ಪ್ರಬಂಧದ ಶೀ಼ರ್ಷಿಕೆ ನೋಡಿದ ಕೂಡಲೇ ಪೇಪರಿನವರು ಎಂದೊಡನೆ ಎಲ್ಲರ ಮನಸ್ಸಿನಲ್ಲಿ ಮೂಡಿಬರುವುದು ಪ್ರಪಂಚದ ದಶ ದಿಕ್ಕುಗಳಿಂದಲೂ ಮಾಹಿತಿಯನ್ನು ಕಲೆ ಹಾಕಿ ಅದನ್ನು ಆಕರ್ಷಕವಾಗಿ ಪ್ರಕಟಿಸುವ ವರದಿಗಾರರು, ಸಂಪಾದಕರನ್ನು ಒಳಗೊಂಡಿರುವಂತಹ ಒಂದು ವರ್ಗ. ಇಲ್ಲವೆ, ಈ ಪತ್ರಿಕೆಗಳನ್ನು ಸಾರ್ವಜನಿಕರು ಚಹಾ ಕುಡಿಯುವ ಪೂರ್ವದಲ್ಲಿಯೇ ಚುಮು ಚುಮು ನಸುಕಿನಲ್ಲಿ ಮಳೆಯೆನ್ನದೆ, ಚಳಿಯೆನ್ನದೆ ಸೈಕಲ್ ಮೇಲೋ, ಬೈಕ್ ಮೇಲೋ ಅಥವಾ ಇನ್ನಾವುದೇ ವಾಹನದ ಮೇಲೆ ಪ್ರತಿ ಮನೆ ಮನೆಗೂ ತಲುಪಿಸುವ ಪೇಪರ್ ಹಾಕುವವರ ಇನ್ನೊಂದು ವರ್ಗ.
ಇವರನ್ನು ಹೊರತು ಪಡಿಸಿಯೂ ಸಾಮಾನ್ಯವಾಗಿ ರಜೆಯ ದಿನದಂದು “ಪೇಪರ್ … ರದ್ದಿ ಪೇಪರ್” ಎಂದು ಮೂರು ಅಥವಾ ನಾಲ್ಕು ಗಾಲಿಯ ಗಾಡಿಯಲ್ಲಿ ಹಳೆಯ ಪೇಪರದೊಂದಿಗೆ ಇತರೆ ಗುಜರಿ ಸಾಮಾನು ತೆಗೆದುಕೊಂಡು ಹೋಗುವ ರದ್ದಿ ಪೇಪರಿನವರ ಮತ್ತೊಂದು ವರ್ಗ. ಈ ಮೂರು ವರ್ಗದವರನ್ನು ನೀವು ನೋಡಿರಬಹುದು. ಇಲ್ಲವೇ ನೋಡದೆ ಇರಬಹುದು.
ಈ ಮೂರು ವರ್ಗಕ್ಕಿಂತ ವಿಭಿನ್ನವಾದ ಹಾಗೂ ವಿಲಕ್ಷಣವಾದ ಇನ್ನೊಂದು ವರ್ಗವುಂಟು. ಇವರನ್ನು ನೀವು ಒಮ್ಮೆಯಾದರೂ ಒಮ್ಮೆಯೇನು ದಿನನಿತ್ಯ ನೋಡಿರಲಿಕ್ಕೆ ಸಾಕು. ಅದೇ ನಾವು ನೀವು ಪತ್ರಿಕೆಯನ್ನು ಓದುತ್ತಿರುವಾಗ ಅವುಗಳನ್ನು ತೆಗೆದುಕೊಂಡು ಓದುವವರ ವರ್ಗ. ಇವರು ನಮ್ಮ ನೆರೆಹೊರೆಯವರಾಗಿರಬಹುದು, ಸ್ನೇಹಿತರಾಗಿರಬಹುದು, ಸಹೋದ್ಯೋಗಿ ಆಗಿರಬಹುದು ಇಲ್ಲವೆ ಪ್ರಯಾಣದ ವೇಳೆ ಸಹ ಪ್ರಯಾಣಿಕರಾಗಿರಬಹುದು. ಈ ವರ್ಗದವರು ಮೇಲಿನ ಎರಡು ವರ್ಗದವರಿಗಿಂತ ಕುತೂಹಲ ಹಾಗು ಆಸಕ್ತಿ ಮೂಡಿಸುವಂತಹ ವರ್ಗದವರೆಂದೆ ಹೇಳಬೇಕು. ಆದುದರಿಂದ ಅವರೆ ಇಲ್ಲಿನ ಪ್ರಮುಖ ಪಾತ್ರಧಾರಿಗಳು.
ಈ ಪೇಪರಿನವರಲ್ಲಿ ಅವರ ಸ್ವಭಾವಕ್ಕನುಸಾರವಾಗಿ ಮಂದಗಾಮಿ ಹಾಗೂ ತೀವ್ರಗಾಮಿಗಳೆಂದು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದೆAದು ನನ್ನ ಭಾವನೆ. ಅಷ್ಟೇ ಅಲ್ಲದೆ ಇವರಲ್ಲಿ ನಗುಮುಖದವರು, ಸಿಡುಕುಮುಖದವರು, ವಿನಂತಿಸುವವರು, ಸರಕ್ಕನೆ ತೆಗೆದುಕೊಳ್ಳುವವರು, ಸೀಟು ನೀಡುವ ನೆಪದಲ್ಲಿ ಪಡೆಯುವವರು ಹೀಗೆ ವಿವಿಧ ಸ್ವಭಾವದ ಹಾಗೂ ಪ್ರಕಾರದವರಾಗಿರುತ್ತಾರೆ. ಈ ನಗುಮುಖದವರಿಗೆ ಪತ್ರಿಕೆಯನ್ನು ಹೇಗೆ ಪಡೆಯಬೇಕೆಂಬ ಕಲೆ ಚೆನ್ನಾಗಿ ಗೊತ್ತು. ಅದು ಪೇಪರ್ ಇದ್ದವರ ಮನಸ್ಸಿಗೆ ಎಳ್ಳ಼ಷ್ಟು ನೋವಾಗದಂತೆ ಪಡೆಯುವ ಶೈಲಿ. ಒಂದು ರೀತಿ ಕ್ರಿಕೆಟಿನಲ್ಲಿ ಚೇತೇಶ್ವರ ಪೂಜಾರ ಯಾವ ಚೆಂಡನ್ನು ಹೇಗೆ ಹೊಡೆಯಬೇಕೆಂದು ತಾಳೆ ಹಾಕಿಕೊಂಡು ಚೆಂಡಿಗೆ ನೋವಾಗದಂತೆ ಹೊಡೆಯುವ ಕಲಾತ್ಮಕ ಶೈಲಿಯಂತೆ ಇರುತ್ತದೆ. ಇನ್ನು ಕೆಲವೊಬ್ಬರದು ಪೇಪರ್ ನಿಮ್ಮದಿದ್ದರೇನಾಯಿತು ಓದುವವನು ನಾನು ಎಂಬ ಧಾಷ್ಟö್ಯತೆ ಅವರಲ್ಲಿರುತ್ತದೆ. ಅದಕ್ಕೆಂದೆ ನಿಮ್ಮ ಕೈಯಲ್ಲಿರುವ ಪತ್ರಿಕೆಯನ್ನು ಸರಕ್ಕನೆ ಎಳೆದುಕೊಂಡು ಓದುತ್ತಾ ಕೂತು ಬಿಡುತ್ತಾರೆ. ನಿಮ್ಮ ಮನಸ್ಸಿಗೆ ನೋವಾಗುತ್ತೆ ಎಂಬ ಭಾವನೆ ಅವರಲ್ಲಿ ಇರುವದಿಲ್ಲ. ಅವರದೂ ಏನಿದ್ದರೂ ಹಿಟ್ ಮ್ಯಾನ್ ರೋಹಿತ ಶರ್ಮ ಸ್ಟೈಲ್. ಚೆಂಡು ಇರುವುದೇ ಸಿಕ್ಸರ್ ಬಾರಿಸಲಿಕ್ಕೆ ಎಂಬ ಸ್ವಭಾವದವರು.
ಇನ್ನೂ ಕೆಲವರು ಇರುತ್ತಾರೆ. ಪಕ್ಕದ ಮನೆಗೆ ಬಂದ ಪತ್ರಿಕೆಯನ್ನು ಅದರ ಯಜಮಾನಕ್ಕಿಂತ ಮೊದಲೇ ತೆಗೆದುಕೊಂಡು ಓದಿ ಬಿಡುತ್ತಾರೆ ಇವರು. ಅದನ್ನು ಓದಿ ಅಲ್ಲಿಯೆ ಇಟ್ಟರೆ ಪುಣ್ಯ. ಕೆಲವೊಮ್ಮೆ ಅದು ತಮ್ಮದೆ ಎನ್ನುವಂತೆ ಮನೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ನಂತರ ಮನೆಯ ಯಜಮಾನ ಪೇಪರಿಗಾಗಿ ಕಾಪೌಂಡ್ ಎಲ್ಲ ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಅಲ್ಲಿಯೆ ವಾಕಿಂಗ್ ಮುಗಿಸಬೇಕಾಗುತ್ತದೆ. ಅಲ್ಲದೆ ಅಂದಿನ ಮತ್ತೊಂದು ಪೇಪರ್ ತರಲು ಅಂಗಡಿಗೆ ಹೋಗಬೇಕಾಗುತ್ತದೆ.
ಪೇಪರಿಗಾಗಿ ಬೆಳಿಗ್ಗೆ ಬೆಳಿಗ್ಗೆನೆ ನಿಮ್ಮ ಮನೆಗೆ ವಕ್ಕರಿಸಿಕೊಳ್ಳುವವರು ಇರುತ್ತಾರೆ. “ಹೀಗೆ ವಾಕಿಂಗಿಗೆ ಹೋಗಿದ್ದೆ ಸರ್, …ಬೆಳಿಗ್ಗೆನೆ ಎಷ್ಟು ಬಿಸಿಲು ನೋಡಿ ಸರ್…” ಎಂದು ಮಾತಿಗೆ ಪೀಠಿಕೆ ಹಾಕುತ್ತ ನಿಮ್ಮ ಕಾಪೌಂಡಿನ ಹುಲ್ಲು ಹಾಸಿಗೆಗೆ ಬಂದು ನಿಮ್ಮ ಜೊತೆ ಓದುವುದಕ್ಕೆ ಕೂತು ಬಿಡುತ್ತಾರೆ. ಪಕ್ಕದ ಮನೆಯವರಾದರಿಂದ ಮಾತನಾಡದೆ ಇರಲಾದೀತೆ…? “ ಬನ್ನಿ, ತುಂಬಾ ಬಿಸಿಲಲ್ಲವೇ..” ಎನ್ನುತ್ತಾ ಬಾರದ ನಗೆಯನ್ನು ತಂದು ಅವರನ್ನು ಕರೆಯುತ್ತೀರಿ. ಅದಾಗಲೇ ನಿಮ್ಮ ಮನೆಯಾಕೆ ನಿಮ್ಮ ಕೈಯಲ್ಲಿ ಬಿಸಿ ಬಿಸಿ ಚಹಾ ಕಪ್ಪು ಇಟ್ಟಿರುತ್ತಾರೆ. ನೀವೊಬ್ಬರೆ ಕುಡಿಯುವದು ಸೌಜನ್ಯವಲ್ಲ ಅಲ್ಲವೇ. ಕೊನೆಗೆ ಅವರಿಗೂ ಒಂದು ಕಪ್ಪು ಚಹಾ ಸಂದಾಯವಾಗುತ್ತದೆ. ಪುಕ್ಸಟ್ಟೆ ಪೇಪರ್ ಪುಕ್ಸಟ್ಟೆ ಚಹಾ ಯಾರಿಗುಂಟು ಯಾರಿಗಿಲ್ಲ ಭಾಗ್ಯ ಅಲ್ಲವೇ..? ಪೇಪರ್ ಎಲ್ಲ ಓದಿದ ನಂತರ “ಇತ್ತೀಚೆಗೆ ಈ ಪತ್ರಿಕೆಯಲ್ಲಿ ಬರೀ ಹಳಸಲು ಸುದ್ದಿ ಸಾರ್, ಇನ್ನೊಂದು ಆ ಪತ್ರಿಕೆ ಇದೆಯಲ್ಲ ತುಂಬಾ ಚೆನ್ನಾಗಿ ಬರುತ್ತಿದೆ ಸಾರ್, ಅದನ್ನೆ ತರಿಸಿ ಬಿಡಿ” ಎಂಬ ಪುಕ್ಸಟ್ಟೆ ಸಲಹೆಯಿಂದ ನಿಮಗೆ ನಖಶಿಖಾಂತ ಕೋಪ ಬಂದಿರುತ್ತೆ. ಆದರೂ ನೀವು ಅದನ್ನು ತೋರ್ಪಡಿಸುವಂತಿಲ್ಲ. ಏಕೆಂದರೆ, ಅವರು ನಿಮ್ಮ ನೆರೆಹೊರೆಯವರು. ಕೊನೆಗೂ ಬಲವಂತದ ನಗೆ ತಂದು “ನೀವು ಹೇಳುವುದು ಸರಿಯೇ..” ಎಂದು ಅವರನ್ನು ಸಾಗ ಹಾಕುವದೊಳಗೆ ನಿಮ್ಮ ಸಹನೆಯ ಕಟ್ಟೆ ಒಡೆದು ಹೋಗಿರುತ್ತದೆ. ಈ ಸಹವಾಸವೆ ಬೇಡವೆಂದು ಬೆಳಗ್ಗಿನ ಹುಲ್ಲು ಹಾಸಿಗೆಯ ನಿಮ್ಮ ಪತ್ರಿಕಾ ವಾಚನವನ್ನು ಮನೆಯ ಒಳಗೆ ಸ್ಥಳಾಂತರಿಸಿ ಬಿಡುತ್ತಿರಿ.
ನೀವು ಮನೆಯಿಂದ ಆಫೀಸಿಗೆ ಹೋಗುವಾಗ ಮನೆಯ ಪಕ್ಕದ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತ ಪತ್ರಿಕೆಯಲ್ಲಿ ಅಂದಿನ ನಿಮ್ಮ ರಾಶಿ ಭವಿಷ್ಯ ಓದುತ್ತಿರುವಾಗ ಧನಹಾನಿ ಎಂದು ನೋಡುತ್ತೀರಿ. ಮುಖ ತನ್ನಿಂದ ತಾನೇ ಬಿಳಿಚಿಕೊಂಡು ಯೋಚನಾ ಮಗ್ನರಾಗುತ್ತೀರಿ. ಅಷ್ಟರಲ್ಲಿಯೇ ಪಕ್ಕದ ಮನೆಯವರು ಆಫೀಸಿಗೆ ಹೋಗಲು ಬಂದು ನಿಮಗೆ ಹಲೋ ಹೇಳಿ ನಿಮ್ಮ ಕೈಯಲ್ಲಿರುವ ಪೇಪರನ್ನು ತೆಗೆದುಕೊಂಡು ಓದುತ್ತಾ ನಿಲ್ಲುತ್ತಾರೆ. ಬೇರೆ ಯಾವ ಸಂದರ್ಭದಲ್ಲಿ ಮಾತನಾಡದಿದ್ದರೂ ಪತ್ರಿಕೆಗಾಗಿ ಅವರು ಮಾತನಾಡಿಸುತ್ತಾರೆ. ಅವರು ಪೇಪರ್ ಓದುತ್ತಾ ನಿಂತಾಗ ನೀವು ಹೋಗುವ ರೂಟಿನ ಬಸ್ಸು ಬಂದು ಬಿಡುತ್ತದೆ. ಅದಕ್ಕೇನು ಗೊತ್ತು, ಪೇಪರ್ ವಾಚನ ಮುಗಿದಿಲ್ಲವೆಂದು. ಪಾಪ..ನೀವು ಹೋಗಲಿಕ್ಕೆ ಅರ್ಜೆಂಟ್ ಮಾಡುತ್ತಾ ಪೇಪರ್ ಕೇಳುತ್ತೀರಿ. ಆದರೆ ಯಾವುದೋ ಕುತೂಹಲಭರಿತ ಸುದ್ದಿ ಓದುವುದರಲ್ಲಿ ತಲ್ಲೀನನಾಗಿರುವ ಆತ ನಿಮಗೆ ಪೇಪರ್ ಕೊಡುವುದಕ್ಕೆ ಸಮಯವಾಗುತ್ತದೆ. ಅಷ್ಟರಲ್ಲೇ ನಿಮ್ಮ ರೂಟಿನ ಬಸ್ಸು ಹೋಗಿ ಬಿಡುತ್ತದೆ. ಕೈ ಹಿಸುಕಿಕೊಂಡು ನಿಲ್ಲುವ ಸರದಿ ನಿಮ್ಮದಾಗುತ್ತದೆ. ಅವತ್ತು ಆಫೀಸಿಗೆ ಲೇಟಾಗಿ ಹೋಗಿ ಬಾಸ್‌ನಿಂದ ಬೈಯಿಸಿಕೊಳ್ಳುವ ಹಣೆಬರಹ ನಿಮ್ಮದು. ಸ್ವಲ್ಪ ಹೊತ್ತಿನಲ್ಲಿ ಆತ ಹೋಗುವ ಬಸ್ಸು ಬಂದಾಗ ಯಾವುದಕ್ಕೂ ಕಾಯದೆ ನಿಮ್ಮ ಪೇಪರನ್ನು ನಿಮಗೆ ಕೊಟ್ಟು ತಮ್ಮ ಪಾಡಿಗೆ ತಾವು ಬಸ್ಸು ಹತ್ತಿಕೊಂಡು ಏನು ಗೊತ್ತಿಲ್ಲದಂತೆ ಹೋಗಿ ಬಿಡುತ್ತಾರೆ. ಈಗ ನೀವು ಒಬ್ಬಂಟಿಯಾಗಿ ನಿಲ್ಲಬೇಕಾಗುತ್ತದೆ. ನಿಮ್ಮ ರೂಟಿನ ಮತ್ತೊಂದು ಬಸ್ಸು ಬರುವವರಿಗೆ ಕಾಯುವÀ ಸಹನೆ ಇಲ್ಲದಾಗಿ ಹಾಗೂ ಕಚೇರಿ ಕೆಲಸಕ್ಕೆ ಲೇಟಾಗುವದೆಂದು ಅರಿತು ಇಂದಿನ ನಿಮ್ಮ ಭವಿಷ್ಯ ಬರೆದವನನ್ನು ಶಪಿಸುತ್ತಾ ರಿಕ್ಷಾ ಹಿಡಿದುಕೊಂಡು ಹೋಗಲು ರಿಕ್ಷಾ ಹತ್ತುತ್ತಿರಿ. ಪುಕ್ಸಟ್ಟೆ ಪೇಪರ್ ಓದಿದವನು ಅವನು, ರಿಕ್ಷಾಕ್ಕೆ ಕಾಸು ಕೊಟ್ಟವರು ನೀವು.
ಈ ಪೇಪರದವರ ಹಾವಳಿ ಪ್ರಯಾಣದಲ್ಲಿ ಇನ್ನೂ ಹೆಚ್ಚು. ನಿಮ್ಮ ಕೈಯಲ್ಲಿ ಯಾವದಾದರೂ ಪತ್ರಿಕೆ ಇದ್ದರಂತೂ ಮುಗಿದೆ ಹೋಯಿತು. ಅದನ್ನು ಆದಷ್ಟು ಬೇಗ ಪಡೆಯಬೇಕೆಂಬ ಧಾವಂತ ಅವರಲ್ಲಿ ಇರುತ್ತದೆ. ಅವರ ಕಣ್ಣು ಬೇರೆ ಎಲ್ಲೂ ಇರುವದಿಲ್ಲ. ಚಿರತೆಯೊಂದು ತನ್ನ ಬೇಟೆಗಾಗಿ ಹೇಗೆ ಹೊಂಚು ಹಾಕಿ ಕುಳಿತು ತನ್ನ ಬೇಟೆ ತಪ್ಪಬಾರದೆಂದು ಕಣ್ಣಲ್ಲಿ ಕಣ್ಣೀಟ್ಟು ಹೇಗೆ ಕುಳಿತಿರುತ್ತದೆಯೋ ಆ ತೆರನಾಗಿರುತ್ತೆ ಅವರ ದೃಷ್ಟಿ. ನೀವು ಜನಸಂದಣಿಯ ಬಸ್ಸಿನಲ್ಲಿ ಹೇಗೋ ಸಾವರಸಿಕೊಂಡು ಬರುವದನ್ನೆ ಅವರು ಕಾಯುತ್ತಿರುತ್ತಾರೆ. ನೀವು ಬಂದ ಕೂಡಲೆ ನಿಮ್ಮ ಪತ್ರಿಕೆಯನ್ನು ಇಸಿದುಕೊಂಡು ಓದುತ್ತಾ ಕೂತು ಬಿಡುತ್ತಾರೆ.
ಮೊನ್ನೆ ಹೀಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಕೈಯಲ್ಲಿ ಅಂದಿನ ಪತ್ರಿಕೆಯಿತ್ತು. ಬಸ್ ತುಂಬಾ ರಶ್ ಇದ್ದುದರಿಂದ ಕೂಡಲು ಸೀಟು ಇರಲಿಲ್ಲ. ನಿಂತೆ ಪ್ರಯಾಣ ಮಾಡಬೇಕಾಯಿತು. ಸೀಟಿಗೆ ಆನಿಸಿಕೊಂಡು ನಿಂತೆ. ಅಷ್ಟರಲ್ಲಿಯೆ “ ಅಂಕಲ್, ಸ್ವಲ್ಪ ಪೇಪರ್ ಕೊಡುತ್ತಿರಾ..” ಎಂಬ ಧ್ವನಿ. ತಿರುಗಿ ನೋಡಿದರೆ ಮಧ್ಯ ವಯಸ್ಕನೊಬ್ಬ ಪತ್ರಿಕೆಗಾಗಿ ಕೈ ಚಾಚುತ್ತಿದ್ದಾನೆ. ನೋಡಿದರೆ ನನಗಿಂತ ಮೂರು ಪಟ್ಟು ಹೆಚ್ಚೇ ವಯಸ್ಸಾಗಿದೆ. ನನಗೆ ಅಂಕಲ್ ಎಂದು ಕರೆಯುತ್ತಿದ್ದಾನಲ್ಲ ಎಂದೆನೆಸಿತು. ಮೊದಲೆ ಬಿಸಿಲು ಮೇಲಾಗಿ ನಿಂತ್ಕೊAಡೆ ಪ್ರಯಾಣ ಕೋಪ ಬಾರದೆ ಇದ್ದಿತೇ..?. ತುಂಬಿದ ಬಸ್ಸಿನಲ್ಲಿ ಕೋಪ ಮಾಡಿಕೊಳ್ಳುವದು ಸೌಜನ್ಯವಲ್ಲವೆಂದು ಕೋಪ ನುಂಗಿಕೊAಡು ಬೇರೆ ದಾರಿಯಿಲ್ಲದೆ ಪೇಪರ್ ಕೊಟ್ಟೆ . ಆತ ಖುಷಿಯಿಂದ ಓದುತ್ತಾ ಕುಳಿತ. ಈ ಪೇಪರಿಗಾಗಿ ಹುಡುಗ ಅಂಕಲ್ ಆಗುತ್ತಾನೆ . ಮುದುಕ ಹುಡುಗನಾಗುತ್ತಾನೆ. ಎಲ್ಲ ಪೇಪರದವರ ಮಹಿಮೆ. ಅಂತೂ ಕೊನೆಗೆ ತನ್ನ ಸ್ಟಾಪ್ ಬಂದಾಗ ನನ್ನ ಪೇಪರನ್ನು ಸರಿಯಾಗಿ ಜೋಡಿಸಿ ನೀಟಾಗಿ ನನ್ನ ಕೈಗೆ ನೀಡುತ್ತಾ “ ಥ್ಯಾಂಕ್ಸ” ಎನ್ನುತ್ತಾ “ ಕೂತುಕೊಳ್ಳಿ ಅಂಕಲ್” ಎಂದು ಹೇಳಿ ಸೀಟು ಬಿಟ್ಟು ಹೊದಾಗ ಖುಷಿ ಆಗದೆ ಇದ್ದಿತೇ..?
ಇನ್ನೂ ಕೆಲವರು ಇರುತ್ತಾರೆ. ತಮ್ಮ ಸೀಟಿನಲ್ಲಿ ಅಡ್ಜಸ್ಟ್ ಮಾಡಿಕೊಂಡು ಪೇಪರ್ ಪಡೆದು ಅತ್ತ ಕೂಡಲಿಕ್ಕೂ ಆಗದ, ಇತ್ತ ನಿಲ್ಲಲಿಕ್ಕೂ ಆಗದ ಸ್ಥಿತಿಯನ್ನು ತಂದು ಬಿಡುತ್ತಾರೆ. ಏಕೆಂದರೆ ಇಬ್ಬರು ಕೂತುಕೊಳ್ಳುವ ಸೀಟಿನಲ್ಲಿ ಮೂರು ಜನರು ಕೂಡುವದಾದರೂ ಹೇಗೆ..? ಆದರೂ ಅವರದೂ ಪೇಪರ್ ಪಡೆದುದಕ್ಕೆ ಪ್ರತ್ಯುಪಕಾರ ಮಾಡಬೇಕೆಂಬುವ ಸ್ವಭಾವ. ಆದರೇನು ಸೀಟಿಗೆ ಆ ಭಾವನೆ ಇರುತ್ತದೆಯೆ ? ಮೂರನೇಯ ವ್ಯಕ್ತಿ ಕುಳಿತಿದ್ದಾನೆಂದು ಸೀಟು ದೊಡ್ಡದಾಗುದಿಲ್ಲವಲ್ಲ. ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಕುಳಿತ ಸೀಟಿನಲ್ಲಿಯೇ ಪ್ರಯಾಣ ಮಾಡುವುದು ಅನಿವಾರ್ಯವಾಗುತ್ತದೆ.
ಇನ್ನು ಕೆಲವೊಬ್ಬರ ಸ್ವಭಾವ ಹೇಗೆಂದರೆ, ಪೇಪರ್ ಯಾರದು ಎಂಬ ಕಲ್ಪನೆ ಅವರಿಗೆ ಇರುವುದಿಲ್ಲವೇನೋ..? ಪೇಪರ್ ತೆಗೆದುಕೊಂಡ ಕೂಡಲೇ ತಮಗೆ ಇಷ್ಟವಾದ ಪುಟವನ್ನು ಓದುತ್ತಾ ಉಳಿದ ಪುಟಗಳನ್ನು ಪಕ್ಕದಲ್ಲಿರುವವರಿಗೆ ದಾನಶೂರ ಕರ್ಣನಂತೆ ನೀಡಿ ಬಿಡುತ್ತಾರೆ. ಅಲ್ಲದೆ ಅವರಿಂದ ಥ್ಯಾಂಕ್ಸ್ ಕೂಡ ಪಡೆದುಕೊಳ್ಳುತ್ತಾರೆ. ಪೇಪರ್ ಯಾರದೋ… ಥ್ಯಾಂಕ್ಸ್ ಇನ್ನಾರಿಗೋ…ಇದನ್ನೆಲ್ಲಾ ನೋಡಿದಾಗ ಯಾವ ಹೂವು ಯಾರ ಮುಡಿಗೋ ಎನ್ನುವ ಪರಿಸ್ಥಿತಿ. ಕೊನೆಗೆ, ಆ ಪೇಪರ್ ಅವರಿವರ ಕೈಯಿಂದ ಒಂದೊಂದು ಪುಟಗಳಿಂದ ವಾಪಾಸಾಗಿ ಅದು ನಿಮ್ಮ ಕೈಯಲ್ಲಿ ಬರುವದೊಳಗೆ ಧಾರುಣ ಸ್ಥಿತಿ ತಲುಪಿ ಬಿಟ್ಟಿರುತ್ತದೆ. ಏಕೆಂದರೆ ಮೊದಲೇ ಜನಸಂದಣಿ ಇರುವ ಬಸ್ಸಿನಲ್ಲಿ ಅವರಿವರ ಕೈ ತಾಕಿಯೋ, ಗಾಳಿಯಿಂದ ಅಂಚಿನಲ್ಲಿ ಹರಿದು ಇಲ್ಲವೆ ಅಕ್ಕ ಪಕ್ಕದ ಪ್ರಯಾಣಿಕರು ತಮ್ಮತ್ತ ಎಳೆದುಕೊಂಡ ಪರಿಣಾಮವಾಗಿ ಪುಟಬಾಲ್ ಆಟಗಾರರ ಕೈಯಲ್ಲಿ ಅಲ್ಲಲ್ಲ, ಕಾಲಲ್ಲಿ ಹಣ್ಣುಗಾಯಿ ನೀರುಗಾಯಿ ಆದ ಪುಟ್ಬಾಲ್ ತರಹ ಆಗಿರುತ್ತದೆ. ಅವೆಲ್ಲ ಪುಟಗಳನ್ನು ಹೊಂದಿಸಿಕೊಂಡು ಹರಿದಂತಹ ಪುಟಗಳನ್ನು ಇನ್ನಷ್ಟು ಹರಿಯದಂತೆ ಮಡಿಚಿಟ್ಟುಕೊಳ್ಳುವ ಸರದಿ ನಿಮ್ಮದು. ಇಲ್ಲವಾದಲ್ಲಿ ಅವರಿವರ ಕೈಯಲ್ಲಿ ನಲುಗಿ ಬಂದ ನಿಮ್ಮ ಪೇಪರ್ ಯಾವ ದುರವಸ್ಥೆಗೆ ಹೋಗಿರುತ್ತದೆಯೆಂದರೆ ಅದನ್ನು ರದ್ದಿಗೆ ಹಾಕಲು ನಿಷ್ಪ್ರಯೋಜನ ಆಗಿರುತ್ತದೆ. ಆದಾಗ್ಯೂ, ನೀವು ಧೈರ್ಯ ಮಾಡಿ ರದ್ದಿಯವರಿಗೆ ಕೊಡಲು ಹೋದರೆ “ಏನ್ರಿ ಸರ್, ಹರಿದು ಚಿಂದಿ ಚಿಪ್ಪಾಟಿಯಾಗೇದ ಇದನ್ನು ತಗೊಂಡು ನಾನೇನು ಉಪ್ಪಿನಕಾಯಿ ಹಾಕಲೇನು. ನಿಮ್ಮ ಹಂತ್ಯಾಕ ಇಟ್ಟುಕೊಳ್ರಿ. ಖಾರ ಚುರಮುರಿ ತಿನ್ನಕಾದ್ರೂ ಬರತೈತಿ’’ ಎನ್ನುತ್ತಾ “ಮಂಚದ ಕೆಳಗ ಅದಾವಲ್ರಿ ಅವ್ನ ತಕ್ಕೊಂಡ ರ‍್ರಿ” ಎಂದು ತಾನೆ ಸ್ವತಃ ನೋಡಿದ ಹಾಗೆ ಬೇರೆ ಪೇಪರ್ ತೆಗೆದುಕೊಂಡು ಬರಲು ಹೇಳುತ್ತಾನೆ. ನೋಡಿ ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ. ಏನು ಮಾಡುವುದು ಜಗದ ನಿಯಮ ಇದೇ ತಾನೆ. “ಬಂದುದೆಲ್ಲಾ ಬರಲಿ, ಗುರುವಿನ ದಯೆ ಒಂದಿರಲಿ” ಎನ್ನಬೇಕು ಅಷ್ಟೇ. ಇಲ್ಲವಾದಲ್ಲಿ ರದ್ದಿಯವನ ಕೈಯಲ್ಲಿ ಇನ್ನು ಏನೇನು ಅನ್ನಿಸಿಕೊಳ್ಳಬೇಕಾಗುತ್ತದೆಯೋ ಯಾರಿಗೆ ಗೊತ್ತು.
ಇನ್ನು ಕೆಲವೊಬ್ಬರು ಇರುತ್ತಾರೆ. ಅವರಿಗೆ ಪೇಪರಿನ ಮಹತ್ವವೇ ಗೊತ್ತಿಲ್ಲದವರ ತರಹ ಇರುತ್ತಾರೆ. ಕಾರ್ಯ ನಿಮಿತ್ಯ ಬೆಂಗಳೂರಿಗೆ ರೈಲಿನಲ್ಲಿ ಹೊರಟಿದ್ದೆ. ನನ್ನ ಎದುರಿನ ಸೀಟಿನಲ್ಲಿ ಯಜಮಾನರೊಬ್ಬರು ಕುಟುಂಬ ಸಹಿತ ಮಕ್ಕಳೊಂದಿಗೆ ಕುಳಿತಿದ್ದರು. ನನ್ನ ಕೈಯಲ್ಲಿನ ಪತ್ರಿಕೆ ನೋಡುತ್ತಾ “ ಸರ್, ಸ್ವಲ್ಪ ಪೇಪರ್ ಕೊಡುತ್ತೀರಾ” ಎಂದಾಗ ಪತ್ರಿಕೆಯನ್ನು ಕೊಟ್ಟೆ. ಅಷ್ಟರಲ್ಲಿಯೆ ಮಕ್ಕಳ ನಡುವೆ ಪೇಪರಿಗಾಗಿ ಯುದ್ಧ ಶುರುವಾಯಿತು ನೋಡಿ. ಒಬ್ಬನಿಗೆ ಕ್ರೀಡಾ ಪುಟ, ಮತ್ತೊಬ್ಬನಿಗೆ ಕಾರ್ಟೂನ್ ಇರುವಂತಹ ಪುಟ, ಮಗದೊಬ್ಬನಿಗೆ ಸಿನಿಮಾ ಪುಟಕ್ಕಾಗಿ ಕಿತ್ತಾಟ ನಡೆಯಿತು. ಮಕ್ಕಳು ತಮಗೆ ಬೇಕಾದ ಪುಟಗಳನ್ನು ಹರಿದುಕೊಂಡು ಓದಲಿಕ್ಕೆ ಶುರು ಮಾಡಿದರು. ಈತ ಪೆಚ್ಚು ನಗುವನ್ನು ತಂದುಕೊಂಡು ನನ್ನ ಮುಖ ನೋಡ ಹತ್ತಿದ. ನಂಗೂ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಮಕ್ಕಳು ಓದಬಹುದಾದರೂ ಎಷ್ಟೊತ್ತು ಓದಬಹುದು. ಐದತ್ತು ನಿಮಿಷಗಳಲ್ಲಿ ಆ ಮಕ್ಕಳ ವಾಚನ ಮುಗಿದೊಡನೆ ಏಳೆಂಟು ಪತ್ರಿಕೆಯಾಗಿ ಅವನ ಹತ್ತಿರ ಬಂದವು. ಅಷ್ಟರಲ್ಲಿಯೆ ಚಿಕ್ಕ ಮಗುವೊಂದು ಇವÀನ ಮೇಲೆ ಗಲೀಜು ಮಾಡಿ ಬಿಟ್ಟಿತು. ಪೇಪರ್ ಕೂಡಾ ಗಲೀಜು. ಕೊನೆಗೆ ಆತ “ಸಾರಿ ಸರ್, ಮಗು ಗಲೀಜು ಮಾಡಿದೆ . ಪರವಾಗಿಲ್ಲ ಇಟ್ಟುಕೊಳ್ಳಿ ಏತಕ್ಕಾದರೂ ಬರುತ್ತೆ” ಎಂದು ಸರಕ್ಕನೆ ಪೇಪರನ್ನು ನನ್ನ ಕೈಗೆ ಹಸ್ತಾಂತರಿಸಿದ. ಅದರ ಸಹವಾಸವೆ ಬೇಡವೆಂದು “ಏನ್ರಿ ಇದು ಪೇಪರನ್ನು ಹೀಗಾ ಉಪಯೋಗಿಸುವುದು. ಪರವಾಗಿಲ್ಲ ನೀವೆ ಇಟ್ಟುಕೊಳ್ಳಿ” ಎಂದು ಕೋಪದಿಂದಲೆ ಹೇಳಿ ಅವರಿಗೆ ವಾಪಸು ಕೊಟ್ಟೆ. ಮುಂದಿನ ಸ್ಟೇಷನ್‌ದಲ್ಲಿ ಬೇರೊಂದು ಪತ್ರಿಕೆ ತೆಗೆದುಕೊಂಡು ಇವರ ಸಹವಾಸವೇ ಬೇಡವೆಂದು ಬೇರೆ ಬೋಗಿಯಲ್ಲಿ ಹೋಗಿ ಕುಳಿತುಕೊಂಡು ಪ್ರಯಾಣ ಮಾಡಿದೆ.
ಮೊನ್ನೆ ಹೀಗೆ ಸ್ನೇಹಿತನ ಮನೆಗೆ ಹೋಗಿದ್ದೆ. ಹಾಲ್‌ನಲ್ಲಿ ವಿಧ ವಿಧದ ದಿನಪತ್ರಿಕೆಗಳು ಕಂಡವು. ಮೊದಲೇ ಜಿಪುಣಾಗ್ರೇಸರ. ಇದೇನಾಯಿತು ಇವನಿಗೆ ಇಷ್ಟೊಂದು ಪತ್ರಿಕೆಗಳನ್ನು ತರಿಸಿಕೊಳ್ಳುತಿದ್ದಾನೆಂದು ಆಶ್ಚರ್ಯವಾಯಿತು. ಅವನನ್ನು ಕೇಳುತ್ತಾ “ ನೀ ಯಾವ ಪೇಪರ್ ತರಿಸುವುದು ದೋಸ್ತ್” ಎಂದೆ. ಅದಕ್ಕೆ ಅವನು ಪೇಪರೊಂದರ ಹೆಸರು ಹೇಳಿದ.
“ ಮತ್ತ, ಈ ತರ ಬ್ಯಾರೆ ಬ್ಯಾರೆ ಪೇಪರ್ ಅದಾವಲ್ಲೊ ಅದು ಹ್ಯಾಂಗ”
“ ಓ ಅದಾ ಹಿಂಗ್ ಬಸ್ಸಿನಲ್ಲಿ ಹೋಗುವಾಗ ಪಕ್ಕದವರ ಹತ್ತಿರ ಓದಾಕ ಇಸಿದುಕೊಂಡಿದ್ದೆ.”
“ ಸರಿ ಮತ್ತ, ವಾಪಸ್ ಅವರಿಗೆ ಕೊಡಬೇಕಾಗಿತ್ತಲಾ”
“ನಿಂದು ಒಂದ ಕತಿನಾ ಪಾ.. ಅವರೆಲ್ಲಾ ಮುಂಜಾನೆ ಪೇಪರ್ ಬಂದ ಕೂಡಲೇ ಓದಿರತಾರ. ವಾಪಾಸ ಕೊಡುವುದರೊಳಗ ಏನ ಮೀನಿಂಗ್ ಐತಿ, ಅದಕ್ ನನ್ನ ಕಡೇನ ಉಳಿದಾವ.”
“ಅಡ್ಡಿಯಿಲ್ಲ ಬಿಡು, ನಾನ.. ಒಂದ ಪೇಪರ್ ತರಸಿಕೊಂಡ ಓದೋದ ಕಷ್ಟ ಆಗೇದ. ನೀನೋಡಿದರ ಒಂದ ನಯಾ ಪೈಸಾ ಖರ್ಚಿಲ್ಲದ ಇಷ್ಟೊಂದು ಪೇಪರ್ ಓದಾಕತ್ತಿ. ಆದರೂ ಇದು ಸರಿಯಲ್ಲ ನೋಡಪಾ… ಯಾಕಂದ್ರ ಕನ್ನಡ ಪತ್ರಿಕೆಗಳನ್ನು ಸ್ವಂತ ಕೊಂಡಕೊಂಡು ಓದಿದರ ಕನ್ನಡ ಪತ್ರಿಕ್ಯೋದ್ಯಮ ಅಷ್ಟ ಅಲ್ದ ಕನ್ನಡ ಭಾಷಾನೂ ಬೆಳಿತೈತಿ .ಆದ್ರ, ಇಲ್ಲಿ ನಿನ್ನ ನೋಡಿದ್ರ ಪುಕ್ಸಟ್ಟೆ ತೆಗೆದುಕೊಂಡು ಬಂದ ಓದಿ ಶ್ಯಾನ್ಯಾ ಆಗಾಕತ್ತಿ.”
“ಹುಂ, ಮಾರಾಯಾ ಶ್ಯಾನ್ಯಾ ಆಗೋದು ಅಷ್ಟ ಅಲ್ಲ. ಇವನ್ನ ರದ್ದಿಗೆ ಹಾಕಿ ತಿಂಗಳಾ ರೊಕ್ಕಾನು ತಗೋತಿನಿ” ಎಂದಾಗ ಅವನಿಗೆ ಏನು ಹೇಳಲಾರದೆ ಸುಮ್ಮನೆ ಕೂತು ಬಿಟ್ಟೆ.
ಇನ್ನೂ ಕೆಲವರದು ಇನ್ನಷ್ಟು ವಿಲಕ್ಷಣ ಸ್ವಭಾವ. ಯಾರ ಕೈಯಲ್ಲಾದರೂ ಪತ್ರಿಕೆ ಕಂಡರೆ ಸಾಕು ಸರಕ್ಕನೆ ಅದನ್ನು ಎಳೆದುಕೊಂಡು ಸಿಗರೇಟ್ ಸೇದುತ್ತಾ ಓದುತ್ತಾ ಕೂತು ಬಿಡುತ್ತಾರೆ. ಕೇಳುವ ಸೌಜನ್ಯವು ಅವರಿಗೆ ಇರುವದಿಲ್ಲ. ನಿಮ್ಮ ಕೋಪಗೊಂಡ ಮುಖವನ್ನಾದರು ನೊಡಿ ಕ್ಷಮೆ ಕೇಳುವ ವ್ಯವಧಾನ ಅವರಲ್ಲಿ ಇರುವದಿಲ್ಲ. ನೀವು ಕೋಪಗೊಂಡರೇನು ಬಿಟ್ಟರೇನು, ತಮ್ಮಷ್ಟಕ್ಕೆ ತಾವು ಓದುತ್ತಾ ಪದಬಂಧವನ್ನೋ ಇಲ್ಲವೆ ಸುಡೋಕುವನ್ನೊ ತುಂಬುತ್ತಾ ನಿಮ್ಮ ಪೇಪರೆಲ್ಲ ನಿಮಗಿಂತ ಚೆನ್ನಾಗಿ ಅವರೆ ಬಳಸಿಕೊಂಡು ಓದಿ ಬಿಡುತ್ತಾರೆ. ಇವನೆಲ್ಲ ನೋಡುತ್ತಾ ಯಾರಾದರೂ ಸುಮ್ಮನಿರಲು ಸಾಧ್ಯವೇ..? “ಏನ್ರಿ, ಹತ್ತಾರು ರೂಪಾಯಿ ಕೊಟ್ಟು ಸಿಗರೇಟ ಸೇದುತ್ತಿರಿ. ಐದು ರೂಪಾಯಿ ಕೊಟ್ಟು ಒಂದು ಪೇಪರ್ ಕೊಳ್ಳಲಿಕ್ಕೆ ಆಗುವದಿಲ್ಲವೇ” ಎಂದು ನೀವು ಅಂದದ್ದೆ ತಡ. ನಖಶಿಖಾಂತ ಕೋಪ ಬಂದು ಬಿಡುತ್ತೆ. “ಏನ್ರಿ, ಐದು ರೂಪಾಯಿ ಪೇಪರ್ ತೆಗೆದುಕೊಂಡು ಜಗತ್ತೆಲ್ಲ ಮಾತಾಡ್ತಿರಿ. ಯಾರಿಗೆ ಬೇಕು ನಿಮ್ಮ ಪೇಪರ್ ತಗೊಳ್ಳಿ” ಎಂದು ನಿಮ್ಮ ಕೈಗೆ ಕುಕ್ಕುತ್ತಾನೆ. ಏಕೆಂದರೆ ಅವನಿಗೆ ಗೊತ್ತು, ಅದರಲ್ಲಿ ಓದುವುದು ಏನೂ ಉಳಿದಿಲ್ಲ ಎಂಬುವುದು.
ಮೊನ್ನೆ ಸೋಮವಾರ ಕಚೇರಿಗೆ ಬೇಗ ಹೋಗಿದ್ದೆ. ಇನ್ನೂ ಯಾರೂ ಕಚೇರಿಗೆ ಬಂದಿರಲಿಲ್ಲ. ಸರಿ ಅಂದಿನ ಪತ್ರಿಕೆಯನ್ನಾದರೂ ಓದೋಣ ಎಂದು ಓದಲು ಕುಳಿತೆ. ಅಷ್ಟರಲ್ಲಿಯೆ ಸಹೋದ್ಯೋಗಿ ವಿಶ್ವ ಎಲ್ಲಿದ್ದನೋ ಓಡಿ ಬಂದವನೆ ನನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಕಿತ್ತುಕೊಂಡು ತನ್ನ ಕುರ್ಚಿಯಲ್ಲಿ ಕುಳಿತು ಓದ ಹತ್ತಿದ. ಅದಕ್ಕೆ ನಾನು “ಅಲ್ಲೋ ವಿಶ್ವ, ಅಷ್ಟೇನು ಅವಸರವೋ ಮಾರಾಯಾ. ಕೇಳಿದ್ರ ನಾ ಏನ ಕೊಡುದಿಲ್ಲಾ.” ಎಂದೆ. ಅದಕ್ಕೆ “ದೋಸ್ತ, ವಿಷ್ಯಾ ಅದಲ್ಲ. ನಾ ಮೊದಲ, ಸ್ವಲ್ಪ ಇಂಪರ‍್ಟೆAಟ್ ಸುದ್ದಿ ಓದತಿನಿ. ನಂತ್ರ ನೀ ಎಷ್ಟಾದ್ರೂ ಓದ ಪೇಪರ್ ನಿಂದ ತಿಳಿತೇನ.” ಎಂದಾಗ ಮೊದಲೇ ಅವನ ಕೋಪದ ಸ್ವಭಾವ ಅರಿತ ನಾನು “ಆಯ್ತು ಬಿಡಪಾ” ಎನ್ನುತ್ತಾ ಕಡತಗಳನ್ನು ನೋಡಲು ಶುರು ಮಾಡಿದೆ. ಇಂತಹ ಸಹೋದ್ಯೋಗಿಗಳು ಆಗಾಗ ಸಿಗುತ್ತಿರುತ್ತಾರೆ. ಏನು ಮಾಡುವುದು ಹಣೆಬರಹ ಎಂದು ಸುಮ್ಮನಾಗಬೇಕು ಅಷ್ಟೇ.
ದಿನ ನಿತ್ಯ ಬದುಕಿನ ಪ್ರಯಾಣದಲ್ಲಿ ಎಲ್ಲರಿಗೂ ಇಂತಹ ಅನುಭವ ಅಗುತ್ತಲೇ ಇರುತ್ತವೆ. ಆದರೂ ಇದನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಎಲ್ಲಿಯವರಿಗೆ ಕೊಂಡು ಓದುವವರು ಇರುತ್ತಾರೊ ಅಲ್ಲಿಯವರಿಗೆ ಇಂತಹ ಪೇಪರಿನವರು ಇರುತ್ತಾರೆ. ಅದಕ್ಕೆ ಇತ್ತೀಚೆಗೆ ನಾನು ಇವರಿಂದ ತಪ್ಪಿಸಿಕೊಳ್ಳಲು ಒಂದು ಮಾರ್ಗ ಕಂಡುಕೊಂಡಿದ್ದೇನೆ. ಬೆಂಗಳೂರಿನಂತಹ ಮೆಟ್ರೋ ಪಾಲಿಟಿನ್ ನಗರಕ್ಕೆ ಹೋಗುತ್ತಿದ್ದಲ್ಲಿ ಕನ್ನಡ ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಹಳ್ಳಿಗಳಿಗೆ ಪ್ರಯಾಣಿಸುವಾಗ ಆಂಗ್ಲ ಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತೇನೆ. ಯಾಕೆಂದರೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಲ್ಲಿ ನಮಗೆ ಕನ್ನಡಿಗರಿಗಿಂತ ಇತರೆ ಭಾಷೆಯ ಜನರೇ ಹೆಚ್ಚಾಗಿ ಸಿಗುತ್ತಾರೆ. ಅವರು ಕನ್ನಡ ಪತ್ರಿಕೆ ತೆಗೆದುಕೊಳ್ಳಲಾರರು. ಹಳ್ಳಿಗಳಲ್ಲಿ ಆಂಗ್ಲ ಪತ್ರಿಕೆ ಓದುವವರು ಕಡಿಮೆ ಇರುವದರಿಂದ ನಮ್ಮ ಪತ್ರಿಕೆಗಳು ನಮ್ಮಲ್ಲಿಯೆ ಸುರಕ್ಷಿತವಾಗಿ ಇರುತ್ತವೆ ಎಂಬ ನಂಬಿಕೆ. ಇದರಿಂದ ಪೇಪರಿನವರ ಹಾವಳಿಯನ್ನು ಸ್ವಲ್ಪಾದರೂ ತಗ್ಗಿಸಬಹುದೆಂದು ನನ್ನ ಭಾವನೆ.
ಈ ಪೇಪರಿನವರ ಬಗ್ಗೆ ಬರೆಯುತ್ತಾ ಹೋದರೆ ರಿಮ್ ಗಟ್ಟಲೆ ಹಾಳೆಗಳಿದ್ದರೂ ಸಾಲದು. ಏಕೆಂದರೆ, ಅಂತಹ ವಿರಾಡ್ರೂಪ ಅವರದು. ಆದುದರಿಂದ ಅವರ ಪುರಾಣವು ಇಲ್ಲಿಗೆ ಪರಿಸಮಾಪ್ತಿಯು.