ ಆಕರ ಬಳಸಿ ಗ್ರಂಥರೂಪದಲ್ಲಿ ಬರೆಯಿಸಿದರು. ಒಟ್ಟು ಮಹಿಳೆಯನ್ನು ಅದರಲ್ಲೂ ವಿಶೇಷವಾಗಿ ಕುರುಬ ಮಹಿಳೆಯನ್ನು ನಮ್ಮ ಪುರಾಣ ಪಠ್ಯಗಳು, ಚಾರಿತ್ರಿಕ ಪಠ್ಯಗಳು ಹಾಗೂ ಸಾಮಾಜಿಕ ಚೌಕಟ್ಟುಗಳು ನಿರ್ವಚಿಸಿಕೊಂಡುದನ್ನು ಇಲ್ಲಿ ವಿಶ್ಲೇಷಿಸಿರುವೆ.

17 ನಿಮ್ಮ ಪ್ರಕಾರ ಕತೆ ಮುಖ್ಯವೋ ಇಲ್ಲ ಕವಿತೆಯೋ?

ಉತ್ತರಿಸಲು ಕಷ್ಟಕರವಾದ ಮತ್ತೊಂದು ಪ್ರಶ್ನೆಯಿದು. ಕತೆ ಕವಿತೆಗಳೆರಡೂ ಲೇಖಕನ ಅಭಿವ್ಯಕ್ತಿಯ ಮಾಧ್ಯಮಗಳು. ಲೇಖಕನನ್ನು ಕಾಡುವ ಸಂಗತಿಯೊಂದು ತಾನು ಅಭಿವ್ಯಕ್ತಿಗೊಳ್ಳಬೇಕಾದ ಪ್ರಕಾರವನ್ನು ತಾನಾಗಿಯೇ ಆಯ್ದುಕೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಇಲ್ಲಿ ಯಾವ ಪ್ರಕಾರ ಮುಖ್ಯ ಎನ್ನುವ ಪ್ರಶ್ನೆ ಉದ್ಭವಿಸಲಾರದು.

18 ಸಾಹಿತ್ಯ ವಲಯದಲ್ಲಿ ನಿಮ್ಮನ್ನು ಕತೆಗಾರರೆಂದೇ ಗುರುತಿಸುತ್ತಾರೆ. ಇದರ ಬಗ್ಗೆ ಹೇಳುವುದಾದರೆ?

ನಾನು ಕವಿತೆ, ಕತೆ, ಸಂಶೋಧನೆ. ಸಂಪಾದನೆ, ವಿಮರ್ಶೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿರುವೆನಾದರೂ ಸಾಹಿತ್ಯವಲಯ ನನ್ನನ್ನು ಕತೆಗಾರನೆಂದೆ ಗುರುತಿಸಿರುವುದು ನಿಜ. ಅದು ನಿಜಕ್ಕೂ ಖುಷಿಯ ಸಂಗತಿ ಕೂಡಾ ಹೌದು. ಆದರೆ ಇನ್ನುಳಿದ ಪ್ರಕಾರಗಳಲ್ಲಿಯ ಅದರಲ್ಲೂ ವಿಶೇಷವಾಗಿ ನನ್ನ ಅನುವಾದ ಕೃತಿಗಳನ್ನು ಸಾಹಿತ್ಯ ಲೋಕ ವಿಶೇಷವಾಗಿ ನೋಡಲಿ ಎಂದು ಆಶಿಸುತ್ತೇನೆ.

19 ಸಾಂಸ್ಕೃತಿಕ ರಾಜಕಾರಣವೆನ್ನುವುದು ಇದೆಯೆ? ಇದ್ದರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ : ಸಾಂಸ್ಕೃತಿಕ ರಾಜಕಾರಣವೆನ್ನುವುದು ಖಂಡಿತವಾಗಿಯೂ ಇದೆ. ಕಾಲಕಾಲಕ್ಕೆ ಕಾಣಿಸಿಕೊಂಡಿರುವ ಪ್ರಗತಿಪರ ಬದಲಾವಣೆಗಳು ಸಾಂಸ್ಕೃತಿಕ ರಾಜಕಾರಣದಿಂದಾಗಿಯೇ. ಅನುಚಾನವಾಗಿ ನಂಬಿಕೊಂಡು ಬಂದಿದ್ದ ಆತ್ಮನ್ ನಂಬಿಕೆಯ ಜಾಗೆಯಲ್ಲಿ ಅನಾತ್ಮ ಪರಿಕಲ್ಪನೆ, ಪ್ರಾಣಿಬಲಿ ಜಾಗೆಯಲ್ಲಿ ಅಹಿಂಸೆಯ ಪರಿಕಲ್ಪನೆ ತರುವ ಮೂಲಕ ಬುದ್ಧ ನಮ್ಮ ಸಂಸ್ಕೃತಿಯಲ್ಲಿ ಹೊಸ ನೀರು ಹರಿಯುವಂತೆ ಮಾಡಿದ. ಬಸವಣ್ಣ ‘ಉಳ್ಳವರು ಶಿವಾಲಯವ ಮಾಡುವರು/ ನಾನೇನು ಮಾಡಲಿ ಬಡವನಯ್ಯ’ ಎಂದು ಹೇಳುವ ಮೂಲಕ ಸ್ಥಾವರದ ನಿರಾಕರಣೆಯನ್ನು ಮಾಡಿದ. ‘ಹಿಂದು ತುರುಕರಿಗೆಲ್ಲ ಚಂದಿರನೊಬ್ಬನೆ’ ಎಂದು ಹೇಳುವ ಮೂಲಕ ತಿಂಥಿಣಿ ಮೋನಪ್ಪಯ್ಯ ಕೋಮು ಸಂಘರ್ಷಕ್ಕೆ ಹಾದಿ ಮಾಡಿಕೊಡುವ ತಾತ್ವಿಕತೆಯನ್ನು ವಿರೋಧಿಸಿದ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸರ್ವರೀತಿಯ ಯಾಜಮಾನ್ಯವನ್ನು ನಿರಾಕರಿಸುವ ಸಂವಿಧಾನದ ರಚನೆ ಮಾಡಿದರು. ಸಾಂಸ್ಕೃತಿಕ ರಾಜಕಾರಣದ ಲಕ್ಷಣವೆಂದರೆ ಯಜಮಾನ ಸಂಸ್ಕೃತಿ ತನ್ನನ್ನು ಸ್ಥಿರೀಕರಿಸಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಅಂಚಿಗೆ ತಳ್ಳಲ್ಪಟ್ಟವರು ಹಾಗೂ ದಮನಿತರು ಹೊಸ ಹೊಸ ವ್ಯಾಖ್ಯಾನಗಳ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಯಿಸುವುದು. ವರ್ತಮಾನದ ಸಂದರ್ಭದಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಮೂಲಕ ಅಧಿಕಾರದ ಕೇಂದ್ರದಲ್ಲಿರಲು ಹವಣಿಸುವ ಒಂದು ಪಂಗಡದ ಎದುರಿಗೆ ಜಾತ್ಯತೀತ ಸಿದ್ಧಾಂತಿಗಳು ಒಂದು ಕಡೆ ಕೂಡಿ ಮುಖಾಮುಖಿ ಮಾಡಿಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

20 ಕೇಂದ್ರ ಸಾಹಿತ್ಯ ಅಕಾದೆಮಿಯ ಸದಸ್ಯರಾಗಿರುವಿರಿ. ಕನ್ನಡ ಭಾಷಾ ಬೆಳವಣಿಗೆಗೆ ಇಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ?

೨೦೨೩ರ ಎಪ್ರಿಲ್ ತಿಂಗಳಿನಿಂದ ನಾನು ಕೇಂದ್ರ ಸಾಹಿತ್ಯ ಅಕಾದೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯನಾಗಿ ಆಯ್ಕೆಯಾಗಿರುವೆ. ಕನ್ನಡವೂ ಸೇರಿದಂತೆ ಭಾರತದ ಇಪ್ಪತ್ನಾಲ್ಕು ಭಾಷೆಗಳ ಬೆಳವಣಿಗೆಗೆ ಪೂರಕವಾಗಿ ಅಕಾದೆಮಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳಿಗೆ ಪ್ರಶಸ್ತಿ ನೀಡುವುದು, ಯುವ ಪುರಸ್ಕಾರ ನೀಡುವುದು, ಅನುವಾದ ಪ್ರಶಸ್ತಿ ನೀಡುವುದು, ಪ್ರತಿಭಾವಂತ ಲೇಖಕರಿಗೆ ಫೆಲೋಶಿಪ್ ನೀಡುವುದು, ಎಲ್ಲ ಭಾಷೆಗಳ ಉತ್ತಮ ಕೃತಿಗಳನ್ನು ಪ್ರಕಟಿಸುವುದು, ಅನುವಾದ ಕಮ್ಮಟಗಳನ್ನು ಏರ್ಪಡಿಸುವುದು, ವರ್ಷವಿಡೀ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು -ಮುಂತಾದ ಚಟುವಟಿಕೆಗಳ ಮೂಲಕ ಭಾರತೀಯ ಎಲ್ಲ ಭಾಷೆಗಳ ಅಭಿವೃದ್ಧಿಗೆ ಪೂರಕವಾಗಿ ಅಕಾದೆಮಿ ಕೆಲಸ ಮಾಡುತ್ತದೆ. ಇವಲ್ಲದೆ Meet the Author, Katha Sandhi, Kavi Sandhi, Through My Windows, Asmita ದಂತಹ ಕಾರ್ಯಕ್ರಮಗಳ ಮೂಲಕ ಲೇಖಕ, ವಿಮರ್ಶಕ ಹಾಗೂ ಸಹೃದಯರನ್ನು ಗುರುತಿಸುವ ಹಾಗೂ ಗೌರವಿಸುವ ಕೆಲಸವನ್ನು ಅಕಾದೆಮಿ ಮಾಡುತ್ತದೆ. ವಂದನೆಗಳು.

 

ಚಂದಾದಾರರಾಗಿ
ವಿಭಾಗ
6 ಪ್ರತಿಕ್ರಿಯೆಗಳು
Inline Feedbacks
View all comments
ಡಿ ಎಂ ನದಾಫ್ ಅಫಜಲಪುರ
21 August 2023 00:01

ಇಡೀ ಸಂದರ್ಶನ ಬೆಟ್ಟ ಹತ್ತಿ, ಕಣಿವೆ ಇಳಿದು ,ವಿಶಾಲವಾದ ಬಯಲು ಸೀಮೆಯಲ್ಲಿ ವಿಶಾಲ ವಾಗಿ ಹರಡಿ ಹರಿದಾಡುವ ಭೀಮೆಯಂತೆ!
ಹಂತ ಹಂತವಾಗಿ ಹರಿದು ಬಂದಿದೆ.
ಕಟ್ಟಿ ಸರ್ ಧಾರವಾಡದ ಬಳ್ಳಿ. ಸಿಂದಗಿಯಲ್ಲಿ ಹೂ ಬಿಟ್ಟು ಕರುನಾಡ ತುಂಬಾ ಸುಗಂಧ ಬೀರುವ ಸುಮನಸಿನ ಬರಹಗಾರರು. ಎಲೆ ಮರೆಯಲಿದ್ದು ಗಂಧ ಬೀರುವ ಮೂಲಕ ತನ್ನ ಇರುವನ್ನು ಅರಹುವ ಮಾವಿನಂತ ವ್ಯಕ್ತಿತ್ವದ ಚನ್ನಪ್ಪ ಕಟ್ಟಿ ಸರ್ ಅವರ ಹೊಸ ಕಾದಂಬರಿಯ
ನಿರೀಕ್ಷೆಯಲ್ಲಿರುವ……
ಡಿ ಎಂ ನದಾಫ್ ಅಫಜಲಪುರ

ಶ್ರೀ ಮಲ್ಲಿಕಾರ್ಜುನ ಬ ಮಡಿವಾಳರ ಶಿಕ್ಷಕರು. ಹಿರೇಹಾಳ
20 August 2023 20:07

ಹಿರಿಯರು, ಸಾಹಿತಿಗಳು,ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ ನಮ್ಮವರು ಡಾ” ಚನ್ನಪ್ಪ ಕಟ್ಟಿಯವರು ನಮ್ಮೂರಿನವರು ಎಂಬುದೇ ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ.ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಅವರು ಅಘಾದ ವ್ಯಕ್ತಿಗಳಾಗದ್ದಾರೆ.ಸೌಮ್ಯ ಸ್ವಭಾವದವರಾದ ಅವರು ಈಗಲೂ ಕೂಡಾ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ ಗುರುಗಳನ್ನು ಈಗಲೂ ಕೂಡಾ ಸ್ಮರಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗದು.ಅವರು ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವೆ.ದೇವರು ಆಯುಷ್ಯ, ಆರೋಗ್ಯ, ಕೊಟ್ಟು ಕಾಪಾಡಲಿ.

ಸಿ. ಎಸ್. ಆನಂದ, ಕಲಬುರಗಿ
20 August 2023 19:20

ನಾಡಿನ ಪ್ರಸಿದ್ಧ ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿ ಗುರುಗಳ ಸಂದರ್ಶನ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ತುಂಬಾ ಚುಟುಕಾದ ಮೌಲ್ಯಯುತ ಪ್ರಶ್ನೆಗಳಿಗೆ ಕಟ್ಟಿ ಗುರುಗಳು ತುಂಬಾ ಮೌಲ್ಯಯುತವಾದ , ಮಾರ್ಮಿಕವಾದ ಉತ್ತರ ಗಳನ್ನು ನೀಡಿದ್ದಾರೆ.. ಈ ಸಂದರ್ಶನ ಶೈಕ್ಷಣಿಕ, ಸಾರಸ್ವತ ಲೋಕಕ್ಕೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ. ಸಂದರ್ಶಕರಾದ ಸಿಹಿಮೊಗ್ಗೆ ಅವರಿಗೆ ಧನ್ಯವಾದಗಳು🌹🌹

ಸಂಜೀವಕುಮಾರ ಡಾಂಗಿ
20 August 2023 17:37

ಬಗೆದಷ್ಟು ಸಿಗುವ ಚಿನ್ನದ ಗಣಿ ಚನ್ನಪ್ಪ ಕಟ್ಟಿಯವರ ವಿಶೇಷ ಸಂದರ್ಶನ ಅವರ ಬೇರೆ ಸಂದರ್ಶನಗಳಲ್ಲಿ ಇಲ್ಲದ ಹಲವಾರು ಆಯಾಮಗಳು ಈ ಸಂದರ್ಶನದಲ್ಲಿ ಹೊರತಂತಿದ್ದಿರಿ ನಿಮಗೂ ಕಟ್ಟಿ ಗುರುಗಳಿಗೂ ಹೃದಯಪೂರ್ವಕ ವಂದನೆಗಳು.

ದೇವೂ ಮಾಕೊಂಡ
20 August 2023 16:15

ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.ಸಿಹಿಮೊಗ್ಗೆ ಅವರಿಗೂ ಮತ್ತು ಕಟ್ಟಿ ಸರ್ ಅವರಿಗೂ
ಅಭಿನಂದನೆಗಳು

ಡಾ ಶ್ರೀಶೈಲ ನಾಗರಾಳ
20 August 2023 10:35

ಕನ್ನಡದ ಹೆಸರಾಂತ ಸಂವೇದನಾಶೀಲ ಕವಿ ಕಥೆಗಾರರು ವಿಮರ್ಶಕರು ಸಂಶೋಧಕರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಜ್ಞನಾಮ್ರತವನ್ನುಣಿಸಿ ಇವತ್ತೀಗೂ ಮಾದರಿಯಾಗಿರುವ ನನ್ನ. ವಿದ್ಯಾ ಗುರುಗಳು ಡಾ ಚನ್ನಪ್ಪ ಕಟ್ಟಿ ಅವರ ಸಂದರ್ಶನ ತುಂಬಾ ಅರ್ಥಪೂರ್ಣ ಚಿಂತನಶೀಲ ದ್ದಾಗಿದೆ ಓದುತ್ತಿದ್ದ ಹಾಗೆ ಓದಿನ ಪರಿ ಲೇಸು ಅನ್ನುವಂತಿದೆ
ಕನ್ನಡ ಸಾಹಿತ್ಯದ ಅನನ್ಯ ಅಸ್ಮಿತೆಗೆ ತಲೆ ಬಾಗಿ ನಂದಿನಿಗೆ
ಡಾ ಶ್ರೀಶೈಲ ನಾಗರಾಳ ಕಲಬುರಗಿ

1
    1
    Your Cart
    Remove
    ಮನದನಿಯ ಚಿತ್ತಾರ
    1 X 120.00 = 120.00