ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ ಎಂದು ನಿಮ್ಮ ತಾಯಿಯಾದ ನಾನು ಸದಾ ಶುಭ ಹಾರೈಸುತ್ತೇನೆ.
ಹಡೆದಿರುವೆನೆಂದ ಮಾತ್ರಕ್ಕೆ ನಿಮ್ಮ ಹಣೆಬರಹವನ್ನು ಬರೆಯಲು ನಾನು ದೇವರಲ್ಲ. ಹಾಗಂತ ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ ನಾನು ಹೊಣೆ ಹೊರುವುದಿಲ್ಲ. ಒಳ್ಳೆಯದಿರಲಿ, ಕೆಟ್ಟದ್ದಿರಲಿ ನಿಮ್ಮ ಜೊತೆ ನಾನು ಅದನ್ನು ಹಂಚಿಕೊಂಡು ಬದುಕಬಲ್ಲೆ ಅಷ್ಟೇ. ಸಮಾಜ ಅದೇನೇ ಹೇಳಲಿ, ಇರೋ ಮಕ್ಕಳನ್ನ ಹಾಸ್ಟೆಲ್ ನಲ್ಲಿಟ್ಟು ಅದು ಹೇಗ್ ಇರ್ತಾರೋ ಏನೋ? ಅದೇನು ಕಮ್ಮಿ ಆಗಿತ್ತೋ ಇವ್ರಿಗೆ ಮಕ್ಕಳನ್ನ ಹಾಸ್ಟೆಲ್ ನಲ್ಲಿ ಇಡೋಕೆ? ಭಾರೀ ಉಳಿತಾಯ ಬಿಡ್ರಿ ಇನ್ ಮೇಲೆ ಫ್ರೀ ಹಾಸ್ಟೆಲ್ ಅಲ್ವಾ?ಹೀಗೆ……ಕಾಮೆಂಟ್ ಗಳ ಲಿಸ್ಟ್ ಬೆಳೀತಾನೆ ಹೋಗತ್ತೆ. ಸಾವಿರ ಅಂತೆಗಳ ಮೇಲೆ ದೊಡ್ಡ ಕಂತೆಯನ್ನೇ ಕಟ್ಟಲಿ, ಆದರೆ ನಾನು ಅದ್ಯಾವುದನ್ನು ನನಗೆ ಸಂಬಂಧಿಸಿದ ವಿಷಯ ಅಂತ ನಾನಂದುಕೊಳ್ಳುವುದಿಲ್ಲ. ಅದರ ಬಗ್ಗೆ ನಾನ್ಯಾವತ್ತು ಚಿಂತಿಸುವುದಿಲ್ಲ.
ನನ್ನ ಚಿಂತನೆ ಒಂದೇ. ನನ್ನ ಮಕ್ಕಳಿಗೆ ಹಾಸ್ಟೆಲ್ ಜೀವನದ ಸುಮಧುರ ನೆನಪುಗಳನ್ನು ಕಟ್ಟಿಕೊಡುವ ದೃಢವಾದ ನಿಲುವು. ಏಕೆಂದರೆ ಆ ಮಧುರ ಕ್ಷಣಗಳನ್ನು ಅನುಭವಿಸಿದವಳು ನಾನು. ಈ ಸಮಾಜದಲ್ಲಿ ನಾನು ಇಂದು ದೃಢವಾಗಿ ನಿಲ್ಲಲು ನನ್ನನ್ನು ಗಟ್ಟಿಗೊಳಿಸಿದ್ದೆ ಆ ಜೀವನ ಎಂದರೆ ತಪ್ಪಾಗಲಾರದು. ನಮ್ಮ ತಾಯಿ ನಮ್ಮನ್ನು ಬಿಟ್ಟು ಇರುತ್ತಾಳೆ ಎಂದು ಯಾವತ್ತು ನನ್ನನ್ನು ದೂಷಿಸಬೇಡಿ. ನಿಮ್ಮ ನೆನಪು ಸದಾ ಮನದಲ್ಲಿ ಇರುತ್ತದೆ. ಮನೆಯಲ್ಲಿ ನಿಮಗೆ ಇಷ್ಟವಾದ ತಿಂಡಿಯನ್ನು ಮಾಡಿದಾಗ, ಮಾರ್ಕೆಟ್ ನಲ್ಲಿ ನೀವು ಪದೇ ಪದೇ ಇಷ್ಟಪಟ್ಟು ಕೊಡಿಸು ಎಂದು ಕೇಳುವ ವಸ್ತುಗಳನ್ನು ನೋಡಿದಾಗ, ಮನೆಯಲ್ಲಿ ಸಣ್ಣ ಪುಟ್ಟ ಸಹಾಯ ಬೇಕಾದಾಗ ಮಗನೇ… ಮಗಳೇ… ಎಂದು ಕೂಗಿ ಕರೆದಾಗ… ಹೀಗೆ ಪ್ರತಿಯೊಂದರಲ್ಲೂ ನಿಮ್ಮ ನೆನಪು ಇದ್ದೇ ಇರುತ್ತದೆ. ನೀವು ಹಾಸ್ಟೆಲ್ ನಲ್ಲಿ ಐದು ವರ್ಷ ನನ್ನ ಬಿಟ್ಟು ಕಳೆಯಬಹುದು. ಆದರೆ ಉಳಿದ ಐವತ್ತು ವರ್ಷದ ಜೀವನವನ್ನು ನಾನು ನಿಮ್ಮೊಂದಿಗೆ ಕಳೆಯಲು ಕಾತರಳಾಗಿರುವೆ.
ನಿಮ್ಮ ತಾಯಿ ನಿಮಗೆ ಏನೂ ಮಾಡಿಲ್ಲ ಎಂದು ಯಾವತ್ತು ನಿರಾಸೆ ಆಗಬೇಡಿ. ಏಕೆಂದರೆ ನನ್ನ ತಾಯಿ ನನಗೆ ಶಾಲಾ ದಿನಗಳಲ್ಲಿ ಮಾಡಿದ್ದಕ್ಕಿಂತಲೂ ನಾನು ನಿಮಗೆ ಹೆಚ್ಚಿಗೆ ಮಾಡಿರುವೆ. ನಿಮ್ಮ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ನನಗೆ ಸಮಯವಿಲ್ಲ ಅಂತ ಅಲ್ಲ, ನನ್ನ ಸಹಾಯವಿಲ್ಲದೆ ನೀವು ನಿಮ್ಮ ಶಿಕ್ಷಣವನ್ನು ಸಂಪಾದನೆ ಮಾಡಿಕೊಳ್ಳಲಿ ಅಂತ. ನಾನು ಯಾವತ್ತು ನಿಮ್ಮ ಗೃಹ ಪಾಠದ ಬಗ್ಗೆ ತಲೆಕಡಿಸಿಕೊಂಡಿಲ್ಲ. ಯಾಕೆಂದರೆ ನನ್ನ ತಂದೆ-ತಾಯಿ ಕೂಡ ನನ್ನ ಗೃಹಪಾಠದ ಬಗ್ಗೆ ಯಾವತ್ತೂ ತಿರುಗಿಯೂ ಕೂಡ ನೋಡಿಲ್ಲ. ಹಾಗಂತ ನಾನು ಕನಿಷ್ಟ ಶಿಕ್ಷಣವನ್ನು ಕೂಡ ಪಡೆಯದೆ ಎಂದೂ ಹಿಂದೆ ಬಿದ್ದಿಲ್ಲ. ತಾಯಿ ಕೊಡುವ ಏಟನು ನೀವು ಸರಳವಾಗಿ ಮರೆಯುತ್ತೀರಿ. ಆದರೆ ಗುರುಗಳು ಕೊಡುವ ಏಟಿನಿಂದ ಮಾತ್ರವೇ ಕಲಿಯುವುದು ಸಾಧ್ಯ. ನಿಮಗೆ ಬೇಕಾದ ಪೆನ್ನು, ಪುಸ್ತಕ, ಪೆನ್ಸಿಲ್, ಪಾಟಿಚೀಲಗಳನ್ನು ನಾನು ಪೂರೈಸಬಹುದು. ಆ ಪಾಟಿಚೀಲದ ಭಾರ ಹೊರುವ ತಾಕತ್ತು, ಪೆನ್ನಿನಿಂದ ಮೂಡುವ ಅಕ್ಷರಗಳ ಸೌಂದರ್ಯ, ಪುಸ್ತಕದಿಂದ ಮಸ್ತಕವನ್ನು ತುಂಬಿಕೊಳ್ಳುವ ಸಾಮರ್ಥ್ಯ ನಿಮ್ಮದೇ. ಅದರಲ್ಲಿ ನನ್ನ ಪಾಲಿಲ್ಲ. ನಿಮ್ಮ ಪಾಠವನ್ನು ನೀವೇ ಓದಬೇಕು, ನೀವೇ ಬರೆಯಬೇಕು, ಅದರಿಂದ ನೀವೇ ಏನನ್ನಾದರೂ ತಿಳಿದುಕೊಳ್ಳಬೇಕು. ಏಕೆಂದರೆ ನಿಮ್ಮ ಬದುಕು ಕಟ್ಟಿಕೊಳ್ಳುವ ಹೊಣೆಯು ಕೂಡ ನಿಮ್ಮದೇ.
ಇನ್ನೊಂದು ಮಾತನು ಹೇಳಬೇಕೆಂದಿರುವೆ ಸಾಯುವ ಮುನ್ನ. ನಾನು ಸತ್ತ ನಂತರ ನನ್ನಿಂದ ಯಾವುದೇ ಆಸ್ತಿಯನ್ನಾಗಲಿ, ಮನೆಯನ್ನಾಗಲಿ, ಜಾಗವನ್ನಾಗಲಿ ನೀವು ನಿರೀಕ್ಷಿಸಬೇಡಿ. ಏಕೆಂದರೆ ನೀವೇ ನನ್ನ ಆಸ್ತಿ. ನನಗೆ ಏನಾದರೂ ನೀವು ಕೊಡಬೇಕು ಎಂದೆನಿಸಿದ್ದಲ್ಲಿ ನಾನು ನಿಮಗೆ ಕೊಟ್ಟಷ್ಟು ಪ್ರೀತಿಯನ್ನು ನೀವು ನನಗೆ ವಾಪಸ್ ಕೊಟ್ಟು ಬಿಡಿ. ಹೆಚ್ಚಿಗೆ ನಾನೆಂದು ಕೇಳುವುದಿಲ್ಲ. ನಾನು ಯಾವತ್ತೂ ನಿಮ್ಮನ್ನು ಸಾಕಿಲ್ಲ. ಪ್ರಾಣಿಗಳಂತೆ ನಿಮ್ಮನ್ನು ಸಾಕಿದ್ದರೆ ಇಷ್ಟೊಂದು ಬಂಧವಾದರೂ ಬೆಳೆದೀತು ಹೇಗೆ? ನಿಮಗೆ ಅವಶ್ಯಕತೆ ಇರುವಷ್ಟು ಆಹಾರ,ಬಟ್ಟೆ ಜೊತೆಗೊಂದಿಷ್ಟು ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಟ್ಟಿರುವೆ. ನನಗೆ ವಯಸ್ಸಾದ ಮೇಲೆ ನನ್ನನ್ನು ಸಾಕುವ ಬದಲು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಕುವುದೆಂದರೆ ಭಾವನೆಗಳನ್ನು ಮಾರಿದಂತೆ. ಸಾಯುವ ತನಕ ಜೊತೆಗಿದ್ದು ಪ್ರೀತಿ-ವಾತ್ಸಲ್ಯವನ್ನು ಹಂಚಿಕೊಂಡರೆ ಸಾಕು. ನನ್ನ ಜನ್ಮ ಸಾರ್ಥಕ.
ನಿಮ್ಮ ಸ್ವಾತಂತ್ರ್ಯಕ್ಕೆ ನಾನು ಯಾವತ್ತೂ ನಿರ್ಬಂಧ ಹಾಕುವುದಿಲ್ಲ. ಆದರೆ ನಿಮಗಿರೋ ಸ್ವಾತಂತ್ರ್ಯ ಇನ್ನೊಬ್ಬರಿಗೆ ಯಾವತ್ತೂ ಕೆಟ್ಟದ್ದನ್ನು ಉಂಟು ಮಾಡದಿರಲಿ. ನೀವು ಮಾಡುವ ಕೆಲಸದಿಂದ ಹೆತ್ತವಳಿಗಾಗಲಿ, ಕಲಿಸಿದವರಿಗಾಗಲಿ ಯಾವತ್ತೂ ಅವಮರ್ಯಾದೆ ಮಾಡದಿರಿ. ನಿಮ್ಮಿಂದ ಅವರಿಗೆ ಹೆಮ್ಮೆಯಾಗದಿದ್ದರೂ ಪರವಾಗಿಲ್ಲ, ಆದರೆ ಪಾಠ ಕಲಿಸಿದ ಗುರುವು ಮತ್ತು ಜನ್ಮ ಕೊಟ್ಟ ತಾಯಿಯು ತಲೆ ತಗ್ಗಿಸುವಂತಹ ಕೆಲಸ ಮಾಡದಿರಿ. ಬಹುತೇಕ ಸಮಯಗಳಲ್ಲಿ ನೀವು ಬಿದ್ದಾಗ ನಾನು ನಿಮ್ಮನ್ನು ಎಬ್ಬಿಸದಿರಲು ಕಾರಣ ನೀವೇ ಎದ್ದೇಳಲಿ ಅಂತ. ಹಾಗಂತ ಮುಪ್ಪಿನಲ್ಲಿ ನನ್ನನ್ನು ಬಿದ್ದಾಗ ಎಬ್ಬಿಸಲು ನೀವು ಬರುವ ಬದಲು, ನಾನು ಬೀಳದಂತೆ ನನಗೆ ನೀವು ಊರುಗೋಲಾಗಿ. ಎರಡು ರಟ್ಟೆಗಳ ಬರುವ ಬಲ ನೀವಾಗಿ.
ನಿಮ್ಮ ಜೀವನದ ಮತ್ತೊಂದು ತಿರುವಿನಲ್ಲಿ ಸಾಗುತ್ತಿರುವ ನಿಮಗೆ ಕೊನೆಯದಾಗಿ ಹೇಳುವುದೊಂದೇ. ಇದು ಆರಂಭ. ಆರಂಭ ಉತ್ತಮವಾಗಿದ್ದರೆ ಗೆಲುವು ಖಚಿತ. ಸುಗಮದ ದಾರಿಯಲ್ಲಿ ಸಿಗುವ ಗೆಲುವಲ್ಲಿ ನಿಮ್ಮ ಶ್ರಮದ ಅರಿವು ನಿಮಗೆ ಆಗುವುದಿಲ್ಲ. ಆದ್ದರಿಂದ ನಿಮ್ಮ ದಾರಿಯಲ್ಲಿ ಬರುವ ಎಡರು ತೊಡರುಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗಿ. ಅಂತಹ ಪಯಣ ಬಹುದಿನಗಳವರೆಗೆ ನಿಮಗೆ ನೆನಪಾಗಿರುತ್ತದೆ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ.
ಅದೇನೋ ಹೇಳ್ತಾರಲ್ಲ ಇಂಗ್ಲೀಷ್ ನಲ್ಲಿ….
ಮಿಸ್ ಯು ಲಾಟ್ ಮಕ್ಕಳೇ… ಲವ್ ಯು….
ಇಂತಿ ನಿಮ್ಮ ಪ್ರೀತಿಯ
ನಿಮ್ಮ ತಾಯಿ