ಮೃಗಶಿರ ಮಳೆ ಮುಗಿದ ಮೇಲೆ ಆರಿದ್ರಮಳೆ ಶುರುವಾಗುತ್ತದೆ,ಇದು ಗುಡುಗು ಮಿಂಚು,ಸಿಡಿಲು ಯಾವುದನ್ನು ಮಾಡದೆ ಸಲೀಶಾಗಿ ಬಂದು ಮಳೆ ಹುಯ್ದು ಹೋಗುತ್ತದೆ. ನಮ್ಮ ಮನೆಯಲ್ಲಿ ಅಜ್ಜ ಗದ್ದೆಗೆ ಹೆಸರು,ಉದ್ದು,ಕಾರಮಣಿಕಾಳು,ಎಳ್ಳು,ಕೊತ್ತಂಬರಿ,ಕಡ್ಲೆ ಮುಂತಾದ ಕಾಳುಗಿಡಗಳು ಮೊಗ್ಗಾಗಿ ಹೂಬಿಡುವ ಸಮಯವಿದು ಇದರೊಟ್ಟಿಗೆ ಬತ್ತದ ವಟ್ಲು ಹಾಕೋಕೆ ಬೆಳ್ಗೆನೆ ಎಬ್ಬಿಸಿ ನನ್ನನ್ನು ಕರೆದೊಯ್ದ ಅಜ್ಜ!
ಆಗ ತುಂಟಾಟದ ಮಲ್ಲನಾಗಿದ್ದೆ, ದಾರಿಯಲ್ಲಿ ಏನೇ ಸಿಕ್ಕರೆ ಕಾಲಿನಲ್ಲಿ ಜಾಡಿಸಿ ಬಹುದೂರ ಒದಿಯುವುದು, ನೀರು ಸಿಕ್ಕರೆ ಅದರಲ್ಲಿಯೆ ಬಿದ್ದು ಒದ್ದಾಡಿ ನೆಗಡಿಯೋ ಜ್ವರವೋ ಬಂದು ಬಿಸಿಬಿಸಿ ರಾಗಿಮುದ್ದೆಯ ಜೊತೆ ಹುರುಳುಕಾಳು ಉಪ್ಸಾರು ಮಾಡ್ಸಿ ತಿಂದು ಏಳೆಂಟು ಕಂಬಳಿಗಳೊದ್ದು ಮಲಗಿವುದು. ಈ ಮಳೆಗಾಲದಲ್ಲಿ ಏನೇನು ಮಾಡಬಾರದೋ ಅದೆಲ್ಲ ಮಾಡುತಿದ್ದೆ, ಆಷಾಢದ ಗಾಳಿಯ ಜೊತೆಯ ಕುಸ್ತಿ ಮಸ್ತಿಯ ಮಾಡಿ ಅದರೊಂದಿಗೆ ಸೋಲದೆ ‘ ಬಾ ಅದೆಷ್ಟು ಸುಂಟರಗಾಳಿ ತರ್ತೀಯಾ ತಾ , ನಿನ್ ಸೊಂಟ ಮುರಿತೀನಿ ಗಾಳಿಯೇ’ ಎಂದೆಲ್ಲ ಎತ್ತರದೆತ್ತರದಿ ಸುತ್ತುವ ಸುಂಟರಗಾಳಿಯ ಮಧ್ಯೆ ಹೋಗಿ ಕುಣಿಯುತಿದ್ದೆ.
ಅಜ್ಜಿ ಈ ಸುಂಟರಗಾಳಿ ಬಂದಾಗ ‘ ಉಗಿಯೋ ಅದರ ಮಕೆ’ ಅನ್ನುತಿದ್ದಳು, ಅವಳು ಕೂಡಾ ‘ ಥೂ , ಥೂ ನಿನ್ ಮನೆ ಹಾಳಾಗ’ ಎಂದೆಲ್ಲ ಬೈದಾಗ ಕಾಕತಾಳೀಯದಂತೆ ಸುಂಟರಗಾಳಿ ತಣ್ಣಾಗಾಗುತಿತ್ತು. ಒಮ್ಮೊಮ್ಮೆ ಅಲ್ಲಲ್ಲಿ ಬಿದ್ದಿರುವ ಒಣಗಿದ ಲಾಂಟನಗಿಡವನ್ನು ಹಿಡಿದು ಆ ಸುಂಟರಗಾಳಿಯೆ ಬಡಿಯುವುದನ್ನು ನಮ್ಮೂರಿನ ಜನರು ಹಬ್ಬದಂತೆ ಕುಣಿದು ಮಾಡುತಿದ್ದರು. ರಾಶಿಗಟ್ಟಲೆ ಆಲದಮರದ ಎಲೆಗಳು,ಬೇವಿನಮರದ ತರಗು,ಹೂ ಹಣ್ಣು ಬೀಜಗಳ ಪಸರಣ ಮಾಡುವುದೆ ಈ ಸುಂಟರಗಾಳಿಯ ಕೆಲಸವಾಗಿತ್ತೋ ಏನೋ ಆದರೆ ಮಣ್ಣಿನ ಮೆಲ್ಭಾಗವನ್ನು ಹೊಗೆಯಂತೆ ಕೆಂಪನೆ ಗೋಧೂಳಿಯಂತೆ ವೃತ್ತಾಕಾರವಾಗಿ ಸುತ್ತಿ ಸುತ್ತಿ ಅವರ ಹೊಲದಿಂದ ಇವರ ಹೊಲಕ್ಕೆ ಇವರ ಹೊಲದಿಂದ ಅವರ ಹೊಲಕ್ಕೆ ಮಣ್ಣಿನ ಕಣಗಳ ಬದಲಾಯಿಸುತಿತ್ತು.
ನಮ್ಮ ಹೊಲದಲ್ಲಿ ಏನಾದರೂ ಸುಂಟರಗಾಳಿ ಬಂದರೆ ಅಜ್ಜನಿಗೆ ವಿಪರೀತ ಕೋಪ ಬಂದು ಚಡ್ಡಿಯುದುರಿ ಹೋದರು ಪರವಾಗಿಲ್ಲ ಆದರೆ ಈ ಸುಂಟರಗಾಳಿಯ ಮೂಗು ಮುರಿಯಬೇಕೆಂಬ ಹರಸಹಾಸ ಪಟ್ಟು ಅದಕ್ಕೆ ಲಾಂಟನಗಿಡದಿಂದ ಬಡಿದು ಹಿಡಿದು ಸುಮ್ಮನಾಗಿಸುತ್ತಿದ್ದರು. ಬೇಲಿ ಕಟ್ಟಲು ಬಿದಿರಿನ ಮುಳ್ಳುಗಳನ್ನು ತಂದು ಹಾಕಿದಾಗ,ಸೌದೆ, ಗೊಬ್ಬರಗಳ ಗುಡ್ಡೆಗಳ ಸುರಿದಾಗ ಈ ಸುಂಟರಗಾಳಿ ಬಂದು ಸುಯ್ಯನೇ ಎತ್ತಿ ಕೃಷ್ಣ ಗೋವರ್ಧನ ಗಿರಿ ಎತ್ತಿ ಹಿಡಿದಂತೆ ಸೌದೆ,ಗೊಬ್ಬರ,ತರಗೆಲೆಗಳ ಆಕಾಸ ಮಾರ್ಗಕ್ಕೆ ತಲುಪಿಸುವಂತೆ ಗಿರಗಿರನೆ ತಿರುಗಿಸಿ ಸುಮಾರು ಐದಾರು ಕಿಮೀವರೆಗೂ ಬೀಸಾಕುತಿತ್ತು.
ಒಂದು ದಿನ ನಾನು ಅಜ್ಜ ,ಅಜ್ಜನ ತಮ್ಮ ಎಲ್ಲರು ಅತ್ತಿಹಣ್ಣನ್ನು ತಿನ್ನುತಿದ್ದೆವು, ಮರಕ್ಕೆ ಕೋತಿಯಂತೆ ಹತ್ತಿ ‘ ಅಜ್ಜ ಈ ಹಣ್ಣು ಕೀಳಾ? ಆ ಹಣ್ಣು ಕೀಳಾ ? ಆ ಕೊಂಬೆ ಹತ್ರ ಹೋಗ್ಲ ? ಎಂದೆಲ್ಲ ಕೋತಿಯಂತೆ ಜಿಗ್ಗಿದು ಎಲ್ಲ ಕಾಯಿ,ಚೋಟುಗಳ ಉದುರಿಸಿದಾಗ ‘ ಥೂ ಮುಂಡೆಮಗ್ನೆ ಇಳಿಯೋ ಕೆಳಗೆ ಎಲ್ಲ ಹಾಳು ಮಾಡ್ತೀಯಾ, ಒಂದೆ ದಿನಕ್ಕೆ ಹಬ್ಬ ನಿಂಗೆ , ಪ್ರಾಣಿ ಪಕ್ಷಿ ತಿಂದು ನೀರು ಕುಡೀಲಿ ‘ ಎಂದು ಬೈಯುತಿದ್ದ! ಕೃತಿಕೆ,ರೋಹಿಣಿ,ಮೃಗಶಿರ ಮಳೆಯಿಂದ ಕೆರೆಕಟ್ಟೆಗಳು ತುಂಬಿರುತಿದ್ದವು. ಎಲ್ಲ ಪ್ರಾಣಿ ಪಕ್ಷಿಗಳು ಮಾರ್ನಮಿ ಹಬ್ಬದಂತೆ ಕುಣಿಯುತಿದ್ದವು,ಕೆಲವೂ ಪಕ್ಷಿಗಳಂತೂ ಸಂಗೀತದ ಕಚೇರಿ ಮಾಡುತಿದ್ದವು. ನರಿ,ತೋಳಗಳಂತೂ ಸರಿಯಾಗಿ ಬೆಳ್ಗೆ ಐದು ಗಂಟೆಗೆ ಅರಚುವುದನ್ನು ಅಭ್ಯಾಸ ಮಾಡಿಕೊಂಡಿದ್ದವು. ಈ ನರಿ ತೋಳಗಳು ನೇರಳೆಹಣ್ಣುಗಳ ತಿಂದು ಬೀಜದ ಸಮೇತ ಕಕ್ಕ ಮಾಡಿದಾಗ ತಾತ ನನ್ನನ್ನು ಕರೆದು ‘ ನೋಡ್ಲ ಮಗ ಈ ನರಿ ಸೂಳೆಮಗ್ನಂದು ಎಲ್ಲೋ ನೇರಳೆಹಣ್ಣು ತಿಂದು ಇಲ್ಲೇ ಕಕ್ಕ ಮಾಡದೆ ನೋಡು ಎಲ್ಲಾದರೂ ಮರ ಕಾಣ್ತದ ‘ ಎಂದ. ನನಗೂ ಕಕ್ಕ ಮಾಡಲು ಅವಸಾರವಾಗಿತ್ತು ಆದರೆ ಅಜ್ಜನ ಮುಂದೆ ಹೇಗೆ ಮಾಡುವುದು ಅದಕ್ಕೆ ಗಿಡಗಂಟಿಗಳ ಪೊದರೆಗೆ ಹೋದೆ ಸ್ವಲ್ಪ ವೊತ್ತು ಸುಮ್ಮನಿದ್ದವ ‘ ಲೋ ಎಲ್ಲಿ ಹೋದ್ಯೋ? ನಮ್ಮ ಹೊಲದಲ್ಲಿ ಕಕ್ಕ ಮಾಡಿದ್ರೆ ಬೇಡ ಅಂತದ? ಎಂತಾ ಹೇಡಿ ನನ್ ಮಕ್ಳ ನೀವು, ಮಾಡ್ರೋ ನಮ್ ಹೊಲಗದ್ದೆಯಲ್ಲಿಯೇ ಕಕ್ಕ ಉಚ್ಚೆ ಉಯ್ರೋ ‘ ಎಂದು ಸುಮಾರು ಗಂಟೆಗಟ್ಟಲೆ ಬೈಯುತ್ತಲೇ ಇದ್ದ.
ಅಜ್ಜ ಬೆಳ್ಗೆ ಆಗುತ್ತಲೆ ಕೊಟ್ಟಿಗೆಯಿಂದ ಸಗಣಿ ತುಂಬಿಕೊಂಡು ಅವನು ಕೂಡ ಸಗಣಿಯನ್ನು ನಮ್ಮ ಹೊಲದಲ್ಲಿ ಸುರಿದು ಬರುತಿದ್ದ. ನಮಗೂ ಅದೆ ಹೇಳುತಿದ್ದ ಆದರೆ ಅಜ್ಜಿ ಮತ್ತು ನಾನು ಇವನ ವಿರುದ್ಧ ಮಾಡುವುದೆ ಕೆಲಸವಾಗಿತ್ತು. ರಾಗಿ ಕೊಯ್ಯುವ ಸಮಯ ಬಂದಾಗ ಅಜ್ಜ ಸುರಿದ ಸಗಣಿಯಿಂದ ಸುಮಾರು ಒಂದು ಅಡಿ ರಾಗಿ ಪೈರು ದೊಡ್ಡದಾಗಿ ದೈತ್ಯನಾಗಿ ದಪ್ಪ ದಪ್ಪ ತೆನೆಗಳ ಬಿಟ್ಟು ಎಲ್ಲ ರಾಗಿ ಪೈರುಗಳಿಗಿಂತಲೂ ನಾನೇ ರಾಜನೆಂದು ಬಂದು ಹೋಗುವವರಿಗೆ ಹೇಳುವಂತೆ ತೋರುತಿತ್ತು. ಆದರೆ ಇದು ನಮ್ಮ ಮನೆಯವರಿಗೆಲ್ಲ ಗೊತ್ತಾಗಿ ಕೊಯ್ಲಿನ ಸಮಯದಲ್ಲಿ ಆ ಸುತ್ತಮುತ್ತದ ಗಿಡಗಳನ್ನು ಕೊಯ್ಯದೆ ನೀನು ಕೊಯ್ಯೋ ಕೊಯ್ಯೋ ಎಂದೆಲ್ಲ ಜಗಳವಾಡಿ ಅಜ್ಜನೆ ಬಂದು ಕೂಯ್ಯುವವರೆಗೂ ನಿಲ್ಲುತಿರಲಿಲ್ಲ. ಒಂದು ಮಂಕರಿಯ ಹಿಡಿದುಕೊಂಡು ಹಾದಿ ಬೀದಿಯಲ್ಲಿ ದನ,ಎಮ್ಮೆಗಳು ಸಗಣಿ ಹಾಕಿಹೋಗಿದ್ದರೂ ಕೂಡ ಬಿಡದೆ ಎತ್ತಿಕೊಂಡು ಬಂದು ನಮ್ಮ ಹೊಲಕ್ಕೆ ಹಾಕುತಿದ್ದ. ನಮ್ಮನ್ನು ಹೀಗೆ ಮಾಡಿ ಎಂದೆಲ್ಲ ಹೇಳಿದ್ದರೂ ನಾವು ಯಾರು ತಲೆಕೆಡಿಸಿಕೊಳ್ಳದೆ ಕೊಟ್ಟಿಗೆಯಲ್ಲಿ ಬಿದ್ದಿರುವ ಕಸವನ್ನೆ ಹಾಕುವುದೆ ಕಷ್ಟ ಇದರಲ್ಲಿ ಇದು ಬೇರೆ ಎಂದೆಲ್ಲ ಗೊಣಹಿಕೊಂಡು ಕೇಳಿಸಿಕೊಂಡರೂ ಕೇಳಿಸದಾಗೆ ಇದ್ದು ಬಿಡುತಿದ್ದೆವು!