ಕನಸುಗಳ ಮಾರುಕಟ್ಟೆಯಲಿ
ಕನಸುಗಳ ಮಾರಲು ಬಂದಿಹೆನು
ಇಲ್ಲಿ ತರಹೇವಾರಿ ಕನಸುಗಳು ಲಭ್ಯ
ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ..
ಸಾಮಾಜಿಕ, ರಾಜಕೀಯ, ಶೈಕ್ಷಣಿಕ,
ಆರ್ಥಿಕ, ಧಾರ್ಮಿಕ….
ಯಾರಿಗೆ ಯಾವುದು ಬೇಕೋ ಆಯ್ದುಕೊಳ್ಳಿ
ಕೆಲವೊಂದು ಬಿಕರಿಯಾಗದೆ
ಹಾಗೆ ಉಳಿದಿವೆ ಧೂಳಿಡಿದು
ರಂಗು ರಂಗಿನ ಕನಸುಗಳು ಮಾತ್ರ
ಚೌಕಾಸಿ ಇಲ್ಲದೆ ಮಾರಾಟವಾಗುತಿವೆ
ಸತ್ವವಿದ್ದು, ತಳುಕು ಬಳಕು ಇಲ್ಲದವು
ಸುಮ್ಮನಿದ್ದು ಬಿಟ್ಟಿವೆ ಲೋಕದ
ರೀತಿ ರಿವಾಜು ಕಂಡು
ಗ್ರಾಹಕರು ಕಡಿಮೆ ಎಂದಲ್ಲ
ಆಯ್ದುಕೊಳ್ಳುವವರು ಕಡಿಮೆ ಎಂದು
ಸ್ವರ್ಗದ ಆಸೆಯ ಕನಸುಗಳು
ಬೇಗ ಬೇಗ ಖಾಲಿಯಾಗುತಿವೆ
ಯಾವುದೇ ರಿಯಾಯಿತಿ ಇಲ್ಲದೆ..
ಮಾಡಿದ್ದು ಕೆಟ್ಟದ್ದಾದರೂ
ನರಕದ ಕನಸುಗಳು ಬೇಡವಾಗಿವೆ
ಹಾಗಿದ್ದರೆ ಹೇಳಿಬಿಡಿ,
ನಿಮಗೆ ಯಾವುದು ಇಷ್ಟ ಅದೇ
ಮಾರುವೆ ನಿಮ್ಮಿಷ್ಟದ ದರದಲಿ….