ಉದ್ಯಮಶೀಲತೆ ಎಂಬ ಭರವಸೆ – ಮೇಘ ರಾಮದಾಸ್ ಜಿ

ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ದೇಶವು ಮುನ್ನಡೆಯುವುದನ್ನು ನಾವು ಕಾಣಬಹುದು. ಈ ರೀತಿಯದ್ದೇ ಆದ ಸಕಾರಾತ್ಮಕ ಹಾಗೂ ಭರವಸೆಯ ಸಂದರ್ಭ ನಮ್ಮ ದೇಶದಲ್ಲಿದೆ. ಇಂದು ಭಾರತ ವಿಶ್ವದಲ್ಲಿ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ಯುವ ಸಮುದಾಯವು ಒಂದು ನಿರ್ದಿಷ್ಟ ಗುರಿ ತಲುಪುವ ಹಾದಿಯಲ್ಲಿ ನಡೆದಾಗ ಖಂಡಿತ ದೇಶ ‘ ಅಭಿವೃದ್ಧಿ ಹೊಂದಿದ ‘ ರಾಷ್ಟ್ರವಾಗಿ ಹೊರಹೊಮ್ಮುತ್ತದೆ.

ಜಗತ್ತು ಇಂದು ‘ ತಂತ್ರಜ್ಞಾನ ಯುಗ ‘ ವಾಗಿ ಪರಿವರ್ತನೆಗೊಂಡಿದೆ. ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ತರುತ್ತಿದೆ. ತಾಂತ್ರಿಕ ಕ್ರಾಂತಿಯು ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಆರೋಗ್ಯ, ರಕ್ಷಣೆ, ಮಾಹಿತಿ ಮತ್ತು ಸಂಪರ್ಕ ಇದ್ಯಾವುದೂ ಸುಲಭಕ್ಕೆ ಸಿಗದೇ ಇರುವ ಸ್ಥಳಗಳನ್ನು ಸಹ ತಂತ್ರಜ್ಞಾನ ಇಂದು ತಲುಪಿದೆ. ಆದ್ದರಿಂದಲೇ ಇಂದು ಎಲ್ಲರಿಗೂ ಎಲ್ಲಾ ವ್ಯವಸ್ಥೆಗಳು ಒಂದು ಮಟ್ಟಕ್ಕೆ ಸಿಗುವಂತಾಗಿದೆ.

ಜಾಗತೀಕರಣವು ದೇಶಗಳನ್ನು ಒಗ್ಗೂಡಿಸಿದೆ ಮತ್ತು ವಿಶ್ವ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಜಾಗತೀಕ ಮಟ್ಟದಲ್ಲಿ ಪ್ರಗತಿ ಮತ್ತು ಅದಕ್ಕೆ ಎದುರಾಗುವ ಸವಾಲುಗಳು ಜೊತೆ ಜೊತೆಯಾಗಿ ಸಾಗುತ್ತಿವೆ. ಆದರೆ ನಮ್ಮ ದೇಶದ ವಿಚಾರದಲ್ಲಿ ಸವಾಲುಗಳು ಕಣ್ಣಿಗೆ ರಾಚುವಂತಿದ್ದರೆ, ಪ್ರಗತಿ ಕುಂಟುತ್ತಿದೆ. ದೇಶಕ್ಕೆ ದೊಡ್ಡ ಮಾರಕದಂತೆ ಕಾಡುತ್ತಿರುವ “ ನಿರುದ್ಯೋಗ ” ಇದಕ್ಕೆ ಸೂಕ್ತ ಉದಾಹರಣೆ. ಅದರಲ್ಲಿಯೂ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಅಪಾಯಕಾರಿಯಾಗಿದೆ.

ಜಾಗತಿಕ ಯುವ ಜನಸಂಖ್ಯೆಯು 1.5 ಶತ ಕೋಟಿ ಎಂದು ಅಂದಾಜಿಸಲಾಗಿದೆ. ಅದರಲ್ಲಿ 620 ದಶಲಕ್ಷ ಉದ್ಯೋಗಿಗಳಿದ್ದಾರೆ, ಮತ್ತು ಇವರೆಲ್ಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಭಾರತ ದೇಶದಲ್ಲಿ ಯುವಜನರ ಜನಸಂಖ್ಯೆಯ ಜೊತೆಗೆ ನಿರುದ್ಯೋಗದ ಪ್ರಮಾಣವೂ ಏರುತ್ತಿರುವುದು ಸುಳ್ಳಲ್ಲ. ಈ ಒಂದು ಸಮಸ್ಯೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.

ಈ ದೊಡ್ಡ ಬಿಕ್ಕಟ್ಟನ್ನು ಸರಿಪಡಿಸಲು ಪ್ರತಿ ದೇಶದ ಸರ್ಕಾರಗಳು ಮತ್ತು ವಿಶ್ವಸಂಸ್ಥೆಯು ಯುವ ಉದ್ಯೋಗ ಕಾರ್ಯಕ್ರಮಗಳನ್ನು ಉತ್ತೇಜಿಸಲು ನೀತಿಗಳನ್ನು ಹಾಗೂ ಯೋಜನೆಗಳನ್ನು ಮತ್ತು ಹಣವನ್ನು ಸಾಕಷ್ಟು ಬಳಸುತ್ತಿದೆ. ಆದರೆ ಇದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಭೆಗಳಲ್ಲಿ ಸೀಮಿತವಾಗಿವೆ ಹೊರತು ನಿಜರೂಪದಲ್ಲಿ ತಳಮಟ್ಟದಲ್ಲಿ ಅನುಷ್ಠಾನಗೊಳ್ಳದಿರುವುದೆ ನೋವಿನ ಸಂಗತಿ.

ಇದಕ್ಕೆ ಸೂಕ್ತ ಪರಿಹಾರ ಹುಡುಕುವಲ್ಲಿ ಮತ್ತು ಉದ್ಯೋಗ ಮಟ್ಟ ಹೆಚ್ಚಿಸುವಲ್ಲಿ ಸರ್ಕಾರಗಳು ಗಮನ ಹರಿಸುತ್ತಿವೆಯಾದರೂ ಅದು ಕೇವಲ ಅಲ್ಪ ಪ್ರಮಾಣದ್ದಾಗಿದೆ. ಆದರೆ ಕೆಲವು ದೇಶಗಳು  ‘ ಉದ್ಯಮಶೀಲತೆ ‘ ಯನ್ನು ಭರವಸೆಯ ಪರಿಹಾರವೆಂದು ಗುರುತಿಸಿವೆ. ಈ ಬಗ್ಗೆ ಪ್ರಚಾರವನ್ನು ಕೂಡ ಮಾಡುತ್ತಿವೆ. ಈ ಭರವಸೆ ಭಾರತದಲ್ಲಿ ಮೂಡುವುದು ಅನಿವಾರ್ಯವಾಗಿದೆ. ಆಗ ಮಾತ್ರ ಬೆಳೆಯುತ್ತಿರುವ ಯುವಜನ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಯು ಸಾಧ್ಯವಾಗಬಹುದು.

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಡಿಯಲ್ಲಿ ಹಲವು ಉದ್ಯಮಶೀಲತಾ ಯೋಜನೆಗಳನ್ನು ರೂಪಿಸಿಕೊಂಡಿವೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ “ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ”  ಸೃಷ್ಟಿಯಾಗಿರುವುದು. ಆದರೆ ಈ ಇಲಾಖೆ ಅಡಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸದರಿ ಇಲಾಖೆ ಸ್ವಲ್ಪ ಹಿಂದೆ ಉಳಿದಿವೆ. ಯೋಜನೆಗಳ ಮಾಹಿತಿ ಪ್ರತಿಯೊಬ್ಬ ಯುವ ಜನತೆಯನ್ನು ತಲುಪಬೇಕು. ಎಲ್ಲರಿಗೂ ಈ ಯೋಜನೆಗಳು ಸಲೀಸಾಗಿ ಕೈಗೆಟ್ಟುಕುವಂತೆ ಇರಬೇಕು. ಆಗ ಮಾತ್ರ ಯುವ ಜನತೆ ಹಾಗೂ ಉದ್ಯಮಶೀಲತೆಯ ನಡುವೆ ಇರುವ ಗೋಡೆ ಒಡೆಯುವುದು. ಉದ್ಯಮದ ಅಡಿಯಲ್ಲಿ ಉದ್ಯೋಗಿಗಳು ಸೃಷ್ಟಿಯಾಗುವುದು.

ಈ ಯೋಜನೆಗಳು ಮನೆ ಮನೆ ತಲುಪಬೇಕಾದರೆ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳು ಇಲಾಖೆಗಳೊಟ್ಟಿಗೆ ಕೈಜೋಡಿಸಬೇಕಿದೆ. ಈ ಯೋಜನೆಗಳು ಗ್ರಾಮ ಮಟ್ಟದಿಂದ ಅನುಷ್ಠಾನಗೊಳ್ಳಬೇಕು, ಯುವಜನತೆಯ ಉದ್ಯೋಗ ಬದುಕಿನ ಭಾಗವಾಗಿ ಈ ಯೋಜನೆಗಳು ಕೆಲಸ ಮಾಡಬೇಕಿದೆ. ಆಗ ಉದ್ಯಮಗಳ ಸೃಷ್ಟಿಯ ಜೊತೆಗೆ ದೇಶದ ಆರ್ಥಿಕತೆ ಕೂಡ ಏರಿಕೆಯಾಗುತ್ತದೆ.

ಈ ಅವಕಾಶಗಳ ಮಾಹಿತಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಗಳ ಸಮಯದಲ್ಲಿಯೇ ಯುವಜನತೆಗೆ ತಲುಪಬೇಕಿದೆ. ಕಾಲೇಜುಗಳಲ್ಲಿ ಉದ್ಯಮಶೀಲತಾ ಕೌಶಲ್ಯಗಳನ್ನು ಕಡ್ಡಾಯವಾಗಿ ಕಲಿಸಬೇಕಿದೆ. ವಿವಿಧ ಉದ್ಯಮಗಳ ಮಾಹಿತಿಗಳನ್ನು ತಿಳಿಸುವುದು ಉದ್ಯಮದ ಕುರಿತು ಸಕಾರಾತ್ಮಕ ಭಾವನೆಯನ್ನು ಯುವಜನರಲ್ಲಿ ಮೂಡಿಸುವುದು ಅನಿವಾರ್ಯವಾಗಿದೆ.

ಈ ಎಲ್ಲಾ ಕಾರ್ಯಗಳು ಉದ್ಯಮಶೀಲತೆಯ ಅಭಿವೃದ್ಧಿಗೆ ಪೂರಕವಾಗುತ್ತವೆ. ಇದೆಲ್ಲವೂ ಸಾಕಾರಗೊಂಡಾಗ ನಿರುದ್ಯೋಗಕ್ಕೆ ಉದ್ಯಮಶೀಲತೆ ಒಂದು ಸೂಕ್ತ ಪರಿಹಾರವಾಗಿ ಹೊರಹೊಮ್ಮುತ್ತದೆ. ಇದರಿಂದ ಯುವ ಜನತೆ, ಆರ್ಥಿಕತೆ ಹಾಗೂ ದೇಶದ ಅಭಿವೃದ್ಧಿ ಎಲ್ಲವೂ ಸರಾಗವಾಗುವ ಸಾಧ್ಯತೆ ಇದೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop