ಹಗುರಾಗೂ ಮನವೇ, ನೀ ಹಗುರವಾಗು,
ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು,
ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ,
ಮಣ್ಣ ಕಳಚಿ, ನೀ ಹಗುರಾಗು ಮನವೇ
ಹುಲ್ಲಿಗಂಟಿದ ಮುಂಜಾವಿನ ಇಬ್ಬನಿಯಾಗು,
ರವಿ ರಶ್ಮಿ ಸೋಕಿ, ಬಾನಲಿ ಆವಿಯಾಗು,
ಆವಿ ಮೋಡದಲಿ ಸೇರಿ, ಮಳೆ ಮೋಡವಾಗಿ,
ಇಳೆಗೆ ಮಳೆಯಾಗಿ, ನೀ ಹಗುರಾಗು ಮನವೇ
ಇಳೆಗೆ ಮಳೆಯಾಗಿ, ಹೊಳೆಯಾಗಿ ಸಾಗು,
ಹೊಳೆಯಾಗಿ ಸಾಗಿ, ಸಾಗರದಲಿ ಲೀನವಾಗು,
ಹಗುರವಾಗು, ನೀ ಹಗುರವಾಗು ಮನವೇ.
ಇಳೆಗೆ ನೀ ಮಳೆಯಾಗು,ಮನವೇ,
ಅನ್ನದಾತ ಬಿತ್ತಿದ ಬೀಜಕೆ,ಮೊಳಕೆಯಾಗು,
ಮೊಳೆಕೆಯಾಗಿ ಬೆಳೆದು ಬೆಳೆಯಾಗು,
ಬೆಳೆಯಾಗಿ ಹಸಿದ ಹೊಟ್ಟೆಗೆ ಅನ್ನವಾಗಿ,
ನೀ ಹಗುರವಾಗು, ಮನವೇ.
ಹಗುರಾಗೂ ಮನವೇ,ನೀ ಹಗುರವಾಗು,
ಹೊನ್ನು ಮಣ್ಣು ಹೆಣ್ಣೆಂಬ ಲೌಕಿಕ ಭಾರ ಕಳೆದು,
ಬ್ರಹ್ಮ ಚೈತನ್ಯದೊಳಗೊಂದಾಗಿ, ಹಗುರಾಗು,
ಮನವೇ ನೀ ಹಗುರವಾಗೂ.
ಸಂತರ ಏಳು ಸಾಧನಾ ಮೆಟ್ಟಿಲುಗಳನೇರಿ,
ಅನುಭಾವದ ಹಾಲ್ಜೇನ ಸವಿದು ಹಗುರಾಗಿ,
ಪರಮಾತ್ಮನ ಪರಮಾಪ್ತದ ಕೂಸಾಗಿ,
ಪರಮಾನಂದದಿ ಖಾದರಲಿಂಗನ ಚರಣದ,
ಧೂಳಾಗಿ, ಧೂಳಿನೊಳಗೊಂದಾಗೂ.