ನನ್ನಪ್ಪ ನನಗೊಂದು
ಸದಾ ನೆನಪಿಕೊಳ್ಳಬೇಕೆನಿಸುವ
ಸ್ಪೂರ್ತಿಯ ಪ್ರತಿಬಿಂಬ
ನನ್ನಪ್ಪನ್ನೊಳಗಿದ್ದ
ಆ ಚುರುಕುತನ
ಆ ಓಡಾಟದ ಲವಲವಿಕೆ
ದೊಡ್ಡವನಾದರೂ ಸಣ್ಣವರೊಂದಿಗೆ
ಬೆರೆತು ಮಕ್ಕಳಾಗಿರುತ್ತಿದ್ದ
ಆ ಪರಿಯ ವ್ಯಕ್ತಿತ್ವದ ಚಹರೆಗಳು
ಈಗಲೂ ನನಗೆ ಸ್ಪೂರ್ತಿಯ ಸೆಲೆಗಳೇ
ಅಪ್ಪ ನಮಗಾಗಿ ಊರು
ಬಂಧು ಬಳಗವ ಬಿಟ್ಟು ಬಂದವ
ಅಪ್ಪ ನಮಗಾಗಿ ಹತ್ತಿ ಗಿರಣಿಯಲ್ಲಿ
ನಿರಂತರವಾಗಿ ದುಡಿಮೆ ಗೈದವ
ಅಪ್ಪ ಅವ್ವನೊಡಗೂಡಿ ನಮಗೆಲ್ಲ
ಅನ್ನ -ಅಕ್ಷರ ಅರಿವೆ ನೀಡಿ ಬೆಳೆಸಿದವ
ಅಪ್ಪನ ಸದಾ ಒಡನಾಟ
ಧೂಮಪಾನಿಗಳೂ ಕುಡುಕರೊಂದಿಗೆಯೇ
ಆದರೂ ಬದುಕಿನೂದ್ದಕ್ಕೂ ಕುಡಿಯದೆ
ಬೀಡಿಯೂ ಸೇದದೆ ‘ಸಂಭಾವಿತ’ನೆಂಬ
‘ಪಟ್ಟ’ಕಟ್ಟಿಕೊಂಡು ಎಲ್ಲರ ‘ಪ್ರೀತಿ’ಗೆದ್ದವ
ಅಪ್ಪ ಒಬ್ಬ ಕನಸುಗಾರ
ನಮಗಾಗಿ ‘ಮಂಜೂರಾ’ದ
ಜನತಾ ಮನೆಯನ್ನು ಎಲ್ಲರಿಗಿಂತ
ಮುಂಚೆ ಚಿಮಣಿ,ಕಡಪದ ಕಲ್ಲುಗಳು
ಲೈಟುಗಳು ಹಾಗೂ ಬಣ್ಣಗಳಿಂದ ಸುಂದರಗೊಳಿಸಿದವ
ಅಪ್ಪ ಒಬ್ಬ ಸದಾ ‘ಮಿತಹಾರಿ’
ಅಪ್ಪನಿಗೆ ಊಟ ಎಂದರೆ ಅಷ್ಟಕಷ್ಟೇ
ಆದರೆ ಅಪ್ಪನಿಗೆ ಅವ್ವ ಮಾಡಿದ ‘ಪಾಯಸ’ವೆಂದರೆ ‘ಪಂಚಪ್ರಾಣ’
‘ಕಾರ ಮಂಡಕ್ಕಿ ಮೆಣಸಿನ ಕಾಯಿ’
ಜೀವನೂದ್ದಕ್ಕೂ ಅಪ್ಪ ಇಷ್ಟಪಡುತ್ತಿದ್ದ ಖಾಧ್ಯ
ಅಪ್ಪ ದುರಾಸೆಗಳೇ ಇಲ್ಲದ
ಅಪ್ಪಟ ‘ಮಾನವಪ್ರೇಮಿ’
‘ಇನ್ನೊಬ್ಬರ ಕಷ್ಟಕ್ಕೆ ಮಿಡಿಯುತ್ತಿದ್ದ ‘ಪ್ರಾಣಮಿತ್ರ’
ನಾನು ‘ವಕೀಲ’ ನಾಗಿದ್ದು
‘ಜನಚಳವಳಿ ನಾಯಕ’ ನಾದುದ್ದು
‘ಅಂತರ್ ಜಾತಿ’ ವಿವಾಹವಾಗಿದ್ದು
ಅಪ್ಪನಿಗೆ ಎಲ್ಲಿಲ್ಲದ ‘ಹೆಮ್ಮೆ’
ಆದರೆ…..
ಎಲ್ಲವನ್ನು ನಮಗಾಗಿ ತ್ಯಾಗ ಮಾಡಿದ
ಇಂತಹ ನನ್ನಪ್ಪ…..
ಎಲ್ಲರಿಗೂ ಕಂಡಂತೆ ನನಗೂ
“ಅವ್ವ”ನ ದೈತ್ಯ ವ್ಯಕ್ತಿತ್ವದ ಎದುರು
ಕೇವಲ ಪ್ರತಿಬಿಂಬವಾಗಿ ಯಾಕೆ ಕಾಣುತ್ತಾನೆ?
ಸದಾ ಎಲೆಮರೆಯಾಗಿ ನಿಂತು
ನಾವು ಓಡಿಸುವ ಭವಿಷ್ಯದ
‘ಬದುಕಿನ ಬಂಡಿ’ಯ ನೋಡಿ
ಒಳಗೊಳಗೆ ಖುಷಿಪಡುವ
‘ನಿಸ್ವಾರ್ಥ’ ಮೂರ್ತಿಯಂತೆ
ನನಗೆ ಕಾಣುತ್ತಾನೆ ನನ್ನಪ್ಪ
………..
ಅಪ್ಪಾ ಐ ಲವ್ ಯೂ ಪಾ….