ಉಡತಡಿಯಿಂದ
ಉಡಿಯ ಜಾಡಿಸಿ
ವಿವಸ್ತ್ರಳಾಗಿ..
ಅಕ್ಕ ದಿಗ್ಗನೆದ್ದು
ಹೊರಟೆಬಿಟ್ಟಳು.!
ಹತ್ತಿರದ ಗೊಮ್ಮಟನ
ದಿಗಂಬರತೆ
ಪ್ರಭಾವವೋ..
ಆತ್ಮ ಲಿಂಗಾತೀತ
ಎಂಬ ಜ್ಞಾನದ
ಅರಿವೋ..ಕಾಣೆ
ಅಕ್ಕ ದಿಗ್ಗನೆದ್ದು
ಹೊರಟೆ ಬಿಟ್ಟಳು..!
ಕಾಮದ ತನುವ
ಕಡೆಗಣಿಸಿ
ಮೋಹದ ಮನವ
ಹದಗೊಳಿಸಿ
ಸಾವಿಲ್ಲದ ಕೇಡಿಲ್ಲದ
ಚೆಲುವನರಸಿ..
ಅಕ್ಕ ದಿಗ್ಗನೆದ್ದು
ಹೊರಟೆ ಬಿಟ್ಟಳು..!
ಕೌಶಿಕನೆಂಬ
ಲೌಕಿಕ ಗಂಡನ
ಧಿಕ್ಕರಿಸಿ..
ಮಲ್ಲಿಕಾರ್ಜುನ
ಎಂಬ ಆತ್ಮಸಂಗಾತನ
ಅರಸಿ..
ಅಕ್ಕ ದಿಗ್ಗನೆದ್ದು
ಹೊರಟೆ ಬಿಟ್ಟಳು..!
ಅಲ್ಲಗಳೆಯದಂತೆ
ಅಲ್ಲಮನಿಗೆ
ಉತ್ತರಿಸಿ
ಸ್ತುತಿನಿಂದೆಗಳ
ಸಂತೆಯ ಸದ್ದಿಗೆ
ಸಮಾಧಾನಿಸಿ..
ಅಕ್ಕ ದಿಗ್ಗನೆದ್ದು
ಹೊರಟೆ ಬಿಟ್ಟಳು..!
ಕಲ್ಯಾಣದಿಂ ಶ್ರೀಗಿರಿ
ಯತ್ತತ್ತ ನಲ್ಲನ-
ರಸಲು
ಬೆಟ್ಟದ ಮೇಲೆ ಇನಿಯ
ನೊಡನೆ ಮನೆಯ
ಮಾಡಲು..
ಅಕ್ಕ ದಿಗ್ಗನೆದ್ದು
ಹೊರಟೆ ಬಿಟ್ಟಳು..!
ಶುಕ-ಪಿಕಗಳಿಗೆಲ್ಲ
ವಿಳಾಸವ ಕೇಳಿ
ಕುಳಿತೆ ಬಿಟ್ಟಳು ಅಕ್ಕ
ಆತ್ಮನಭಿಸಾರಕೆ..
ಕದಳಿ ವನದಿ
ಚೆನ್ನಮಲ್ಲನ
ಬೆಳಕಲಿ ಬೆರೆತ
ಕೇಶಾಂಬರ ಕನ್ನಿಕೆ..!