ಇದು ಕಥೆಯಲ್ಲ ; ಹಕೀಕತ್ತು
ಬಡತನದ ಬೇಗೆಯಲ್ಲಿ ಬೆಂದು , ಇಲಾಖೆ ಕೊಟ್ಟ ಸಮವಸ್ತ್ರ ಧರಿಸಿ , ಬಹುದಿನಗಳಿಂದ ತಲೆಗೆ ಎಣ್ಣೆಯೂ ಕಾಣದೆ ಅತ್ತಿತ್ತ ಹಾರಾಡುತ್ತಿರುವ ಚಿತ್ರ-ವಿಚಿತ್ರ ಕೂದಲದ ರಾಶಿಯೊಂದಿಗೆ , ಇದ್ದಷ್ಟರಲ್ಲೇ ಸುಖಿಯಾಗಿರುವ ತನ್ನ ಸಹಪಾಠಿಗಳನ್ನ ಕಂಡೂ ಕಾಣದಂತೆ ತಲೆಕೆಳಗಾಗಿಸಿ , ಮುಜುಗರ ಪಡುತ್ತಾ, ಸ್ವಲ್ಪ ಭಯ ಹಾಗೂ ಸ್ವಲ್ಪ ಸಾಹಸ ಪಡುತ್ತಾ, ಮುಗ್ಧ ನಗುವೊಂದಿಗೆ ಶಾಲೆಗೆ ಬಂದ ಕಂದಮ್ಮ ಓರ್ವಳನ್ನು ನೋಡಿದ ಮುಖ್ಯ ಗುರುಗಳು , ಅವಳ ಪರಿಸ್ಥಿತಿ ಅರ್ಥೈಸಿಕೊಂಡು, ಬೆನ್ನು ಸವರಿ ನಗು-ನಗುತ್ತಾ ಅವಳ ಪರಿಚಯ ಮಾಡಿಕೊಂಡು ಜ್ಞಾನ ದೇಗುಲದಲ್ಲಿ ಎಲ್ಲರೂ ಸಮಾನರು , ಎಲ್ಲರಂತೆ ನಿನ್ನ ಪಾಲು ಶಾಲೆಯಲ್ಲಿ ಸರಿ-ಸಮಾನವಾದದ್ದು ಎಂಬ ಮನವರಿಕೆ ಮಾಡಿಕೊಟ್ಟರು. ಶಾಲೆ ಆರಂಭವಾದ ನಂತರ ಕೆಲ ದಿನಗಳು ತಡ ಮಾಡಿ ಶಾಲೆಗೆ ಬಂದ ಅವಳಿಗೆ ಹೊಸ ಜಗತ್ತಿನ (ಶಾಲಾ ಪರಿಸರದ) ಪರಿಚಯವಾಗಲು ಕೆಲ ದಿನಗಳ ಅವಶ್ಯಕತೆ ಇತ್ತು.
ವರ್ಗ ಕೋನೆಯಲ್ಲಿ ಹೊಸ ಸನ್ನಿವೇಶ ಕಂಡ ಅವಳು ಗಾಬರಿಯಾಗಿ ,ಒಮ್ಮೆ ವಾಚಕಗಳ ಮೇಲಿನ ಚಿತ್ರಗಳನ್ನು , ಕೋಣೆಯಲ್ಲಿನ ಹಂದರವನ್ನು ನೋಡುತ್ತಿದ್ದರೆ ,ಇನ್ನೊಮ್ಮೆ ಪೊಪೆಟ್ ಶೋ ನ ಸ್ಕ್ರೀನ್ ಹಾಗೂ ವಿವಿಧ ಕಲಿಕಾ ಬೋಧನಾ ಉಪಕರಣಗಳನ್ನು ಉತ್ಸುಕತೆಯಿಂದ ನೋಡುತ್ತಿದ್ದಳು. ಆಕೆಯು ನೋಡುವ ನೋಟ ‘ಹೇಗೆ ಈ ಜಗತ್ತನ್ನು ಒಪ್ಪಿಕೊಳ್ಳಲಿ?’ ಎಂದು ಎನಿಸಿದರೆ ಇನ್ನೊಂದು ದೃಷ್ಟಿಕೋನದಿಂದ ಇವೆಲ್ಲ ಕೇವಲ ನನಗಾಗಿ ಸೃಷ್ಟಿಯಾದ ಜಗತ್ತು ಎಂಬ ಅತೀವ ಸಂತೋಷ ಅವಳಿಗೆ ಅನಿಸುತ್ತಿತ್ತು.
ಶಾಲಾ ಆರಂಭದ ದಿನಗಳಲ್ಲಿ ಹಾಡುಗಳು,ಕಥೆಗಳು, ಮೂಕಾಭಿನಯಗಳು , ಆಟಗಳು ,ಚಿತ್ರಗಳು , ಬಣ್ಣಗಳು ಆಕೆಗೆ ತುಂಬಾ ರಂಜಿಸುತ್ತಿದ್ದವು. ತನ್ನ ಭಾರಕ್ಕಿಂತಲೂ ಅತೀವ ಭಾರವನ್ನು ಹೊರುವ ಕಿರು ಇರುವೆಯಂತೆ ಪುಟಿ-ಪುಟಿದು ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಕಂಡರೆ ‘ಚಟುವಟಿಕೆಯೇ ತಾನಾಗಿದ್ದೇನೆ’ ಎಂಬಂತೆ ಅವಳ ವರ್ತನೆ . ಆಕೆಯ ವೈಯಕ್ತಿಕ ಹಿಮ್ಮಾಹಿತಿಯನ್ನು ಪಡೆದ ಹಾಗೂ ಆಕೆಯ ಮುಗ್ದತೆಗೆ ಅನುಕಂಪಕ್ಕಿಂತ ಅವಕಾಶವೇ ಲೇಸು ಎಂಬ ಸಿದ್ದಾಂತದಲ್ಲಿ ಸಾಗುತ್ತಿದ್ದ ಮುಖ್ಯ ಗುರುಗಳು ಯಾವಾಗಲೂ ವರ್ಗದ ಶಿಕ್ಷಕರಿಗೆ ಆ ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಹೇಳುತ್ತಿದ್ದರು.
ಕೆಲ ದಿನಗಳ ನಂತರ ಒಮ್ಮೆ, ಭಾನುವಾರದಂದು ಮುಖ್ಯ ಗುರುಗಳು ಒಬ್ಬರೇ ಮನೆಯಲ್ಲಿ ಇರುವಾಗ ಒಂದು ಕೂಗು ಕೇಳಿಸಿತು, ನಿರ್ಲಕ್ಷಿಸಿದ ಮುಖ್ಯ ಗುರುಗಳು ತಮ್ಮ ಕಾರ್ಯದಲ್ಲಿ ನಿರತರಾದರು . ಮತ್ತೆ ಅಮ್ಮಾsss .. ಎಂಬ ಶಬ್ಧವು ಕೇಳಿದ ಹಾಗೆ ಅನಿಸಿತು.. ಕಿಟಕಿಯಿಂದ ಇಣುಕಿ ನೋಡಿದಾಗ ಕೇವಲ ಪಾತ್ರೆ ಗೋಚರಿಸಿತು, ಬಿಕ್ಷಾಟನೆಗೆ ಯಾರೋ ಬಂದಿದ್ದಾರೆಂದು ಭಾವಿಸಿ ಸ್ವತಃ ತಾವೇ ಒಂದಿಷ್ಟು ಆಹಾರ ಪದಾರ್ಥಗಳನ್ನು ಕೊಡಲು ಹೊರಬಂದರು. ಭಿಕ್ಷಾಟನೆಗೆ ಬಂದಿದ್ದ ಪುಟ್ಟ ಕಂದನನ್ನು ನೋಡಿ , ಕ್ಷಣಕಾಲ ಏನು ತಿಳಿಯದೆ ಮೌನವಾಗಿ ನಿಂತು ಬಿಟ್ಟರು .
ಮುಖ್ಯ ಗುರುಗಳ ಕಂಡ ಆ ಬಾಲಕಿಯು ಗುರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡದೆ, ತನ್ನೆರಡು ಕಣ್ಣುಗಳನ್ನು ಕೆಳಗಾಗಿಸಿ ನಿಂತಿದ್ದ ಆ ಪುಟಾಣಿ ಕಂದಮ್ಮ ಬೇರಾರು ಅಲ್ಲ! ನೀವು ಈಗ ಊಹಿಸುತ್ತಿರುವ ಮುಗ್ಧ ಬಾಲೆ ‘ಆ ಹುಡುಗಿಯೇ’ ಆಗಿದ್ದಳು. ಸ್ವಲ್ಪವೂ ತಡ ಮಾಡದೆ ತಡವರಿಸುತ್ತಾ ಗುರುಗಳು ಏನು ಹೇಳುತ್ತಾರೆ? ಎಂಬ ಭಯದಲ್ಲಿ ತನ್ನ ಮನೆಯ ಪರಿಸ್ಥಿತಿಯನ್ನು ತೊದಲು ನುಡಿಗಳಲ್ಲಿ ವಿವರಿಸುತ್ತಾ ಮನೆಯಲ್ಲಿ ಪಾಲಕರು ತನಗೆ ಭಿಕ್ಷಾಟನೆಗೆ ಒತ್ತಾಯ ಮಾಡುತ್ತಾರೆಂದು ಹೇಳಿ ಮತ್ತೆ ತನ್ನ ಪಾಲಕರನ್ನು ದೋಷಿಸುವುದು ತಪ್ಪೆಂದು ಎನಿಸಿದ ಆಕೆಯು ಹೀಗೆ ಹೇಳಿದಳು “ನಾವು ತುಂಬಾ ಬಡವರು ಸರ್ . ಹೀಗಾಗಿ ಭಿಕ್ಷಾಟನೆಗೆ ಬರುತ್ತೇವೆ”
ಏನೂ ಉತ್ತರಿಸದೆ ಮೌನವಾಗಿ ಆಕೆಗೆ ಭಿಕ್ಷೆಯನ್ನು ನೀಡಿದ ಮುಖ್ಯ ಗುರುಗಳು, ದಿನಪೂರ್ತಿ ಮುಗ್ಧ ಕಂದಮ್ಮನ ನಯ-ವಿನಯ , ಆಚಾರ-ವಿಚಾರ, ಆಕೆಯ ಸಂದರ್ಭ ಮತ್ತು ಜವಾಬ್ದಾರಿಯನ್ನೇ ಪುನ: ಪುನ: ನೆನಪಿಸುತ್ತಾ , ದುಃಖದಿಂದ ದಿನವನ್ನು ಕಳೆದರೂ .
ಮರುದಿನ ಶಾಲೆಗೆ ಬಂದಾಗ ಪ್ರಾರ್ಥನಾ ಸಮಯದಲ್ಲಿ ಆ ಮಗುವನ್ನು ಕಂಡು, ವರ್ಗದ ಶಿಕ್ಷಕರಿಗೆ ಕರೆದು ಹೇಳಿದರು . ಆ ಬಾಲಕಿಗೆ 8 ವರ್ಷ ವಯಸ್ಸು ಆದರೆ ಜವಾಬ್ದಾರಿ ಮಾತ್ರ 30 ವರ್ಷ ವಯಸ್ಸಿನದ್ದು. ಇರುವೆಯು ತನ್ನ ಭಾರಕ್ಕಿಂತ 50 ಪಟ್ಟು ಹೆಚ್ಚಿನ ಭಾರವನ್ನು ಹೊರುವಂತೆ ಈ ಹುಡುಗಿಯೂ ಸಹ ಈಗಲೇ ಭಾರವನ್ನು ಹೊರುವ ಕೆಲಸ ಮಾಡುತ್ತಿದ್ದಾಳೆ ಎಂದರು. ಇದರ ಅರ್ಥ ವರ್ಗದ ಗುರುಗಳಿಗೆ ಮಾತ್ರ ಆಗಲಿಲ್ಲ. ನಂತರ ಮುಖ್ಯ ಗುರುಗಳು ಭಾನುವಾರ ನಡೆದ ಸಂದರ್ಭವನ್ನು ಸವಿಸ್ತಾರವಾಗಿ ವರ್ಗದ ಶಿಕ್ಷಕರೊಂದಿಗೆ ಹಂಚಿಕೊಂಡರು .ಹಾಗೂ ಅವರಿಗೆ ಹೀಗೆ ಹೇಳಿದರು “ಗುರುಗಳೇ ಆ ವಿದ್ಯಾರ್ಥಿನಿಯ ಮಾತುಗಳು ,ಮುಗ್ಧತೆ ,ಹಾಗೂ ಈ ಜಗತ್ತನ್ನು ಚಿಕ್ಕವಯಸ್ಸಿನಲ್ಲಿಯೇ ಅರಿಯುವ ಆಕೆಯ ಸಾಹಸ ಖಂಡಿತವಾಗಿ ಆಕೆಗೆ ಒಳ್ಳೆಯ ಭವಿಷ್ಯವನ್ನು ರೂಪಿಸಬಲ್ಲದು. ಹೀಗಾಗಿ ನೀವು ಅವಳ ವಯಸ್ಸಿಗೆ ತಕ್ಕಂತೆ ಆಕೆಯ ಸಾಮರ್ಥ್ಯದ ಬಗ್ಗೆ , ಆಕೆಯ ಕಲಿಕೆಯ ವೇಗದ ಬಗ್ಗೆ , ಆಕೆಯ ಕಲಿಕೆಯ ವಿಷಯಗಳ ಆಸಕ್ತಿಯ ಬಗ್ಗೆ ಅರಿತು ,ಮುಕ್ತವಾಗಿ ,ಆಡುತ್ತಾ , ಚಟುವಟಿಕೆಯುಕ್ತವಾಗಿ ಕಲಿಯಲು ಪ್ರೇರಣೆ ನೀಡಿ ” ಆಕೆಯ ಕಣ್ಣಲ್ಲಿ ಆಕೆಯ ಭವ್ಯ ಭವಿಷ್ಯ ನನಗೆ ಗೋಚರಿಸುತ್ತಾ ಇದೆ . ಯಾವಾಗಲೂ ನಾನು ಅವಳ ವಿಷಯವಾಗಿ ಸಹಕರಿಸಲು ನಿಮ್ಮೊಂದಿಗೆ ಬೆನ್ನಲುಬಾಗಿ ಇರುತ್ತೇನೆ . ಉಳಿದ ಎಲ್ಲ ವಿದ್ಯಾರ್ಥಿಗಳೊಂದಿಗೆ ನಾನೂ ಸರಿಸಮಾನವಾಗಿ ಓದಬಲ್ಲೆ ,ಬರೆಯಬಲ್ಲೆ , ಕಲಿಕೆಯಲ್ಲಿ ಹಾಗೂ ಎಲ್ಲ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಬಲ್ಲೆ ಎಂಬ ಭಾವನೆಯನ್ನು ಅವಳಲ್ಲಿ ಮೂಡಿಸಿ ಎಂದು ಹೇಳಿದರು . ಇದನ್ನೆಲ್ಲಾ ಕೇಳಿದ ವರ್ಗದ ಗುರುಗಳು ಭಿಕ್ಷಾಟನೆಗೆ ಬಂದಿದ್ದನ್ನು ಇರುವೆ ಹೊರುವ ಭಾರಕ್ಕೆ ಏಕೆ ಹೋಲಿಸಿದರು ಎಂಬುದು ಮಾತ್ರ ಅರ್ಥವಾಗಲಿಲ್ಲ. ಹೆಚ್ಚು ಮಾತನಾಡದೆ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆಂದು ಒಪ್ಪಿಕೊಂಡರು.
ಒಮ್ಮೆಯೂ ಶಾಲೆ ಬಿಡದೆ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿದ್ದ ಅವಳು ಕೆಲ ದಿನಗಳ ನಂತರ ಪ್ರತಿ ಶನಿವಾರ ಶಾಲೆಗೆ ಗೈರಾಗುವುದನ್ನು ಆರಂಭಿಸಿದಳು. ವರ್ಗದ ಶಿಕ್ಷಕರು ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಆಕೆಯ ಮನೆ ಪಕ್ಕದಿಂದ ಬರುತ್ತಿರುವ ನಾಲ್ಕೈದು ವಿದ್ಯಾರ್ಥಿಗಳಿಂದ ಆಕೆಯ ಬಗ್ಗೆ ಹಿಮ್ಮಾಹಿತಿಯನ್ನು ಪಡೆದುಕೊಂಡರು. ಆಗ ವರ್ಗದ ಗುರುಗಳಿಗೆ ಪ್ರತಿ ಶನಿವಾರ ಯಾತಕ್ಕಾಗಿ ಶಾಲೆಯನ್ನು ಬಿಡುತ್ತಿದ್ದಾಳೆ? ಎಂಬುದು ಅರ್ಥವಾಯಿತು. ಪ್ರತಿ ಶನಿವಾರ ಆಕೆ ನೆಲೆಸಿರುವ ಪಟ್ಟಣದಲ್ಲಿ ಸಂತೆ ಇರುವುದರಿಂದ, ತನ್ನ ತಂದೆ ತಾಯಿಯೊಂದಿಗೆ ವ್ಯಾಪಾರದಲ್ಲಿ ಸಹಕರಿಸಲು ಆಕೆ ಹೋಗುತ್ತಿದ್ದಳು. ಅಲೆಮಾರು ಜನಾಂಗದವರಾದ ಅವರು ಶಾಲೆಗೆ ಹತ್ತಿಕೊಂಡಿರುವ ಒಂದು ಕೆರೆಯ ಪಕ್ಕ 5-6 ಗುಡಿಸಲುಗಳಲ್ಲಿ ನೆಲೆ ನಿಂತಿದ್ದರು. ಪೊರಕೆ ,ಸೂಜಿ ,ಚಿಕ್ಕ ಚಿಕ್ಕ ಸ್ಟೇಷನರಿ ವಸ್ತುಗಳನ್ನು ಸಂತೆಯಲ್ಲಿ ಮಾರಿ ಹಾಗೂ ಸಮಯ ಸಿಕ್ಕಾಗ ಗುಜುರಿ ತುಂಬಿ ಹೇಗೋ ತಮ್ಮ ಜೀವನವನ್ನು ನಡೆಸುವ ಅತ್ಯಂತ ಬಡ ಕುಟುಂಬ ಅವರದಾಗಿತ್ತು . ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದಳು. ದುಡಿದು ತಿನ್ನಬೇಕೆಂಬ ಆಕೆಯ ಮನೋಭಾವ ನಿಜಕ್ಕೂ ಯುವಕರಿಗೆ ಸ್ಪೂರ್ತಿದಾಯಕ. ಆದರೆ ಬಾಲ್ಯ ವ್ಯವಸ್ಥೆಯಲ್ಲಿ ದುಡಿಯುವುದು ಬಾಲ ಕಾರ್ಮಿಕತನವೇ ಅಲ್ಲವೇ? ಶನಿವಾರದ ಸಂತೆಯಲ್ಲಿ ವರ್ಗದ ಗುರುಗಳು ಸಹ ಆಕೆಯನ್ನು ನೋಡಿದರು . ಆಕೆಯ ಕಿರುಚಾಟ , ತಂದೆ ತಾಯಿಗಿಂತ ಜೋರಾಗಿತ್ತು . ನೋಡಿಯೂ ನೋಡದಂತೆ ಅವಳಿಗೆ ಏನು ಹೇಳಬೇಕೆಂದು ತೋಚದೆ ಸುಮ್ಮನೆ ಬಂದುಬಿಟ್ಟರು. ಸೋಮವಾರ ದಿನದಂದು ಅವಳು ಶಾಲೆಗೆ ಬಂದಾಗ ಅವಳನ್ನು ನೋಡಿದ ವರ್ಗದ ಗುರುಗಳು ಮುಖ್ಯ ಗುರುಗಳಿಗೆ ಹೀಗೆಂದರು ‘ಸರ್ ನೀವು ಮೊನ್ನೆ ಹೇಳಿದ ಇರುವೆ ಹೊರುವ ಭಾರ ಏನು ಎಂಬುದು ನನಗೆ ಇಂದು ಅರ್ಥವಾಯಿತು’. ನಂತರ ವರ್ಗದ ಗುರುಗಳು ಅವಳಿಗೆ ಶನಿವಾರ ಏಕೆ ಶಾಲೆಯನ್ನು ಬಿಟ್ಟಿರುವೆ ಎಂದು ಸುಮ್ಮನೆ ಪರೀಕ್ಷಿಸಲು ಕೇಳಿದರು ? ಅವಳು ವರ್ಗದ ಗುರುಗಳಿಗೆ ಹುಸಿಯನ್ನಾಡದೆ ಸತ್ಯವನ್ನು ಹೇಳಿದಳು “ಸರ್ ನಾನು ಭಿಕ್ಷಾಟನೆಗೆ ಹೋಗುವುದನ್ನು ಈಗ ನಿಲ್ಲಿಸಿದ್ದೇನೆ, ಆದರೆ ನಮ್ಮ ಮನೆಯ ಪರಿಸ್ಥಿತಿಯು ನನಗೆ ಸುಮ್ಮನಿರಲು ಬಿಡದೆ ತಂದೆ ತಾಯಿಯರಿಗೆ ಸಹಕಾರ ನೀಡಲು ಪ್ರೇರೇಪಿಸುತ್ತಿದೆ. ಖಂಡಿತವಾಗಿ ನೀವು ಶನಿವಾರದಂದು ಹೇಳಿದ ವಿಷಯವನ್ನು ನಾನು ಇತರರಿಗೆ ಕೇಳಿ ಮಾಡುತ್ತೇನೆ” ಎಂದು ಕಣ್ಣುಗಳನ್ನು ಒದ್ದೆ ಮಾಡಿಕೊಂಡು ಹೇಳುವ ಪ್ರಸಂಗ ವರ್ಗದ ಶಿಕ್ಷಕರಿಗೆ ಕ್ಷಣ ಕಾಲ ಸೃಷ್ಟಿಕರ್ತನ ಮೇಲೆ ಮುನಿಸಿಕೊಳ್ಳುವಂತೆ ಮಾಡಿತು.
ಈಗಲೂ ವರ್ಗದ ಗುರುಗಳು ಆಕೆಗೆ ಒತ್ತಾಯ ಮಾಡದೆ ಪಾಲಕರನ್ನು ನಿರಂತರವಾಗಿ ಸಂಪರ್ಕವನ್ನು ಮಾಡುವ ಪ್ರಯತ್ನದಲ್ಲಿದ್ದಾರೆ. ಜಗತ್ತಿನಲ್ಲಿ ಇಂತಹ ಮಕ್ಕಳಿರುವ ಸನ್ನಿವೇಶಗಳು ಸಹಸ್ರಾರು ಇವೆ . ಈ ಲೇಖನದ ಉದ್ದೇಶ ಇಷ್ಟೇ, ಆ ಮಗುವನ್ನು ಫಲವತ್ತಾದ ಶಿಕ್ಷಣ ಪಡೆಯಲು ಮುಖ್ಯ ಗುರುಗಳು ಹಾಗೂ ವರ್ಗದ ಶಿಕ್ಷಕರು “ನಿನ್ನ ವಯಸ್ಸು ಬೆವರು ಸುರಿಸಿ ದುಡಿಯಲು ಅಲ್ಲ ; ಬದಲಾಗಿ ನಿನ್ನ ಜೀವನವನ್ನು ರೂಪಿಸುವ ಪ್ರಬುದ್ಧ ಶಿಕ್ಷಣಕ್ಕಾಗಿ ” ಎಂದು ಪ್ರಯತ್ನಿಸುತ್ತಿದ್ದಾರೆ.
ಶ್ರೀ ಎಂ ಎಚ್ ಲಷ್ಕರಿ ,
ನಲಿಕಲಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು