ವೈಲೆಟ್ ಪಿಂಟೋ ಅವರು ಬರೆದ ಲೇಖನ ‘ಅವಕಾಶಗಳೆಂಬ ಆಕಾಶ’

ಬದುಕು ಅವಕಾಶಗಳ ಸಂತೆ ! ಇಲ್ಲಿ ಅವಕಾಶಗಳನ್ನು ಕೊಡುವ, ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ನಿರಂತರ ! ಅವಕಾಶಗಳು ಲಭಿಸುವುದು ಅದೃಷ್ಠದಿಂದ ಎಂದಾದರೆ, ಅದು ಅಪರೂಪ! ಅವಕಾಶಗಳು ಅದೃಷ್ಠದ ಮೇಲೇಯೇ ಅವಲಂಬಿತವಾದರೆ, ಕೈಗೆ ಸಿಕ್ಕ ಅವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ! ಸ್ವಂತ ಪರಿಶ್ರಮದಿಂದ, ಸಾಧನೆಯಿಂದ ಗಳಿಸಿಕೊಂಡ ಅವಕಾಶಗಳು ಒಳ್ಳೆಯ ಫಲವನ್ನು ನೀಡುತ್ತವೆ. ಅವಕಾಶಗಳು ನಮ್ಮನ್ನು ಕಾದು ಕುಳಿತಿರುವುದಿಲ್ಲ. ಉದಾಸೀನತೆ, ಸೋಮಾರಿತನ, ನಿರಾಸೆ..ಇವು ಹೊನ್ನ ಅವಕಾಶಗಳ ಬದ್ಧ ವೈರಿಗಳು ! ಕೆಲವೊಂದು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ಬರುವುದರಿಂದ, ಅತ್ಯಂತ ಜಾಣ್ಮೆ ಬುದ್ಧಿವಂತಿಕೆಯಿಂದ ಅವುಗಳನ್ನು‌ಒಲಿಸಿಕೊಳ್ಳಬೇಕು ! ಏಕೆಂದರೆ ಅವು ಇನ್ನೊಮ್ಮೆ ನಮ್ಮ ಬದುಕಿನ ಕದವನ್ನು ತಟ್ಟಲಾರವು !

ವಿದ್ಯಾಭ್ಯಾಸದ ದೆಸೆಯಲ್ಲಿ ಕೈ ತುಂಬಾ ಸಿಕ್ಕ ಅವಕಾಶ ಸಮಯ ಸಂದರ್ಭಗಳನ್ನು ಸದ್ವಿನಿಯೋಗಪಡಿಸಿಕೊಂಡರೆ, ಅಂದುಕೊಂಡದ್ದನ್ನು ಸಾಧಿಸಿ, ಬದುಕಿನ ಸೌಧವನ್ನು ಸುಂದರವಾಗಿ ಕಟ್ಟಬಹುದು. ವಿದ್ಯಾರ್ಥಿ ಬದುಕನ್ನು ಮೋಜು ಮಜಾ, ಕೆಟ್ಟ ಸಂಗದಲ್ಲಿ ಕಳೆ ದರೆ, ಮುಂದಿನ ಬದುಕು ಅತ್ಯಂತ ದುರ್ಭರವಾಗುತ್ತದೆ ! ಜೀವನ ಕೆಟ್ಟು ಹೋಗಿ ಅದರ ಫಲವನ್ನು ಬದುಕಿನುದ್ದಕ್ಕೂ ಅನುಭವಿಸಬೇಕಾಗುತ್ತದೆ. ಮುಂದೆ ಚಿಂತಿಸಿ ಏನೇನೂ ಫಲವಿಲ್ಲ ! ವಿದ್ಯಾರ್ಥಿ ಬದುಕು ಲಭಿಸುವುದು ಒಂದೇ ಒಂದು ಬಾರಿ ! ಅದನ್ನು ಮನ:ಪೂರ್ತಿ ಅನುಭವಿಸಬೇಕು.

ಯೌವನ ಬದುಕಿನ ವಸಂತ ಕಾಲ ! ಅದಮ್ಯ ಶಕ್ತಿ ಉತ್ಸಾಹ ಕನಸುಗಳ ಕಣಜ! ಅವಕಾಶಗಳ ಆಗರ! ಅಷ್ಟೇ ಆಮಿಷಗಳು, ಸಾಮಾಜಿಕ ಜಾಲತಾಣಗಳು, ಮಿಡಿಯಾಗಳ ಹಾವಳಿಗಳು, ಕೆಟ್ಟ ಸಂಗಾತಿಗಳು, ದುರ್ವ್ಯಸನಗಳು ಕೈ ಬೀಸಿ ಕರೆಯುವ ಕಾಲವೂ ಕೂಡ ! ಬದುಕಿನ ಬಂಡಿಯ ಪಯಣಕ್ಕೆ ಜೋಡಿ ಬೇಡುವ ಕಾಲ! ಸುಲಭವಾಗಿ ಜಾರಿ ಬೀಳುವ ಕಾಲ! ಇಂತಹ ಸಮಯದಲ್ಲಿ ಬಂಗಾರದಂತಹ ಅವಕಾಶಗಳು ಸನಿಹದಲ್ಲೇ ಸುಳಿದಾಡಿದರೂ, ಯಾವುದೋ ಗುಂಗಿನಲ್ಲೋ, ಮತ್ಯಾವುದೋ ಮತ್ತಿನಲ್ಲೋ ಸಮಯ ಜಾರಿ ಅವಕಾಶಗಳು ಹಾರಿ ಹೋಗಬಹುದು !

ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡಲು ನೀಡುವ ಒಂದೇ ಒಂದು ಅವಕಾಶವು ಮನುಷ್ಯನ ಚರಿತ್ರೆಯನ್ನೇ ಬದಲಿಸಬಹುದು! ತಿದ್ದಲು ಅವಕಾಶ ನೀಡುವುದರಿಂದ ವ್ಯಕ್ತಿಯ ವಿಕಸನಕ್ಕೆ ನೀರೆರೆದಂತಾಗುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದು ಹೋದ ತಪ್ಪುಗಳನ್ನು ತಿದ್ದುವುದಕ್ಕೆ ಅವಕಾಶ ಕೊಟ್ಟಾಗ, ಕೌಟುಂಬಿಕ ಕಲಹಗಳು ಶಮನಗೊಳ್ಳುವುವು! ಮುದುಡಿದ ಪತಿ-ಪತ್ನಿಯರ ಸಂಬಂಧಗಳು ಮತ್ತೆ ಅರಳಬಹುದು! ಮುರಿದ ಸ್ನೇಹ ಸೇತುವೆಗಳು ಒಂದಾಗಬಹುದು! ತಪ್ಪಿಗೆ ಶಿಕ್ಷೆಯೇ ಪರಿಹಾರವಲ್ಲ! ಸರಿಪಡಿಸಿಕೊಳ್ಳುವ ಅವಕಾಶವು ಕೂಡ ಪರಿಹಾರವೇ !

ಅವಕಾಶಗಳ ಆಕಾಶದಲ್ಲಿ ಎಷ್ಟೋ ತಪ್ಪು ಅಭಿಪ್ರಾಯಗಳು ತಿಳಿಗೊಳ್ಳಬಹುದು! ಆತುರದಲ್ಲಿ ಕೈಗೊಂಡ ತೀರ್ಮಾನಗಳು ಸಮಂಜಸವಲ್ಲ ಎನಿಸಬಹುದು! ಕೋಪ ದ್ವೇಷಗಳಿಂದ ಕುದಿವ ಮನಸ್ಸು ಶಾಂತಗೊಂಡು, ಕ್ಷಮೆ ಬೇಡಲು, ಕ್ಷಮೆ ನೀಡಲು ಧಾವಿಸಬಹುದು!

ಅವಕಾಶಗಳ ಆಗಸ ತೆರೆದುಕೊಂಡಾಗ ಎಲ್ಲೆಡೆ ಬೆಳಕು, ಸತ್ಯ , ಸಮೃದ್ಧಿಯ ದರ್ಶನ !

ವೈಲೆಟ್ ಪಿಂಟೋ,
ಅರಸೀಕೆರೆ ಅಂಚೆ, ಹಾಸನ ಜಿಲ್ಲೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop