ಯಾಕಿಷ್ಟು ನಿನಗೆ ಅವಸರ
ಜೀವದ ಅಂತ್ಯಕೆ ಆತುರ
ಯಾರ ಮೇಲೆ ಮುನಿಸು
ಒಂದಿಷ್ಟು ಕಾಲ ನೆಲೆಸು
ಕಹಿಯ ಕಾರಣ ಉಸುರದೆ
ಮೌನದಿ ಬಾಡಿ ಹೋಗುವೆ
ಸಿಹಿಯ ಜೇನನು ಅರಸದೆ
ಯಾಕೆ ಜೀವನ ಮುಗಿಸುವೆ
ದಿನದ ಹೊಸ ಸಂಚಲನದಲಿ
ಪಥದ ಕೊನೆಯ ತಿರುವಿನಲಿ
ಹಿಂತಿರುಗಿ ಒಮ್ಮೆ ನೋಡು
ಬದಲಾದರೆ ಬದಲಾಗಿ ಬಿಡು
ಸಾವಿರ ಕಂಬನಿಯ ಬಿಂದು
ಕುದಿಯುವ ಆವಿಗೆ ಬೆಂದು
ಕರಿಮೋಡ ಮಳೆ ಸುರಿದಂತೆ
ಜರಿಯದೆ ನಡೆ ನುಡಿದಂತೆ
ವಿಷದ ಕಹಿ ಅಮೃತವಾಗಿ
ಹಗ್ಗದುರುಳು ಹಾರವಾಗಿ
ಮನದ ದುಗುಡ ನೀರಾಗಿ
ಮತ್ತೆ ಧೃಢವಾಗು ಬಲವಾಗಿ
ಆಟ ಮುಗಿಸುವ ವೇಗಕೆ
ದುಡುಕುವ ಆವೇಶವೇಕೆ
ಮುನಿಯದಿರು ಬದುಕಿಗೆ
ಹಳಿಯದಿರು ಹಣೆಬರಹಕೆ
ಸವಿತಾ ನಾಯ್ಕ ಮುಂಡಳ್ಳಿ
ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾರಕೇರಿ
ತಾಲೂಕು:ಭಟ್ಕಳ, ಜಿಲ್ಲೆ:ಉತ್ತರ ಕನ್ನಡ