ಕಣ್ಣಾ ಮುಚ್ಚೇ
ಕಾಡೇ ಗೂಡೇ
ಉದ್ದಿನ ಮೂಟೇ
ಹುರುಳಿ ಹೋಯ್ತು
ನಮ್ಮಯ ಹಕ್ಕಿಯ ಹಕ್ಕಿಯ
ನಿಮ್ಮಯ ಗೂಡಿಗೆ
ಬಿಟ್ಟೇ ಬಿಟ್ಟೇವು
ಮಕ್ಕಳು ಕಣ್ಣಮುಚಾಲೆ ಜನಪದ ಆಟದಲ್ಲಿ ಹಾಡುವ ಜನಪದ ಹಾಡು ಇದು. ಇದರಲ್ಲಿ ಅಡಗಿರುವ ಅರ್ಥ ಗಹನವಾದದ್ದು. ಕಣ್ಣು ಮುಚ್ಚಿದಾಗ ಕಾಡು ಗೂಡಾಗುತ್ತದೆ. ಆಗ ಉದ್ದಿನ ಮೂಟೆಯೆಂಬ ಈ ದೇವ ಉರುಳಿ ಬೀಳುತ್ತದೆ. ಅಲ್ಲಿನ ಪ್ರಾಣ ಪಕ್ಷಿ ಹಾರಿ ಹೋಗಿ ಪೂರ್ವ ಸೂರಿಗಳ ಗೂಡು ಸೇರುತ್ತದೆ. ಬಹುಶಃ ಇದು ಎಲ್ಲ ಜೀವರಿಗೂ ಅನ್ವಯಿಸುವ ಜಾನಪದ ವಿಜ್ಞಾನದ ಜೀವ ರಹಸ್ಯವಾಗಿ ಬಿಡುತ್ತದೆ.
ಕನ್ನಡದ ಮಹತ್ವದ ತೀಕ್ಷ್ಣ ಸಾಹಿತ್ಯ ವಿಮರ್ಶಕ ಕಿ.ರಂ. ನಾಗರಾಜು ಜೀವನ ಯಾತ್ರೆ ಮುಗಿಸುವ ಮುನ್ನ ಹೇಳಿದ ಮಾತು ” ಪ್ರಕೃತಿಯ ವಿವರಗಳಿರಲಿ, ಕಾಲದ ಕಲ್ಪನೆ ಇರಲಿ, ಮನುಷ್ಯನ ಮನಸ್ಸಿನ ಹಲವು ಸ್ತರಗಳಿರಲಿ, ಅಲ್ಲೆಲ್ಲ ಜೀವ ಚೈತನ್ಯದ ಸಾವೂ ಇದೆ. ಸಾವು ಎಂದರೆ ಮರೆವು ಎಂದರ್ಥ. ಚೈತನ್ಯ ಹಾಗೂ ಆ ಚೈತನ್ಯದ ಇಲ್ಲವಾಗುವಿಕೆ. ಮಹತ್ವದ ಕವಿಗಳು ಭಾಷೆಯ ಒಂದು ಮುಕ್ತ ವಲಯವನ್ನು ಆವರಿಸುತ್ತಾರೆ. ಅರ್ಥಕ್ಕೆ ಬದ್ಧವಾದ ಶಬ್ಧಗಳನ್ನು ಅವರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅರ್ಥಕ್ಕಿಂತ ಭಿನ್ನವಾದ ಒಂದು ಅರ್ಥವಲಯವನ್ನು , ಮುಕ್ತಾರ್ಥ ವಲಯವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ” ( ಹೌದು ಎಲ್ಲರೂ ಅವರವರ ಮುಕ್ತಾರ್ಥ ವಲಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.) ಈ ಆಕೃತಿಮಾ ವಾಕ್ಯಗಳನ್ನು ಹೇಳಿದ ಕೆಲವೇ ಗಂಟೆಗಳಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಕಾವ್ಯವನ್ನು ಥೆರಪಿ ಎಂದೇ ಭಾವಿಸಿಕೊಂಡ ಕಿ.ರಂ.ನಾಗರಾಜು ಪೂರ್ವಸೂರಿಗಳ ಅನುಸಂಧಾನಕ್ಕೆ ಹೊರಟರು. ಅಲ್ಲಮಪ್ರಭು , ಮಂಟೇಸ್ವಾಮಿ, ಕುವೆಂಪು, ಬೇಂದ್ರೆ, ಅಡಿಗರಂಥ ಮಹತ್ವದ ಪೂರ್ವ ಸೂರಿಗಳನ್ನು ಅವರು ಮಾತಾನಾಡಿಸಿದ ಪರಿ ಅನಂತವಾದದ್ದು. ಮಂಟೇಸ್ವಾಮಿಯನ್ನು ಕಂಡರೆ ಬಹಳ ಪ್ರೀತಿ. ಅವರು ಬರೆದದ್ದು ಕಡಿಮೆ. ಬರೆಸಿದ್ದು ಜಾಸ್ತಿ. ಅಸಂಖ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಮೇಸ್ಟ್ರು ಮುಂದಕ್ಕೆ ಮಾರ್ಗತೋರಿಸಿದ ಮಾರ್ಗದಾತ. ಕಾವ್ಯವೆಂದರೇನು ? ಅದರ ಅನುಭವ ಎಂತಹದು, ಅನುಭವ ಕಟ್ಟಿಕೊಡುವ ಜೀವನ ಉದ್ದೇಶವೇನು ?ಸಂಸ್ಕೃತಿ ಸಮಾಜಗಳೆಂದರೆ ಯಾವುದು ? ಅವುಗಳ ಆಳ….ಅಗಲ…..ಎಂತಹದು ಎಂದು ಮಾತಾಡುವ ಕಾವ್ಯಮೀಮಾಂಸೆ ಸಾಹಿತ್ಯ ವಿಮರ್ಶೆಯ ಅಧಿಕೃತ ವಕ್ತಾರ ಕಿತ್ತಾನೆ ರಂಗಪ್ಪ ನಾಗರಾಜು. ಅವರು ತರಗತಿಯಲ್ಲಿ ಪಾಠ ಮಾಡುವಾಗ ಸೂಜಿಯ ಮೊನೆಯಷ್ಟು ಶಬ್ದವಿಲ್ಲದೆ ಕುಳಿತಿರಬೇಕು. ಅಪ್ಪಿತಪ್ಪಿ ಸದ್ದುಗದ್ದಲವಾದರೂ ಯಾವ ಪುರುಷಾರ್ಥಕ್ಕಾಗಿ ನಾನು ಪಾಠ ಮಾಡುವುದು ಎಂದು ಆವೇಶದಿಂದ ಆರ್ಭಟಿಸುತ್ತಿದ್ದರು. ಆವೇಶಕ್ಕೆ ಮನೋವೈಜ್ಞಾನಿಕ ಸಿದ್ದಾಂತದಲ್ಲಿ ಬೇರೆಯದೇ ಅರ್ಥವಿದೆ. ಗ್ರಾಮ ದೇವತೆಗಳು ಮೈಮೇಲೆ ಆವೇಶವಾದಾಗ ಮಾತಾಡುವ ಪರಿಯಂತೆ ಉಳಿದ ಸಂದರ್ಭದಲ್ಲಿ ಇರುವುದಿಲ್ಲ. ಹೇಳಿಕೆ ಕೇಳಿಕೆ ಗುರಿ ಭವಿತವ್ಯ ಹಾಡು ಕುಣಿತ ಆ ವೈಬ್ರೆಷಿನ್ ಥ್ರಿಲ್ ಬೇರೆಯದೆ ಅನುಭವ ಲೋಕ. ಅಂಥ ಅನುಭವ ಲೋಕದಲ್ಲಿ ಬಾದಾಮಿ ಶಾಸನದಿಂದ ಹಿಡಿದು ಕವಿರಾಜಮಾರ್ಗದಿಂದ ಹಿಡಿದು ಇಂದಿನ ಪ್ರಚಲಿತ ಸಾಹಿತ್ಯ ಘಟನೆಗಳ ವರೆಗೂ ಸಾಣೆತೀಡಿದ ವಿಮರ್ಶೆ ಅವರಲ್ಲಿ ಅವರ ಮೌಖಿಕ ಸಂವಹನೆಯಲ್ಲಿ ಆವೇಶದಿಂದ ರವಾನೆಯಾಗಿ ಪೋನಿಮಾಗಳ ಮೂಲಕ ಟೆಲಿಪತಿಯಾಗಿ ಗುರಿಹೇಳುವಂತೆ ಮೂಡಿಬರುತ್ತಿತ್ತು. ಆ ವಿಮರ್ಶೆಯ ಲೋಕ ವಿಶ್ವಮುಖವಾದ ಸಂಚಾರ ಮಾಡಿ ತುಲನೆಗಳ ತೌಲನ ಕ್ರಮ ವಿನ್ಯಾಸ ರಚನಾತ್ಮಕ ರೂಪುರೇಷೆಯಲ್ಲಿ ಕೇಳುಗರ ಅಥವಾ ಶೋತೃಗಳ ಸಹೃದಯರ ಮನಸುಗಳನ್ನು ಜ್ಞಾನದ ಕಡೆಗೆ ವಾಲಿಸುತಿತ್ತು. ಸಾಹಿತ್ಯ ಮತ್ತು ವಿಚಾರ ಜಗತ್ತಿನಲ್ಲಿ ಆಫೀಮಿನ ಮಾದಕತೆಯ ಗುಂಗು ಹಿಡಿದಂತೆ ವರ್ತಿಸುವ ನಮಗೆ ಅನೇಕ ಜ್ಞಾನಶಿಸ್ತುಗಳ ಏಕಮಂಡಳ ಪಾಠ ಕಾವ್ಯದಿಂದ ಕೇಳಿದ ಅನುಭವವಾಗುತ್ತಿತ್ತು. ಜೀವನವನ್ನು ಯಾರು ಪ್ರೀತಿಸುತ್ತಾರೋ ಅವರು ಅದರ ಸೂಕ್ಷ್ಮಾತಿಸೂಕ್ಷ್ಮ ಅಣುಗಳನ್ನು ಪರಿಶೀಲಿಸುತ್ತಾರೆ. ಪರೀಶೀಲಿಸುವ ಕ್ರಿಯೆ ಕಾವ್ಯ ಮತ್ತು ಬದುಕನ್ನು ಹೊಸೆಯುತ್ತದೆ. ಆ ಬದುಕನ್ನು ಎದುರುಗೊಳ್ಳುವ ಕ್ರಿಯೆ ಸಮುದಾಯದಿಂದ ಬಂದಿರುತ್ತದೆ. ಕಾವ್ಯ ಸಂಸ್ಕೃತಿಯು ಇದಕ್ಕೆ ಹೊರತಲ್ಲ. ಆ ಕಾವ್ಯವು ಈ ವಾಸ್ತವದ ಬದುಕಿನಿಂದಲೇ ಹುಟ್ಟಿದ್ದು. ಮೂರ್ತ ಅಮೂರ್ತ ಕಲ್ಪನೆಗಳು ಅದರಲ್ಲಿ ಅಡಗಿರುತ್ತವೆ. ಬದುಕಿನ ಅಸ್ಥಿತ್ವವೇ ಸಂಘರ್ಷದಿಂದ ವೈರುಧ್ಯಗಳಿಂದ ಕ್ಷುದ್ರತೆ ಮೌಢ್ಯಗಳಿಂದ ತುಂಬಿರುತ್ತದೆ. ಅದನ್ನು ವೈಜ್ಞಾನಿಕ ತಳಹದಿಯ ಸೌಂದರ್ಯ ಸಮೀಕ್ಷೆಯಿಂದಲೂ ಕಠೋರ ವಸ್ತಾವ ವಿಪರ್ಯಾಸ ದರ್ಶನದಿಂದಲೂ ನೋಡಿದ್ದ ಮೇಷ್ಟ್ರು, ಸಪ್ತಸಾಗರದಾಚೆ ಬಂಗಾರನೀರ ಕಡಲನ್ನು ವರ್ಣಿಸಬಲ್ಲರು ವಿಮರ್ಶಿಸಬಲ್ಲರು. ಇಷ್ಟೇ ಸಹಜವಾಗಿ ಕಲಾಸಿಪಾಳ್ಯದ ಕೂಲಿಕಾರ್ಮಿಕರ ಬದುಕನ್ನು ವಿವರಿಸಬಲ್ಲರು. ಬದುಕಿನ ಸಮಷ್ಠಿ ಒಳಗೊಂಡ ವ್ಯಷ್ಠಿ ಅಭಿರುಚಿ ವಿಮರ್ಶೆಯ ನೆಲೆಬೆಲೆ ಮೌಲ್ಯಮಾಪನ ಅನುಸಂಧಾನ ಆರೈಚಿ ಇವರದಾಗಿತ್ತು. ಅವರು ಹೇಳಿದ್ದನ್ನು ಬರೆದುಕೊಂಡರೆ ಒಂದು ಥೀಸಿಸ್ಸ್. ಅಷ್ಟು ಪ್ರಖರ ಸಾಹಿತ್ಯದ ವಿಮರ್ಶೆ ಕ್ವಾಚಿತ್ತಾಗಿ ಹಿಡಿಹಿಡಿಯಾಗಿ ಕೂಡಿರುತ್ತಿತ್ತು ಎಂದರೇ ಬಹುಶಃ ತಪ್ಪಾಗಲಾರದೂ. ಕಾವ್ಯವೆಂದರೇ ಅರ್ಥವಿಲ್ಲದ್ದು ಮತ್ತೇ ಹಲವು ಅರ್ಥಗಳನ್ನು ತನ್ನ ಗರ್ಭದಲ್ಲಿ ಒಳಗೊಂಡಿದ್ದು ಆಗಿರುತ್ತದೆ ಎನ್ನುವ ಇವರ ಮಾತು ಗಂಭೀರ ಚಿಂತನೆಯಿಂದ ಕೂಡಿರುವುದಾಗಿದೆ. ಆ ಟೆಕ್ಟ್ಸ್ ಕಂಟೆಟ್ ಗಮನಿಸಿದರೆ ಡಿಟೇಲ್ ಅಥವಾ ನಾನ್ ಡಿಟೇಲ್ ಟೆಕ್ಟ್ಸ್ ಎಂಬುದು ಮನವರಿಕೆಯಾಗುತ್ತದೆ. ಇದರಲ್ಲಿ ಕಾವ್ಯ ಮೈಯಿದೆ ಛಂದಸ್ಸಿದೆ ಸೌಂದರ್ಯವಿದೆ ಜೀವನಾನೂಭವವಿದೆ. ಹಲವು ಅಧ್ಯಯನ ಶಿಸ್ತುಗಳಿವೆ. ಕಾವ್ಯದ ಬಗ್ಗೆ ಮಾತಾಡುವುದೆಂದರೇ ಅದು ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ವಿವರಿಸಿಕೊಂಡಂತೆಯೆ ಸರಿ. ಆ ವಿವರಣೆಯಲ್ಲಿ ಎಲ್ಲ ಕಾಲ ದೇಶದ ಕವಿಗಳು ಒಂದು ಮಾನವ ನಾಗರಿಕ ಸಮಾಜದಲ್ಲಿ ಬದುಕಿರುತ್ತಾರೆ. ಅಲ್ಲಿನ ಜೀವನ ವಿಧಾನದಿಂದ ಸಮುದಾಯದ ಓತ್ತಾಸೆಗಳಿಂದ ಕಾವ್ಯ ಸೃಷ್ಟಿಯಾಗಿರುತ್ತದೆ. ಹಾಗಾಗಿ ಕವಿಯಾದವನು ಚಿರಂತನ ಜಿಜ್ಞಾಸು ಜೀವಿಯಾಗಿ ನೇತ್ಯಾತ್ಮಕ ನೆಲೆಯಲ್ಲಿ ತನ್ನ ಕೃತಿಯ ಮೂಲಕ ಬದುಕಿರುತ್ತಾನೆ. ಕಿ.ರಂ ಅಂಥವರ ಮಾತಿನಲ್ಲಿ ಅನುಸಂಧಾನ ಮಾಡಿ ಉಸಿರಾಡುತ್ತಾನೆ. ಎಲ್ಲಾ ವಿಮರ್ಶೆಯ ಜಾಡುಗಳನ್ನು ದಾಟಿ ಸಾಮಾಜಿಕ ಬದುಕಿನ ದೇಸಿ ವಿಮರ್ಶೆಗೆ ಹೊರಳುವ ಇವರು ಸಾರ್ವಜನಿಕ ವಿಮರ್ಶೆ ಎನ್ನುವ ವ್ಯಾಪ್ತಿ ಪರಿಕಲ್ಪನೆಯ ಇತ್ಯಾತ್ಮಕ ದೃಷ್ಟಿಕೋನದಿಂದ ಸಾಗುತ್ತಾರೆ. ಅಪ್ಪ ಅವರಪ್ಪ ಹಾಕಿದ ಆಲದಮರಕ್ಕೆ ಜೊತುಬೀಳುವ ಬಾವಲಿಯಾಗದೇ ಸಮಸ್ತ ಅಥವಾ ಸಮಷ್ಠಿ ಲೋಕ ಸುತ್ತುವ ಹಕ್ಕಿಯಾಗುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದೂ. ಇವರ ವಿಮರ್ಶೆ ಮುಗಿದೇ ಇಲ್ಲ ಎನ್ನುವಂತೆ, ನಿಶಬ್ದದಾಚೆಗೂ ಶಬ್ದ ಹುಡುಕಲು ಹೊರಟು ಹೋದರು.
ನಾಡವರೆಲ್ಲ ಸೇರಿ ವೈಕುಂಠ ಸಮಾರಾಧನೆ ಮಾಡಿದರು. ಭಜನೆ ಮಾಡಿದರು. ಅವರು ಬರಲಿಲ್ಲ. ಬಂದರೂ ಹೀಗೆ ನಮ್ಮ ಮುಂದೆ
ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮಜ್ಜ ನರಕುರಿಯ ಹಿಂಡುಗಳ
ಅರುಹೆಂಬ ನರಗುರಿಯು ತೆರೆಯೆಂಬ ಜಾವಲಿಯು
ಮರವೆಯಲಿ ಯಮನೆಂಬ ತೋಳ ತುಡುಕಿ
ಅರುಹಿನ ಮರೆಯಲ್ಲಿ ಕುರಿಯ ಮುರಿವುದ ಕಂಡು
ಅರಿತು ಅರಿಯದ ಹಾಗೆ ಇರುವ ನಮಜ್ಜ
ನಾವು ಕುರುಬರು
ಅಷ್ಟಮದ ಮತ್ಸರಗಳೆಂತೆಂಬ ಟಗರುಗಳು
ಸೃಷ್ಟಿಯೊಳು ಪರಮಾತ್ಮನೆಂಬ ಆಡು
ಜ್ಯೇಷ್ಠಕರು ಸಿದ್ಧಸಾಧ್ಯರು ಮುನಿಯ ಹೋತಗಳು
ಕಟ್ಟಿ ದೃಢಗೋಲಿಂದ ಕಾವ ನಮ್ಮಜ್ಜ
ನಾವು ಕುರುಬರು
ಹುಟ್ಟುವುದು ಮೊದಲಿಲ್ಲ ಸಾವುದಕೆ ಕಡೆಯಿಲ್ಲ
ಹುಟ್ಟು ಸಾವಿನ ಹೊಲಬ ಅಜ್ಜ ಬಲ್ಲ
ಅಷ್ಟು ನರಪ್ರಾಣಿಗಳು ನಮ್ಮ ಮನೆಯೊಳಗಿದ್ದು
ಹೊಟ್ಟೆಗೆ ಕೇಳುವವು ನಮ್ಮಜ್ಜನಲ್ಲಿ
ನಾವು ಕುರುಬರು
ವೇದಶಾಸ್ತ್ರ ಪುರಾಣ ಶ್ರುತಿ ತರ್ಕಮಹದಾದಿ
ಸಾಧನದ ಶ್ವಾನ ನಮ್ಮಜ್ಜನ ಹಿಂಡಿನೊಳು
ಭೇದಗೊಳ್ಳದೆ ಬೊಗಳಿ ಬಾಯಾರಿ ಕಾಲ್ಗೆಡಲು
ಅದರಿಸಿ ಅಂಬಲಿಯ ಎರೆವ ನಮ್ಮಜ್ಜ
ನಾವು ಕುರುಬರು
ಮೂರು ಲೋಕಕೆ ಗೌಡ ಸಂಗಾತಿ ಇಹರು ಮಂತ್ರಿ
ಮೂರು ಲೋಕದ ಜನರು ಭಜಿಸುತಿಹರು
ಮಾರಪಿತ ಕಾಗಿನೆಲೆಯಾದಿಕೇಶವನಂಘ್ರಿ
ವಾರಿಜವ ನೆರೆ ನಂಬದವನೆ ಕುರುಬ
ನಾವು ಕುರುಬರು
ಎಂತಹ ಅದ್ಭುತವಾದ ಭಾವಗೀತೆಯಿದು. ಕಿ.ರಂ ಅಂತವರು ಮಾತ್ರ ಬರೆಯಲು ಸಾಧ್ಯವಾದ ಕವಿತೆ ಇದು. ರಂಗಗೀತೆಯಿದು. ಪ್ರಾಚೀನದಿಂದ ಇಲ್ಲಿಯವರೆಗಿನ ನಾಗರಿಕ ಸಮುದಾಯಗಳ ವಸತಿನೆಲೆಯಲ್ಲಿ ಕುರುಬರ ಅಸ್ಮಿತೆ. ದಾವಿದನ ಸಂತಾನ. ರಾಜ್ಯ ಸಾಮ್ಯಾಜ್ಯಗಳುದಯ ಅಳಿವು ಚರಿತೆ, ಅಬ್ರಾಹಂನ ಕುರಿ ಸಮರ್ಪಣೆ ಭಕ್ತಿ ನಿಷ್ಠೆಗೆ ಜಯವಾಗಲಿ. ಸಂಖ್ಯಾ , ಚತುರ್ವಿಶಂತಿ, ಪಂಚವಿಶಂತಿ ತತ್ವಗಳ ಜೀವವಿಕಾಸ ಪಂಚಭೂತ ಧಾತುಗಳ ವಿಪರ್ಯಾಸ, ಜೀವನ ಚಕ್ರ , ಸಕಲ ಶಾಸ್ತ್ರ , ಸಣ್ಣ ನಾಯಿಯು ಬಹುಮುಖ್ಯ ಜೀವವಾದ ಸಂಸ್ಕೃತಿ. ತಿಂಥಿಣಿಯಲ್ಲಿ ತಿಣುಕಿದನು ಫಣಿರಾಯ ಮಹಾಭಾರತದ ಅನೇಕ ಪಾಠಗಳಲ್ಲಿ ಮಹತ್ವದ ಕೋಳಿವಾಡದ ಕುಮಾರವ್ಯಾಸನ ಕನ್ನಡ ಕರ್ಣಾಟಕ ಭಾರತ ಕಥಾಮಂಜರಿ, ದಾಸಸಾಹಿತ್ಯದ ಮಹಾಮೇರು ಕನಕದಾಸ ಶ್ರೀನಿವಾಸನ ಕಾಗಿನೆಲೆ ಕೇಶವನಿಗೆ ಜಯವಾಗಲಿ. ವಿರಮಿಸುವ.