ಅಮ್ಮ ಅಮ್ಮ ನನ್ನಮ್ಮ
ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ
ಇರುಳಲಿ ಹೊಳೆಯುವ ಶಶಿ ತಾರೆಗಳು
ಹಗಲಲಿ ಕಾಣದೆ ಮರೆಯಾಗುವವು
ಸೂರ್ಯನು ಅವರ ನುಂಗುವನಂತೆ!
ಅಜ್ಜಿಯು ಹೇಳಿತು ಈ ಕಥೆಯ ನಿಜವೇನಮ್ಮ
ಅಮ್ಮ ಅಮ್ಮ ನನ್ನಮ್ಮ
ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ
ಕೇಳೋ ಕಂದ ನಿನ್ನ ಪ್ರಶ್ನೆಗೆ ನನ್ನ ಉತ್ತರವಿದು
ಹಗಲಲಿ ಸೂರ್ಯನ ಬೆಳಕಿನ ಹೊಳಪಿಗೆ
ಶಶಿ ತಾರೆಗಳು ಕಾಣುವುದಿಲ್ಲ
ಸೂರ್ಯನು ಅವರ ನುಂಗುವುದೂ ಇಲ್ಲ
ತಿಳಿದುಕೋ ಕಂದ, ಅಜ್ಜಿಗೆ ವಿಜ್ಞಾನ ಗೊತ್ತಿಲ್ಲ
ಪುಸ್ತಕ ಓದು, ಜ್ಞಾನವ ಬೆಳೆಸಿಕೊ
ಮೌಡ್ಯವ ನಂಬದಿರು ಎಲೆ ಕಂದ!
ತಿಳಿಯಿತು ಅಮ್ಮ
ಬೆಳಕಲಿ ಬೆಳಕಿಗೆ ಬೆಲೆ ಇಲ್ಲಾ
ಕತ್ತಲೆಯಲಿ ಕಿರು ಹಣತೆಗೂ ಬೆಲೆಯೆಂದು
ಅರಿತೆನು ನಾನಿoದು
ಅಜ್ಜಿಯು ಹೇಳಿತು ಕಟ್ಟು ಕಥೆಯನ್ನ
ನೀನು ಹೇಳಿದೆ ವಿಜ್ಞಾನವನ್ನ
ನಾ ಕಲಿತೆ ಇದರಿಂದ ಸುಜ್ಞಾನವನ್ನ
ಅಮ್ಮ ಅಮ್ಮ ನನ್ನಮ್ಮ ನೀನೆಂದರೆ ನನಗೆ ಅಚ್ಚುಮೆಚ್ಚಮ್ಮ.