ಸಂಜೆ ಬಾನಿನ ಕೆಂಪು ನೇಸರ
ನೀಲ ತಡಿಯಲಿ ಇಳಿಯುವಾಗ
ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ
ಎಳೆದರು ಬಾರದಾಗ ನೇಸರ
ಮರು ಮಾತಿಲ್ಲದೆ ಮೌನ
ಉಕ್ಕುಕ್ಕುವುದು ನೀಲ ಕಡಲ ತಡಿಯಾಗಿ
ಚಣಚಣವು ಸೇರಿ ಗಂಟೆಯಾಗಿ
ಕಾಲ ಮಾಗಿದರು ಬರಲಿಲ್ಲ ನೀನು
ಕೋಗಿಲೆಯು ಕೂಗಿಕೂಗಿ ಗೋಣುಮುರಿದು
ಬಿಡಿವಾರವಾಕಿಕೊಂಡಿತು ಶಾಂತವಾಗಿ
ಆಸೆಯಕ್ಕಿಗಳೆಲ್ಲ ಗುಟುಕುತಿಂದು
ಗೂಡಿಗೆ ಬಂದವು ಚಿಲಿಪಿಲಿಯಾಗಿ
ಚಕ್ರವಾಕ ಗಿಣಿಗೊರವಂಕ ಗುಬ್ಬಿ
ಕಾಗೆ ಗೂಬೆ ಗಿಡುಗ ಕೃಷ್ಣಪಕ್ಷಿಗಳು
ಸಾಲುಸಾಲು ಮುಗಿಲ ಮಾಲೆಹಾಕಿ
ಗಸ್ತು ಹೊಡೆದು ಪಥಸಂಚಲನ ಮಾಡಿದವು
ನಿನ್ನ ಸನಿಹವಿಲ್ಲದೊತ್ತು ಶೂನ್ಯ ನಕಶಿಕಾಂತ
ತಂಬಿಟ್ಟ ತುಟಿ ಬಿರಿದ ಕೆಂಪುಗಲ್ಲ
ಬೀಸುವ ತಂಗಾಳಿಯಲೆಗಳಲಿ ಕಂಪನಗುಡುವ ಶಾಂತ
ಕೊರಲು ಕೂಗಿನ ಗಾನಸಲ್ಲ
ಕಣ್ಣಂಚಿನ ನೀರು ಸುರಿದು
ನೈದಿಲೆಯ ಅಪ್ಪಿಹುದು
ನೀನಿಲ್ಲದೊತ್ತಲ್ಲಿ ವಿರಹದಾವಗ್ನಿ
ಸುಡುವ ನರಕಯಾತನೆ ಸುಗ್ಗಿ
ಕಡಲೊಳಗೆ ಕಲ್ಲೆಸದರೆ ಕಂಪನ ಅಲೆಗಳು
ನೀಲ ತಡಿಯಲಿ ಬಾಳೆಮೀನುಗಳು
ಎದ್ದವು ಒಲವಿನಲಿ ಜೊತೆಯಾಗಿ
ಆದರೂ, ನಾನು ತಡಿಯಲಿ ಏಕಾಂಗಿಯಾಗಿ…