ಅಶೋಕ ಹೊಸಮನಿ ಅವರು ಬರೆದ ಕವಿತೆ ‘ತಾಯ್ನೆಲದ ಬಿಕ್ಕಳಿಕೆಯಲಿ’

ದನಿ ಕ್ಷೀಣಿಸುತ್ತಿದೆ
ಒಳ ಹೊರ ನೋಟ ಅಸ್ಪಷ್ಟವಾಗುತ್ತಿದೆ
ಗಾಳಿ ಉಪದೇಶಿಸುವ ಹೊತ್ತಲ್ಲಿ
ದಾರಿಗೆ ಕತ್ತಲಾವರಿಸಿದೆ

ದನಿ ಕ್ಷೀಣಿಸುತ್ತಿದೆ
ದಿಕ್ಕೆಟ್ಟ ಉಸಿರಿಗೆ
ಉಸಿರುಗಟ್ಟಿಸುವ
ಗೀಜಗನ ಗೂಡಿನ ನೆರಳಲ್ಲಿ

ದನಿ ಕ್ಷೀಣಿಸುತ್ತಿದೆ
ಮಾಂಸ ಮಜ್ಜೆಯ ಚಾಚಿ
ತುಳಿಸಿಕೊಂಡ ಬಾಲ್ಯ
ಮಣ್ಣಿಗೆ ಹತ್ತಿರವಾಗುತ್ತಿದೆ

ದನಿ ಕ್ಷೀಣಿಸುತ್ತಿದೆ
ಉಬ್ಬುಗಳ ಕಣ್ಣ ಕಡಲ ಹೀರುವ ತವಕದಲಿ
ಮರಗಟ್ಟುವ ತುಟಿಗಳ ಪರಿಭಾಷೆಯಲಿ
ಆಕಾಶ ಕೆಂಡದ ದನಿಯಲಿ

ದನಿ ಕ್ಷೀಣಿಸುತ್ತಿದೆ
ಪಾಯವಿಲ್ಲದ ಬಳ್ಳಿಗಳ ಆಲಿಂಗನದ ಕಸುವಿನಲಿ
ಚಪ್ಪಾಳೆಗಳ ಹರಿದು ಹಂಚುವಲ್ಲಿ
ಬೆಟ್ಟದ ಪಡಿಯ ತುತ್ತಿನಲಿ ಹೊತ್ತು ಮುತ್ತಾಗಿ ಹೊಳೆವ ಹೊತ್ತಲ್ಲಿ
ಮಳೆ ಹನಿಗಳ ನೂರೆಂಟು ಗಾಯಗಳು ಮಾತಿಗಿಳಿಯುವ ಮುನ್ನ

ದನಿ ಕ್ಷೀಣಿಸುತ್ತಿದೆ
ನೆತ್ತರಿಗೆ ಚಾಕು ಚೂರಿಯ ಬಣ್ಣ ಬಳಿದು
ಕೆಂಡವ ಬಿಸಾಡಿ
ಹೊತ್ತಿ ಉರಿಯುವ ನೆತ್ತಿಗಳೆಲ್ಲ
ಬಟಾ ಬಯಲಾಗುವ ಚಣದಲಿ
ನಕ್ಷತ್ರಗಳೆಲ್ಲ ಬೆಟ್ಟಗಳ ಕನವರಿಸುವಲ್ಲಿ

ದನಿ ಕ್ಷೀಣಿಸುತ್ತಿದೆ
ಹೃದಯ ತೆರೆದಿಡುವಲ್ಲಿ
ಬಾಣಂತಿಯ ಮೊಲೆಗೆ ತುಟಿಗಳು ತಾಗುವಾಗ
ಬಟ್ಟಲನ್ನ ಉಣ್ಣುವಾಗ
ಬರಿಮೈ
ಬರಿಗಾಲು
ಬಿರುಕುಗಳ ಧ್ಯಾನಿಸುವಾಗ

ದನಿ ಕ್ಷೀಣಿಸುತ್ತಿದೆ
ಒಡೆದ ಅಂಗಿ ಗುಂಡಿಗಳ ದೋಣಿಯ ಕಂಪನಕ್ಕೆ
ಆಕಾಶ ರೆಕ್ಕೆಗಳು ಪುಡಿ ಪುಡಿಯಾಗುವಾಗ

ದನಿ ಕ್ಷೀಣಿಸುತ್ತಿದೆ
ಬೆತ್ತಲೆ ಮೆರವಣಿಗೆಯಲಿ
ಬೆತ್ತಲಾಗದ ಬತ್ತಲ ಬ್ರಹ್ಮಾಂಡಕೆ
ನೆತ್ತರಿಗಂಟಿದ ಮೋಡಗಳ ಮೌನಕೆ
ತಾಯ್ನೆಲದ ಬಿಕ್ಕಳಿಕೆಯಲಿ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಅನ್ನಪೂರ್ಣ ಪದ್ಮಸಾಲಿ
29 October 2023 06:42

👌

0
    0
    Your Cart
    Your cart is emptyReturn to Shop