ಮಾಸ್ತಿಯವರನ್ನು ನೆನೆಯುವುದೆಂದರೆ ಕನ್ನಡದ ಸಂಸ್ಕೃತಿಯು ರೂಪಿಸಿದ ಮಹಾಪುರುಷನೊಬ್ಬನನ್ನು ನೆನಪು ಮಾಡಿಕೊಂಡಂತೆ. ಜೂನ್ ೬ ಅವರು ಹುಟ್ಟಿದ ದಿನವೂ ಹೌದು, ತೀರಿಕೊಂಡ ದಿನವೂ ಹೌದು. ಮಾಸ್ತಿಯವರು ಜನಿಸಿದ್ದು ಮಧ್ಯರಾತ್ರಿ ಒಂದೂವರೆ ಹೊತ್ತಿನ ನಕ್ಷತ್ರದಲ್ಲಿ. ಸಾವು ಕೂಡ ಅದೇ ಘಳಿಗೆಯಲ್ಲೆ. ೯೫ ವರ್ಷಗಳ ತುಂಬಿದ ಬದುಕು ತನ್ನ ಸಮೃದ್ಧತೆ, ವೈವಿಧ್ಯತೆ, ಅನುಭವ ಸಂಪತ್ತಿನಿಂದ ಸಣ್ಣಕತೆ, ಕಾವ್ಯ, ಮಹಾಕಾವ್ಯ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಆತ್ಮಕಥೆ, ಸಂಪಾದಕೀಯ, ಅನುವಾದ, ಸುನೀತ ಮುಂತಾದ ಪ್ರಕಾರಗಳಿಗೆ ಕಸುವು ತುಂಬುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಎತ್ತರದ ಸಿದ್ಧಿ ಕಂಡಿದೆ. “ಲೇಖಕನ ಬದುಕು ದೊಡ್ಡದಾಗದೆ, ಅವನ ಸಾಹಿತ್ಯ ದೊಡ್ಡದಾಗದು” ಎಂಬ ಮಾತನ್ನು ಮಾಸ್ತಿ ಆಗಾಗ ಹೇಳುತ್ತಲೇ ಇದ್ದರು. ಅವರ ವ್ಯಕ್ತಿತ್ವದ ಎತ್ತರವನ್ನು ಒಂದೆರಡು ಘಟನೆಗಳ ಮೂಲಕ ಅರಿಯುವ ಯತ್ನವನ್ನಿಲ್ಲಿ ಮಾಡಿದರೆ, ಮಾಸ್ತಿಯವರ ನೆನಪಿಗೊಂದು ಅರ್ಥ ಪ್ರಾಪ್ತವಾದಂತೆ. ಇಂದಿನವರಿಗೆ ಮಾಸ್ತಿಯವರಂತಹ ಹಿರಿಯಜ್ಜನ ಗಾಢ ಪರಿಚಯದ ಅಗತ್ಯ ಕೂಡ ಅವಶ್ಯಕವಾದುದು.
ಒಬ್ಬ ಮೋಚಿ ಮಾಸ್ತಿಯವರ ಮನೆಗೆ ಬರುತ್ತಿದ್ದ. ಸುಮ್ಮನೆ ಕಾಸು ಕೊಟ್ಟರೆ ತೆಗೆದುಕೊಳ್ಳದ ಆತ ಮಾಡಿದ ಕೆಲಸಕ್ಕಷ್ಟೇ ಹಣ ಪಡೆಯುವ ನಿಷ್ಠೆಯುಳ್ಳವನು. ಮಾಸ್ತಿಯವರಿಗೋ ಅವನಿಗೆ ಹೇಗಾದರೂ ಆತನಿಗೆ ಸ್ವಲ್ಪ ಹಣ ಸಂದಾಯ ಮಾಡುವಾಸೆ. ಚೆನ್ನಾಗಿದ್ದ ಚಪ್ಪಲಿಯನ್ನೆ ಕಿತ್ತು ಹಾಕಿ, ಹೊಲಿದುಕೊಡೆಂದು ಮೋಚಿಗೆ ನೀಡುತ್ತಿದ್ದರು. ಬಳಿಕ ಅದಕ್ಕೆ ತಕ್ಕ ಹಣವನ್ನು ಆತನ ಕೈಗಿಡುತ್ತಿದ್ದರು. ದುಡಿಮೆಯಿಲ್ಲದೆ ಹೋದರೆ ಆತನ ಕುಟುಂಬದ ಗತಿಯೇನು ಎಂಬುದು ಮಾಸ್ತಿಯವರ ಕಳಕಳಿ. ಹಬ್ಬದ ದಿನ ಆತನನ್ನು ಬರಲು ಹೇಳಿ, ಒತ್ತಾಯಪೂರ್ವಕವಾಗಿ ಆತನಿಗೆ ಹೊಸ ಬಟ್ಟೆ ಕೊಡಿಸುತ್ತಿದ್ದರು. ಮಾಸ್ತಿಯವರು ಬದುಕಿರುವವರೆಗೂ ಮೋಚಿಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವುದನ್ನು ಮರೆಯಲಿಲ್ಲ.
ಒಂದು ದಿನ ಮಾಸ್ತಿಯವರ ಮನೆಯ ನಲ್ಲಿ ಸುರಿಯುತ್ತಿತ್ತು. ಹೊಸದಾಗಿ ವಾಷರ್ ಹಾಕಬೇಕೆಂದು ಒಬ್ಬ ಕೆಲಸಗಾರನನ್ನು ಅದಕ್ಕಾಗಿ ನೇಮಿಸಿ, ತಾವು ಬಂದು ರಾಮಾಯಣ ಪಾರಾಯಣ ಮಾಡುತ್ತಾ ಕುಳಿತರು. ಆ ದಿನ ಮಹಾರಾಜರು ತಮಗೆ ಹೊದಿಸಿದ್ದ ಜರಿಶಾಲನ್ನು ತೋಳ ಮೇಲೆ ಹಾಕಿಕೊಂಡಿದ್ದರು. ಬಳಸಿದರೆ ಕೊಟ್ಟ ಮಹಾರಾಜರಿಗೆ ಆಶೀರ್ವಾದ ಮಾಡಿದಂತೆ ಎಂಬುದು ಮಾಸ್ತಿಯವರ ಭಾವ. ಹಾಗಾಗಿ ರಾಮಾಯಣ ಪಾರಾಯಣ ಮಾಡುವಾಗ ಅದನ್ನು ತೋಳಿಗೆ ಹಾಕಿಕೊಂಡಿದ್ದರು. ರಿಪೇರಿ ಮುಗಿಯಿತೆಂದು ಕೆಲಸದವನು ಪಂಕಜಮ್ಮನವರ ಬಳಿ ದುಡ್ಡು ಪಡೆದು ಹೊರಟ. ಆದರೆ ನಲ್ಲಿ ಮಾತ್ರ ಸುರಿಯುತ್ತಲೇ ಇದೆಯೆಂದು ಪಂಕಜಮ್ಮನವರು ಹೇಳುವುದನ್ನು ಕೇಳಿಸಿಕೊಂಡು ಮಾಸ್ತಿಯವರು ಎದ್ದು ಬಂದು ನೋಡಿದಾಗ ತುಂಬ ಕೋಪ ಬಂತು. ತೋಳ ಮೇಲಿದ್ದ ಶಾಲಿನಿಂದ ಆತನಿಗೊಂದು ಹೊಡೆತ ಕೊಟ್ಟರು, ಆತನಿಗೆ ಅದರಿಂದ ಪೆಟ್ಟೇನೂ ತಗುಲಿರಲಿಲ್ಲ. ಆದರೂ ಕೋಪದಲ್ಲಿ ಈ ಬಡವನಿಗೆ ಹೊಡೆದುಬಿಟ್ಟೆನಲ್ಲ ಎಂದು ದುಃಖವಾಯ್ತು. ಬಳಬಳನೆ ಅತ್ತುಬಿಟ್ಟರಲ್ಲದೆ ಅವನ ಮೈದಡವಿ, ಒಳ್ಳೆಯ ಮಾತು ಹೇಳಿ, ಹೊಟ್ಟೆತುಂಬ ಊಟ ಹಾಕಿ, ಮತ್ತಷ್ಟು ಹೆಚ್ಚಿಗೆ ಹಣಕೊಟ್ಟು ಕಳಿಸಿದರು. ಮಾಸ್ತಿಯವರ ಅಂತಃಕರಣ ಈ ಬಗೆಯದು.
ಒಮ್ಮೆ ಬಂಧುಗಳೊಬ್ಬರು ಅವರ ಮಗಳನ್ನು ಕರೆದುಕೊಂಡು ಮಾಸ್ತಿಯವರ ಮನೆಗೆ ಬಂದರು. ಆ ಹುಡುಗಿಯ ಮದುವೆಯ ಏರ್ಪಾಡು ನಡೆಯುತ್ತಿದ್ದುದರಿಂದ ಮಾಸ್ತಿಯವರಿಂದ ಅವರು ಯಾರಿಗೋ ಒಂದು ಮಾತು ಹೇಳಿಸಬೇಕಾಗಿತ್ತು. ಬಂದ ಉದ್ದೇಶ ಪೂರೈಸಿದ ಬಳಿಕ ಮಗಳನ್ನು ಕರೆದುಕೊಂಡು ಬಂಧುಗಳು ಹೊರಟರು. ಅಂಗಳದ ಬಾಗಿಲು ದಾಟುವಾಗ ತಂದೆ ಮಗಳು ಏನೋ ಗುಟ್ಟಾಗಿ ಮಾತನಾಡುತ್ತಿರುವುದು ಮಾಸ್ತಿಯವರಿಗೆ ಕಂಡಿತು. ಹುಡುಗಿಯ ಮುಖದಲ್ಲಿ ದೈನ್ಯದ ಭಾವ, ತಂದೆಯ ಮುಖದಲ್ಲಿ ಕೋಪ ಅಸಮಾಧಾನವನ್ನು ಮಾಸ್ತಿಯವರು ಗುರುತಿಸಿದರು. ಬಹುಶಃ ಈ ಮದುವೆ ಹುಡುಗಿಗೆ ಇಷ್ಟವಿರಲಿಕ್ಕಿಲ್ಲ ಎಂದು ಮಾಸ್ತಿ ಅನುಮಾನಿಸಿ “ಏನಂತೆ?” ಎಂದು ವಿಚಾರಿಸಿದರು. ತಮ್ಮ ಸಂಭಾಷಣೆ ಮಾಸ್ತಿಯವರ ಗಮನಕ್ಕೆ ಬಂತಲ್ಲ ಎಂದು ತಂದೆಗೆ ಮತ್ತಷ್ಟು ಕೋಪ ಬಂತು. “ಏನೂ ಇಲ್ಲ, ಹುಚ್ಚು ಹುಡುಗಿ” ಎಂದು ಮಗಳೊಡನೆ ಅಂಗಳ ದಾಟುತ್ತಿದ್ದ ಅವರನ್ನು ಮಾಸ್ತಿಯವರು ಬಿಡಲಿಲ್ಲ. ಅದು ಏನು ಹೇಳಿ ಎಂದು ಒತ್ತಾಯಮಾಡಿ ಕೇಳಿದರು. ಹುಡುಗಿಯ ತಂದೆ ಮಾಸ್ತಿಯವರ ಮನೆಯ ಅಂಗಳದಲ್ಲಿದ್ದ ಸಂಪಿಗೆ ಮರದ ಕಡೆ ಕೈ ಮಾಡಿ ತೋರಿಸುತ್ತಾ “ನೋಡಿ ಅಲ್ಲಿ ಹೂಗಳಿವೆ. ನನಗೆ ನಾಲ್ಕು ಹೂಗಳನ್ನು ಕೀಳಿಸಿಕೊಡು ಎಂದು ಕೇಳುತ್ತಿದ್ದಾಳೆ. ಏನು ಮಾಡುವುದು ಈ ಮಕ್ಕಳಿಗೆ?” ಎಂದು ಸಂಕೋಚದಿಂದ ಹೇಳಿದರು. ಮಾಸ್ತಿಯವರು ನಸುನಗುತ್ತಾ ಅಷ್ಟೇ ತಾನೆ? ಎಂದು ಅವರಿಬ್ಬರನ್ನೂ ಒಳಗೆ ಕರೆದು ಕೂರಿಸಿ, ಹೂ ಕೀಳಿಸಿಕೊಟ್ಟು ಆ ಹುಡುಗಿಯ ಮನಸ್ಸನ್ನು ಸಂತೋಷಪಡಿಸಿ ಕಳಿಸಿದರು.
ಹೋದಲ್ಲಿ ಬಂದಲ್ಲಿ ತಮ್ಮ ಜೀವನಾನುಭವವನ್ನು ಜ್ಞಾನವನ್ನು ಪಸರಿಸುವ ಕೆಲಸ ಕೂಡ ಮಾಸ್ತಿಯವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಒಬ್ಬ ಹಿರಿಯ ಲೇಖಕ ಇರಬೇಕಾದ್ದೇ ಹಾಗಲ್ಲವೆ? ನಮ್ಮ ಸು.ರಂ. ಎಕ್ಕುಂಡಿಯವರೊಮ್ಮೆ ತಾವು ಕೆಲಸ ಮಾಡುತ್ತಿದ್ದ ಬಂಕಿಕೊಂಡ್ಲದ ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ಮಾಸ್ತಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಆ ಊರಿನ ಸಮೀಪದಲ್ಲಿಯೇ ಕಡಲ ತೀರ ಇರುವುದನ್ನು ತಿಳಿದು ಅಲ್ಲಿಗೆ ಹೋಗಿಬರುವ ಇಂಗಿತ ವ್ಯಕ್ತಪಡಿಸಿದರು. ಅಲ್ಲಿಗೆ ಹೋಗಿ ಸುತ್ತಲಿದ್ದ ಮೀನುಗಾರರನ್ನು ಮಾತಾಡಿಸಿ ಅವರ ಬದುಕಿನ ಬಗೆಯನ್ನು ಅರಿತರು. ಮತ್ತೊಬ್ಬರ ಬದುಕನ್ನು ಅರಿಯುವ ಆಕಾಂಕ್ಷೆ ಅವರದು. ಯುವಕರನ್ನು ನಾಚಿಸುವಂತೆ ಚುರುಕಾಗಿ ಓಡಾಡಿದರು. ಕಡಲ ತೀರವನ್ನು ಕಂಡು ಭಾವಪರವಶರಾಗಿ ನಿಂತುಬಿಟ್ಟರು. ಅಲ್ಲಿಯ ಸೌಂದರ್ಯಕ್ಕೆ ಮಾರುಹೋಗಿ ಅನುಭಾವ ಪ್ರಜ್ಞೆ ಜಾಗೃತಗೊಂಡಿತು. ಪಕ್ಕದಲ್ಲಿದ್ದ ಎಕ್ಕುಂಡಿಯವರನ್ನುದ್ದೇಶಿಸಿ “ಈ ಕಡಲಿನ ಲಯಬದ್ಧವಾದ ಧ್ವನಿಯನ್ನು ಕೇಳಿದಾಗ, ಇದಕ್ಕೂ ಒಂದು ಭಾಷೆಯಿದೆ ಎಂದು ಅನ್ನಿಸುತ್ತೆ. ಅದರ ಭಾಷೆ ನಮಗೆ ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು” ಎಂದರಂತೆ. ಇದೇ ಸಂದರ್ಭದಲ್ಲಿ ಮಾಸ್ತಿ ಉತ್ತರ ಕನ್ನಡ ಜಿಲ್ಲೆ ಸೀಮೆಯ ನುಡಿ ಪ್ರಯೋಗಗಳನ್ನು ತಿಳಿದುಕೊಳ್ಳುವ ಕಾತುರವನ್ನು ವ್ಯಕ್ತಪಡಿಸಿದರಂತೆ. ಇಲ್ಲಿ ಸಮುದ್ರದ ಮಹಾಪೂರಕ್ಕೆ ‘ನೆಗೆಸು’ ಎನ್ನುತ್ತಾರೆಂದು ಯಾರೋ ಹೇಳಿದ ಕೂಡಲೇ ಮಾಸ್ತಿಯವರು “ಎಷ್ಟು ಚೆಲುವಾದ ನುಡಿಯಿದು” ಎಂದರಲ್ಲದೆ ಆ ಪ್ರಯೋಗದ ಬೇರುಬೇರನ್ನೆಲ್ಲ ಬಿಡಿಸಿ ತೋರಿಸಿದರಂತೆ. “ನೆಗೆಸು-ನೆಗೆ ನೀರನ್ನು ನೆಗೆಸುತ್ತ, ಪುಟಿಸುತ್ತ, ಉಬ್ಬಿಸುತ್ತ ಬರುವುದೆ ನೆಗೆಸು” ಎಂಬ ಮಾಸ್ತಿಯವರ ವಿವರಣೆಯಿಂದ ಸುತ್ತಲಿದ್ದವರ ಪದ ಸಂಪತ್ತು ಹೆಚ್ಚಿತು.
ಅಚ್ಚಪ್ಪ ಎಂಬ ಲೇಖಕರೊಬ್ಬರು ‘ಗ್ರಂಥಸ್ಥ ಗಾದೆಗಳು’ ಎಂಬ ಬೃಹತ್ತಾದ ಕೃತಿಯೊಂದನ್ನು ಹೊರತಂದವರು. ಅವರು ಕಷ್ಟದಲ್ಲಿದ್ದಾರೆ ಎಂಬ ಸಂಗತಿ ಮಾಸ್ತಿಯವರಿಗೆ ತಿಳಿಯಿತು. ಮೈಸೂರಿನಲ್ಲಿದ್ದ ಮಾಸ್ತಿಯವರಿಗೆ ಅಚ್ಚಪ್ಪನವರ ಪರಿಚಯವಿರಲಿಲ್ಲ. ಹೇಗೂ ಅವರ ವಿಳಾಸ ಪತ್ತೆ ಮಾಡಿದ ಮಾಸ್ತಿಯವರು ತಮ್ಮ ಹೆಸರು ಪ್ರಸ್ತಾಪವಾಗದಂತೆ ಸ್ವಲ್ಪ ಹಣವನ್ನು ಅವರಿಗೆ ಕಳಿಸಿ ಜೊತೆಯ ಲೇಖಕರೊಬ್ಬರಿಗೆ ಸಹಾಯ ಮಾಡುವ ಅವಕಾಶ ತಮ್ಮದಾಯಿತಲ್ಲ ಎಂದು ಸಂತಸಪಟ್ಟರು. ಅಚ್ಚಪ್ಪನವರಿಗೆ ಮಾಸ್ತಿಯವರಂತಹ ದೊಡ್ಡ ಲೇಖಕರಿಂದ ತಮಗೆ ಅನಿರೀಕ್ಷಿತವಾಗಿ ಬಂದ ನೆರವಿನಿಂದ ಅಚ್ಚರಿಯಾಯಿತು. ಮಾಸ್ತಿಯವರು ಇಂತಹ ನೆರವಿಗಾಗಿ ತಮ್ಮದೇ ಆದ ‘ಲೇಖಕರ ನಿಧಿ’ಯೊಂದನ್ನು ಮಾಡಿಟ್ಟುಕೊಂಡಿದ್ದರು. ಕವಿ ಗೋಪಾಲಕೃಷ್ಣ ಅಡಿಗರಿಗೂ ಈ ನಿಧಿಯ ನೆರವು ದೊರೆತಿದೆ. ಶಿವರಾಮ ಕಾರಂತರೂ ಈ ಬಗೆಯ ಸಹಾಯವನ್ನು ಸದ್ದಿಲ್ಲದೆ ಮಾಡುತ್ತಿದ್ದರೆಂಬುದು ಹಲವರಿಗೆ ತಿಳಿದಿಲ್ಲ. ಹಿರಿಯರ ನಡೆಯೇ ಹಿರಿದು ಎಂಬುದು ಇದರಿಂದ ವೇದ್ಯವಾಗುತ್ತದೆ.
ಮಾಸ್ತಿಯವರಿಗೆ ಜ್ಞಾನಪೀಠ ದೊರೆತಾಗ ಕರ್ನಾಟಕ ಸರ್ಕಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಒಂದು ಸಂತೋಷಕೂಟ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆಯವರು ಆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅಭಿನಂಧಿಸಿದವರೆಲ್ಲ ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿಯ ಗೌರವ ಇನ್ನೂ ಮೊದಲೇ ಬರಬೇಕಿತ್ತು ಎಂದು ಪದೇಪದೇ ಹೇಳಿದರು. ಸನ್ಮಾನ ಸ್ವೀಕರಿಸಿದ ಮಾಸ್ತಿಯವರು ತುಂಟ ನಗು ಬೀರುತ್ತಾ “ನನಗೆ ಪ್ರಶಸ್ತಿ ತಡವಾಗಿ ಬಂದಿದೆ ಅಂತ ಎಲ್ಲರೂ ಹೇಳಿದರು. ನಿಜ, ತಡವಾಗಿ ಬಂದಿದೆ ಅಂತಲೇ ಇಟ್ಟುಕೊಳ್ಳೋಣ. ಆದರೆ ಅದು ನ್ಯಾಯವಾಗಿಯೇ ಇದೆ. ಮನೆಯಲ್ಲಿ ಏನಾದರೂ ಸಿಹಿಭಕ್ಷ್ಯ ಮಾಡಿದ್ದಾರೆ ಅನ್ನಿ. ಅದನ್ನು ಮೊದಲು ಮಕ್ಕಳಿಗೆ ಕೊಡುತ್ತಾರೋ ಅಥವಾ ದೊಡ್ಡವರಿಗೋ? ಮೊದಲು ಮಕ್ಕಳಿಗೇ ಕೊಡಬೇಕು, ಆಮೇಲೆ ದೊಡ್ಡವರಿಗೆ ಕೊಡುವುದು ಸರಿ. ಈ ಪ್ರಶಸ್ತಿಯ ವಿಷಯವೂ ಹಾಗೇ.” ಎಂದಾಗ ಇಡೀ ಸಭೆ ‘ಹೋ’ ಅಂತ ಉದ್ಗಾರಮಾಡಿ ಜೋರಾಗಿ ಚಪ್ಪಾಳೆ ಸುರಿಸಿತು. ಮುಖ್ಯಮಂತ್ರಿಗಳೂ ಜೋರಾಗಿ ನಕ್ಕರು. ಅಂದು ಮಾಸ್ತಿಯವರ ವಿವೇಕಕ್ಕೆ, ಎಲ್ಲರನ್ನೂ ನಗಿಸಬಲ್ಲ ಜಾಣ ವ್ಯಂಗ್ಯಕ್ಕೆ ಇಡೀ ಸಭೆ ಮಾರುಹೋಯಿತು.
ಮಾಸ್ತಿಯವರ ಮನೆಗೆ ತಮ್ಮ ಗೋಳನ್ನು ಹೇಳಿಕೊಳ್ಳಲೆಂದೇ ತುಂಬ ಜನ ಬರುತ್ತಿದ್ದರು. ತಮ್ಮ ಬಿಡುವಿರದ ದಿನಚರಿಯಲ್ಲಿ ಮಾಸ್ತಿಯವರು ಇದಕ್ಕೂ ಸಮಯವನ್ನು ಮೀಸಲಿಡುತ್ತಿದ್ದರು. ಒಮ್ಮೆ ಅರುವತ್ತೈದರ ವೃದ್ಧರೊಬ್ಬರು ಬಂದರು. ಅವರಿಗೆ ಒಬ್ಬನೇ ಮಗ. ಬಹಳ ವರ್ಷದ ಮೇಲೆ ಹುಟ್ಟಿದವನೆಂದು, ದೇವರು ಕೊಟ್ಟ ವರನಿವನು ಎಂದು ಭಾವಿಸಿ, ತುಂಬ ಮುದ್ದಿನಿಂದ ಬೆಳೆಸಿದ್ದರು. ಆ ಮಗ ಚೆನ್ನಾಗಿ ಓದಿ, ಐಎಎಸ್ ಪರೀಕ್ಷೆಯಲ್ಲಿ ಪಾಸಾಗಿ ಒಳ್ಳೆಯ ಅಧಿಕಾರದಲ್ಲಿದ್ದ. ಮಗನ ಮನೆಯಲ್ಲಿ ಒಂದೆರಡು ದಿನ ಸಂತೋವಾಗಿ ಇದ್ದು ಹೋಗಲು ಬಂದ ಆ ವೃದ್ಧರಿಗೆ “ಮನೆಯಲ್ಲಿ ದುಡಿಯೋರು ಒಬ್ಬರು, ಕೂತು ತಿನ್ನೋರು ನಾಲ್ಕು ಜನ. ನಮ್ಮ ಕರ್ಮ” ಎಂಬ ಸೊಸೆಯ ಕುಹಕ ನುಡಿ ಕಿವಿಗೆ ಬಿತ್ತು. ರೋಸಿ ಇನ್ನು ಈ ಮನೆಗೆ ಕಾಲಿಡಬಾರದೆಂದು ನಿರ್ಧರಿಸಿದರು. ಇದನ್ನೆಲ್ಲ ಮಾಸ್ತಿಯವರಲ್ಲಿ ನಿವೇದಿಸಿಕೊಂಡರು.
ಎಲ್ಲವನ್ನೂ ಕೇಳಿಸಿಕೊಂಡ ಮಾಸ್ತಿ ಒಂದು ನಿಮಿಷ ಸುಮ್ಮನಿದ್ದು ಬಳಿಕ ವೃದ್ಧರನ್ನು ಕೇಳಿದರು. ‘ಒಬ್ಬನೇ ಮಗ ಎಂದಿರಲ್ಲವೆ?’ ‘ಹೌದು ಸ್ವಾಮಿ ಒಬ್ಬನೇ ಮಗ.’ ಮುಂದುವರೆದು ಮಾಸ್ತಿ ಕೇಳಿದರು “ಬಹಳ ಮುದ್ದಿನಿಂದ ಬೆಳೆಸಿರಬೇಕಲ್ಲವೆ?” ವೃದ್ಧರು ಹೇಳಿದರು;”ಅಷ್ಟಲ್ಲದೆ? ನಾನು ಮಲಗಿ ಎದೆ ಮೇಲೆ ನಿಲ್ಲಿಸಿಕೊಂಡರೆ ಕುಣಿಯುತ್ತಿದ್ದ, ಎಳೆಗಾಲಿನಿಂದ ಗದ್ದಕ್ಕೆ ಒದ್ದು ಕೇಕೆ ಹಾಕುತ್ತಿದ್ದ. ಎಷ್ಟೋ ಸಲ ನಾನೇ ಅವನಿಗೆ ಸ್ನಾನ ಮಾಡಿಸುತ್ತಿದ್ದೆ, ಬಟ್ಟೆ ಹಾಕುತ್ತಿದ್ದೆ, ಊಟ ಮಾಡಿಸುತ್ತಿದ್ದೆ. ಆಫೀಸಿನಿಂದ ಬಂದವನೇ ಅವನನ್ನು ಜೊತೆಗೆ ಕರೆದುಕೊಂಡು ಪಾರ್ಕು, ದೇವಸ್ಥಾನ ಅಂತ ಸುತ್ತಿಸುತ್ತಿದ್ದೆ.”
ನಡುವೆ ಮಾಸ್ತಿಯವರು “ಅದೆಲ್ಲ ನಿಮಗೆ ಬಹಳ ಸುಖ, ಸಂತೋಷ ಕೊಟ್ಟಿರಬಹುದಲ್ಲವೆ?” ಎಂದಾಗ ವೃದ್ಧರು ನಿಜವೆಂದು ಒಪ್ಪಿದರು. ಒಡನೆಯೇ ಮಾಸ್ತಿ ನುಡಿದರು; “ಅಲ್ಲಿಗೆ ಜಮಾ ಖರ್ಚು ಎರಡೂ ಸರಿಯಾಯಿತಲ್ಲ ಯಜಮಾನರೆ? ನೀವು ಕಷ್ಟಪಟ್ಟು ಅವನನ್ನು ಸಾಕಿದ್ದು ನಿಜ. ಹುಡುಗನೂ ನಿಮಗೆ ಅಷ್ಟೇ ಸಂತೋಷ ಕೊಟ್ಟ. ನಿಮಗೆ ಬರಬೇಕಾದ್ದೆಲ್ಲ ಆಗಲೇ ಬಂದುಬಿಟ್ಟಿದೆ. ಈಗ ಹೆಂಡತಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಇನ್ನೂ ಏನಾಗಬೇಕು. ಈಗಲೂ ಅವನ ಜೊತೆ ಇರುವಂತಿದ್ದರೆ ಅದು ಬೋನಸ್ ಅಷ್ಟೇ. ಅದು ತಪ್ಪಿದ್ದಕ್ಕೆ ಬಹಳ ದುಃಖ ಪಡಬೇಕಾಗಿಲ್ಲ.” ಮುದುಕರಿಗೆ ಮಾಸ್ತಿಯವರ ಮಾತು ಹೌದೆನಿಸಿತು. ಸಮಾಧಾನದ ನಿಟ್ಟುಸಿರಿಟ್ಟು, ಗೆಲುವಾದ ಮನದಿಂದ ಮಾಸ್ತಿಯವರಿಂದ ಬೀಳ್ಕೊಂಡರು. ದುಃಖ ಹಂಚಿಕೊಳ್ಳಲು ಮನೆಗೆ ಬಂದವರಿಗೆ ಮಾಸ್ತಿಯವರ ಸಾಂತ್ವನ ಈ ಬಗೆಯದಾಗಿತ್ತು.
ಸಹ ಲೇಖಕರ ವಿಚಾರದಲ್ಲಿ ಮಾಸ್ತಿಯವರ ಉದಾರ ನಡುವಳಿಕೆಗೆ ಮತ್ತೊಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು. ಒಮ್ಮೆ ಬೆಂಗಳೂರಿನ ಕಲಾಸಿಪಾಳ್ಯದ ‘ರತ್ನಾವಳಿ ನಾಟಕಶಾಲೆ’ಯಲ್ಲಿ ಕೈಲಾಸಂ ಅವರ ನಾಟಕವೆಂದು ಪ್ರಕಟಣೆ ಮಾಡಲಾಗಿತ್ತು. ಮೊದಲ ದಿನವೇ ಮಡದಿ ಮತ್ತು ಆರು ಮಕ್ಕಳೊಂದಿಗೆ ಮಾಸ್ತಿಯವರು ನಾಟಕ ಶಾಲೆಗೆ ಹೋದರು. ಬಣ್ಣ ಬಳಿದುಕೊಂಡ ನಟರು ರಂಗಪ್ರವೇಶಕ್ಕೆ ಅಣಿಯಾಗುತ್ತಿದ್ದರು. ಆದರೆ ನಾಟಕ ಶಾಲೆಯಲ್ಲಿ ಪ್ರೇಕ್ಷಕರೇ ಇರಲಿಲ್ಲ. ಕೈಲಾಸಂ ಅವರಿಗೆ ಯಾರೋ ಮಾಸ್ತಿಯವರು ಕುಟುಂಬ ಸಮೇತರಾಗಿ ಬಂದಿರುವ ವಿಷಯ ಹೇಳಿದರು. ಕೈಲಾಸಂ ಅವರು “ನಮಗಷ್ಟೇ ಸಾಕು, ಬೇಗಬೇಗ ನಾಟಕ ಪ್ರದರ್ಶನಕ್ಕೆ ಅಣಿಯಾಗಿ” ಎಂದು ನಟರಿಗೆ ಹೇಳಿದರು.
ಮಾಸ್ತಿಯವರು ಕೈಲಾಸಂ ಅವರನ್ನು ಹುಡುಕಿಕೊಂಡು ಒಳಗೆ ಬಂದವರು “ಜನ ಬಂದಿಲ್ಲ. ಸ್ವಲ್ಪ ವೆಚ್ಚವೇನೋ ನಿಮ್ಮ ಈ ಸಿದ್ಧತೆಯಿಂದ ಅನಿವಾರ್ಯ. ಆದರೆ ನೀವು ನಾಟಕವನ್ನು ಪ್ರದರ್ಶಿಸಿಯೇ ಬಿಡುತ್ತೇವೆಂದರೆ ಇನ್ನಷ್ಟು ವ್ಯರ್ಥ ವೆಚ್ಚ. ಇದಕ್ಕೆ ನಿಮಗೆ ಸಿಗುವುದು ಏಳೆಂಟು ಜನರ ಟಿಕೇಟಿನ ಹಣ ಮಾತ್ರ. ಏಳಲ್ಲ ಹದಿನೈದು ಟಿಕೇಟಿನ ಹಣ ಕೊಟ್ಟರೂ ನಿಮ್ಮ ಖರ್ಚಿಗೆ ಸರದೂಗುವುದಿಲ್ಲ. ಯಾಕೆ ಅಷ್ಟು ಹಣ ವೆಚ್ಚಮಾಡಿಕೊಳ್ಳುವಿರಿ? ಇದೇ ನಾಟಕ ಇನ್ನೆರಡು ದಿನ ಬಿಟ್ಟು ಹಾಕಿ ಇನ್ನಷ್ಟು ಅಭ್ಯಾಸಮಾಡಿ. ಒಂದು ಇನ್ನೂರು ಜನವಾದರೂ ಬರಲಿ, ಅಂದು ನಾನೂ ಬರುತ್ತೇನೆ, ಆಡುವಿರಂತೆ.” ಎಂದರು. ಕೈಲಾಸಂ ಕೇಳಿದರು; “ನನ್ನ ತಂಗಿ(ಮಾಸ್ತಿಯವರ ಪತ್ನಿ) ಮತ್ತು ಆಕೆಯ ಮಕ್ಕಳೂ ನನ್ನ ನಾಟಕ ನೋಡಲು ಬಂದಿದ್ದಾರೆ. ಅವರಿಗೆ ನಾನೇಕೆ ನಿರಾಶೆಯನ್ನುಂಟುಮಾಡಲಿ?” ಮಾಸ್ತಿಯವರ ಸಮಾಧಾನವಿದು; “ಅವರಿಗೇನೂ ನಿರಾಶೆ ಮಾಡುತ್ತಿಲ್ಲ, ವಾರ ಬಿಟ್ಟು ಇದೇ ನಾಟಕ ಮಾಡಿ. ಇತರರೊಂದಿಗೆ ಬಂದು ನಾಟಕ ನೋಡಿ ಸಂತೋಷಪಡುತ್ತಾರೆ. ಈ ದಿನವಾದರೆ ನಾಟಕ ನೋಡುವಾಗ ‘ನಾವು ಇವರಿಗೆ ನಷ್ಟವುಂಟು ಮಾಡುತ್ತಿದಗದೇವಲ್ಲಾ’ ಎಂಬ ಕೊರಗಿನೊಂದಿಗೆ ಅವರು ನಾಟಕ ನೋಡಬಹುದು”. ಕೊನೆಗೂ ಕೈಲಾಸಂ ಅವರನ್ನು ಒಪ್ಪಿಸುವಲ್ಲಿ ಮಾಸ್ತಿಯವರ ಮಾತುಗಳು ಸಫಲವಾದವು. ಬಣ್ಣ ಒರೆಸಿಕೊಂಡು ಬಂದ ಕೈಲಾಸಂ ಪಂಕಜಮ್ಮ ಮತ್ತು ಮಕ್ಕಳನ್ನು ಕಂಡು ಕ್ಷಮೆ ಯಾಚಿಸಿದರು. ಎಂದಿನಂತೆ ಮಾಸ್ತಿ ಕೈಲಾಸಂ ಅವರನ್ನು ಸಂತೈಸಿ, ಹಿರಿತನವನ್ನು ಮೆರೆದರು.
ಮಾಸ್ತಿಯವರು ಕನ್ನಡದಲ್ಲಿ ಕತೆ, ಪದ್ಯ, ಪ್ರಬಂಧ ಮುಂತಾದವನ್ನು ಬರೆಯುತ್ತಿದ್ದರೂ ಮೊದಲೆಲ್ಲ ಸಭೆಗಳಲ್ಲಿ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರು. ಇಂಗ್ಲಿಷಿನಲ್ಲಿ ತಾವು ಗಟ್ಟಿಗರೆಂಬ ಭಾವನೆ ಮನದಲ್ಲಿ ನೆಲೆಯೂರಿದ್ದು ಮಾತ್ರವಲ್ಲ, ಇಂಗ್ಲಿಷಿನಲ್ಲಿ ಬರೆಯೋಣ ಎಂಬ ಆಸೆಯೂ ಬಲವಾಗಿತ್ತು. ಅಂದರೆ, ಅವರ ಮನಸ್ಸು ಅರ್ಧ ಇಂಗ್ಲಿಷಿಗೆ, ಅರ್ಧ ಕನ್ನಡಕ್ಕೆ ಒಲಿದಿತ್ತು. ಇಂತಹ ದಿನಗಳಲ್ಲಿ ಕೋಲಾರದಲ್ಲಿನ ಒಂದು ಅನುಭವ ಮಾಸ್ತಿಯವರು ಕನ್ನಡದಲ್ಲಿಯೇ ಬರೆಯುವಂತೆ ಪ್ರೇರೇಪಿಸಿತು. ಅದು ಮಾಸ್ತಿಯವರ ಕೋಲಾರ ಜಿಲ್ಲೆಯ ಜಮಾಬಂಧಿ ಕಾಲದ ಅನುಭವ. ಮಲ್ಲಸಂದ್ರ ಗ್ರಾಮದ ಪ್ರವಾಸಿ ಮಂಟಪದಲ್ಲಿ ಒಂದು ಸಂಜೆ ಮಾಸ್ತಿ ಬಿಡಾರ ಹೂಡಿದ್ದರು. ಗ್ರಾಮದ ಜಮಾಬಂಧಿ ವೇಳೆಯಲ್ಲಿ ಆತ ಅದೇನೋ ತಪ್ಪು ಮಾಡಿದ್ದರಿಂದ ಮಾಸ್ತಿಯವರ ಎದುರು ಬಂದು ನಿಂತ. ಮಾಸ್ತಿ ವಿಚಾರಣೆ ಆರಂಭಿಸಿದರು. ” ಏನಪ್ಪಾ, ಇದು ಮಾಡಬಾರದು ಅಂತ ನಿನಗೆ ತಿಳಿಯಲಿಲ್ಲವೆ?” ಆತ “ಇಲ್ಲ ಸ್ವಾಮಿ” ಎಂದ. ಯಾಕಯ್ಯಾ? ರೂಲ್ಸ್ ಇದೆಯಲ್ಲ, ಇದನ್ನು ತಿಳಿದುಕೊಳ್ಳಬೇಡವೆ? ಎಂದು ಮಾಸ್ತಿಯವರು ಮರುಪ್ರಶ್ನೆ ಹಾಕಿದಾಗ ಆತ ಹೇಳಿದ; “ನಿಮ್ಮ ರೂಲ್ಸು ಗೀಲ್ಸು ಎಲ್ಲ ಇಂಗ್ಲಿಷಿನಲ್ಲಿದೆಸ್ವಾಮಿ; ನಾನೇನು ತಿಳ್ಕಳ್ಳೋದು?” ಈ ಮಾತು, ಸಂಗತಿ ಎರಡೂ ಸಣ್ಣದಾದರೂ ಅವನ ಮಾತು ಆ ಕ್ಷಣಕ್ಕೆ ಮಾಸ್ತಿಯವರ ಮನಸ್ಸಿನ ಮೇಲೆ ಪ್ರಚಂಡ ಪರಿಣಾಮ ಬೀರಿತು.
ಮಾಸ್ತಿಯವರು ಯೋಚಿಸಿದರು, “ಹೌದಲ್ಲಾ, ನಾನು ಸರಕಾರ ಅಂತ ಮಾಡುವ ಕೆಲಸವೆಲ್ಲ ಇಂಗ್ಲಿಷಿನಲ್ಲಿ ಮಾಡಿದರೆ ನಮ್ಮ ಜನಕ್ಕೆ ಹೇಗೆ ತಿಳಿಯಬೇಕು? ಇಂಥ ಗ್ರಾಮದ, ಇಂಥ ಜನತೆ ಬೆವರು ಸುರಿಸಿ, ಬೆನ್ನು ಮುರಿಯ ದುಡಿದು, ಗಳಿಸಿದ ಆರು ಕಾಸಿನಲ್ಲಿ ಮೂರು ಕಾಸನ್ನು ಸರಕಾರಕ್ಕೆ ಕೊಟ್ಟು ನಮಗೆಲ್ಲ ಸಂಬಳ ಕೊಡಿಸಿ, ಸುಖವಾಗಿ ನೋಡಿಕೊಳ್ಳುತ್ತಾರೆ. ನಾವು ಹೆಸರಿಗೆ ಪಬ್ಲಿಕ್ ಸರ್ವೆಂಟ್ಸ್, ಜನತೆಯ ಸೇವಕರು. ದಿಟದಲ್ಲಿ ಸ್ವೇಚ್ಛಾವರ್ತಿ ಚಂಡ ಪ್ರಭುಗಳು. ಇವರಿಗೆ ದಂಡ ಹಾಕಿದ್ದೇವೆ ಎಂದು ನಾವು ಬರೆಯುವ ಆಜ್ಞೆ ಕೂಡ ಇಂಗ್ಲಿಷಿನಲ್ಲಿರುತ್ತದೆ. ಅದನ್ನು ರೈತರು ಅರ್ಥಮಾಡಿಕೊಳ್ಳಬೇಕಾದರೆ ಇಂಗ್ಲಿಷ್ ಕಲಿತ ಲಾಯರನ್ನು ಆಶ್ರಯಿಸಬೇಕು.” ಈ ಯೋಚನೆ ಮನಸ್ಸಿಗೆ ಬಂದದ್ದೇ ತಡ ಮಾಸ್ತಿಯವರು ನಮ್ಮ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿಯೇ ಮಾತಾಡುವ, ಬರೆಯುವ ಸಂಕಲ್ಪ ಮಾಡಿದರು. ಇಂದಿಗೂ ಮಾಸ್ತಿಯವರ ಸಾಹಿತ್ಯದ ಭಾಷೆ ಅತ್ಯಂತ ಸರಳವಾಗಿದ್ದು ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ರೈತನೊಬ್ಬನೊಂದಿಗೆ ನಡೆದ ಸಂಭಾಷಣೆಯಿಂದ ಸರಳ ಕನ್ನಡದಲ್ಲಿ ಬರೆಯಲು ತೀರ್ಮಾನಿಸಿದ ಈ ಘಟನೆ ಕೂಡ ಮಾಸ್ತಿಯವರ ವ್ಯಕ್ತಿತ್ವದ ಬಗೆಯನ್ನು ಸೊಗಸಾಗಿ ಅನಾವರಣ ಮಾಡಿದೆ.
ಮಾಸ್ತಿಯವರು ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭವದು. ಬ್ರಿಟಿಷರು ಮಾಡಿಕೊಂಡಿದ್ದ ‘ಕಡೂರು ಕ್ಲಬ್’ ತುಂಬ ಪ್ರತಿಷ್ಠಿತವೆನಿಸಿತ್ತು. ಭಾರತೀಯರಿಗೆ ಅದರ ಸದಸ್ಯತ್ವವನ್ನು ನಿರಾಕರಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗೆ ಮಾತ್ರ ಸದಸ್ಯತ್ವ ಪಡೆಯುವ ಅವಕಾಶ ಮುಕ್ತವಾಗಿತ್ತು. ಆದರೆ ಮಾಸ್ತಿಯವರು ಈ ಅವಕಾಶವನ್ನುಪಯೋಗಿಸಿಕೊಂಡು ಕ್ಲಬ್ಬಿನ ಸದಸ್ಯರಾಗಲಿಲ್ಲ. ಕ್ಲಬ್ಬಿನ ಕಡೆಯಿಂದಲೇ ಸದಸ್ಯತ್ವ ಸ್ವೀಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಆಹ್ವಾನ ಬಂತು. ಮಾಸ್ತಿಯವರು ಒಪ್ಪಿಕೊಳ್ಳಲಿಲ್ಲ. ಕಾರಣ ಕೇಳಿದಾಗ ಮಾಸ್ತಿ ಹೇಳಿದರು; “ನೀವು ನಾನು ಡಿ.ಸಿ. ಎಂಬ ಕಾರಣಕ್ಕೆ ಸದಸ್ಯತ್ವಕ್ಕೆ ಆಹ್ವಾನ ನೀಡುತ್ತಿರುವಿರಿ! ನಾನು ಡಿ.ಸಿ.ಯಾಗಿರದೆ ಬರೀ ಭಾರತೀಯನಾಗಿದ್ದಿದ್ದರೆ ಈ ಆಹ್ವಾನ ನೀಡುತ್ತಿದ್ದಿರೆ? ಭಾರತೀಯರಿಗೆ ಅವಕಾಶ ನೀಡದ ನಿಮ್ಮ ಕ್ಲಬ್ಬಿನ ಸದಸ್ಯತ್ವ ನನಗೂ ಬೇಡ.” ನಿಮಗಿಂತ ಹಿಂದಿದ್ದ ಎಲ್ಲ ಡಿ.ಸಿ.ಗಳೂ ಕ್ಲಬ್ಬಿನ ಸದಸ್ಯರಾಗಿದ್ದರೆಂದು ಆಹ್ವಾನ ನೀಡಿದವರು ಹೇಳಲು ಮಾಸ್ತಿ ಹೇಳಿದರು “ಇರಬಹುದು, ಅವರಿಗೆಲ್ಲ ಈ ಅವಕಾಶ ತಮಗೆ ಬಂದಿದ್ದು ತಾವು ಡಿ.ಸಿಗಳಾಗಿರುವುದರಿಂದ ಮಾತ್ರ, ನಮ್ಮ ಭಾರತೀಯತ್ವಕ್ಕಲ್ಲ ಎಂಬ ಸಂಗತಿಯು ಅರಿವಿಗೆ ಬಂದಿಲ್ಲವೆನಿಸುತ್ತದೆ. ನನ್ನ ಅರಿವಿಗೆ ಬಂದಿದೆಯಾದ್ದರಿಂದ ನಾನು ನಿರಾಕರಿಸುತ್ತಿದ್ದೇನೆ.” ಬಂದವರು ವಿಧಿಯಿಲ್ಲದೆ ಸುಮ್ಮನೆ ಮರಳಬೇಕಾಯ್ತು. ಬ್ರಿಟಿಷರ ಅವಧಿಯಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದುಕೊಂಡು ಅವರಿಗೆ ಈ ಮಾತುಗಳನ್ನು ಹೇಳಿಕಳಿಸಿರುವ ಮಾಸ್ತಿಯವರ ಮನಸ್ಥೈರ್ಯ ಮತ್ತು ಭಾರತೀಯತ್ವದ ಬಗೆಗಿನ ಅಭಿಮಾನ, ರಾಷ್ಟ್ರಪ್ರೇಮ ಎಲ್ಲವೂ ಈ ಘಟನೆಯಲ್ಲಿ ಸೊಗಸಾಗಿ ಅನಾವರಣಗೊಂಡಿದೆ.
ಇಲ್ಲಿ ಒಂದೆರಡು ಭಿನ್ನಭಿನ್ನ ಉದಾಹರಣೆಗಳಿಂದ ಮಾತ್ರ ಮಾಸ್ತಿಯವರ ವ್ಯಕ್ತಿತ್ವದ ಚಿತ್ರವೊಂದನ್ನು ರೇಖಿಸುವ ಪ್ರಯತ್ನ ಮಾಡಲಾಗಿದೆ. ಮಾಸ್ತಿಯವ ‘ಭಾವ’ ಎಂಬ ಆತ್ಮಕಥೆಯ ಸಂಪುಟಗಳನ್ನು ಓದಿದವರಿಗೆ ಇಂತಹ ಅನೇಕ ಉದಾಹರಣೆಗಳು ಎದುರಾಗುತ್ತವೆ. ಮಾಸ್ತಿಯವರ ಸುಕೋಮಲವಾದ ಮನಸ್ಸು ಮತ್ತು ಸದಾ ಲೋಕದ ಒಳಿತನ್ನು ಬಯಸುವ ಅವರ ಗುಣ ಎರಡೂ ಮುಖ್ಯವಾದ ಮಾದರಿಗಳು. “ನಮ್ಮ ಬದುಕು ದೊಡ್ಡದಾಗದೆ ನಮ್ಮ ಬರಹ ದೊಡ್ಡದಾಗಲಾರದು” ಎಂಬ ಮಾತೊಂದನ್ನು ಅವರು ಸದಾ ಹೇಳುತ್ತಿದ್ದರು. ಸ್ವತಃ ಅವರೇ ಈ ಮಾತಿಗೊಂದು ಉತ್ತಮ ಮಾದರಿಯಾಗಿದ್ದಾರೆ.