ರೋಹಿಣಿ ಮಳೆಯಾದ ನಂತರ ಮಿರುಗ, ಮಿರಗ, ಮಿರ್ಗ, ಮಿಕ್ಸರೆ, ಮೃಗೆ, ಮುರುಗಸಿರೆ ಮುಂತಾದ ರೀತಿಯಲ್ಲಿ ಕರೆಯುವ ಮೃಗಶಿರ ಮಳೆಯಿದು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿ ಆಕಾಸದಲ್ಲಿನ ನಕ್ಷತ್ರಗಳನ್ನೆ ಭೂಮಿಗೆ ಉದುರಿಸುವಂತೆ ವಿಪರೀತ ಮಳೆಯನ್ನು ಸುರಿಸುತ್ತದೆ. ಮಾವು, ಹಲಸು ಹಣ್ಣುಗಳಿಗೆ ಮೈ ತೊಳೆದು ಮಿರುಗುವಂತೆ ಮಾಡುತ್ತದೆ, ನೇರಳೆ, ಈಚಲು, ತೂಪ್ಪರೆ, ಕಾರೆ ಮುಂತಾದ ಕಾಡಹಣ್ಣುಗಳು ಕಳಿಯುತ್ತವೆ, ಅಳಿಲು ಕಾಗೆ, ಕೋಗಿಲೆ, ಗಿಣಿ, ಗೊರವಂಕ ಮುಂತಾದ ಪಕ್ಷಿಗಳು ಹಣ್ಣುಗಳ ಅರ್ಧಕಚ್ಚಿ ಇನ್ನರ್ಧ ನೆಲದ ಮೇಲೆ ವಾಸಿಸುವ ಪ್ರಾಣಿ,ಪಕ್ಷಿಗಳಿಗೆ ತಿನ್ನಲು ಅನುಕೂಲವಾಗುವಂತೆ ಉದುರಿಸುತ್ತವೆ!ಅದೆಷ್ಟೋ ಮರ ಗಿಡದ ಟೊಂಗೆಗಳು ಈ ಮಳೆಯ ಸಿಡಿಲಿಗೆ ಸಿಕ್ಕಿ ಮುರಿದು ಬೀಳುತ್ತವೆ, ಆನೆ , ಮೇಕೆ, ಜಿಂಕೆಯಂತಹ ಪ್ರಾಣಿಗಳಿಗೆ ಈ ಮಳೆಯಲ್ಲಿ ಆಹಾರವಾಗಲು. ಬೇವಿನ ಹಣ್ಣುಗಳು ಹಳದಿ ರೂಪವನ್ನು ಪಡೆದು ಕಾಗೆಗಳ ಹಿಂಡು ಮರದ ಮೇಲೆ ಕುಳಿತು ರಾತ್ರಿಯೆಲ್ಲ ಹಣ್ಣನ್ನು ಮೇಯುತ್ತವೆ, ಬೀಜಗಳನ್ನು ಬೇರ್ಪಡಿಸುತ್ತವೆ. ಬ್ರಹ್ಮಶಿವ ಹೇಳುವಂತೆ ಕಾಗೆಗಳಿಗೆ ಬೇವಿನಹಣ್ಣು ರುಚಿ, ನಾಯಿ ತುಪ್ಪ ತಿಂದರೆ ಕಸಿವಿಸಿ ಎಂದು ಹೇಳುತ್ತಾನೆ.
ಅಲ್ಲಲ್ಲಿ ಹುದುಗಿದ ಕೆಮ್ಮಣಿನ ಹುತ್ತಗಳಲ್ಲಿ, ಬಾರೆಗಳಲ್ಲಿ, ಹೊಲದ ಬದಗಳಲ್ಲಿ ಬಿಳಿರಾಣಿಯಂತೆ ಕಾಣುವ ‘ಅಣಬೆ’ಗಳು ಎದ್ದು ನಿಲ್ಲುತ್ತವೆ,ಮಣ್ಣಿನ ಕೆಲವು ಸೂಕ್ಷ್ಮಜೀವಿಗಳು ಮೇಯಲೆಂದು! ಆದರೆ ನಮ್ಮ ಮನೆಯಲ್ಲಿ ಅಣಬೆಯ ಮೊಗ್ಗುಗಳನ್ನೆ ಕಿತ್ತು ತಂದು ತೊಗರಿಬೇಳೆಯ ಜೊತೆ ಒಂದಷ್ಟು ಸಾಂಬಾರು ಪದಾರ್ಥವ ಹಾಕಿ ಬೇಯಿಸಿ ಮಾಂಸದ ಸಾರಿನಂತೆ ಚಪ್ಪರಿಸುತಿದ್ದೆವು. ಒಮ್ಮೆ ಅಜ್ಜನ ಕೇಳಿದೆ ‘ಅಜ್ಜ , ಈ ಬೆನಕನ ಪೂಜೆ ಯಾಕ್ ಮಾಡ್ತೀಯಾ ‘ ಎಂದಾಗ ‘ ಈ ಜೋರುಮಳೆಗೆ ಮಣ್ಣು ಕೊಚ್ಚಿ ಹೋಗದಂತೆ ಅಡ್ಡಲಾಗಿ ಗರಿಕೆಯ ಸಗಣಿಯ ಜೊತೆ ಎಸೆದರೆ ಫಲವತ್ತತೆಯ ಕಾಪಾಡುತ್ತದೆ ಮಗಾ, ಗರಿಕೆ ದಟ್ಟವಾಗಿ ಬೇರೂರಿ ಮಳೆಯನೀರಿಗೆ ಮಣ್ಣು ಕೊಚ್ಚಿ ಹೋಗದಂತೆ ಮಾಡುತ್ತದೆ’ ಎಂದಿದ್ದ.
ನಾನು ದನ,ಕುರಿ,ಎಮ್ಮೆ,ಮೇಕೆಗಳ ಮೇಯಿಸಿಕೊಂಡು ಮನೆಗೆ ಬರುವಾಗ ದಢೂತಿ ಮಳೆಗೆ ಸಿಕ್ಕಿ ನೆಂದು ಹಣ್ಣಾಗಿ ನನ್ನ ಗಲ್ಲಗಳೆರಡು ದಢದಢನೆ ಕುಣಿಯುತಿದ್ದವು, ಹಲ್ಲುಗಳು ಕಟಕಟನೇ ಕಡಿಯುತಿದ್ದವು. ಕೈ ಬಾಯಿ,ಕಾಲುಗಳು ನಡುಗುತಿದ್ದವು,ತಲೆ ಆ ಕಡೆ ಈ ಕಡೆ ದೂಗುತ್ತಾ ಏನಾದರೂ ಬಿಸಿಬಿಸಿಯಾಗಿರುವ ತಿಂಡಿ ಸಿಕ್ಕರೆ ಸಾಕು ಎನಿಸುತಿತ್ತು. ಅಜ್ಜಿ ಹುಚ್ಚೇಳು ಎಣ್ಣೆಯೊಂದಿಗೆ ಮುದ್ದೆಯ ಮಿದ್ದಿ ಒಂದಿಷ್ಟು ಉಪ್ಪು,ಹೇರಳೆಕಾಯಿಯ ಉಪ್ಪಿನಕಾಯಿ ಸವರಿ ತಿನ್ನೋ ಚಳಿ ಬಿಡ್ತದೆ ಅನೋಳು. ಕಾಳು ಹಪ್ಪಳ ಒಲೆಯ ಕೆಂಡದಲ್ಲಿ ಸುಟ್ಟಿ ಉಫ್ ಉಫ್ ಎಂದು ಬಾಯಲ್ಲಿ ಜೊಲ್ಲು ಸುರಿಸುತ್ತಾ ಕಟುಮ್ ಕಟುಮ್ ಎಂದು ತಿನ್ನುತಿದ್ದೆ! ಹಂಡೆಯಲ್ಲಿ ಬಿಲ್ವಾಪತ್ರೆಯ ಹಾಕಿ ಬೇಯಿಸಿದ ನೀರನ್ನು ಗಣಗಣನೆ ಕಾಯಿಸಿ ‘ಅಜ್ಜಿ ಬಿಸಿ ನೀರು ಕಣೆ’ಎಂದೆಲ್ಲ ಹೇಳಿದರೂ ಬಿಡದೆ ತಟಪಟನೆ ತಲೆಯ ತಟ್ಟಿ ಕಹಿ ಕಹಿಯೊಡೆಯುವ ಬಿಲ್ವಾಪತ್ರೆಯ ನೀರನ್ನು ಹುಯ್ಯುತಿದ್ದಳು. ಎಮ್ಮೆಗಳು ಮಳೆಯಲ್ಲಿ ವಿರಾಜಮಾನರಂತೆ ನಿಂತು ಮೈಕೊಡವಿ ಯಾವುದೋ ಸ್ವರ್ಗಕ್ಕೆ ಹೋದಂತೆ ವರ್ತಿಸಿದಾಗ ಅವುಗಳ ಮೂಗುದಾರವ ಹಿಡಿದು ಎಳೆದು ಎಳೆದು ಸಾಕಾಗಿ ಒಂದು ಹೆಜ್ಜೆಯೂ ಮುಂದೆ ನಡೆಯದೆ ನಿಂತುಬಿಡುತಿದ್ದವು. ‘ಥೂ, ಹಾಳಾದ ಎಮ್ಮೆಗಳ’ಎಂದು ಅವುಗಳ ಅಲ್ಲೆ ಬಿಟ್ಟು ಕುರಿ,ಮೇಕೆ,ದನಗಳ ಮನೆಯ ಕಡೆ ಹಿಡಿದುಕೊಂಡು ಬರುತಿದ್ದೆ. ಮೇಕೆಗಳು ಏನಾದರೂ ವಿಪರೀತ ಮಳೆಯಲ್ಲಿ ನೆನೆದರೆ ಸಾಯುತ್ತವೆ ಎಂದು ಅಜ್ಜ ಅವಾಗವಾಗ ಹೇಳುತ್ತಲೇ ಇದ್ದ. ಈ ಮಳೆಗಾಲದಲ್ಲಿ ಕುರಿ,ಮೇಕೆಗಳಿಗೆ ಗೊರಸಿನಲ್ಲಿ ಹುಳು ಬೀಳುತಿದ್ದವು. ಟೀಂಚರ್ ಅಥವಾ ಹಂದಿತುಪ್ಪವ ಸವರಿ ಗುಣಪಡಿಸುವುದೊಂದು ಮಹಾಕಾರ್ಯದಂತೆ ಮನೆಯಲ್ಲಿ ನಡೆಯುತಿತ್ತು. ಮಳೆಗೆ ಮೈಮರೆತು ನಿಂತ ಎಮ್ಮೆಗಳ ಹುಡುಕಾಟ ಮತ್ತೆ ಮಳೆನಿಂತ ಮೇಲೆ ಗದ್ದೆಯ ಕಡೆ ಓಡುತಿದ್ದೆ, ‘ವಯ್’ ‘ಉಯ್’ ಎಂದರು ಜಗ್ಗದ ಎಮ್ಮೆಗಳ ಎಳೆದು ಎಳೆದು ನನ್ನ ಕೈಗಳೆಲ್ಲ ಕೆಂಪಾಗಿ ಉರಿಯುತಿದ್ದವು! ಒಂದು ಎಮ್ಮೆ ಆ ಕಡೆಯ ಮೆಳೆಗೆ ಓಡಿದರೆ ಮತ್ತೊಂದು ಎಮ್ಮೆ ಹಳ್ಳದ ಕಡೆ ಓಡುತಿರುತಿತ್ತು! ಕೆಲವು ಸಮಯ ಈ ರೀತಿಯ ಸಂದರ್ಭವಾದಾಗ ಅಲ್ಲೆ ಕುಳಿತು ಅತ್ತು ಬಿಡುತಿದ್ದೆ. ಪೇಚಾಡಿ ಮಳೆಯಲ್ಲಿ ಅತ್ತು ಕರೆದು ಎಲ್ಲಿ ಚಿರತೆಗಳಿಗೆ ಎಮ್ಮೆ ಪಾಲಾಗುವುವೋ ಎಂದೆಲ್ಲ ಒಳಗೊಳಗೆ ಬೆಂದು ಆ ಕಡೆ ಅಜ್ಜ ಬೈಯುವನೆಂದು ಹೆದರಿ ಬಿಡದೆ ಅವುಗಳ ಹಿಡಿದುಕೊಂಡು ಮನೆಗೆ ಬರುತಿದ್ದೆ.
ಮಳೆಯಿಂದ ನೆನೆದು ಬಂದ ಕುರಿ, ಮೇಕೆಗಳಿಗೆ ಮಲಗಲು ಹಳೆಯ ನೆಲ್ಲುಹುಲ್ಲುಗಳ ಹಾಸಿ ಕಟ್ಟುತಿದ್ದೆ, ಎಮ್ಮೆ,ದನಗಳಿಗೆ ಅವರಿಕೆಸೊಪ್ಪನ್ನು ಹಾಸಿ ಗೊಂತಿಗೆ ಕಟ್ಟು ಹಾಕುತಿದ್ದೆ! ಆದರೆ ಒಂದಕ್ಕೊಂದು ಗುದ್ದಾಡಿ ಮಧ್ಯರಾತ್ರಿಯಲ್ಲಿ ಅಜ್ಜನಿಂದ ನನಗೆ ಬೈಯಿಸುತಿದ್ದವು. ಹೋತ ಆಡಿನ ಮೇಲೆ ಹತ್ತಲು ಹೋಗಿ ಆಡಿನ ಗೊಂತು ಸುತ್ತಿಕೊಂಡು ‘ಮ್ಹೇ’ ಮ್ಹೇ ‘ ಎಂದಾಗಲೆಲ್ಲ ಅಜ್ಜ ಎದ್ದು’ ಎಂತಾ ಕಸುಬುಗಾರ ನೋಡೆ , ನೀನ್ ಮೊಮ್ಮಗ ಮಾಡಿರೋ ಘನಕಾರ್ಯವ ‘ ಎಂದೆಲ್ಲ ಮಧ್ಯರಾತ್ರಿ ಎಬ್ಬಿಸಿ ಉಗಿಯುತಿದ್ದ. ಎಮ್ಮೆಗಳು ಗೊಂತು ಏನಾದರೂ ಬಿಡಿಸಿಕೊಂಡರೆ ಮೇಕೆ,ಕುರಿ,ಕೋಳಿಮರಿಗಳ ತುಳಿದು ಸಾಯಿಸುತಿದ್ದವು. ದನಗಳು ಏನಾದರೂ ಗೊಂತು ಬಿಡಿಸಿಕೊಂಡರೆ ಅಟ್ಟದಲ್ಲಿನ ನೆಲ್ಲುಹುಲ್ಲುಗಳ ತಿಂದು ಮುಗಿಸುತಿದ್ದವು. ಅದೆಷ್ಟೋ ಸಲ ಹೀಗೆಲ್ಲ ಆಗಿ ಅಜ್ಜನಿಂದ ಅದೆಷ್ಚು ಭಾರಿ ಚರ್ಮ ಸುಲಿಯುವಂತೆ ಒದೆ ತಿಂದಿದ್ದನೋ ನನಗೆ ತಿಳಿಯದು!
ರೋಹಿಣಿ ಮಳೆಗೆ ದ್ವಿದಳ ಧಾನ್ಯಗಳ ಬಿತ್ತಿ ಇನ್ನು ಬಿತ್ತುವುದು ಬಾಕಿಯುಳಿದಿದ್ದರೆ ‘ ಈ ಮೃಗಶಿರಮಳೆಗೆ ಬಿತ್ತುವುದು ಮೇಲಿನ ಗಾದೆಯಂತೆ ಅಜ್ಜ ಹೇಳುತಿದ್ದ’. ‘ಮಿರಗ ಮಳೆ ಬಂದ್ರೆ ಕಳ್ಳಿಮೆಳೆಗೆ ಒರಗ’, ‘ಮಿರುಗ ಮಳೇಲಿ ಮಿಸುಗಾಡದೆ ನೆರೆ ಬಂತು’, ‘ಮಿರ್ಗ ಮಿಂಚುಬಾರದು ಆರ್ದೆ ಗದ್ದರಿಸಬಾರದು’ ಎಂದೆಲ್ಲ ಅಜ್ಜನ ನಂಬಿಕೆ. ಆಯಾ ಮಳೆಗಳ ಅನುಗುಣವಾಗಿ ಹೊಲ,ಗದ್ದೆಯಲ್ಲಿ ನಾವೆಲ್ಲರೂ ದುಡಿಯುತಿದ್ದವು.
ಈ ಮಳೆಗೆ ಎಲ್ಲಿಂದಲೋ ‘ವಳ್ಳಕಟ್ಟಿ’ ಅಥವಾ ‘ಒಳಕಟ್ಟಿ’ ಎಂಬ ಹಾವು ತುಂಬಿದ ಕೆರೆಕಟ್ಟೆಗಳಲ್ಲಿ ಬಂದು ಸೇರುತಿದ್ದವು. ಅವುಗಳ ಬೆಂಟಿ, ಕೆರಳಿಸಿ ಕೆಲವು ವೇಳೆ ಕಚ್ಚಿಸಿಕೊಂಡು ಅಜ್ಜಿ ಹೇಳಿದಂತೆ ವಿಷ ಇಳಿಯಲು ಗಬುಡದ ನೀರನ್ನು ಕುಡಿಯುತಿದ್ದವು.
ಮಳೆ ಸುರಿಯುವ ಮುಂಚೆ ಅಥವಾ ಬಂದ ನಂತರ ಮಳೆಹುಳು(ಈಚಲುಹುಳು)ಗಳು ಬಂದು ಕ್ಷಣಾರ್ಧದಲ್ಲಿ ಪುತ್ತಪುತ್ತನೇ ಬೆಳಕಿಗೆ ತಾಕಿ ತನ್ನ ರೆಕ್ಕೆಗಳ ಕಳೆದುಕೊಂಡು ದಾರಿಯುದ್ದಕ್ಕೂ ಅವುಗಳ ಸುರಿದಾಟ, ಒದ್ದಾಟ. ಆದರೆ ಹಾವಾಡಿಗರ ರಾಮಣ್ಣ ಇವುಗಳ ಗುಡಿಸಿಕೊಂಡು ಹುರಿದು ತಿನ್ನುತಿದ್ದ. ರಾತ್ರಿಯೆಲ್ಲ ಗೂಬೆಯ ಗೂಗು, ಕಪ್ಪೆಯ ವಟವಟದ ವಾದ್ಯದೊಂದಿಗೆ ನಾನು ಈ ಮಳೆಯ ಜೊತೆ ಮಲಗುತಿದ್ದೆ!