ಮಲ್ಲಿಕಾರ್ಜುನ ಶೆಲ್ಲಿಕೇರಿ’ ಅವರು ‘ದೀಡೆಕರೆ ಜಮೀನು’ ಕಥಾಸಂಕಲನದ ಮೂಲಕ ಕನ್ನಡ ಕಥಾ ಲೋಕ ಪ್ರವೇಶಿಸಿ ಉತ್ತಮ ಕಥೆಗಾರ ಎಂಬ ಭರವಸೆಯನ್ನು ಹುಟ್ಟು ಹಾಕಿದ್ದಾರೆ. ಈ ಸಂಕಲನ ಭಾರತದ ಗ್ರಾಮ್ಯ ಬದುಕಿನ ಹಲವು ಮಗ್ಗಲುಗಳನ್ನು ಇಂದಿನ ಹೊಸ ಪೀಳಿಗೆಯ ಮುಂದೆ ಎಳೆಎಳೆಯಾಗಿ ಚಿತ್ರಿಸುತ್ತದೆ.ಹಾಸ್ಯಬರಹ, ಕವಿತೆ, ಲೇಖನಗಳು, ತನಗಗಳ ಮೂಲಕ ಸಾಹಿತ್ಯ ವಲಯದ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಇದೀಗ ಕತೆಗಾರರಾಗಿ ತಮ್ಮನ್ನ ಪರಿಚಯಿಸಿಕೊಂಡಿದ್ದಾರೆ.
ಕಥೆ ಎಂದೊಡನೆ ಎಲ್ಲರಿಗೂ ನೆನಪಾಗುವುದು ಅಜ್ಜಿ ಹೇಳುತಿದ್ದ ಜನಪದ ಕಥೆಗಳು, ಅಮ್ಮ ಹೇಳುತ್ತಿದ್ದ ಪೌರಾಣಿಕ ಕಥೆಗಳು, ಅಪ್ಪ ಹೇಳುತಿದ್ದ ಐತಿಹಾಸಿಕ ಕಥೆಗಳು ಇವೆಲ್ಲ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದನ್ನು ಮರೆಯುವಂತಿಲ್ಲ. ಕಾರಣ ಆ ಕಥೆಗಳಲ್ಲಿ ಬಳಸುತ್ತಿದ್ದ ಗ್ರಾಮ್ಯ ಶೈಲಿ ಹಾಗೂ ಕಥೆಗಳಲ್ಲಿ ಬರುತ್ತಿದ್ದಂತಹ ಕುತೂಹಲ ಹುಟ್ಟಿಸುವಂತಹ ಪಾತ್ರಗಳು ಹಾಗೂ ಸಂಭಾಷಣೆಗಳ ಸೃಷ್ಟಿ ಎನ್ನಬಹುದು. ಅಂತಹುದೇ ವಿಶಿಷ್ಟತೆಯನ್ನು ಒಳಗೊಂಡಿರತಕ್ಕಂತಹ ಈ ಕಥಾ ಸಂಕಲನ ‘ದೀಡೆಕರೆ ಜಮೀನು’ ಗ್ರಾಮೀಣ ಬದುಕಿನ ಸಂವೇದನೆಗಳನ್ನು, ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಶಕ್ತಿಯುತವಾಗಿ ಕಟ್ಟಿಕೊಡುವ ಮೂಲಕ ಹಳ್ಳಿ ಪರಿಸರ, ಗ್ರಾಮೀಣ ಬದುಕಿನ ಜನ ಜೀವನದ ಸಮಗ್ರ ಪರಿಚಯವನ್ನು ತುಂಬಾ ಸೂಕ್ಷ್ಮವಾದ ಎಳೆಗಳಲ್ಲಿ ಕುಸುರಿಗೈದಿದ್ದಾರೆ. ಅಂತಃಕರಣ ಪ್ರೀತಿ, ಪ್ರೇಮ, ಸ್ನೇಹ, ಸೌಹಾರ್ದತೆಗಳ ಮೂಲ ನೆಲೆಗಳು ಗ್ರಾಮಗಳಾಗಿದ್ದು ಮನುಜ ಸಂಬಂಧಗಳು ಮತ್ತು ನೈಜತೆಯನ್ನು ಸಂಕೇತಿಸುತ್ತಿದ್ದವು. ಆದರಿಂದು ಆಧುನಿಕತೆಯ ಪ್ರಭಾವ, ಜನರ ಅತಿಯಾದ ಲಾಲಸೆ, ಸ್ವಾರ್ಥಗಳು ಗ್ರಾಮೀಣರ ಬದುಕನ್ನ ಪ್ರಭಾವಿಸಿವೆ. ಇದರಿಂದ ಗ್ರಾಮೀಣ ಬದುಕಿನಲ್ಲಿ ಉಂಟಾದ ಸ್ಥಿತ್ಯಂತರಗಳನ್ನು ‘ದೀಡೆಕರೆ ಜಮೀನು’ಸಂಕಲನ ಪ್ರತಿನಿಧಿಸುತ್ತದೆ.
ನಗರಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ಹಳ್ಳಿಯ ಸಾಮಾನ್ಯ ಜನಜೀವನದ ಅರಿವಿರುವುದಿಲ್ಲ ಎಂಬ ಮಾತಿಗೆ ಅಪವಾದವೆಂಬಂತೆ ಶೆಲ್ಲಿಕೇರಿಯವರು ಸಾಮಾಜಿಕ ಸಂವೇದನೆಗಳಿಗೆ ಸ್ಪಂದಿಸಿರುವುದನ್ನು ಈ ಕಥಾ ಸಂಕಲನ ಗುರುತು ಮಾಡುತ್ತದೆ. ಇವು ಇವರು ಸಮಾಜ ಜೀವಿಯಾಗಿ ಸಮಾಜದ ನಡುವೆ ಜೀವಿಸಿದ್ದರ ಫಲಿತಗಳಾಗಿವೆ. ತಾನು ಹುಟ್ಟಿ ಬೆಳೆದ ಗ್ರಾಮ ಹಾಗೂ ಆ ಗ್ರಾಮದ ಜನರ ಸಂಕಟಗಳು, ಆರ್ತನಾದ ಗ್ರಾಮೀಣರ ಬದುಕಿನ ತಲ್ಲಣಗಳು, ಉಳಿವಿಗಾಗಿ ಹೋರಾಡುವ ಅವರ ಆತ್ಮಸ್ಥೈರ್ಯ, ಸಮುದ್ರದ ಅಲೆಗಳಂತೆ ಒಂದರ ಮೇಲೊಂದರಂತೆ ಎದುರಾಗುವ ಸಮಸ್ಯೆಗಳು ಮುಗ್ಧ ಜನರ ಬದುಕನ್ನು ಹೇಗೆಲ್ಲ ಮೂರಾಬಟ್ಟೆ ಆಗಿಸುತ್ತವೆಂಬ ಅರಿವು ಮೂಡಿಸುವ ಕಥೆಗಳು ಚಿಂತನಾಶೀಲವಾಗಿ ಮೂಡಿಬಂದಿವೆ. ಓದುವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಹುಟ್ಟು ಹಾಕುತ್ತವೆ. ಸಮಾಜ ವಿರೋಧಿ ಚಟುವಟಿಕೆಗಳು ಹಂಗಿಲ್ಲದೆ ನಿರಾತಂಕವಾಗಿ ಸಾಗಿ ಬರುತ್ತಿರುವ ಬಗ್ಗೆ ಕಥೆಗಾರರ ಹೃದಯ ಆತಂಕಗೊಂಡಿದೆ.
ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ
ಇಲ್ಲಿನ ಕಥೆಗಳು ತಲೆಮಾರುಗಳ ಪರಂಪರೆಯನ್ನು ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳನ್ನು ಬಿಚ್ಚಿಡುತ್ತಾ ಅಲ್ಲಿ ನಡೆಯುವ ದುರಂತಗಳನ್ನ ಸೆರೆಹಿಡಿಯುತ್ತವೆ. ಬಹಳ ಮುಖ್ಯವಾಗಿ ನಗರ ಜೀವನದ ಒತ್ತಡಗಳಲ್ಲಿ ಸಿಲುಕಿ ಸಂಘರ್ಷದ ಬದುಕು ಸಾಗಿಸುವ ಜನರಿಗೆ ಹಳ್ಳಿಗಳ ವಾತಾವರಣ, ಸಾಮಾಜಿಕ ಆಚರಣೆಗಳು, ನಿಸರ್ಗದ ರಮ್ಯ ನೋಟ ಓದುಗರಿಗೆ ಹೃದ್ಯವಾಗುತ್ತವೆ. ಹಳ್ಳಿಗಳು ಎದುರಿಸುವ ಸವಾಲುಗಳ ಸರಮಾಲೆಯನ್ನೇ ದೀಡೆಕರೆ ಜಮೀನು ಸರಣಿಯೋಪಾದಿಯಲ್ಲಿ ಬಿತ್ತರಿಸುತ್ತದೆ. ಗ್ರಾಮೀಣ ಭಾಗಗಳಲ್ಲಿ ಜನರು ಜಾನುವಾರುಗಳು ಪಡುವ ರೋದನೆ, ಯಾತನಮಯ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ದೃಶ್ಯಕಾವ್ಯ ರೂಪದಲ್ಲಿ ಅನಾವರಣಗೊಂಡಿವೆ. ಹಳ್ಳಿಗಳಲ್ಲಿ ಗೌಡಿಕೆ, ಪಂಚಾಯಿತಿ ಕಟ್ಟೆಗಳು ಆಡಳಿತ ಯಂತ್ರಗಳಾಗಿದ್ದು ಅವು ನ್ಯಾಯಯುತವಾಗಿ ತಮ್ಮ ಹಳ್ಳಿಗಳ ವ್ಯಾಜ್ಯಗಳನ್ನು ತೀರ್ಮಾನಿಸುತ್ತಿದ್ದವು. ಆದರೆ ಅಲ್ಲೂ ಕೂಡ ಅಪ್ರಮಾಣಕತೆ ಪಕ್ಷಪಾತಗಳು ನುಸುಳಿ ನ್ಯಾಯ ಬಲಿಷ್ಠರ ಪರವಾಗಿಯೂ ಆಗುತ್ತಿತ್ತು ಎಂಬ ಅಂಶವನ್ನು ಕಥೆಗಾರರು ಮುನ್ನಲೆಗೆ ತರುವ ಮೂಲಕ ಭ್ರಷ್ಟತೆ ಹಿಂದೆಯೂ ಇತ್ತು, ಇಂದು ಇದೆ ಮುಂದೆಯೂ ಇದ್ದು ತನ್ನ ಕರಾಳ ಛಾಯೆ ಬೀರುತ್ತದೆ ಎಂಬ ಕಹಿ ಸತ್ಯವನ್ನು ದಾಖಲಿಸಿದ್ದಾರೆ.
ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರಿಗೆ ಭಾಷಾ ಹಿಡಿತ ಚೆನ್ನಾಗಿ ಸಿದ್ಧಿಸಿದ್ದು , ನಿರಾಯಾಸವಾಗಿ ಅಷ್ಟೇ ಸುಲಲಿತವಾಗಿ ಕಥಾ ನಿರೂಪಣೆ ಮಾಡಿದ್ದಾರೆ. ಪಾತ್ರಗಳ ಸೃಷ್ಟಿಯಲ್ಲಿ ಚಮತ್ಕಾರಿಕೆ ಮೆರೆದಿದ್ದಾರೆ. ಇಲ್ಲಿರುವ ಕಥೆಗಳು ಪ್ರಬಂಧ ಮಾದರಿಯ ನಿರೂಪಣೆಗೆ ಸಿಲುಕದೆ, ಸಂಭಾಷಣೆಗಳ ರೂಪದಲ್ಲಿ ಗಟ್ಟಿಯಾಗಿ ಜೀವ ತಳೆದಿವೆ. ಅಪ್ಪಟ ದೇಸಿ ಭಾಷೆಯಲ್ಲಿ ಸೊಗಸಾಗಿ ಹೇಳಿದ ಕಥೆಗಳು ಓದುಗರನ್ನು ಬಹುಬೇಗ ಸೆಳೆಯುತ್ತವೆ. ಶೆಲ್ಲಿಕೇರಿ ಅವರ ಕಥೆಗಳು ಏಕಮುಖವಾಗಿ ಸಾಗದೆ ಅಲ್ಲಲ್ಲಿ ರೋಚಕ ತಿರುವುಗಳನ್ನು ಪಡೆದುಕೊಂಡು ಓದುಗರ ಕುತೂಹಲ ಸೃಷ್ಟಿಸಿ ಮುಂದಿನ ಓದಿಗಾಗಿ ಅವರನ್ನು ಆವರಿಸಿಕೊಳ್ಳುತ್ತವೆ. ಅಂತಹ ಗುಣಗಳನ್ನು ಕಥೆಗಳು ಧಾರಣೆ ಮಾಡಿಕೊಂಡರೇ ಓದುಗ ಕಥೆಯನ್ನು ಊಹಿಸಲು ಸಾಧ್ಯವಾಗದೇ ಕಥೆಯು ಹೊಸ ಅಂಶದೊಂದಿಗೆ ಎದುರಾಗುತ್ತವೆ. ಆಗ ಓದುಗನಿಗೆ ನವ ನಾವಿನ್ಯತೆ ದೊರೆಯುತ್ತದೆ. ಅಂಥ ಜಾಣ್ಮೆಯನ್ನು ಕಥೆಗಾರರಿಲ್ಲಿ ಬಳಸಿಕೊಂಡಿದ್ದಾರೆ. ಈ ಸಂಕಲನದಲ್ಲಿ ಕಲ್ಪಿತ ಕಥೆಗಳಿಗಿಂತ ವಾಸ್ತವಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿ ಅನುಭವ ಜನ್ಯ ಕಥೆಗಳಿಗೆ ಕಥೆಗಾರರು ಹೊರಳಿದ್ದಾರೆ. ಸಂಸ್ಕೃತಿಯ ನೆಲೆಗಳ ಜಾಡನ್ನು ಶೋಧಿಸಿ ಈ ನೆಲದ ಕಸುವು, ನಡವಳಿಕೆಗಳನ್ನು ಪರಾಮರ್ಶಿಸಿದ್ದಾರೆ.
ವಿಮರ್ಶಕಿ ಅನುಸೂಯ ಯತೀಶ್
ಕಥಾ ರಚನೆಯಿಂದ ಎಲ್ಲರಿಗೂ ಅನ್ವಯವಾಗುವ ಯಾವುದೋ ಒಂದು ಸಾರ್ವತ್ರಿಕವಾದ ಆ ಕಥಾ ಶೈಲಿ ಇರುವುದಿಲ್ಲ. ಪ್ರತಿ ಕಥೆಗಾರನು ತನ್ನದೇ ಆದ ಹೊಸ ಶೈಲಿಯನ್ನ ರೂಡಿಸಿಕೊಳ್ಳುತ್ತಾನೆ. ಆ ಶೈಲಿ ಓದುಗರ ಹೃದಯವನ್ನು ಎಷ್ಟರಮಟ್ಟಿಗೆ ಸೆಳೆಯುತ್ತದೆ ಎನ್ನುವುದರ ಆಧಾರದ ಮೇಲೆ ಕಥಾಲೋಕದಲ್ಲಿ ಅವನ ನೆಲೆ ನಿರ್ಧಾರವಾಗುತ್ತದೆ. ಆ ದೃಷ್ಟಿಯಲ್ಲಿ ಮಲ್ಲಿಕಾರ್ಜುನ ಅವರು ತನ್ನ ನೆಲದ ಆಡುಭಾಷೆಯನ್ನು ಕಥೆಗೆ ಬಳಸಿಕೊಂಡಿದ್ದಾರೆ. ಸಮಾಜದ ಅಗತ್ಯತೆ ಮತ್ತು ಪ್ರಸಕ್ತ ಕಾಲಮಾನಕ್ಕೆ ಹೊಂದಿಕೊಳ್ಳುವಂತಹ ಕಥೆಗಳನ್ನು ರಚಿಸುವಲ್ಲಿ ತಮ್ಮ ಪ್ರಾವೀಣ್ಯತೆ ತೋರಿದ್ದಾರೆ. ಕಥಾ ರಚನೆಯಲ್ಲಿ ಎಲ್ಲಿಯೂ ಅತಿರೇಖವಾಗಲಿ, ಉಡಾಫೆಯಾಗಲಿ ಕಂಡುಬರುವುದಿಲ್ಲ. ಸೂಕ್ಷ್ಮಜ್ಞತೆಯಿಂದ ತೀಕ್ಷ್ಣವಾದ ಶಬ್ದ ಭಂಡಾರ ಸೇರಿಸಿ ಅಂತರ್ಮುಖಿಯಾದ ಭಾವ ಅಭಿವ್ಯಕ್ತಿ ಮೂಲಕ ಜನರ ಅಪೇಕ್ಷೆಗಳಿಗೆ ಪೂರಕವಾಗಿ ಕಥೆ ಬರೆಯಲು ತಮ್ಮ ಲೇಖನಿಯನ್ನ ಪ್ರಾಮಾಣಿಕವಾಗಿ ದುಡಿಸಿಕೊಂಡಿದ್ದಾರೆ.
ನಗರಗಳ ಜನ ಜೀವನದಂತೆ ಇಂದು ಹಳ್ಳಿ ಬದುಕು ಯಾಂತ್ರಿಕತೆ ಮತ್ತು ತೋರಿಕೆಯ ಮೈದಾನಗಳಾಗುತ್ತಿರುವುದು ವಿಪರ್ಯಾಸವಾಗಿದೆ. ರಾಜಕೀಯ ಹಿತಾಸಕ್ತಿಗಳು ಸಾಮಾಜಿಕ ಬದುಕನ್ನು ಪ್ರವೇಶಿಸಿ, ದ್ವಂದ್ವ ವಾತಾವರಣ ನಿರ್ಮಿಸಿ, ಅಲ್ಲಿ ಆತಂಕ ಕಲಹಗಳನ್ನು ತಂದಿಟ್ಟು ತಮ್ಮ ಕಾಯಕ ಸಾಧಿಸಿಕೊಳ್ಳುವ ಭಟ್ಟಂಗಿಗಳ ಮುಖವಾಡವನ್ನು ಕಳಚುವಂತಹ ಕಥೆಗಳು ಈ ಹೊತ್ತಿಗೆಯ ಪ್ರಮುಖ ಅಂಶಗಳಾಗಿವೆ. ಹಳ್ಳಿಯಲ್ಲಿ ನಡೆಯುವ ಕಿರು ಪ್ರಹಸನಗಳು ನಿರಾಸೆಯ ಪಸೆ ಮೂಡಿಸಲು ಅರಿವಿಲ್ಲದೆ ಕಾರಣವಾಗುತ್ತವೆ.
ರೈತರ ಜೀವನದ ನೋವು, ಹತಾಶೆ, ಸಂಕಟಗಳಿಗೆ ಮನುಷ್ಯರಷ್ಟೇ ಕಾರಣರಲ್ಲ. ಅವನು ತೋರುವ ವಿಕೃತಿಯ ಪರಿಣಾಮವಾಗಿ ಪ್ರಕೃತಿಯು ಕೂಡ ಮನುಕುಲದ ಮೇಲೆ ಆಗಾಗ ಮುನಿಸು ತೋರುತ್ತದೆ. ಅದರ ಫಲಿತಾಂಶವೇ ಪ್ರವಾಹ ಬರಗಾಲದಂತಹ ವಿಕೋಪಗಳು ಇವು ಜನರನ್ನ ದಹನೀಯ ಸ್ಥಿತಿಗೆ ಹೇಗೆ ಕೊಂಡೊಯ್ಯುತ್ತವೆ ಎನ್ನುವುದನ್ನು ಮನ ಮಿಡಿಯುವಂತೆ ಕಥಾನಕವಾಗಿಸಿದ್ದಾರೆ. ಕಳೆದು ಹೋಗುತ್ತಿರುವ ಗ್ರಾಮೀಣ ಜನ ಜೀವನದ ಪದರುಗಳನ್ನು ಒಂದೊಂದೇ ಬಿಡಿಸಿ ಆಧುನಿಕ ಮತ್ತು ನಗರ ಜೀವನದ ಶೈಲಿಯೊಂದಿಗೆ ಸಮೀಕರಿಸಿ ಹಳ್ಳಿಗಾಡಿನ ಜನರ ಕಷ್ಟ ಸಹಿಷ್ಣತೆಯನ್ನು ಆರ್ದ್ರತಾಭಾವದಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ ಹೋರಾಟದ ಸನ್ನಿವೇಶಗಳನ್ನು ಘಟನೆಗಳನ್ನು ಕಥೆಗೆ ಪೂರಕವಾಗಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಇಂದಿನ ಪೀಳಿಗೆಗೆ ಅಂದಿನ ಹೋರಾಟಗಾರರ ಬದುಕು, ಧೈರ್ಯ, ಶೌರ್ಯ, ತ್ಯಾಗ, ದೇಶಭಕ್ತಿ, ರಾಷ್ಟ್ರ ಪ್ರೇಮಗಳ ಪರಿಚಯವನ್ನು ಮಾಡಿಸುವ ಮೂಲಕ ಪಡೆದಂತಹ ಸ್ವಾತಂತ್ರವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಗ್ರಾಮವಾಸಿಗಳನ್ನು ಅತಿಯಾಗಿ ಕಾಡುತ್ತಾ ರೌರವ ನರಕ ಸೃಷ್ಟಿಸುವ ಜೀತ ಪದ್ಧತಿ, ಊಳಿಗಮಾನ್ಯ ಪದ್ಧತಿಗಳ ಕರಾಳದರ್ಶನ ಮಾಡಿಸುವ ಕಥೆಗಳು ಸಾಮಾಜಿಕ ಬದುಕಿನ ಅನಿಷ್ಠಗಳನ್ನು ಕಟುವಾಗಿ ಟೇಕಿಸುತ್ತವೆ. ಬಹಳ ಮುಖ್ಯವಾಗಿ ಜಾತಿ ಮತ ಭೇದ ಮೇಲು ಕೀಳೆಂಬ ಭಾವ ಬಡವ ಬಲ್ಲಿದ, ಸಾಹುಕಾರ, ಕೂಲಿಗಾರ ,ಗೌಡ, ಆಳು ಎಂಬ ತಾರತಮ್ಯಗಳು ಜನ ಮಾನಸದಲ್ಲಿ ಆಳವಾದ ಕಂದಕ ನಿರ್ಮಿಸಿ ತಮ್ಮ ಪ್ರಾಬಲ್ಯ ಮೆರೆಯುತ್ತಾ ಮನುಷ್ಯತ್ವ ಮತ್ತು ಮಾನವೀಯತೆಗಳಿಗೆ ಎಳ್ಳು ನೀರು ಬಿಟ್ಟು ಮೃಗೀಯ ವರ್ತನೆ ತೋರುತ ಸಾಮಾಜಿಕ ಜೀವನದಲ್ಲಿ ಇರುವ ಶಾಂತಿಯನ್ನು ಕದಡಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತವೆ ಎಂಬುದನ್ನ ಅತ್ಯಂತ ಸೂಕ್ಷ್ಮವಾಗಿ ನವಿರಾದ ಎಳೆಗಳಲ್ಲಿ ಚಿತ್ರಿಸಿದ್ದಾರೆ.
ದೀಡೆಕರೆ ಜಮೀನು ಕಥಾ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿದ್ದು ಮುಂಬೈ ಕರ್ನಾಟಕದ ಬದುಕು ಮತ್ತು ಭಾಷೆಯ ಪ್ರಭಾವವು ಇವುಗಳಲ್ಲಿ ವಿಳಿತವಾಗಿದೆ. ಆಲದ ಮರ, ಬಜ್ಜಿ ಅಂಗಡಿ ಮಲ್ಲಕ್ಕ, ದೀಡೆಕರೆ ಜಮೀನು, ತಲ್ಲಣ, ಮಹಾಪೂರ, ತಪ್ದಂಡ, ದಿವ್ಯ ಮೌನದ ಸಂತ ಮತ್ತು ಋಣಮುಕ್ತ ಕಥೆಗಳು ಸಂಪೂರ್ಣವಾಗಿ ಗ್ರಾಮೀಣ ಜನ ಜೀವನವನ್ನು ಹೊತ್ತು ತಂದಿವೆ. ಇಲ್ಲಿನ ಕಥೆಗಳು ಪ್ರಾಕೃತಿಕ ವಿಶಿಷ್ಟತೆ ಮತ್ತು ಪ್ರಾದೇಶಿಕ ವಿಭಿನ್ನತೆಯ ದೃಷ್ಟಿಯಿಂದ ಹೊಸತನ ಹಾಗೂ ತಾಜಾತನವನ್ನು ಮೆರೆದಿವೆ. ಭೂತಕಾಲದ ಸಂಗತಿಗಳನ್ನು ವರ್ತಮಾನದ ವಾಸ್ತವೀಕತೆಗಳೊಂದಿಗೆ ಜೋಡಿಸಿ ಅತ್ಯಂತ ಜಾಣ್ಮೆಯಿಂದ ಕುಶಲಮತಿಯಾಗಿ ಕಥೆಗಳನ್ನು ಹೆಣೆದು ಸಾರ್ವತ್ರಿಕ ಗುಣವನ್ನು ಪ್ರತಿನಿಧಿಸುವಂತೆ ಕತೆಗಳಿಗೆ ಜೀವ ತುಂಬಿದ್ದಾರೆ. ಶೆಲ್ಲಿಕೇರಿ ಅವರ ಕಥಾ ವಸ್ತುಗಳು ಬಹಳ ಆಕರ್ಷಕವಾಗಿದ್ದು ಇಂದಿನ ಕಾಲಘಟ್ಟದಲ್ಲಿ ಎಲ್ಲ ಓದುಗರಿಗೆ ಬೇಕಾಗಿರುವ ಸಂಗತಿಗಳನ್ನು ಗರ್ಭಿಕರಿಸಿಕೊಂಡು ಓದುಗರೆದೆಯಲ್ಲಿ ಚಿರಕಾಲ ಉಳಿಯುವಂತಹ ಲಕ್ಷಣಗಳನ್ನು ಹೊಂದಿರುವುದು ವಿಶಿಷ್ಟವಾಗಿದೆ. ಬಹಳ ಮುಖ್ಯವಾಗಿ ಇಲ್ಲಿನ ಕಥೆಗಳು ಮನುಜನ ಬಾಳಿಗೆ ಅತಿ ಅಮೂಲ್ಯವಾದ ಜೀವನ ಪ್ರೀತಿಯನ್ನು, ಮೌಲ್ಯವನ್ನು, ಸಂಸ್ಕಾರ ಸಂಸ್ಕೃತಿಗಳನ್ನು ಒಂದು ನಿಷ್ಕಲ್ಮಶ ಚೌಕಟ್ಟಿನಲ್ಲಿ ಬಂಧಿಸುವ ಸಾಹಸಕ್ಕಿಳಿದಿದ್ದಾರೆ. ನಮ್ಮ ದೇಶ ಹಳ್ಳಿಗಳ ತವರೂರು ಕೃಷಿ ಬಹುಜನರ ಜೀವನೋಪಾಯವಾಗಿದ್ದರು ಅಂದಿನಿಂದ ಇಂದಿನವರೆಗೂ ಗ್ರಾಮೀಣರ ಬದುಕು ನಿರ್ಲಕ್ಷಕ್ಕೊಳಪಟ್ಟು ಅವರ ಪ್ರಗತಿ ಮರೀಚಿಕೆಯಾಗಿ ಉಳಿದಿರುವುದು ವಿಪರ್ಯಾಸದ ಸಂಗತಿಯೇ ಸರಿ. ಅಂತಹ ಜನರ ಮನೋಗತವನ್ನು ಅತ್ಯಂತ ಸುಂದರವಾಗಿ ಚಿತ್ರಿಸುವಲ್ಲಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಬದ್ಧತೆಯನ್ನು ತೋರಿಸಿದ್ದಾರೆ.
ದೀಡೆಕರೆ ಜಮೀನು ಕಥಾ ಸಂಕಲನದ ಅಕ್ಕಡಿ ಸಾಲುಗಳನ್ನು ಹೊಕ್ಕಾಗ ಬರಹಗಾರರು ಕ್ರಮಿಸಿದ ದಾರಿ, ಆಶಯಗಳು, ಹಂಬಲಗಳು, ಕನಸುಗಳು, ದಕ್ಕಿದ ಅನುಭವಗಳು ಕಾಲಂತರಗಳಿಂದ ಊರಿನ ಪಂಚಾಯಿತಿ ಕಟ್ಟೆಯಾಗಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದ್ದ ಆಲದಮರ ರಾಜಕೀಯ ದೊಂಬರಾಟಕ್ಕೆ ಬಲಿಯಾಗಿ ನೆಲಕ್ಕುರುಳಿಸುವ ಷಡ್ಯಂತ್ರದ ಪ್ರಯತ್ನಗಳು ಮರದ ಬೇರುಗಳು ಸಡಿಲವಾಗುತ್ತಿವೆ ಎಂಬ ಸಂದೇಶವನ್ನು ಮಾತ್ರ ನೀಡದೆ ನಮ್ಮ ಸಂಸ್ಕೃತಿ ಸಂಸ್ಕಾರ ಪರಂಪರೆಗಳು ನೆಲ ಸಮವಾಗುತ್ತಿದೆ ಎಂಬ ಎಚ್ಚರಿಕೆಯನ್ನು ನೀಡುತ್ತವೆ. ತಮ್ಮ ಸ್ವಾರ್ಥ ಸಾಧನೆಗಾಗಿ ಊರಿನ ಪಂಚಾಯಿತಿ ಚೇರ್ಮನ್ ಆಲದ ಮರ ಕಡಿದು ಮಂಗಳ ಭವನ ಕಟ್ಟುವ ಪಿತೂರಿ ಅತ್ಯಂತ ನಿರಾಶೆ ಮತ್ತು ಅಸಹಾಯಕತೆಯ ಭಾವದಲ್ಲಿ ಮೂಡಿಬಂದಿದೆ.
ದೀಡೆಕರೆ ಜಮೀನು ಕಥಾ ಸಂಕಲನದ ಪ್ರಥಮ ಕಥೆ ಆಲದ ಮರ. ಈ ಆಲದ ಮರವನ್ನು ಪರಂಪರೆಯ ಬೇರಿನ ಪ್ರತೀಕವಾಗಿ ಬಳಸಿಕೊಂಡಿದ್ದಾರೆ. ಈ ಕಥೆ ಸ್ವಾರ್ಥಿಗಳು ಮತ್ತು ನಿಸ್ವಾರ್ಥಿಗಳ ನಡುವಿನ ಸಂಘರ್ಷವನ್ನು ತೆರೆದಿಡುತ್ತದೆ. ಇಲ್ಲಿ ಕಥೆಗಾರರು ಸ್ವಾತಂತ್ರ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಆಲದಮರ ಹೋರಾಟಗಾರರಿಗೆ ರಕ್ಷಣೆ ನೀಡಿದ ಘಟನೆಯನ್ನು ಇದರೊಂದಿಗೆ ಬೆಸೆದಿದ್ದಾರೆ. ಇಲ್ಲಿ ಪರಪಜ್ಜ ಮತ್ತು ಆಲದ ಮರವು ಪರಂಪರೆಯ ಪ್ರತೀಕಗಳಾಗಿದ್ದರೆ ಪಂಚಾಯಿತಿ ಅಧ್ಯಕ್ಷ ಪಂಚಾಕ್ಷರಿ ರಾಜಕೀಯ ನಾಯಕರ ಸ್ವಾರ್ಥ ಅಧಿಕಾರ ದರ್ಪವನ್ನು ಸಂಕೇತಿಸುತ್ತಾನೆ. ಊರಿನ ನ್ಯಾಯ ತೀರ್ಮಾನ ಮಾಡುತ್ತಾರೆ ಊರಿಗೆ ನೆರಳಾಗಿತ್ತು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತಾವಂದುಕೊಂಡ ಕಾರ್ಯ ಸಾಧಿಸಲು ಜನರನ್ನು ಮರಳು ಮಾಡುವ ತಂತ್ರಗಳನ್ನು ಈ ಕಥೆಯಲ್ಲಿ ಹೇಳುತ್ತಿದ್ದಾರೆ. ಆಲದ ಮರವನ್ನು ಕಡಿದು ಅಲ್ಲಿ ಮಂಗಳ ಭವನ ಕಟ್ಟಿಸುವ ಹುನ್ನಾರ ರಾಜಕೀಯ ಮೇಲಾಟವನ್ನು ಪ್ರತಿನಿಧಿಸುತ್ತದೆ. ನಂತರವೂ ಆಲದ ಮರ ಪಂಚಾಕ್ಷರಿಯ ಕುತಂತ್ರದಿಂದ ಪಂಚಾಯಿತಿ ಪರವಾನಿಗೆ ಪಡೆದು ನೆಲಕ್ಕುರುಳಿಸುವ ಪ್ರಯತ್ನಗಳು ವಕೀಲ ಹಾಗೂ ಪರಪ್ರಜ್ಜನ ಅನುಯಾಯಿ ವಿಶ್ವ, ಶಂಕರರಂತಹ ನವಪೀಳಿಗೆಯ ಪ್ರಯತ್ನದಿಂದ ತಡೆಯಾಜ್ಞೆ ತಂದರೂ,ಮರ ಕಡಿಯುವ ಪ್ರಯತ್ನ ಗಳ ಮೂಲಕ ಪರಂಪರೆಯ ಬೇರುಗಳು ಸಡಿಲಗೊಳ್ಳುವ ಸಾಂಕೇತಿಕವಾಗಿದೆ.
ಈ ಸಂಕಲನದ ಎರಡನೆ ಕಥೆ ಭಜಿ ಅಂಗಡಿ ಮಲ್ಲಕ್ಕ ಸಂಪೂರ್ಣವಾಗಿ ಸ್ತ್ರೀ ಸಂವೇದನೆಗಳನ್ನು ಒಳಗೊಂಡಿದೆ. ಹೆಣ್ಣು ಗರ್ಭದಲ್ಲಿ ಇರುವಾಗಿಂದ ಗೋರಿಯವರೆಗೂ ಕಷ್ಟ ನೋವು ಶೋಷಣೆ ಅಸಡ್ಡೆ ತಿರಸ್ಕಾರಗಳನ್ನು ಹೊದ್ದೆ ಬದುಕುತ್ತಾಳೆಂಬ ಕಥೆಗಾರರ ವಿಷಾದ ಭಾವವನ್ನು ಈ ಕಥೆ ತೆರೆದಿಡುತ್ತದೆ. ಬಡತನ ಹೆಣ್ಣು ಮಕ್ಕಳ ಜೀವನಕ್ಕೆ ಅದೆಷ್ಟು ಮಾರಕ ಎಂಬ ಎಂಬುದಕ್ಕೆ ಈ ಕಥೆಯು ಸಾಕ್ಷಿಯಾಗುತ್ತದೆ. ಮಲ್ಲಕ್ಕ ತನ್ನ ಬಡತನದ ಕಾರಣದಿಂದ ಗಂಡು ಸಿಗದೇ ಕುಡುಕನ ತಾಳಿಗೆ ಕೊರಳು ನೀಡುವ ಮೂಲಕ ತನ್ನ ಭವಿಷ್ಯಕ್ಕೆ ಉರುಳು ಹಾಕಿಕೊಳ್ಳಬೇಕಾಗುತ್ತದೆ. ಮುಂದೆ ಅವನ ಸಾವಿನ ನಂತರದ ಘಟನೆಗಳು ಮೈ ಕುದಿಯುವಂತೆ ಮೂಡಿ ಬಂದಿವೆ. ಕಥೆಗಾರರು ಮಲ್ಲಕ್ಕನ ಅಂಗಡಿ ಸುಟ್ಟು ಭಸ್ಮವಾಗುವ ಘಟನೆಯೊಂದಿಗೆ ಕಥೆ ಪ್ರಾರಂಭಿಸಿ ಅವಳ ಭೂತಕಾಲದ ಕಥೆ ಸುರಳಿಯನ್ನು ನಂತರ ಬಿಚ್ಚಿಡುತ್ತಾ ಹೋಗಿದ್ದಾರೆ. ಓದುವರಲ್ಲಿ ಕುತೂಹಲ ಕಾಪಿಟ್ಟುಕೊಂಡು ಓದಿಸಿಕೊಳ್ಳಲು ಈ ತಂತ್ರ್ಯ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ತುಂಬು ಯೌವ್ವನದ ದಿನಗಳಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣಿನ ಒಬ್ಬಂಟಿ ಬದುಕಿನ ಹೋರಾಟಗಳನ್ನು ಮನ ಮಿಡಿಯುವಂತೆ ಚಿತ್ರಿಸಿದ್ದಾರೆ. ಗಂಡ ಸತ್ತ ಮೇಲೆ ಕ್ರೂರ ಕಾಮುಕ ಪಿಶಾಚಿಗಳ ಕೆಟ್ಟ ದೃಷ್ಟಿ ಅವಕಾಶವಾದಿತನ ಯಾತನೆ ಅಭದ್ರತೆ ಸಂಕಟಗಳು ಕಣ್ಣೀರ ದಾರಿಯನ್ನೇ ಹರಿಸುತ್ತವೆ. ನಮ್ಮ ಸಮಾಜದಲ್ಲಿ ಇನ್ನೂ ಮನುಷ್ಯತ್ವ ಉಳಿದಿದೆ ಸ್ತ್ರೀ ಕಾಳಜಿ ಮತ್ತು ಅವಳ ಏಳಿಗೆಗೆ ಶ್ರಮಿಸುವ ಮನಸ್ಸುಗಳಿವೆ ಎಂಬುದಕ್ಕೆ ಊರಿನ ಮುಖಂಡರು ನೆರೆಹೊರೆಯವರ ಪಾತ್ರಗಳ ಮೂಲಕ ಸಕಾರಾತ್ಮಕ ನೆಲೆಯಲ್ಲಿ ಚಿತ್ರಿಸಿದ್ದಾರೆ. ಮಲ್ಲಕ್ಕ ಗಂಡನ ಮರಣ ನಂತರ ತನ್ನೊಡಲ ಕೂಸೊಂದನ್ನು ಬೆನ್ನಿಗೆ ಕಟ್ಟಿಕೊಂಡು ಈ ಸಮಾಜವನ್ನು ಎದುರಿಸಿ ತನ್ನ ಬದುಕನ್ನ ಕಟ್ಟಿಕೊಳ್ಳುವ ದೃಶ್ಯ ಹೆಮ್ಮೆಯನ್ನು ಮೂಡಿಸುತ್ತವೆ. ಈ ಸಮಾಜದ ಕೆಟ್ಟ ಸಂಪ್ರದಾಯಗಳು ಬಂಧನದ ಸಂಕೋಲೆಗಳಿಂದ ಕಳಚಿಕೊಂಡು ಬದುಕುವ ಮಲ್ಲಕ್ಕ ಇಡೀ ಕುಲಕ್ಕೆ ಮಾದರಿಯಾಗಿ ನನ್ನ ಅಸ್ಮಿತೆಯನ್ನು ತೋರಿದ್ದಾಳೆ. ಸ್ತ್ರೀ ಸಂವೇದನೆಗಳನ್ನು ಅತ್ಯಂತ ಸೂಕ್ಷ್ಮಜ್ಞತೆಯಿಂದ ಭಾವಪೂರ್ಣವಾಗಿ ಕಥೆ ಕಟ್ಟುವಲ್ಲಿ ಶೆಲ್ಲಿಕೇರಿಯವರ ನಿರೂಪಣೆ ಗಮನ ಸೆಳೆಯುತ್ತದೆ. ಮಲ್ಲಕ್ಕನಿಗೆ ಎದುರಾದ ಪ್ರತಿಯೊಂದು ಸವಾಲು ಅವಳನ್ನು ಅಧೀರಳನ್ನಾಗಿ ಮಾಡದೆ ಅವಳನ್ನು ಮತ್ತಷ್ಟು ಮಗದಷ್ಟು ಗಟ್ಟಿಗೊಳಿಸುತ್ತದೆ. ಆತ್ಮವಿಶ್ವಾಸ ಮತ್ತು ಛಲ ಬಿಡದೆ ನೆಲೆಯಲ್ಲಿ ಆಧುನಿಕ ಸ್ಪರ್ಶ ನೀಡಿ ಚಿತ್ರಿಸಿದ್ದಾರೆ.
ದೀಡೆಕರೆ ಜಮೀನು ಸಂಕಲನದ ಶೀರ್ಷಿಕೆಯ ಕಥೆಯಾಗಿದ್ದು , ದೀಡೆಕರೆ ಎಂಬ ಪದ ಉತ್ತರ ಕರ್ನಾಟಕದ ಮಂದಿಗೆ ತಿಳಿದಿದ್ದರು ಇದು ದಕ್ಷಿಣಕ್ಕೆ ಹೊಸ ಪರಿಚಯ ಎನ್ನಬಹುದು. ಹಿಂದಿನ ಮುಂಬೈ ಕರ್ನಾಟಕ ಅಥವಾ ಇಂದಿನ ಕಿತ್ತೂರ ಕರ್ನಾಟಕ ಭಾಗದಲ್ಲಿ ಶಾಹಿ ರಾಜವಂಶಗಳ ಪ್ರಭಾವದಿಂದ ಪರ್ಸಿಯನ್, ಹಿಂದಿ ಹಾಗೂ ಇತ್ತೀಚಿನ ಮರಾಠಿ ಭಾಷೆಗಳ ಪ್ರಭಾವದ ಪರಿಣಾಮವಿದು. ಹಳ್ಳಿಯ ರೈತರು ಆ ಭಾಷೆಗಳ ಪದಪ್ರಯೋಗ ಈಗಲೂ ಮಾಡುತ್ತಾರೆ. ದೀಡ್, ಪೀಸಿಬಿ,ಢಾಯಿ, ಬಾರಾ, ಅಕ್ರಾ, ಸಾತ್ ,ಖೂನ್, ಪಸೀನಾ, ಹೀಗೆ ಲೆಕ್ಕವಿಲ್ಲದಷ್ಟು ಪದಗಳ ಬಳಕೆ ಇದೆ. ಕಥೆಗಳಲ್ಲಿ ಉತ್ತರ ಕರ್ನಾಟಕದ ಅಸ್ಮಿತೆ ಇರಲಿ ಎಂಬ ಕಾರಣಕ್ಕೆ ಅವುಗಳನ್ನು ಬಳಸಿದ್ದಾರೆ.
ಈ ಜಮೀನಿನೊಂದಿಗೆ ಸುತ್ತಿಕೊಂಡ ಕಥಾನಕವು ಮಹಾತ್ಮ ಗಾಂಧೀಜಿಯವರ ಸರ್ವೋದಯ ತತ್ವ ಮತ್ತು ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯ ಪರಿಣಾಮವನ್ನು ಕುರಿತು ಅತ್ಯಂತ ಪ್ರಜ್ಞಾಪೂರ್ವಕವಾಗಿ ಚರ್ಚಿಸುತ್ತದೆ. ಭೀಮನ ಗೌಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಗಾಂಧೀಜಿಯವರ ಪ್ರೇರಣೆಯಿಂದ ಹಲವು ಚಳುವಳಿಗಳಲ್ಲಿ ಭಾಗವಹಿಸಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ವ್ರತದಂತೆ ಪಾಲಿಸುತ್ತಾ ಬಂದು ಆಚಾರ್ಯ ವಿನೋಬಾ ಭಾವೆಯವರ ಪ್ರಭಾವಕ್ಕೊಳಗಾಗಿ ತನ್ನ ನೂರು ಎಕರೆ ಜಮೀನನ್ನು ಭೂದಾನ ಮಾಡಿದ ಕುಟುಂಬ. ಇಲ್ಲಿ ಕಥೆಗಾರರು ಮೂರು ತಲೆಮಾರುಗಳ ಕೃಷಿ ಪದ್ಧತಿ ಹಾಗೂ ಅವರ ಗುಣ ಸ್ವಭಾವಗಳಲ್ಲಿ ಆದ ಮಹತ್ತರ ಬದಲಾವಣೆಗಳನ್ನು ಗ್ರಾಮೀಣ ಜನ ಜೀವನದೊಂದಿಗೆ ಗುರುತು ಮಾಡುತ್ತಾರೆ. ಭೀಮನಗೌಡರ ಭೂದಾನ ಚಳುವಳಿಯಲ್ಲಿ ಕಾಳಪ್ಪನಿಗೆ ಬಂದ ದೀಡೆಕರೆ ಜಮೀನು ಈಗ ಮೊಮ್ಮಗ ಮಾದೇಶನ ಪಾಲಾಗಿದ್ದು ಅದನ್ನು ಧಾನ ನೀಡಿದ ವಂಶದ ಮುಂದಿನ ತಲೆಮಾರು ಪ್ರಕಾಶಗೌಡ ಕಾರ್ಖಾನೆಗೋಸ್ಕರ ಕಬಳಿಸಲು ರೂಪಿಸುವ ತಂತ್ರ ಕುತಂತ್ರಗಳು ಇಂದು ನಮ್ಮ ರೈತರ ಜಮೀನ ಮೇಲೆ ಬಂಡವಾಳ ಶಾಹಿಗಳು ತೋರುವ ಪ್ರಭಾವವನ್ನು ಮುನ್ನಲೆಗೆ ತರುತ್ತವೆ. ಈ ಕಥೆಯಲ್ಲಿ ಕಾಳಪ್ಪ ಮತ್ತು ಮಾದೇಶನ ಪಾತ್ರ ನಿಷ್ಠೆ ಪ್ರಾಮಾಣಿಕತೆಗೆ ಬದ್ಧವಾಗಿ ಮೂಡಿಬಂದಿದ್ದರೇ, ಪ್ರಕಾಶನ ಮೋಸಕ್ಕೆ ಮಾದೇಶ ಬಲಿಯಾಗದಿದ್ದಾಗ ಅವನ ಹೆಂಡತಿ ಪಾರ್ವತಿ ಮೂಲಕ ನಯ ವಂಚನೆಯ ಈ ದೀಡೆಕರೆ ಜಮೀನನ್ನು ಖಾಸಗಿ ಕಂಪನಿಗೆ ದೊರಕಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಈ ಕಥೆ ಅಂತ್ಯ ಕಾಣುತ್ತದೆ.
ಬಂಡವಾಳಶಾಹಿಗಳ ವ್ಯವಸ್ಥೆ ಬಲವಂತರ ಮುಂದೆ ರೈತ ಅಸಹಾಯಕನಾಗಿ ಹೇಗೆಲ್ಲ ಶೋಷಿತನಾಗುತ್ತಾನೆಂಬುದನ್ನು ಅತ್ಯಂತ ಕಳಕಳಿಯಿರುವ ಕಥೆಯಾಗಿಸಿ ಪ್ರಭುತ್ವದ ಕಣ್ಣು ತೆರೆಸಲು ಪ್ರಯತ್ನಿಸಿದ್ದಾರೆ.
ಋಣಮುಕ್ತ ಕಥೆಯಲ್ಲಿ ಪುರಾತನ ಗ್ರಾಮೀಣ ಪರಿಸರದ ಜೀತಪದ್ಧತಿ, ಉಳಿಗಮಾನ್ಯ ಪದ್ಧತಿಗಳು ಹಾಗೂ ಯಜಮಾನಿಕೆಯ ಹಿಡಿತದಿಂದ ತೋರುವ ವಿಕೃತಕಾಮಿಗಳ ಅನಾವರಣವಿದೆ. ಸಾಹುಕಾರ ಸಗರಪ್ಪ ತನ್ನ ಮನೆ ಆಳು ಸಹದೇವನ ಮೇಲೆ ದಬ್ಬಾಳಿಕೆ ತೋರಿದರೆ ಪತ್ನಿ ಮಾತೃ ಹೃದಯದ ಸಾವಿತ್ರಿ ಮಗನಿಗಿಂತ ಹೆಚ್ಚಾದ ಪ್ರೀತಿಯ ಅಮೃತವನ್ನು ಉಳಿಸುವಳು ಈ ಪ್ರೀತಿಯೇ ಋಣಮುಕ್ತ ಕಥೆಯ ಜೀವದ್ರವ್ಯವಾಗಿದೆ.
ವಿಕೃತಕಾಮಿಯಾದ ಹೆಣ್ಣಿನ ಜಪಲದ ಸಗರಪ್ಪ ಸಹದೇವನ ಹೆಂಡತಿ ಶಾಂತಳ ಸಾವಿಗೆ ಕಾರಣವಾಗುವನು. ತನ್ನ ಪ್ರೀತಿಯ ಮಡದಿಯ ಸಾವಿಗೆ ಕಾರಣನಾದ ತನ್ನ ಯಜಮಾನನ ಮೇಲೆ ಅಗಾಧ ಆಕ್ರೋಶವಿದ್ದರೂ ಹೊಳೆಯಲ್ಲಿ ಮುಳುಗಿ ಸಾಯುವುದನ್ನು ತಪ್ಪಿಸಿ ತನಗೆ ತುತ್ತು ನೀಡಿ ಸಾಕಿದ ಸಾವಿತ್ರಿಯ ಋಣದಿಂದ ಮುಕ್ತನಾಗುತ್ತಾನೆ. ಇಲ್ಲಿ ಸಾವಿತ್ರಿಯ ಮಾತೃಪ್ರೇಮ, ಸಹದೇವ ಮತ್ತು ಶಾಂತಾರ ಪ್ರೇಮ ಲೀಲೆ ನಿರೂಪಣೆಯು ಸುಂದರವಾಗಿ ಮೂಡಿಬಂದಿದೆ. ಅಧಿಕಾರ ಉಳ್ಳವರು ಸ್ತ್ರೀಯನ್ನು ಬಡವರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ನಾಟಕ ಸ್ತ್ರೀ ಪಾತ್ರದ ಕಲಾವಿದೆಯರು ಸಗರಪ್ಪನ ತೋಟದಲ್ಲಿ ಇವನಿಗೆ ಶರಣಾಗುತ್ತಿದ್ದು ಸಾಕ್ಷಿಕರಿಸುತ್ತದೆ. ಸಗರಪ್ಪ ಹೊಳೆಯಲ್ಲಿ ಮುಳುಗುವ ದೃಶ್ಯ ಸಹದೇವ ಅವನನ್ನು ರಕ್ಷಿಸುವಂತಹ ಕಥಾನಕ ದೃಶ್ಯಕಾವ್ಯ ರೂಪದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರತವಾಗಿದೆ.
ತಲ್ಲಣ ಕಥೆ ಓದುತ್ತಿದ್ದಂತೆ ಮನಸ್ಸು ಎರಡು ಮೂರು ವರ್ಷಗಳ ಹಿಂದೆ ಸರಿಯುತ್ತದೆ. ಮಂಗಳನ ಅಂಗಳಕ್ಕೆ ಜಿಗಿದು ಚಂದ್ರಯಾನ ಮಾಡಿ ಬಂದಿರುವ ಮಾನವ ತನಗಿನ್ಯಾರು ಸರಿಸಾಟಿ ಎಂದು ಬೀಗುತ್ತಿದ್ದ ಮನುಕುಲಕ್ಕೆ ಪಾಠ ಮಾಡಿದ ಕೋವಿಡ್ 19ರ ಕರಾಳತೆಯ ಕರಿನೆರಳು ಮತ್ತೆ ಮತ್ತೆ ಸ್ರೃತಿ ಪಟಲದ ಮೇಲೆ ಸುಳಿದಾಡಿ ಕುಟುಂಬದವರು ಬಂದು ಬಾಂಧವರು ಸ್ನೇಹಿತರು ನೆರೆಹೊರೆಯವರನ್ನು ಮಣ್ಣಿಗಿಟ್ಟು ಬಂದ ಕರುಣಾಜನಕ ಕಥೆ ಕಣ್ಣೀರ ಧಾರೆಯನ್ನು ಹರಿಸುತ್ತದೆ. ಗ್ರಾಮೀಣರು ಕೂಲಿ ಕಾರ್ಮಿಕರು ನಿರ್ಗತಿಕರು ರೈತರು ಕೃಷಿ ಕಾರ್ಮಿಕರ ಬದುಕನ್ನು ಮತ್ತೊಂದು ರೀತಿಯಲ್ಲಿ ಜರ್ಜರಿತಗೊಳಿಸಿದ್ದು ವಿಪರ್ಯಾಸವೇ ಸರಿ. ಇಂತಹ ವಸ್ತುವನ್ನು ಕಥೆಗೆ ಆಯ್ಕೆ ಮಾಡಿ ಕೊರೊನಾ ಕಾಲದ ತಲ್ಲಣಗಳನ್ನು ಆದ್ರತಾ ಭಾವದಲ್ಲಿ ತುಂಬಾ ಮನೋಜ್ಞವಾಗಿ ತೆರೆದಿಟ್ಟಿದ್ದಾರೆ. ಊರ ಗೌಡನ ದಬ್ಬಾಳಿಕೆಯಿಂದ ಬೇಸತ್ತು ಊರು ತೊರೆದು ಪಟ್ಟಣ ಸೇರಿ ಬದುಕು ಸಾಗಿಸುತ್ತಿದ್ದ ವೀರಭದ್ರ ಮತ್ತು ಗಿರಿಜಾ ಕುಟುಂಬದ ಮೇಲೆ ಕರೋನ ಬೀರಿದ ಪರಿಣಾಮಗಳು ಇಲ್ಲಿನ ಕಥೆಯ ಮೂಲಾಧಾರ. ಈ ಕಥೆಯಲ್ಲಿ ವೈರಸ್ ನ ಸಾರ್ವತ್ರಿಕ ಪ್ರಸರಣ ತಡೆಯಲು ಸರ್ಕಾರ ಘೋಷಿಸಿದ ಲಾಕ್ಡೌನ್ ಮತ್ತು ಸೀಲ್ ಡೌನ್ ಗಳು ಜನರ ಮೂಲಭೂತ ಅಗತ್ಯಗಳಿಗೂ ಕುತ್ತು ತಂದ ಕಥಾನಕವಿದು. ಸಂಚಾರವಿಲ್ಲದೆ ಕಾಲ್ನಡಿಗೆಯಲ್ಲಿ ಊರೂರು ಅಲೆದ ಜನರ ಆರ್ಥನಾದ ನಗರಗಳಿಂದ ಮತ್ತೆ ಹಳ್ಳಿ ಎಡೆಗೆ ಮುಖ ಮಾಡಿದ ಜನರ ಅಸಹಾಯಕ ಪರಿಸ್ಥಿತಿಯಾಗಿದೆ. ವೀರಭದ್ರನ ಮಗ ಶಿವಲಿಂಗು ಸರಿಯಾದ ಚಿಕಿತ್ಸೆ ಪಡೆಯಲಾಗದೆ ಮರಣಿಸಿದರೆ ಉಳಿದೊಬ್ಬ ಮಗನು ಗೌಡರ ಪಿತೂರಿಗೆ ಲಾಕ್ಡೌನ್ ನೆಪದಲ್ಲಿ ಬಲಿಯಾದನು. ಮುಂದೆ ಇಂತಹ ಆಪತ್ತು ವಿಶ್ವಕ್ಕೆ ಒದಗದಿರಲಿ ಎಂಬ ಕಳಕಳಿಯನ್ನು ಹೊತ್ತು ತಂದಿದೆ.
ಚಂದ್ರಪ್ರಭ ನದಿಗೆ ಅಣೆಕಟ್ಟು ನಿರ್ಮಿಸುವ ರೈತರಿಗೆ ನೆರವಾಗುವಲ್ಲಿ ರಾಜಕಾರಣಿ ವಸಂತ ದೇಸಾಯಿ ದೂರದೃಷ್ಟಿ ಮತ್ತು ಜನಪರವಾಗಿ ಕೆಲಸ ಮಾಡಿದರೆ ಅವರ ಮಗ ಪ್ರಶಾಂತ ದೇಸಾಯಿ ತನ್ನ ಸ್ವಾರ್ಥಕ್ಕೆ ರಾಜಕೀಯ ಬಳಸಿಕೊಂಡು ಪ್ರವಾಹದ ಹಿನ್ನೀರಿನಿಂದ ಮುಳುಗುತ್ತಿದ್ದ ಗ್ರಾಮಗಳನ್ನು ಮುಳುಗಡೆ ವ್ಯಾಪ್ತಿಗೆ ತಂದು ಸ್ಥಳಾಂತರ ಆಗುವಂತೆ ಮಾಡಿದ್ದ ತಂದೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿ ರುದ್ರಾಪುರ ಊರಿನ ಜನರು ಪ್ರವಾಹಕ್ಕೆ ಸಿಲುಕಿ ಏನೆಲ್ಲಾ ಸಂಕಷ್ಟಗಳನ್ನು ಎದುರಿಸಿದರು ಎಂಬುದನ್ನು ತುಂಬಾ ಅಚ್ಚುಕಟ್ಟಾದ ನಿರೂಪಣೆಯಲ್ಲಿ ವಿವರಿಸಿದ್ದಾರೆ. ಪ್ರವಾಹಗಳು ಜನರನ್ನು ದಿಕ್ಕಾಪಾಲು ಮಾಡುವ ಪರಿ ಅತ್ಯಂತ ನೋವಿನಿಂದ ಜೀವ ತಿಳಿದಿದೆ. ಕಥೆಯಲ್ಲಿ ಶಂಕ್ರಣ್ಣನ ಪಾತ್ರ ಅತ್ಯಂತ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ಮೂಡಿಬಂದಿದೆ. ಅವನ ನಿಷ್ಠೆ ಪ್ರಾಮಾಣಿಕತೆಗಳು ದುರಾಸೆ ಸ್ವಾರ್ಥಕ್ಕೆ ಬಲಿಯಾಗದಂತೆ ಚಿತ್ರಣಗೊಂಡಿವೆ.
ವಾಸುವಿನ ಮೇಲೆ ಬಂದ ಆಪಾದನೆಯ ಒಂದರ ಕುರಿತು ಊರಿನ ಪಂಚರು ನ್ಯಾಯ ತೀರ್ಮಾನ ಮಾಡಲು ಪಂಚಾಯಿತಿ ಸೇರುವುದರೊಂದಿಗೆ ಪ್ರಾರಂಭವಾದ ಕಥೆ ವಿವಿಧ ತಿರುಗುಗಳನ್ನು ಪಡೆದುಕೊಂಡು ಅಂತಿಮವಾಗಿ ನ್ಯಾಯ ಮತ್ತು ಪ್ರಾಮಾಣಿಕತೆಗೆ ಗೆಲುವು ಲಭಿಸುವುದು ಎಂಬುದೆ ಕಥೆಯ ವಸ್ತುವಾಗಿದೆ. ಇದು ಸುಭಾಷ, ಚಂದ್ರಕಾಂತ, ವಾಸು ಎಂಬ ಮೂರು ಜನ ಗೆಳೆಯರ ಸುತ್ತ ಸುತ್ತುವ ಕತೆಯಾಗಿದೆ.
ಈ ಮೂವರು ಓದುವ ಕಾಲದಲ್ಲಿ ಗೆಳೆಯರಾಗಿದ್ದರೂ ಗುಣ ಸ್ವಭಾವಗಳಲ್ಲಿ ಮೂರು ತೆರನಾದವರು. ಸುಭಾಷ ಎಮ್ ಎಸ್ಸಿ ಅಗ್ರಿಕಲ್ಚರ್ ಮುಗಿಸಿ ಪಟ್ಟಣ ಸೇರಿ ಉದ್ಯೋಗ ಮಾಡದೆ ಆಧುನಿಕ ವ್ಯವಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಇಡೀ ಊರಿಗೆ ಹಿಂದಿನ ಯುವ ಜನತೆಗೆ ಮಾದರಿ ರೈತನಾಗಿ ಕಾಣುತ್ತಾನೆ. ಚಂದ್ರಕಾಂತ ಅರ್ಧಂಬರ್ಧ ಓದಿ ಕೆಡುಕನ್ನೇ ತುಂಬಿ ಕೊಂಡರೆ ವಾಸು ಹೆಚ್ಚು ಓದಲು ಅನುಕೂಲವಿಲ್ಲದೆ ವ್ಯವಸಾಯದ ಜೊತೆಗೆ ಬಡಗಿ ಕೆಲಸ ಮಾಡುತ್ತಿದ್ದ.
ವಾಸುವಿನ ಹಸು ಎಮ್ಮೆಗಳು, ಚಂದ್ರಕಾಂತರ ಹೊಲದಲ್ಲಿ ಮೇದವೆಂದು ಅವನಿಂದ ತಪ್ದಂಡ ಪಡೆಯಲು ಪಂಚರಿಗೆ ಹಣ ಹೆಂಡದ ಆಸೆ ತೋರಿಸಿ ಗೆಲುವು ಸಾಧಿಸಲು ಮಾಡಿದ ಎಲ್ಲ ದುಷ್ಕೃತ್ಯಗಳು ಕುತಂತ್ರಗಳು ಸುಭಾಷ್ ಮತ್ತು ಅವನ ಗೆಳೆಯ ಡಿವೈಎಸ್ಪಿ ಯ ಸಮಯೋಚಿತ ನಿರ್ಧಾರಗಳಿಂದ ಬುಡಮೇಲಾಗುತ್ತದೆ. ಕೊನೆಗೆ ವಾಸವಿಗೆ ಚಂದ್ರಕಾಂತಾನೆ ತಪ್ದಂಡ ಕೊಡುವಂತೆ ಮಾಡುವಲ್ಲಿ ಕಥಾನಕ ಅತ್ಯಂತ ಜಾಣ್ಮೆಯಲ್ಲಿ ಗೆಲುವು ಸಾಧಿಸುತ್ತದೆ.
ದಿವ್ಯ ಮೌನದ ಸಂತ ಕಥೆಯು ಆಧ್ಯಾತ್ಮಿಕ ಸ್ಪರ್ಶದೊಂದಿಗೆ ಜೀವತಳೆದು ಒಂದಿಷ್ಟು ಕುತೂಹಲ ರಹಸ್ಯ ಬೆರಗು ಭಯ ಆತಂಕ ತಲ್ಲಣಗಳೊಂದಿಗೆ ಮುನ್ನಡೆಯುತ್ತ ಸಂತನೊಬ್ಬನ ದಿವ್ಯ ಮೌನದ ಹಿಂದಿನ ಉದ್ದೇಶಗಳನ್ನು ಅತ್ಯಂತ ವಿಸ್ತಾರವಾಗಿ ಅವಲೋಕಿಸುತ್ತದೆ. ಈ ಸಂತ ಯಾರೆಂಬ ರಹಸ್ಯ ಭೇದಿಸಲು ಹೊರಟ ಸಾಹುಕಾರ ಸಂಗಪ್ಪ ಮತ್ತು ಊರಿನ ಜನರಿಗೆ ಬೇರೆ ಹೊಸ ತಿರುವು ತೆರೆದುಕೊಳ್ಳುತ್ತದೆ. ಈ ಕಥೆ ಒಂದಿಷ್ಟು ತಾತ್ವಿಕ ಚಿಂತನೆಗಳನ್ನು ಹುಟ್ಟು ಹಾಕುತ್ತದೆ. ಜೀವನದಲ್ಲಿ ಜಿಗುಪ್ಸೆಗೊಂಡ ಮನುಷ್ಯ ಸಾಮಾಜಿಕ ಬದುಕಿನಿಂದ ವಿಮುಖನಾಗುವ ಬಗೆಯನ್ನು ಹಲವಾರು ನಿದರ್ಶನಗಳ ಮೂಲಕ ನಿರೂಪಿಸುತ್ತದೆ. ಮುಂದೆ ಈ ಕಥೆ ಆಧ್ಯಾತ್ಮದಿಂದ ಲೌಕಿಕ ಬದುಕಿಗೆ ಜಿಗಿಯುತ್ತದೆ. ಸಂತ ಸಮಾಜ ಕಲ್ಯಾಣಕ್ಕಾಗಿ ಜನರನ್ನು ಪ್ರೇರೇಪಿಸಿ ಜನರ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಲು ಶ್ರಮಿಸಿ ಊರುಗಳ ನಡುವೆ ರಸ್ತೆ ಸಂಪರ್ಕ ಕಲ್ಪಿಸುತ್ತಾನೆ.
ಈ ನಡುವೆ ರಸ್ತೆ ನಿರ್ಮಾಣದಿಂದ ತನಗೆ ನಷ್ಟವಾಗುತ್ತದೆ ಎಂದು ಮೊದಲಿನಿಂದಲೂ ಈ ಕಾರ್ಯವನ್ನ ವಿರೋಧಿಸುತ್ತಿದ್ದ ದೋಣಿಚಾಲಕ ಪರಶುರಾಮ ಈ ಕಾರ್ಯದ ಉಸ್ತುವಾರಿ ವಹಿಸಿದ್ದ ಗೌಡ ಸಂಗಪ್ಪನ ಮಗಳನ್ನು ಅತ್ಯಾಚಾರ ಮಾಡಿ ಆ ಆಪಾದನೆ ಸಂತನ ಮೇಲೆ ಬರುವಂತೆ ಮಾಡಿ ಊರಿನ ಜನರೇ ಸಂತನನ್ನ ಕೊಲೆಗೈಯ್ಯುವಂತೆ ಮಾಡುವಲ್ಲಿ ಕಥೆ ಮುಕ್ತಾಯವಾಗುತ್ತದೆ. ಮನುಷ್ಯನ ಬದುಕಿನ ಹಲವಾರು ಗುಣಗಳನ್ನು, ಭಾವನೆಗಳನ್ನು ಪ್ರಕಟಿಸುತ್ತಾ ತಾಳ್ಮೆ ಕಳೆದುಕೊಂಡರೆ ವಿಪತ್ತಿಗೆ ದಾರಿಯಾಗುತ್ತದೆ. ಆದ್ದರಿಂದ ಶಾಂತಿ ಸಹನೆಯಿಂದ ಪರಾಮರ್ಶಿಸಬೇಕೆಂಬ ಸಂದೇಶವನ್ನು ನೀಡುತ್ತದೆ.
ಈ ಸಂಕಲನದಲ್ಲಿ ಆಲದ ಮರ ಕಥೆ ಪರಪಜ್ಜನ ಸಾವು, ದೀಡೆಕರೆ ಜಮೀನು ಕಥೆಯಲ್ಲಿ ಮಾದೇಶ ಜಮೀನು ಕಳೆದುಕೊಳ್ಳುವುದು,, ತಲ್ಲಣ ಕಥೆ ಬಸಲಿಂಗನ ಮರಣದೊಂದಿಗೆ ಮುಕ್ತಾಯ, ಶಂಕ್ರಣ್ಣನ ಕೊನೆಯೊಂದಿಗೆ ಮಹಾಪೂರ ಕಥೆ, ಸಂತನ ಕೊಲೆಯೊಂದಿಗೆ ದಿವ್ಯ ಮೌನದ ಸಂತ ಕಥೆಗಳು ದುರಂತ ಮುಕ್ತಾಯ ಕಾಣುತ್ತವೆ. ಆ ಮೂಲಕ ಕಥೆಗಾರರು ಮಾನವ ಪ್ರೇಮ ಇನ್ನೂ ಮರೀಚಿಕೆಯಾಗಿಯೆ ಉಳಿದಿದೆ ಎಂಬ ಸಂದೇಶ ಸಾರಿದ್ದಾರೆ. ಭಜಿ ಅಂಗಡಿ ಮಲ್ಲಕ್ಕ ಕಥೆಯಲ್ಲಿ ಅಂಗಡಿ ಸುಟ್ಟರೂ ಅಂತಿಮವಾಗಿ ತಪ್ಪಿತಸ್ಥನಿಗೆ ಶಿಕ್ಷೆಯಾಗಿ ಮಲ್ಲಕ್ಕ ಗೆಲುವಿನ ನಗೆ ಬೀರಿದರೆ, ಋಣಮುಕ್ತ ಕಥೆಯಲ್ಲಿ ಸಹದೇವ ಊರು ತೊರೆದರೂ ಗೌಡನಲ್ಲಿ ತನ್ನ ತಪ್ಪಿಗೆ ಪ್ರಾಯಶ್ಚಿತ ಭಾವ ಮೂಡಿ ಪಾಪ ಪ್ರಜ್ಞೆ ಕಾಡುತ್ತದೆ. ಇನ್ನು ತಪ್ದಂಡ ಕಥೆಯು ಮೋಸ ವಂಚನೆ ಹಣಕ್ಕಿಂತ ಸತ್ಯ ನ್ಯಾಯದ ತೂಕ ಹೆಚ್ಚು ಎಂಬ ಸಂದೇಶ ಸಾರುತ್ತದೆ.
ಈ ದೀಡೆಕರೆ ಜಮೀನು ಕಥಾ ಸಂಕಲನಕ್ಕೆ ಸ್ವಾಭಿಮಾನಿ ಕರ್ನಾಟಕ ವೇದಿಕೆ ಬೆಂಗಳೂರು ಇವರು ಕೊಡಮಾಡುವ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ 2022’ ಲಭಿಸಿದ್ದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ‘ಛಂದ ಪುಸ್ತಕ ಪ್ರಶಸ್ತಿ’ ಆಯ್ಕೆ ಪ್ರಕ್ರಿಯೆಯಲ್ಲಿ ಟಾಪ್ ಟೆನ್ ಸ್ಥಾನವನ್ನು ಪಡೆದಿದ್ದು ಹೆಮ್ಮೆಯ ಸಂಗತಿ.
ಒಟ್ಟಿನಲ್ಲಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತಮ್ಮ ಕಥೆಗಳ ಅಂತ್ಯದಲ್ಲಿ ಯಾವುದೇ ಸಮಜಾಯಿಸಿ ಕೊಡದೆ ಕಥೆ ಮುಕ್ತಾಯಗೊಳಿಸಿ ಓದುಗರನ್ನು ಚಿಂತನೆಗಚ್ಚಿ ಹಲವು ಒಳನೋಟಗಳನ್ನು ಅಂತಸತ್ವಗಳನ್ನು ಓದುಗನೇ ಗ್ರಹಿಸಿ ಸರಿಯಾದ ಮಾರ್ಗ ಆರಿಸಿಕೊಳ್ಳುವಂತೆ ಮಾಡುವಲ್ಲಿ ಹೊಸತನ ಮತ್ತು ಕುಶಲತೆ ಮೆರೆದಿದ್ದಾರೆ. ಒಟ್ಟಾರೆ ಗ್ರಾಮೀಣ ಬದುಕಿನ ಜಯ ಅಪಜಯಗಳ ಪಯಣವನ್ನು ಗ್ರಾಮೀಣ ಭಾಷೆಯಲ್ಲಿ ಚಿತ್ರಿಸುವ ಮೂಲಕ ಹಿಂದಿನ ಹೊಸ ಪೀಳಿಗೆಗೆ ಗ್ರಾಮೀಣ ಬದುಕಿನ ಪರಿಚಯವನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮ್ಯ ಜೀವನದ ಪರಿಚಯ ಇಲ್ಲಿದೆ ಇಂದಿನ ಹೊಸ ಪೀಳಿಗೆಗೆ ಹಳ್ಳಿ ಕೃಷಿ ಪದ್ಧತಿಗಳ ಅರಿವನ್ನ ಮೂಡಿಸುವಲ್ಲಿ ಕೃತಿ ಗೆಲುವು ಸಾಧಿಸಿದೆ. ಇಂತಹ ನೆಲಮೂಲದ ಪರಂಪರೆಯನ್ನು ಉಳಿಸಿ ಬೆಳೆಸಲು ತನ್ನ ಲೇಖನಿಯನ್ನು ಕಥೆ ಪ್ರಕಾರದಲ್ಲಿ ಬಳಸಿಕೊಂಡ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.