ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿಯೇ ಬದಲಾವಣೆ ಕಾಣಿಸುತ್ತದೆ. ಆಯಾಯ ಋತುಗಳಿಗೆ ನಿಸರ್ಗವು ಬದಲಾಗುತ್ತಾ ಇರುವುದು ನಮಗೆ ತಿಳಿದ ವಿಚಾರವೇ ಆಗಿದೆ.
ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಿದ ಮರಗಳು ಬೋಳಾಗಿ ಕಂಡುಬರುತ್ತವೆ. ವಸಂತ ಋತು ಬಂದಾಗ ಎಲೆಗಳು ಮತ್ತೆ ಚಿಗುರಿ ಹೊಸತನದಿಂದ ಕೂಡಿ ಲವಲವಿಕೆಯನ್ನು ತುಂಬುತ್ತದೆ.
ಕಾಲಗಳಲ್ಲೂ ಹಾಗೆಯೇ. ಮಳೆಗಾಲ ಬಂದಾಗ ಪ್ರಕೃತಿಯು ವರ್ಷಧಾರೆಯಲ್ಲಿ ಮಿಂದು ಹಸಿರು ಸೀರೆಯುಟ್ಟ ತರುಣಿಯಂದದಿ ಶೋಭಿಸುತ್ತಾಳೆ. ಚಳಿಗಾಲ ಬಂದಾಗ ಕುಳಿರ್ಗಾಳಿ ಬೀಸುತ್ತದೆ. ರಾತ್ರಿ ದೀರ್ಘವಾಗಿಯೂ, ಹಗಲು ಕಡಿಮೆ ಇರುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ವಾತಾವರಣದ ತಾಪಮಾನ ಏರುತ್ತದೆ. ಸೆಖೆಯನ್ನು ತಡೆದುಕೊಳ್ಳಲು ಆಗುವುದಿಲ್ಲ. ನೀರಿನ ಅವಶ್ಯಕತೆ ಹೆಚ್ಚಿ ನೀರಿಗಾಗಿ ಪರಿತಪಿಸುವಂತೆ ಮಾಡುತ್ತದೆ. ಜೀವ ಸಂಕುಲವಿಡೀ ನೀರಿಗಾಗಿ ಇದಿರು ನೋಡುತ್ತದೆ. ಗಿಡಮರಗಳು ಒಣಗಿ ಸಾಯುವ ಹಂತ ತಲುಪುತ್ತದೆ. ಎಷ್ಟು ನೀರುಣಿಸಿದರೂ ಸಾಕಾಗುವುದಿಲ್ಲ. ಆಯಾಯ ಕಾಲಕ್ಕೆ ತಕ್ಕಂತೆ ಬಟ್ಟೆ,ಆಹಾರ,ಜೀವನ ವಿಧಾನದಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ದಪ್ಪವಾದ ಬಟ್ಟೆ ಧರಿಸಿ, ಹೊರಗೆ ಹೋಗಲು ಛತ್ರಿಯ ಅವಶ್ಯಕತೆ ಇರುತ್ತದೆ. ಚಳಿಗಾಲದಲ್ಲಿ ಉಣ್ಣೆಯ ಬಟ್ಟೆ,ಹೊದೆಯಲು ಕಂಬಳಿ ಬೇಕಾಗುತ್ತದೆ. ಬೇಸಿಗೆಯಲ್ಲಿ ತೆಳುವಾದ ಹತ್ತಿಯ ಬಟ್ಟೆಗಳು ಸೂಕ್ತ ಎನಿಸುತ್ತವೆ.
ಪರಿಸ್ಥಿತಿಗೆ ತಕ್ಕಂತೆ ನಾವೂ ಬದಲಾಗಬೇಕು. ಕಾಲವು ಈಗ ಚಲಿಸುವುದಲ್ಲ. ಓಡಲು ಆರಂಭವಾಗಿದೆ. ಅದರ ಜೊತೆಗೆ ನಾವು ಅನಿವಾರ್ಯವಾಗಿ ಓಡಲೇಬೇಕು.
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಎಷ್ಟು ನೆಮ್ಮದಿಯಿಂದ ಇದ್ದರು? ಅವರು ಆಗ ಯಾವುದೇ ಸೌಕರ್ಯ ಹೊಂದಿರಲಿಲ್ಲ. ಪ್ರಕೃತಿಗೆ ನಿಕಟವಾಗಿದ್ದರು. ಭೂಮಿತಾಯಿಯನ್ನು ದೇವರು ಎಂದು ನಂಬುತ್ತಿದ್ದರು. “ಕಾಯಕವೇ ಕೈಲಾಸ “ಎಂದು ನಂಬಿ ಅದನ್ನು ಕಾರ್ಯಗತ ಮಾಡಿ ದುಡಿದು ಉಣ್ಣುತ್ತಿದ್ದರು. ಆಧುನಿಕತೆಯ ಲವಲೇಶ ಇಲ್ಲದೆ ಮುಗ್ಧರಾಗಿ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಉತ್ಸಾಹಿಗಳಾಗಿದ್ದರು. ಯಾವುದೇ ಖಾಯಿಲೆಯಿಲ್ಲದೆ ಆರೋಗ್ಯವಂತರಾಗಿ ನೂರು ವರ್ಷ ಬಾಳಿಬದುಕುತ್ತಿದ್ದರು.
ಆದರೆ ಇಂದು ಅಕಾಲದಲ್ಲೇ ಅನಾರೋಗ್ಯ,ರೋಗ ರುಜಿನ ಖಿನ್ನತೆ ಮಾನವನನ್ನು ಕಾಡುತ್ತಿದೆ. ಇದಕ್ಕೆ ತಂತ್ರಜ್ಞಾನದ ಪ್ರವೇಶ ಮುಖ್ಯ ಕಾರಣ ಎನ್ನಬಹುದು. ಹಿಂದೆ ಜನರು ತಿನ್ನುವ ಅನ್ನಕ್ಕಾಗಿ ರೆಟ್ಟೆಮುರಿದು ದುಡಿಯುತ್ತಿದ್ದರು. ಈಗ ಜನರು ತಿನ್ನುವ ಅನ್ನಕ್ಕಾಗಿ ದುಡಿಯದೆ ತಿಂದ ಅನ್ನವನ್ನು ಜೀರ್ಣಿಸಲು ಕಸರತ್ತು ಮಾಡಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ. ಜಿಮ್ ಗಳಲ್ಲಿ,ಗರಡಿಗಳಲ್ಲಿ ವ್ಯಾಯಾಮ ಮಾಡಿ ಮೈ ದಂಡಿಸುವುದು ಮಾಮೂಲಾಗಿ ಹೋಗಿದೆ. ಇದರಿಂದ ಏನು ಲಾಭ?
ಇಂದು ಮೊಬೈಲ್ ಬಂದ ನಂತರ, ಸಣ್ಣವರಿಂದ ಹಿಡಿದು ವೃದ್ಧರವರೆಗೂ ಕೂಡಾ ಅದರ ದಾಸರಾಗಿ ತಮ್ಮ ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾರಿಗೂ ಈಗ ಬಿಡುವು ಎಂಬುದೇ ಇಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ಇವರಿಗೆ ಸಾಲದಾಗಿದೆ. ವಾಟ್ಸ್ ಆ್ಯಪ್,ಫೇಸ್ ಬುಕ್,ಇನ್ ಸ್ಟಾಗ್ರಾಂ ಅಂತ ಜನತೆ ಮುಳುಗಿದೆ. ಹಿಂದೆ ಶಾಲೆಗೆ ರಜೆ ಸಿಕ್ಕಿದಾಗ ಎಲ್ಲಾ ಮಕ್ಕಳು ಅಜ್ಜನ ಮನೆಗೆ ಓಡುತ್ತಿದ್ದರು. ಅಲ್ಲಿ ಗದ್ದೆ,ತೋಟ,ಗುಡ್ಡೆಗಳಲ್ಲಿ ಓಡಾಡಿ ಕೈಗೆ ಸಿಕ್ಕಿದ ಹಣ್ಣುಗಳನ್ನು ತಿಂದು ಸಂಭ್ರಮಿಸುತ್ತಿದ್ದರು. ಈಗ ಮಕ್ಕಳಿಗೆ ಅಜ್ಜನ ಮನೆಯ ದಾರಿಯೇ ಮರೆತು ಹೋಗಿದೆ. ಯಾರಿಗೂ ಯಾರ ಬಳಿಯೂ ಮಾತನಾಡಲು ಪುರುಸೊತ್ತಿಲ್ಲ. ಈಗ ಟ್ಯೂಷನ್, ಪರೀಕ್ಷೆಯ ಒತ್ತಡ,ಅಂಕಗಳಿಕೆಗೆ ಒತ್ತು ನೀಡಲಾಗುತ್ತಿದೆ. ಪೋಷಕರಲ್ಲಿ ತಮ್ಮ ಮಕ್ಕಳ ಅಂಕ ಸ್ಥಾನದ ಬಗ್ಗೆ ಪೈಪೋಟಿ ನಡೆದಿದೆ. ಜೀವನ ಎಂದರೆ ಇಷ್ಟೆಯಾ? ಹಾಗಾದರೆ ಹಿಂದಿನ ಮಕ್ಕಳು ಬುದ್ಧಿವಂತರಾಗಿ ಬೆಳೆದಿಲ್ಲವೇ? ಆರೇಳು ಮೈಲು ನಡೆದು ಶಾಲೆಗೆ ಹೋಗುತ್ತಿದ್ದ ಕಾಲವೊಂದಿತ್ತು. ಹತ್ತು ಪೈಸೆ ಐಸ್ ಕ್ಯಾಂಡಿ ತಿಂದರೆ ಅದೇ ದೊಡ್ಡ ಸಂತೋಷದ ವಿಷಯ ಆಗುತ್ತಿತ್ತು. ಆದರೆ ಈಗ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಎ.ಸಿ.ಯ ಅಡಿ ಕುಳಿತು ಮೃಷ್ಟಾನ್ನ ಭೋಜನ ಸವಿದರೂ ಓಂ ಸಂತೋಷ ಸಿಗಲಾರದು. ಹಾಗಾದರೆ ಈ ಸಂತೋಷ ಎನ್ನುವುದು ವಸ್ತುವಿನಲ್ಲಿ ಇಲ್ಲ. ಅದರ ಹಿಂದಿನ ಮತ್ತು ಅದನ್ನು ಕೊಟ್ಟವರ ಪ್ರೀತಿಯಲ್ಲಿ ಇದೆ ಎಂದು ಸ್ಪಷ್ಟವಾಯಿತಷ್ಟೇ. ಆಗ ಸಣ್ಣ ಸಣ್ಣ ಸಂಗತಿಯಲ್ಲೂ ದೊಡ್ಡ ದೊಡ್ಡ ಖುಷಿಯಿತ್ತು. ಬಾಲ್ಯವನ್ನು ಮರಕೋತಿ ಆಟ, ಕಣ್ಣುಮುಚ್ಚಾಲೆ,ಡೊಂಕ, ಕುಟ್ಟಿದೊಣ್ಣೆ,ಕಬಡಿ, ಕಲ್ಲಾಟ,ಚೆನ್ನೆಮಣೆ,ಚದುರಂಗ ಹೀಗೆ ಮೊದಲಾದ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈಗ ಆ ಆಟಗಳೆಲ್ಲಾ ಮಂಗಮಾಯವಾಗಿದೆ. ಕ್ರಿಕೆಟ್ ಮಾತ್ರ ಆಟ ಎಂಬ ಮಟ್ಟಿಗೆ ಮನಸ್ಥಿತಿ ಮುಟ್ಟಿದೆ. ಇಂದಿನ ಮಕ್ಕಳು ಸುಂದರವಾದ ಬಾಲ್ಯದಿಂದ ವಂಚಿತರಾಗಿದ್ದಾರೆ. ತೆಂಗಿನ ಗರಿಯಿಂದ ಗಿರಿಗಿಟ್ಲಿ ಮಾಡುವುದು,ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿ ಬಿಡುವುದು ಮುದದ ಕ್ಷಣವಾಗಿತ್ತು. ಮನೆ ತುಂಬಾ ಜನರಿದ್ದರು. ಮನೆ ದೊಡ್ಡದಾಗಿತ್ತು. ತಿನ್ನಲು ಕಡಿಮೆ ಆದರೂ ನೆಮ್ಮದಿಯಿತ್ತು. ಇಂದು ಅದೇ ವಿರೋಧವಾಗಿದೆ. ಇಂದು ಮಕ್ಕಳಿಗೆ ಪುಸ್ತಕಗಳು ಹೊರೆಯಾಗಿದೆ. ಸ್ವಾತಂತ್ರ್ಯವಿಲ್ಲದಂತಾಗಿದೆ. ಇದೇ ಬದಲಾವಣೆ.
ಹಾಗಾದರೆ ಬದಲಾವಣೆ ಬೇಡವೇ? ಖಂಡಿತಾ ಬೇಕು. ಆದರೆ ನಮ್ಮ ಮೂಲ ಸಂಸ್ಕೃತಿಯನ್ನು ನಾವೆಂದಿಗೂ ಮರೆಯಬಾರದು. ಹಳೇಬೇರು ಹೊಸ ಚಿಗುರು ಸೇರಿದರೆ ಮಾತ್ರ ಬಾಳಿಗೊಂದು ಅರ್ಥ.
ಇಂದಿನ ಯುವಜನತೆ ಪಾಶ್ಚಾತ್ಯರ ಅಂಧಾನುಕರಣೆ ಮಾಡಿ ತಪ್ಪು ದಾರಿಗೆ ಹೋಗಿ ಎಡವುದು ಎಷ್ಟು ಸರಿ? ಇಂತಹ ಬದಲಾವಣೆ ಬೇಕಾ? ಮೈ ಮುಚ್ಚುವಂತೆ ಬಟ್ಟೆ ಧರಿಸುವುದು ಭಾರತೀಯ ಸಂಸ್ಕೃತಿ. ಅದನ್ನು ಬಿಟ್ಟು ಮೈ ಕಾಣುವಂತೆ ಬಿಚ್ಚಿಡುವುದು ಪಾಶ್ಚಾತ್ಯ ಸಂಸ್ಕೃತಿ. ಅದಕ್ಕೆ ನಾವು ಮಾರುಹೋಗಬಾರದು. ಎಷ್ಟೋ ವಿದೇಶೀಯರು ಭಾರತವು ಪುಣ್ಯ ಭೂಮಿ ಅಂತ ಒಪ್ಪಿಕೊಂಡು ಇಲ್ಲಿನ ಸಂಸ್ಕೃತಿ,ಆಚಾರ, ವಿಚಾರ, ಯೋಗ,ಆಯುರ್ವೇದಗಳನ್ನು ಅಭ್ಯಾಸ ಮಾಡಿ ಇಲ್ಲೇ ನೆಲೆಸಲು ಮನಸ್ಸು ಮಾಡಿದ ನಿದರ್ಶನ ಎಷ್ಟೋ ಇವೆ. ಅವರೆಲ್ಲಾ ಒಳ್ಳೆಯದನ್ನು ನಮ್ಮಿಂದ ಕಲಿತರೆ,ನಾವು ಅವರಿಂದ ಕಲಿಯುವುದು ಏನನ್ನು? ಆತ್ಮಾವಲೋಕನ ಮಾಡಿ ನೋಡಿಕೊಂಡರೆ ಈ ಬದಲಾವಣೆ ನಮಗೆ ತರವೇ?
ಹುಟ್ಟುಗುಣ ಬೆಟ್ಟ ಹತ್ತಿದರೂ ಬಿಡದು ಎಂದು ಗಾದೆ ಇದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹಿರಿಯರು ನುಡಿದಿದ್ದಾರೆ.
ಯತ್ರ ನಾರ್ಯಸ್ತು ಪೂಜ್ಯಂತೇ ತಂತ್ರ ರಮಂತೇ ದೇವತಾ:
ಎಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನ ಇರುವುದೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ.
ಇದು ಅನಾದಿಕಾಲದಿಂದಲೂ ಬಂದ ಉಕ್ತಿ. ಆದರೆ ಇಂದು ಹೆಣ್ಣಿಗೆ ಗೌರವ,ಸ್ಥಾನಮಾನ ಎಲ್ಲಿದೆ? ಹೆಣ್ಣು ಮಗು ಎಂದು ತಾತ್ಸಾರ ಮಾಡುವವರು ಎಷ್ಟು ಜನ ಬೇಕು? ಹಾಗಾದರೆ ಬದಲಾವಣೆ ಹೇಗೆ? ಎಲ್ಲಿಂದ ಬದಲಾವಣೆ ತರಬೇಕು? ಪ್ರತಿ ವ್ಯಕ್ತಿಯೂ ಬದಲಾಗಬೇಕು. ತಪ್ಪನ್ನು ತಿದ್ದಿ ಮುನ್ನಡೆಯಬೇಕು. ಎಲ್ಲರೊಳಗೊಂದಾಗಿ ಬಾಳಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣಿಗೆ ವಿದ್ಯಾಭ್ಯಾಸ ಬೇಕು. ಅಂದೂ ಇಂದೂ ಪುರುಷ ಸಮಾನ ಸಮಾಜವೇ ತಾಂಡವವಾಡುತ್ತಿದೆ. ಹೆಣ್ಣು ಇಂದು ನಾಲ್ಕು ಗೋಡೆಗೆ ಸೀಮಿತವಾಗದೆ ಹೊರ ಬಂದು ದುಡಿದರೂ ಅವಳ ಮೇಲಿನ ದಬ್ಬಾಳಿಕೆ ಕೊನೆಗಾಣಲಿಲ್ಲ. ಇಂದಿಗೂ ಅತ್ಯಾಚಾರ,ಲೈಂಗಿಕ ಕಿರುಕುಳ,ಲೈಂಗಿಕ ದೌರ್ಜನ್ಯ ಆಗುತ್ತಲೇ ಇದೆ. ಯಾಕೆ? ಹಾಗಾದರೆ ಯಾರು ಬದಲಾಗಬೇಕು? ನೋಡುವ ದೃಷ್ಟಿ ಬದಲಾಗಬೇಕು. ಹೆಣ್ಣು ತಾಯಿ ಸಮಾನಳು ಎಂದು ಗೌರವಿಸಲು ಕಲಿಯಬೇಕು. ಹಾಗೆಯೇ ಹೆಣ್ಣು ಸ್ವಾತಂತ್ರ್ಯ ಸಮಾನತೆಯ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡದೆ ತನ್ನ ಇತಿಮಿತಿಯನ್ನು ಅರಿಯಬೇಕು. ತಾನು ಯಾರಿಗೇನು ಕಮ್ಮಿ? ಎಂದು ಬಿಗುಮಾನ ತೋರಿಸಿ ಪುರುಷರ ಮೇಲೆ ದಬ್ಬಾಳಿಕೆ ಮಾಡುವುದನ್ನು ಬಿಡಬೇಕು.
ಇಂದು ದಾಂಪತ್ಯ ಜೀವನದಲ್ಲಿ ವಿಚ್ಛೇಧನದ ಪ್ರಕರಣಗಳು ಸರ್ವೇಸಾಮಾನ್ಯ. ಇದಕ್ಕೆ ಕಾರಣ ಅವರೊಳಗಿನ ಅಹಂ. ಅದನ್ನು ಬಿಟ್ಟರೆ ಒಳ್ಳೆಯದು. ಹಿಂದೆ ಗಂಡ ಹೆಂಡತಿ ಅನುಸರಿಸಿಕೊಂಡು ಹೋಗುತ್ತಿದ್ದರು. ಸಣ್ಣ ಪುಟ್ಟ ವಿಷಯ, ಸಮಸ್ಯೆ ನಾಲ್ಕು ಗೋಡೆಯ ಹೊರಗೆ ಬರುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಅಯೋಮಯವಾಗಿದೆ. ಗಂಡ ಹೆಂಡತಿ ಮದುವೆ ಆದ ಮಾರನೇ ದಿನವೇ ಜಗಳ ಆಡಲು ಆರಂಭ ಮಾಡುತ್ತಾರೆ. ಹೆಣ್ಣು ಕಲಿತ ವಿದ್ಯೆ ಉನ್ನತಿಗೆ ಸಾಧನವಾಗಬೇಕೇ ಹೊರತು ದಬ್ಬಾಳಿಕೆಗಲ್ಲ. ಯಾವುದು ಸರಿ? ಯಾವುದು ತಪ್ಪು? ಎಂಬುದನ್ನು ಅರಿತು ಮುನ್ನಡೆದರೆ ಮಾತ್ರ ಯಶಸ್ಸು ಶತಸ್ಸಿದ್ಧ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತಂತೆ. ಹಾಗಾಗಬಾರದು. ಗಂಡ ಹೆಂಡತಿ ರಥದ ಎರಡು ಗಾಲಿಗಳು. ಸಾಮಾನ್ಯವಾಗಿ ಸಾಗಿದರೆ ಮಾತ್ರ ಸಲೀಸಾಗಿ ಹೋಗಬಹುದು. ಸೋತು ಗೆಲ್ಲುವುದರಲ್ಲಿರುವ ಸಂತೋಷ ಅನುಭವಿಸಿದವರಿಗೇ ತಿಳಿಯುವುದು. ಸೋಲನ್ನು ಒಪ್ಪಿಕೊಳ್ಳಲು ಬಿಗುಮಾನ ಬಿಡಿ. ಸ್ವಾಭಿಮಾನ ಬಿಡಿ. ಸರಳವಾಗಿ ಬದುಕುವುದನ್ನು ಕಲಿಯಿರಿ. ಆಡಂಬರದ ಜೀವನ ನಮಗೆ ಬೇಡ. ಇದ್ದುದರಲ್ಲೇ ತೃಪ್ತಿ ಇರಬೇಕು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು.
ಮಾನವನ ಜೀವನ ನೀರ ಮೇಲಿನ ಗುಳ್ಳೆಯಂತೆ ನಶ್ವರ. ಇರುವುದೊಂದೇ ಜೀವನ. ಆಯುಷ್ಯವನ್ನು ಕಂಡವರಿಲ್ಲ. ಆದ್ದರಿಂದ ಹೃದಯವಂತರಾಗಿ, ಪರೋಪಕಾರಿಯಾಗಿ ಬಾಳಿ. ನಾವು ಹುಟ್ಟಿದಾಗ ನಾವು ಅತ್ತರೆ, ಇತರರು ಸಂತೋಷದಿಂದ ನಗುತ್ತಿರುತ್ತಾರೆ. ಆದರೆ ನಾವು ಸತ್ತಾಗ ಇತರರು ಅಳುವಂತೆ ನಮ್ಮ ಜೀವನ ಇರಬೇಕು. ನಾಲ್ಕು ಜನರ ಬಾಯಲ್ಲಿ ನಮ್ಮ ಹೆಸರು ಉತ್ತಮವಾಗಿ ಗುರುತಿಸಿಕೊಳ್ಳಬೇಕು. ಅದೇ ಸಾರ್ಥಕತೆ.
ಕೇವಲ ಪದವಿ ಗಳಿಸಿ ದೊಡ್ಡ ಉದ್ಯೋಗ ಹೊಂದುವುದು ಸಾಧನೆ ಅಲ್ಲ. ಕುಟುಂಬದಲ್ಲಿ ಹಿರಿಯರಿಗೆ ಗೌರವ ಕೊಟ್ಟು ಅವರ ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಂಡರೆ ಅದು ಸಾಧನೆ.
ಕಿರಿಯರಿಗೆ ಪ್ರೀತಿ ಕೊಟ್ಟು ಅವರನ್ನು ಮುಂದಿನ ಜನಾಂಗದ ಸತ್ಪ್ರಜೆಯನ್ನಾಗಿ ರೂಪಿಸಿದರೆ ನಮ್ಮ ಬದುಕು ಪಾವನವಾಗುವುದು. ದೇವರ ದರ್ಶನಕ್ಕೆಂದು ಎಲ್ಲೆಲ್ಲೋ ಗುಡಿಗೋಪುರಗಳನ್ನು ಸುತ್ತಬೇಕೆಂದಿಲ್ಲ. ದೀನದಲಿತರಲ್ಲಿ ದೇವರನ್ನು ಕಾಣಬಹುದು. ಮಂತ್ರ ಹೇಳುವ ಬಾಯಿಗಿಂತ ಸಹಾಯ ಮಾಡುವ ಕರಗಳು ಶ್ರೇಷ್ಠ.
ನಾವು ನಮ್ಮಮೂಗಿನ ನೇರಕ್ಕೆ ಯೋಚನೆ ಮಾಡಿ ಬದುಕಿದರೆ ಪ್ರಯೋಜನವಿಲ್ಲ. ಸಮಾಜದಲ್ಲಿ ಬದುಕುವುದು ಒಂದು ಕಲೆ. ಹಾಗೆಂದು ಎಲ್ಲರನ್ನು ಮೆಚ್ಚಿಸಬೇಕೆಂದಲ್ಲ. ಜನರನ್ನು ಮೆಚ್ಚಿಸಲು ಜನಾರ್ದನನಿಂದಲೂ ಆಗದು. ಆದರೂ ಹತ್ತು ಜನರು ಮೆಚ್ಚುವ ಹಾಗೆ ಬದುಕಿ ತೋರಿಸಬಹುದು ತಾನೇ? ಎಷ್ಟೋ ಸವಾಲುಗಳು ಎದುರಾದರೂ ಅಂಜಬಾರದು. ಸುಖ ಬಂದಾಗ ಹಿಗ್ಗದೆ,ಕಷ್ಟ ಬಂದಾಗ ಕುಗ್ಗದೆ ಸಮಸ್ಥಿತಿಯಲ್ಲಿ ನಡೆದರೆ ಉತ್ತಮ. ಸತ್ಯ ಎಂದಿಗೂ ಪ್ರಕಾಶಮಾನ. ಸತ್ಯಮೇವ ಜಯತೇ. ಅದು ಇಂದು ಪರಿಸ್ಥಿತಿಗೆ ಸಿಲುಕಿ ಮುಚ್ಚಿದ್ದರೂ ಎಂದಾದರೊಂದು ದಿನ ಅದು ಬೆಳಗಿಯೇ ಬೆಳಗುತ್ತದೆ. ಸುಳ್ಳಿಗೆ ಆಯುಷ್ಯ ಕಮ್ಮಿ. ಕೆಲವು ಸಲ ಮೌನಿಯಾಗಿರಬೇಕು. ಕಾಲವು ಎಲ್ಲರಿಗೂ ಪಾಠ ಕಲಿಸುತ್ತದೆ. ಕಾಲವೇ ಪರಮೌಷಧಿ. ಪ್ರಯತ್ನ ಪಟ್ಟು ಕೂಡಾ ನಮ್ಮಿಂದ ಕಾರ್ಯ ಆಗದಿದ್ದರೆ ಕಾಲಕ್ಕೆ ಬಿಡಿ. ಕಾಲವೇ ಉತ್ತರ ಕೊಡುವುದು. ಯೋಗ ಕೂಡಿ ಬಂದಾಗ ಎಲ್ಲವೂ ಆಗುತ್ತದೆ. ಒಳ್ಳೆಯವರಾಗಿ ಬದಲಾಗಿ. ಬದಲಾವಣೆ ಸಂಸ್ಕಾರದಿಂದ ಕೂಡಿರಲಿ.
ಬದಲಾವಣೆ ಜಗದ ನಿಯಮ ಸರಿ. ದಬ್ಬಾಳಿಕೆಯಿಂದ ಯಾರನ್ನೂ ಗೆಲ್ಲಲಾಗದು. ಹಠದಿಂದ ಆ ಕ್ಷಣಕ್ಕೆ ಗೆಲುವು ಸಿಕ್ಕಬಹುದು. ಆದರೆ ಆ ವ್ಯಕ್ತಿಯ ಪ್ರೀತಿ ಸಿಗದೆ ಕಳೆದುಕೊಳ್ಳುವೆವು. ಜಗತ್ತಿನಲ್ಲಿ ಪ್ರೀತಿಗೆ ಇರುವಷ್ಟು ಶಕ್ತಿ ಬೇರಾವುದಕ್ಕೂ ಇಲ್ಲ. ಸಹನೆ ಕೂಡಾ ಒಂದು ಪ್ರಬಲ ಅಸ್ತ್ರ. ಹೇಡಿತನವಲ್ಲ. ತಾಳಿದವನು ಬಾಳಿಯಾನು. ಹಾಗಾದರೆ ನಾವು ಉತ್ತಮ ಬದಲಾವಣೆ ಬಯಸಿ ಕಾಯುವ. ಸರ್ವೇ ಜನಾ: ಸುಖಿನೋ ಭವಂತು, ಕಾಲಾಯ ತಸ್ಯೈ ನಮಃ