ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

ಅಂದು…
ಒಂದು ಸಣ್ಣ ಬೀಜವಾಗಿ
ಮಣ್ಣಿನ ಕಣಕಣಕಣಗಳ ನಡುವೆ ಅಡಗಿ
ಕಾಲಾಂತರದಿ ಧ್ಯಾನಿಸಿ
ಮುಗಿಲ ಮೇಘ ತುಡಿದು
ಹನಿಹನಿದು ಮಳೆಯಾಗಿ ಇಳೆಗೆ ಸುರಿದು
ಜೀವ ಅಂಕುರಿಸಿ, ಮೊಳಕೆಯಾಗಿ
ಭುವಿಯ ಅಂತರಾಳದಿ
ಬೇರಿನ ವೈಭವ ಮಾಗಿ
ಮಹಾವೃಕ್ಷವಾಗಿದ್ದೆ ನಾನು

ಹೂ ಮುಡಿದು, ಹಣ್ಣು ಹಡೆದು
ಜೀವರಾಶಿಗಳಿಗೆ ಆಸರೆಯಾಗಿ
ದಣಿದ ದೇಹಗಳಿಗೆ ನೆರಳಾಗಿ
ಇಳೆಗೆ ಮಳೆಯ ಕರೆವ ಕರವಾಗಿ
ನಿಮ್ಮೆಲ್ಲರ ಜೀವಕೆ ಉಸಿರ ತುಂಬುವ
ಪ್ರಕೃತಿಯಾಗಿದ್ದೆ ನಾನು

ಇಂದು…
ಎಲ್ಲರ ಸ್ವಾರ್ಥಕ್ಕೆ ಸರಕಾಗಿ
ನಿಮ್ಮ ಮನೆಗಳ ಕಿಟಕಿ, ಬಾಗಿಲು
ಕುರ್ಚಿ, ಮೇಜು, ಮಂಚಗಳಾಗಿ
ಸೌದೆ, ಉರುವಲು
ಮತ್ತೇನೇನೋ ಆಗಿ

ನಾ ಜೀವಂತವಿರುವಾಗಲೇ
ಕೊಡಲಿ ಪೆಟ್ಟು ಕೊಟ್ಟಿರಿ
ನನಗೂ ಜೀವವಿದೆಯೆಂದು ಚೀರಿದರೂ
ಕೇಳಿಸಿಕೊಳ್ಳದೆ ಹೋದಿರಿ
ಗರಗಸದಿ ಕೊರೆದು ಹಿಂಸಿಸಿದಿರಿ
ಭೂಮಿ ಆಗಸದ ನನ್ನ ನಂಟನ್ನು ಕಳಚಿ
ಯಂತ್ರಗಳ ಬಳಸಿ
ಉರುಳಿಸಿ ಬಿಟ್ಟಿರಿ

ಎಲೆಎಲೆಯನ್ನು ಬಿಡಲಿಲ್ಲ
ಬೇರನ್ನೂ ಉಳಿಸಲಿಲ್ಲ
ಅಷ್ಟು ಸಾಲದೆಂಬಂತೆ
ತುಂಡು ತುಂಡಾಗಿ ಕತ್ತರಿಸಿ
ಮೊಳೆ ಹೊಡೆದಿರಿ
ಕಸವಾಗಿಸಿ ಎಸೆದಿರಿ
ಬೆಂಕಿಗೆ ಸುಟ್ಟು ಬೂದಿಯಾಗಿಸಿದಿರಿ
ನನ್ನೊಟ್ಟಿಗೆ ಏನೆಲ್ಲಾ ಮಾಡಿದಿರಿ
ಎಷ್ಟೆಲ್ಲಾ ವಿಕೃತಿ ಮೆರೆದಿರಿ

ನಾಳೆಯೂ ನಾನು ಇರುವೆ
ಕಡಿದರು, ಸುಟ್ಟರೂ
ನೋವಾಗದ ಕೇವಲ ಕೊರಡಾಗಿ
ಬಾಗಿಸಿದಂತೆ ಬಾಗಿ
ನಿಮ್ಮ ಸ್ವಾರ್ಥಕ್ಕೆ ಶರಣಾಗಿ
ಮನುಜಕುಲದ ಬಳಕೆಯ
ಕೇವಲ ವಸ್ತುವಾಗಿ
ಇರುವೆನೆಂದರೆ ಇರುವೆನಷ್ಟೇ
ಜೀವವಿಲ್ಲದ, ಆತ್ಮವಿಲ್ಲದ
ಶವವಾಗಿ…

ನೀವು ಮರೆಯಬಹುದು
ಈಗಾಗಲೇ ಮರೆತಿರಲುಬಹುದು
ಆದರೆ ನನಗಿನ್ನೂ ನೆನಪಿದೆ
ನಾನೊಮ್ಮೆ ಮಹಾವೃಕ್ಷವಾಗಿದ್ದೆ

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
Banu
10 June 2023 08:01

ಅರ್ಥಪೂರ್ಣವಾಗಿದೆ

Shrikanth
6 June 2023 08:46

ಚೆನ್ನಾಗಿದೆ

Triveni
5 June 2023 13:43

Nice

Chandan
5 June 2023 13:38

ಚೆನ್ನಾಗಿದೆ

0
    0
    Your Cart
    Your cart is emptyReturn to Shop