ದೃಶ್ಯ – ೧
ಕಾಲುಗಳಿಲ್ಲದ ಹೆಳವನೊಬ್ಬ ತನ್ನ ಊರುಗೋಲಿನ ಸಹಾಯದಿಂದ ಅವಸರವಸರವಾಗಿ ಕುಂಟುತ್ತಾ ಬರುತ್ತಿದ್ದ….
ದೃಶ್ಯ – ೨
ಗೂನು ಬೆನ್ನಿನ ನಡು ವಯಸ್ಸಿನ ಹೆಂಗಸೊಬ್ಬಳು ಕಂಕುಳಲ್ಲಿ ಕೂಸೊಂದನ್ನು ಕಟ್ಟಿಕೊಂಡು ಕೈಯಲ್ಲೊಂದು ತಾಟಿಡಿದು ಬೀಸುನಡಿಗೆಯಿಂದ ಏದುಸಿರು ಬಿಡುತ್ತಾ ಧಾವಿಸುತ್ತಿದ್ದಳು…
ದೃಶ್ಯ – ೩
ಪದೇ ಪದೇ ಮುಖದಿಂದ ಜಾರಿ ಬೀಳುತ್ತಿದ್ದ ಪೂರ್ತಿ ಮಬ್ಬಾದ ದಪ್ಪ ಗಾಜಿನ ಕನ್ನಡಕವನ್ನು ರಸ್ತೆಯಲ್ಲಿ ಸಿಕ್ಕ ಹಗ್ಗವೊಂದರಿಂದ ತಲೆಗೆ ಗಟ್ಟಿಯಾಗಿ ಕಟ್ಟಿಕೊಂಡ ವಯಸ್ಸಾದ ಅಜ್ಜಿಯೊಂದು “ಅಯ್ಯೋ… ನನ್ನ ಮೊಮ್ಮಕ್ಕಳಿಗೆ ಚೂರು ಉಳಿಸ್ರಪ್ಪಾ….” ಅಂತಾ ಏದುಸಿರು ಬಿಡುತ್ತಾ ದೊಡ್ಡ ಹೆಜ್ಜೆ ಹಾಕುತ್ತಾ ಬರುತ್ತಿತ್ತು…
ಕಥೆ ಹೀಗೆ ಸಾಗುತ್ತದೆ…
ಊರ ನಡುವಿನ ಅರಳೀಮರದ ಕಟ್ಟೆಯ ಮೇಲೆ ಸಿಗುತ್ತಿದ್ದ ಅನ್ನಕ್ಕಾಗಿ ಅವರೆಲ್ಲ ಹೀಗೆ ಓಡೋಡಿ ಬರುತ್ತಿದ್ದರು. “ನಮ್ಗೂ ಚೂರು ಅನ್ನ ಕೊಡಿ..!” ಎಂಬ ಹಸಿವಿನ ಕೂಗಿನೊಂದಿಗೆ.
ಅವರಿಗಿದ್ದದ್ದು ಒಂದೇ ಆತಂಕ.
“ಪ್ರತೀ ಸಲದಂತೆ ಈ ಬಾರಿಯೂ ನಮಗೆ ಅನ್ನ ಸಿಗದೇ ಎಲ್ಲಿ ಖಾಲಿ ಆಗಿಬಿಡುತ್ತದೋ…? ಸಿಗದಿದ್ದರೆ ಹಸಿವಿಗೆ ಏನು ಮಾಡೋದು…? ಅಂತಾ.
ಒಂದು ಚಿಕ್ಕ ಹಳ್ಳಿಯದು. ಅಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಅನಕ್ಷರಸ್ಥರು, ಅಜ್ಞಾನಿಗಳೇ ಇದ್ದರು. ಅದ್ಯಾವ ಶಾಪವೋ ಏನೋ ಆ ಹಳ್ಳಿಯ ಬಹಳಷ್ಟು ಮಂದಿ ರೋಗ-ರುಜಿನಗಳಿಂದ ನರಳುತ್ತಿದ್ದರು. ಕಣ್ಣು ಕಾಣದವರು, ಕೈ ಕಾಲು ಇಲ್ಲದವರು, ಮೂಕರ ಜೊತೆಗೆ ಮೂಢರೂ ಸ್ವಲ್ಪ ಹೆಚ್ಚೇ ಇದ್ದಂತಹ ಹಳ್ಳಿಯದು. ಇನ್ನು ಕೆಲವು ಕುಟುಂಬಗಳು ಒಳ್ಳೆಯ ಸುಶಿಕ್ಷಿತರು, ಜ್ಞಾನಿಗಳು ಉತ್ತಮ ಆರೋಗ್ಯ ಹೊಂದಿದವರೂ ಆಗಿದ್ದರು. ಹೀಗೆ ಜೀವನ ಸಾಗುವುದರೊಂದಿಗೆ ಕಾಲ ಉರುಳುತ್ತಿತ್ತು.
ಆ ಹಳ್ಳಿಯ ಕಟ್ಟುಪಾಡಿನಂತೆ ಎಲ್ಲರೂ ದುಡಿಯಬೇಕಿತ್ತು. ಆದರೆ ಯಾರಿಗೂ ಕೂಲಿ ಹಣ ಅಂತಾ ಕೊಡುತ್ತಿರಲಿಲ್ಲ. ಅವರಿಗೆ ಏನು ವ್ಯವಸ್ಥೆ ಬೇಕೋ ಅದನ್ನು ಆ ಊರಿನ ಮುಖ್ಯಸ್ಥ ಮಾಡುತ್ತಿದ್ದ. ಯಾರು ಏನೇ ದುಡಿದರೂ, ಯಾರೂ ಕೂಡ ಹಸಿವು ಪೂರೈಸಿಕೊಳ್ಳಲು ತಮ್ಮ ತಮ್ಮ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳುವಂತಿರಲಿಲ್ಲ. ಇಂತಹ ವಿಚಿತ್ರ ನಿಯಮವೊಂದು ಆ ಹಳ್ಳಿಯಲ್ಲಿ ಲಾಗಾಯ್ತಿನಿಂದ ಜಾರಿಯಲ್ಲಿತ್ತು..! ಜೊತೆಗೆ ಎಲ್ಲರೂ ಕಡ್ಡಾಯವಾಗಿ ಆ ನಿಯಮವನ್ನು ಪಾಲಿಸಲೇಬೇಕಿತ್ತು..!
ಕೆಲಸದ ನಡುವೆಯೇ ದಿನಕ್ಕೆ ಮೂರು ಬಾರಿ ಅವರಿಗೆ ಉತ್ತಮವಾದ ಊಟವನ್ನು ಒದಗಿಸಲಾಗುತ್ತಿತ್ತು. ಕೆಲವರು ಹೊಟ್ಟೆ ಬಿರಿಯುವಂತೆ ತಿಂದು ಢರ್ರ್ ಎಂದು ತೇಗಿದರೆ, ಮತ್ತೆ ಕೆಲವರು ಅಲ್ಪ ಸ್ವಲ್ಪ ತಿಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಏನೂ ಸಿಗದ ಕೆಲವರು ನೀರು ಕುಡಿದು… “ಇವತ್ತು ನಮ್ಮ ಪಾಲಿಗೆ ಪರಮಾತ್ಮ ಇಷ್ಟೇ ಕರುಣಿಸಿರೋದು..” ಅಂತಾ ತಲೆಯೆತ್ತಿ ಸೂರ್ಯ ಚಂದ್ರರೆಡೆಗೆ ತಮ್ಮ ಅಜ್ಞಾನದ ಮತ್ತು ಮುಗ್ದತೆಯ ಕೈಯೆತ್ತಿ ಮುಗಿಯುತ್ತಿದ್ದರು.
ಈ ಸಮಸ್ಯೆಗೆ ಮತ್ತು ಭಿನ್ನತೆಗೆ ಕಾರಣವೆಂದರೆ ಊರ ನಡುವಿನ ಅರಳಿಕಟ್ಟೆಯಲ್ಲಿನ ಅನ್ನವು ಸರತಿ ಸಾಲಿನಲ್ಲಿ ಎಲ್ಲರಿಗೂ ಸಮಾನವಾಗಿ ಸಿಗುತ್ತಿರಲಿಲ್ಲ. ಆ ಹಳ್ಳಿಯ ಎಲ್ಲರಿಗೂ ಸಮಾನವಾಗಿ ಅನ್ನ ಸಿಗಬೇಕೆಂಬ ಕಟ್ಟುಪಾಡೊಂದು ಶತಶತಮಾನಗಳಿಂದ ಜಾರಿಯಲ್ಲಿತ್ತು. ಅದು ಜನರ ಹಕ್ಕು ಕೂಡ ಆಗಿತ್ತು. ಹೀಗಿದ್ದರೂ ಊರ ಮುಖ್ಯಸ್ಥ ತಾನೇ ತನ್ನ ಸ್ವಂತ ಮನೆಯಿಂದ ಉಚಿತವಾಗಿ ಕೊಡುತ್ತಿದ್ದಾನೇನೋ ಎಂಬಂತೆ ತನ್ನ ಆಳುಗಳ ಮೂಲಕ ಅವರಿಗೆ ಅನ್ನ ಒದಗಿಸುತ್ತಿದ್ದ. ಆ ಕಾಲಕ್ಕೆ ಸಿಗುವ ಅನ್ನದಲ್ಲೇನು ಸಮಸ್ಯೆ ಇರಲಿಲ್ಲ. ಒದಗಿಸುತ್ತಿದ್ದ ಅನ್ನ ಆ ಜನಗಳಿಗೆ ಸರಿಯಾದ ಪ್ರಮಾಣದಲ್ಲಿಯೇ ಇರುತ್ತಿತ್ತು. ಆದರೆ ಅನ್ನ ಒದಗಿಸುತ್ತಿದ್ದ ರೀತಿ ಮಾತ್ರ ಅಸಮಾನತೆ ಮತ್ತು ತಾರತಮ್ಯದಿಂದ ಕೂಡಿ ಕೆಲವರ ಪಾಲಿಗೆ ನೀರೇ ಗತಿಯಾಗಿತ್ತು.
ಊರ ಮುಖಂಡನ ನೀಳಕಾಯದ ಆಳುಗಳು ಬಿಸಿ ಬಿಸಿ ಅನ್ನವನ್ನು ತಂದು ಅರಳೀಮರದ ಕಟ್ಟೆಯ ಮೇಲಿದ್ದ ಒಂದು ದೊಡ್ಡ ಹರಿವಾಣಕ್ಕೆ ಸುರಿದು ಬಿಡುತ್ತಿದ್ದರು. ಆ ಹಳ್ಳಿಯ ಜನರೆಲ್ಲ ಬಂದು ಅದರಲ್ಲೆ ತಮಗೆ ದಕ್ಕಿದ್ದನ್ನು, ಉಳಿದಿದ್ದನ್ನು ತಿನ್ನಬೇಕಿತ್ತು.
ಆರೋಗ್ಯಯುತವಾಗಿರುವ, ಪ್ರಾಯ ತುಂಬಿರುವ, ದೈಹಿಕ ಸದೃಢರು ಹಿಂದೆ ಮುಂದೆ ಯೋಚಿಸದೆ ಗಬಗಬನೆ ತಿಂದು ಮುಗಿಸಿದರೆ, ಸರಾಸರಿ ಆರೋಗ್ಯ ಮತ್ತು ಮಧ್ಯಮ ವಯೋಮಾನದವರೂ ಕೂಡ ಅವರೊಂದಿಗೆ ತಿಂದು ತೇಗುತ್ತಿದ್ದರು.
ಅನ್ನ ತಂದು ಹರಿವಾಣಕ್ಕೆ ಸುರಿದ ಸುದ್ಧಿಯನ್ನು ಡಂಗುರ ಸಾರಿ ಹೇಳಿದರೂ ಕಿವಿ ಕೇಳದವರಿಗೆ ಹೇಗೆ ಕೇಳಿಸಲು ಸಾಧ್ಯ..? ಅವರಿಗೆ ವಿಷಯ ತಿಳಿದು ಅರಳಿಕಟ್ಟೆಯ ಬಳಿ ಬರುವ ಹೊತ್ತಿಗೆ ಅನ್ನ ಖಾಲಿಯಾಗುತ್ತಾ ಬರುತ್ತಿತ್ತು.
ಕುರುಡರು, ಕಾಲಿಲ್ಲದ ಹೆಳವರು, ವಯಸ್ಸಾದವರು ಅಲ್ಲಿಗೆ ತಲುಪುವ ವೇಳೆಗೆ ಹರಿವಾಣದೊಳಗಿನ ಅನ್ನ ಶೇ 90% ರಷ್ಟು ಖಾಲಿ ಆಗಿರುತ್ತಿತ್ತು.
ಆ ಹಳ್ಳಿಯ ಮತ್ತೊಂದು ವಿಚಿತ್ರವೆಂದರೆ ಹೊರಗೆ ಅತ್ಯಂತ ಅನ್ಯೋನ್ಯತೆ, ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದ ಪರಸ್ಪರ ಕುಟುಂಬಗಳು ಒಳಗೊಳಗೇ ಅಸೂಯೆ, ಮತ್ಸರ ಸಾಧಿಸುತ್ತಿದ್ದರು. ಕೇವಲ ತಮ್ಮ ಕುಟುಂಬಗಳು ಮಾತ್ರ ಚನ್ನಾಗಿರಬೇಕೆಂಬ ಸ್ವಾರ್ಥ ಅವರಲ್ಲಿ ಮನೆ ಮಾಡಿತ್ತು. ಎಲ್ಲ ಕುಟುಂಬಗಳೂ ಪರಸ್ಪರ ಹಂಚಿಕೊಂಡು ತಿನ್ನುವ ಮನೋಭಾವ ಅವರಲ್ಲಿ ಕಿಂಚಿತ್ತೂ ಇರಲಿಲ್ಲ.
ಹೊಟ್ಟೆ ತುಂಬಾ ಅನ್ನ ಸಿಗದೇ ಕೊನೆಯಲ್ಲಿ ಸಿಗುತ್ತಿದ್ದ ಒಂದಿಡಿಯಷ್ಟು ಅನ್ನವನ್ನು ಹಲ್ಲಿಲ್ಲದ ತಮ್ಮ ವಸಡುಗಳಲ್ಲಿ ಮೆಲುಕಾಡುತ್ತಿದ್ದ ಹಿರಿಯ ಜೀವಗಳು ಮತ್ತು ಕೆಲವು ಕುರುಡ, ಕುಂಟ, ಕಿವುಡರು ಮಾತ್ರ ಎಲ್ಲರೂ ಹಂಚಿ ತಿನ್ನಬೇಕೆಂಬ ಅಸಹಾಯಕ ವೇದಾಂತ ಹೇಳುವ ಜೊತೆಗೆ “ನಮಗೆ ಪ್ರತ್ಯೇಕವಾಗಿ ಅನ್ನ ಕೊಟ್ಟುಬಿಡಿ, ನಾವು ಹೇಗೋ ನಮ್ಮ ಪಾಲಿನ ಅನ್ನ ತಿಂದು ಬದುಕುತ್ತೇವೆ..!” ಎಂದು ಊರ ಮುಖ್ಯಸ್ಥನನ್ನು ದಮ್ಮಯ್ಯ ಅಂತಾ ಗೋಗರೆಯುತ್ತಿದ್ದರು.
ಹಳ್ಳಿಯ ಜನರ ಕಥೆ ಹೀಗಾದರೆ, ಅವರ ಮಕ್ಕಳ ಕಥೆಯೇನು ತೀರಾ ಭಿನ್ನವಾಗಿರಲಿಲ್ಲ.
ದಿನ ಬೆಳಗಾದರೆ ಕೆಲಸಗಳಿಗೆ ತೆರಳುತ್ತಿದ್ದ ಹಳ್ಳಿಯ ಜನರು ತಮ್ಮ ಸಣ್ಣ ಸಣ್ಣ ಮತ್ತು ಎಂಟ್ಹತ್ತು ವರ್ಷದ ಮಕ್ಕಳನ್ನು ಊರ ದೇವಸ್ಥಾನದ ಪಕ್ಕದ ಪಾಳು ಬಿದ್ದ ತೇರುಮನೆಯೊಂದರೊಳಗೆ ಕೂಡಿ ಹಾಕಿ ಹೋಗುತ್ತಿದ್ದರು. ಅಲ್ಲಿದ್ದ ಹಳೇ ಕಾಲದ ತೇರು ಸಂಪೂರ್ಣ ಶಿಥಿಲಹೊಂದಿ ಅವಶೇಷ ಮಾತ್ರ ಉಳಿದಿದ್ದರಿಂದ ಅಲ್ಲಿಯ ಜಾಗ ವಿಶಾಲವಾಗಿ ಖಾಲಿ ಉಳಿದಿತ್ತು. ಪೋಷಕರೆಲ್ಲ ರಾತ್ರಿ ಮನೆಗೆ ಬರುವ ತನಕ ಆ ಮಕ್ಕಳು ಆ ಪಾಳುಬಿದ್ದ ತೇರಿನ ಮನೆಯೊಳಗೇ ಆಟವಾಡಿಕೊಂಡು ಇರಬೇಕಿತ್ತು.
ಈ ಮಕ್ಕಳೂ ಸಹ ತಮ್ಮ ಪೋಷಕರಂತೆ ಕೆಲವು ಆರೋಗ್ಯಯುತವಾಗಿ, ಮತ್ತೆ ಕೆಲವು ಸರಾಸರಿ ದೈಹಿಕ ಕ್ಷಮತೆ ಹೊಂದಿದ್ದರೆ, ಇನ್ನು ಕೆಲವು ರೋಗ ರುಜಿನಗಳಿಂದ ನರಳುತ್ತಿದ್ದವು. ಮತ್ತೆ ಕೆಲವು ದೈಹಿಕ ಅಂಗವಿಕಲತೆ ಹೊಂದಿದ್ದವು. ಕೆಲವರಿಗಂತೂ ಪೂರ್ತಿ ಕಾಲು, ಕಣ್ಣುಗಳೇ ಇಲ್ಲವಾಗಿದ್ದವು. ಕೆಲವೇ ಕೆಲವು ಮಕ್ಕಳು ಮಾತ್ರ ಸದೃಢವಾದ ಶಾರೀರಿಕ ಲಕ್ಷಣಗಳನ್ನು ಹೊಂದಿದ್ದವು.
ಈ ಎಲ್ಲ ಮಕ್ಕಳಿಗೂ ಸಹ ಪ್ರತಿ ದಿನ ಮೂರು ಬಾರಿ ಉತ್ತಮ ಊಟವನ್ನು ನೀಡಲಾಗುತ್ತಿತ್ತು. ಮಕ್ಕಳೆಂಬ ಕಾರಣದಿಂದ ಕೆಲವೊಮ್ಮೆ ಲಾಡು ಮುಂತಾದ ಸಿಹಿ ಪದಾರ್ಥಗಳನ್ನೂ ನೀಡಲಾಗುತ್ತಿತ್ತು. ಎಲ್ಲರೂ ಊಟ ಮಾಡಿ ಆರಾಮಾಗಿ ಇದ್ದಾರೆಂಬುದು ಊಟ ನೀಡುವವರ ನಂಬಿಕೆಯಾಗಿತ್ತು. ಮೇಲ್ನೋಟಕ್ಕೆ ಇದು ನಿಜವಿರಬಹುದು ಅಂತಲೂ ಅನಿಸುತ್ತದೆ. ಆದರೆ ಖಂಡಿತಾ ಅಲ್ಲೂ ಕೂಡ ಒಂದು ಸಮಸ್ಯೆ ಇತ್ತು.
ಒಂದೇ ಹಳ್ಳಿ ಎಂದ ಮೇಲೆ ಎರಡು ನಿಯಮಗಳಿರಲು ಹೇಗೆ ಸಾಧ್ಯ..? ಇಲ್ಲಿಯೂ ಕೂಡ ಮಕ್ಕಳಿಗೆ ಪ್ರತ್ಯೇಕವಾಗಿ ಊಟ ನೀಡದೆ ಹುಲ್ಲಗಾವಲಿಗೆ ದನಕರುಗಳನ್ನು ಮೇಯಲು ಬಿಡುವಂತೆ ದೊಡ್ಡ ಹರಿವಾಣಕ್ಕೆ ಊಟ ಸುರುವಿ ತೇರು ಮನೆಯ ಹಳೆಯದಾದ ದೊಡ್ಡ ಬಾಗಿಲನ್ನು ಕಿರ್ ಕಿರ್ ಕಿರ್ ಎನ್ನುವಂತೆ ಎಳೆದು ಮುಚ್ಚಿ ಬಿಡುತ್ತಿದ್ದರು.
ತೇರು ಮನೆಯೊಳಗಿರುವ ಎಲ್ಲ ಮಕ್ಕಳು ಆ ಒಂದೇ “ಹರಿವಾಣ”ದೊಳಗಿನ ಊಟವನ್ನೇ ತಿನ್ನಬೇಕಿತ್ತು..!
ಪ್ರಾಯಶಃ ಈ ಕಥೆಯ ಮುಂದಿನ ಸಾಲುಗಳು ನಿಮಗೆ ಈಗಾಗಲೇ ಸ್ವಲ್ಪವಾದರೂ ಅರ್ಥವಾಗಿರಬಹುದು. ಬಾಗಿಲು ಮುಚ್ಚಿದ ನಂತರ ತೇರು ಮನೆಯೊಳಗೆ ಅಕ್ಷರಶಃ ಅನ್ನಕ್ಕಾಗಿ ಕಚ್ಚಾಟ ನಡೆಯುತ್ತಿತ್ತು.
ಮೂಲೆಯಲ್ಲಿ ಕೂತಿದ್ದ ಎರಡೂ ಕಾಲಿಲ್ಲದ ಮತ್ತು ಊರುಗೋಲೂ ಇಲ್ಲದ ಹೆಳವನೊಬ್ಬ ಹರಿವಾಣದ ಜಾಗ ತಲುಪಲಾಗದೆ ಉಳಿದವರು ತಿನ್ನುವುದನ್ನು ಅಲ್ಲಿಂದಲೇ ನೋಡುತ್ತಿದ್ದರೆ ಅವನ ಬಾಯಿಯಿಂದ ಹಸಿವಿನ ಜೊಲ್ಲು ನಾರಿನಂತೆ ಕೆಳಗಿಳಿಯುತ್ತಿತ್ತು.
ಅರ್ಧಂಬರ್ಧ ಕಣ್ಣು ಕಾಣುವ ಅವನ ಸ್ವಂತ ತಂಗಿ ಅವನಿಗಾಗಿ ಒಂದೆರಡು ಹಿಡಿ ಅನ್ನ ತೆಗೆದುಕೊಂಡು ಆ ಹೆಳವನಿಗೆ ಕೊಡಲು ಮುಂದಾದರೆ ಗಬಗಬನೆ ತಿನ್ನುತ್ತಿದ್ದ ಕೆಲವು ಮಕ್ಕಳು ಅವಳ ಕೈಯಲ್ಲಿನ ಅನ್ನಕ್ಕೆ ಕೈ ಹಾಕಿ ಕಿತ್ತು ತಾವೇ ತಿನ್ನುತ್ತಿದ್ದವು. ಪಟ್ಟು ಬಿಡದ ಆ ಕುರುಡಿ ಮತ್ತೂ ಕೈ ಹಾಕಿ ಎರಡು ಹಿಡಿ ಅನ್ನ ತೆಗೆದುಕೊಂಡು ತನ್ನ ಅಣ್ಣನಿಗೆ ತಿನ್ನಿಸಿ ಬರುತ್ತಿದ್ದ ದೃಶ್ಯವನ್ನು ಕಣ್ಮುಂದೆ ನೆನೆದರೆ ಕರುಳು ಚುರುಕ್ ಅನ್ನುತ್ತದೆ.
ಇನ್ನು ಸಣ್ಣ ಸಣ್ಣ ಮಕ್ಕಳು ದೊಡ್ಡ ಮಕ್ಕಳ ಜೊತೆ ಸ್ಪರ್ಧೆಗಿಳಿದು ತಿನ್ನಲಾರದೆ ದೂರದೂರದಲ್ಲಿ ಕುಳಿತು ಆಗ ತಾನೆ ಮಾಡಿಕೊಂಡ ಉಚ್ಚೆಯಲ್ಲಿ ಕೈ ಬಡಿದು ಆಟವಾಡುತ್ತಿರುತ್ತವೆ. ತಮಗೆ ತಾವೇ ನಗುತ್ತಿರುತ್ತವೆ. ಮತ್ತೆ ಕೆಲವು ಹಸಿವಿನಿಂದ ಚೀರಿ ಚೀರಿ ಅಳುತ್ತಾ… ಕೊನೆಗೆ ಅತ್ತೂ ಅತ್ತು ಸಾಕಾಗಿ ಹಾಗೆ ನಿದ್ದೆ ಹೋಗಿರುತ್ತವೆ..!
ಯಾರಿಗೊತ್ತು ನಿದ್ದೆ ಹೋಗಿರುವ ಕೆಲವು ಮಕ್ಕಳು ಅನ್ನ ಮತ್ತು ಹಾಲಿಲ್ಲದೆ ಸತ್ತೂ ಹೋಗಿರಬಹುದು..!
°°°°°°°°°°°°°°°°°°°°
ಬಂಧುಗಳೇ….
ಈ ಕಥೆಯಲ್ಲಿ ನಿಮಗೇನಾದರೂ ಉಳ್ಳವರು – ಇಲ್ಲದವರು, ಸಬಲರು ಮತ್ತು ದುರ್ಬಲರ ನಡುವಿನ ಒಂದು ಅಸಮಾನತೆ ಎದ್ದು ಕಾಣುತ್ತಿದೆಯೇ..?
ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದರೆ ಈ ಅಸಮಾನತೆ ಹೋಗಿ ಸಮಾನತೆ ಬರುವುದು ಸಹಜ ಧರ್ಮ ಎನಿಸಿಕೊಳ್ಳುತ್ತದೆ.
ಆ ಹಳ್ಳಿಯ ಜನಕ್ಕೆ ಮತ್ತು ಅವರ ಮಕ್ಕಳಿಗೆ ಪ್ರತ್ಯೇಕವಾಗಿ ಊಟ ನೀಡುವಂತಾದರೆ ಅವರೂ ಕೂಡ ಹೊಟ್ಟೆ ತುಂಬಾ ಊಟಮಾಡಿ, ಖುಷಿ ಮತ್ತು ನೆಮ್ಮದಿಯಿಂದ ಬದುಕುವಂತಾಗುತ್ತಾರೆ. ಆಗ ಮಾತ್ರ ಮನುಷ್ಯತ್ವ, ಮಾನವೀಯತೆ, ಸಮಾನತೆ ಎಂಬ ಪದಗಳಿಗೆ ಒಂದು ನಿಜವಾದ ಅರ್ಥ ಬರುತ್ತದೆ.
°°°°°°°°°°°°°°°°°°°
ಕರ್ನಾಟಕದಲ್ಲಿ ಕಳೆದ ಮುವ್ವತ್ತು ವರ್ಷಗಳಿಂದ ಮಳೆ, ಚಳಿ, ಬಿಸಿಲು ಬಯಲೆನ್ನದೆ ನಡೆಯುತ್ತಿರುವ ದಲಿತರ ಒಳಮೀಸಲಾತಿ ಹೋರಾಟವು ಇದೇ ಸಮಾನತೆಯನ್ನಲ್ಲವೇ ಕೇಳುತ್ತಿರುವುದು..?
ನೋವಿನ ಅನಾವರಣ ಮಾಡಿ ಪರಿಹಾರದ ವೇದಿಕೆಗೆ ಅವಕಾಶ ಮಾಡಿಕೊಡುವುದೂ ಕೂಡ ಸಾಹಿತ್ಯದ ಕೆಲಸ ಎಂಬುದು ನನ್ನ ಬಲವಾದ ಮತ್ತು ಅಂತರಾಳದ ನಂಬಿಕೆ.
ನೋವು ಅರ್ಥವಾದವರು ಪ್ರತಿಕ್ರಿಯಿಸಿ.
ಕಥೆಗಾರ ಕಿರಣ್ ಶಿವಪುರ ಹೊಳಲ್ಕೆರೆ