ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ
ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ
ಹೊರಬರಲು ಹವಣಿಸುವ ಕಣ್ಣೀರ
ರೆಪ್ಪೆಯೊಳಗೇ ತಡೆದಿದ್ದಾಳೆ
ಬಹಳ ಮಾಗಿದ್ದಾಳೆ ಅವಳು….!

ಮನದ ಮಾತೆಲ್ಲ ಹೊರಬಂದರೆ
ಬದುಕು ಬಂಡೆಯೊಳಗಿನ ಬಿರುಕಿನಂತಾಗುವ
ಭಯವಿದೆ ಅವಳಿಗೆ
ಅವಳ ಮೌನದ ತೇಪೆ ಎಲ್ಲವನೂ ಸಂಭಾಳಿಸುತ್ತಿದೆ
ಬಹಳ ಮಾಗಿದ್ದಾಳೆ ಅವಳು….!

ಎಲ್ಲವೂ ಇದೆ, ಎಲ್ಲರೂ ಇಹರು
ಆದರೂ ಅವಳಿಲ್ಲಿ ಒಂಟಿ….
ಕಲಿತಿದ್ದಾಳೆ ಈಗ ಸದ್ದಿಲ್ಲದೇ ಬಿಕ್ಕುವುದನ್ನು
ಕಣ್ಣೀರಿಗೂ ಅರಿವಾಗದಂತಳುವುದನ್ನು
ಬಹಳ ಮಾಗಿದ್ದಾಳೆ ಅವಳು….!

ವಿರಾಗಿಯಾಗುವಳು ಕೆಲವೊಮ್ಮೆ
ಲೋಕದ ಹಂಗು ತನದಲ್ಲವೆಂದು….
ತೊಟ್ಟಿಲ ಕೂಸು ಚೀರಿದಾಗ
ಬೆಚ್ಚಿಬಿದ್ದು ತೂಗುವಳು, ಎದೆಗಪ್ಪಿಕೊಳ್ಳುವಳು…
ಬಹಳ ಮಾಗಿದ್ದಾಳೆ ಅವಳು….!

ತನ್ನೆಡೆಗಿನ ಗಮನಕ್ಕಾಗಿ ಹಪಹಪಿಸುತ್ತಾಳೆ
ಮರುಗುತ್ತಾಳೆ ಬೇರೆಲ್ಲರಿಗೂ ದೊರೆಯುವ ಪ್ರಾಶಸ್ತ್ಯ ತನಗಿಲ್ಲದಾಗ
ಕೊನೆಗೊಮ್ಮೆ ತನ್ನೆಡೆಗಿನ ನಿರ್ಲಕ್ಷ್ಯದೆಡೆಗೇ
ದಿವ್ಯ ನಿರ್ಲಕ್ಷ್ಯತಾಳುತ್ತಾಳೆ….
ಬಹಳ ಮಾಗಿದ್ದಾಳೆ ಅವಳು….!

ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಾಳೆ
ತನ್ನತನವೆಂಬುದೇ ಉಸಿರುಗಟ್ಟಿಸಿದಂತಾಗೆ
ಹಳೆಗುಜುರಿಯಂತದರ ಮೂಟೆಕಟ್ಟಿ
ಅಟ್ಟದ ಮೂಲೆಯಲೆಲ್ಲೋ ಎಸೆದು ಬಿಡುತ್ತಾಳೆ…
ಬಹಳ ಮಾಗಿದ್ದಾಳೆ ಅವಳು……!

ಹೌದು ಬಹಳ ಮಾಗಿದ್ದಾಳೆ ಅವಳು……!
ಲೋಕದ ದೃಷ್ಟಿಯಲ್ಲಿ….!!

0
    0
    Your Cart
    Your cart is emptyReturn to Shop