ಹಗಲಿಡೀ ಉರಿದು
ಬೆಳಕ ಹೊತ್ತೊಯ್ದು ಮತ್ತೆ
ಮರಳುವ ಸೂರ್ಯನ ಹಾಗೆ
ಮರಳಿ ಬರಲಾರ ಅಪ್ಪ
ನನ್ನ ಎಳೆಯ ಕಣ್ಣುಗಳಾಳದಲಿ
ಚಿರ ನಿಂತು
ಹೊಂಗನಸು ತುಂಬುವ ಮೊದಲೆ
ನಕ್ಷತ್ರ ಲೋಕಕೆ ಪಯಣ ಬೆಳೆಸಿದವ
ಆತನ ತೂಗುಯ್ಯಾಲೆಯ ತೋಳುಗಳಲಿ
ಮಗುವಾಗಿ ಮಲಗಿ ನಿದ್ರಿಸಲಿಲ್ಲ
ಕಾಣಲಿಲ್ಲ ಮರಿಹಕ್ಕಿಯ ಬೆಚ್ಚನೆ ಹಿತವ
ನಡೆದೇ ಬಿಟ್ಟ ಕೈ ಬೀಸಿ ಕರೆದ
ಇರುಳ ತಾರೆಯೆಡೆಗೆ
ಏರುಜಾರಿನ ದಾರಿಯಲಿ
ಪುಟ್ಟ ಪುಟ್ಟ ಹೆಜ್ಜೆಗಳನಿಡುತ
ತುದಿ ಬೆರಳ ಹಿಡಿದು ಜೊತೆ ನಡೆವ ಮುನ್ನ
ನೆಲದ ನಂಟ ಕಳಚಿ ಹೊರಟು ಹೋದ
ಶಪಿಸುತ್ತೇನೆ ಅಪ್ಪನನು
ಮಾರ್ಗ ಮಧ್ಯದಲಿ
ಬಾಳ ಸಂತೆಯ ಮೂಟೆಯ
ಅವ್ವನ ಹೆಗಲಿಗೇರಿಸಿ
ನೇಪಥ್ಯಕೆ ಸರಿದ ನಿರ್ದಯೆಗಾಗಿ!
ಅಪ್ಪ ನನ್ನ ಪಾಲಿಗೆ ಅವ್ಯಕ್ತ ಭಾವ!
ಅಗೋಚರ ಜೀವ!
ಅಪ್ಪನೊಲುಮೆ,ಸಾಂಗತ್ಯ
ಸ್ವಪ್ನದ ಸುಖವಷ್ಟೆ!