ಬಾನಲ್ಲಿ ರವಿಯ ರಂಗಿನಾಟ
ಬಾನಂಚಿನಲ್ಲಿ ಮೂಡಿದೆ
ಬಣ್ಣಗಳ ಸವಿನೋಟ,
ಬಾನಾಡಿಗಳ ಪಯಣ,
ಹೊರಟಿದೆ ಗೂಡಿನತ್ತ.
ನಿಶೆ ಮೂಡುತ್ತಿರುವ ಈ ಹೊತ್ತು,
ಕ್ಷಣ ಕ್ಷಣಕ್ಕೂ ಬದಲಾಗುವ,
ರಂಗಿನೋಕುಳಿಯ ಆಟದ ಗಮ್ಮತ್ತು
ನೋಡುವ ಕಣ್ಗಳಿಗೆ ಅದು
ಸೌಭಾಗ್ಯದ ಸಿಹಿ ತುತ್ತು.
ಮುಸ್ಸಂಜೆಯ ಹೊಂಬಾನು
ಸುತ್ತಲೂ ಇದೆ ಹಸಿರ ಕಾನು,
ಹಕ್ಕಿಗಳ ಕಲರವ ಕೇಳಿ,
ಸುತ್ತಿ ಬೀಸುವ ತಂಗಾಳಿ
ಹಾಡಿದೆ ಹೊಸ ಹಾಡು.
ತಂಬೆಲರು ತೂಗಿ ತೂಗಿ,
ಹೊಮ್ಮುಗಿಲು ಬೀಗಿ ಬೀಗಿ
ನಕ್ಷತ್ರಗಳೊಂದೊಂದೇ ಮೂಡಿ,
ಬಾನಲ್ಲಿ ಬರೆದ ಚಿತ್ತಾರ ಮರೆಯಾಗಿ,
ಅವರಿಸುತಿದೆ ರಾತ್ರಿ ಮನೋಹರವಾಗಿ.