ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ
ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ
ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ
ಬಿಡುವಿಲ್ಲದೆ ಇಳೆಗೆ ಸುರಿಯುತಿಹೆ ಏಕೆ
ಪ್ರೇಮಿಗಳ ಮನ ಹಸನಾಗಿಸೊ ಪ್ರೇಮಧಾರೆ
ರೈತರ ಮನದಿ ಸಂತಸವ ತರುವ ಹರ್ಷಧಾರೆ
ವರುಣನಿಗೆ ವಸುಂಧರೆಯ ಒಲವಿನ ಕರೆ
ಸುರಿದಾಗ ಸೋನೆಮಳೆ ಇಳೆಯೆಲ್ಲಾ ಬರಿ ಪನ್ನೀರೆ
ಊರುಕೇರಿಯೆಲ್ಲಾ ಸುಳಿದಾಡಿ ನೀ ಸೇರಿಹೆ ಎಲ್ಲಿಗೆ
ಜಗದ ಚೈತನ್ಯ ನೀನೆ ನೀ ಯಾವ ಊರೆ
ಓ ನೀರೆ ಈ ಭುವಿಗೆ ನೀ ಸುರಿಯೆ ಸೌಂದರ್ಯಧಾರೆ
ಮನೆಮನಗಳ ತೊಳೆಯೋ ನನ್ನ ಕಾವೇರಿ ನೀನೆ
ತುಂತುರು ಮಳೆಹನಿಯಾಗಿ ಎಲೆಯಲ್ಲಿ ಜಾರುತಿರೆ
ಆ ಮುತ್ತಹನಿಗಾಗಿ ಮನ ಸೋಲುತಿರೆ
ಸೌಂದರ್ಯದ ಖನಿ ಶಿವನ ಜಟೆಯಿಂದ ಹರಿದ ಪಾವನೀ
ನನ್ನ ಮನವ ಗೆದ್ದ ಮಳೆಯ ರಾಣಿ ನೀ ಮುತ್ತಹನಿ ನೀ
ನೆನಪಿನ ಮಳೆಯೇ ನೀ ಇನ್ನಷ್ಟು ಸುರಿಯೇ
ಮತ್ತೊಮ್ಮೆ ನಿನ್ನಲ್ಲಿ ಮಿಂದೇಳುವ ಬಯಕೆ
ಒಂದೇ ಸಮನೆ ಸುರಿದು ಪ್ರೀತಿ ಹುಟ್ಟಿಸುವುದು ಸರಿಯೇ
ನನಗಾಗಿ ಪ್ರತಿದಿನ ಪ್ರತಿಕ್ಷಣ ನೀ ಮೆಲ್ಲನೆ ಸುರಿಯೇ
ಓ ನನ್ನ ವರ್ಷ ಧಾರೆ