ಮಂಜುಳಾ ಜಿ ಎಸ್ ಪ್ರಸಾದ್ ಅವರು ಬರೆದ ಲೇಖನ ‘ಬದುಕಿನ ಕೊಳೆ’

ಬದುಕು ಒಬ್ಬರಿಗೆ ಒಂದೊಂದು ತರಹ. ಈ ಜಗದೊಳಗೆ ಎಷ್ಟು ಪ್ರಭೇದಗಳಿವೆಯೋ, ಆ ಪ್ರಭೇದಗಳಲ್ಲಿ ಎಷ್ಟು ವರ್ಗಗಳಿವೆಯೋ, ಆವರ್ಗಗಳಲ್ಲಿ ಎಷ್ಟು ಸಂಕುಲಗಳಿವೆಯೋ, ಆ ಸಂಕುಲಗಳಲ್ಲಿ ಎಷ್ಟು ಜೀವಿಗಳಿವೆಯೋ ಅಷ್ಟೂ ಜೀವಿಗಳಿಗೂ ಬದುಕು ಪ್ರತ್ಯೇಕವಾಗಿರುತ್ತದೆ ಎಂಬುದು ನಗ್ನ ಸತ್ಯ. ಇದು ಸೃಷ್ಟಿಯ ನಿಯಮ ಕೂಡ ಹೌದು!

ಉಳಿವಿಗಾಗಿ ಹೋರಾಡುವ ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಭಿನ್ನ ಶೈಲಿಯ ಬದುಕನ್ನು ಕಟ್ಟಿಕೊಂಡಿರುತ್ತದೆ. ಇದೇ ಹಾದಿಯಲ್ಲಿ ಸಾಗುವಾಗ ಕೆಲವು ಲೋಕದ ದೃಷ್ಟಿಯಲ್ಲಿ ಹೊಳೆಯುತ್ತವೆ ಮತ್ತು ಕೆಲವು ಲೋಕದ ಕೊಳೆಯಾಗಿ ನಾರುತ್ತವೆ. ಇಲ್ಲಿ ಮಾನವನ ಜೀವಿಗೆ ಮಾತ್ರ ಅಂಟುವ ಕೊಳೆಗಳು ಕೇವಲ ದೈಹಿಕವಲ್ಲ; ಮಾನಸಿಕವಾಗಿ ಎಂಬುದು ಗಮನಾರ್ಹ!!

ಅಂದಹಾಗೆ ಕೊಳೆ ಎಂದರೆ ಮಾಲಿನ್ಯಕಾರಕ ಎಂದರ್ಥ. ಅದು ವಸ್ತುಗತವೇ ಆಗಿರಲಿ ಅಥವಾ ವ್ಯಕ್ತಿಗತವೇ ಆಗಿರಲಿ ಹಾಳಾಗಿರುವ ಸ್ಥಿತಿಯ ದ್ಯೋತಕ…. ಕಳಂಕ! ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾನ್ಯವಾಗಿ ಮಾನವನ ಆಂತರಿಕ ಬದುಕಿಗೆ ಅಂಟುವ ಪ್ರಮುಖ ಕೊಳೆಗಳು ಅರಿಷಡ್ವರ್ಗಗಳು. ಮನುಷ್ಯನ ಮನಶ್ಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪವಾಗಿರುವ ಭಾವನೆಗಳನ್ನು ಶತ್ರುಗಳು (ಅರಿ) ಎಂದು ಬಗೆದು, ಅವುಗಳನ್ನು ಆರು ಗುಂಪಾಗಿ ವರ್ಗೀಕರಣ ಮಾಡುತ್ತಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಇವೇ ಆ ಅರಿಷಡ್ವರ್ಗಗಳು. ತಕ್ಕಮಟ್ಟಿಗೆ ಮನುಷ್ಯನೆಂದ ಮೇಲೆ ಕಿಂಚಿತ್ತಾದರೂ ಇಂತಹ ಕೊಳೆಗಳು ಇರುವುದು ಸೋಜಿಗವಲ್ಲ. ಆದರೆ ಇವೆಲ್ಲಾ ನಿಭಾಯಿಸುವ ಮನಸ್ಸಿನಲ್ಲಿ ಮಾತ್ರ ಪದೇ ಪದೇ ಇವೇ ಕಾಡುತ್ತಾ ನಕಾರಾತ್ಮಕ ಆಲೋಚನೆ ಎಂಬುದು ಮೂಡಿದರೆ ಅದುವೇ ನನ್ನ ಪ್ರಕಾರ ಬದುಕಿನ ಬಹುಮುಖ್ಯ ಕೊಳೆ!

ಏಕೆಂದರೆ ನಕಾರಾತ್ಮಕ ಯೋಚನೆಯಿಂದ ಸಕಾರಾತ್ಮಕ ಪರಿಹಾರ ಸಿಕ್ಕ ಯಾವುದೇ ಉದಾಹರಣೆ ಖಂಡಿತಾ ಸಿಗುವುದಿಲ್ಲ. ನಕಾರಾತ್ಮಕ ಯೋಚನೆ ಯಾವಾಗಲೂ ವಿನಾಶದ ಹಾದಿ. ಅವು ನಮ್ಮ ಮನಸ್ಸನ್ನು ಕೆಡಿಸುವ ಜೊತೆಗೆ, ದೈನಂದಿನ ಬದುಕಿನ ಮಧ್ಯೆ ನುಸುಳಿ, ಕೆಲಸಗಳಿಗೆ ಅಡಚಣೆ ತಂದು ನಿಧಾನವಾಗಿ ಬದುಕಿನ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ. ನಕಾರಾತ್ಮಕ ಯೋಚನೆಯಿಂದ ಸಿಗುವುದು ಬೇಜಾರು, ದುಃಖ, ನೋವು, ಸಂಕಟ, ಸೋಲು ಅಷ್ಟೇ…! ಕೆಲವೊಮ್ಮೆ ನಕಾರಾತ್ಮಕ ಯೋಚನೆಗಳು ಅತಿಯಾದಾಗ ಜನರು ಅದರಿಂದ ಹೊರ ಬರುವ ಹಾದಿ ತಪ್ಪಿಸಿಕೊಳ್ಳುತ್ತಾರೆ. ಅಲ್ಲಿಯೇ ಸಿಕ್ಕಿ ಒದ್ದಾಡುತ್ತಾರೆ. ಬಿಟ್ಟೆನೆಂದರೂ ಬಿಡದ ಮಾಯೆಯಾಗಿ ಅದು ಕಾಡುತ್ತದೆ. ಇದು ಖಂಡಿತವಾಗಿ ಅವರ ಬದುಕನ್ನು ಮಾಲಿನ್ಯ ಮಾಡುತ್ತದೆ.

ನಾವು ನಮ್ಮ ದಿನ ನಿತ್ಯ ಜೀವನಗಳಲ್ಲಿ ನಡೆಯುತ್ತಿರುವ ಕೋಲಾಹಲಕ್ಕಾಗಿ ಯಾರ ಮೇಲೆ ದೋಷವನ್ನು ಹೊರಿಸುವುದು ಎಂದು ಸಹಜವಾಗಿ ನೋಡುತ್ತಲಿರುತ್ತೇವೆ. ಇದು ಕೊಳಕು ಮನಸ್ಥಿತಿಯ ಒಂದು ಭಾಗ. ಕಾರಣ ಇತರರ ಮೇಲೆ ದೂಷಣೆಯನ್ನು ಹೊರಿಸಿದಾಗ ವಿಷಯಗಳನ್ನು ಸುಲಭವಾಗಿ ನಿಭಾಯಿಸಬಹುದು ಎನಿಸುತ್ತದೆ. ತಪ್ಪುಗಳನ್ನು ಕಂಡು ಹಿಡಿಯುವ, ಇತರರತ್ತ ಬೆಟ್ಟು ಮಾಡಿ ತೋರಿಸುವಂತಹ ನಕಾರಾತ್ಮಕ ಪ್ರವೃತ್ತಿಗಳಿಂದ ಹೊರಬರಲಾಗದೆ ಹೋಗುವುದೇ ವ್ಯಕ್ತಿತ್ವಕ್ಕಂಟುವ ಬದುಕಿನ ಕೊಳೆ!

ಇಲ್ಲಿ ನಾವು ಆಲೋಚಿಸುವ ರೀತಿಯು ಬಹು ಮುಖ್ಯ ಪಾತ್ರ ವಹಿಸುತ್ತದೆ. ಅದು ಧನಾತ್ಮಕವೋ ಅಥವಾ ಋಣಾತ್ಮಕವೋ ಎಂಬುದು ಆ ಕ್ಷಣಕ್ಕೆ ನಮಗೆ ಅರಿವಾಗದೆ ಹೋದರೂ, ಅದರ ಉದ್ದೇಶ ಮತ್ತು ಪ್ರತಿಫಲಗಳ ಫಲಿತ ಅದನ್ನು ಸಾಬೀತುಪಡಿಸುತ್ತದೆ. ಹಾಗೆಂದ ಮಾತ್ರಕ್ಕೆ ಆಲೋಚನೆ ಇಲ್ಲದೆ ಯಾವ ಜೀವನವೂ ಸಾಗುವುದಿಲ್ಲ… ಆದರೆ ವಿಪರೀತವಾಗಿ ಆಲೋಚಿಸುತಲಿದ್ದರೆ ನಮ್ಮ ಮನಸ್ಸಿನೊಳಗೆ ಏನೋ ಒಂದು ಕೊರೆಯುತ್ತಿದೆ ಎಂದರ್ಥ. ಆಗ ನಮ್ಮ ಅಹಿತವಾದ ಭಾವನೆಯನ್ನು ಗಮನಿಸಿ ಅದನ್ನು ನೇರವಾಗಿ ನಿಭಾಯಿಸಬೇಕು.

ಕಾಕತಾಳೀಯವೆಂದರೆ ಬುದ್ಧಿ ಜೀವಿಗಳು ಎನಿಸಿದ ನಮ್ಮ ತಲೆಯು ಸುಸ್ಪಷ್ಟವಾಗುವುದರಿಂದ ಎಲ್ಲವನ್ನೂ ಸರಿಯಾಗಿ ಆಯೋಜಿಸಬಹುದು; ಆ ಸಾಮರ್ಥ್ಯ ನಮಗಿದೆ. ಅದಕ್ಕಾಗಿ ನಾವು ಮೊದಲು ಯಾವುದಕ್ಕೆ ಆದ್ಯತೆ ನೀಡಬೇಕೆಂದು ತಿಳಿದುಕೊಳ್ಳಬೇಕು. ಸಮರ್ಪಕವಾಗಿ ವಿಷಯಗಳ ವಿಮರ್ಶೆಯನ್ನು ಮಾಡಬೇಕು. ಒಮ್ಮೆ ಸಮಸ್ಯೆಯನ್ನು ಗುರುತಿಸಿದ ನಂತರ ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅನಾವಶ್ಯಕವಾಗಿ ಅಸಂಬದ್ಧವಾದ, ನಕಾರಾತ್ಮಕ ಆಲೋಚನೆಗಳಲ್ಲಿ ತೇಲುವುದನ್ನು ತಡೆಯಬಹುದು. ಬದುಕಿನ ಕೊಳೆ ತೆಗೆಯಬಹುದು. ಇದಕ್ಕಾಗಿ ಧ್ಯಾನ ನಮಗೆ ಸಹಾಯ ಮಾಡುತ್ತದೆ. ಪ್ರಜ್ಞಾಪೂರ್ವಕವಾದ ಧ್ಯಾನವನ್ನು ಮಾಡಿದಾಗ ವಿಪರೀತವಾಗಿ ಆಲೋಚಿಸುವುದನ್ನು ಧ್ಯಾನವು ತಡೆಯುತ್ತದೆ. ಜಾಗೃತಿಯಿರುವ ಈ ಆಕಾಶದಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದುಹಾಕಬಹುದು ಮತ್ತು ಉನ್ನತವಾದ ಸತ್ಯಗಳನ್ನು ಅರಸಬಹುದು. ಉನ್ನತವಾದ ಆಲೋಚನೆಗಳ ಮೇಲೆ, ಕಾರ್ಯಗಳ ಮೇಲೆ ಗಮನವನ್ನಿಡಲು ಸಾಧ್ಯವಾಗಿಸಬಹುದು.

ಆದ್ದರಿಂದ ಬದುಕಿನ ಕೊಳೆ ತೆಗೆಯಲು ಮೊದಲು ನಕಾರಾತ್ಮಕ ಆಲೋಚನೆಗಳಿಂದ ದೂರವಾಗಿರಬೇಕು. ಖಂಡಿತವಾಗಿ ಇವುಗಳಿಂದ ಹೊರಬರಲು ಹತ್ತು ಹಲವು ಹಾದಿಗಳು ಇದ್ದೇ ಇರುತ್ತದೆ. ಹುಡುಕಿಕೊಳ್ಳುವ ಮನಸ್ಸು ಹಾಗೂ ಪ್ರಯತ್ನ ನಮ್ಮದಾಗಿರಬೇಕಷ್ಟೇ! ಒಮ್ಮೆ ಅದರಿಂದ ಹೊರಬಂದರೆ ಮತ್ತೆ ತಿರುಗಿ ನೋಡುವ ಪ್ರಶ್ನೆಯೇ ಇರುವುದಿಲ್ಲ ಜೊತೆಗೆ ಶುಭ್ರ ಬದುಕಿನ ಸುಂದರವಾದ ಮುಖ ಹಾಗೂ ಗೆಲುವಿನ ಮೆಟ್ಟಿಲನ್ನು ನಾವು ಕಾಣಬಹುದು. ಏಕೆಂದರೆ ಭೂಮಿ ಮೇಲಿನ ಅತಿ ಅದ್ಬುತ ಸಾಧನೆಗಳು ಹಾಗೂ ಉತ್ಪನ್ನಗಳೆಲ್ಲವೂ ಮನುಷ್ಯನ ಮನಸ್ಸಿನ ಮತ್ತು ಬುದ್ಧಿಶಕ್ತಿಯ ಹಿಡಿತದ ಕಾಮಗಾರಿಯೇ……! ಇಂತಹ ಹಿಡಿತ ಸಾಧಿಸುವ ಮೂಲಕ ನಮ್ಮ ನಮ್ಮ ಬದುಕಿಗೆ ಅಂಟಿದ್ದ; ಅಂಟುತ್ತಿರುವ; ಅಂಟಬಹುದಾದ ಬದುಕಿನ ಕೊಳೆಗಳನ್ನು ಸಕಾರಾತ್ಮಕವಾಗಿ ತೆಗೆಯುತ್ತಾ ನಕಾರಾತ್ಮಕ ಕಳಂಕಗಳನ್ನು ತೊಳೆದುಕೊಳ್ಳೋಣ! ಬನ್ನಿ ಧನಾತ್ಮಕತೆಯಲ್ಲಿ ಮಿಂದು ಶುಭ್ರವಾಗೋಣ!

-ಮಂಜುಳಾ ಜಿ ಎಸ್ ಪ್ರಸಾದ್
ಶಿಕ್ಷಕರು, ಸ ಹಿ ಪ್ರಾ ಶಾಲೆ ಯಲುವಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

0
    0
    Your Cart
    Your cart is emptyReturn to Shop