ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?
ಮುದವಿಲ್ಲ ಎನಗೆ ಮಂದಾರದಂತೆ
ಸುಗಂಧವಿಲ್ಲ ಮಲ್ಲಿಗೆಯಂತೆ
ಹೆಣ್ಣಿನ ಮುಡಿಗು ಸೇರಲಾರೆ,
ದೇವರ ಅಡಿಗು ಬೀಳಲಾರೆ,
ಮಸಣದ ಹಾದಿಯನ್ನು ಹಿಡಿಯಲಾರೆ
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?
ಮುಳ್ಳನ್ನೆ ಅರಮನೆಯಾಗಿಸಿಕೊಂಡವಳು ನಾನು
ಕಾಡುವ ಕೈಗಳ ಭಯವೇನು
ನಿಂತಲ್ಲೇ ಅರಳುವೆ ತಾಪಕ್ಕೆ ಕರಗದೆ
ಜೀವಿಸುವೆ ಜೀವನದ ಕ್ಷಣಗಳನ್ನು ಪೈಪೋಟಿಗಿಳಿಯದೆ
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?
ಸಾರ್ಥಕತೆಯ ಮೆರೆವ ಹೂಗಳ ಸಾಲಿನವಳಲ್ಲ ನಾನು
ಕೇಡ ಬಯಸದೆ ಬದುಕುವುದೇ ಸಾರ್ಥಕತೆಯಲ್ಲವೇನು
ವಿಷವಿರಬಹುದು ಎನ್ನೊಳಗೆ ಕುಟಿಲತೆಯಿಲ್ಲ
ಮುಖವಾಡದ ಪ್ರಪಂಚದಲ್ಲಿ
ನಾನಿನ್ನೂ ನಾನಾಗಿಯೇ ಇರುವೆನು
ಕಾಡ ಹೂವು ನಾನು
ನಾ ಹೂವು ಎಂದರೆ ಆಶ್ಚರ್ಯವೇನು!?
ಶಿವಕೀರ್ತಿ
ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ತುಮಕೂರು ವಿಶ್ವವಿದ್ಯಾಲಯ
ಡಿ.ಜಿ.ಹಟ್ಟಿ, ಮಿಡಿಗೇಶಿ (ಹೋಬಳಿ), ನೇರಳೇಕೆರೆ (ಪೊಸ್ಟ್)
ಮಧುಗಿರಿ (ತಾ), ತುಮಕೂರು (ಜಿ)