‘ಮಕ್ಕಳ ಕಲಿಕಾ ಒತ್ತಡ ತಗ್ಗಿಸುವ ಪೊಪೆಟ್ ಶೋ’ – ಶ್ರೀ ಎಂ ಎಚ್ ಲಷ್ಕರಿ

ಶ್ರೀ ಎಂ ಎಚ್ ಲಷ್ಕರಿ ತರಬೇತಿಯಲ್ಲಿ ಪೊಪ್ಪೆಟ್ ಶೋ ವೀಕ್ಷಿಸುತ್ತಿರುವ ಮಕ್ಕಳು 
ಲೇಖಕರು ನಲಿ ಕಲಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು
ವಿಜಯಪುರ ಜಿಲ್ಲೆ

“ಒಂದು ಚಿತ್ರಪಟ ಸಾವಿರ ಶಬ್ದಗಳಿಗೆ ಸಮಾನ ” ಎಂಬಂತೆ ಒಂದು ಪೊಪ್ಪೆಟ್ ಶೋ ಅದಕ್ಕಿಂತಲೂ ಉತ್ಕೃಷ್ಟವಾದ ,ಆಸಕ್ತಿದಾಯಕ ಕಲಿಕೆಗೆ , ಹಾಗೂ ಕಲಿಕೆಯ ಶಾಶ್ವತ ಉಳಿಕೆಗೆ , ತುಂಬಾ ಸಹಾಯಕಾರಿಯಾಗಿದೆ .

ನಲಿ – ಕಲಿ ಎಂಬ ಶಿಕ್ಷಣ ವ್ಯವಸ್ಥೆಯಲ್ಲಿ ಮೆಟ್ಟಿಲುಗಳು , ಮೈಲಿಗಲ್ಲುಗಳು , ವಾಚಕಗಳು , ಹಾಡುಗಳು ,ಕಥೆಗಳು , ಸನ್ನಿವೇಶ ರಚನೆಗಳು ,ಕ್ರಾಫ್ಟ್ ಗಳು , ಸಂದರ್ಶನಗಳು , ಸರಳ ಪ್ರಯೋಗಗಳು , ಮೂಕಾಭಿನಯಗಳು , ಹೀಗೆ ಹತ್ತು ಹಲವು ಬಗೆಯ ಚಟುವಟಿಕೆಗಳಿಂದಲೇ ಬೋಧನಾ ಕಲಿಕಾ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತದೆ . ಇಲ್ಲಿ ಶಿಕ್ಷಕರು ಕೇವಲ ಸುಗಮಕಾರರಾಗಿ ಕಾರ್ಯನಿರ್ವಹಿಸುತ್ತಾರೆ . ಅಂದರೆ ಇಲ್ಲಿ ಸ್ವಕಲಿಕೆ , ಸ್ವವೇಗದ ಕಲಿಕೆ ,ಶಿಶು ಕೇಂದ್ರಿತ ಕಲಿಕೆಯನ್ನು ಆಧಾರವಾಗಿಟ್ಟುಕೊಂಡು ನಡೆಯುವ ಒಂದು ಪ್ರಕ್ರಿಯೆ . ಇಲ್ಲಿ ಬೆಳಗಿನ ಜಾವ ವರ್ಗ ಕೋಣೆಯನ್ನು ಪ್ರವೇಶಿಸಿದ ಮಗು ಮೊದಲ ಅವಧಿಯಿಂದ ಸಾಯಂಕಾಲದ ಕೊನೆಯ ಅವಧಿಯವರೆಗೂ ಯಾವುದೇ ಆಲಸ್ಯವಿಲ್ಲದೆ , ಹಸನ್ಮುಖಿಯಾಗಿ ಹಲವು ಬಗೆಯ ಚಟುವಟಿಕೆಗಳಿಂದ ಕೆಲವು ಬಾರಿ ಭಾಗಶ: ಗೆಳೆಯರ ಸಹಾಯದಿಂದ , ಕೆಲವೊಮ್ಮೆ ಸಂಪೂರ್ಣ ಗೆಳೆಯರ ಸಹಕಾರದಿಂದ ,ಇನ್ನೂ ಕೆಲವೊಮ್ಮೆ ಭಾಗಶ: ಶಿಕ್ಷಕರ ಸಹಕಾರದಿಂದ ಹಾಗೂ ಸಂಪೂರ್ಣ ಶಿಕ್ಷಕರ ಸಹಕಾರದಿಂದ ಕಲಿಯುತ್ತಾ ಸಾಗುತ್ತದೆ .ಕೊನೆಗೆ ಮಗು ಸ್ವ ಮೌಲ್ಯಮಾಪನವನ್ನು ಮಾಡಿಕೊಳ್ಳುತ್ತದೆ . ಈ ಕಲಿಕಾ ವಿಧಾನವು 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರವಾಗಿ , ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದಾರಿ ದೀಪವಾಗಿಟ್ಟುಕೊಂಡು ಮುನ್ನಡೆಯುವ ಒಂದು ವ್ಯವಸ್ಥಿತ ಕಲಿಕಾ ವಿಧಾನವಾಗಿದೆ . ಇವುಗಳಲ್ಲಿ ಬರುವ ಹಲವು ಬಗೆಯ ಚಟುವಟಿಕೆಗಳು ಮಗುವಿನಲ್ಲಿ ಪ್ರತಿನಿತ್ಯ ಹೊಸತನವನ್ನು ಕಲಿಯುವ ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತದೆ . ಅಲ್ಲದೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ವೃದ್ಧಿಸುತ್ತದೆ .

ಇಂತಹ ವಿಧಾನಗಳಿಂದಾಗಿ ಮಕ್ಕಳ ಕಲಿಕಾ ಮಟ್ಟ ವೇಗವಾಗಿ ವೃದ್ಧಿಸುತ್ತಾ ಹೋಗುತ್ತದೆ .ಅಲ್ಲದೆ ಕಲಿಕೆಯಲ್ಲಿ ಸದಾ ಹಸನ್ಮುಖರಾಗಿ , ಆಸಕ್ತಿದಾಯಕರಾಗಿ ತೊಡಗಿರುವುದರಿಂದ ಶಾಲೆಗಳಿಗೆ ಮಕ್ಕಳು ಗೈರಾಗುವುದು ತುಂಬಾ ವಿರಳ . ಇತ್ತೀಚಿಗೆ ಶಿಕ್ಷಣ ತಜ್ಞರು, ಈ ನಲಿ-ಕಲಿ ವಿಧಾನದಿಂದ ಪ್ರೇರೇಪಿತರಾಗಿ ನಲಿ-ಕಲಿ ವಿಧಾನದಲ್ಲಿಯೇ ಆಂಗ್ಲ ಭಾಷೆಯನ್ನು ಜಾರಿಗೊಳಿಸಿರುತ್ತಾರೆ . ಇಲ್ಲಿಯೂ ಸಹ ಬೋಧನಾ ಕಲಿಕಾ ಪ್ರಕ್ರಿಯೆಯು ಚಟುವಟಿಕೆ ಆಧಾರಿತವಾಗಿರುತ್ತದೆ . ಹೀಗಾಗಿ ಮಕ್ಕಳು ಸದಾ ಚೈತನ್ಯ ಶೀಲರಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ .

ಲೇಖಕ ಶ್ರೀ ಎಂ ಎಚ್ ಲಷ್ಕರಿ

ಈ ವ್ಯವಸ್ಥೆಯಲ್ಲಿ ‘ಪೊಪ್ಪೆಟ್ ಶೋ’ ಎಂಬ ಒಂದು ವಿಶಿಷ್ಟವಾದ ಚಟುವಟಿಕೆ ಇದೆ . ಪ್ರತಿಯೊಂದು ಚಟುವಟಿಕೆಯು ತನ್ನದೇ ಆದ ಒಂದು ಶೀರ್ಷಿಕೆ , ಹಾಗೂ ಲೊಗೊವನ್ನು ಹೊಂದಿರುತ್ತದೆ . ಈ ಚಟುವಟಿಕೆಯು ಕಾರ್ಡುಗಳಲ್ಲಿ ಒಂದು ಚಿಕ್ಕ ಕಥೆಯನ್ನು (ಸನ್ನಿವೇಶವನ್ನು) ಹೊಂದಿರುತ್ತದೆ . ಆ ಸನ್ನಿವೇಶಗಳಲ್ಲಿ ವಿವಿಧ ಪಾತ್ರಗಳು ಇರುತ್ತವೆ . ಪ್ರತಿಯೊಂದು ಪಾತ್ರವೂ ತನ್ನದೇ ಆದ ಧ್ವನಿಯನ್ನು ಹಾಗೂ ಧ್ವನಿಯ ಏರಿಳಿತವನ್ನು ಹೊಂದಿರುತ್ತದೆ . ಈ ಪಾತ್ರಗಳನ್ನು ತರಗತಿಗಳಲ್ಲಿ ಶಿಕ್ಷಕರು ವಿವಿಧ ಮಕ್ಕಳಿಗೆ ಹಂಚಿ ಕೊಟ್ಟಿರುತ್ತಾರೆ .ಅಲ್ಲದೆ ಧ್ವನಿಯ ಏರಿಳಿತವನ್ನು ರೂಢಿಗತಗೊಳಿಸಿರುತ್ತಾರೆ. ಹಾಗೂ ಪಾತ್ರಗಳಿಗೆ ಸಂಬಂಧಿಸಿದಂತೆ ಚಿತ್ರಗಳನ್ನು ಸಿದ್ದಗೊಳಿಸಿ ಅವುಗಳ ಕೈಕಾಲುಗಳು ಅಲುಗಾಡುವಂತೆ ತಯಾರಿಸಿ ಅದರ ಮಧ್ಯ ಭಾಗದಲ್ಲಿ ಒಂದು ಐಸ್ ಕ್ರೀಮ್ ಕಡ್ಡಿ ,ಅಥವಾ ಶಾಹಿ ಮುಗಿದ ಪೆನ್ನಿನ ಕಡ್ಡಿಯನ್ನು ಅಂಟಿಸಿ ಬಳಸುತ್ತಾರೆ . ಎಲ್ಲದಕ್ಕೂ ಮೊದಲು 2’×3′ ಅಥವಾ 3’×4′ ಅಡಿ ಅಳತೆಯ ಒಂದು ಶ್ವೇತವರ್ಣದ ಸ್ಕ್ರೀನ್ ಅನ್ನು ತಯಾರಿಸಿಕೊಂಡಿರುತ್ತಾರೆ . (ಚಿತ್ರದಲ್ಲಿ ತೋರಿಸಿರುವ ಸ್ಕ್ರೀನಿನಂತೆ ) ಈ ಸ್ಕ್ರೀನ್ ಅನ್ನು ತರಗತಿಯ ಒಂದು ಕಡೆ ಎಲ್ಲ ಮಕ್ಕಳಿಗೆ ಕಾಣುವಂತೆ ನಿಲ್ಲಿಸಿ ಅದರ ಹಿಂಭಾಗದಲ್ಲಿ ಟಾರ್ಚ್ ಅಥವಾ ವಿದ್ಯುತ್ ಬಲ್ಪನಿಂದ ಬೆಳಕು ನೇರವಾಗಿ ಸ್ಕ್ರೀನ್ ಮೇಲೆ ಬೀಳುವಂತೆ ಮಾಡಲಾಗಿರುತ್ತದೆ . ನಂತರ ಸ್ಕ್ರೀನ್ನ ಹಿಂಭಾಗದಲ್ಲಿ ಕುಳಿತ ಕಾರ್ಡನಲ್ಲಿರುವ ಪಾತ್ರಗಳನ್ನು ರೂಢಿಗತಗೊಳಿಸಿಕೊಂಡಿರುವ ವಿದ್ಯಾರ್ಥಿಗಳು, ಧ್ವನಿಯ ಏರಿಳಿತದೊಂದಿಗೆ ತಮ್ಮ ಕೈಯಲ್ಲಿರುವ ಪೊಪ್ಪೆಟ್ಗಳನ್ನು (ಕಥೆಯಲ್ಲಿ ಬರುವ ಪ್ರಾಣಿ ಪಕ್ಷಿಗಳ ಮಾದರಿ) ಸನ್ನಿವೇಶಕ್ಕೆ ತಕ್ಕಂತೆ ಅಲುಗಾಡಿಸುತ್ತಾ , ತಮ್ಮ ಸಂಭಾಷಣೆಯನ್ನು ಮುಂದುವರೆಸುತ್ತಾರೆ . ಆಗ ಆ ಪ್ರಾಣಿಗಳ ಅಥವಾ ಪಕ್ಷಿಗಳ ಚಿತ್ರಗಳ ನೆರಳು ಸ್ಕ್ರೀನ್ ಮೇಲೆ ಬಿದ್ದಾಗ ಮುಂಭಾಗದಲ್ಲಿ ಕುಳಿತು ಸ್ಕ್ರೀನ್ ವೀಕ್ಷಿಸುತ್ತಿರುವ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಕಾತುರತೆಯಿಂದ ಸನ್ನಿವೇಶಗಳನ್ನು ವೀಕ್ಷಿಸುತ್ತಾ , ಧ್ವನಿಯ ಏರಿಳಿತ ಆಲಿಸುತ್ತಾ ಕಥೆಯನ್ನು ನೆನಪಿಟ್ಟುಕೊಳ್ಳುತ್ತಾರೆ .

ಈ ರೀತಿಯ ಚಟುವಟಿಕೆ ಆಧಾರಿತ ಪೊಪೆಟ್ ಶೋನಿಂದ ಕಲಿತ ಕಲಿಕೆಯು , ಮಗುವಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಹಾಗೂ ಮಕ್ಕಳಲ್ಲಿ ಸಂಭಾಷಣ ಕೌಶಲ್ಯ ವೃದ್ಧಿಯಾಗುತ್ತಾ ಹೋಗುತ್ತದೆ .

ಹೀಗೆ ಸರಕಾರಿ ಶಾಲೆಗಳಲ್ಲಿ ಅವರ ವಯೋಮಾನಕ್ಕೆ ತಕ್ಕಂತೆ ಅವರಿಗೆ ಏನನ್ನು ? ಎಷ್ಟನ್ನು ? ಯಾವ ರೀತಿ ? ಕಲಿಸಬೇಕು ಎಂಬುದನ್ನು ವಿಶೇಷ ಶಿಕ್ಷಣ ತಜ್ಞರ ,ಮನೋವಿಜ್ಞಾನಿಗಳ , ಸಲಹೆ ಸೂಚನೆಯಂತೆ ವಿಷಯಗಳನ್ನು ಸಿದ್ಧಪಡಿಸಲಾಗಿರುತ್ತದೆ . ಅಲ್ಲದೆ ಅತ್ಯಂತ ತ್ವರಿತವಾಗಿ ಹಲವು ಬದಲಾವಣೆಗಳೊಂದಿಗೆ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕಾಲಮಾನಕ್ಕೆ ತಕ್ಕಂತೆ ಹೊಂದಿಕೊಳ್ಳಲು ಶಿಕ್ಷಕರಿಗೆ ವ್ಯವಸ್ಥಿತವಾಗಿ ತರಬೇತಿಗಳನ್ನು ನೀಡಲಾಗುತ್ತಿದೆ . ನಿಮ್ಮ ಮಗು ‘ಸರ್ಕಸ್ ನಲ್ಲಿ ಚಾಬೂಕಿಗೆ ಅಂಜಿ ತರಬೇತಿ ಪಡೆದ ಸಿಂಹದಂತೆ ಆಗುವ ಬದಲು’, ‘ಪಿಂಜರದೊಳಗಿದ್ದ ಗಿಳಿಯಂತೆ ಕಂಠಪಾಠ ಮಾಡಿ ಜನರನ್ನು ಹಾಗೂ ನಿಮ್ಮನ್ನು ನಿರ್ದಿಷ್ಟ ಅವಧಿಯವರೆಗೆ ರಂಜಿಸದೇ’, ಇಂತಹ ಚಟುವಟಿಕೆಗಳಿಂದ ಹಸನ್ಮುಖಿಯಾಗಿ, ಶಾಶ್ವತ ಕಲಿಕೆ ಕಲಿತು, ಸದೃಢ ಪ್ರಜೆಯಾಗಲು ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿರಿ. ಇಲ್ಲಿ ಕೇವಲ ಪಾಠಗಳಷ್ಟೇ ಅಲ್ಲದೆ , ನಿಗದಿತ ಅವಧಿಗಳಲ್ಲಿ ಆಟಗಳು ,ಮೌಲ್ಯಗಳು ,ಶಿಸ್ತು , ಕಲಿಯುತ್ತಾರೆ. ಸರಕಾರಿ ಶಾಲೆಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಮನೋಭಾವನೆಯನ್ನು ಬದಿಗೊತ್ತಿ , ಶಾಲೆಗಳಲ್ಲಿ ಸ್ಥಾಪನೆಯಾಗಿರುವ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತವಾರಿ ಸಮಿತಿಗಳಲ್ಲಿ ಸದಸ್ಯರಾಗಿ , ಪ್ರತಿ ಸಭೆಗಳಲ್ಲಿ ನಿಮ್ಮ ಮಕ್ಕಳ ಪ್ರಗತಿಯನ್ನು ಪರಿಶೀಲಿಸುತ್ತಾ ,ಶಿಕ್ಷಕರಿಗೆ ನಿಮ್ಮ ಸಲಹೆ ಸೂಚನೆ ಹಾಗೂ ಪ್ರೋತ್ಸಾಹ ನೀಡುತ್ತಾ ಬನ್ನಿ. ಯಾವ ವಿದೇಶಿ ವಿಶ್ವವಿದ್ಯಾಲಯಗಳೂ ನೀಡದ ಗುಣಮಟ್ಟದ ಶಿಕ್ಷಣವನ್ನು, ಕರ್ನಾಟಕದ ಸರ್ಕಾರಿ ಶಾಲೆಗಳು ನಿಮ್ಮ ಮಕ್ಕಳಿಗೆ ನೀಡುತ್ತವೆ . ನಕಾರಾತ್ಮಕ ಮನೋಭಾವನೆಯನ್ನು ಬಿಟ್ಟು, ಸಕಾರಾತ್ಮಕವಾಗಿ ಯೋಚಿಸಿ, ಒಂದು ಹೆಜ್ಜೆಯನ್ನು ನಮ್ಮೆಡೆಗೆ ಇಟ್ಟು ನೋಡಿ. ಪೊಪ್ಪೆಟ್ ಶೋ ಎಂಬುದು ಕೇವಲ ಒಂದು ಚಟುವಟಿಕೆ ಮಾತ್ರ ಇಂತಹ ಹತ್ತ-ಹಲವು ಬಗೆಯ ಚಟುವಟಿಕೆಗಳು, ನಿಮ್ಮ ಮಕ್ಕಳ ಭವಿಷ್ಯವನ್ನು ಅತ್ಯಂತ ಸೃಜನಾತ್ಮಕವಾಗಿ ಸೃಷ್ಟಿಸುತ್ತದೆ ಹಾಗೂ ಮುಪ್ಪಾವಸ್ಥೆಯವರೆಗೂ ನಿಮ್ಮೊಂದಿಗೆ ನಿಮ್ಮ ಮಕ್ಕಳನ್ನು ಬೆಸೆದಿಡುತ್ತವೆ.

0
    0
    Your Cart
    Your cart is emptyReturn to Shop