ಸಿದ್ದಿ ಜನಾಂಗ ಕರ್ನಾಟಕದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲೊಂದು.
ಆಪ್ರಿಕಾ ಮೂಲದ ಇವರು ಪೋರ್ಚುಗೀಸರ ಗುಲಾಮರಾಗಿ ಭಾರತವನ್ನು ಪ್ರವೇಶಿಸಿದರು. ಅರಣ್ಯ ಪ್ರದೇಶದಲ್ಲಿ ಬದುಕುವುದನ್ನೇ ಹೆಚ್ಚು ಪ್ರೀತಿಸುವ ಇವರು ಮೊದಲು ಜನರನ್ನು ಕಂಡರೆ ಹೆದರಿ ಓಡುತ್ತಿದ್ದರಂತೆ. ಏಕೆಂದರೆ ಅವರ ವೇಷ ಭೂಷಣ ಮತ್ತು ನಮ್ಮ ವೇಷಭೂಷಣಕ್ಕು ತುಂಬಾ ವ್ಯತ್ಯಾಸವಿರುತ್ತಿತ್ತು. ಕಾಡಿನಲ್ಲಿ ವಾಸಿಸುವ ಜನರು ಅವರು, ನಮ್ಮ ವೇಷವನ್ನು ನೋಡಿದ ತಕ್ಷಣ ಅಂಜಿ ಓಡಿ ಹೋಗುತ್ತಿದ್ದರು. ಹಾಗೆ ನಿಧಾನವಾಗಿ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಂಡರೂ ಸಹ ಈಗಲೂ ಬೆಟ್ಟ ಗುಡ್ಡಗಳಲ್ಲೆ ಮನೆ ಮಾಡಿಕೊಂಡವರೂ ಇದ್ದಾರೆ.
ಭಾರತದಾದ್ಯಂತ 50,000 ಪ್ರಬಲ ಸಿದ್ದಿ ಜನಸಂಖ್ಯೆಯಿದೆ, ಅದರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಕರ್ನಾಟಕದಲ್ಲಿ, ಅವರು ಹಳಿಯಾಳ, ಯಲ್ಲಾಪುರ, ಅಂಕೋಲಾ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ತಮ್ಮದೇ ಆದ ಬುಡಕಟ್ಟು ಸಂಘಟನೆಗಳನ್ನೂ ಇವರು ಹೊಂದಿದ್ದಾರೆ.
ಉತ್ತರ ಕನ್ನಡದ ಮುಂಡಗೋಡ ಮತ್ತು ಶಿರಸಿ ತಾಲೂಕುಗಳು ಮತ್ತು ಬೆಳಗಾವಿಯ ಖಾನಾಪುರ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಇದ್ದಾರೆ. ವಿಶೇಷವಾಗಿ ಯಲ್ಲಾಪೂರ ಹತ್ತಿರ ಕೋಳಿ ಕೆರೆ ಎಂಬ ಗ್ರಾಮದಲ್ಲಿ ಎರಡೇ ಸಿದ್ದಿ ಕುಟುಂಬವನ್ನು ಕಾಣಬಹುದು.
ಸಿದ್ದಿ ಸಮುದಾಯದ ಅನೇಕ ಸದಸ್ಯರು ಸ್ವಾತಂತ್ರ್ಯದ ನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ. ಮತ್ತು ಕರಾಚಿ ಮತ್ತು ಸಿಂಧ್‌ನಲ್ಲಿ ನೆಲೆಸಿದ್ದಾರೆ . ಇತ್ತೀಚೆಗೆ, MTV ಸೌಂಡ್ ಟ್ರಿಪ್ಪಿನ್‌ಗಾಗಿ ಸ್ನೇಹಾ ಖಾನ್ವಾಲ್ಕರ್ ಅವರ ಸೌಂಡ್‌ಟ್ರ್ಯಾಕ್ ‘ಯೇರೆ’ ಮೂಲಕ ಅವರು ಬೆಳಕಿಗೆ ಬಂದಿದ್ದಾರೆ .
ಆಫ್ರಿಕಾದಿಂದ ವಲಸೆ ಬಂದ ಇವರಿಗೆ ಅರಣ್ಯವೇ ಸರ್ವಸ್ವ. ಕ್ರಮೇಣ ಆಧುನಿಕ ಜಗತ್ತು ಇವರನ್ನೂ ಬದಲಾಯಿಸಿದೆ. ಭಾರತಕ್ಕೆ ವಲಸೆ ಬಂದ ಸಂದರ್ಭದಲ್ಲಿ ಕ್ರಿಶ್ಚಿಯನ್, ಇಸ್ಲಾಂ, ಹಿಂದೂ ಹೀಗೆ ಮೂರು ಧರ್ಮಗಳಿಗೆ ಹಂಚಿಹೋಗಿದ್ದರೂ ಸಿದ್ದಿಗಳನ್ನು ಒಂದುಗೂಡಿಸಿದ್ದು ಅವರ ಸಂಗೀತ ಮತ್ತು ನೃತ್ಯ. ಆಫ್ರಿಕಾದಿಂದ ಪುಗ್ಡಿ ಸೇರಿದಂತೆ ಒಂದಷ್ಟು ಸಂಗೀತ ಸಲಕರಣೆಗಳು ಇವರಿಗೆ ಬಳುವಳಿಯಾಗಿ ಬಂದಿದ್ದು, ಅವುಗಳನ್ನೇ ಬಳಸಿಕೊಂಡು ಲಾವಣಿಗಳನ್ನು ಹಾಡುವುದು ಪದ್ಧತಿಯಾಗಿ ಬೆಳೆದುಬಂದಿದೆ.
ಮೂಲ ಸಂಸ್ಕೃತಿಯ ಸಿರಿವಂತಿಕೆ ನಿಧಾನಗತಿಯಲ್ಲಿ ಮರೆಯಾಗುತ್ತಿದ್ದರೂ ಲಾವಣಿ ಪದಗಳು ಹಾಗೂ ನೃತ್ಯಗಳು ಅವರಲ್ಲಿನ ಏಕತೆಯನ್ನು ಜೀವಂತವಾಗಿರಿಸಿದೆ. ಈಗಲೂ ಆ ಸಮುದಾಯದ ಜನರು ತಮ್ಮ ಕಲೆಯ ಮೂಲಕ ಜೀವನವನ್ನು ಸಾಗಿಸುತ್ತಿದ್ದಾರೆ.
ಅರಣ್ಯ ಉತ್ಪನ್ನಗಳ ಮೂಲಕ ಬದುಕು ಕಟ್ಟಿಕೊಳ್ಳುವ ಸಿದ್ದಿಗಳು ಈಗಲೂ ಇವರಿಗೆ ಆದಂತ ಸರ್ಕಾರದಿಂದ ಯಾವುದೇ ಸೌಲತ್ತು ಸೌಲಭ್ಯಗಳು ಸರಿಯಾದ ಮಾರ್ಗದಲ್ಲಿ ಸಿಗುತ್ತಿಲ್ಲ. ಸಿದ್ದಿ ಬುಡುಕಟ್ಟಿನವರು, ಪ್ರಮುಖವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕೆಲವರು ಕೊಂಕಣಿ ಮತ್ತು ಕ್ರಿಶ್ಚಿಯನ್ ಸಿದ್ದಿ ಸಮುದಾಯದವರು ಮರಾಠಿ ಭಾಷೆಯನ್ನು ಮಾತನಾಡುತ್ತಾರೆ.
ಇವರ ಮೂಲ ವೃತ್ತಿ ಬುಟ್ಟಿ ಎಣೆಯುವುದು, ಆದರೆ ಈಗ ಸಿದ್ದಿಯರು ಮುಖ್ಯವಾಗಿ ವ್ಯವಸಾಯವನ್ನೂ, ಕೂಲಿಯನ್ನೂ, ಮತ್ತು ಕೆಲವರು, ಮನೆ ಆಳುಗಳಾಗಿ ಕೆಲಸ ಮಾಡುವುದು ಸರ್ವೇಸಾಮಾನ್ಯವಾಗಿದೆ. ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದ ಮೊದಲ ಸಿದ್ದಿ ಜನಾಂಗವು, ಉತ್ತರ ಕನ್ನಡ ಜಿಲ್ಲೆಯ ಕಾಡುಗಳನ್ನು ತಮ್ಮ ವಾಸಸ್ಥಾನವಾಗಿ ಪರಿವರ್ತಿಸಿಕೊಂಡು, ಅದೇ ಸ್ಥಳದಲ್ಲಿ ವ್ಯವಸಾಯವನ್ನು ಮಾಡತೊಡಗಿದರು. ಯಲ್ಲಾಪುರದ ಸಿದ್ದಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ.
ಸಿದ್ದಿಯರಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ, ಇವರಲ್ಲಿ ಬೇರೆ ಬೇರೆ ಮತದವರು ಇದ್ದರೂ ಕೂಡ, ಮದುವೆಯನ್ನು ಮಾಡುವಾಗ ಧರ್ಮಗಳನ್ನು ಪರಿಗಣಿಸುವುದಿಲ್ಲ. ಸಿದ್ದಿಯರು ಯಾವ ಮತ ಭೇದವಿಲ್ಲದೆ ಮಾಡುವ ಪೂಜೆ ಎಂದರೆ ಅದು ಹಿರಿಯರ ಪೂಜೆ. ಇದು, ತಾವು ತಮ್ಮ ಪೂರ್ವಜರನ್ನು ನೆನೆಪಿಸಿಕೊಂಡು ಮಾಡುವ ಪೂಜೆಯಾಗಿದೆ. ಈಗಾಗಲೇ ಮರಣವನ್ನು ಹೊಂದ್ದಿದ್ದರೂ ಸಹ, ಅವರು ತಮ್ಮ ಬಳಿಯೇ ಇದ್ದಾರೆ ಎಂದು ಭಾವಿಸಿ ಮಾಡುವ ಒಂದು ವಿಶೇಷ ಪೂಜೆ. ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಅವರಿಗೆ ತಿಳಿದಿರುತ್ತದೆಯೆಂದು ಭಾವಿಸಿ, ಮದುವೆ, ಹುಟ್ಟು, ಸಾವು ಮತ್ತು ಇತರೆ ಮುಖ್ಯ ಘಟನೆಗಳಲ್ಲಿ ಅವರನ್ನು ನೆನೆಯುತ್ತಾರೆ. ಇದು ಮರಣ ಹೊಂದಿರುವ ಜೀವಿಗಳಿಗೆ ನಮಸ್ಕಾರವನ್ನು ಅರ್ಪಿಸುವ ರೀತಿ ಎಂದು ಸಹ ಹೇಳಬಹುದು. ಅವರ ತಂದೆ-ತಾಯಂದಿರೇ ಮರಣ ಹೊಂದಿದ್ದಲ್ಲಿ, ಅವರಿಗೂ ಸಹ ಧನ್ಯವಾದಗಳನ್ನು ಅರ್ಪಿಸುವ ಪ್ರತೀಕ, ಹಿರಿಯರ ಪೂಜೆ. ತಮ್ಮನ್ನು ವರ್ಷಾನುಗಟ್ಟಲೆ ಸಾಕಿ ಸಲುಹಿದವರಿಗೆ ಒಂದು ಸಣ್ಣ ಕಾಣಿಕೆಯಿದು. ಈ ಒಂದು ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರೂ ನೆರೆಯುವುದು ಕಡ್ಡಾಯ. ಇದರಿಂದ ಸಂಬಂಧಗಳು ಬೆಳೆಯುತ್ತವೆ ಎಂಬ ಅತಿ ದೊಡ್ಡ ನಂಬಿಕೆ ಈ ಜನಾಂಗದವರಿಗೆ. ಹಿರಿಯರ ಪೂಜೆ ವರ್ಷಕ್ಕೆ ಎರಡು ಬಾರಿ ನಡೆಸುವುದು ವಾಡಿಕೆಯಲ್ಲಿದೆ. ಈ ಪೂಜೆಯನ್ನು ಮನೆಯ ಹಿರಿಯ ಅಥವಾ ಯಜಮಾನನ ಕೈಗಳಿಂದ ನಡೆಸುತ್ತಾರೆ. ಸಾಮಾನ್ಯವಾಗಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮತ್ತು ಹೋಲಿ ಹಬ್ಬದ ಸಮಯದಲ್ಲಿ ಹಿರಿಯರ ಪೂಜೆ ಮಾಡತ್ತಾರೆ.