ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕೆಂಬೆಳಗಿನ ಮೂಡಣದಲಿ’

ಕೆಂಬೆಳಗಿನ ಮೂಡಣದಲಿ
ಕಂಡ ರವಿಯ ಚಿತ್ರಿಕೆ
ಕಾಲ್ಚೆಂಡಿನ ರೂಪತಾಳಿ
ಬರುವುದೇನು? ಸ್ನಾನಕೆ ||ಪ||

ಅರಬ್ಬೀ ಸಮುದ್ರ ತಟದಿ
ಉಡುಪಿ ‘ಮಲ್ಪೆಬಂದರು’
ಮೀನುಗಾರಿಕೆಗೆ ಅಲ್ಲಿದೆ –
ದೊಡ್ಡ ಮಾರುಕಟ್ಟೆಯು

ಬೋಟುಗಳು, ಕ್ಯಾನುಗಳಲಿ
ಮೀನುತುಂಬಿ ತರುವವು
ದಂಡೆಯ ಅಂಗಡಿಗಳಲ್ಲಿ
ಮೀನು ಬಿಕರಿ ಗೊಳುವವು

ನಾವಿಕ ಚೆಂಗಪ್ಪನವಗೆ
ಚಿಕ್ಕಮಗಳು ರುಕ್ಮಿಣಿ
ಮೀನಿನ ಸಾರೂಟ ಸವಿದು –
ಕೇರಿಗವಳು ಕಣ್ಮಣಿ…

ಅಪ್ಪನೊಡನೆ ನಸುಕಿನಲ್ಲಿ
‘ರುಕ್ಕು’ ತಟಕೆ ಬಂದಳು
ಮೂಡಣದಾs ಕಡಲoಚಲಿ
ಏನೊ ನೋಡಿ ನೊಂದಳು…

ಅಪ್ಪ ಸೂರ್ಯಗೇಕೆ, ಉಪ್ಪು-
ನೀರಿನಲ್ಲಿ ಸ್ನಾನವು?
ಪಾಪ, ಅವನ ಮೈಗೆ ಉರಿತ!…
ಮೈಯೆಲ್ಲೆಡೆ ತುರಿಕೆಯು…

ದೊಡ್ಡವನೇನಲ್ಲ, ಸೂರ್ಯ –
ಕಾಲ್ಚೆಂಡಿನ ಗಾತ್ರವೆ!…
ಬೋಟಿನಲ್ಲಿ ಎತ್ತಿ ತರಲು
ನಾಳೆ ನಿನಗೆ ಸಾಧ್ಯವೇ?…

ಅಂಗಳದಾs ಬ್ಯಾರೆಲ್ನಲಿ
ಸಿಹಿನೀರೇ ತುಂಬಿದೆ
ಅವನದರಲಿ ಮುಳು – ಮುಳುಗಿಸಿ
ತಿಕ್ಕಿ ತೊಳೆದು ಕಳಿಸುವೆ!…

ಕಿರು ಪರಿಚಯ

ಪ್ರಭುರಾಜ ಅರಣಕಲ್ ಅವರು, ಕಲಬುರಗಿ ಜಿಲ್ಲೆಯ, ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದವರು. ‘ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್’ ಇಲಾಖೆಯಲ್ಲಿ ‘ಪಂಚಾ ಯತ ವಿಸ್ತರಣಾಧಿಕಾರಿಯಾಗಿ’ ನಿವೃತ್ತರು. ಪ್ರಕಟಿತ ಕೃತಿಗಳು; ‘ಮೌನ ನುಂಗುವ ಶಬ್ದಗಳು’ ಮತ್ತು ‘ಹಾಡುಮರೆತ ಕೋಗಿಲೆ’ ಕವಿತಾ ಸಂಕಲನಗಳು. ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
Shantalingappa Patil
27 June 2023 11:19

ಪ್ರಭುರಾಜ ಅರಣಕಲ್ ಕಲಬುರ್ಗಿಯವರು, ಕವನ ತುಂಬಾ ಚೆನ್ನಾಗಿದೆ.

ಪ್ರಭುರಾಜ ಅರಣಕಲ್
4 July 2023 09:54

ಧನ್ಯವಾದಗಳು, ಶಾಂತಲಿಂಗಪ್ಪ ಪಾಟೀಲರೆ, ತಮ್ಮಪ್ರತಿಕ್ರಿಯೆಗೆ.
–ಪ್ರಭುರಾಜ ಅರಣಕಲ್
🌺🌻🙏🌻🌺

0
    0
    Your Cart
    Your cart is emptyReturn to Shop