ಶ್ರೀವಲ್ಲಿ ಮಂಜುನಾಥ ಅವರು ಬರೆದ ಕವಿತೆ ‘ಪ್ರಶ್ನೆ’

ಕಿರುದೀಪವೊಂದ
ಬೆಳಗಿ, ನನ್ನಿಂದಲೇ
ಕತ್ತಲಳಿದು ಬೆಳಕು
ಮೂಡಿತೆಂದು ಬೀಗುವ
ಜನರ ಕಂಡು, ದಿನದ
ಇಪ್ಪತ್ತನಾಲ್ಕು ಗಂಟೆ
ನೀನೇ ಉರಿದು ಜಗವ
ಬೆಳಗುವುದ ನೆನೆದು
ನೀ ನಗುತ್ತಿರುವೆಯಾ ?

ಸೂರ್ಯೋದಯವಾಯ್ತು,
ಭಾಸ್ಕರ ಅಸ್ತಮಿಸಿದ
ಎಂಬ ಜನರ ನಿತ್ಯನುಡಿಗಳ
ಕೇಳಿ, ಅಯ್ಯೋ ಮೂಢರೇ,
ತಿಳಿದೂ ಹೀಗೆನ್ನುವಿರಾ,
ನಿಮಗಷ್ಟೇ ಉದಯಾಸ್ತಮ,
ನಾನು ಆದಿ, ಅಂತ್ಯವಿಲ್ಲದ
ಅನಂತನೆಂದು ನೀನು
ನಸು ನಗುತ್ತಿರುವೆಯಾ?

ಪರರಿಗೆ ಎಲ್ಲವನಿತ್ತೂ
ಯಾರಿಂದಲೂ ಏನೂ
ಬಯಸದೆ, ನಾನಿಮಗೆ
ನೀಡುತ್ತಲಿರುವೆನೆಂದು
ಒಂದಿನಿತೂ ಹೇಳಿಕೊಳ್ಳದ,
ನಿನ್ನಂತೆ ದುಡಿವ ಕಾಯಕ
ಯೋಗಿ ನಾವಾಗಬೇಕೆಂದು
ಹೇಳಲೆಂದೇ ನೀನು
ಕಿರುನಗೆ ಬೀರುತ್ತಿರುವೆಯಾ ?

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop