ಪ್ರಜ್ಞಾ ರವೀಶ್ ಅವರು ಬರೆದ ಲೇಖನ ‘ವಾರ್ತಾ ಮಾಧ್ಯಮಗಳು’

ಕಾಲ ಸರಿಯುತ್ತಾ ಹೋದಂತೆ ತಂತ್ರಜ್ಞಾನವು ಕೂಡ ಬದಲಾಗುತ್ತಾ ಹೋಗುತ್ತಿದೆ. ಅಂದಿನ ಕಾಲದಲ್ಲಿ ಟಿವಿ, ಫೋನ್, ವೃತ್ತ ಪತ್ರಿಕೆಗಳ ಮಾಧ್ಯಮಗಳು ಇಲ್ಲದೇ ಇದ್ದ ಕಾರಣ ಯಾವುದೇ ಸುದ್ದಿ ಸಮಾಚಾರಗಳು ತಿಳಿಯುತ್ತಿರಲಿಲ್ಲ. ಅಂದು ಕೂಡ ಈಗಿನಂತೆಯೇ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ನಡೆಯುತ್ತಿತ್ತಾದರೂ ಯಾವುದೇ ಸುದ್ದಿ ಮಾಧ್ಯಮಗಳು ಇಲ್ಲದೇ ಇದ್ದ ಕಾರಣ ಅದು ಬೆಳಕಿಗೆ ಬರುತ್ತಿರಲಿಲ್ಲ, ಅಪರಾಧಗಳು ಅಲ್ಲಿಯೇ ಮುಚ್ಚಿ ಹೋಗುತ್ತಿತ್ತು ಆದರೆ ಈಗ ಹಾಗಲ್ಲ ವಿಜ್ಞಾನ, ತಂತ್ರಜ್ಞಾನಗಳು ತುಂಬಾ ಮುಂದುವರೆದಿವೆ ಹಾಗಾಗಿ ಸಮಾಜಕ್ಕೆ ವಿಷಯಗಳನ್ನು ಬಿತ್ತರಿಸಲು ಟಿವಿ, ಫೋನ್, ವೃತ್ತ ಪತ್ರಿಕೆಗಳು ಮುಂತಾದ ಮಾಧ್ಯಮಗಳು ಇರುವ ಕಾರಣ ಸುದ್ದಿ ಮಾಧ್ಯಮಗಳಿಗೆ ಯಾವುದೇ ಬರವಿಲ್ಲ ಎನ್ನಬಹುದು.

ಅಂದು ವಿದ್ಯುತ್ ಬಂದ ಕಾಲದಲ್ಲಿ ಶ್ರೀಮಂತರು ಎಂದೆನಿಸಿಕೊಂಡವರ ಮನೆಯಲ್ಲಿ ಟಿವಿಗಳು ಇದ್ದವು. ಆ ಟಿವಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ದಿನಕ್ಕೆ ಎರಡು ಬಾರಿ ಪ್ರಸಾರವಾಗುತ್ತಿದ್ದ ವಾರ್ತೆಯನ್ನು ನೋಡಲು ಅಕ್ಕ ಪಕ್ಕದ ಮನೆಯವರು ಕೂಡ ವಾರ್ತಾ ಸಮಯಕ್ಕೆ ಸರಿಯಾಗಿ ಬಂದು ಏನೂ ಸದ್ದು ಮಾಡದೇ ಕುತೂಹಲದಿಂದ ವಾರ್ತೆಯನ್ನು ಆಲಿಸುತ್ತಿದ್ದರು. ಅಂದು ಬ್ಲಾಕ್ ಆಂಡ್ ವೈಟ್ ಟಿವಿಯಲ್ಲಿ ಬರುತ್ತಿದ್ದ ಡಿಡಿ ವಾಹಿನಿ ದಿನಕ್ಕೆ ಎರಡು ಬಾರಿಯಂತೆ ಪ್ರಸಾರ ಮಾಡುತ್ತಿದ್ದ ವಾರ್ತೆಯನ್ನು ಎಲ್ಲರೂ ಒಟ್ಟಾಗಿ ಸೇರಿ ಕೇಳುವುದೆಂದರೆ ಬಲು ಖುಷಿ.

ಅಂದು ಬರುತ್ತಿದ್ದ ಹಲವಾರು ಸಮಾಚಾರ ಪತ್ರಿಕೆಗಳನ್ನು ಓದುದುವುದು ಕೂಡ ರೂಢಿಯಾಗಿತ್ತು ಆದರೆ ಕಾಲ ಬದಲಾಗುತ್ತಾ ಹೋದಂತೆ ಪ್ರತಿ ಮನೆಯಲ್ಲಿಯೂ ವಿದ್ಯುತ್, ಟಿವಿ, ಫೋನ್ ಗಳು ನಿಧಾನವಾಗಿ ಬರಲು ಆರಂಭಿಸಿದವು ಅಂತೆಯೇ ಸುದ್ದಿ ವಾಹಿನಿಗಳಲ್ಲಿಯೂ ಕೂಡ ಬದಲಾವಣೆ ಕಾಣಲು ಶುರುವಾಯಿತು. ಬ್ಲಾಕ್ ಅಂಡ್ ವೈಟ್ ಇದ್ದ ಟಿವಿ ಕಲರ್ ಟಿವಿ ಯಾಗಿ ಮಾರ್ಪಟ್ಟು ಈಗ ವಿವಿಧ ವಿನ್ಯಾಸಗಳ ಟಿವಿಯು ಲಭ್ಯವಿದೆ ಅಂತೆಯೇ ಫೋನ್ ಹಾಗೂ ವೃತ್ತ ಪತ್ರಿಕೆಗಳಲ್ಲಿಯೂ ಕೂಡ ತುಂಬಾ ಬದಲಾವಣೆಗಳಾಗಿವೆ.

ಈಗ ಪ್ರತಿ ಮನೆಯಲ್ಲಿಯೂ ಟಿವಿ, ಫೋನ್ ಗಳು ಇವೆ ಹಾಗಾಗಿ ಅವುಗಳಲ್ಲಿಯೇ ಬೇಕಾದಷ್ಟು ವಾರ್ತೆಗಳು ಲಭ್ಯವಿದೆ ಹಾಗಾಗಿ ವೃತ್ತ ಪತ್ರಿಕೆಗಳನ್ನು ಓದುವವರ ಸಂಖ್ಯೆಯು ಕಡಿಮೆಯಾಗತೊಡಗಿರುವುದು ವಿಪರ್ಯಾಸ!!

ಈಗ ಟಿವಿಯಲ್ಲಿ ಹಲವಾರು ಖಾಸಗಿ ಸುದ್ದಿ ವಾಹಿನಿಗಳು ಪ್ರಸಾರವಾಗುತ್ತಿವೆಯಾದರೂ ಕೂಡ ಎಲ್ಲದರಲ್ಲಿಯೂ ಹೇಳಿದ ವಿಷಯಗಳನ್ನೇ ತಿರುಚಿ ಮುರುಚಿ ಪದೇ ಪದೇ ಹೇಳುವುದನ್ನು ಕೇಳಿದರೆ ಸುದ್ದಿ ವಾಹಿನಿಗಳನ್ನು ನೋಡುವುದೇ ಬೇಡ ಎಂಬಷ್ಟು ಶೋಚನೀಯ ಪರಿಸ್ಥಿತಿ ಬಂದೊದಗಿದೆ. ಪ್ರಪಂಚದಲ್ಲಿ ಬೇಕಾದಷ್ಟು ಒಳ್ಳೆಯ ಸುದ್ದಿಗಳು ಇದ್ದರೂ ಕೂಡ ಈ ಸುದ್ದಿ ವಾಹಿನಿಗಳು ರಾಜಕೀಯ ಸುದ್ದಿಗಳನ್ನೋ ಅಥವಾ ಇನ್ಯಾವುದೋ ಇಲ್ಲ ಸಲ್ಲದ ಸುದ್ದಿಗಳನ್ನು ಹಿಡಿದುಕೊಂಡು ಅದೇ ವಿಷಯದ ಬಗ್ಗೆ ದಿನದ 24 ಘಂಟೆಗಳು ಪ್ರಸಾರ ಮಾಡುತ್ತಿರುವುದನ್ನು ಕೇಳಿದಾಗ ನಿಜವಾಗಿಯೂ ಕೇಳಲಾರದೇ ಕಿವಿ ಮುಚ್ಚಿಕೊಂಡು ಕೂರಬೇಕಾದ ಅನಿವಾರ್ಯತೆ ಬಂದೊದಗುತ್ತದೆ!!

ಈ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕೆಲವೊಂದು ಅಕ್ಷರ ಲೋಪಗಳು, ಉಚ್ಚಾರ ದೋಷಗಳನ್ನು ಕಂಡಾಗ ಅಯ್ಯೋ ಎಂದು ಅನಿಸುವುದಂತೂ ಸುಳ್ಳಲ್ಲ. ದಿನದ 24 ಘಂಟೆಯೂ ಹೇಳಿದ ವಿಷಯಗಳನ್ನೇ ತಿರುಚಿ ಮುರುಚಿ ಹೇಳಿಕೊಂಡು, ಅವರು ಬಿತ್ತರಿಸಿದ ಸುದ್ದಿಗಳಲ್ಲಿ ಎಷ್ಟು ನಿಖರತೆ ಇರುವುದೋ ಅವರಿಗೇ ಸ್ಪಷ್ಟವಿದೆಯೋ ಇಲ್ಲವೋ ಇಂತಹ ಸುದ್ದಿ ವಾಹಿನಿಗಳನ್ನು ನೋಡುವುದಕ್ಕಿಂತ ದಿನಕ್ಕೆ ಎರಡು ಬಾರಿ ಪ್ರಸಾರವಾಗುವ, ವಿಶ್ವದಲ್ಲಿನ ಉತ್ತಮ ಮಾಹಿತಿಗಳನ್ನು ನೀಡುವ ಡಿಡಿ ಚಂದನವನ್ನು ನೋಡಿದರೆ ನಮಗೆ ಸಾಕಷ್ಟು ಉಪಯುಕ್ತ ಮಾಹಿತಿಗಳು ದೊರೆಯುತ್ತವೆ.

ಅಂತೆಯೇ ಫೋನ್ ಗಳಲ್ಲಿ ಕೂಡ ಇಂಟರ್ನೆಟ್ ಎಂಬ ಪ್ರಪಂಚದೊಳಗೆ ಹಲವಾರು ವಿಷಯಗಳು ದೊರೆಯುತ್ತವೆ ಹಾಗಾಗಿ ಟಿವಿಯಾಗಲಿ ಅಥವಾ ಫೋನ್ ಆಗಲಿ ನಮಗೆ ಬೇಕಾದ ಒಳ್ಳೆಯ ಮಾಹಿತಿಗಳನ್ನು ಮಾತ್ರ ತಿಳಿದುಕೊಂಡು ಅದೆಷ್ಟೋ ಕೆಟ್ಟ ವಿಚಾರಗಳನ್ನು ಅಲ್ಲಿಯೇ ಬಿಟ್ಟು ಮುನ್ನಡೆದರೆ ನಮಗೇ ಒಳಿತು ಹಾಗೂ ಹೆಚ್ಚೆಚ್ಚು ಸಮಾಚಾರ ಪತ್ರಿಕೆಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಟಿವಿಯಾಗಲಿ, ಫೋನ್ ಆಗಲಿ ಅಥವಾ ಇನ್ಯಾವುದೇ ವಾರ್ತಾ ಮಾಧ್ಯಮಗಳೇ ಆಗಲಿ ಅವುಗಳಲ್ಲಿ ಪ್ರಸಾರವಾಗುವ ಮಾಹಿತಿಗಳ ಆಯ್ಕೆಯೂ ನಮ್ಮ ಕೈಯಲ್ಲಿಯೇ ಇದೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop