“ಬಾಗಿಲೊಳು ಕೈ ಮುಗಿದು
ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಕಲೆಯ ಬಲೆಯು”,
ಎಂದು ರಸ ಋಷಿ ಕುವೆಂಪು ಅವರು,ಹೊಯ್ಸಳರ ಸೂಕ್ಷ್ಮ ಕಲೆಗೆ ವರ್ಣಿಸಿದ್ದು,ಇಲ್ಲಿ ಪ್ರಸ್ತುತವಾದಂತೆ,ರಸ ಋಷಿ ಕುವೆಂಪು ಅವರು ಹುಟ್ಟಿದ,” ಕವಿಮನೆ,ಮತ್ತು ಅವರ ಸಮಾದಿ ಸ್ಥಳ’ಕವಿಶೈಲ’ಕ್ಕೆ ತುಂಬಾ ಅನ್ವಯವಾಗುತ್ತದೆ..
“ಮಲೆನಾಡ ಮಡಿಲಲ್ಲಿ,
ಹಚ್ಚಹಸುರಿನ ಗಿರಿಕಾನನಗಳಲ್ಲಿ ,
ತುಂಗೆಯ ತೀರದಲ್ಲಿ”,
ನವೋದಯದ ರಸ ಋಷಿಯ, ಸಿಬ್ಬಲಿಗುಡ್ಡೆಯ ಪಕ್ಕದಲಿ ಇರುವ ‘ಕುಪ್ಪಳಿ’, ಕಣ್ಮನಗಳನ್ನ ಸೆಳೆಯುವ,ಭಾವುಕರಾಗುವ,ಯಾವುದೋ ಲೋಕಕ್ಕೆ ಕರೆದೊಯ್ಯುವ ಸಾಂಸ್ಕೃತಿಕ ಜಗತ್ತೇ ಆಗಿದೆ.
ನಾವು ೩ ವರ್ಷದ ಹಿಂದೆ ಹೋಗುವಾಗ ಕವಿಮನೆ ,ಕವಿಶೈಲ ನೋಡುವವರೆಗೂ ಯಾವಾಗ ನೋಡುತ್ತೇವೆಂಬ ಕಾತರ ಹೆಚ್ಚಿತ್ತು.ಸನಿಹ ಹೋದಂತೆಲ್ಲಾ ಇಲ್ಲೇ ಕುವೆಂಪು ಅವರು ಓಡಾಡಿರಬಹುದಲ್ವಾ!?, ಅವರ ಕಲ್ಪನೆಯ,ಇದ್ದಿರಲೂಬಹುದಾದ ಹೆಗ್ಗತಿಯ ತೋಟ,ಮನೆ ಇಲ್ಲೇ ಇದ್ದೀತಾ??ಎಂಬ ಕುತೂಹಲ ಹೆಚ್ಚೇ ಇತ್ತು.
ಮನೆಯ ಹೊರ ಆವರಣದಲ್ಲಿರುವ ದೊಡ್ಡ ದೊಡ್ಡ ಒರಳುಕಲ್ಲುಗಳು,ಸೀದಾ ಒಳಹೋದರೆ , ಭತ್ತ ತುಂಬಿಡುವ ಮರದ ದೊಡ್ಡ ಕಲಬಿಗಳು,ನಂತರ ಕುವೆಂಪು – ಹೇಮಾವತಿ ಅಮ್ಮನವರ ವಿವಾಹ ಮಂಟಪ,ಲಗ್ನಪತ್ರ. ಅವರ ಜೊತೆ ಮದುವೆಯಾದ ಇನ್ನೊಂದು ಜೋಡಿ ಕುವೆಂಪು ಅವರ ಮಾವನವರದು. ಪ್ರಶಾಂತವಾದ ವಾತಾವರಣ ದಲ್ಲಿ ಲಗ್ನ ಆಗಬೇಕೆಂದು ಮಧ್ಯರಾತ್ರಿ ಆದ ಮದುವೆ ಅವರದು.
ಅಪ್ಪಟ ಮಲೆನಾಡ ತೊಟ್ಟಿಮನೆ ನಡುವೆ ತುಳಸಿಕಟ್ಟೆ. ಸುತ್ತಲೂ ಜಗುಲಿಯಲ್ಲಿ ದೊಡ್ಡದಾದ ಅಡುಗೆ ಕೋಣೆ, ಅಡುಗೆಯ ಪರಿಕರಗಳು ನೋಡಿದಷ್ಟು ಸಾಲದು. ದೊಡ್ಡ ದೊಡ್ಡ ಪಾತ್ರೆಗಳು, ಅಳತೆ ಪ್ರಕಾರ ಹಿಟ್ಟು ಕಲೆಸುವ ಹರಿವಾಣಗಳು. ಬಟ್ಟೆಯ ಬುಟ್ಟಿಗಳು, ಮೊರಗಳು, ಬಟ್ಟಲುಗಳು, ಮಡಿಕೆ – ಕುಡಿಕೆಗಳು ಆಗಿನಕಾಲದ ಜೀವನಶೈಲಿಯ ಪ್ರತಿಬಿಂಬಗಳೇ ಆಗಿವೆ.
ಲೇಖಕಿ ಲೀಲಾವತಿ ವಿಜಯಕುಮಾರ ಹಗರಿಬೊಮ್ಮನಹಳ್ಳಿ
ಅಡುಗೆ ಕೋಣೆಗೆ ಅಂಟಿದ ಊಟದ ಕೋಣೆ ಅನ್ನುವುದಕಿಂತ ಪಡಸಾಲೆಯು,ಸಿರಿವಂತ ಅವಿಭಕ್ತ ಕುಟುಂಬದ ಪ್ರತೀಕ.ಬಾಣಂತಿ ಕೋಣೆಯ ತೊಟ್ಟಿಲು,ಮಂಚ ,ಹಂಡೆ ಆರೋಗ್ಯಕರ ಜೀವನದ ರೂಪಗಳು.ನೋಡಿದಷ್ಟು ಮತ್ತೆ ನೋಡಬೇಕೆಂಬ ಹಂಬಲ.ಅಲ್ಲೇ ಇದ್ದು ಬಿಡಬೇಕೆಂಬ ಬಯಕೆ ಆಗಿದ್ದು ನಿಜ.ಮನೆ ಒಳಗೆ ಇರುವ ಕುವೆಂಪು ಮಂಚ,ಅದರ ಮೇಲೆ ತೂಗು ಹಾಕಿರುವ ಅವರ ಹಾಕಿಕೊಂಡಿದ್ದ “ಕೋಟು”ನೋಡಲೆಷ್ಟು ಸುಂದರ!!ಅದರ ತೋಳಿಗೆ ಹಾಕಿರುವ ಸೊಟ್ಟಪಟ್ಟ ಹೊಲಿಗೆಗಳು,ನಮ್ಮ ಜೀವನಕ್ಕೆ ಹತ್ತಿರ.ಅವ್ಯಕ್ತ ಖುಷಿ,ಯಾವುದನ್ನು ಮುಟ್ಟಬಾರದೆಂಬ ನಿಯಮ ಇದ್ದರೂ ಕುವೆಂಪು ಅವರ ಕ್ಷಮೆ ಕೋರಿ ,ಸ್ವಲ್ಪವೇ ಕೋಟ್ ತೋಳು ಮುಟ್ಟಿ ಅದರ ಭಾವುಕತೆ ಅನುಭವಿಸಿದ್ದೆ (ಕ್ಷಮೆ ಇರಲಿ)
ಕವಿಮನೆ ತುಂಬಾ ಓಡಾಡುವಾಗ ಅನಿಸಿದ್ದು, “ಕುವೆಂಪು ಅವರು ಇಲ್ಲಿ ಕೂತಿರಬಹುದಾ”? “ಅಥವಾ ಈ ಮೆಟ್ಟಲು ಮೇಲೆ ಕೂತಿದ್ದಿರಬಹುದಾ”,” ಇಲ್ಲೆಲ್ಲಾ ಓಡಾಡಿದ್ದಾರೆ,ಅವರು ಓಡಾಡಿದಲ್ಲಿ ನಾವು ಓಡಾಡುವುದು ನಿಜಕ್ಕೂ ಧನ್ಯರೆ!!”,ಅಂತಾ ಭಾವನೆಯಾಗಿ ಕವಿಮನೆಯಲ್ಲಿ ಎಲ್ಲಿ ಸಾದ್ಯವೋ ಅಲ್ಲಿ ಕೂತಿದ್ದು ಬಂದಿದ್ದು ಅಷ್ಟೇ ನಿಜ.
ಮರದ ಮೆಟ್ಟಿಲಿನಿಂದ ಮೇಲಿನ ಮನೆಗೆ ಹೋದರೆ,”ಸಾರಸ್ವತ ಲೋಕ”ವೇ ತೆರೆದು ಕೊಳ್ಳುತ್ತದೆ.ಅವರ ಎಲ್ಲಾ ಕವನ ಸಂಕಲನ,ಕಾದಂಬರಿ ,ಕಥೆ ,ನಾಟಕಗಳು,ಎಲ್ಲವೂ ಅಲ್ಲಿ ಸಂಗ್ರಹಿಸಿಡಲಾಗಿದೆ.ಅವರ ಪ್ರಶಸ್ತಿಗಳು, ಡಾಕ್ಟರೇಟ್ ಪದವಿಗಳು,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತೇವೆ.ಅವರ ವಾಚ್, ಕೂದಲು ,ಬಟ್ಟೆ, ಮನೆಯಲ್ಲಿರುವ ಲೋಟಗಳು , ಕೊಡ,ಗಂಗಾಳ,ಬಟ್ಟಲು ಎಲ್ಲವೂ ನೋಡಲು ಲಭ್ಯ.
ಊಟದ ಕೋಣೆಯಲ್ಲಿ ಅವರ, ಅವರ ಕುಟುಂಬದವರ ಅವರೂಪದ ಫೋಟೋಗಳು, ಪಕ್ಷಿಗಳ ಫೋಟೋಗಳು, ಎಲ್ಲವೂ ಅವರ ಕಾಲಘಟ್ಟಕ್ಕೆ ಕರೆದೊಯ್ಯುತ್ತವೆ. ನಾವು ಓದಿದ್ದ ‘ಸುಷ್ಮ ಮತ್ತು ಮರಿಹಕ್ಕಿ ‘ಪಾಠದಲ್ಲಿ ಬಂದಿದ್ದ ತೇಜಸ್ವಿ ಮಗಳು ಸುಷ್ಮಳನ್ನು, ಅಲ್ಲಿರುವ ಫೋಟೋ ಸಂಗ್ರಹದಲ್ಲಿ ನೋಡಿ ಖುಷಿಯಾಗಿತ್ತು. ಕುವೆಂಪು ಅವರ ಕೋಕಿಲ ಚೈತ್ರ , ತೇಜಸ್ವಿ , ರಾಜೇಶ್ವರಿ ಅಮ್ಮ ಹೀಗೆ ಪ್ರತಿಯಬ್ಬರ ಬಾಲ್ಯದಿಂದ ಹಿಡಿದು ಈಗಿನ ವರೆಗಿನ ಫೋಟೋಗಳು ಅದರ ವಿವರಗಳು ಲಭ್ಯ.
ಅದರ ಜೊತೆ ಜೊತೆಗೆ ‘ರಾಮಾಯಣ ದರ್ಶನಮ್’ ನ ಸಾಲುಗಳನ್ನು ಬರೆದು ಹಾಕಲಾಗಿದೆ. ಕವಿಮನೆ ನೋಡುತ್ತಿದ್ದರೆ ಭಾವುಕರಾಗುವುದಂತೂ ಖಂಡಿತ.ಹಿರಿಯರ ಬದುಕಿನ ಶೈಲಿಯೇ ಅಲ್ಲಿದೆ. ಒಕ್ಕುಟುಂಬದ ಸ್ವಾದದ ಸಂದೇಶ ಅಲ್ಲಿದೆ. ಉನ್ನತ,ದೊಡ್ಡ ಮನಸ್ಸಿನ ಹೊಂದಣಿಕೆಯ ಭಾವ,ಮಾದರಿಯಾಗಿದ್ದ ಭಾವವೇ ಅಲ್ಲಿದೆ.. ಮುಂದೆ ಬಂದರೆ ನಮ್ಮ ಅಭಿಪ್ರಾಯಗಳ ಬರವಣಿಗೆ.ನಾವೂ ಸಹ ಅಭಿಪ್ರಾಯ ನಮೂದಿಸಿ ಬಂದೆವು.ಆದರೆ ಅದರ ನಮ್ಮ ಅಭಿಪ್ರಾಯ ಬರೆದಿದ್ದನ್ನು,ಮೊಬೈಲ್ಸೆ ಮೂಲಕ ಸೆರೆ ಹಿಡಿಯಲು ಮರೆತೆವು. ಅಲ್ಲೆ ಇದ್ದ, ಪುಸ್ತಕ ಮಳಿಗೆಯಲ್ಲಿ,ತೇಜಸ್ವಿ ಅವರ ಪುಸ್ತಕಗಳು,ರಿಯಾಯಿತಿ ಧರದಲ್ಲಿ ಪುಸ್ತಕ ಮಾರಾಟ ಮಳಿಗೆ ಇದ್ದು,ನಾವು “ಅಣ್ಣನ ನೆನಪು”, “ಮನುಜಮತ ವಿಶ್ವಪಥ “,”ಹೀಗೆ ಕೆಲವು ಪುಸ್ತಕ ತೆಗೆದುಕೊಂಡೆವು.
‘ಅಣ್ಣನ ನೆನಪು’ವಿನಲ್ಲಿ, ಕುವೆಂಪು ಅವರ ಮೈಸೂರಿನ ನೆನಪುಗಳು,ಅವರ ಮಕ್ಕಳ ಬಾಲ್ಯದ ನೆನಪಿನ ಮೆರವಣಿಗೆ ಇದ್ದು,ಬಿಡದೇ ಓದಿಸಿಕೊಂಡು ಹೋಗುತ್ತದೆ. ಹೊರಗೆ ಕೃಷಿ ಪರಿಕರಗಳನ್ನ ಇರಿಸುವ ಕೋಣೆ.ಅದರಲ್ಲಿನ ಬಂಡಿ,ಗೆರಸಿ, ನೇಗಿಲು ,ರಂಟೆಕುಂಟೆ, ಬೆಲ್ಲ ಮಾಡುವ ದೊಡ್ಡ ಅಚ್ಚುಗಳು ನೋಡಲು ಎಲ್ಲವೂ ಲಭ್ಯ.ಮುಂದಿನ ಪೀಳಿಗೆಗೆ ತೋರಿಸುವ ಸಂಗ್ರಹವೇ ಆಗಿದೆ. ಕವಿಮನೆಯನ್ನು ನೋಡಿ ೩ವರ್ಷವಾದರೂ,ಆ ನೆನಪು ಇನ್ನು “ಕವಿಮನೆ”ಯಲ್ಲೆ ಇದ್ದೀವಿ,ಎಂಬ ಭಾವ.ಆಗಿನ ಕಾಲವೇ ಚಂದ.ಅದ್ಭುತ, ಒಗ್ಗಟ್ಟಿನ ಹಿರಿಮೆ ಇನ್ನೂ ಹೀಗೆಯೇ ಮುಂದುವರೆಯಲಿ.ಕುವೆಂಪು ಅವರ ಮನೆಯ ನೆನಪಿನೋಂದಿಗೆ ಅವರಿಗೆ ನಮಿಸುತ್ತಾ ಧನ್ಯವಾದಗಳು.ಸಾರಸ್ವತ ಲೋಕ ಕರುನಾಡಲ್ಲಿ ಜನಿಸಿದ ನಾವುಗಳೇ ಧನ್ಯರು.