ಕತ್ತಲೆಂಬ ಅಂಧಕಾರವನ್ನು ದೂರ ಮಾಡಿ
ಬೆಳಕಿನ ಸುಜ್ಞಾನ ದೀಪವನ್ನು ಕೃಪೆ ಮಾಡಿ
ನಂಬಿ ಬಂದ ಶಿಷ್ಯರನು ಸತತವಾಗಿ ಕಾಪಾಡಿ
ಸನ್ಮಾರ್ಗವನು ತೋರಿಸುವ ಗುರುವಿನ ಕೈ ಹಿಡಿ
ಗುರುವಿನ ಬಲವೊಂದಿದ್ದರೆ ಗೆಲುವು ನಿಶ್ಚಿತ
ಹಿಂದೆ ಗುರು, ಮುಂದೆ ಗುರಿಯಿರೆ ಕಾರ್ಯ ಸಾಧಿತ
ಗುರು ಹಿರಿಯರ ಆಶೀರ್ವಾದವಿದ್ದಲ್ಲಿ ಜೀವನ ಹಿತ
ನೆನೆಯಬೇಕು ಬಾಳಿನಲಿ ಸದ್ಗುರುಗಳ ಸತತ
ಗುರುವು ಶಿಷ್ಯನ ಮನಸ್ಸಿಗೆ ನಂದಾದೀಪ
ಧಾರೆಯೆರೆಯುವರು ತನ್ನಲ್ಲಿನ ಜ್ಞಾನದೀಪ
ಬೆಳಗಲಿ ಶಿಷ್ಯನಲಿ ಸನ್ಮಾರ್ಗದ ದಾರಿದೀಪ
ಹೃನ್ಮನದಲಿರಲಿ ಕುಲಗುರುಗಳು ಜ್ಯೋತಿರೂಪ
ಶಿಶು ತಾಯಿಯ ಗರ್ಭದಿಂದ ಇಳೆಗೆ ಪಾದಾರ್ಪಣೆ
ಅರಿವಿನಿಂದ ಉತ್ತಮ ಪ್ರಜೆಯಾಗಿ ಲೋಕಾರ್ಪಣೆ
ಜೀವ ಕೊಟ್ಟು ಬದುಕ ಕಲಿಸಿಪ ದೇವಗೆ ಆತ್ಮಾರ್ಪಣೆ
ನಿಷ್ಕಲ್ಮಶ ಮನದಲಿ ಹೃದಯವಿದು ಗುರುಸಮರ್ಪಣೆ.