ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ
ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ
ಅಂದು ಹೇಳದಿದ್ರೆ “ಕಿಂಗ್ ಇಸ್ ಗಾಡ್” ಬೀಳುತಿದ್ವು ಏಟು
ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದ್ರೂ ಲೆಕ್ಕಕ್ಕಿಲ್ಲ ನಮ್ಮ ಓಟು
ಕಳೆದಿರಿ ಬಾಲ್ಯ – ಮಣ್ಣಿನ ಗೋಡೆ, ಕಪ್ಪು ಹೆಂಚಿನ ಮನೆ
ಹಾಲಿ ವಸತಿ – ಬೆಂದಕಾಳೂರಿನ ಮಗನ ಕಾಂಕ್ರೀಟು ಮನೆ
ಅಂದು ದುರ್ಲಭವಾಗಿತ್ತು ಊರಿಗೆ ಹೋಗಲು ಖಾಸಗಿ ಸಾರಿಗೆ
ಇಂದು ದೈವಾನುಗ್ರಹದಿಂದ ಬಳಸಿದಿರಲ್ಲ ವಿಮಾನ ಸಾರಿಗೆ
ನೀವು ಚಿಕ್ಕವರಿದ್ದಾಗ ಬಳಸುತ್ತಿದ್ದರು ಬೆಳ್ಳಿಯ ರೂಪಾಯಿ
ಈಗ ವಿದೇಶಗಳಲ್ಲೂ ಬಳಸಬಹುದು ಭಾರತದ ರೂಪಾಯಿ.
ಆಗಿನ ಕಾಲದಲ್ಲಿ ವಿರಳವಾಗಿ ಬಳಸುತ್ತಿದ್ದರು ದೂರವಾಣಿ
ಈಗಿನ ಕಾಲದಲ್ಲಿ ಮನೆಮಂದಿ ಕೈಲೆಲ್ಲಾ ಜಂಗಮವಾಣಿ
ನೀವಾಗ ಫ್ರೀಯಾಗಿ ಈಜುತ್ತಿದ್ದಿರಿ ನದಿ, ಹಳ್ಳ, ಕೊಳ
ಇವಾಗ ಕೊಡಬೇಕು ಫೀಜು ಬಳಸಬೇಕೆಂದ್ರೆ ಈಜುಕೊಳ
ಕುಡಿಯೋ ನೀರು ಬೇಕಾದ್ರೆ ಬಾವಿ, ಕೆರೆ, ಹೊಳೆ ಇದ್ದವು
ಈಗ ನೋಡಿ ಮಾರಲಿಕ್ಕೆ ಪ್ಲಾಸ್ಟಿಕ್ ಬಾಟಲ್ ನೀರು ಬಂದವು
ಅಂದಿನ ಲಗ್ಜರಿ, ಇದ್ದರೆ ಮನೆಯಲ್ಲಿ ಜಳಕದ ಸಾಬೂನು
ಇಂದಿನ ಅವಶ್ಯಕತೆ ತಲೆಗೊಂದು ತರಹೇವಾರಿ ಸಾಬೂನು
ಅಂದು ದೇವರ ಪೂಜೆಗೆ ಹೂಗಾರರು ಕೊಡತಿದ್ರು ಪತ್ರಿ, ಹೂವು
ಇಂದು ಮಾರ್ಕೆಟಿಂದ ಕೊಂಡು ತಂದು ಫ್ರಿಜ್ಜಲ್ಲಿಡಬೇಕು ನಾವು
ಅವತ್ತು, ರಾತ್ರಿಯಾದರೆ ಮನೆಗೊಂದು ಲಾಟೀನು,ಚಿಮಣಿ ಎಣ್ಣೆ ದೀಪ
ಇವತ್ತು, ಹಗಲೊತ್ತೆ ಉರೀತಾವೆ ರೂಮಿಗೊಂದು ಬಲ್ಬು ಎಲ್ ಇ ಡಿ ದೀಪ
ಬೆಳೆದಿರಲ್ಲ, ಉಂಡು ಮನೆಯ ಹಾಲು ಹೈನು, ಜವಾರಿ ಊಟ
ಏನಿದು ಬದುಕು? ಕೊಂಡ ಹಾಲು, ತಿನ್ನಲು ಪಿಜ್ಜಾ ಪರೋಟ
ಬರೆಯುತ್ತ ಬೆಳೆದಿರಿ ಪೋಸ್ಟ್ ಕಾರ್ಡು, ಅಂತರ್ದೇಸಿ, ಪುಟಗಟ್ಟಲೆ ಪತ್ರ.
ಪತ್ರದ ಬದಲು ಮೆಸೇಜು, ಹೆಚ್ಚುತ್ತಿವೆ ಇಮೋಜಿಗಳ ಪಾತ್ರ, ಗಾತ್ರ
ಆಗ ನಯಾ ಪೈಸೆ, ನಾಕಾಣೆ, ರೂಪಾಯಿ, ಇಲ್ಲವೇ ವಸ್ತು ವಿನಿಮಯದ್ದೆ ಆಟ
ಈಗ ನೂರರ ನೋಟು, ಪ್ಲಾಸ್ಟಿಕ್ ಕಾರ್ಡು, ಡಿಜಿಟಲ್ ಕರೆನ್ಸಿಗಳದ್ದೇ ಆಟ
ಆಗೆಲ್ಲ ಖರೆ ಮತ್ತು ನೆಟ್ಟಗೆ ಮಾತು, ಮಾತಿಗಿತ್ತು ಕಿಮ್ಮತ್ತು, ವಜನು
ಈಗೆಲ್ಲ ಮಾತು ಹಗುರ, ಬದಲಿಗೆ ಏರುತ್ತಿದೆ ದೇಹದ ವಜನು
ಆರೋಗ್ಯದಿಂದಿದ್ದು ಸದಾ ಹರಸುತ್ತಿರಿ ನಮ್ಮನ್ನು
ನಿಮ್ಮ ಆಶೀರ್ವಾದವಲ್ಲದೆ ನಮಗೇನು ಬೇಕಿನ್ನು?