ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಶಿವಮೊಗ್ಗ ಕರ್ನಾಟಕ ಸಂಘ

ವೆಂಬರ್ 8, 1930 ರಂದು ಸ್ಥಾಪನೆಯಾಗಿರುವ, ಸರಿ ಸುಮಾರು 95 ವರ್ಷಗಳ ಇತಿಹಾಸವಿರುವ ಶಿವಮೊಗ್ಗದ ಕರ್ನಾಟಕ ಸಂಘವು ಮಲೆನಾಡಿನ ಹೆಮ್ಮೆಯು ಹೌದು. ಕರ್ನಾಟಕ ಏಕೀಕರಣದಿಂದ ಹಿಡಿದು ಮಲೆನಾಡಿನ ಭಾಗದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಮಹಾಮನೆ ಎಂದೆ ಹೇಳಬಹುದು. ಮುಂದಿನ ಹೊಸ ತಲೆಮಾರಿನವರನ್ನು ಗಮನದಲ್ಲಿರಿಸಿಕೊಂಡಿರುವ ಸಂಘವು ಸಾಹಿತ್ಯ, ಸಂಸ್ಕೃತಿ ಮತ್ತು ನಾಡು ನುಡಿಯ ಬಗ್ಗೆ ಆಸಕ್ತಿ ಮೂಡಿಸಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಪ್ರತಿವರ್ಷವೂ ಅದರ ಹಿಂದಿನ ವರ್ಷ ಪ್ರಕಟ ಆಗಿರುವ ಸಣ್ಣಕತೆ, ಕಾದಂಬರಿ, ಕಾವ್ಯ, ಅಂಕಣ ಬರೆಹ ಸೇರಿದಂತೆ ವಿವಿಧ ಪ್ರಕಾರದ ಅತ್ಯುತ್ತಮ ಪುಸ್ತಕಗಳಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಹೊಸ ಲೇಖಕರನ್ನು ಪ್ರೋತ್ಸಾಹಿಸುತ್ತಿದೆ. ಇದರ ಜೊತೆಗೆ ಉತ್ತಮ ಗ್ರಂಥಗಳ ಪ್ರಕಟಣೆ ಮತ್ತು ಕನ್ನಡ ಪುಸ್ತಕಗಳ ಮಾರಾಟಕ್ಕೆ ಸಹಕಾರಿಯಾಗುವಂತೆ ಕನ್ನಡ ಪುಸ್ತಕ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿದೆ. ಕುವೆಂಪು ಅವರ ‘ನವಿಲು’ ಕವನ ಸಂಕಲನದಿಂದ ಪ್ರೇರಣೆ ಪಡೆದು, ಸಂಘದ ಲಾಂಛನವಾಗಿ ನವಿಲನ್ನು ಬಳಸಲಾಗುತ್ತಿದೆ. ಜನಪ್ರಿಯ ಕತೆಗಾರರಾಗಿದ್ದ ಶ್ರೀ ಆನಂದ ಅವರು ನವಿಲಿನ ವಿನ್ಯಾಸವನ್ನು ಮಾಡಿಕೊಟ್ಟಿದ್ದಾರೆ.

ಈಗಿನ ಸಂಘದ ಕಟ್ಟಡ ಮತ್ತು ಕಛೇರಿಯನ್ನು 1942ರಲ್ಲಿ ಹಿರಿಯ ಸಾಹಿತಿಗಳಾಗಿದ್ದ ಬಿ.ಎಂ.ಶ್ರೀ. ಅವರು ಶಂಕುಸ್ಥಾಪನೆ ಮಾಡಿದ್ದರು. ತದನಂತರ 1943ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರು ಉದ್ಘಾಟನೆ ಮಾಡಿರುವುದು ಸಂಘದ ಹೆಮ್ಮೆಯ ಕ್ಷಣ. ಅಡಿಕೆ ಬೆಳೆಗಾರರು ಮತ್ತು ದಾನಿಗಳು ಆಗಿದ್ದ ಶ್ರೀ ಹಸೂಡಿ ವೆಂಕಟಶಾಸ್ತ್ರೀ ಅವರು ಹಣ ಸಹಾಯ ಮಾಡಿ ಈ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದಾರೆ. ದ.ರಾ. ಬೇಂದ್ರೆ ಅವರ ಸೂಚನೆಯ ಮೇರೆಗೆ ಈ ಕಟ್ಟಡಕ್ಕೆ “ಹಸೂಡಿ ವೆಂಕಟಶಾಸ್ತ್ರೀ ಸಾಹಿತ್ಯ ಭವನ” ಎಂದು ಹೆಸರಿಡಲಾಗಿದೆ.

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ವರಕವಿ ದ.ರಾ. ಬೇಂದ್ರೆ ಅವರು ಸಂಘದ ಸ್ಥಾಪನೆಗೆ ಪ್ರೇರಕರು ಮತ್ತು ಶ್ರೀ ಕುವೆಂಪು ಅವರು ಉದ್ಘಾಟಕರು ಎಂಬುದು ಸಂಘದ ಇತಿಹಾಸಕ್ಕೆ ಹಿಡಿದ ಗೌರವದ ಕೈಗನ್ನಡಿಯಂತಿದೆ. ಕಥೆಗಾರರಾದ ಶ್ರೀ ಆನಂದ, ಶ್ರೀ ಗುರುರಾವ್ ದೇಶಪಾಂಡೆ, ಶ್ರೀ ಕೂಡಲಿ ಚಿದಂಬರಂ, ವಕೀಲರಾಗಿದ್ದ ಎಸ್.ವಿ. ಕೃಷ್ಣಮೂರ್ತಿ ರಾವ್, ಶ್ರೀ ಭೂಪಾಳಂ ಚಂದ್ರಶೇಖರಯ್ಯ, ಶ್ರೀ ಭೂಪಾಳಂ ಪುಟ್ಟ ನಂಜಪ್ಪ ಮತ್ತು ಶ್ರೀ ದೇವಂಗಿ ಮಾನಪ್ಪನವರು ಸಂಘದ ಸ್ಥಾಪನೆಗೆ ಕಾರಣರಾದ ಮುಖ್ಯರು.

ಸಂಘವು ಶಿವಮೊಗ್ಗ ಜಿಲ್ಲೆಯ ಶ್ರೇಷ್ಠ ಸಾಹಿತಿಗಳಿಗೆ ಗೌರವ ಸದಸ್ಯತ್ವವನ್ನು ನೀಡಿ ಅವರುಗಳ ಹೆಸರಿನಲ್ಲಿ ವಿವಿಧ ಪ್ರಕಾರದ ಬರೆಹಗಳಿಗೆ ರಾಜ್ಯ ಮಟ್ಟದಲ್ಲಿ ಪುಸ್ತಕ ಬಹುಮಾನವನ್ನು ನೀಡುತ್ತದೆ. ಪ್ರತಿ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಶ್ರೀ ಕುವೆಂಪು, ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ, ಎಂ.ಕೆ. ಇಂದಿರಾ, ಪಿ. ಲಂಕೇಶ್, ಡಾ.ಜಿ.ಎಸ್. ಶಿವರುದ್ರಪ್ಪ, ಹಾ.ಮಾ. ನಾಯಕ್, ಡಾ.ಯು.ಆರ್. ಅನಂತಮೂರ್ತಿ, ಡಾ.ಕೆ.ವಿ. ಸುಬ್ಬಣ್ಣ, ಡಾ. ಶಿವಮೊಗ್ಗ ಸುಬ್ಬಣ್ಣ, ಡಾ. ನಾ. ಡಿಸೋಜ, ಡಾ. ಗಿರೀಶ್ ಕಾಸರವಳ್ಳಿ, ಡಾ.ಎಂ. ಚಿದಾನಂದಮೂರ್ತಿ, ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ ಮತ್ತು ಹೆಚ್.ಎಸ್. ವೆಂಕಟೇಶಮೂರ್ತಿ ಇದುವರೆಗಿನ ಸಂಘದ ಗೌರವ ಸದಸ್ಯರು.

ಜೀವಮಾನ ಸಾಧನೆಯ ಪ್ರಕಾರದಲ್ಲಿ ಕಾವ್ಯಕ್ಕಾಗಿ ಡಾ.ದ.ರಾ. ಬೇಂದ್ರೆ ಪ್ರಶಸ್ತಿ, ಸಂಶೋಧನೆಗಾಗಿ ಡಾ.ಶಂಭಾ ಜೋಶಿ ಪ್ರಶಸ್ತಿ, ವಿಜ್ಞಾನ ಸಾಹಿತ್ಯಕ್ಕಾಗಿ ಡಾ. ಶಿವರಾಮ ಕಾರಂತ ಪ್ರಶಸ್ತಿ ಮತ್ತು ಸಾಹಿತ್ಯ ವಿಮರ್ಶೆಗಾಗಿ ಪ್ರೊ. ತೀ.ನಂ.ಶ್ರೀ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಹಿರಿಯ ಸಾಹಿತಿಗಳ ಸಾಹಿತ್ಯ ಸೇವೆಗಳನ್ನು ಗೌರವಿಸಲಾಗುತ್ತಿದೆ. ಜೀವಮಾನ ಪ್ರಶಸ್ತಿಯು 25,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಸಂಘವು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಶ್ರೀ ಕುವೆಂಪು ಮತ್ತು ಶ್ರೀ ಎಸ್. ವಿ. ಪರಮೇಶ್ವರ ಭಟ್ಟರ ಹೆಸರಿನಲ್ಲಿ ಚಿನ್ನದ ಪದಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಶಿವಮೊಗ್ಗ ಕರ್ನಾಟಕ ಸಂಘದ ಕೆಲಸಗಳನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿವೆ. ಅವುಗಳಲ್ಲಿ ಪ್ರತಿಷ್ಠಿತ ಧಾರವಾಡದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ ಮತ್ತು ಕರ್ನಾಟಕ ಸರಕಾರ ಕೊಡುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಖ್ಯವಾದವುಗಳು. “ನವಿಲ ಹೆಜ್ಜೆ” ಶೀರ್ಷಿಕೆ ಅಡಿಯಲ್ಲಿ ಸಂಘವು ಕನ್ನಡ ತ್ರೈಮಾಸಿಕವನ್ನು ಪ್ರಕಟಿಸುತ್ತಿದೆ. ಸಂಘವು 1943ರಲ್ಲಿ ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 1976ರಲ್ಲಿ ಡಾ.ಎಸ್.ವಿ. ರಂಗಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರ ರಾಜ್

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಂದ ಆರಂಭವಾಗುವ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರ ಪರಂಪರೆಯು ಒಂದಲ್ಲ ಒಂದು ರೀತಿಯ ಹೊಸ ಹೊಸ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಶಿವಮೊಗ್ಗದಲ್ಲಿ ಜನಪ್ರಿಯರು ಶಿಕ್ಷಣ ತಜ್ಞರು ಮತ್ತು ಶಿವಮೊಗ್ಗ ರಾಷ್ಟ್ರೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಕರ್ನಾಟಕ ಸಂಘದ ಅಧ್ಯಕ್ಷರು ಆಗಿದ್ದ ಎಸ್.ವಿ. ತಿಮ್ಮಯ್ಯನವರನ್ನು ಸೇರಿದಂತೆ ಎಲ್ಲಾ ಅಧ್ಯಕ್ಷರುಗಳು ಸಂಘದ ಏಳ್ಗೆಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತೆಯೇ ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರ ರಾಜ್ ಅವರ ಅಧ್ಯಕ್ಷ ಅವಧಿಯಲ್ಲಿಯು ನೂರಾರು ಕಾರ್ಯಕ್ರಮಗಳು ನಡೆದಿವೆ ಮತ್ತು ಸಂಘಕ್ಕೆ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ “ತಿಂಗಳ ಅತಿಥಿ” ಕಾರ್ಯಕ್ರಮು ಮುಖ್ಯವಾಗಿದೆ. ಇದುವರೆಗೂ ಒಟ್ಟು 22 ತಿಂಗಳ ಅತಿಥಿ ಕಾರ್ಯಕ್ರಮಗಳು ನಡೆದಿವೆ. ನಾಡಿನ ಬೇರೆ ಬೇರೆ ಜಿಲ್ಲೆಗಳ ಸಾಧಕ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಉಪನ್ಯಾಸದ ಮೂಲಕ ಹಂಚಿಕೊಂಡಿದ್ದಾರೆ. ಇತರ ಕಾರ್ಯಕ್ರಮಗಳಾದ ಕೋಟಿ ಕಂಠ ಗಾಯನ, ಕನ್ನಡ ಕಲರವ, ಪುಸ್ತಕ ಬಹುಮಾನ ಸಮಾರಂಭಗಳು, ಕಾವ್ಯ-ಕಥಾ ಕಮ್ಮಟ, ಜಿ. ಹೆಚ್. ನಾಯಕ್ ಸ್ಮರಣಾರ್ಥ ಒಂದು ದಿನದ ರಾಜ್ಯ ಮಟ್ಟದ ಕಾರ್ಯಕ್ರಮ, ಡಾ. ಅನುಪಮಾ ಅವರ ಜೀವನ ಮತ್ತು ಸಾಧನೆಯ ಕಾರ್ಯಕ್ರಮ, ಜೀವಮಾನ ಸಾಧನೆ ಪ್ರಶಸ್ತಿ ಕಾರ್ಯಕ್ರಮ, ನೂರು ಶಾಲೆ ನೂರು ಪುಸ್ತಕ ಕಾರ್ಯಕ್ರಮ, ತೊಗಲು ಬೊಂಬೆಯಾಟ, ಯಕ್ಷಗಾನ ತಾಳ ಮದ್ದಲೆ ಮತ್ತು ಶಂಕರ ಶಾನುಭೋಗ್ ಸಂಗೀತ ಕಾರ್ಯಕ್ರಮ ಸೇರಿದಂತೆ ಇನ್ನೂ ಹತ್ತಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಪುಸ್ತಕ ಪ್ರಕಾಶಕರ ಸಂಘದ ಗೌರವ ಪ್ರಶಸ್ತಿ, ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಇವರ ಅವಧಿಯಲ್ಲಿ ಸಂಘಕ್ಕೆ ಸಂದಿದೆ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಎಂ.ಎನ್.ಸುಂದರ ರಾಜ್
6 September 2024 16:29

ತುಂಬ ಯಥಾವತ್ತಾಗಿ ಬರೆದಿದ್ದೀರ. ನಿಮಗೆ ಕರ್ನಾಟಕ ಸಂಘದ ಪರವಾಗಿ ಧನ್ಯವಾದಗಳು..

0
    0
    Your Cart
    Your cart is emptyReturn to Shop