“ಮಿ.ರಾಕೇಶ್ ನೀವು ಒಳಗೆ ಹೋಗಬಹುದು” ಸ್ವಾಗತಕಾರಿಣಿ ಹೇಳಿದಾಗ , ಭಯ ಮಿಶ್ರಿತ ಧನಿಯಲ್ಲೇ
‘ಓಕೆ’ ಸೀದಾ ಕ್ಯಾಬಿನ್ ನತ್ತ ನಡೆದ.
ಸುತ್ತಲೂ ಗಾಜಿನ ಪರದೆಯಿಂದ ರಚಿಸಲ್ಪಟ್ಟ ಆ ಸುಂದರ ಕ್ಯಾಬಿನೊಳಗೆ ಇಬ್ಬರೂ ಟೈ , ಬ್ಲೇಜರ್ ಧರಿಸಿದ ವ್ಯಕ್ತಿಗಳು, ಮತ್ತೊಬ್ಬಳು ಗುಲಾಬಿ ಬಣ್ಣದ ಶರ್ಟ್ ಮೇಲೊಂದು ಕಪ್ಪು ಬಣ್ಣದ ಕೋಟು ಧರಿಸಿದ್ದ ಸುಂದರಿ ಕುಳಿತಿದ್ದು ಗಾಜಿನಿಂದಲೇ ಕಾಣಿಸುತ್ತಿತ್ತು . ಜೀವನದುದ್ದಕ್ಕೂ ಹತಾಶೆಗಳನ್ನೇ ಅನುಭವಿಸಿದ ರಾಕೇಶಗೆ ಇಲ್ಲಿಯೂ ಕೆಲಸ ಸಿಗಬಹುದೆಂಬ ನಂಬಿಕೆ ಇರಲಿಲ್ಲ . ಆದರೆ ಒಂದು ಪ್ರಯತ್ನವಷ್ಟೆ , ಅವರ ಅನುಮತಿ ಕೇಳಿ ಒಳಗೆ ಕಾಲಿಟ್ಟ ,
‘ಕುಳಿತುಕೊಳ್ಳಿ “ಎಂದಾಗ ಫೈಲ್ ಅವರ ಕೈಗಿಟ್ಟು ಕುಳಿತನು.
‘ನಿಮ್ಮ ಪರಿಚಯ ಸಂಕ್ಷಿಪ್ತವಾಗಿ ಹೇಳಿ” ಆ ಯುವತಿ ಇಂಗ್ಲೀಷ್ ನಲ್ಲಿ ಕೇಳಿದಳು .
ಅವನ ಪರಿಚಯ ಮತ್ತು ಕೆಲಸದ ಅನುಭವ ಇಂಗ್ಲೀಷಿನಲ್ಲಿ ಹೇಳಿದನು. ಅವನ ಸರಾಗವಾದ ಮಾತಿನ ಶೈಲಿ , ಅನುಭವ , ಸಂವಹನ ಅವಳಿಗೆ ಇಷ್ಟವಾದಂತಿತ್ತು . ಕೆಲವು ಪ್ರಶ್ನೆ ಕೇಳಿ ,
“ವಾವ್ ಇವರ ಅನುಭವ ಮತ್ತೆ ನಾಲೆಡ್ಜ್ ನಮಗೆ ಸರಿಹೊಂದುವಂತಿದೆ ” ಪಕ್ಕದಲ್ಲಿ ಕುಳಿತವರಿಗೆ ಮೆಲ್ಲನೆ ಹೇಳಿದಳು . ಅವರಿಗೂ ಅದು ಸರಿಯೆನಿಸಿರಬೇಕು
“ಹೇಳಿ ನೀವೆಷ್ಟು ಸಂಬಳ ನಿರೀಕ್ಷೆ ಮಾಡ್ತಿರಾ ?”ಅದರಲ್ಲೊಬ್ಬ ಕೇಳಿದ
“25 ಸಾವಿರ ಸರ್”
” ಏನು.. ” ಅವರಿಗೆ ಆಶ್ಚರ್ಯವಾಗಿ ಕಂಡಿತು , ಇಷ್ಟು ಅನುಭವ ಇದೆ , ಜೊತೆಗೆ ಬುದ್ದಿವಂತ ಕೂಡ,ಬರಿಯ 25 ಸಾವಿರ ನಾ ಅನ್ನೋದು ಅದಕ್ಕೆ ಕಾರಣ.
“ಹೌದು ಸರ್ , ಆಗಲೇ 2 ವರ್ಷ ಆಯ್ತು ನಾನು ಕೆಲಸ ಮಾಡದೆ , ನನ್ನಲ್ಲೂ ಕೆಲವು ದೋಷಗಳಿರಬಹುದು, ಅದನ್ನು ಸರಿ ಪಡೆಸಿಕೊಳ್ಳಲು ನನಗೂ ಸ್ವಲ್ಪ ಸಮಯ ಬೇಕಾಗಬಹುದು” ಅವನ ನೇರ ಮಾತು , ಮತ್ತೆ ನಿಷ್ಠೆ ಅವರಿಗೆ ಇಷ್ಟವಾಯಿತು .
“ನೀವು ಆಯ್ಕೆಯಾಗಿದ್ದೀರಾ , ನಿಮ್ಮ ನೇಮಕಾತಿ ಪತ್ರ ಮೇಲ್ ಮಾಡ್ತೀವಿ , ಅದರಲ್ಲಿ ಸೇರುವ ದಿನಾಂಕ ಕೂಡ ಹಾಕಿರ್ತೀವಿ , ಧನ್ಯವಾದಗಳು’ ಹೇಳಿ ಅವನನ್ನು ಬೀಳ್ಕೊಟ್ಟರು . ಕೆಲಸ ಕನ್ಫರ್ಮ್ ಆದ ಕುಶಿ ರಾಕೇಶ್ ನ ಮುಖದಲ್ಲಿ ಎದ್ದು ಕಾಣುತ್ತಿತ್ತು
*******************
ಅಂಕಿತಾ ಟ್ರಾವೆಲ್ಸ್ ಉದ್ಯಮಿ ಜಯಂತ್ ಕುಮಾರ್ ರವರ ಒಬ್ಬಳೇ ಮಗಳು . ಅತಿಯಾದ ಮುದ್ದು , ಜಗತ್ತಿನ ಎಲ್ಲಾ ಪ್ರೀತಿ ಅವಳಿಗೆ ವರಪಾಲಿಸಿದ್ದಂತೆ ಸುಖವಾಗಿ ಬೆಳೆದವಳು .ಚಿಕ್ಕವಳಿದ್ದಾಗ ಕರಾಟೆಯಲ್ಲಿ ಪದಕ ಗಳಿಸಿದಳು. ಅದೇ ಕಾರಣಕ್ಕೆ ಸಂಧ್ಯಾ ಶಾಲೆಯಲ್ಲಿ ಕ್ರೀಡಾ ಪ್ರತಿಭಾನ್ವಿತರಿಗೆ ನೀಡುವ ಉತ್ತಮ ಶಿಕ್ಷಣದಲ್ಲಿ ಅಂಕಿತಾಳಿಗೂ ಸೀಟು ಕೊಡಲಾಗಿತ್ತು . ಅವಳೇನು ಓದುಗರಲ್ಲಿಯೂ ಹಿಂದಿರದೇ , ಎಲ್ಲಾ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿ ಸಾಗಿ sslcನಲ್ಲಿ ಶಾಲೆಗೆ ೨ ನೇ ಟಾಪರ್ ಆಗಿ ಗುರುತಿಸಿಕೊಂಡಳು. .ಆದರೆ , puc ನಂತರ ಶ್ಯಾಮಲಾರಿಗೆ ಮಗಳನ್ನು ದೂರ ಕಳಿಸಲು ಮನಸಿರಲಿಲ್ಲ , ಕಾಡಿ ಬೇಡಿ ಮಗಳನ್ನು ಜೊತೆಗೆ ಇರಿಸಿಕೊಂಡರು . ಹಾಗಾಗಿ ಹತ್ತಿರದ ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪಡೆದಳು. ಶಿಕ್ಷಣದ ನಂತರ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದು ಹೆತ್ತವರ ಜೊತೆಗೆ ಇದ್ದಳು . ಮದುವೆ ವಯಸ್ಸಿಗೆ ಬಂದ ಮಗಳನ್ನು ದೂರ ಕಳಿಸಲು ಹೆತ್ತವರಿಗೆ ಮನಸ್ಸಿರಲಿಲ್ಲ . ಅವಳಿಗೂ ಅವರಿಂದ ದೂರಾಗುವ ಆಲೋಚನೆ ಇರಲಿಲ್ಲ ಅದೇ ಕಾರಣದಿಂದ ಅವರು ಮನೆ ಅಳಿಯನನ್ನು ತಂದುಕೊಳ್ಳಲು ಮನಸು ಮಾಡಿದರು.
*******************************
ಸುಶೀಲಮ್ಮನಿಗೆ ೪ ಜನ ಮಕ್ಕಳು ಅದರಲ್ಲೊಬ್ಬಳು ಮಗಳು ಕಾವ್ಯ ಮತ್ತೆ ಮೂರು ಜನ ಗಂಡು ಮಕ್ಕಳು. ಅವರ ಪತಿ ಬಾಂಬೆಯಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು , ತೀರ ಅಲ್ಲದೇ ಹೋದರೂ ಒಂದು ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತಿದ್ದರು . ಅದ್ಯಾರ ದೃಷ್ಟಿ ಬಿತ್ತೋ ಅಪಘಾತವೊಂದರಲ್ಲಿ ಅಕಸ್ಮಿಕವಾಗಿ ಕಿಟ್ಟಣ್ಣ ಸಾವನ್ನಪ್ಪಿದರು. ಆಗ ಹಿರಿಯ ಮಗನನ್ನು ಹೊರತುಪಡಿಸಿ ಮತ್ತೆಲ್ಲರೂ ಚಿಕ್ಕವರು. ತಂದೆಯ ಮರಣ ನಂತರ ರವೀಶ ಮನೆಯ ಜವಾಬ್ದಾರಿ ತೆಗೆದುಕೊಂಡು ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ . ಎರಡನೆಯನು ರಂಜಿತ್ ಅವನೂ ತನ್ನ ಓದು ಅರ್ಧಕ್ಕೆ ನಿಲ್ಲಿಸಿ ಮತ್ತಾವುದೋ ಕೆಲಸಕ್ಕಾಗಿ ಊರು ತೊರೆದು ಚೆನೈ ಸೇರಿಕೊಂಡ . ಕಾವ್ಯಳ ಮದುವೆ ಅದ್ದೂರಿಯಾಗಿ ಮಾಡಿಕೊಟ್ಟು ಮೈ ತುಂಬ ಸಾಲ ಮಾಡಿಕೊಂಡಿದ್ದರು ಸುಶೀಲಮ್ಮ . ಆ ಭಾರ ಮಕ್ಕಳ ಹೆಗಲ ಮೇಲೆ ಇತ್ತು. ಈಗ ರಾಕೇಶ ಕೂಡ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ , ಎಲ್ಲರೂ ಕಷ್ಟ ಪಟ್ಟು ಸಾಲ ತೀರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲಾರಂಭಿಸಿದರು . ಅಣ್ಣಂದಿರಿಬ್ಬರ ವಿವಾಹ ನಂತರ ರಾಕೆಶನಿಗೆ ವಧುವಿಗಾಗಿ ಅನ್ವೇಷಣೆ ಆರಂಭವಾಗಿತ್ತು. ಅವರ ಸೋದರ ಮಾವ ಸುರೇಶ ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತಿದ್ದವರಲ್ಲವೇ, ಅವರಿಂದಲೇ ಅಂಕಿತಾಳ ಮಾಹಿತಿ ದೊರೆಯಿತು . ಅಂಕಿತಾ ತಂದೆಗೆ ಮೊದಲಿಗೆ ಈ ಸಂಬಂಧ ಹಿಡಿಸದೇ ಹೋದರೂ , ದೊಡ್ಡ ಕುಟುಂಬದಲ್ಲಿರುವುದರಿಂದ ಅವನನ್ನು ಮನೆಗೆ ಅಳಿಯನಾಗಿ ಮಾಡಿಕೊಳ್ಳಲು ಸುಲಭವಾಗಬಹುದೆಂದು ,ಯೋಚಿಸಿ ಈ ಮದುವೆಗೆ ಸಮ್ಮತಿಸಿದರು . ಆದರೆ ರಾಕೇಶನಿಗೆ ಮೊದಲಿನಿಂದಲೂ ಅಂಕಿತಾಳ ಸ್ವಭಾವ ಹಿಡಿಸಲಿಲ್ಲ . ಅವಳ ಮಾತಿನ ದರ್ಪ , ಅವಳ ಹೆತ್ತವರ ವರ್ತನೆ ಸರಿ ಇಲ್ಲವೆನಿಸಿತು . ಆದರೆ ಮದ್ಯಮ ವರ್ಗದ ಕುಟುಂಬದ ಸುಶೀಲಮ್ಮನಿಗೆ ಈ ಪ್ರಸ್ಥಾಪ ಹಿಡಿಸಿತ್ತು . ಹೇಗೋ ಮಗನಿಗೆ ಹೆಣ್ಣಿನ ಜೊತೆ ಮನೆ ಕೂಡ ಸಿಗುವಾಗ ಯಾಕೆ ಬೇಡ ಅನ್ನೋದು, ಹುಡುಗಿಯೂ ಸುಂದರವಾಗಿದ್ದಾಳೆ , ಒಳ್ಳೆಯ ಕೆಲಸ ಕೂಡ ಇದೆ , ನನ್ನ ಮಕ್ಕಳಲ್ಲಿ ಯಾರಿಗೂ ಇಷ್ಟು ಒಳ್ಳೆಯ ಸಂಬಂಧ ಸಿಕ್ಕಿಲ್ಲ , ಇವನಾದರೂ ಸುಖವಾಗಿ ಇರಲಿ. ಹೆತ್ತ ಕರುಳು ಮುಂದಾಲೋಚನೆ ಇಲ್ಲದೇ ಮೆಚ್ಚಿಕೊಂಡಿತು. ಮದುವೆಗೂ ಮುನ್ನ ಕರೆ ಮಾಡಿದಾಗೆಲ್ಲ ಗೆಳತಿಯರ ಜೊತೆಗಿರುವೆನೆಂದೋ , ಮತ್ತೇನೋ ಕೆಲಸವಿದೆಯೆಂದೋ ಕರೆ ತುಂಡರಿಸಿದರೆ , ಮತ್ತೆ ಕೆಲವು ಬಾರಿ ರೇಗಿ ಬಿಡುತಿದ್ದ ಅಂಕಿತಾಳ ವರ್ತನೆ ರಾಕೇಶನಿಗೆ ಬೇಸರವಾಗಿತ್ತಾದರೂ , ಹೋಗಲಿ ಅವಳಿಗೆ ಯಾರೊಡನೆಯೂ ಬೆರೆತು ಅಭ್ಯಾಸವಿಲ್ಲದೇ ಇರಬಹುದೆಂದು ತಾನೇ ಸಮಾಧಾಸಿಕೊಂಡ . ದುಬಾರಿ ಒಡವೆಗಳು , ವೈಭೋಗದ ಮದುವೆ , ಯಾವುದಕ್ಕೂ ಕೊರತೆಯಿಲ್ಲದಂತೆ ಮಗಳನ್ನು ಧಾರೆಯೆರೆದ ಜಯಂತ್ ಕುಮಾರ್ .ತನ್ನ ಕುಟುಂಬಕ್ಕಿಂತ ಎಲ್ಲದರಲ್ಲೂ ಕಡಿಮೆಯಾಗಿ ಕಾಣುವ ಪತಿಯ ಕುಟುಂಬ ಮದುವೆಯ ದಿನವೇ ಹಿಡಿಸಲಿಲ್ಲ ಅಂಕಿತಾಳಿಗೆ . ಮದುವೆಗೆ ಮುನ್ನ ರಾಕೇಶ ಮಾವನಿಗೆ ಮನೆಯ ಅಳಿಯನಾಗಲು ತನಗೆ ಒಪ್ಪಿಗೆಯಿಲ್ಲವೆಂದು ಕಡಾ ಖಂಡಿತವಾಗಿ ಹೇಳಿಬಿಟ್ಟಿದ್ದ .ಅದು ಅವರಿಗೆ ಹಿಡಿಸದೆ ಹೋದರೂ , ಹೇಗೋ ಮುಂದೆ ಅವನನ್ನೂ ತಮ್ಮ ದಾರಿಗೆ ತರಬಹುದೆಂಬ ನಂಬಿಕೆ ಅವರಿಗೆ .
ಮದುವೆಯ ಶಾಸ್ತ್ರಕ್ಕೆಂದು 10- 15 ದಿನ ಸುಶೀಲಮ್ಮನ ಕುಟುಂಬದ ಜೊತೆಗಿದ್ದ ಅಂಕಿತಾ , ತವರಿಗೆ ಹೋದವಳು ಮರಳಿ ಬರಲಿಲ್ಲ. ಕೇಳಿದಾಗೆಲ್ಲ ಹೆತ್ತವರ ಆರೋಗ್ಯದ ನೆಪ ಹೇಳಿ ಅಲ್ಲಿಯೇ ಉಳಿದುಕೊಂಡು ಬಿಟ್ಟಳು. ಒಬ್ಬಳೇ ಮಗಳಾದ ಕಾರಣ ರಾಕೇಶನಿಗೂ ಹೆಚ್ಚು ಒತ್ತಾಯ ಮಾಡಲಾಗಲಿಲ್ಲ . ಆದರೆ ಬರು ಬರುತ್ತ ಇದು ಸುಳ್ಳು ನೆಪವೆಂದು ಅರ್ಥವಾದರೂ ಅವನೇನು ಮಾಡಲಾರದ ಪರಿಸ್ಥಿತಿಯಲ್ಲಿದ್ದ . ಈಗಂತೂ ಮಡದಿಗಾಗಿ ಮಾವನ ಮನೆಯಲ್ಲೇ ಉಳಿದುಕೊಳ್ಳುವಂತಾಯಿತು . ಮೊದ- ಮೊದಲು ಪ್ರೀತಿಯಿಂದ ನೋಡಿಕೊಂಡ ಮಾವ ಬರುಬರುತ್ತಾ ತುಂಬಾ ಉದಾಸೀನ ತೋರಿದರು . ಕೆಲವೊಮ್ಮೆ ಅವನಿಗಾಗಿ ಬಿಸಿಯಾದ ಆಡುಗೆ ಮಾಡಲಾಗದಷ್ಟು ಉದಾಸೀನ ತೋರಿದಳು ಅತ್ತೆ .ಇದ್ದಕಿದ್ದಂತೆ ಸುಶೀಲಮ್ಮನ ಆರೋಗ್ಯ ಹದಗೆಟ್ಟಿತ್ತು . ರಾಕೇಶ ತನ್ನ ಮನೆಗೆ ಹೋಗಲೇಬೇಕಾದ ಅನಿವಾರ್ಯತೆ .ಹೊರಟು ನಿಂತ ಮರುಕ್ಷಣವೇ ಅಂಕಿತಾ ತನ್ನ ಅಸಲಿ ಮುಖ ತೋರಿಸಿದಳು
” ನಿನ್ನ ಅಣ್ಣಂದಿರು ಅತ್ತಿಗೆ ಇದ್ದಾರಲ್ಲವೇ , ನೀನ್ಯಾಕೆ ಅಲ್ಲಿಗೆ ಹೋಗಬೇಕು ?”
” ಅವಳು ನನ್ನ ಅಮ್ಮ , ಎಷ್ಟೇ ಮಕ್ಕಳಿದ್ದರೂ , ಅದು ಎಲ್ಲಾ ಮಕ್ಕಳ ಜವಾಬ್ದಾರಿ , ನಾನಲ್ಲಿಗೆ ಹೋಗಲೇಬೇಕು ”
” ಹಾಗಿದ್ದರೇ ನನಗಿಂತ ಆ ಮುದುಕಿ ಮುಖ್ಯನಾ ನಿನಗೆ ?’
ಅವಳಿಂದ ಈ ಮಾತು ಅವನು ನಿರೀಕ್ಷಿಸಿರಲಿಲ್ಲ , ಜೊತೆಗೆ ಅವಳ ಮಾತು ತಪ್ಪೆಂದು ಅತ್ತೆ ಮಾವ ಕೂಡ ಒಂದು ಮಾತು ಆಡಲಿಲ್ಲ . ಇದು ಸಹಿಸಲಾರದೆ ಹೋಗಿದ್ದ ರಾಕೇಶ . ಹೆಚ್ಚೇನೂ ಮಾತನಾಡದೆ ಅಲ್ಲಿಂದ ಹೊರಟ .ತಾಯಿಯ ಆರೋಗ್ಯ ಕೆಲವು ದಿನಗಳಲ್ಲಿ ಸುಧಾರಿಸಿತು . ಆಗಲು ಮತ್ತೆ ಬಾ ಎಂದು ಅಂಕಿತ ಪೀಡಿಸುತ್ತಿದಳು , ತನಗೆ ಯಾವ ಗೌರವ ಇಲ್ಲದೇ, ಮನುಷ್ಯರಂತೆ ಕಾಣದ ಹೆಂಡತಿಯ ಮನೆಗೆ ಹೋಗಲು ರಾಕೇಶನಿಗೆ ಮನಸಿರಲಿಲ್ಲ , ಆದರೂ ಬಲವಂತವಾಗಿ ಕರೆಸಿಕೊಂಡರು . ಕೆಲವು ಸಾಫ್ಟ್ ವೇರ್ ಕಂಪನಿಗಳಂತೆ 100-200 ಉದ್ಯೋಗಿಗಳನ್ನು ಕಡಿತಗೊಳಿಸಿದ್ದರು , ಅದೇ ಸಂದರ್ಭದಲ್ಲಿ ರಾಕೇಶ್ ಕೂಡ ಕೆಲಸ ಕಳೆದುಕೊಂಡ . ಎಷ್ಟೇ ಪ್ರಯತ್ನ ಮಾಡಿದರೂ ಮತ್ತೆ ಕೆಲಸ ಸಿಗಲಿಲ್ಲ , ಈ ಪರಿಸ್ಥಿತಿಯ ಲಾಭ ಪಡೆದು ಜಯಂತ್ ಕುಮಾರ್ ತಮ್ಮ ಟ್ರಾವೆಲ್ಸ್ ನ ಉಸ್ತುವಾರಿ ಕೆಲಸ ನೋಡಿಕೊಳ್ಳಲು ರಾಕೇಶನಿಗೆ ವಹಿಸಿದರು . ಕೆಲಸ ಅಷ್ಟೇನೂ ಕಷ್ಟ ಆಗದಿದ್ದರೂ, ಮನೆಯವರ ತೀರಾ ನಿರ್ಲಕ್ಷ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು . ಅಂಕಿತಾಳ ಉಪಟಳ ಹೇಳ ತೀರದಾಗಿತ್ತು .
ಇತ್ತೀಚೆಗೆ ರಾಕೇಶ ಮನೋ ರೋಗಿಯಂತಾಗಿದ್ದ , ನೆಮ್ಮದಿಗಾಗಿ ಹುಡುಕಾಡಿದ್ದ . ಮನೆ , ಕೆಲಸ ಎಲ್ಲಾ ತನ್ನ ತಂದೆಯಿಂದ ಸಿಕ್ಕಿದಲ್ಲವೇ ರಾಕೇಶನಿಗೆ ಅನ್ನುವ ದುರಹಂಕಾರ ಅಂಕಿತಾಳಿಗೆ . ದಿನ ನಿತ್ಯದ ಉಪದ್ರವ ಮಿತಿ ಮೀರಿದಾಗ ತಾಯಿ ಮತ್ತು ಸಹೋದರರ ಮೊರೆ ಹೋಗಿದ್ದ ರಾಕೇಶ , ಅವರೆಲ್ಲರ ಬೆಂಬಲ ಸಿಕ್ಕಿತು . ಜೊತೆಗೆ ಆಶ್ರಯಕ್ಕೂ ಒಂದು ನೆಲೆ ಸಿಕ್ಕಿದಂತಿತ್ತು ,ದಿನ ನಿತ್ಯವೂ ಸಂದರ್ಶನಕ್ಕೆ ಅಲೆದಾಡುತ್ತಿದ್ದ , ಆದರೆ ಅದ್ಯಾಕೋ ಒಂದು ಕೆಲಸ ಸಿಗಲಿಲ್ಲ . ನೌಕರಿ ಪ್ರೊಫೈಲ್ ನೋಡಿ , ಒಂದು ಕಂಪನಿ ಸಂದರ್ಶನಕ್ಕೆ ಕರೆದಿದ್ದರು.
********************
ಮೇಲಿಂದ ಮೇಲೆ ಸೋಲು ಕಂಡ ರಾಕೇಶನಿಗೆ ಒಂದೊಳ್ಳೆ ಕೆಲಸದ ಜೊತೆ 60 ಸಾವಿರ ಸಂಬಳ ಕೂಡ ಆಫರ್ ಮಾಡಿ ಆಫರ್ ಪತ್ರ ಬಂದಿತ್ತು . ಶ್ರದ್ದೆಯಿಂದ ಕೆಲಸ ಮಾಡಿ ಒಂದೆರಡು ವರುಷಗಳಲ್ಲಿ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದ. ಹಂತ ಹಂತವಾಗಿ ಅವನ ಆರ್ಥಿಕ ಪರಿಸ್ಥಿಯೂ ಸುಧಾರಿಸಿತು . ಅನಿವಾರ್ಯವಾಗಿ ಅಂಕಿತಾ ಪತಿಯ ಮನೆಗೆ ಬರಲೇಬೇಕಾಯಿತು . ಅವಳನ್ನೆಂದೂ ತಿರಸ್ಕರಿಸಲಿಲ್ಲ , ಆದರೆ ಮತ್ತೆಂದೂ ಅವಳ ಮನೆಯಲ್ಲಿ ನೆಲೆಯೂರುವ ಯೋಜನೆ ಮಾಡಲಿಲ್ಲ.