ಕವನ ನನ್ನದಾಗಿತ್ತೆಂದು
ಬೀಗುವಾಗ
ತಿಳಿದಿರಲಿಲ್ಲ ಅದು-
ನನ್ನದಾಗಿತ್ತೆಂದು?
ಮುತ್ತಜ್ಜನ ಅಜ್ಜ
ಕಾಳುಣಿಸಿ ಪೊರೆದ
ಅಕ್ಷರದ ಹಕ್ಕಿ
ಓಲೆಗರಿ ಕೆದರುತ್ತ
ಹಾರಿ ಹಾರಿ
ತಾವು ಹುಡುಕುವ ಹಾದಿ!
ಗೂಡು ಕಟ್ಟಿದ ಮಮತೆ
ಮರಿಹಾಕಿ ಮರಿ ಹಾಕಿ
ಎಲ್ಲೆಂದರಲ್ಲಿ ಅಕ್ಷರಗಳ-
ಚೆಲ್ಲಾಪಿಲ್ಲಿ!
ಹಾರಿ ಬಂದ ಜೇನುಹಿಂಡು
ಕಾಲು ಸೋತು ಕೂತಿದ್ದಕ್ಕೆಲ್ಲ
ಜೇನುಗೂಡಿನೊಡೆತನ
ಲಭಿಸುವ ಹಾಗಿದ್ದಿದ್ದರೆ..
ಅಕ್ಷರದ ಮರಿ
ಬರೆದವನ ಒಳಗಿಂದ
ನೀರು ಹುಡುಕುತ ಜಾರಿ
ಪೊರೆದವನ ಮಡಿಲಿಗೆ;
ನೆಲ-ನೆಲಾಂತರದಿಂದ
ತಲ-ತಲಾಂತರದವರೆಗೆ!
ಕವನ ನನ್ನದಾಗಿತ್ತೆಂದು ಬೀಗುವಾ-
ಗ- ನಿಜಕ್ಕೂ
ತಿಳಿದಿರಲಿಲ್ಲ- ಅದು-
ನನ್ನದಾಗಿತ್ತೆಂದು?