ಏಕಾಂಗಿಯ ಸರಳತೆಯಲ್ಲಿ
ಏಕಕೋಶವಾಗಿ
ಕಾಮನ ಬಿಲ್ಲ ಬಣ್ಣಗಳ
ರಂಗೇರಿಸಿ
ಬಹುಮುಖವಾಗಿ
ಛಾಪನ್ನು ಮೂಡಿಸಿದ
ನಿನ್ನ ಅವತಾರ ಮೆಚ್ಚಲೇಬೇಕು…
ಕೊಳೆಯದ ಕಸವಾಗಿ
ಹಾರಾಡಿ, ತೂರಾಡಿ
ಚೂರಾಗಿ ಜಠರದಲ್ಲಿ
ನೋವಿಗೂ ಕಾರಣವಾಗಿ
ಮಾರಣಾಂತಿಕ ರೋಗಗಳ
ತವರಾದರೂ ಬಿಡದ
ನಿನ್ನ ಅವತಾರ ಮೆಚ್ಚಲೇಬೇಕು…
ಗೃಹದೊಳಗೆಲ್ಲಾ ನಿನ್ನದೇ
ಕಾರಾಬಾರು
ದವಾಖಾನೆಯೊಳಗೂ
ನಿಲ್ಲದ ದರ್ಬಾರು
ನಗರೀಕರಣದಲೂ
ಪಾತ್ರದಳಗಿನ ಪ್ರಮುಖ
ಬೇಡೆಂದರೂ ನುಗ್ಗುವ
ನಿನ್ನ ಅವತಾರ ಮೆಚ್ಚಲೇಬೇಕು..
ಹೋರಾಟ ನಿನ್ನ ತಡೆಗಾಗಿ
ಅಲ್ಲೂ ಬಿಂಬಿಸುವೆ
ನೀರ ಹಿಡಿಕೆಯಾಗಿ
ಜೀವ ಗುಟುಕಿನ ಕುರುಹಾಗಿ
ಸುಟ್ಟರೂ ಬೂದಿಯಾಗದೆ
ಮರುಬಳಕೆಯಾಗುವ
ನಿನ್ನ ಅವತಾರ ಮೆಚ್ಚಲೇಬೇಕು..
ಆಧುನೀಕರಣದ ಸೋಗು
ಅಲಂಕಾರದಲಿ ಬೀಗಿ
ಅಳಿದಷ್ಟು ಎದ್ದು ನಿಲ್ಲುವ
ಮರೆತಷ್ಟು ಕಣ್ಣಿಗೆ ಸುಳಿವ
ಆಕರ್ಷಣೆಯ ರೂಪಕ್ಕಿಳಿವ
ನಾನಾವತಾರಿಯ ವಿಶ್ವ ಜಾತ
ನಿನ್ನ ಅವತಾರ ಮೆಚ್ಚಲೇಬೇಕು…