ಕಳೆದು ಹೋದ ಕೊಳಲಿನ ಅಂತರಂಗದ ಧ್ಯಾನ : ಶಂಕರ್ ಸಿಹಿಮೊಗ್ಗೆ

‘ಗಜಲ್ ಒಂದು ಕೊಳಲಿನಂತೆ, ಬದುಕಿನ ಜಂಜಾಟಗಳಲ್ಲಿ ಎಲ್ಲಿಯೋ ಕಳೆದು ಹೋಗಿದ್ದ ಆ ಕೊಳಲನ್ನು ಕವಿ ಮತ್ತೆ ಇನ್ನೆಲ್ಲಿಂದಲೋ ಹುಡುಕಿಕೊಳ್ಳುತ್ತಾನೆ ಮತ್ತು ಹೀಗೆ ಹುಡುಕಿಕೊಂಡ ಆ ಗಜಲೆಂಬ ಕೊಳಲಿನ ದನಿ ಕೇಳುತ್ತಲೇ, ಭಗವಂತನ ಕಣ್ಣಿನಲ್ಲಿಯೂ ಮನುಷ್ಯರಿಗಾಗಿ ಪ್ರೇಮದ ಕಣ್ಣೀರು ಸುರಿಯುತ್ತದೆ’ ಎನ್ನುತ್ತಾರೆ ಉರ್ದು ಕವಿ ಫಿರಾಕ್ ಗೋರಖಪುರಿ. ಗಜಲ್ ಶೈಲಿ ಬರೆಯುವುದು ಅಷ್ಟು ಸುಲಭವಲ್ಲ ಎಂದು ಬಹುತೇಕರು ವ್ಯಾಖ್ಯಾನಿಸಿದರು, ಕೆಲವರಿಗೆ ಅಷ್ಟೇ ಸುಲಲಿತವಾಗಿ ಗಜಲ್ ಪ್ರಕಾರ ದಕ್ಕಿಬಿಡುತ್ತದೆ.

ನಾನಿ ಕಾವ್ಯನಾಮದಲ್ಲಿ ಬರೆಯುತ್ತಿರುವ ಕೋಲಾರದ ಗಜಲ್ ಕವಿ ನಾರಾಯಣಸ್ವಾಮಿಯವರು ವೃತ್ತಿಯಲ್ಲಿ ವಕೀಲರಾದರು ಗಜಲ್ ಬರೆಯುವುದರಲ್ಲಿಯೇ ಒಂದು ಧ್ಯಾನದ ಕುಟೀರವನ್ನು ಕಂಡುಕೊಂಡಿದ್ದಾರೆ. ಪ್ರೀತಿ ನೋವು ನಲಿವು ಸೋಲು ದುಃಖ ಹತಾಶೆ ಹೀಗೆ ಮನುಷ್ಯನ ನೂರಾರು ಭಾವನೆಗಳಿಗೆ ಗಜಲ್ ಒಂದು ಅತ್ಯದ್ಬುತ ವೇದಿಕೆಯಾಗಿದೆ ಎನ್ನಬಹುದು. ಸಾಧಾರಣವಾಗಿ ಕವಿತೆಗಳನ್ನು ಬರೆಯಲು ಆರಂಭಿಸಿದವರಿಗೆ, ಗಜಲಿನ ರೀತಿ ನಿಯಮಗಳು ಆರಂಭದಲ್ಲಿ ಕಷ್ಟ ಅನ್ನಿಸಲುಬಹುದು. ಇದಕ್ಕೊಂದು ಧ್ಯಾನದ ಅಗತ್ಯ ಖಂಡಿತಾ ಇದೆ. ಅದರೊಳಗೆ ಪಳಗಿದಂತೆ ಅದು ಕರಗತವಾಗಿಬಿಡುತ್ತದೆ ಎನ್ನುವುದಕ್ಕೆ ನಮ್ಮ ಮುಂದೆಯೇ ಹೊಸತಲೆಮಾರಿನ ಕೆಲವು ಗಜಲ್ ಕವಿಗಳು ಕಾಣಸಿಗುತ್ತಾರೆ. ಅಂತಹವರಲ್ಲಿ ಗಜಲ್ ಕವಿ ನಾಣಿಯವರು ಕೂಡ ಒಬ್ಬರು ಎನ್ನಲು ಸಂತೋಷವಾಗುತ್ತದೆ.

‘ನೆನಪಿನಾಳದಲಿ ಕಾಡುವ ನೋವುಗಳಿಗೆ ಬೆಲೆಕಟ್ಟಿ ಹರಾಜು ಹಾಕುತಿರುವೆ
ತೂಕದ ಬೆಲೆಗೆ ತೂಗಿಹಾಕಿರುವೆ ಕೊಂಡುಕೊಳ್ಳಲಾದರೂ ಬಂದುಬಿಡು ಗೆಳತಿ’

ಮಿಸ್ರ, ಮತ್ಲಾ, ಶೇರ್, ಕಾಫಿಯ, ರವಿ, ರದೀಫ್, ಮಕ್ತಾ, ಬೆಹರ್ ಗಜಲಿನ ಅಂಶಗಳ ಕಾಪಿಟ್ಟುಕೊಂಡೆ, ಒಂದು ವಿಷಯಕ್ಕನುಸಾರವಾಗಿ ಗಜಲಿನ ವಿವಿಧ ಶೈಲಿಗಳನ್ನು ರಚಿಸುವುದು, ಗಜಲ್ ಕವಿಯೊಬ್ಬನಿಗೆ ಅದು ಅಕ್ಷರಗಳ ಕುಸುರಿ ಕೆಲಸವೇ ಸರಿ. ಮೇಲಿನ ಗಜಲ್ ನಾಲ್ಕರ ದ್ವಿಪದಿಯನ್ನು ಗಮನಿಸಿ, ದೂರವಾದ ಪ್ರೇಮದ ನೆನಪಿನಲ್ಲಿಯೇ ಕವಿ ತೂಗು ಹಾಕಿರುವ ನೆನಪುಗಳನ್ನು ಕೊಂಡುಕೊಳ್ಳಲಾದರು ಬಂದು ಬಿಡು ಎಂದು ವಿರಹ ವೇದನೆ ತಡೆಯಲಾರದೆ ತನ್ನ ಗೆಳತಿಯನ್ನು ಕರೆಯುತ್ತಿದ್ದಾನೆ. ಮೇಲಿನ ಗಜಲಿನ ಎಲ್ಲಾ ದ್ವಿಪದಿಗಳಲ್ಲಿಯೂ ಪ್ರೇಮ ವಿಫಲತೆಯ ವಿಷಯವನ್ನೇ ಪ್ರಸ್ತಾಪಿಸುತ್ತಾನೆ. ಈ ನಾಲ್ಕನೆಯ ಗಜಲ್ ಒಂದೇ ವಿಷಯವನ್ನು ವಿವಿಧ ದ್ವಿಪದಿಗಳಲ್ಲಿ ಹೇಳುವುದರಿಂದ ‘ಮುಸಲ್ ಸಲ್ ಗಜಲ್’ ಶೈಲಿಗೆ ಹೊಂದಿಕೊಳ್ಳುತ್ತದೆ ಎನ್ನಬಹುದು.

ಭರತ ಖಂಡದ ದುಸ್ಥಿತಿಯ ಕಂಡು ಯಾಕೆ? ಮರುಗುತಿರುವೆ ಬಾಪು
ಭವ್ಯ ಭಾರತದಲಿ ನೀಚ ಆಡಳಿತವ ಕಂಡು ಯಾಕೆ? ಅಳುತಿರುವೆ ಬಾಪು

ಪ್ರಜಾಪ್ರಭುತ್ವದ ಬೇರುಗಳು ಅಡ್ಡ ಕತ್ತರಿಯೊಳಗೆ ಸಿಲುಕಿದೆ
ಪ್ರಭುತ್ವದ ಅವಣಿಕೆಯಲಿ ಮನುಕುಲ ಕತ್ತಲೊಳಗೆ ಸಿಲುಕಿದೆ

ಗಜಲ್ ಒಂಬತ್ತು ಮತ್ತು ಇಪ್ಪತ್ತೊಂಬತ್ತರ ಮತ್ಲಾವನ್ನು ನೋಡಿ, ಇಲ್ಲಿ ಕವಿ ರಾಜಕೀಯ ವ್ಯವಸ್ಥೆಯ ಬಗ್ಗೆ, ಆಡಳಿತದ ಬಗ್ಗೆ ನೊಂದುಕೊಳ್ಳುತ್ತಿದ್ದಾನೆ. ಪ್ರತಿ ಗಜಲಿನ ಆರಂಭಿಕ ದ್ವಿಪದಿಗಳನ್ನು ಮತ್ಲಾವೆಂದು ಕರೆಯುತ್ತಾರೆ. ಗಾಂಧೀ ಅಹಿಂಸೆಯ ಹಾದಿ ಹಿಡಿದು ನಮ್ಮವರನ್ನು ಬಿಡುಗಡೆಗೊಳಿಸಿದರು. ಆದರೆ ಇಂದಿನ ರಾಜಕೀಯ ಸ್ಥಿತಿಗತಿಗಳನ್ನು ಕಂಡು ಗಾಂಧೀ ಮರುಗಿ ಅಳುತ್ತಿದ್ದಾರೆ ಎಂದು ಕವಿ ಅಂಹಿಸೆಯ ಅಸ್ಮಿತೆಗೆ ಸಂತೈಸುತ್ತಿದ್ದಾನೆ. ವರ್ತಮಾನದ ಸಮಾಜವನ್ನು ಪ್ರತಿಬಿಂಬಿಸುವ ಈ ಗಜಲುಗಳನ್ನು ಸಿಯಾಸಿ ಮಾದರಿಯ ಗಜಲುಗಳೆಂದು ಕರೆಯಬಹುದು.

ಭುವಿಯ ಮೇಲೆ ಯಾವುದೋ ಶಕ್ತಿಯಿದೆಯೆಂದು ನಾನು ನಂಬಿರುವೆ
ನಾನಿಯ ಮುಗ್ದಮನಕೆ ಕಲ್ಪನೆಯ ಕಥೆಗಳನು ಹೇಳಬೇಡ ಮನುಜ

ಗಜಲ್ ಹತ್ತೊಂಬತ್ತರ ಮಕ್ತಾದಲ್ಲಿ ಜಗದ ಮೂಢನಂಬಿಕೆಗಳ ಬಗ್ಗೆ ಕವಿ ಹೇಳುತ್ತಿದ್ದಾನೆ, ಪ್ರಕೃತಿಯ ಶಕ್ತಿಯ ಬಗ್ಗೆ ನನಗೆ ನಂಬಿಕೆ ಇದೆ. ಆದರೆ, ಅದಕ್ಕೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಭಯಪಡಿಸಲು ಬರಬೇಡಿ ಮನುಜರೇ ಎಂದು ಕವಿ ಹೇಳತ್ತಿದ್ದಾನೆ. ಇಲ್ಲಿ ಅವನಿಗೆ ಪ್ರಕೃತಿಯ ಬಗ್ಗೆ ಧನ್ಯತಾ ಭಾವವಿದೆ, ಅದೇ ಅವನಿಗೆ ದೇವರಾಗಿದೆ. ಆದರೆ ಮೂಢ ನಂಬಿಕೆಗಳು ಸಲ್ಲದು ಅದು ನೆಮ್ಮದಿಗೆ ಮಾರಕ ಎಂದು ಕವಿ ಹೇಳುತ್ತಾನೆ. ಸಂಪೂರ್ಣವಾಗಿ ಬೌದ್ಧ ತತ್ವಗಳ ನೆಲೆಯಲ್ಲಿ ಈ ಗಜಲ್ ತಿಳಿಹೇಳದೆ ಹೋದರು, ಬಹಳ ಸಹಜವಾದ ವಿಷಯವನ್ನು ಸರಳವಾಗಿ ಮನದಟ್ಟು ಮಾಡುವ ಮೂಲಕ ಝೆನ್ ಗಜಲಿಗೆ ಹತ್ತಿರವಾಗಿದೆ ಎಂದೆನ್ನಬಹುದು.

ಸಮಾಜವೇನು ಪಾವಿತ್ರತೆಯ ನಿಷ್ಠೆಗೆ ಮೆಚ್ಚಿ ಪರಮವೀರಚಕ್ರ ನೀಡುವುದಿಲ್ಲ
ನಿನ್ನೊಳಗಿನ ಜೀವಂತ ಭಾವಗಳನ್ನು ಅಧರ್ಮಕ್ಕೆ ಬಲಿಕೊಟ್ಟು ಸಾಗುವೆ ಯಾಕೆ?

ಮೂವತ್ತೆಂಟನೆಯ ಗಜಲಿನ ದ್ವಿಪದಿಯ ಆಶಯವನ್ನು ನೋಡಿ, ಇಲ್ಲಿ ಕವಿ ಧರ್ಮದ ಕಟ್ಟುಪಾಡುಗಳನ್ನೇ ಅಧರ್ಮವೆಂದು ಕರೆಯುತ್ತಾನೆ. ನಿನ್ನ ಪಾವಿತ್ರತೆಗೆ ಸಮಾಜವೇನು ಪ್ರಶಸ್ತಿ ಬಿರುದುಗಳನ್ನು ನೀಡುತ್ತದೆಯಾ? ನಿನ್ನ ಇಷ್ಟದಂತೆ ನೀನು ಬದುಕು ಎಂದು ಕವಿ ಧರ್ಮದ ಕಾರಣಕ್ಕಾಗಿ ದೂರವಾದ ತನ್ನ ಸಂಗಾತಿಗೆ ಕೇಳುತ್ತಿದ್ದಾನೆ.

ಶುದ್ದೋದನ ಮನದಾಸೆಗೆ ತಣ್ಣೀರೆರಚಿ ಅಡವಿಯತ್ತ ಸಾಗಿದವನು
ಮನುಜನ ಅಸೆಯಲ್ಲಿ ದುಃಖದ ಮೂಲವನು ಹುಡುಕಿದವನು ನೀನು ಬುದ್ದ

ನನ್ನಂಗೆ ವ್ಯರ್ಥವಾಗಿ ಸಮಯವನ್ನು ನೀನು ಕಳೆಯಲೇ ಇಲ್ಲ ಅಪ್ಪ
ನಿನ್ನಂತರಂಗದ ಬದುಕಿನ ನೋವಿನ ಪಾಠವನು ತಿಳಿಸಲೇ ಇಲ್ಲ ಅಪ್ಪ

ಗಜಲ್ ಐವತ್ಮೂರಿನ ದ್ವಿಪದಿ ಮತ್ತು ಅರವತ್ತನೆಯ ಮಕ್ತಾದಲ್ಲಿ ಬೇರೆ ಬೇರೆ ದೃಷ್ಟಿಕೋನದ ವಿಷಯಗಳಿದ್ದರು, ಒಂದರಲ್ಲಿ ಅಪ್ಪನ ಆಸೆಗೆ ವಿರುದ್ಧವಾಗಿ, ಲೋಕದ ಹಿತದ ಕಡೆ ನಡೆದ ಬುದ್ಧನಾದರೆ, ಇನ್ನೊಂದರಲ್ಲಿ ಅಪ್ಪನ ಆದರ್ಶಗಳನ್ನು ಮೈಗೂಡಿಸಿಕೊಳ್ಳಲಾಗದ ಮಗನ ವಿಷಾಧದ ದನಿ ಇದೆ.

ಒಟ್ಟಾರೆಯಾಗಿ ಗಜಲ್ ಪ್ರಕಾರವನ್ನು ಓದುವುದೇ ಒಂದು ಚೆಂದ. ಪಾರ್ಸಿ ಬೇರಿನ ಮೂಲ ಇಂದು ರೆಂಬೆ ಕೊಂಬೆಗಳಾಗಿ ಟಿಸಿಲೊಡೆದು ಎಲ್ಲಾ ಭಾಷೆಗಳಿಗೂ ಆವರಿಸಿಕೊಳ್ಳುತ್ತಿದೆ. ಕನ್ನಡಕ್ಕೂ ಅದರ ಶೈಲಿ ಅಂಟಿಕೊಳ್ಳುತ್ತಿದೆ. ಅದರ ಲಯಕ್ಕೆ ಮನಸೋಲದವರೇ ಇಲ್ಲ ಎನ್ನಬಹುದು. ಅದು ಕವಿ ನಾನಿಯವರಿಗೆ ಚೆನ್ನಾಗಿ ಕೈಹಿಡಿದಿದೆ. ಗಜಲಿನ ಕೇಂದ್ರಬಿಂದು, ಹೃದಯವೆಂದೇ ಹೇಳಲಾಗುವ ಕಾಫಿಯ ಬಗ್ಗೆ ಅವರು ಮತ್ತಷ್ಟು ಸೂಕ್ಷ್ಮತೆಯಿಂದ ಗಮನಹರಿಸಿ ಗಜಲುಗಳನ್ನು ಬರೆಯುತ್ತಾ ಹೋಗಲಿ.

0
    0
    Your Cart
    Your cart is emptyReturn to Shop