ಆಡೋ ವಯಸ್ಸಲ್ಲಿ ಗದ್ದೆ ಉಳೋದು,ಹುಲ್ಲು ಕೊಯ್ಯೋದು,ಬದ ಕಡಿಯೋದು,ಕೂಲಿ ನಾಲಿ ಮಾಡೋಕೆ ಹೋಗೋದು, ಕಣ ಮಾಡಿ ರೋಣು ಹೊಡೆಯೋದು,ಕಳೆ ಕಿತ್ತು ಗೊಬ್ಬರ ಗೊಡ್ಡು ಸುರಿಯೋದು,ತೂರೋದು ಕೆರೋದು ಒಂದೇ ಎರಡೆ ರೈತರ ಕೆಲಸಗಳಿಗೆ ಪುರುಸೊತ್ತಿಲ್ಲದ ವರ್ಷಪೂರ್ತಿ ಹೊಲಗದ್ದೆಗಳಲ್ಲಿಯೇ ಜೀವನ. ನಾನಂತೂ ಬಾಲ್ಯದಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆದಕ್ಕಿಂತಲೂ ಹೊಲ ಗದ್ದೆಗಳಲ್ಲಿ ಗೆಯ್ಮೆ ಮಾಡಿದ್ದೆ ಹೆಚ್ಚು. ಶಾಲೆ -ಮನೆ ಬಿಟ್ಟರೆ ಎಮ್ಮೆ,ದನ,ಕುರಿ,ಮೇಕೆ,ಕೋಳಿ ಕೊಕ್ಕರೆಗಳಿಗಾಗಿಯೇ ಒದ್ದಾಡಿದ್ದೆ. ಈ ಹೋರಾಟದಲ್ಲಿ ಉಳಿದವು ಕಡಿಮೆ ಸತ್ತವೂ ಹಲವು,ದನಗಳಿಗೆ ಕಾಲ್ಸರ ಬಂದಾಗ, ಎಮ್ಮೆಗಳಿಗೆ ಹಸಿರುಭೇದಿಯಾದಾಗ,ಕುರಿ ಮೇಕೆಗಳ ಗೊರಸುಗಳಿಗೆ ಹುಳು ಬಿದ್ದಾಗ, ಕೋಳಿಗಳಿಗೆ ಕೊಕ್ರೆರೋಗ ಬಂದಾಗ ಅತ್ತಿದ್ದೆ. ಇವುಗಳ ಮೇಯಲು ಹೋದಾಗ ಯಾರೋ ಹೊಲ,ಗದ್ದೆಯಲ್ಲಿ ಕಾಲು ಮುರಿಯೋರು, ರಬ್ಬರ್ ಸೊಪ್ಪು ತಿಂದು ಸತ್ತ ದನ,ಎಮ್ಮೆ ಕುರಿಮೇಕೆಗಳೆ ಹೆಚ್ಚು! ಮೇಯಿಸಲು ಬೆಟ್ಟಕ್ಕೆ ಬಿಟ್ಟಾಗ ಚಿರತೆ,ತೋಳ,ನರಿಗಳೆ ಬ್ಯಾಟೆಯಾಡಿ ತಿಂದಿದೆ ಹೆಚ್ಚು! ನನಗೆ ದುಃಖ ವತ್ತರಿಸಿಕೊಂಡು ಬರೋದು.
ನಾನು ಉಳುಮೆ ಮಾಡೋದು ಕಲಿತಿದ್ದು ಆರನೆ ತರಗತಿ ಓದುವಾಗ. ತಾತ ಪಡ್ಡೆ ಕರುಗಳಿಗೂ ನನಗೂ ಕಟ್ಟು ಹಾಕಿ ಉಳ್ಲಾ ಮಗೀ! ಎಂದಾಗ ಪ್ ಪ್ ಪ್ ಎಂದು ಕರುಗಳ ಬಾಲ ಬೆಂಟಿದ್ದರೆ ಸಾಕು ಕಿತ್ತುಕೊಂಡು ಅರ್ಧ ಕಿಲೋಮೀಟರ್ ಓಡೋವು. ಗದ್ದೆಗೆ ಆರು ಕಟ್ಟೋ ಅಂದ್ರೆ ಸಾಕು ನನಗೆ ಅಳು ಬರೋದು,ಅಕ್ಕಪಕ್ಕದ ಮಕ್ಕಳಂತೆ ಆಡಲು ಬಿಡಲಿಲ್ಲವೆಂದು! ಅಜ್ಜಿಗೆ ನಾನು ಆರು ಕಟ್ಟಿಕೊಂಡು ಅಳ್ತಾ ಗದ್ದೆ ಕಡೆ ಹೊರಟರೆ ‘ ಅಳ್ತಾ ಹೋದ ಮುರವಾ ಉತ್ತು ಬಂದಾನೇ’ ಅನ್ನೋರು.
ಉಳುವ ಎಮ್ಮೆ,ದನಗಳಿಗೆ ಆತಕೂರಿನ ಸಾಬಿ ಬಂದಾಗ ನಾಲ್ಕು ಕಾಲುಗಳಿಗೆ ಲಾಳ ಹೊಡ್ಸಿ,ವತ್ತಾರೆ ಎದ್ದು ಜೋಳದಕಡ್ಡಿಯನ್ನು ಬಾಯಿಗೆ ಗಿಡಿಯಬೇಕಿತ್ತು. ಆಗೀನ ಒಕ್ಕಲಿಗರು ಆರಂಭ ಶುರುವಾದಾಗ ಬೆಳ್ಗೆ ನಾಲ್ಕು ಗಂಟೆಗೆ ಎದ್ದು ಎತ್ತುಗಳಿಗೆ ಜೋಳದ ಕಡ್ಡಿಯನ್ನು ಬಲವಂತವಾಗಿ ತಿನ್ನಿಸಬೇಕಿತ್ತು.ಏಕೆಂದರೆ ಆರು ಕಟ್ಟಿದ್ದರೆ ಬಿಡುವುದೆ ಮಧ್ಯಾಹ್ನದ ಎರಡು ಗಂಟೆಗೆ ಮತ್ತೆ ಸಂಜೆ ನಾಲ್ಕು ಗಂಟೆಗೆ ಆರು ಕಟ್ಟೋದು. ಹುರುಳುಕಾಳು,ತರಣಿ,ಉದ್ದು,ಬತ್ತವ ಮುಗ್ಗಿಸಿ ಒರಳಲ್ಲಿ ತುರಿತುರಿಯಾಗಿ ಕುಟ್ಟಿಕೊಂಡು ಅವುಗಳಿಗೆ ಶಕ್ತಿ ಬರುವಂತೆ ತಿನ್ನಿಸಬೇಕು ಆಮೇಲೆ ಉಳುಮೆಗೆ ತಯಾರಿಯಾಗಿ ನಿಂತ ಎತ್ತುಗಳೆಂದು ಕರೆಯಬಹುದು. ಕೆಲವರಂತೂ ಎತ್ತುಗಳಿಗೆ ಮೇವು ಕೊಡದೆ ಉಳುವವರು ಇದ್ದಾರೆ. ಸಾಮವಾರ ಉಳುಮೆಯನ್ನು ಯಾವ ರೈತನೂ ಉಳುಮೆ ಮಾಡುವುದಿಲ್ಲ. ಆ ದಿನ ಎತ್ತುಗಳಿಗೂ ರೈತನಿಗೂ ವಿಶ್ರಾಂತಿಯ ದಿನವಾಗಿತ್ತು. ನಾನಂತೂ ಸಾಮವಾರ ಸಂತೆ ಕಡೆ ಹೋಗಿ ಕಟಿಂಗ್ ಮಾಡಿಸಿಕೊಂಡು ಮನೆಗೆ ಬೇಕಾದ ದಿನಸಿಗಳ ತರುತ್ತಿದ್ದೆ!
ಸಾಮವಾರ ನನ್ನ ಚಿಕ್ಕಜ್ಜರಾದ ಚಂಡಿತಾತ ಎಮ್ಮೆಗಳ ಕಟ್ಟಿ ಆರಂಭ ಮಾಡೋನು. ಊರಲ್ಲಿ ಯಾರಾದ್ರೂ ದಂಡ ಹಾಕ್ತಿರೇನ್ರೋ ಹಾಕ್ರೋ ನೋಡುವ ನಾನೆಮ್ಮೆಗಳಲ್ಲಿ ಉಳ್ತಾ ಇರೋದು ಎಂದೆಲ್ಲ ವಿತಂಡವಾದದ ಮನುಸ್ಯ. ಸಂಜೆಯ ಕತ್ತಲಾದರೂ ಚಂದ್ರನ ಬೆಳಕಿನಲ್ಲಿ ಉಳ್ತಾನೇ ಇರೋನು. ಎಮ್ಮೆಗಳಿಗೆ ಕಾಲು ಸೋತಾಗ ಗದ್ದೆಗಳಲ್ಲಿಯೇ ಮಲಗೋವು. ಮತ್ತೆ ಬಡಿದು ಎಬ್ಬಿಸಿ ಉಳೋನು. ಬರೆಬಂದ ಎಮ್ಮೆಗಳ ಮುಖ ನೋಡಿದರೆ ಥೂ! ಈ ಮನುಷ್ಯ ಜೀವನಕ್ಕೆ ಬೆಂಕಿ ಹಾಕ! ಎಂದೆಲ್ಲ ನಾನೇ ಶಪಿಸಿಕೊಳ್ಳುತ್ತಿದ್ದೆ! ನಮ್ಮೂರಿನ ಜನ ಇಂಥಾ ಪ್ರಾಣಿ ಪಕ್ಷಿಯನ್ನು ತಿಂದಿಲ್ಲ ಅನ್ನುವ ಆಗಿಲ್ಲ! ಇಲಿಯಿಂದ ಹಿಡಿದು ಆನೆಯವರೆಗೂ ತಿಂದಿದ್ದಾರೆ.
ನಮ್ಮ ಗದ್ದೆಯಲ್ಲಿ ಬಿಲ ತೊಡಿಕೊಂಡು ವಾಸಿಸುವ ತ್ವಾಡ(ಗದ್ದೆಯಿಲಿ)ವನ್ನು ಬ್ಯಾಟೆ ಮಾಡೋದೆ ಒಂದು ಹಬ್ಬವಾಗಿತ್ತು. ದನಕುರಿ ಮೇಯಿಸಲು ಬಂದವರಿಗೆ ಈ ತ್ವಾಡ ಹಿಡಿಯೋದೆ ಮಹಾನವಮಿ,ಈ ಬಿಲಗಳಿಗೆ ಬೆಂಕಿ ಹಾಕಿ ಹೊಗೆ ಹತ್ತಿಸಿಯೋ? ನೀರು ಸುರಿದು ಉಸಿರುಗಟ್ಟುವಂತೆ ಮಾಡಿ ಇಲಿ ಹೊರಗೆ ಬರುತ್ತಿರುವಾಗಲೇ ಪಟಾರನೇ ತಲೆಯ ಕೆಚ್ಚಿ ಅದರ ಕರುಳಗಳ ಕಿತ್ತು ಅಲ್ಲೇ ನೆಲ್ಲು ಹುಲ್ಲಿಗೆ ಬೆಂಕಿ ಹಾಕಿ ಉಪ್ಪು,ಖಾರ ಉದುರಿಸಿ ಮಧ್ಯಾಹ್ನದ ಊಟಕ್ಕೆ ಚಿಂತೆಯಿಲ್ಲದೆ ತಿನ್ನುವರು. ನಾನು ಕೂಡಾ ಒಂದು ಸಲ ತಿಂದಿದ್ದೆ! ತಿನ್ನಲ್ಲವೆಂದು ಹೇಳಿದ್ದರೂ ಹೊಟ್ಟೆ ಹಸಿವು ತಾಳಲಾರದೆ ಇದ್ದಾಗ, ತಾತ ಸುಟ್ಟಿಕೊಟ್ಟು ತಿನ್ನೋ ಪಿರಣ ಉಳಿಯಬೇಕಂದ್ರೆ, ನೀನು ಮಹಾನ್ ಗಾಂಧೀಯಲ್ಲ ಅಂದಿದ್ರು.
ಅಜ್ಜಿ ಮೊಮ್ಮಗ ಗಟ್ಟಿಮುಟ್ಟಾಗಿರಲೆಂದು ಹಾವಾಡಿಗರ ರಾಮಣ್ಣನಿಗೆ ಹೇಳಿ ಉಡ ತಂದು ತಿನ್ನಿಸಿದ್ರು.ಮೊಲದ ರಕ್ತವನ್ನು ಕುಡಿಸಿದ್ರು,ಮೇಕೆಯ ಮಾಂಸವಂತೂ ತಿನ್ನಿಸಿ ತಿನ್ನಿಸಿಯೇ ಬೆಳೆಸಿದ್ದು. ನನಗೆ ಈ ಹಿಂಸೆಯ ಪದದ ಅರ್ಥ ತಿಳಿದಿದ್ದೆ ಕಾಲೇಜಿನ ಮೆಟ್ಟಲುಗಳ ಹತ್ತಿದಾಗಲೇ!ಮೊದಲು ಇದ್ಯಾವುದು ತಿಳಿದಿರಲಿಲ್ಲ ಒಟ್ಟಾರೆಯಾಗಿ ಹಸಿದಹೊಟ್ಟೆ ತುಂಬಬೇಕಿತ್ತು. ಕೆಲವು ವೇಳೆ ನನಗೆ ಸುಸ್ತಾಗದ ಮೇಕೆಯ ಹಾಲನ್ನು ಅದರ ಮೊಲೆತೊಟ್ಟುಗಳಿಗೆ ಬಾಯಿ ಹಾಕಿ ಅದರ ಮರಿಯಂತೆ ಕುಡಿದುಬಿಡುತಿದ್ದೆ! ಕರೆದು ಹಾಲು ಕುಡಿಯಲು ಕೂಡ ಯಾವುದೇ ಹತಾರು ಇರಲಿಲ್ಲ.ಕುರಿ ಮೇಕೆ,ಹಸುಗಳು ಮರಿ ಹಾಕುವಾಗ ನನಗೆ ಸಡಗರವೋ ಸಂಭ್ರಮವೋ ಆದಂತೆ ಕುಣಿಯುತ್ತಿದ್ದೆ! ಕೆಲವು ವೇಳೆ ಹೊಟ್ಟೆಯಲ್ಲಿ ಮರಿಗಳು ತಿರುಚಿಕೊಂಡು ಮುಖ ಬರದೇ ಹಿಂದಿನ ಕಾಲುಗಳು ಬಂದಾಗ ನನ್ನ ಪುಟ್ಟ ಕೈಗಳ ಗರ್ಭಚೀಲಕ್ಕೆ ಹಾಕಿ ನಿಧಾನಕ್ಕೆ ತಿರುಗಿಸಿ ‘ಡೆಲಿವರಿ ಬಾಯ್’ ಎಂದೆಲ್ಲ ಹೆಸರವಾಸಿಯಾಗಿದ್ದೆ! ಕೋಳಿಗಳು ಕಾವಿಗೆ ಕುಳಿತು ಇಪ್ಪತ್ತೊಂದು ದಿನ ಕಳೆದಾಗ ಮರಿಗಳು ಹುಟ್ಟಿದ್ದಾವೆಯೇ ಇಲ್ಲವೋ ಎಂದೆಲ್ಲ ಕುತೂಹಲಕ್ಕಾಗಿ ಮೊಟ್ಟೆಗಳ ಹೊಡೆದು ಮರಿಗಳ ನೋಡುತ್ತಿದ್ದೆ!
ಕೆಲವು ವೇಳೆ ನನಗೆ ಸಹ್ಯವಾಗದಂತೆ ಬೇಸರವಾಗುತ್ತದೆ. ಏಕೆ ನಾನು ಹಾಗೆಲ್ಲ ಮಾಡಿಬಿಟ್ಟೆನಲ್ಲ? ಎಂದೆಲ್ಲ ಮನಸ್ಸು ಕಸಿವಿಸಿಯಾಗುತ್ತದೆ.ಗೀಜುಗನ ಗೂಡುಗಳ ಕಿತ್ತು ಆಟದ ಸಾಮಾನುಗಳಾಗಿ ಮಾಡಿಕೊಂಡು ಅಲ್ಲಿದ್ದ ಮೊಟ್ಟೆ ಮರಿಗಳಿಗೆ ಹೊಡೆದು ಬೀಸಾಕುತ್ತಿದ್ದೆ! ಬಣ್ಣ ಬಣ್ಣದ ಚಿಟ್ಟೆಗಳಿಗೆ ಹಿಡಿಯಲು ಹೋದಾಗ ಸಿಗದಿದ್ದರೆ ತಂಗಡಿ ಸೊಪ್ಪುಕಡ್ಡಿಯಿಂದ ಬಡಿದು ಸಾಯಿಸುತ್ತಿದ್ದೆ! ಎಮ್ಮೆಚಿಟ್ಟೆಗಳ ಬಾಲಕ್ಕೆ ಕಲ್ಲು,ಕಡ್ಡಿಗಳ ದಾರದಲ್ಲಿ ಕಟ್ಟಿ ಹಾರಲು ಬಿಡುತ್ತಿದ್ದೆ! ಅವು ಆ ಕಡೆ ಹಾರಲಾಗದೆ ಈ ಬೀಳಲಾರದೆ ಒದ್ದಾಡುತ್ತಿದ್ದವು. ಸಿಕ್ಕ ಸಿಕ್ಕ ಓತಿಕ್ಯಾತ,ಹಾವರಾಣಿಗಳ ಕಲ್ಲಿನಲ್ಲಿ ಹೊಡೆದು ಬಿಡುತಿದ್ದೆ!
ವಳ್ಳಕಟ್ಟಿಯೆಂಬ ಹಾವು ಕಂಡರೆ ಸಾಕು ದ್ವೇಷ ಬರುತ್ತಿತ್ತು ನನಗೆ,ಅದರ ಬಾಲವ ಹಿಡಿದು ಗಿರಗಿರನೇ ತಿರುಗಿಸಿ ತಿರ್ರಾನೇ ಎಸೆದುಬಿಡುತ್ತಿದ್ದೆ! ಇದು ಆಟವೋ ಅಥವಾ ನನ್ನ ಕ್ರೂರತನವೋ ತಿಳಿಯುತ್ತಿರಲಿಲ್ಲ. ಆ ಬಾಲ್ಯಗಳ ನೆನೆಸಿಕೊಂಡರೆ ನನಗೆ ಭಯವಾಗುತ್ತದೆ.
ಬೆಳೆದು ಬೆಳೆದಂತೆ ಪರಿವರ್ತನೆಯಂತೂ ಬದಲಾಗಿದೆ ಹೌದು ಆದರೆ ನನ್ನಂತಹ ಪುಂಡರು ಏನೆಲ್ಲ ಮಾಡಿರಬಹುದು. ಪಟ್ಟಣದಲ್ಲಿ ಬೆಳೆದ ಮಕ್ಕಳು ಒಂದು ರೀತಿಯಲ್ಲಿ ಪರಿಸರವ ಹಾಳು ಮಾಡಿದರೆ, ಹಳ್ಳಿಯಲ್ಲಿನ ಮಕ್ಕಳು ಮತ್ತೊಂದು ರೀತಿಯಲ್ಲಿ ಹಾಳು ಮಾಡುತ್ತಾ ಇದ್ದರಲ್ಲ ಎಂದೆಲ್ಲ ಅಸಹನೆ ನನಗೆ! ಬರೆದಷ್ಟು ಬರೆಹ ಪುಟಗಟ್ಟಲೆ ಆದರೆ ನನಗೆ ಈಗ ಮನಸ್ಸು ಒಪ್ಪುವುದಿಲ್ಲ. ಅರಣ್ಯಗಳ ಕಡಿದು ವ್ಯವಸಾಯಕ್ಕಾಗಿ ಭೂಮಿಯನ್ನು ಹಾಳು ಮಾಡಿದ್ದೇವೆ, ಬೆಟ್ಟಗುಡ್ಡಗಳ ಕಡಿದು ದೇವರು ದಿಂಡರುಗಳ ಕೂರಿಸಿ ಕಾಂಕ್ರಿಟ್ ರಸ್ತೆಯ ಮಾಡಿಸಿ ಬುರ್ರನೇ ಕಾರಿನಲ್ಲಿ ಹೋಗಿ ಬರುತ್ತೇವೆ. ಗುಡ್ಡಗಳ ಕಡಿದು ಗಣಿಗಾರಿಕೆ ಮಾಡಿಕೊಂಡಿದ್ದೇವೆ! ಲಾಭದ ಆಸೆಗೆ ರಾಸಾಯನಿಕ ಬೆಳೆಗಳ ಬೆಳೆದು ಆ ಕಡೆ ಲಾಭವೂ ಇಲ್ಲದೆ ಈ ಕಡೆ ಆರೋಗ್ಯವೂ ಕಾಪಾಡಿಕೊಳ್ಳದೆ ದುರಾಸೆಯ ಮನುಷ್ಯರಾಗಿದ್ದೇವೆ! ಕ್ಷಮಿಸು ಭೂತಾಯಿ, ದಯಮಾಡಿ ಕ್ಷಮಿಸಿಬಿಡು! ಈ ಮನುಷ್ಯನಂತಹ ಕೆಟ್ಟ ಹುಳು ಜೀವಸಂಕುಲದಲ್ಲಿಯೇ ಇಲ್ಲ.