ಮಾನವತೆಯ ಜಗದೆದೆಯಲ್ಲಿ ಸಮತೆ ಶೀಲ ಮತ್ತೆ ಕೊನರುವ ಕಾಲ
ಮಾರ್ದನಿತ ಬಸವನ ನೀತಿ, ಪ್ರೇರಿಪ ಶರಣ ಗಣಕದು ಉತ್ಕ್ರಾಂತಿ.
ಪೊಡವಿಗಂಟಿದ ಪೀಡೆ ಕರಿ ಹರಿದ ಶರಣರು
ಪೃಥ್ವಿ ಪಾವನಕದು ಪ್ರಾಣ ತೊರೆದ ಕರುಣರು
ಕಲ್ಯಾಣ ಸಾಧನೆಗೆ, ಅಧರ್ಮದ ಹರು ಹೊತ್ತವರು
‘ಕಾಯಕʼ ಮಂತ್ರವ ಜಪಿಸಿದರು ಬಸವ ಪ್ರಮಥರು.
ಅಜ್ಞಾನದ ಅರಿವಿಲ್ಲದೊಡೆ ಜ್ಞಾನಿಯಾಗನು !
ಪರಿಸ್ಥಿತಿಯ ಪ್ರಜ್ಞೆವಿಲ್ಲದೊಡೆ ಪ್ರಗತಿ ಕಾಣನು !
ಬಸವಾದಿ ಯುಗ ಪೂರ್ವದಲಿ ಮರವು ಹಸಿರಾಗಲಿಲ್ಲ !
ಹೊತ್ತ ಹೂ ಹಣ್ಣಿಗೂ ಸ್ವಂತ ಸ್ವಾತಂತ್ರ್ಯವಿಲ್ಲ
ವಿಚಾರದ ಅರಿವಿಲ್ಲ.. ಹೃದಯಕ್ಕೆ ಸಂಸ್ಕಾರಗಳಿಲ್ಲ
ಸುಳ್ಳು ಧ್ಯಾನ ಗೊಳ್ಳು ಕಂತೆ, ಸಗಣಿಯ ಸಾವಿರ ಹುಳಗಳಂತೆ
ನಂಬಿದ ದೇವನ ಶೋಷಣೆಯ ಸ್ತಬ್ಧ ಸಂತೆಯ ಕಾಲದಲಿ
ಮರದಿ ಮತ್ತೆ ಸ್ಥಿತಫಲ ಕರುಣಿಸಿದರು ಶರಣರು.
ಶರಣರು ಸಮಾನತೆಯ ಕಹಳೆ ಕೂಗಿದರು
ತಾಮ್ರದ ತಂತಿಯೊಳು ವಿದ್ಯುತ್ ದೀಪದಂತೆ.
ಖಣಕ್ಕೆ ಮೂಲ ಆಧಾರ ಗಟ್ಟಿ ಮೇಟಿಯಂತೆ
ಕ್ರಾಂತಿಯ ಮೂಲ ಬೇರು ಬಸವನು
ನಡೆವ ನೂರೆತ್ತಿನ ಬಂಡಿಗೆ ಅಚ್ಚಿನಂತೆ,
ನ್ಯಾಯ ಅನ್ಯಾಯದ ಪರಾಮರ್ಶೆ ಮೊದಲ ಮೆಟ್ಟಿಲು
ಬಸವ ಕಟ್ಟಿದನು ಶೋಷಿತರ ತೊಟ್ಟಿಲು.
ಹೆಣ್ಣು, ಹೊನ್ನು, ಮಣ್ಣ ಗಳಿಕೆಗಾಗಿ
ಮಡಿವಂತರ ಉಳಿಕೆಗಾಗಿ ನಡೆಯದಿ ಕ್ರಾಂತಿ
ಮೆರೆವ ವರ್ಣಬೇದವ ಮುರಿದು
ಮಾನವತೆಯ ಸಮಾನತೆಯ ಸಾರಲು,
ಕತ್ತಲೆಯ ಕುಣಿತಕ್ಕೆ, ನೆತ್ತರಲಿ ಬಿತ್ತಿದ ಬೀಜವದು
ಕಲ್ಯಾಣ ಕ್ರಾಂತಿ ಜಗದೊಳಿತಿನ ಉತ್ಕ್ರಾಂತಿ.
ದೇವೇಂದ್ರ ಕಟ್ಟಿಮನಿ
ಕಮಲಾಪುರ, ಕಲಬುರಗಿ.