ಸಿಕ್ಕಾಪಟ್ಟೆ ಇದ್ದವು ಮಾತುಗಳು
ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು
ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು
ಎದೆಯ ಮಾತುಗಳನ್ನಲ್ಲ
ಎದೆಯೊಳಗೆ ಅಡ್ಡಾಡಿದವು
ತುಂಬಿಕೊಂಡವು ನದಿಯಂತೆ
ಸಂಯಮದ ಅಣೆಕಟ್ಟು ಕಟ್ಟಿದ್ದೇ ತೀವ್ರ ನೋವನ್ನು
ಎದೆ ನಡುವಲ್ಲಿ ನೆಟ್ಟವು
ಉಕ್ಕಿದವು
ಹೊರಳಿದವು
ಕೂಗಿದವು ಆಕ್ರೋಶದಲ್ಲಿ
ಕನಸಿನಲ್ಲಿ ಕನವರಿಸಿದವು
ಅಣೆಕಟ್ಟಿನ ತೂಬನ್ನು
ತೆರೆದು ಬಿಡು ಎಂದು
ಏನೂ ಹೇಳುವಂತಿರಲಿಲ್ಲ ನಾನು
ಅದು ಹರಟೆ ಕಟ್ಟೆಯ ಮಾತಾಗಿರಲಿಲ್ಲ
ಹಂಚುವಂತಿರಲಿಲ್ಲ
ಅದು ತೀರ್ಥಪ್ರಸಾದ ಆಗಿರಲಿಲ್ಲ
ಒಪ್ಪಿಸಬೇಕಿತ್ತು ನಿನ್ನೆದೆಗೆ
ನಿನ್ನ ಅಪ್ಪುಗೆ ಮಾತ್ರ ಬೇಕಿತ್ತು
ಈಗಲೂ ನೀನು ಬರುವ ಸೂಚನೆಗಳಿಲ್ಲ
ಅವುಗಳ ಭೋರ್ಗರೆತವೂ ನಿಂತಿಲ್ಲ