ಮುಂಬಯಿ ಕನ್ನಡ ಪರಿಸರ – ವಿಮರ್ಶಕಿ ಅನುಸೂಯ ಯತೀಶ್

ಕರುನಾಡಿನಲ್ಲಿ ಕನ್ನಡ ಪಸರಿಸುತ್ತಿರುವುದು ನಮ್ಮ ನಾಡು ನುಡಿಗೆ  ಹೆಮ್ಮೆಯ ಸಂಗತಿ . ಕನ್ನಡ ಭಾಷೆ  ಕನ್ನಡಿಗರ ಉಸಿರು. ಅದು ಉಸಿರೊಳಗೆ ಬೆರೆತಿರುವ ಭಾವ ಬಂಧುರವಾಗಿದೆ. ಕನ್ನಡಿಗರು ಕರುನಾಡಿನಲ್ಲಿ ಸಾಹಿತ್ಯ ಸಾಧನೆಗೈಯ್ಯುತ್ತಿರುವುದು ಹರ್ಷದ ಸಂಗತಿಯಾದರೂ ಅದು ಅಷ್ಟಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಭಾಷೆ ಕೂಡ  ಗಡಿ ಮತ್ತು ಸೀಮೆಗಳನ್ನು ದಾಟಿ ತನ್ನ ಕೀರ್ತಿ ಪತಾಕೆ ಹಾರಿಸುತ್ತಿರುವುದು ಹೆಮ್ಮೆಯ ಸಂಗತಿ. ಅದಕ್ಕೆಲ್ಲ ಕಾರಣ ಕನ್ನಡಾಂಬೆಯ ಹೃದಯವಂತ ಬರಹಗಾರರೆಂದರೆ ತಪ್ಪಾಗಲಾರದು. ಪರಭಾಷೆ ಇರುವಂತಹ ಹೊರನಾಡಾದ  ಮುಂಬಯಿಯಲ್ಲಿ ಇದ್ದುಕೊಂಡು ಕನ್ನಡ ಸೇವೆ ಮಾಡುತ್ತಿರುವ ಕನ್ನಡಿಗರಲ್ಲಿ ಡಾ. ಜಿ ಎನ್ ಉಪಾಧ್ಯ ಕೂಡ ಪ್ರಮುಖರು. ಕನ್ನಡಿಗರಿಗಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು   ರೂಪಿಸಿ ಕಾರ್ಯಗತ ಮಾಡುತ್ತಿರುವುದು ಹರ್ಷದಾಯಕ ಸಂಗತಿ.

1857ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಸ್ಥಾಪಿತವಾದ ಮೂರು ವಿಶ್ವವಿದ್ಯಾಲಯಗಳಲ್ಲಿ ಮುಂಬೈ ಕೂಡ ಒಂದಾಗಿದೆ. ಕನ್ನಡಿಗರಾದ ಜಿ.ಎನ್ ಉಪಾದ್ಯ ಅವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಉಳಿಸಿ ಬೆಳೆಸಲು ಅವಿರತ ಶ್ರಮಿಸುತ್ತಿರುವ ಬಹುಶ್ರುತ ವಿದ್ವಾಂಸರು.
ಬಹು ಸೂಕ್ಷ್ಮವಾದ ಸಾಹಿತ್ಯ ಅನುಸಂಧಾನದ ಮೂಲಕ ಬರೋಬ್ಬರಿ 82 ಅಮೂಲ್ಯ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕನ್ನಡ ಪ್ರಾಧ್ಯಾಪಕರು. ತನ್ನ ಸಾಹಿತ್ಯ ಸಾಧನೆಯೊಂದಿಗೆ ತನ್ನ ಸಹೊದ್ಯೋಗಿಗಳು ಮತ್ತು ತನ್ನ ವಿದ್ಯಾರ್ಥಿಗಳ ಬರೆಹಕ್ಕೆ ಪ್ರೋತ್ಸಾಹ ತುಂಬುತ್ತಾ ಅವರ ಅಧ್ಯಯನದ ಕೃತಿಗಳನ್ನು ತಮ್ಮ ಮುದ್ರಣ ಸಂಸ್ಥೆಯ ಮೂಲಕ ಪ್ರಕಟಿಸಿ ಮಹಾರಾಷ್ಟ್ರದಲ್ಲಿ ಕನ್ನಡದ ಅಸ್ಮಿತೆಯನ್ನು ಜೀವಂತವಾಗಿರಿಸಲು ಶ್ರಮಿಸುತ್ತಿಸುವ ಭಾಷಾಪ್ರೇಮಿ ಇವರು.

ಕನ್ನಡ ವಾಙ್ಮಯಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ ಕರುನಾಡಿನ ದಿಗ್ಗಜ ಕವಿಗಳ ಸಾಹಿತ್ಯ ಸಮೀಕ್ಷೆ ಮಾಡುವುದರ ಜೊತೆಗೆ ಹಲವಾರು ಸಂಶೋಧನಾ ಕೃತಿಗಳು, ವಿಚಾರ ಸಾಹಿತ್ಯ, ವಿಮರ್ಶೆ, ವಚನ ಸಾಹಿತ್ಯ, ನಾಟಕ, ಅನುಭಾವ ಸಾಹಿತ್ಯ ಸೇರಿದಂತೆ ಹತ್ತು ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ  ಮಾಡುತ್ತಿದ್ದಾರೆ.
ಮಾಯನಗರಿಯಾದ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಾ

“ತೇರನೆಳೆಯೋಣ ನಾವು
ಎಲ್ಲಿದ್ದರೇನು?
ಬೊಂಬಾಯಿ ಮದ್ರಾಸು ಕಲ್ಕತ್ತ
ಡೆಲ್ಲಿ ಎಲ್ಲೆಂದರಲ್ಲಿ
ಕನ್ನಡದ ಉಸಿರಾಟ
ಎದೆಗಳಿರುವಲ್ಲಿ ‌
ಸತ್ವ ಬೀಜಗಳ ಚೆಲ್ಲಿ
ಎಲ್ಲಿದ್ದರಲ್ಲಿ”

ಎಂಬ ಡಾ. ಜಿ ಎ ಶಿವರುದ್ರಪ್ಪನವರ ಕನ್ನಡಾಭಿಮಾನದ ಸಾಲುಗಳನ್ನು ಎದೆಗೆ ಇಳಿಸಿಕೊಂಡು ಕನ್ನಡದ ಕೈಕಂರ್ಯಗೈಯ್ಯುತ್ತಿರುವ ಡಾ. ಜಿ ಎನ್ ಉಪಾಧ್ಯ ಅವರ ದಣಿವರಿಯದ ಸಾಹಿತ್ಯ ಸೇವೆಯಲ್ಲಿ ಇದೀಗ 82ನೇ ಕೃತಿಯಾಗಿ ‘ಮುಂಬೈ ಕನ್ನಡ ಪರಿಸರ’ ಕೃತಿಯು  ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದೆ. ಕರ್ನಾಟಕದ  ಬೆಂಗಳೂರನ್ನು  ಬಿಟ್ಟರೆ ಅತಿ ಹೆಚ್ಚು ಕನ್ನಡಿಗರು ವಾಸಿಸುವ ಮುಂಬೈಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಸೇವೆಯನ್ನು  ಕುರಿತಾದ ಸಮಗ್ರ ನೋಟ ಬೀರುವ ಕೃತಿ ಇದಾಗಿದೆ. ಮುಂಬೈಯ  ಕನ್ನಡ ಇತಿಹಾಸ ಸೇರಿದಂತೆ ಅಂದಿನಿಂದ ಇಂದಿನವರೆಗೆ ಸಾಗಿ ಬಂದ ಕನ್ನಡಿಗರ ಸಾಂಸ್ಕೃತಿಕ ಸಾಧನೆಯ ವಿವಿಧ ಮಜಲುಗಳನ್ನು ತಮ್ಮ ಪ್ರಬುದ್ಧ ಜ್ಞಾನ ಭಂಡಾರ ಬಳಸಿ ಸುಲಲಿತವಾದ ನಿರೂಪಣೆಯೊಂದಿಗೆ ಓದುಗರ ಮುಂದೆ ಇರಿಸಿದ್ದಾರೆ. 488 ಪುಟಗಳುಳ್ಳ ಬೃಹತ್ ಗ್ರಂಥದಲ್ಲಿ ಮುಂಬಯಿ ಕನ್ನಡಿಗರಿಗೆ ಸಂಬಂಧಿಸಿದಂತೆ ಅಮೂಲ್ಯವಾದ ಮಾಹಿತಿಗಳನ್ನು ಹೆಕ್ಕಿ ತೆಗೆದು ಕುತೂಹಲಕರವಾದ ಸಂಗತಿಗಳನ್ನು ಅವಲೋಕಿಸಿದ್ದಾರೆ. ಈ ಪುಸ್ತಕದಲ್ಲಿ ಉಲ್ಲೇಖಿತವಾಗಿರುವ ಮಾಹಿತಿಗಳನ್ನು ನೋಡಿದಾಗ ಲೇಖಕರ ಅಧ್ಯಯನದ ಆಳ, ಬದ್ಧತೆ, ಸೂಕ್ಷ್ಮ ಸಿಂಹವಲೋಕನ ವ್ಯಾಪಕವಾಗಿರುವುದು ಕಂಡುಬರುತ್ತದೆ. ಮುಂಬೈ ಕನ್ನಡಿಗರ ಮಾಹಿತಿಯನ್ನು ಕನ್ನಡಿಗರಿಗೆ ದಕ್ಕಿಸುವಲ್ಲಿ ಇವರ ಶ್ರಮ ಮತ್ತು ಆಸಕ್ತಿ ಶ್ಲಾಘನೀಯವಾದದ್ದು. ತಮ್ಮ ಕಾಯಕವನ್ನು ಹೊಟ್ಟೆಪಾಡಿನ ಮಾಧ್ಯಮವನ್ನಾಗಿ ಮಾಡಿಕೊಳ್ಳದೆ ತನುಮನ ಪೂರ್ವಕವಾಗಿ ಕನ್ನಡ ಸೇವೆ ಮಾಡುತ್ತಿರುವುದರ ಪ್ರತಿಫಲ ಈ ಕೃತಿಯಾಗಿದೆ.

ಮುಂಬೈಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದ್ದು, ಕನ್ನಡಿಗರ ಭಾವಕೋಶದಲ್ಲಿ ಮುಂಬೈ ಹಾಸುಹೊಕ್ಕಾಗಿದೆ ಎನ್ನುವ ಡಾ. ಜಿ ಎನ್ ಉಪಾಧ್ಯ ಅವರು ಮುಂಬೈ ನಗರವನ್ನು ಕೇವಲ ಸಾಹಿತ್ಯಿಕವಾಗಿ ಮಾತ್ರ ನೋಡದೆ ಅಲ್ಲಿ ನೆಲೆಸಿರುವ ಕನ್ನಡಿಗರ ವಿವಿಧ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮುಂಬೈ ವಲಸೆ ಬಂದ ಕನ್ನಡಿಗರು ಲೇಖನದಲ್ಲಿ ಸವಿವರವಾಗಿ ದಾಖಲಿಸಿದ್ದಾರೆ. ಸಂದರ್ಭೋಚಿತವಾಗಿ ಲೇಖನಗಳಿಗೆ ಅಡಿ ಟಿಪ್ಪಣಿಯನ್ನು ನಮೂದಿಸಿ ಹಲವು ವಿಶಿಷ್ಟ ವಿಚಾರಗಳನ್ನ ತೆರೆದಿಟ್ಟಿದ್ದಾರೆ.

ಭಾರತ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಎಷ್ಟೆಲ್ಲ ಪ್ರಪ್ರಥಮಗಳಿಗೆ ಮುಂಬೈ ನೆಲೆಯಾಗಿತ್ತು ಎಂಬ ವಿಸ್ಮಯಕಾರಿ ಸಂಗತಿ ಅಲ್ಲಿನ ಕನ್ನಡಿಗರ ಬಗ್ಗೆ ಹೆಮ್ಮೆಯ ಭಾವ ಮೂಡಿಸುತ್ತದೆ. ಮುಂಬೈಯಲ್ಲಿರುವ ಕನ್ನಡ ಸಂಸ್ಥೆಗಳಷ್ಟು  ಕನ್ನಡ ಸಂಸ್ಥೆಗಳು  ಜಗತ್ತಿನ ಬೇರೆ  ಯಾವ ಮೂಲೆಯಲ್ಲೂ ಇಲ್ಲದಿರುವುದು ಚಾರಿತ್ರಿಕ ಸಂಗತಿ. ಎಂ.ಟಿ ಪೂಜಾರಿ, ಡಾ.ಉಮಾ ರಾಮರಾವ್, ಮಿತ್ರಾ ವೆಂಕಟ್ರಾಜ್, ಶಿಮುಂಜೆ, ಅವರ ಬದುಕ ಬರಹಗಳ ಸಾಧನೆ ಕುರಿತು, ಅವರೊಂದಿಗೆ ಉಪಾಧ್ಯ ಅವರು ನಡೆಸಿದ ಸಂವಾದಗಳು ಮುಂಬೈಯಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಅವರ ಕೊಡುಗೆಗಳನ್ನು ಪರಿಚಯಿಸುತ್ತವೆ. ಆ ಮೂಲಕ ಕನ್ನಡ ಸಂಸ್ಕೃತಿಯ ಬಣ್ಣ ಬನಿಯನ್ನ ಗಾಢಗೊಳಿಸಲು ಶ್ರಮಿಸುತ್ತಿರುವ ಹಿರಿಯ ಸಾಹಿತಿಗಳನ್ನು ಲೇಖಕರು  ಅಭಿನಂದಿಸಿದ್ದಾರೆ.

ಮುಂಬೈಯಲ್ಲಿ ಇದ್ದುಕೊಂಡು ಕನ್ನಡ ಸಾಹಿತ್ಯದ ತೇರನ್ನೆಳೆದ ಡಾ. ಬಿ ಎ ಸನದಿ, ಅರವಿಂದ ನಾಡಕರ್ಣಿ, ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಡಾ.ವ್ಯಾಸರಾವ ನಿಂಜೂರು, ಡಾ.ಜಿ.ವಿ. ಕುಲಕರ್ಣಿ, ಜಯಂತ್ ಕಾಯ್ಕಿಣಿ ಸೇರಿದಂತೆ ಹಲವಾರು ಮಹಾನ್ ಕವಿಗಳು, ಕಥೆಗಾರರು, ವಿಮರ್ಶಕರು, ಕಾದಂಬರಿಕಾರರ ಸಾಹಿತ್ಯ ಯಾನದ ಸಂಕ್ಷಿಪ್ತ ಪರಿಚಯ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ. ಈ ಪುಸ್ತಕ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಯಕ್ಷಗಾನ, ಕಲಾ ಕ್ಷೇತ್ರ, ಸಂಗೀತ, ಬ್ಯಾಂಕಿಂಗ್, ಪತ್ರಿಕೋದ್ಯಮ, ಪ್ರಕಾಶನ, ರಾಜಕೀಯ ಕ್ಷೇತ್ರಗಳಲ್ಲಿ ತನ್ನ ವಿಶ್ಲೇಷಣೆಯ ಪಾರಮ್ಯ ಮೆರೆದಿದೆ.

ಕಾಳಿದಾಸನ ಶಾಕುಂತಲ ನಾಟಕದ ಅನುವಾದ, ಕನ್ನಡದ ಮೊದಲ ಸಾಮಾಜಿಕ ನಾಟಕ ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನದ ಪ್ರಕಟಣೆ, ಕನ್ನಡ ಪತ್ರಿಕೆ ಒಂದರಲ್ಲಿ ಮೊದಲ ವ್ಯಂಗ್ಯ ಚಿತ್ರದ ಪ್ರಕಟಣೆ, ಶಿವರಾಮ ಕಾರಂತರ ಯಕ್ಷಗಾನ ಖ್ಯಾತಿ(ಬ್ಯಾಲೆ?) ಪ್ರದರ್ಶನ, ಡಾ. ಅನುಪಮಾ ನಿರಂಜನ, ಬಿ .ಎ. ಸನದಿ ಅವರ ಮೊದಲ ಕತೆಗಳು ಬೆಳಕು ಕಂಡಿದ್ದು, ವಿ.ಕೃ.ಗೋಕಾಕರು ನವ್ಯ ಪಂಥದ ರೂವಾರಿಯಾಗಿದ್ದು, ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ಕನ್ನಡದ ಮೊದಲ ನಾಟಕ  ರಚನೆಯಾಗಿದ್ದು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಮಾಹಿತಿಗಳು ಅಧ್ಯಯನದಲ್ಲಿ ತೊಡಗಿರುವವರಿಗೆ ನೆರವಾಗುತ್ತವೆ.

ಮುಂಬೈಯಲ್ಲಿ ಪ್ರಕಟವಾದ ಕನ್ನಡ ಕೃತಿಗಳ ಸಮಗ್ರ ಮಾಹಿತಿಯ ಜೊತೆಗೆ ಕನ್ನಡ ಸಂಘಟನೆಗಳ ಕಾರ್ಯವೈಖರಿ ಕುರಿತ ಲೇಖನಗಳು ಮಾಹಿತಿ ಪೂರ್ಣವಾಗಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ದುಡಿದ, ದುಡಿಯುತ್ತಿರುವ ಕನ್ನಡಿಗರ ಕುರಿತಾದ ಟಿಪ್ಪಣಿಗಳು ಗಮನಾರ್ಹವಾದವು.

ಡಾ.ಜಿ.ಎನ್. ಉಪಾಧ್ಯ ಅವರ ಕೃತಿಗಳ ಕುರಿತಾದ ಲೇಖನಗಳಲ್ಲಿ ಬರೆದ ‘ಮಹಾರಾಷ್ಟ್ರದ ಕನ್ನಡ ಶಾಸನಗಳು ಸಾರುವ ಕನ್ನಡದ ಹಿರಿಮೆ’ ಕೃತಿಯ ವಿಶ್ಲೇಷಣೆಯಲ್ಲಿ ಕನ್ನಡ ಭಾಷೆ,  ಬದುಕು -ಬವಣೆಗಳು ಚಿತ್ರಿತವಾಗಿವೆ. ಇವರು
ನಿರಂತರವಾಗಿ ಸಂಶೋಧನಾ ಕಾರ್ಯದಲ್ಲಿ ನಿರತರಾದವರು. “ನಿಂತ ನೆಲದ ಸಂದ ಕಾಲದ ಋಣವನ್ನು ತೀರಿಸಲು ಸಂಶೋಧನಾ ಕಾರ್ಯದಲ್ಲಿ ತೊಡಗಿರುವೆ” ಎಂಬುದು ಅವರ ಎದೆಯಾಳದ ಮಾತು. ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಗೌರವ ಕಡಿಮೆ; ಆದರೆ ಅವುಗಳನ್ನು ಕಡೆಗಣಿಸಿದರೆ ಸಾಹಿತ್ಯ ವಾಹಿನಿಗೆ ಧಕ್ಕೆಯಾಗುತ್ತದೆ ಎಂಬುದು ಇವರ ಅಭಿಮತ. ಇವರ ಸಂಶೋಧನಾ ಕೃತಿಯಾಗಿ ಮುಂಬೈ ಕನ್ನಡ ಪರಿಸರ ನಮ್ಮ ಮಂದಿದೆ.

ಬಹಳ ಪ್ರಮುಖವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಂಸ್ಕೃತ ಕಲಿಸಿದ್ದು ಮುಂಬೈ ಕನ್ನಡಿಗ ಹೊಸ್ಕೆರೆ ನಾಗಪ್ಪ ಶಾಸ್ತ್ರಿ ಎಂಬ ಅಪೂರ್ವ ಮಾಹಿತಿ ಒಂದು ಈ ಮುಂಬೈ ಕನ್ನಡ ಪರಿಸರ ಕೃತಿಯಲ್ಲಿ ದಾಖಲಾಗಿದೆ. ಮುಂಬಯಿ ಕನ್ನಡ ವಿಶ್ವವಿದ್ಯಾಲಯವು ಇದುವರೆಗೆ 90 ಮಹತ್ವದ ಕೃತಿಗಳನ್ನು ಪ್ರಕಟಿಸಿರುವುದು ಇಲ್ಲಿ ಉಲ್ಲೇಖಿತವಾಗಿದೆ. ಬಹಳ ಪ್ರಮುಖವಾಗಿ ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆಯುವ ಚಟುವಟಿಕೆಗಳು, ಗ್ರಂಥಾಲಯಗಳ ಮಹತ್ವದ ಜೊತೆಗೆ ಅಲ್ಲಿ ನಡೆಯುವ ಸಂಶೋಧನೆಗಳು ಅಚ್ಚರಿ ಮೂಡಿಸುತ್ತವೆ.

ಅವಿರತವಾಗಿ  ಕನ್ನಡ ಸಾಹಿತ್ಯ ಪರಿಚಾರಿಕೆ ನಡೆಯುವ ಮುಂಬೈಯಲ್ಲಿ ಕನ್ನಡಕ್ಕಾಗಿ ದುಡಿದ ಜೀವಗಳು ಅಸಂಖ್ಯಾತ. ಅವರೆಲ್ಲರ ಸಮಗ್ರ ಮಾಹಿತಿಯನ್ನು ಕೊಡುವುದರ ಜೊತೆಗೆ ಈ ಕೃತಿ  21ನೇ ಶತಮಾನದ ಲೇಖಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ, ಕಲಾ ಭಾಗ್ವತ್ ಮುಂತಾದವರ ಸಾಹಿತ್ಯಿಕ ಸಾಧನೆಗಳನ್ನು ಕುರಿತ ಲೇಖನಗಳನ್ನೂ  ಒಳಗೊಂಡಿವೆ. ಒಟ್ಟಾರೆ 200 ವರ್ಷಗಳ ಇತಿಹಾಸವಿರುವ ಮುಂಬೈ ಕನ್ನಡಿಗರ ಸಾಹಸ ಸಾಧನೆ ಅಭಿನಂದನಾರ್ಹವಾದುದು. ಭಾರತದ ಭಾಗ್ಯನಗರಿ, ಭಾರತದ ಹೆಬ್ಬಾಗಿಲು ಎಂದೆಲ್ಲ ಹೆಸರುವಾಸಿಯಾದ ಮುಂಬೈಯ  ಕನ್ನಡ ತೇರಿನ ರೋಚಕ ಪಯಣವನ್ನು ಅವಿಸ್ಮರಣೀಯವಾಗಿಸಲು ಸಾಧಕರ ಸಾಧನೆಗಳನ್ನು  ಚಿತ್ರಿಸುವ ಮೂಲಕ ಕನ್ನಡಾಭಿಮಾನ ಮೆರೆದಿರುವ ಮುಂಬೈ ಕನ್ನಡ ಪರಿಸರ ಕೃತಿಯ ಲೇಖಕರಾದ ಡಾ. ಜಿ ಎನ್. ಉಪಾಧ್ಯ ಅವರಿಗೆ ಅಭಿನಂದನೆಗಳು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop